ಮತ್ತೆ ಮತ್ತೆ ಪ್ರತಿದ್ವನಿಸುವ  ಪ್ರತ್ಯೇಕ ರಾಜ್ಯದ ಕೂಗು: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ವಿಶಾಲ ಭೂಪ್ರದೇಶ ಹೊಂದಿದ ಕೆಲವು ರಾಜ್ಯಗಳು ಪ್ರಾದೇಶಿಕವಾಗಿ ನೆಲ, ಜಲ, ಖನಿಜ, ಸಂಪನ್ಮೂಲ ಮಳೆಯ ಹಂಚಿಕೆ ಮುಂತಾದವುಗಳಲ್ಲಿ ಭಿನ್ನವಾಗಿರುತ್ತವೆ! ಅವು ಅಲ್ಲಿ ವಾಸಿಸುವ ಜನರ ಜೀವನಮಟ್ಟ ವ್ಯತ್ಯಾಸವಾಗಲು ಅಸಮಾನತೆ ಉಂಟಾಗಲು ಕಾರಣವಾಗಿರುತ್ತವೆ. ಆದರೆ ಇದನ್ನು ಗುರುತಿಸಿ ಅಸಮಾನತೆಯ ಹೋಗಲಾಡಿಸಲು ರಾಜ್ಯ ಸರ್ಕಾರಗಳು ಅಗತ್ಯ ಕಾರ್ಯಕ್ರಮ ರೂಪಿಸಬೇಕಿದೆ. ರೂಪಿಸುತ್ತವೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ಸರ್ಕಾರಗಳು ಬೇಧಭಾವ ಮಾಡುವುದಿಲ್ಲ! ಕಾರಣಾಂತರದಿಂದ ಒಮ್ಮೊಮ್ಮೆ ಸರ್ಕಾರಗಳಿಂದನೇ ಬೇಧಭಾವ ಆಗಿಬಿಡುತ್ತದೆ. ಬೇಧಭಾವ ಎಲ್ಲಾ ಕಡೆ ಇದ್ದೇ ಇರುತ್ತದೆ. ಇಲ್ಲದಂತೆ ಇರಲು ಸಾಧ್ಯವಿಲ್ಲ! ಅದು ಸ್ವಲ್ಪ ಇದ್ದರೆ ಮುಖ್ಯ ಅನಿಸುವುದಿಲ್ಲ. ಅಸಮಾನತೆಯ ಅಂತರ ಹೆಚ್ಚಾಗಬಾರದು. ಹೆಚ್ಚಾದುದು ಗಮನಕ್ಕೆ ಬಂದ ತಕ್ಷಣ ರಾಜ್ಯ ಸರ್ಕಾರಗಳು ಎಚ್ಚೆತ್ತು ಅಸಮಾನತೆ ಅಂತರ ಹೆಚ್ಚಾಗದಂತೆ ನೋಡಿಕೊಳ್ಳುವುದರ ಜತೆಗೆ ಸಮಾನತೆಯನ್ನು ಸಾಧಿಸಬೇಕಿದೆ. ಅಸಮಾನತೆಯನ್ನು ಸರಿಪಡಿಸದಿದ್ದರೆ,  ಅಂತರ ಹೆಚ್ಚುತ್ತಾ ಹೋಗಿ ಜನ ಹೋರಾಟದ ಹಾದಿ ಹಿಡಿಯಲು ಕಾರಣವಾಗುತ್ತದೆ. ಇಂತಹ ವಿಷಯದಲ್ಲಿ ಸರಕಾರಗಳು ಮೀನಾಮೇಷ ಎಣಿಸುತ್ತಾ ಕಾರ್ಯ ಪ್ರೌವೃತ್ತರಾಗದಿದ್ದರೆ ಹೋರಾಟದ ಉದ್ದೇಶಗಳೇ ಬೇರೆಯಾಗಲು ಸರ್ಕಾರಗಳೇ ಹೆದ್ದಾರಿ ನಿರ್ಮಿಸಿಕೊಟ್ಟಂತಾಗುತ್ತದೆ!

