ಗಣಪನ ವಿಸರ್ಜನೆಯ ‘ವಿಘ್ನ’ಗಳು: ಸಂಗಮೇಶ ಡಿಗ್ಗಿ


ಅವಾಗ ನಾವು ಚಡ್ಡಿ ಹರಿದು ಅಂಡು ಕಾಣುತ್ತಿದ್ದರೂ ತೆಲೆಕೆಡಿಸಿಕೊಳ್ಳದ ವಯಸ್ಸಿನ ಹುಡುಗರು. ಮನೆಗೆ ದಿನಾ ಡಜನ್‍ಗಟ್ಟಲೆ ಜಗಳ ತಂದು ವರದಿ ಒಪ್ಪಿಸುತ್ತಿದ್ದೆವು. ನಮ್ಮ ಗುಂಪಿನಲ್ಲಿ ನಾನೇ ಲೀಡರ್. ಯಾಕೆಂದರೇ ಎಲ್ಲರಿಗಿಂತಲೂ ನಾನು ತುಂಬಾ ಕೆಂಪು. ಹಾಗಾಗಿ ಅವರೆಲ್ಲರೂ ನನ್ನನ್ನು ‘ ಕೆಂಪೇಗೌಡ’ ಎಂದು ಕರೆಯುತ್ತಿದ್ದರು.

ಲೇ ಕೆಂಪೇಗೌಡ ಮುಂದಿನ ವಾರ ಗಣಪತಿ ಹಬ್ಬ ಆದಂತ ಗೆಳೆಯ ಒಂದೇ ಉಸಿರಿಗೆ ವರದಿ ಒಪ್ಪಿಸಿದ. ನಾನು ಸರಿ ಅಂತ ನಮ್ ಹೈಕಳಿಗೆ ಹೇಳಿ ಒಂದು ಮೀಟಿಂಗ್ ಮಾಡೋಣ ಅಂತ ನಿರ್ಧರಿಸಿ ಬಿಟ್ಟೆವು. ನಮ್ ಓಣಿ ಮನೆಯಲ್ಲಿ ಚಂದಾ ವಸೂಲಿ ಮಾಡೋಕೆ ನಾನು ರೆಡಿ ಅಂತ ಅಂಬ್ರಟೋಳ್ಳೆ ಒಪ್ಪಿದ. ರೋಡಮ್ಯಾಗ ನಾವೆಲ್ಲರೂ ನಿಂತು ಹಗ್ಗ ಹಿಡಿದು ಹೋಗುಬರೋ ಜನರನ್ನು, ಗಾಡಿಗಳನ್ನು ನಿಲ್ಲಿಸಿ ಚಂದಾ ವಸೂಲಾತಿ ಮಾಡಲೂ ಯೋಜನೆ ಹಾಕಿಕೊಂಡೆವು. ಕಡ್ಡನಾದ ಹನುಮು ಹಗ್ಗ ನಾ ತರ್ತಿನಿ ಅಂತ ಹೋದ.

ಎಲ್ಲರೂ ಸೇರಿ ರೋಡಿಗೆ ಹಗ್ಗ ಹಿಡಿದು ನಿಂತೆವು. ನನ್ನಹತ್ರ ಒಂದು ರೂಪಾಯಿ ಹೋಗುವಷ್ಟು ತೂತು ಮಾಡಿದ ಡಬ್ಬಿ ಇತ್ತು. ಒಂದಿಷ್ಟು ಜನ ತಾವೇ ದುಡ್ಡು ಹಾಕಿದರೇ, ಮತ್ತೋಂದಿಷ್ಟು ಜನ ಹಣ ಕೊಡಲಿಲ್ಲ. ಅಂತವರಿಗೆ ಕಾಟ ಕೊಟ್ಟ ಮೇಲೆ ಒಲ್ಲದ ಮನಸ್ಸಿನಿಂದ ದುಡ್ಡು ಹಾಕುತ್ತಿದ್ದರು. ಇನ್ನು ಕೆಲವರು ಹೆದರಿಸುತ್ತಿದ್ದರು. ಸ್ವಲ್ಪ ಸಮಯವಾದ ನಂತರ ಕಡ್ಡನ ಅಕ್ಕ ಬಂದು ಎಲ್ಲರನ್ನು ಬಯ್ಯುತ್ತಾ ಹನುಮುವಿಗೆ ಹೊಡೆಯಲಾರಂಬಿಸಿದಳು. ಆತ ಹಸುವಿಗೆ ಕಟ್ಟಿದ ಹಗ್ಗ ಬಿಚ್ಚಿ ತಂದಿದ್ದರಿಂದ ಅದು ಎದುರು ಮನೆಯ ಹಸುವಿನೊಂದಿಗೆ ಕಾದಾಟಕ್ಕೆ ತೊಡಗಿತ್ತು..!

