ಮದುವೆಯಾಗಿ ಇಪ್ಪತ್ತು ವರ್ಷಗಳು ಕಳೆದು ಹೋದವು. ಇಪ್ಪತ್ತು ವರ್ಷಗಳಲ್ಲಿ ಸಂತೋಷ ದುಃಖ ಎರಡೂ ಹೇಗೆ ಬಂದವು ಹಾಗೆ ಕಳೆದು ಹೋದವು. ಹಳೆಯ ದಿನ ಪುನಃ ಮರಳಿ ಬರುತ್ತಿದ್ದರೆ…ಜೀವನದಲ್ಲಿ ತಪ್ಪುಗಳನ್ನು ತಿದ್ದಿ ಇನ್ನೂ ಚನ್ನಾಗಿ ಬದುಕಿನ ಸಂತೋಷ ಅನುಭವಿಸಬಹುದಿತ್ತು. ದೇವರು ಎಲ್ಲಾರಿಗೂ ಸುಖ ಸಂತೋಷ ಕೊಟ್ಟ ಹಾಗೆ ತನಗೂ ಸಹ ಕೊಟ್ಟಿದ್ದಾನೆ. ತನ್ನ ಕಷ್ಟ ಬೇರೆಯವರ ಕಷ್ಟಕ್ಕಿಂತ ಬೇರೆ ರೀತಿಯಲ್ಲಿ ಇರಬಹುದು ಅಷ್ಟೆ.
ದೇವಿಕಗೆ ಹಳೆಯ ದಿನಗಳ ನೆನಪುಗಳು ತುಂಬಾನೆ ಮನಸ್ಸಿಗೆ ಬರುತ್ತಿದ್ದವು. ಇಪ್ಪತ್ತು ವರ್ಷಗಳ ಹಿಂದೆ ಮದುವೆಯ ನಂತರ ನಡೆದ ಘಟನೆಗಳು ಬಾಳಿನಲ್ಲಿ ಬಂದು ಹೋದ ಘಟನೆ ಇಂಚು ಇಂಚಾಗಿ ಒಂದೊಂದೆ ವಿಷಯ ನೆನಪಾಗುತ್ತಿತ್ತು. ಮದುವೆ ಅಗಿದ್ದು ಐಟಿ ಕಂಪನಿ ಉದ್ಯೋಗದಲ್ಲಿರುವ ಹುಡುಗನನ್ನು. ಮದುವೆಗೆ ಮೊದಲು ನೂರಾರು ಕನಸು ಕಂಡಿದ್ದ ದೇವಿಕಗೆ ಎಲ್ಲವೂ ಹಗಲು ಕನಸಾಗಿಯೇ ಹೋಗಿತು. ನನ್ನ ಗಂಡ ಎಲ್ಲರಂತೆ ಆಫೀಸ್ ನಿಂದ ಬೇಗ ಬರುತ್ತಾನೆ. ನಾನು ಅವನೊಂದಿಗೆ ಸಂಜೆ ವಾಕಿಂಗ್ ಹೋಗಬಹುದು. ಇಡೀ ಬೆಂಗಳೂರು ಸುತ್ತ ಬಹುದು…ಹೀಗೆ ಆನೇಕ ಆಸೆ ಹೊತ್ತು ಮದುವೆಯಾಗಿ ಬಂದಳು. ಅದರೆ ಮದುವೆಯ ನಂತರವೇ ಗೊತ್ತಾಯಿತು. ಹಿಂದೆ ಕಂಡಿದ್ದು ಕನಸು, ಈಗ ನಡೆಯುತ್ತಿರುವದು ನಿಜ ಜೀವನ.