ಇಂತಹ ಒಂದು ಘಟನೆ ನಮ್ಮ ನಾಡಿನಲ್ಲಿ ಆಗಾಗ ಪ್ರತಿಧ್ವನಿಸುತ್ತಿದೆ. ನವಂಬರ್ ತಿಂಗಳು ಬಂದಾಗ, ರಾಜ್ಯ ಬಜೆಟ್ ಮಂಡಿಸಿದಾಗ, ಮಂತ್ರಿಮಂಡಲ ರಚನೆಯ ಸಮಯದಲ್ಲಿ, ಉತ್ತರ ಕರ್ನಾಟಕದಲ್ಲಿ ಮಹದಾಯಿ ಮುಂತಾದ ನದಿ ನೀರಿನ ಹೋರಾಟಗಳು ಆರಂಭವಾದಾಗ ಇದು ಸಾಮಾನ್ಯವಾಗುವಂತಾಗಿದೆ! ನಾಡಿನ ಐಕ್ಯತೆಗೆ ಭಂಗ ಉಂಟು ಮಾಡುವ ಇದನ್ನು ಮರವಾಗುವ ಮುನ್ನ ಶಮನಗೊಳಿಸಬೇಕಿದೆ. ಅದೇ ಪ್ರತ್ಯೇಕ ರಾಜ್ಯದ ಕೂಗು. ಅಸಮಾನತೆಯನ್ನು ದೀರ್ಘ ಕಾಲ ಸರಿಪಡಿಸಲು ಆಗದ್ದರ, ಅಸಮಾನತೆಯನ್ನು ಪೋಷಿಸಿದ್ದರ ಫಲವೇ ಪ್ರತ್ಯೇಕ ರಾಜ್ಯದ ಕೂಗಾಗಿದೆ! ಸ್ವಾತಂತ್ರ್ಯಾನಂತರ ಅಖಂಡ ಕರ್ನಾಟಕ ರಾಜ್ಯದ ರಚನೆಗಾಗಿ ಅನೇಕ ಕನ್ನಡಾಭಿಮಾನಿ ಕರ್ನಾಟಕ ಏಕೀಕರಣ ಧೀಮಂತ ಶಿಲ್ಪಿಗಳು ಇನ್ನಿಲ್ಲದೆ ಹೋರಾಡಿದ್ದರಾದರೂ ಏಕೀಕರಣವಾಗಬೇಕಾದಾಗ ಕೆಲವು ಪ್ರದೇಶಗಳು ಕೈತಪ್ಪಿದ್ದು ಸುಳ್ಳಲ್ಲ. ಅವುಗಳನ್ನು ಮತ್ತೆ ಸೇರಿಸಿಕೊಳ್ಳುವ ಹಂಬಲ, ಹೋರಾಟ ಜೀವಂತ ಇರುವಾಗಲೇ ಇರುವ ಕರ್ನಾಟಕ ಒಡೆದು ಎರಡು ರಾಜ್ಯವನ್ನಾಗಿಸುವ ಹೋರಾಟದ ಧ್ವನಿಗಳು ಮತ್ತೆ ಮತ್ತೆ ಅನುರಣಿಸುತ್ತಿರುವುದು ವಿಪರ್ಯಾಸ! ಆದರೂ ಸತ್ಯ! ಹೀಗಾಗಲು ಕಾರಣ ಇಲ್ಲದಿಲ್ಲ! ಎಲ್ಲಾ ಸಮೀಕ್ಷೆಗಳು ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ರ್ನಾಟಕ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದೆ ಎಂದು ಸಾರಿವೆ. ಅಸಮಾನತೆಯನ್ನು ರಾಜ್ಯ ಸರ್ಕಾರ ಗಮನಿಸಿದರೂ ಆ ಎರಡು ಭಾಗಗಳ ಅಸಮಾನತೆಯ ಅಂತರ ಕಡಿಮೆ ಮಾಡಲಾಗದೆ ಹೆಚ್ಚುತ್ತಾ ಹೋಗುತ್ತಿರುವುದರಿಂದ ಇದಕ್ಕೆ ರೋಸಿಹೋದ ಜನ ಮತ್ತೆ ಮತ್ತೆ ಪ್ರತ್ಯೇಕ ರಾಜ್ಯ ಬೇಕೆಂಬ ದ್ವನಿ ಗಟ್ಟಿಗೊಳಿಸುವಂತಾಗಿದೆ! ಈ ದ್ವನಿ  ಜನಪ್ರತಿನಿಧಿಗಳು ಆಗಾಗ ಅನೇಕ ಕಾರಣಗಳಿಗೆ ಎತ್ತುತ್ತಿದ್ದರು. ಈಗ ಜನಸಾಮಾನ್ಯರೂ ಅಧಿಕ ಸಂಖ್ಯೆಯಲ್ಲಿ ಜತೆಗೂಡುವಂತಾಗಿದೆ! ಹೈ ಕ ದ, ಉ ಕ ದ ಜನಪ್ರತಿನಿಧಿಗಳಿಗೇನೂ ಪ್ರತ್ಯೇಕ ರಾಜ್ಯ ಬೇಕೆಂಬ ಉದ್ದೇಶ ಇಲ್ಲ! ಆದರೆ  ಅಸಮಾನತೆ ಸರಿಪಡಿಸದ್ದರಿಂದ ಪ್ರತ್ಯೇಕ ರಾಜ್ಯ ಬೇಕೆಂಬ ದ್ವನಿ ಹಿರಿದಾಗುತ್ತಿದೆ!  