ಸೂರ್ಯ ಮುಳುಗಿ ಹೋದ ಬಹಳ ಹೊತ್ತಿನ ನಂತರ ನಾವು ಮನೆಗೆ ಬಂದು ದುಡ್ಡು ಎಣಿಸತೊಡಗಿದೆವು. ಸರಿಯಾಗಿ 67 ರೂಪಾಯಿ ಆಗಿತ್ತು. ಆಗ ನಾವೆಲ್ಲರೂ ನಮ್ಮನಮ್ಮ ಮನೆಯಿಂದ ಒಂದಿಷ್ಟು ದುಡ್ಡು  ಹಾಕಿದೆವು. ಅವಾಗ ನಮ್ಮ ಹತ್ರ 100 ರೂಪಾಯಿ ಜಮಾ ಮಾಡಿದೆವು. ಗಣಪತಿಯನ್ನು ಖರೀದಿ ಮಾಡಲು ಸಂತೆಗೆ ಬಂದೆವು. ಎಲ್ಲಿ ನೊಡಿದರಲ್ಲಿ ಜನವೋ ಜನ. ಅಂಗಡಿಯ ಇಕ್ಕೆಲಳಲ್ಲಿ ಸುಮದರವಾದ ಗಣಪತಿಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಹಲವಾರು ಬಗೆಯ ಗಣಪನ ಮೂರ್ತಿಗಳು. ಗಣಪನನ್ನು ಒಯ್ಯಲು ಟ್ರಾಕ್ಟರ್‍ಗಳನ್ನು ತಂದು, ಅವಕ್ಕೆ ಸ್ಪೀಕರ್‍ನಲ್ಲಿ ಹಾಡುಹಾಕಿ ಪರಸ್ಪರರಿಗೆ ಬಣ್ಣ ಎರಚಿ ಕುಣಿಯುತ್ತಿದ್ದರು. ಟ್ರಾಕ್ಟರ್‍ನಲ್ಲಿದ್ದ ಗಣಪತಿಗಳು ಎಷ್ಟು ದೊಡ್ಡದಿದ್ದವೆಂದರೆ  ಅವುಗಳ ಸೋಂಡಿಲೋಳಗೆ ನಾವು ಸುಲಭವಾಗಿ ನುಸುಳುತ್ತಿದ್ದವು.

ನಾವು ಒಂದು ಅಂಗಡಿಗೆ ಹೋಗಿ 60 ರೂಪಾಯಿ ಕೊಟ್ಟು ಒಂದು ಚಿಕ್ಕ ಗಣಪತಿ ಕೊಂಡೆವು. ನಂತರ ಉಳಿದ ದುಡ್ಡಿನಲ್ಲಿ ಅಲಂಕಾರ ಮಾಡಲು ಹಾರ, ಬೊಂದೆ ಉಂಡಿ ಹಾಗೆ ಒಂದಿಷ್ಟು ಪಟಾಕಿ, ಬಣ್ಣ ಕೊಂಡೆವು. ತಲೆಗೆ ಕೆಂಪು ಪಟ್ಟಿ ಧರಿಸಿ ಗಣಪತಿಯನ್ನು ಹೆಗಲ ಮೇಲೆ ಹೊತ್ತಕೊಂಡು ‘ಗಣಪತಿ ಬಪ್ಪ ಮೋರಯ್ಯ, ಪುಂಡ್ಯಪಲ್ಯ ಸೋರಯ್ಯ’ ಎನ್ನುತ್ತಾ ನಮಗೆ ನಾವೇ ಬಣ್ಣ ಎರಚಿಕೊಲ್ಳುತ್ತಾ ಗಣಪನನ್ನು ಮೆರವಣಿಗೆ ಮೂಲಕ ಮನೆಯ ಅಂಗಳಕ್ಕೆ ತಂದೆವು.

