ನೀರಿಗಾಗಿ ಜನಾಂದೋಲನಗಳ ಮಹಾಮೈತ್ರಿ: ಅಖಿಲೇಶ್ ಚಿಪ್ಪಳಿ

Akhilesh chippali column1

ದಕ್ಷಿಣ ಕನ್ನಡದಂತಹ ಸಮೃದ್ಧ ಜಿಲ್ಲೆಯೀಗ ನೀರಿನ ಕೊರತೆಯಿಂದಾಗಿ ಬಳಲುತ್ತಿದೆ. ನೀರಿನ ಕೊರತೆಗೆ ಕಾರಣಗಳೇನು? ಹಾಗೂ ಇದನ್ನು ಶಾಶ್ವತವಾಗಿ ಪರಿಹರಿಸುವ ಬಗೆ ಹೇಗೆ? ಇತ್ಯಾದಿ ಗಂಭೀರ ಸಮಸ್ಯೆಗಳ ಕುರಿತಾಗಿ ವ್ಯಾಪಕ ಚರ್ಚೆ ಪ್ರಾರಂಭವಾಗಿದೆ. ಜನಾಂದೋಲನಗಳ ಮಹಾಮೈತ್ರಿ ಹೆಸರಿನಡಿಯಲ್ಲಿ ನೀರಿನ ಲಭ್ಯತೆ, ಬಳಕೆ, ನಿರ್ವಹಣೆ ಇತ್ಯಾದಿಗಳ ಕುರಿತಾಗಿ ಆಂದೋಲನ ಶುರುವಾಗಿದೆ. ಸಮುದ್ರದ ತಟದಲ್ಲೇ ಇರುವ ಈ ಜಿಲ್ಲೆಯೀಗ ಭೀಕರ ಬರಗಾಲಕ್ಕೆ ತುತ್ತಾಗಿದೆ. ನೀರಿನ ಸಮರ್ಪಕ ನಿರ್ವಹಣೆಗಾಗಿ ಸರ್ಕಾರಗಳು ಏನು ಮಾಡಬೇಕು, ಸಾರ್ವಜನಿಕರ ಕರ್ತವ್ಯವೇನು? ಮುಂತಾದ ವಿಚಾರಗಳು ಚರ್ಚೆಯಲ್ಲಿ ಒಳಗೊಳ್ಳುತ್ತವೆ. ನೀರಿಲ್ಲದ ನಾಳೆಯನ್ನು ಊಹಿಸಿಕೊಳ್ಳುವುದು ಅಸಾಧ್ಯ. ರೋಗ ಬಂದ ಮೇಲೆ ಔಷಧ ಮಾಡುವುದಕ್ಕಿಂತ, ರೋಗವೇ ಬಾರದ ಹಾಗೆ ಎಚ್ಚರಿಕೆ ವಹಿಸುವುದು ಅತ್ಯಂತ ಸಮಯೋಚಿತವಾದ ನಿರ್ಧಾರವಾಗಬಲ್ಲದು. ಇಡೀ ರಾಜ್ಯವೇ ಕ್ಷಾಮಕ್ಕೆ ತುತ್ತಾದ ಈ ಹೊತ್ತಿನಲ್ಲಿ, ಇಂತಹ ತುರ್ತು ಬೆಳವಣಿಗೆಗಳು ಮುಂದಿನ ಪೀಳಿಗೆಗೆ ಆಶಾದಾಯಕ ಬೆಳವಣಿಗೆಯಾಗಿದೆ. ಇದಕ್ಕಾಗಿ ನಾಡಿನ ಎಲ್ಲಾ ಜನರ ಸಲಹೆ-ಸಹಕಾರಗಳನ್ನು ಜನಾಂದೋಲನಗಳ ಮಹಾಮೈತ್ರಿ ಬಯಸಿದೆ. ಈ ನಿಟ್ಟಿನಲ್ಲಿ ಚಾರ್ವಾಗ ಬಳಗ ಅತಿಮುಖ್ಯವಾದ ಕೆಲವು ಸಲಹೆಗಳನ್ನು ನೀಡಲು ಬಯಸುತ್ತದೆ. ಈ ಸಲಹೆಗಳನ್ನು ನಮ್ಮ ಜಿಲ್ಲೆಯಲ್ಲೂ ಅಳವಡಿಸಿಕೊಳ್ಳಬಹುದಾಗಿದೆ. 

ಶುದ್ಧ ನೀರು ಪ್ರತಿ ಜೀವಿಯ ಹಕ್ಕು. ಜಗತ್ತಿನ ಯಾವ ಭಾಗದಲ್ಲೂ ನೀರಿನ ಕೊರತೆಯಾಗದಂತೆ, ಎಲ್ಲರಿಗೂ ನೀರು ಎಂಬ ಶುದ್ಧ ಜೀವಜಲ ಲಭ್ಯವಾಗಬೇಕೆಂದರೆ ಮೊಟ್ಟ ಮೊದಲಿಗೆ ನೀರಿನ ಆಡಿಟ್ ಅಥವಾ ಆಯವ್ಯಯದ ಲೆಕ್ಕ ಪರಿಶೋಧನೆ ಕಡ್ಡಾಯವಾಗಿ ನಡೆಯಬೇಕು. ವಾರ್ಷಿಕ ಹಣಕಾಸಿನ ಮುಂಗಡ ಪತ್ರವನ್ನು ತಯಾರಿಸುವಂತೆ, ನೀರಿನ ಕುರಿತಾಗಿಯೂ ಪ್ರತಿ ಗ್ರಾಮ ಪಂಚಾಯ್ತಿ ಹಂತದಲ್ಲಿ ವಾರ್ಷಿಕ ಮುಂಗಡ ಪತ್ರ ಹಾಗೂ ಆಯವ್ಯಯದ ಲೆಕ್ಕವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಪೇಟೆಯ ಪ್ರತಿಯೊಬ್ಬರೂ ನೀರಿನ ಕುರಿತಾಗಿ ವೈಯಕ್ತಿಕ ನೀರಿನ ಬಳಕೆಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವ ಪರಿಪಾಠವನ್ನು ಪ್ರಾರಂಬಿಸಬೇಕು. ಜನಸಂಖ್ಯೆ ಬೆಳೆದಂತೆ ಭೂಮಿಯೇನು ಬೆಳೆಯುವುದಿಲ್ಲ. ಅಂದರೆ ನೈಸರ್ಗಿಕ ಸಂಪತ್ತು ಸೀಮಿತವಾದದು ಹಾಗೂ ಸಾರ್ವಜನಿಕವಾದದು. ಇದನ್ನು ಗಮನದಲ್ಲಿರಿಸಿಕೊಂಡು, ಲಭ್ಯವಿರುವ ನೀರಿನ ಸಮಾನ ಹಂಚಿಕೆಗಾಗಿ ನಿರ್ದಿಷ್ಟವಾದ ಕಾನೂನುಗಳನ್ನು ಜನಾಭಿಪ್ರಾಯವನ್ನು ಪರಿಗಣಿಸಿ ರೂಪಿಸಬೇಕು. ಕುಲಾಂತರಿ ತಳಿ, ಕೀಟನಾಶಕ, ರಾಸಾಯನಿಕ ಗೊಬ್ಬರಗಳು ಅಧಿಕ ನೀರನ್ನು ಬೇಡುತ್ತವೆ. ಹಾಗೂ ಅಧಿಕ ಒಳಸುರಿಯಿಂದಲೂ ರೈತನ ಬದುಕು ಹಸನಾದ ಉದಾಹರಣೆ ಇಲ್ಲ. ಆದ್ದರಿಂದ, ಬಹುರಾಷ್ಟ್ರೀಯ ಕಂಪನಿಗಳ ಆಮಿಷಕ್ಕೆ ಒಳಗಾಗದೆ, ಸ್ಥಳೀಯ ಹವಾಮಾನಕ್ಕೆ ಒಗ್ಗುವ, ಕಡಿಮೆ ನೀರು ಬೇಡುವ ಬೆಳೆಗಳನ್ನು ಲಾಭದಾಯಕವಾಗಿಯೇ ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸಗಳನ್ನು ಮಾಡಬೇಕು. ಇದರಿಂದ ನೀರಿನ ಉಳಿತಾಯ ಸಾಧ್ಯವಾಗುತ್ತದೆ.

