ಬಾಲ್ಕನಿ ವರ್ಸಸ್ ಗಾಂಧಿಕ್ಲಾಸ್: ಎಚ್.ಕೆ.ಶರತ್


ಬಾಲ್ಕನಿ
1
ಅಲ್ಲೊಂದಿಷ್ಟು ಮಂದಿ ಕುಂತಿದ್ದಾರೆ. ತಮ್ಮನ್ನು ತಾವು ಸುಸಂಸ್ಕøತರೆಂದು ಭಾವಿಸಿದವರು. ಹಾಗವರು ಅಂದುಕೊಳ್ಳಲು ಕಾರಣವೂ ಇದೆ. ಅವರ ಬಳಿ ಕಾಸಿದೆ. ಓದಿ ತಿಳಿದುಕೊಂಡವರು ಎಂಬ ಅಹಂ ಅವರನ್ನು ಅಮರಿಕೊಂಡಿದೆ.

2
ಅವರ ಮೈವಾಸನೆ, ಪೂಸಿಕೊಂಡ ಸೆಂಟಿನ ಸರಳಿನೊಳಗೆ ಬಂಧಿಯಾಗಿದೆ. ಸದ್ಯಕ್ಕೆ ಸೆಂಟು ಸ್ರವಿಸುವ ಸುವಾಸನೆಯೇ ಅವರ ಮೈವಾಸನೆ.

3
ರಂಗು ರಂಗಾದ ದಿರಿಸುಗಳು ಅವರೆಲ್ಲರ ಮೈಯನ್ನು ಆವರಿಸಿವೆ. ಫ್ಯಾನ್ಸಿ ಸೀರೆ ಉಟ್ಟ ಮಹಿಳೆಯರು, ಟೈಟ್ ಜೀನ್ಸ್, ಚೂಡಿದಾರ್ ಇತ್ಯಾದಿ ಇತ್ಯಾದಿ ತೊಟ್ಟುಕೊಂಡ ಹುಡುಗಿಯರು, ಅವರೊಂದಿಗೆ ಡೀಸೆಂಟಾಗಿ ಡ್ರೆಸ್ ಮಾಡಿಕೊಂಡು ಬಂದಿರುವ ಹುಡುಗರು, ಗಂಡಸರು ಇದ್ದಾರೆ. ಇದಕ್ಕೆ ಕೆಲವು ಅಪವಾದಗಳೂ ಉಂಟು.

4
ತೆರೆಯ ಮೇಲೆ ಸಿನಿಮಾ ತೆರೆದುಕೊಂಡಿದೆ. ಬಾಲ್ಕನಿಯಲ್ಲಿ ಕುಳಿತಿರುವ ಅವರು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪುಸ್ತಕದಲ್ಲಿರುವ ಎಲ್ಲಾ ಟಿಪ್ಸುಗಳನ್ನು ಪಾಲಿಸುವವರಂತೆ ಗಪ್‍ಚುಪ್ ಆಗಿ ಕುಳಿತಿದ್ದಾರೆ. ಶಿಳ್ಳೆ ಹಾಕುತ್ತಿಲ್ಲ, ಅರಚಾಡುವ ಗೋಜಿಗೆ ಹೋಗುತ್ತಿಲ್ಲ. ಸುಮ್ಮನೆ ತೆರೆಯ ಮೇಲೆ ಕಣ್ಣಾಯಿಸುತ್ತಿದ್ದಾರೆ.

5
ಸಿನಿಮಾ ತೆರೆಯ ಮೇಲೆ ಚಲಿಸುತ್ತಿದೆ. ಬಾಲ್ಕನಿಯಲ್ಲಿ ಕುಳಿತವರ ಕೈಯಲ್ಲಿ ಟಚ್ ಸ್ಕ್ರೀನ್ ಮೊಬೈಲು, ನೋಟ್‍ಬುಕ್‍ಗಳು ಇವೆ. ಅವರ ಕೈಬೆರಳುಗಳು ಸ್ಕ್ರೀನಿನ ಮೇಲೆ ಸರಿದಾಡುತ್ತಿವೆ. ಮೆಸೇಜುಗಳು ಎಲ್ಲೆಲ್ಲಿಗೋ ಯಾರ್ಯಾರಿಗೋ ರವಾನೆಯಾಗುತ್ತಿವೆ.

6
ತೆರೆಯ ಮೇಲೆ ಐಟಂ ಸಾಂಗಿನ ಆಗಮನವಾಗಿದೆ. ಸುಸಂಸ್ಕøತರ ಪಟ್ಟ ತ್ಯಜಿಸಲು ಬಯಸದೇ ಕೆಲವರು ಮುಖ ಸಿಂಡರಿಸಿಕೊಳ್ಳುತ್ತಿದ್ದಾರೆ. ಇನ್ನುಳಿದವರು ಹೊರಗೆ ತೋರಿಸಿಕೊಳ್ಳದೇ ಒಳಗೊಳಗೇ ರೋಮಾಂಚನ ನುಂಗಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಜೊತೆಯಲ್ಲಿ ಮಕ್ಕಳನ್ನು ಕರೆದುಕೊಂಡು ಬಂದಿರುವ ಡೀಸೆಂಟ್ ಜನಾಂಗದವರು ಡಿಸ್ಟರ್ಬ್ ಆಗಿದ್ದಾರೆ.

7
ಇಂಟರ್ವಲ್ ಸಮಯ. ಮೂತ್ರ ವಿಸರ್ಜನೆಗಾಗಿ, ಸಿಗರೇಟಿನ ಸಾಂಗತ್ಯ ಅರಸಿ ಹಲವರು ಕುಳಿತಲ್ಲಿಂದ ಎದ್ದು ಹೊರ ಬಂದಿದ್ದಾರೆ. ಕೂಲ್ ಡ್ರಿಂಕ್ಸ್ ಕುಡಿಯುವಲ್ಲಿ, ಪಾಪ್‍ಕಾರ್ನ್ ಮೆಲ್ಲುವಲ್ಲಿ ಇನ್ನುಳಿದವರು ಬ್ಯುಸಿಯಾಗಿದ್ದಾರೆ.

8
ಸಿನಿಮಾ ಮುಗಿದಿದೆ. ಅವರೆಲ್ಲರೂ ಹೊರ ಬರುತ್ತಿದ್ದಾರೆ. ಸಿನಿಮಾ ಕೆಲವರಿಗೆ ಇಷ್ಟವಾಗಿದೆ. ಮತ್ತೆ ಕೆಲವರಿಗೆ ನೋಡಲು ಕಷ್ಟವಾಗಿದೆ. ಅವರ ಮಾತುಗಳು ಅರಚಾಟದ ಹಂತ ತಲುಪದೇ ಮಾತಿನ ಮಿತಿಯಲ್ಲೇ ಹೊರಬರುತ್ತಿವೆ.

ಗಾಂಧಿಕ್ಲಾಸ್
1
ಅಲ್ಲೂ ಒಂದಿಷ್ಟು ಮಂದಿ ಕೂತಿದ್ದಾರೆ. ಅವರಿಗೆ ಅವರಿವರು ಮ್ಯಾನರ್‍ಲೆಸ್ ಜನ ಎಂಬ ಬಿರುದು ಪ್ರದಾನ ಮಾಡಿದ್ದಾರೆ. ಅವರ ಜೇಬಿನ ತುಂಬ ಕಾಸಿಲ್ಲ. ಹೊತ್ತೊತ್ತಿನ ಹೊಟ್ಟೆಪಾಡಿಗೆ ದಾರಿ ಕಂಡುಕೊಳ್ಳುವ ಜಾಯಮಾನದವರು. ಅವರಿಗೆ ಅವರಿವರನ್ನು ಮೆಚ್ಚಿಸುವ ಸುಸಂಸ್ಕøತ ಸ್ವಭಾವ ಒಗ್ಗದು.

2
ಅವರ ಮೈವಾಸನೆ ಬೆವರು ಬಸಿಯುವ ಪರಿಮಳ ಪೂಸಿಕೊಂಡಿದೆ. ಅದರೊಂದಿಗೆ ಒಳಗೆ ಸೇರಿರುವ ಪರಮಾತ್ಮನ ಗಾಢ ಸುವಾಸನೆಯೂ ಬೆರೆತಿದೆ. ಬಾಯ್ತುಂಬ ತುಂಬಿಕೊಂಡಿರುವ ನಾನಾ ನಮೂನೆಯ ಗುಟ್ಕಾದ ಸ್ಮೆಲ್ಲೂ ಅವರ ಮೈವಾಸನೆಯ ಒಳಮೈ ಪ್ರವೇಶಿಸಿದೆ.

3
ಬಟ್ಟೆ ತೊಡುವುದು ಮೈ ಮುಚ್ಚುವ ಸಲುವಾಗಿ ಎಂಬ ಮಾತಿಗೆ ಅನುಗುಣವಾಗಿ ದಿರಿಸುಗಳು ಗಾಂಧಿಕ್ಲಾಸ್‍ನಲ್ಲಿ ಕುಳಿತವರ ಮೈ ಆವರಿಸಿವೆ. ಮಾಸಿದ, ತೇಪೆಯ ತವರೆಂಬಂತೆ ಭಾಸವಾಗುವ ಬಟ್ಟೆಗಳು ಹಲವರ ಮೈ ಮೇಲೆ ಆಸೀನವಾಗಿವೆ. ಕೆಲವರು ಮಾತ್ರ ಸುಸಂಸ್ಕøತ ಪೀಳಿಗೆಯವರು ಸ್ಲಂ ನನ್ಮಕ್ಳು ಹಾಕುವ ಬಟ್ಟೆ ಎಂದು ಸಂಬೋಧಿಸುವ ಚಿತ್ರ ವಿಚಿತ್ರವಾದ ಹೊಸ ದಿರಿಸುಗಳನ್ನು ಧರಿಸಿದ್ದಾರೆ.