ನಮ್ಮಣ್ಣ ಕಲ್ಲು ಜೋಡಿಸಿ ಅದರ ಮೇಲೆ ಅವ್ವನ ಸೀರೆ ಹಾಕಿ ಗಣಪತಿ ವೇಧಿಕೆ ಸಿದ್ಧಮಾಡಿದ್ದ. ನಾವು ಅದರ ಒಳಗೆ ಗಣಪತಿ ಇಟ್ಟು ಪೂಜೆಗೆ ಸಿದ್ದ ಮಾಡತೊಡಗಿದೆವು. ಅಕ್ಕ ಮಲ್ಲಿಗೆ ಹೂಗಳನು ಪೂಣಿಸಿ ಮಾಡಿದ ಹಾರವನ್ನು ಅಲಂಕಾರಕ್ಕೆ ಕೊಟ್ಟಳು. ಗಣಪನ ಮುಂದೆ ಕಾಯಿ ಕಡಬು ಹಣ್ಣು ಹಂಪಲು ಗಳಿಟ್ಟು ಪೂಜೆ ಮಾಡಿ ಗಣಪನನ್ನು ಪ್ರತಿಷ್ಠಾಪನೆ ಮಾಡೇಬಿಟ್ಟೆವು.

ಗಣಪನಿಗೆ ಕೈ ಮುಗಿದು ಹಾಡು ಹೇಳಲು ಸುರು ಮಾಡಿದಾಗ ಅಕ್ಕ ದೇವರ ಮುಂದೆ ಬೈಟಕ್ ಹೊಡೆದು ಬೇಡಿದರೆ ಆತ ನಮಗೆ ವಿದ್ಯಾಬುದ್ಧಿ ಕೋಡುತ್ತಾನೆ ಎಂದಳು. ನಾವು ಪೈಪೋಟಿ ಬಿದ್ದವರಂಗೆ ಬೈಟಕ್ ಹೋಡೆದವು. ನಂತರ ಸಣ್ಣ ವಾಕಮನ್ ತಂದು ಹಾಡು ಹಚ್ಚಿ ಡ್ಯಾನ್ಸ್ ಮಾಡಿದೆವು. ಹಸಿವೆಯಾಗಿ ಅವ್ವಾ ಮಾಡಿದ ಹೋಳಿಗೆ ಕಡಬು ಉಂಡೆವು. ನಂತರ ವೇಧಿಕೆಗೆ ಬಂದು ಆಟವಾಡತೊಡಗಿದೆವು. ಬೈಟಕ ಹೊಡೆದು ಸುಸ್ತಾಗಿದ್ದ ನಮಗೆ ಅರಿವಿಲ್ಲದೆಯೇ ನಿದ್ರೆ ಆವರಿಸಿತು. ಸುಮಾರು ಹೊತ್ತಿನ ನಂತರ ಎಚ್ಚರವಾದಾಗ ವೇಧಿಕೆಯಲ್ಲಿ ಗಣಪನನ್ನು ಬಿಟ್ಟರೆ ಹಣ್ಣುಹಂಪಲ, ನೈವಿದ್ಯ, ಪ್ರಸಾಧ, ದೀಪ ಮಾಯವಾಗಿತ್ತು. ಸುತ್ತಲೂ ಕಣ್ಣಾಡಿಸಿದಾಗ ದೂರದಲ್ಲಿ ಹಂದಿಗಳು ಹಣ್ಣುಹಂಪಲವನ್ನು ತಿನ್ನುತಿದ್ದವು. ವೇಧಿಕೆಯ ಹಿಂಭಾಗದಲ್ಲಿ ನಾಯಿ ದೀಪಹ ಹಣತೆಯನ್ನು ನೆಕ್ಕಿ ತನ್ನ ಪಾಡಿಗೆ ತಾನು ಮಲಗಿತ್ತು. ಎದುರು ಮನೆ ಬೊಚ್ಚುಬಾಯಿ ಅಜ್ಜಿ ಬಂದು ನಮಗೆ ಬಾಯಿಗೆ ಬಂದತೆ ಬೈದಳು.