ಯಾವುದೇ ಪ್ರದೇಶದಲ್ಲಿ ನೀರಿನ ಲಭ್ಯತೆ ಈ ರೀತಿ ಇರುತ್ತದೆ. ಮೂರನೇ ಒಂದು ಭಾಗ ಜಾಗತಿಕ ಜಲಚಕ್ರದಿಂದ ಲಭ್ಯವಾದರೆ, ಎರಡನೇ ಮೂರು ಭಾಗ ಸ್ಥಳೀಯವಾದ ಜಲಚಕ್ರದಿಂದ ಲಭ್ಯವಾಗುತ್ತದೆ. ಸ್ಥಳೀಯವಾಗಿ ಲಭ್ಯವಾಗುವ ಜಲಚಕ್ರದ ಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದರೆ, ಸ್ಥಳೀಯವಾಗಿ ಹೆಚ್ಚು ಹೆಚ್ಚು ಅರಣ್ಯ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವುದು ಅನಿವಾರ್ಯ. ಈ ಕೆಲಸವನ್ನು ಸಮರೋಪಾದಿಯಲ್ಲಿ ನಿರ್ವಹಿಸಲು ಸರ್ಕಾರವನ್ನು ಒತ್ತಾಯಿಸಬೇಕು. ಕಾಡುಕೃಷಿ ಎಂಬ ಸರ್ಕಾರದ ಘೋಷಣೆ ವಿಧಾನಸೌಧದ ಕಡತಗಳಲ್ಲೇ ಧೂಳು ತಿನ್ನುತ್ತಿದೆ. ಈ ಘೋಷಣೆಯ ಅನುಷ್ಠಾನಕ್ಕಾಗಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಕಾಡು ಬೆಳೆಸುವ ರೈತರಿಗೆ ಉಚಿತವಾಗಿ ಸಸಿ ನೀಡುವುದು, ಕನಿಷ್ಟ 5 ವರ್ಷದವರೆಗೆ ನೆಟ್ಟ ಸಸಿಯನ್ನು ಸಲಹಲು ಬೇಕಾದ ವೆಚ್ಚವನ್ನು ಭರಿಸುವ ದೂರಗಾಮಿ ಯೋಜನೆಗಳಿಗೆ ಸರ್ಕಾರ ಮುಂದಾಗಬೇಕು. ರೈತರಿಗೆ ಹಾಗೂ ನೀರಿಗೆ ನೇರ ಸಂಬಂಧವಿದೆ. ಮಳೆಯಿಲ್ಲದೇ ಬೆಳೆ ಇಲ್ಲ ಹಾಗೂ ಮಳೆ ಇದ್ದಾಗ ಬೆಳೆದ ಬೆಳೆಗೆ ಬೆಲೆಯಿಲ್ಲ. ಇದರಿಂದ ಸಣ್ಣ ಹಾಗೂ ಮಧ್ಯಮ ವರ್ಗದ ರೈತ ಯಾವತ್ತೂ ಸ್ವಾವಲಂಭಿಯಾಗಿ ಬದುಕಲೇ ಇಲ್ಲ. ರೈತರಿಗೆ ಯಾವುದೇ ಜೀವನ ಭದ್ರತೆ ಇಲ್ಲ. ಸರ್ಕಾರಿ ನೌಕರಿಯಲ್ಲಿರುವ ಕನಿಷ್ಟ ನೌಕರನಿಗೂ ಜೀವನದಲ್ಲಿ ಭದ್ರತೆ ಇದೆ. ದುರದೃಷ್ಟವೆಂದರೆ, ಅನ್ನದಾತನಿಗೆ ಯಾವುದೇ ಜೀವನ ಭದ್ರತೆ ಇಲ್ಲ. ರೈತರಿಗಾಗಿಯೇ ಇರುವ “ಯಶಸ್ವಿನಿ” ಆರೋಗ್ಯ ಯೋಜನೆಗಳಿಗೆ ತನ್ನದೇ ಆದ ಮಿತಿಗಳಿವೆ. ಹೀಗೆ ಕೊನೆ-ಮೊದಲಿಲ್ಲದ ಸಮಸ್ಯೆಗಳಿಂದ ನರಳುತ್ತಿರುವ ರೈತನಿಗೆ ನೀರಿನ ಮಿತ ಬಳಕೆಯ ಪಾಠ ಹೇಳುವುದು, ಅದನ್ನು ಆತ ಕೇಳಿಸಿಕೊಳ್ಳುವುದು ಸಾಧ್ಯವಿಲ್ಲ. ರೈತನ ಬದುಕು ಭದ್ರತೆಯಿಂದ ಕೂಡಿದಾಗ, ನೀರಿನ ಬಗ್ಗೆ ಯೋಚಿಸುವ ಪ್ರಜ್ಞೆ ಆತನಲ್ಲಿ ಮೂಡುತ್ತದೆ. ಆದ್ದರಿಂದ ರೈತನ ಕುಟುಂಬಕ್ಕೆ ಆರ್ಥಿಕ-ಸಾಮಾಜಿಕ-ಶೈಕ್ಷಣಿಕ ಹೀಗೆ ತಾರತಮ್ಯವಿಲ್ಲದೆ ಎಲ್ಲಾ ಭದ್ರತೆಗಳನ್ನು ಒದಗಿಸಬೇಕು.
ಎರಡನೇ ದೊಡ್ಡ ಮರುಭೂಮಿ ರಾಜ್ಯ ಕರ್ನಾಟಕ. ಇದಕ್ಕೆ ಕಾರಣ ಅನಿಯಂತ್ರಿತ ಕಾಡು ನಾಶ ಕಾರಣವಾಗಿದೆ. ಈಗಾಗಲೇ 160 ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಬರ ಪೀಡಿತವೆಂದು ಘೋಷಿಸಿ, ಸಹಾಯಕ್ಕಾಗಿ ಕೇಂದ್ರದತ್ತ ಮುಖ ಮಾಡಿದೆ. ರಾಜಕಾರಣಿಗಳಂತೂ ಟ್ಯಾಂಕರ್ ಮೂಲಕ ಎಲ್ಲಾ ಹಳ್ಳಿಗಳಿಗೂ ನೀರು ಪೂರೈಸುತ್ತೇವೆ ಎನ್ನುವ ಬಡಿವಾರದ ಮಾತನಾಡುತ್ತಾರೆ. ವಾಸ್ತವಿಕವಾಗಿ ಇದು ಸಾಧ್ಯವಿಲ್ಲದ ಕೆಲಸ. ಆಯಾ ಊರಿನಲ್ಲಿರುವ ಕೆರೆ-ಕಟ್ಟೆಗಳ ಹೂಳನ್ನು ನಿಯಮಿತವಾಗಿ ತೆಗೆದು, ಆಯಾ ಊರಿಗೆ ಅಗತ್ಯವಿರುವ ನೀರನ್ನು ಅಲ್ಲೇ ಲಭಿಸುವಂತೆ ಯೋಜನೆಗಳನ್ನು ರೂಪಿಸಬೇಕು.
ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ದೂರದೃಷ್ಟಿಯ ಕೊರತೆಯಿಂದ ಇವತ್ತು ಇಡೀ ಕರ್ನಾಟಕದ ಕಾಡುಗಳನ್ನು ಅಕೇಶಿಯಾ, ನೀಲಗಿರಿ, ಸಾಗುವಾನಿ, ಪೆಲೆಟ್ಟಾ ಇತ್ಯಾದಿ ಏಕಜಾತಿಯ ನೆಡುತೋಪುಗಳು ಆಳುತ್ತಿವೆ. ಯಾವುದೇ ವೈವಿಧ್ಯವಿಲ್ಲದ ಈ ಜಾತಿಯ ಮರಗಳು ವಾತಾವರಣದ ನೀರನ್ನು ಹೀರುವುದರ ಜೊತೆಗೆ ಅಂತರ್ಜಲವನ್ನು ಬರಿದು ಮಾಡುತ್ತಿವೆ. ಈ ಏಕಜಾತಿಯ ನೆಡುತೋಪುಗಳನ್ನು (ಖಾಸಗಿ ಮತ್ತು ಸರ್ಕಾರಿ ಎರಡೂ ವಿಭಾಗಗಳಲ್ಲಿ) ಕಾಲಮಿತಿಯಲ್ಲಿ ಸಂಪೂರ್ಣವಾಗಿ ತೆರವುಗೊಳಿಸುವ ಕೆಲಸವನ್ನು ತುರ್ತುಆದ್ಯತೆಯ ಮೇರೆಗೆ ಸರ್ಕಾರ ಕೆಲಸವನ್ನು ಮಾಡಬೇಕು. ಖಾಸಗಿಯಾಗಲೀ ಆಥವಾ ಸರ್ಕಾರಿ ಯೋಜನೆಗಳಿಗೆ ಆಗಲಿ, ಈಗೊಂದು 25 ವರ್ಷಗಳಿಂದ ಅನಿಯಂತ್ರಿತ ಕೊಳವೆಬಾವಿಗಳನ್ನು ಇಡೀ ರಾಜ್ಯದಲ್ಲಿ ಕೊರೆಯಲಾಗಿದೆ. ಇದರಿಂದ ಮೇಲ್ಮಟ್ಟದ ಅಂತರ್ಜಲ ಕುಸಿದಿದ್ದು, ಸ್ವಾಭಾವಿಕವಾದ ಕಾಡು ನಾಶವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನೆಲದಿಂದ 250 ಅಡಿ ಕೆಳಗಿನ ನೀರು ಯಾವುದಕ್ಕೂ ಬಳಸಲು ಯೋಗ್ಯವಾಗಿರುವುದಿಲ್ಲ. ಕೋಲಾರದಂತಹ ಪ್ರದೇಶದಲ್ಲಿ ನೀರಿನ ಗಣಿಗಾರಿಕೆಯೇ ನಡೆಯುತ್ತಿದೆ. 2000 ಅಡಿ ಆಳದಲ್ಲೂ ನೀರು ಸಿಗುತ್ತಿಲ್ಲ. ಅನಿಯಂತ್ರಿತ ಕೊಳವೆ ಬಾವಿಗಳಿಗೆ ಕಡಿವಾಣ ಹಾಕಲೇ ಬೇಕಾಗಿದೆ. 

ಪೇಪರ್ ಕಾರ್ಖಾನೆಗಳು, ಹೆಂಡ ತಯಾರಿ ಕಂಪನಿಗಳು, ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು, ಅಣುವಿದ್ಯುತ್ ಸ್ಥಾವರಗಳು, ರಸಗೊಬ್ಬರ ಕಾರ್ಖಾನೆಗಳು, ತಂಪು ಪಾನೀಯ ಕಾರ್ಖಾನೆಗಳು,  ಹೀಗೆ ಎಲ್ಲಾ ಕಾರ್ಖಾನೆಗಳಿಗೆ ಅತಿ ಹೆಚ್ಚಿನ ನೀರು ಬೇಕಾಗುತ್ತದೆ ಹಾಗೂ ಬಳಸಿದ ಕೊಳಚೆ ನೀರನ್ನು ನದಿಗಳಿಗೆ ಬಿಡುವ ಪರಿಪಾಠ ದೇಶದ ಎಲ್ಲೇಡೆ ಇದೆ. ಬಳಸಿದ ನೀರನ್ನು ಮತ್ತೆ ಬಳಸುವ ತಂತ್ರಜ್ಞಾನ ಇಂದು ಲಭ್ಯವಿದೆ. ಇದಕ್ಕೆ ಶೂನ್ಯ ಹನಿ ವಿಸರ್ಜನೆ ಎಂದು ಹೇಳಲಾಗುತ್ತದೆ (Zeಡಿo ಐiquiಜ ಆisಛಿhಚಿಡಿge) ಈ ಪದ್ಧತಿಯನ್ನು ತಮಿಳುನಾಡಿನಲ್ಲಿ ಕಡ್ಡಾಯ ಮಾಡಲಾಗಿದೆ. ಈ ಪದ್ಧತಿಯನ್ನು ನಮ್ಮ ರಾಜ್ಯದಲ್ಲೂ ಅಳವಡಿಸಲು ಸರ್ಕಾರವನ್ನು ಒತ್ತಾಯಿಸಬೇಕಾಗಿದೆ. ಮನುಷ್ಯನನ್ನು ಹೊರತುಪಡಿಸಿ ಇಡೀ ಜಗತ್ತಿನಲ್ಲಿ ಇನ್ನೂ 87 ಲಕ್ಷ ಇತರೆ ವಿವಿಧ ಜಾತಿಯ ಜೀವಿಗಳಿವೆ. ಎಲ್ಲಾ ಜೀವಿಗಳಿಗೂ ನೀರು ಅಗತ್ಯ. ಆಯಾ ಪ್ರದೇಶದ ಜೀವಿವೈವಿಧ್ಯಗನುಗುಣವಾಗಿ ಸಾರ್ವಜನಿಕವಾಗಿ ಅವುಗಳಿಗೂ ನೀರು ಲಭ್ಯವಾಗುವಂತೆ ಹೆಚ್ಚು-ಹೆಚ್ಚು ಅರಣ್ಯ ಬೆಳೆಸುವುದು ಹಾಗೂ ಕೆರೆ-ಕುಂಟೆಗಳನ್ನು ನಿರ್ಮಿಸುವ ಕೆಲಸವನ್ನು ಮಾಡಬೇಕು. ನೈಸರ್ಗಿಕ ಸಂಪತ್ತಿನಲ್ಲಿ ಅತಿಮುಖ್ಯವಾದದು ನೀರು. ಹೇರಳವಾಗಿ ಲಭ್ಯವಿದೆ ಹಾಗೂ ಇದಕ್ಕಾಗಿ ಹಣ ತೆರಬೇಕಾಗಿಲ್ಲ ಎಂಬ ಒಂದೇ ಕಾರಣಕ್ಕೆ ಇದೇ ಸಂಪತ್ತು ಇವತ್ತು ಬೇಕಾಬಿಟ್ಟಿಯಾಗಿ ಬಳಕೆಯಾಗುತ್ತಿದೆ. ನೀರಿನ ಖಾಸಗಿಕರಣ ಮಾಡಲು ಸರ್ಕಾರಗಳು ಗುಪ್ತಕಾರ್ಯಸೂಚಿ ರೂಪಿಸುತ್ತಿವೆ. ಯಾವುದೇ ಕಾರಣಕ್ಕೂ ನೀರನ್ನು ಖಾಸಗಿ ಸ್ವತ್ತಾಗಿ ಪರಿವರ್ತಿತವಾಗಬಾರದು. ಇದಕ್ಕಾಗಿ ಸರ್ಕಾರಗಳು ಪಾರದರ್ಶಕವಾದ ನೀತಿಯನ್ನು ರೂಪಿಸಬೇಕು.