ಕೆಲವು ಉ ಕ ದ ನಾಯಕರು ತಮಗೆಲ್ಲಿ ಮಂತ್ರಿ ಸ್ಥಾನ, ಅಧಿಕಾರ ಸಿಗದಂತೆ ಆಗಿಬಿಡುತ್ತದೋ ಎಂದು, ಇರುವ ಪದವಿ ಇಲ್ಲವಾಗಿಬಿಡತ್ತದೋ ಎಂದು ಪ್ರತ್ಯೇಕ ರಾಜ್ಯದ ದನಿಗೆ ಮಹತ್ವ ನೀಡುತ್ತಿರಲಿಲ್ಲ! ಈಗ ಸಂಪೂರ್ಣ ವಾತಾವರಣ ಬದಲಾಗಿದೆ! ಅಭಿವೃದ್ಧಿಯಾಗದಿದ್ದರೆ ಎಲ್ಲ‌ರೂ ಪ್ರತ್ಯೇಕ ರಾಜ್ಯದ ಕೂಗಿಗೆ ದನಿಯಾಗಬಹುದು! ಉ ಕಕ್ಕೆ ನಿಜವಾಗಿಯೂ ಅಸಮಾನತೆ ಉಂಟಾಗಿರುವುದು ಸುಳ್ಳಲ್ಲ. ಅದನ್ನು ಅನೇಕ ಸಮೀಕ್ಷೆಗಳು ಸಾಬೀತು ಪಡಿಸಿವೆ! ಆಂದ್ರದಿಂದ ತೆಲಂಗಾಣ ಪ್ರತ್ಯೇಕವಾದಂತೆ ನಮ್ಮಲ್ಲೂ ಆಗುವ‌ ಮುನ್ನ ಎಚ್ಚರ ಅವಶ್ಯಕ! ಈ ಭಾಗದವರೇ ಸಾಕಷ್ಟು ಜನಪ್ರತಿನಿಧಿಗಳಾಗಿದ್ದರೂ, ಮುಖ್ಯ ಮಂತ್ರಿಗಳು, ದೀರ್ಘಾವಧಿ ಮಂತ್ರಿಗಳು ಆಗಿದ್ದರೂ ಅಸಮಾನತೆಯನ್ನು ಹೋಗಲಾಡಿಸಲಾಗಿಲ್ಲ ಎಂಬುದು ವಿಪರ್ಯಾಸ!

ಉತ್ತರ ಕರ್ನಾಟಕದವರ ಭಾಷೆ, ಆಹಾರ, ಭೂಪ್ರದೇಶ. ಮಳೆ ಹಂಚಿಕೆ ಸ್ವಲ್ಪ ಬಿನ್ನವಾಗಿದ್ದರೂ ಕನ್ನಡ ಎಂಬ ಭಾವನಾತ್ಮಕ ವಿಚಾರ ಎಲ್ಲಾ ಬಿನ್ನತೆಯನ್ನು ಮರೆಯಿಸಿ ಕನ್ನಡಿಗರೆಂಬ ಭಾವವನ್ನು ಮೆರೆಯಿಸಿ ಅಖಂಡತೆಗೆ ಒತ್ತುಕೊಟ್ಟು ಕರ್ನಾಟಕ ರೂಪುಗೊಂಡಿದೆ! ಅಸಮಾನತೆ ಉಂಟಾಗಲು ಮುಖ್ಯ ಕಾರಣ ರಾಜ್ಯದ ರಾಜಧಾನಿ ರಾಜ್ಯದ ಮಧ್ಯದಲ್ಲಿರದೆ ದಕ್ಷಿಣದ ತುದಿಯಲ್ಲಿರುವುದು! ಕರ್ನಾಟಕದ ಆಡಳಿತ ಕೇಂದ್ರವಾದ ಬೆಂಗಳೂರಿನಲ್ಲೇ ವಿಧಾನಸೌಧ, ಸಚಿವಾಲಯಗಳು, ಅದಕ್ಕೆ ಸಂಬಂಧಿಸಿದ ಪ್ರಧಾನ ಕಾರ್ಯದರ್ಶಿಗಳ, ಆಯುಕ್ತರ ಕಛೇರಿಗಳು ಇರುವಂತಾಗಿರುವುದು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೈಗಾರಿಕೆಗಳು, ಕಾರ್ಖಾನೆಗಳು, ಐಟಿ ಪಾರ್ಕ್, ಸಿನಿ ಉದ್ಯಮ ಮುಂತಾದ ಉದ್ಯೋಗ ಸೃಜಿಸುವ ಕಂಪನಿಗಳನ್ನು ತೆರೆಯಲು ಅವಕಾಶ ಮಾಡಿರುವುದು. ಇದರಿಂದ ಪ್ರತಿಯೊಂದು ಆಡಳಿತ ಅಭಿವೃದ್ಧಿ ಕಾರ್ಯಗಳಿಗೆ, ಉದ್ಯೋಗ ಅರಸಿ ಎಲ್ಲರೂ ಬೆಂಗಳೂರಿಗೇ ಹೋಗಬೇಕಾಗುತ್ತದೆ. ಬೆಳಗಾವಿ ಗುಲ್ಬರ್ಗ ಬೀದರ್ ಮುಂತಾದ ಜಿಲ್ಲೆಗಳು ಆಂಧ್ರದ, ತಮಿಳುನಾಡಿನ ಕೆಲವು ಜಿಲ್ಲೆಗಳಿಗಿಂತ ದೂರದಲ್ಲಿ ಇವೆ. ಕರ್ನಾಟಕದ ಆಡಳಿತ ಕೇಂದ್ರವಾದ ಬೆಂಗಳೂರು ವಿಧಾನಸೌಧ ಆಂಧ್ರದವರು ತಮಿಳುನಾಡಿನವರ ಕೈಗೆ ಎಟುಕುತ್ತಿರುವಂತೆ ಉತ್ತರ ಕರ್ನಾಟಕದವರಿಗೆ ಎಟುಕದಿರುವುದು ವಿಪರ್ಯಾಸ! ಬೆಂಗಳೂರು ಜಿಲ್ಲೆಯ ಶೇಕಡ 30 ರಷ್ಟು ಗಡಿ ತಮಿಳುನಾಡು ರಾಜ್ಯದ‌ ಗಡಿಯೂ ಆಗಿದೆ! ಅಂತಹ ಬೆಂಗಳೂರು ಜಿಲ್ಲೆಯ ನಗರವೊಂದನ್ನು ರಾಜಧಾನಿ ಮಾಡಿದ್ದರ ಪ್ರಯುಕ್ತ ಬೆಂಗಳೂರು ಕನ್ನಡಿಗರಿಂದ ತುಂಬಿರದೆ ಇತರೆ ರಾಜ್ಯಗಳ ಜನರೇ ತುಂಬಿ ಕನ್ನಡಿಗರ ಸಂಖ್ಯೆ ಕ್ಷೀಣಿಸುವಂತಾಗಿ ಕನ್ನಡವೇ ನೆಲೆ ಕಳೆದುಕೊಳ್ಳುತ್ತಿದೆ.

ಕನ್ನಡಿಗರಿಗೆ ಉದ್ಯೋಗಾವಕಾಶಗಳ ಸಿಗದಂತಾಗಿ ಬೇರೆ ರಾಜ್ಯದವರ ಭೇರೆ ಭಾಷೆಯವರ ಪಾಲಾಗಿ ಬೆಂಗಳೂರು ಅನ್ನಿಗರ ಬೀಡಾಗಿದೆ! ಬೀದರ್, ಯಾದಗಿರಿ, ಗುಲ್ಬರ್ಗ, ವಿಜಯಪುರ, ರಾಯಚೂರು, ಬಳ್ಳಾರಿ, ಮುಂತಾದ ಜಿಲ್ಲೆಯ ಕನ್ನಡಿಗರು ಬೆಂಗಳೂರಿಗೆ ಪ್ರಯಾಣ ಮಾಡಲು ಹರ ಸಾಹಸ ಮಾಡಬೇಕಾಗುತ್ತದೆ! ರಾಜ್ಯಧಾನಿಗೆ‌ ಬರಲು ಒಂದು ದಿನ, ಹಿಂದಿರುಗಲು ಒಂದು ದಿನ ಬೇಕಾಗುತ್ತದೆ. ಕಛೇರಿಗಳಿಗೆ ಬಂದು ಒಂದೇ ದಿನದಲ್ಲಿ ಕೆಲಸ ಮಾಡಿಸಿಕೊಂಡು ಹಿಂತಿರುಗಲು ಸಾಧ್ಯವಾಗದೆ ಅಲ್ಲಿ ಇಲ್ಲಿ ರಾತ್ರಿ ತಂಗಬೇಕಾಗುತ್ತದೆ. ಸಂಬಂಧಿಸಿದ ಅಧಿಕಾರಿ ರಜೆ ಹೋಗಿದ್ದರೆ ಮೂರು ನಾಲ್ಕು ದಿನ ಅಲ್ಲೇ ಇರಬೇಕಾಗುತ್ತದೆ. ಹೀಗೆ ಬಂದು ಹೋಗುವ ತೊಂದರೆಯಿಂದ ರಾಜಧಾನಿಯನ್ನು ಸಂಪರ್ಕಿಸಲಾಗದೆ ಅಲ್ಲಿ ಅಭಿವೃದ್ಧಿ ಕಾರ್ಯಗಳು ಆಮೆಗತಿಯಲ್ಲಿ ಸಾಗುವಂತಾಗಿವೆ! ಹಾಗೆ ಆ ಪ್ರದೇಶಗಳಲ್ಲಿ ವರುಷ ಪೂರ್ತಿ ಕೆಲಸ ಮಾಡುವ ಯಾವುದೇ ರಾಜ್ಯದ ಆಡಳಿತ ಕಛೇರಿಗಳಿರದಿರುವುದರಿಂದ ಅತ್ತ ಮಂತ್ರಿಗಳು, ಉನ್ನತಾಧಿಕಾರಿಗಳು ಸುಳಿಯರು! ಇದರಿಂದ ಅಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಮಂತ್ರಿಗಳು