4
ಸಿನಿಮಾ ಶುರುವಾಗಿದೆ. ಶಿಳ್ಳೆಯ ಸದ್ದು ಗಾಂಧಿಕ್ಲಾಸಿನ ಸುತ್ತೆಲ್ಲ ಆವರಿಸಿದೆ. ನಾಯಕನ ಎಂಟ್ರಿ ಅವರೊಳಗೆ ರೋಮಾಂಚನ ಚಿಮ್ಮಿಸುತ್ತಿದೆ. ಕುಂತ ಸೀಟುಗಳಿಂದ ಮೇಲೆದ್ದು ಹಲವರು ಕೂಗಾಡುತ್ತಿದ್ದಾರೆ.

5
ಸಿನಿಮಾ ತೆರೆಯ ಮೇಲೆ ಚಲಿಸುತ್ತಿದೆ. ಗಾಂಧಿಕ್ಲಾಸಿನಲ್ಲಿ ಕುಳಿತವರ ಕೈಗಳು ಶರ್ಟು, ಪ್ಯಾಂಟಿನ ಜೇಬು ತಡಕುತ್ತಿವೆ. ಜೇಬಿನಿಂದ ಗುಟ್ಕಾ ಪ್ಯಾಕೆಟ್ ತೆಗೆದು, ಕೈಯಲ್ಲಿ ಗುಟ್ಕಾ ಅದುಮಿ ನಾಲಿಗೆಗೆ ಒತ್ತಲಿಸಿಕೊಳ್ಳುತ್ತಿದ್ದಾರೆ.

6
ಐಟಂ ಸಾಂಗು ಶುರುವಾಗಿದೆ. ಗಾಂಧಿಕ್ಲಾಸೆಂದರೆ ಪಡ್ಡೆಗಳ ಅಡ್ಡೆ ಎಂದು ಸುಸಂಸ್ಕøತರು ತೆಗೆಯುವ ತಕರಾರಿಗೆ ನ್ಯಾಯ ಸಲ್ಲಿಸಲು ಹೊರಟವರಂತೆ ಅವರೆಲ್ಲ ಕುಣಿದು ಕುಪ್ಪಳಿಸುತ್ತಿದ್ದಾರೆ. ಒಳಗಾಗುವ ತಲ್ಲಣಕ್ಕೆ ಒಳಗೇ ನಿಲ್ದಾಣ ನಿರ್ಮಿಸಿಕೊಳ್ಳದೇ ಎಲ್ಲವನ್ನೂ ಹೊರ ಹಾಕುತ್ತಿದ್ದಾರೆ.

7
ಇಂಟರ್ವಲ್ ಇಂಟರ್‍ಫಿಯರ್ ಆಗಿದೆ. ಜೇಬಿನಿಂದ ಬೀಡಿ ಕಟ್ಟನ್ನು ಕೈಗೆತ್ತಿಕೊಂಡು ಕೆಲವರು ಬೀಡಿಗೆ ಬೆಂಕಿ ಹಚ್ಚುತ್ತಿದ್ದಾರೆ. ಮತ್ತೆ ಕೆಲವರು ತುಟಿಗಳ ನಡುವೆ ಸಿಗರೇಟು ಇಟ್ಟುಕೊಂಡಿದ್ದಾರೆ. ಹೊಗೆಯ ಸಾಮ್ರಾಜ್ಯವೊಂದು ಅಲ್ಲಿ ನಿರ್ಮಾಣವಾಗಿದೆ.

8
ಸಿನಿಮಾ ಮುಗಿದಿದೆ. ಇಷ್ಟಪಟ್ಟವರು, ಇಷ್ಟಪಡದವರು ಏರಿದ ದನಿಯಲ್ಲಿ ತಮಗನಿಸಿದ್ದನ್ನು ಹೇಳುತ್ತ ಥಿಯೇಟರ್‍ನಿಂದ ಹೊರ ಬರುತ್ತಿದ್ದಾರೆ.

-ಎಚ್.ಕೆ.ಶರತ್,

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ದ್ಯಾವನೂರು ಮಂಜುನಾಥ್

ಕಾಲೇಜು ದಿನಗಳು ನೆನಪಿಗೆ ಬರುತ್ತಿವೆ ಶರತ್ ಅಣ್ಣ

ಲಗೋರಿಬಾಬಾ
ಲಗೋರಿಬಾಬಾ
8 years ago

ಸಖತ್ತಾಗಿದೆ

chaithra
chaithra
8 years ago

ಎರಡೂ ಕಡೆ ಕುಳಿತು ಒಮ್ಮೆ ಅವರಂತೆ, ಒಮ್ಮೆ ಇವರಂತೆ  ನಟಿಸುವ ಇನ್ನೊಂದಷ್ಟು ಜನರೂ ಇರುತ್ತಾರೆ !! ha ha super

sharath h k
8 years ago

ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ

Chandra
Chandra
8 years ago

super

5
0
Would love your thoughts, please comment.x
()
x