ಬೈಟಕ್ ಹೊಡೆದಿದ್ದರ ಪರಿಣಾಮವಾಗಿ ಕಾಲು, ತೊಡೆ ಊದಿಕೊಂಡು ಮೇಲೆ ಏಳಲು ಸಾಧ್ಯವಾಗಲಿಲ್ಲ. ಹಾಗೂ ಹೀಗೋ ಕಷ್ಟಪಟ್ಟು ಮೇಲೆ ಎದ್ದು ಉಳಿದ ಸಾಮಾನುಗಳನ್ನು ಜೋಡಿಸಿ ಗಣಪನನ್ನು ಸಿದ್ದ ಮಾಡಿದೆವು. ಸಂಜೆ ಗಣಪತಿಯ ವಿಸರ್ಜನೆಗೆ ಸಿದ್ದಮಾಡತೊಡಗಿದೆವು. ತಳ್ಳು ಗಾಡಿಯಲ್ಲಿ ಗಣಪನನ್ನು ಇಟ್ಟು ಅದೇ ಹಳೆ ವಾಕ್‍ಮನ್‍ನಲ್ಲಿ ‘ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಹಾಡು ಹಚ್ಚಿ ಡ್ಯಾನ್ಸ್ ಮಾಡುತ್ತಾ ಬಜಾರ್ ರಸ್ತೆಗೆ ಬಂದೆವು. ನಮ್ಮ ಹಿಂದೆ ಮುಂದೆ ದೊಡ್ಡ ಗಣಪತಿಗಳು ಮೆರವೆಣಿಗೆ ಸಾಗಿತ್ತು. ನಾವು ತಳುಗಾಡಿ ಒತ್ತುತ್ತಾ ಸಾಗುವಾಗ ನಮ್ಮ ಹೊಟ್ಟೆಯಲ್ಲಿ ಏನೋ ಒಂಥಾರ ತಳಮಳ ಸುರುವಾಯಿತು. ಒಂದೇ ಸಮನೆ ಹೋಳಿಗೆ ಕಡಬು ತಿಂದ ಪರಿಣಾಮವಾಗಿ ಹೊಟ್ಟೆಕೆಟ್ಟು ಎಲ್ಲರು ಅಲ್ಲಿಯೇ ಬಿದ್ದಿದ ಬಾಟಲಿಗಳಲ್ಲಿ ನೀರು ತುಂಬಿಕೊಂಡು ಎದ್ದೆನೋ ಬಿದ್ದೆನೋ ಅನ್ನುತ್ತಾ ಅರ್ಜಂಟಾಗಿ ಚಡ್ಡಿ ಹಿಡಿದು ವಿಸರ್ಜನೆಗೆ ತೆರಳಿದೆವು. ಸಾವರಿಸಿಕೊಂಡು ಬಂದು ನೋಡಿದಾಗ ತಳ್ಳುಗಾಡಿ ಅನಾಥವಾಗಿ ನಿಂತಿತ್ತು. ಅದರಲ್ಲಿದ್ದ ಗಣಪತಿ ಕಾಣೆಯಾಗಿ ಬಿಟ್ಟಿದ್ದ. ನಮಗೋ ಗಾಭರಿಯಾಗಿ ಸುತ್ತಮುತ್ತ ಹುಡುಕಾಡತೊಡಗಿದೆವು. ಸ್ವಲ್ಪ ದೂರ ನೋಡಿದಾಗ ಕಾರ್ಪೋರೇಶನ್ ವ್ಯಾನನವರು ಅಲ್ಲಲ್ಲಿ ಸಣ್ಣಸಣ್ಣ ಮೂರ್ತಿಗಳನ್ನು ತಮ್ಮ ಗಾಡಿಯಲ್ಲಿ ಹಾಕಿಕೊಳ್ಳುವ ದೃಶ್ಯ ಕಾಣಿಸಿತು.

ವಿಧಿಯಿಲ್ಲದೆ ಖಾಲಿ ತಳ್ಳುಗಾಡಿಯನ್ನು ತಳ್ಳುತ್ತಾ ಮನೆಗೆ ಬಂದೆವು.  ಮನೆಯಲ್ಲಿ ಬಂದು ವರದಿ ಒಪ್ಪಿಸಿದಾಗ ಎಲ್ಲರು ನಕ್ಕು ಅಪಹಾಸ್ಯ ಮಾಡಿದರು, ನಾವು ಪೇಚುಮೊರೆ ಹಾಕಿಕೊಂಡು ಕುಳಿತೆವು. ಗಣಪತಿಯ ವಿಸರ್ಜನೆ ಮಾಡದೇ ನಾವೇ ವಿಸರ್ಜನೆ ಮಾಡಿದೆವು. ಕಣ್ಣುಗಳು ನಿಧಾನವಾಗಿ ಮುಚ್ಚತೊಡಗಿದವು. ನಮಗಿದ್ದ ಗಣಪತಿ ವಿಸರ್ಜನೆ ಮಾಡುವ ಕನಸು ನನಸಾಗಲಿಲ್ಲ…    
-ಸಂಗಮೇಶ ಡಿಗ್ಗಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x