ಆ ಪ್ರದೇಶಗಳಿಗೆ ಬರುವುದು ಆ ಪ್ರದೇಶವನ್ನು ವೀಕ್ಷಿಸುವುದು ಅಲ್ಲಿ ವಾಸಿಸುವುದು ಅಪರೂಪವಾದ ಪ್ರಯುಕ್ತ ಅಲ್ಲಿನ ಸಮಸ್ಯೆಗಳ ಗಮನಕ್ಕೆ ತೆಗೆದುಕೊಳ್ಳದೆ ಅಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಸರ್ಕಾರಗಳಿಗೆ ಸಮಗ್ರ ದೃಷ್ಟಿಯ ಕೊರತೆ, ರಾಜ್ಯವನ್ನು ತಮ್ಮ ದೇಹದ ಒಂದೇ ಅಂಗ ಎಂದು ಭಾವಿಸದಿರುವುದು, ಕೆಲವು ದಕ್ಷಿಣದ ರಾಜಕಾರಣಿಗಳೇ ಪ್ರಭಾವಶಾಲಿಗಳಾಗಿರುವುದೂ, ರಾಜಕಾರಣಿಗಳು ರಾಜಕೀಯ ಮಾಡುತ್ತಿರುವುದು ಸಹ ಕಾರಣಗಳಾಗಿವೆ! ಹೈದರಾಬಾದ ಕರ್ನಾಟಕದ, ಉ ಕ ದ ಎಲ್ಲಾ ಜನ ಪ್ರತಿನಿಧಿಗಳು ಒಟ್ಟಾಗಿ ಅಸಮಾನತೆ ಅಳಿಸಲು ಹೋರಾಡದಿರುವುದು, ಎಲ್ಲಿ ತಾವು ಅಧಿಕಾರ, ಮಂತ್ರಿ ಸ್ಥಾನ, ಪದವಿಗಳಿಂದ ವಂಚನೆಗೊಳಗಾಗುತ್ತೇವೋ ಎಂಬ ಬಯ! ದಾವಣಗೆರೆ ಮಧ್ಯ ಕರ್ನಾಟಕದಲ್ಲಿರುವುದರಿಂದ ದಾವಣಗೆರೆಯನ್ನು ಅಥವಾ‌ ಇನ್ನಾವುದೇ ಮಧ್ಯ ಕರ್ನಾಟಕದ ನಗರವನ್ನು ರಾಜ್ಯಧಾನಿಯಾಗಿಸಿದ್ದರೆ ಆಡಳಿತದ ಕೇಂದ್ರವಾಗಿಸಿದ್ದರೆ ಇಂತಹ ಸಮಸ್ಯೆಗಳು ತಲೆದೋರುತ್ತಿರಲಿಲ್ಲವೇನೋ!

ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರನ್ನು ದಾವಣಗೆರೆಗೆ ವರ್ಗಾಯಿಸುವುದು ಕಷ್ಟ ಏನಾದರೂ ಮಾಡಿ ಉತ್ತರ ಕರ್ನಾಟಕದವರಿಗೆ ಅನುಕೂಲ ಮಾಡೋಣವೆಂದು ಬೆಳಗಾವಿಯಲ್ಲಿ ಸಾಕ್ಷಾತ್ ವಿಧಾನಸೌಧ ನಿರ್ಮಿಸುವ ಯೋಚನೆ ಮಾಡಿ 279 ಕೋಟಿ ವೆಚ್ಚ ಮಾಡಿ ವಿಧಾನಸೌದ ನಿರ್ಮಿಸಿದರು. ಪ್ರತಿ ವರ್ಷ ಎರಡು ಅಧಿವೇಶನಗಳು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುತ್ತಿದ್ದವು. ಅದರಲ್ಲಿ ಒಂದು ಅಧಿವೇಶನ ಬೆಳಗಾವಿಯಲ್ಲಿ ನಡೆಯಿಸುವಂತಾಯಿತು. ಇದರಿಂದ ಮುಖ್ಯಮಂತ್ರಿ, ಅನೇಕ ಮಂತ್ರಿಗಳ, ಪ್ರತಿಪಕ್ಷ ನಾಯಕರ, ನಾಡಿನ ಎಲ್ಲಾ ಜನ ಪ್ರತಿನಿಧಿಗಳ ಹತ್ತಿರದಿಂದ ನೋಡಿ ಅವರ ಗುಣ ಅವಗುಣಗಳ ತಿಳಿದುಕೊಂಡದ್ದು ಬಿಟ್ಟರೆ ಏನೂ ಪ್ರಯೋಜನವಾಗಿಲ್ಲ!