ನೀರಿನ ಮೂಲಗಳು ಹಾಳಾಗಲು ಬಹು ಮುಖ್ಯ ಮತ್ತೊಂದು ಕಾರಣವೆಂದರೆ ಪ್ಲಾಸ್ಟಿಕ್ ತ್ಯಾಜ್ಯಗಳು. ಜನ ಬಳಸುವ ಪ್ಲಾಸ್ಟಿಕ್ ಕೈಚೀಲಗಳು, ತಂಪು ಪಾನೀಯದ ಬಾಟಲಿಗಳು, ದುಬಾರಿ ಬೆಲೆಯ ನೀರಿನ ಬಾಟಲಿಗಳು, ಎಲ್ಲಾ ಪ್ಲಾಸ್ಟಿಕ್ ಪ್ಯಾಕಿಂಗ್ ವಸ್ತುಗಳು, ಚಾಕಲೇಟ್, ಗುಟ್ಕಾ ಪ್ಯಾಕೇಟ್‍ಗಳು, ಹಾಲಿನ ಕವರ್‍ಗಳು ಹೀಗೆ ಪ್ಲಾಸ್ಟಿಕ್ ಬಳಕೆ ಅನಿಯಮಿತ ಹಾಗೂ ಅನಿಯಂತ್ರಿತವಾಗಿದೆ. ಇದೇ ಪ್ಲಾಸ್ಟಿಕ್ ತ್ಯಾಜ್ಯಗಳ ನಿರ್ವಹಣೆ ಯಾವುದೇ ಊರಿನಲ್ಲೂ ಸಮರ್ಪಕವಾಗಿ ಆಗುತ್ತಿಲ್ಲ. ಒಂದೇ ಮಳೆಗೆ ಈ ಎಲ್ಲಾ ತ್ಯಾಜ್ಯಗಳು ಕೆರೆಮೂಲ, ನದಿಮೂಲ, ಝರಿಮೂಲಗಳಿಗೆ ಸೇರ್ಪಡೆಯಾಗಿ ಅಲ್ಲಿನ ನೀರಿನ ಒರತೆಯನ್ನು ಮುಚ್ಚಿಹಾಕುತ್ತಿವೆ. ಪ್ಲಾಸ್ಟಿಕ್‍ನ ಎಣೆಯಿಲ್ಲದ ಸಮಸ್ಯೆಗಳ ಜೊತೆಯಲ್ಲಿ ಇದೂ ಒಂದು. ಪ್ಲಾಸ್ಟಿಕ್ ಬಳಕೆಯನ್ನು ಶಾಶ್ವತವಾಗಿ ನಿರ್ಭಂದಿಸದಿದ್ದಲ್ಲಿ, ಮುಂದಿನ ದಿನಗಳು ಭೀಕರವಾಗಲಿವೆ. ಪ್ಲಾಸ್ಟಿಕ್ ನಿಷೇಧಿಸುವುದರ ಜೊತೆಗೆ, ಪ್ಲಾಸ್ಟಿಕ್‍ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳಿಗೆ ಉತ್ತೇಜನ ನೀಡುವ ಮಹತ್ತರ ಜವಾಬ್ದಾರಿ ಸರ್ಕಾರದ ಮೇಲಿದೆ. ಇದಕ್ಕಾಗಿ ಒತ್ತಾಯಿಸಬೇಕಾಗಿದೆ. ಕಡೆಯದಾಗಿ, ಮೇಲೆ ಹೇಳಿದಂತೆ ನೀರು ಪ್ರತಿ ಜೀವಿಯ ಹಕ್ಕು. ನೀರಿನ ಅಭಾವದಿಂದಾಗಿ ನಾನಾ ತರಹದ ಪ್ರಾಣಿ-ಪಕ್ಷಿಗಳ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಅವುಗಳಿಗೂ ನೀರನ್ನು ಒದಗಿಸುವುದು ಮಾನವಿಕ ಸಮಾಜದ ಜವಾಬ್ದಾರಿಯಾಗಿದೆ. ಹೆಚ್ಚು ಕೆರೆ-ಕುಂಟೆಗಳನ್ನು ನಿರ್ಮಿಸುವುದರಿಂದಾಗಿ ಅಂತರ್ಜಲ ಹೆಚ್ಚುವುದಲ್ಲದೇ, ವನ್ಯಜೀವಿಗಳಿಗೂ ಕುಡಿಯುವ ಜೀವಜಲ ಲಭ್ಯವಾಗುತ್ತದೆ. ಇದರ ಕುರಿತಾಗಿಯೂ ಗಂಭೀರವಾಗಿ ಕಾರ್ಯಪ್ರವೃತ್ತರಾಗಬೇಕಿದೆ.

ಬೆಂಗಳೂರಿನ ಕೆಂಪೆಗೌಡ ಬಸ್ ನಿಲ್ದಾಣ ಹಿಂದೆ ದೊಡ್ಡ ಕೆರೆಯಾಗಿತ್ತು ಎಂಬುದಕ್ಕೆ ದಾಖಲೆಗಳಿವೆ. ಇದೇ ರೀತಿ ಪ್ರತೀ ನಗರಗಳಲ್ಲೂ, ಪಟ್ಟಣಗಳಲ್ಲೂ, ಹೋಬಳಿಗಳಲ್ಲೂ, ಹಳ್ಳಿಗಳಲ್ಲೂ ಕೆರೆಗಳು ಒಂದೋ ಮುಚ್ಚಿಹೋಗಿವೆ ಅಥವಾ ಒತ್ತುವರಿಗೊಳಪಟ್ಟಿದೆ. ಇದರಿಂದಾಗಿ ಅಂತರ್ಜಲಕ್ಕೆ ನೀರು ಮರುಪೂರಣವಾಗುತ್ತಿಲ್ಲ. ಶುದ್ಧ ನೀರಿನ ಲಭ್ಯತೆಯಿಂದ ಆಯಾ ಪ್ರದೇಶದ ಆರೋಗ್ಯ ಸೂಚ್ಯಂಕವನ್ನು ಗುರುತಿಸಬಹುದಾಗಿದೆ. ಆದ್ದರಿಂದ, ಒತ್ತುವರಿಯಾದ ಎಲ್ಲಾ ಕೆರೆಗಳನ್ನು ತೆರೆವುಗೊಳಿಸುವುದು, ಮುಚ್ಚಿದ ಕೆರೆಗಳನ್ನು ಪುನರ್‍ನಿರ್ಮಿಸುವ ಕೆಲಸವೂ ಆಗಬೇಕಾಗಿದೆ. ಈ ಎಲ್ಲಾ ಕೆಲಸಗಳೂ ಅತ್ಯಂತ ತುರ್ತಾಗಿ ಆಗಬೇಕಾಗಿದೆ. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ ಮನೋಭಾವ ಸಲ್ಲದು. ಹೀಗೆ ನೀರಿನ ನಿಯಮಿತ ಬಳಕೆ ಹಾಗೂ ನಿರ್ವಹಣೆಯಿಂದ ಸಂಭಾವ್ಯ ಗಂಭೀರ ಪರಿಣಾಮಗಳನ್ನು ಎದುರಿಸಬಹುದಾಗಿದೆ. ಮೇಲಿನ ಸಲಹೆಗಳಲ್ಲಿ ಕೆಲವಾದರೂ ನೀರಿನ ಹೋರಾಟಕ್ಕೆ ಪೂರಕವಾದಲ್ಲಿ ಸಲಹೆಗಳು ಸಾರ್ಥಕವಾಗುತ್ತವೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x