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಒಂದು ಅಧಿವೇಶನ ಬೆಳಗಾವಿಯಲ್ಲಿ ನಡೆದುದರಿಂದ ಸರ್ಕಾರದ ಖರ್ಚು ಇನ್ನೂ ಹೆಚ್ಚಾಗಿ ಪ್ರಜೆಗಳು ಕೊಡುವ ತೆರಿಗೆ ವ್ಯರ್ಥ‌‌ವಾಗುವಂತಾಯಿತು ಹೊರತು ಉತ್ತರ ಕರ್ನಾಟಕ್ಕೆ ಏನೂ ಲಾಭವಾಗಿಲ್ಲ! ಬೆಳಗಾವಿಯ ಅಧಿವೇಶನದಲ್ಲಿ ಏನಾದರೂ ಉತ್ತರ ಕರ್ನಾಟಕದ ಅಸಮತೋಲನ ಹೋಗಲಾಡಿಸುವ ವಿಷಯವನ್ನಷ್ಟೇ ಚರ್ಚಿಸಲಾಗುತ್ತದೆಯೇ? ಇಲ್ಲವಲ್ಲ! ಬೆಂಗಳೂರಿನ ವಿಧಾನಸೌಧದಲ್ಲಿ ಏನನ್ನು ಚರ್ಚಿಸಿ ತೀರ್ಮಾನಿಸುತ್ತಿದ್ದರೋ ಅದನ್ನೇ ಬೆಳಗಾವಿಯ ವಿಧಾನಸೌಧದಲ್ಲಿ ಸಹ ಚರ್ಚಿಸಿ ತೀರ್ಮಾನಿಸಲಾಗುತ್ತದೆ! ಇದಕ್ಕಾಗಿ ಸರಕಾರ ಬೆಳಗಾವಿಗೆ ಹೋಗಬೇಕಾಗಿತ್ತೇ? ಇದಕ್ಕಾಗಿ ಅಲ್ಲಿ 279 ಕೋಟಿ ಖರ್ಚು ಮಾಡಿ ವಿಧಾನಸೌಧ ನಿರ್ಮಿಸಬೇಕಾಗಿತ್ತೇ? ಬೆಳಗಾವಿಯಲ್ಲಿ ವಿಧಾನ ಸೌಧ ನಿರ್ಮಿಸುವ ಬದಲು ಅದಕ್ಕೆ ಖರ್ಚು ಮಾಡಿದ 279 ಕೋಟಿ ಹಣವನ್ನು ಅಲ್ಲಿನ ಪ್ರದೇಶಗಳ ಅಭಿವೃದ್ಧಿಗೆ ವಿನಿಯೋಗಿಸಿದ್ದರೆ ಎಷ್ಟೋ ಅಭಿವೃದ್ಧಿಯಾಗುತ್ತಿತ್ತಲ್ಲವೇ?

ಸರ್ಕಾರಗಳು ಇರುವುದು ಕೇವಲ ದಕ್ಷಿಣ ಕರ್ನಾಟಕ್ಕಷ್ಟೇ ಅಲ್ಲ ಇಡೀ ರಾಜ್ಯಕ್ಕೆ. ಮಂತ್ರಿಗಳು ತಮ್ಮ ಕ್ಷೇತ್ರಕ್ಕಷ್ಟೇ ಅಲ್ಲ ಇಡೀ ರಾಜ್ಯಕ್ಕೆ, ಪ್ರಭಾವಿ ಮಂತ್ರಿಗಳಾದರೇನು ಅವರೂ ಸಹ ಇರುವುದು ಇಡೀ ರಾಜ್ಯಕ್ಕೆ ಮುಖ್ಯ ಮಂತ್ರಿಗಳಾದರೇನು ಅವರೂ ಸಹ ಇರುವುದು ಇಡೀ ರಾಜ್ಯಕ್ಕೆ ಎಂಬ ಭಾವನೆ ಮರೆತು ತಮ್ಮ ಕ್ಷೇತ್ರಕ್ಕಷ್ಟೇ ಎಂದು ಭಾವಿಸುತ್ತಿರುವುದೂ ಈ ಅಸಮಾನತೆ ಉಂಟಾಗಲು ಮುಖ್ಯವಾದ ಒಂದು ಕಾರಣವಾಗಿದೆ! ಕೆಲವು ಪ್ರಭಾವಿ ನಾಯಕರಿಂದ ದಕ್ಷಿಣ ಕರ್ನಾಟಕದ ಬಹಳ ಜಿಲ್ಲೆಗಳು ಅಭಿವೃದ್ದಿಯಾಗಿದ್ದರೂ  ಪ್ರಭಾವಿ ನಾಯಕರಿಲ್ಲದ ಇನ್ನೂ ಅನೇಕ ಪ್ರದೇಶಗಳು ಉತ್ತರ ಕರ್ನಾಟಕದಂತೆ ಹಿಂದುಳಿದಿವೆ. ದಕ್ಷಿಣ ಕರ್ನಾಟಕದಲ್ಲೂ ಅಸಮಾನತೆ ಇದೆ! ಎಲ್ಲಿ ಪ್ರಭಾವಿ ರಾಜಕಾರಣಿಗಳಿದ್ದಾರೋ ಆ ಪ್ರದೇಶ ಅಭಿವೃದ್ದಿಯಾಗುವಂತಾಗಿದೆ. ಹೀಗಾಗಬಾರದು ಎಲ್ಲಾ ಪ್ರದೇಶಗಳನ್ನು ಸಮಾನವಾಗಿ ಅಭಿವೃದ್ದಿಪಡಿಸಬೇಕು. ಬೆಂಗಳೂರು ಹಾಸನ ಮಂಡ್ಯ ಮುಂತಾದ ಜಿಲ್ಲೆಗಳ ಸುತ್ತಲಿನ  ಭಾಗವನ್ನು ಅಭಿವೃದ್ಧಿಪಡಿಸಿದಂತೆ ಉತ್ತರ ಕರ್ನಾಟಕವನ್ನು, ಹಿಂದುಳಿದ ಪ್ರದೇಶಗಳನ್ನು ಸಹ ಅಭಿವೃದ್ದಿ ಮಾಡುವ ಪ್ರಾಮಾಣಿಕ ಪ್ರಯತ್ನ ಎಲ್ಲರೂ ಮಾಡಿ ಪ್ರತ್ಯೇಕ ರಾಜ್ಯದ ಕೂಗು ಮರುಕಳಿಸಿದಂತೆ ಮಾಡಬೇಕಿದೆ. ಈ ಜವಾಬ್ದಾರಿ ಎಲ್ಲಾ ಸರ್ಕಾರಗಳ ಮೇಲಿದೆ. ಕನ್ನಡ ನಾಡು ಒಂದೇ ಆಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರದಾಗಿರುತ್ತದೆ. ಅದರಲ್ಲೂ ಪ್ರಜಾಪ್ರತಿನಿಧಿಗಳದ್ದು ಹೆಚ್ಚಿನದ್ದಾಗಿರುತ್ತದೆ.

ಈ ನಿಟ್ಟಿನಲ್ಲಿ ಸಂವಿಧಾನದ 371 ನೇ ಕಲಮಿಗೆ ತಿದ್ದುಪಡಿ ತಂದು ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡುವ ಪ್ರಯತ್ನ, ಹೈಕೋರ್ಟ್ ಪೀಠಸ್ಥಾಪನೆ ಉತ್ತಮವಾದುವಾಗಿವೆ. ಇದರಿಂದ ಅವರಿಗೆ ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಮೀಸಲಾತಿ ದೊರೆತು ಅನುಕೂಲವಾಗುವುದು. ಬೆಂಗಳೂರಿನ ಹೈಕೋರ್ಟಿಗೇ ನ್ಯಾಯದಾನಕ್ಕೆ ಅಲೆಯುವುದು ಕಡಿಮೆಯಾಗುವುದು. ಇವುಗಳಷ್ಟರಿಂದನೇ ಅಸಮಾನತೆ ಕಡಿಮೆಯಾಗದು. ಯೋಜನಾಬದ್ದವಾಗಿ ಪೂರಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಬೆಂಗಳೂರಿನಲ್ಲಿ ಆಡಳಿತದ ಕಛೇರಿಗಳಿರುವುದರಿಂದ, ವಿವಿಧ ಕಾರ್ಖಾನೆಗಳು, ಉದ್ದಿಮೆಗಳು, ಗಾರ್ಮೆಂಟ್ಸುಗಳು, ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳು, ಕೌಶಲಾಭಿವೃದ್ದಿ ತರಬೇತಿ ಕೇಂದ್ರಗಳಿರುವುದು, ಬಿಟಿ, ಐಟಿ ಪಾರ್ಕ್, ರಿಯಲೆಸ್ಟೇಟ್, ಸಿನಿಮಾ ನಿರ್ಮಾಣ ಮುಂತಾದ ಉದ್ಯೋಗಗಳ ಸೃಜಿಸುವ ಕೇಂದ್ರವಾಗಿರುವುದರಿಂದ ಉದ್ಯೋಗ ಅರಸಿ ಬಂದ ಜನ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹೀಗೆ ಎಷ್ಟೋ ಜನರಿಗೆ ಉದ್ಯೋಗ, ಬದುಕು ನೀಡಿ ಅವರ ಬದುಕ ಹಸಿರಾಗಿಸಿದೆ. ಆದರೆ ಮಿತಿಮೀರಿ ಬಂದು ನೆಲೆಸಿದ ಇವರಿಗೆ ನಿತ್ಯದ ಅವಶ್ಯಕತೆಗಳ ಒದಗಿಸುವುದು ಅದರಲ್ಲೂ ನೀರು ಒದಗಿಸುವುದು, ಸ್ವಚ್ಛತೆ ಕಾಪಾಡುವುದು, ಕಸ ವಿಲೇವಾರಿ ಸವಾಲಾಗಿದೆ. ಬೆಂಗಳೂರು ಉಧ್ಯಾನ ನಗರಿ ಹೆಸರಿಗಷ್ಟೇ ಎಂಬಂತಾಗಿ ಮಾಲಿನ್ಯದ ತವರಾಗುತ್ತಿದೆ. ದೆಹಲಿಯ ಅಪಖ್ಯಾತಿ ಬರುವುದರೊಳಗೆ ಅನೇಕ ಕಾರ್ಖಾನೆ, ಕೈಗಾರಿಕೆಗಳ, ಕೌಶಲಾಭವೃದ್ದಿ ಕೇಂದ್ರಗಳ, ಸರ್ಕಾರಿ ಆಡಳಿತದ ಉಪ ಕಛೇರಿ, ಜನ ಪ್ರಿಯ ಸಿನಿಮಾ ದಾರಾವಾಹಿ ನಿರ್ಮಾಣ ಮುಂತಾದವುಗಳ ಹೈದರಾಬಾದು ಕರ್ನಾಟಕಕ್ಕೆ ವರ್ಗಾಯಿಸಿ ಮತ್ತು ಹೊಸ ಐಟಿ, ಬಿಟಿ ಕಂಪನಿಗಳ, ಕೈಗಾರಿಕೆಗಳ ಸ್ಥಾಪಿಸುವುದರಿಂದ ಬೆಂಗಳೂರಿನ ಮಾಲಿನ್ಯ ಕಡಿಮೆಮಾಡಿದಂತೆಯೂ ಆಗುತ್ತದೆ, ಉತ್ತರ ಕರ್ಣಾಟಕವನ್ನು ಅಭಿವೃದ್ಧಿ ಮಾಡಿದಂತೆಯೂ ಅಗಿ ಅಸಮಾನತೆ ಕಡಿಮೆ ಮಾಡಬಹುದಾಗಿದೆ! ಸರ್ಕಾರಗಳು ಏನೇ ಕಾರ್ಯಕ್ರಮಗಳನ್ನು ರೂಪಿಸುವಾಗ ಹೈದರಾಬಾದ್ ಕರ್ನಾಟಕಕ್ಕೆ ಪ್ರಥಮ ಆದ್ಯತೆ ಕೊಟ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಬಜೆಟ್ ನಲ್ಲಿ ಆಧ್ಯತೆ ಕೊಡಬೇಕು! ಈಗಿನ ಮುಖ್ಯ ಮಂತ್ರಿಯಾದ ಕುಮಾರಸ್ವಾಮಿಯವರು ಬೆಳಗಾವಿಯನ್ನು ಎರಡನೆಯ ರಾಜಧಾನಿಯಾಗಿಸ ಹೊರಟಿದ್ದಾರೆ! ಆಗ ಅಗಾಧ ಅಮಾನತೆ ಕಡಿಮೆಯಾದೀತು. ಪ್ರತ್ಯೇಕ ರಾಜ್ಯದ ಕೂಗು ನಿಂತೀತು! ಆದರೂ ಇವೆಲ್ಲವೂ ಉ ಕ ಪ್ರತ್ಯೇಕ ರಾಜ್ಯವಾಗಲು ಪೂರಕ ವ್ಯವಸ್ಥೆಗಳಾಗಿಬಿಡಹುದು! ಆದ್ದರಿಂದ ಮಧ್ಯ ಕರ್ನಾಟಕದ ನಗರವೊಂದನ್ನು ರಾಜ್ಯಧಾನಿಯಾಗಿಸುವುದೊಂದೇ ಅಖಂಡ ಕರ್ನಾಟಕ ಅಖಂಡವಾಗಿ ಉಳಿಸಲು ಅಸಮಾನತೆಯನ್ನು ಕಡಿಮೆಯಾಗಿಸಲು ಸಾಧ್ಯ!

* ಕೆ ಟಿ ಸೋಮಶೇಖರ ಹೊಳಲ್ಕೆರೆ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x