ಯಾವಾಗಲು ಹೊರ ದೇಶವನ್ನು ಸುತ್ತುತ್ತಿದ್ದ ವಿಶ್ವಾಸ್ ತನ್ನ ಹೆಂಡತಿಯ ಕಷ್ಟಸುಖ ಹಂಚಿ ಕೊಂಡಿದ್ದು ಕಡಿಮೆ. ಯಾವಾಗಲು ಆಫೀಸ್ ಯೋಚನೆ. ಮನೆಯಲ್ಲಿರುವಾಗಲೂ ಆಫೀಸ್ ಯೋಚನೆ, ನಿದ್ದೆಯಲ್ಲಿ ಸಹ ಆಫೀಸ್ ಕೆಲಸದ ಬಗ್ಗೆ ಕನವರಿಸಿ ಎದ್ದ ದಿನಗಳು ಇವೆ. ಆಫೀಸ್ ಕೆಲಸಕ್ಕೆ ಕೊಡುವ ಕಾಳಜಿ ಮನೆ ಸಂಸಾರದ ಕಡೆ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಹೇಗಿದ್ದರೂ ಎಲ್ಲಾ ನಿಭಾಯಿಸುತ್ತೇನೆ ಎಂಬ ನಂಬಿಕೆಯಿಂದ ಇರಬೇಕು?ಯಾವಾಗಲು ಆಫೀಸ್ ಬಾಸ್ ಗಳ ಕಿರುಕುಳ ದಿನ ಕಳೆದಂತೆ ಜಾಸ್ತಿ ಆಗುತ್ತಾ ಹೋಯಿತೆ ಹೊರತು ಕಡಿಮೆ ಆಗಲಿಲ್ಲ. ಈ ದಿನ ಕೆಲಸ ಜಾಸ್ತಿ ಇದ್ದರೆ ನಾಳೆಯಾದರು ಸಂಸಾರದ ಕಡೆ ಗಮನ ಹರಿಸಬಹುದು ಎಂದುಕೊಂಡು ಸುಮ್ಮನಿರುತ್ತಿದ್ದ ದಿನಗಳೇ ಜಾಸ್ತಿಯಾಯಿತು. ಆದರೆ ದೊಡ್ಡ ದೊಡ್ಡ ಹುದ್ದೆಗೆ ಹೋದ ಹಾಗೆ ಎಲ್ಲಾ ಮರೀಚಿಕೆಯಾಯಿತು.
ಸಂಸಾರದ ಪೂರ್ತಿ ಜವಾಬ್ದಾರಿ ದೇವಿಕಳ ತಲೆಯ ಮೇಲೆ ಬಿತ್ತು. ಯಾವಾಗಲೂ ತಾಯಿ ಮನೆಯ ಸಹಾಯ ಕೇಳುವುದು ಸರಿಯಾಗಿ ಕಾಣುತ್ತಿರಲಿಲ್ಲ. ಅವರು ಸಹ ಏನಾದರು ಅಂದರೆ…ಎಂದು ಅವರ ಕಡೆಯಿಂದ ಸಹಾಯವನ್ನು ಕೇಳಿದವುದು ನಿಲ್ಲಿಸಿದ್ದು ಆಯಿತು. ತಾನೇ ಧೈರ್ಯ ಮಾಡಿ ಮಕ್ಕಳು ಮನೆ ಜವಾಬ್ದಾರಿ ತೆಗೆದುಕೊಂಡು, ಬಂದ ಕಷ್ಟಗಳನ್ನು ದಾಟಿ ಮುನ್ನುಗ್ಗಿ ಎಲ್ಲಾರ ಆಗುಹೋಗುಗಳ ಕಡೆ ಗಮನಿಸಿ ತನ್ನ ಇಷ್ಟ ಮರೆತು ಮನೆಯವರ ಇಷ್ಟದಂತೆ ಬದುಕಲು ಪ್ರಾರಂಭ ಮಾಡಿದಳು. ದುಡಿದು ಬರುವ ಗಂಡನಿಗೆ ಮನೆಯಲ್ಲಿರುವ ಜನರ ಮನಸ್ಸು ಅರಿಯುವುದು ಕಷ್ಟವಾಗಿ ಹೋಯಿತು. ಏನಿದ್ದರೂ ತನ್ನ ಆಫೀಸ್ ಬಗ್ಗೆ ಬಿಟ್ಟು ಮನೆಯಲ್ಲಿ ಇರುವ ಜನ ಮನುಷ್ಯರು ಎಂಬುದು ಸಹ ಮರೆತು ಹೋಯಿತು. ಏನಾದರು ಹೇಳಬೇಕೆಂದರೆ ಶನಿವಾರ, ಭಾನುವಾರದ ದಿನಗಳಲ್ಲಿ ಹೇಳುವಂತಾಯಿತು. ಅಲ್ಲಿಯೂ ಯಾವುದಾದರೂ ಕೆಲಸ ಇದ್ದರೆ ಮನೆಯ ಕಡೆ ನೋಡುವುದು ಹೋಗಲಿ, ಕಷ್ಟ ಸಹ ಕೇಳುವ ಪರಿಸ್ಥಿತಿ ಇರುತ್ತಿರಲಿಲ್ಲ. ದೇವಿಕಳನ್ನು ನೋಡಿ ಸ್ನೇಹಿತರು, ಬಂಧುಬಳಗದವರು “ನಿಮಗೆ ಯಾವುದೇ ರೀತಿಯಲ್ಲಿ ಗಂಡ ಕಡಿಮೆ ಮಾಡಲಿಲ್ಲ. ನೀನು ತುಂಬಾ ಅದೃಷ್ಟವಂತಳು”ಎಂದಾಗ ಮನಸ್ಸಿನಲ್ಲಿ ತನಗೆ ಎಷ್ಟರ ಮಟ್ಟಿಗೆ ಸುಖವಿದೆ ನನಗೇ ಗೊತ್ತು ಅಂದುಕೊಳ್ಳುತ್ತಿದ್ದಳು. ಎಲ್ಲಾ ಸಿರಿ ಭೋಗವನ್ನು ದೇವರು ಕರುಣಿಸಿದ್ದಾನೆ. ಚಿನ್ನದಂತ ಎರಡು ಮಕ್ಕಳು. ವಿಧ್ಯೆಯಲ್ಲೂ ಎಲ್ಲೂ ತೊಂದರೆ ಅನುಭವಿಸಿಲ್ಲ. ತಮಗೆ ಬೇಕಾದ ಸೌಲಭ್ಯ ಸೌಕರ್ಯಗಳನ್ನು ಕಲ್ಪಿಸಿದ್ದಾಗಿದೆ. ಅವರ ಕೆಲಸ ಕಾರ್ಯ ಚೆನ್ನಾಗಿ ಮಾಡಿಕೊಂಡು ಹೋಗುತ್ತಿದ್ದಾರೆ. ಮಕ್ಕಳಿಗೂ ತಂದೆಯ ಮುಖ ದರ್ಶನ ಆಗೊಮ್ಮೆ ಈಗೊಮ್ಮೆ ಅಗುತ್ತಿತ್ತು. ಮೈಯಲ್ಲಿ ತುಂಬಾ ಹುಷಾರು ತಪ್ಪಿದರೆ ಮಾತ್ರ ಮಕ್ಕಳ ಕಡೆ ಗಮನ ಕೊಡುತ್ತಿದ್ದ ದಿನಗಳಿತ್ತು. ದಿನ ಕಳದಂತೆ ಬಂಧುಬಳಗವನ್ನು ನೋಡುವುದು ಸಹ ತುಂಬಾ ಕಡಿಮೆ ಆಗುತ್ತಾ ಬಂದಿತು. ಮನೆಗೆ ಬರುತ್ತಿದ್ದ ಬಂಧುಬಳಗದವರು ದೇವಿಕಳಿಗೆ ಅಹಂಕಾರ ಎಂಬಂತೆ ನೋಡತೊಡಗಿದರು.
ಯಾವಾಗಲೂ ಆಫೀಸ್ ಕಡೆಗೆ ಗಮನ ಕೊಡುತ್ತಿದ್ದ ವಿಶ್ವಾಸ್ ಹೆಂಡತಿಯ ಬೇಕು ಬೇಡಗಳ ಕಿಂಚಿತ್ತೂ ಗಮನ ಹರಿಸಲು ಸಾಧ್ಯವೇ ಆಗಲಿಲ್ಲ. ಬೆಳಿಗ್ಗೆ ಮನೆಯಿಂದ ಹೋರಟರೆ ಮಧ್ಯರಾತ್ರಿ ಒಳಗೆ ಮನೆಯನ್ನು ಸೇರುವುದು ಮಾಮೂಲಿ ಅಗಿತ್ತು. ಹೊರ ರಾಷ್ಟ್ರೀಯ ಕಂಪನಿಗಳು ಎಷ್ಟರ ಮಟ್ಟಿಗೆ ಇಂತಹ ಉದ್ಯೋಗಿಗಳನ್ನು ಉಪಯೋಗಿಸಿ ಕೊಳ್ಳುತ್ತಾರೆ ಎಂಬುದು ಇದರಿಂದ ತಿಳಿಯುತ್ತಿತ್ತು. ಕಂಪನಿಯಲ್ಲಿ ಕೊಡುತ್ತಿದ್ದ ಸಂಬಳದ ಎರಡೂ ಅಥವಾ ಮೂರು ಪಟ್ಟು ದುಡಿಯುವಂತೆ ಇವರಿಗೆ ತಿಂಗಳ ಟಾರ್ಗೆಟ್ ನೀಡುತ್ತಿರುವುದು ಸಹ ಮನೆಯ ಬಗ್ಗೆ ಯೋಚನೆ ಮಾಡಲು ಕಷ್ಟವಾಗುತ್ತಿತ್ತು. ಒಂದು ರೀತಿಯಲ್ಲಿ ವಿಶ್ವಾಸ್ ಗೆ ಮನೆಯ ಕಡೆ ಗಮನಹರಿಸಲು ಸಾಧ್ಯವಾಗಿಲ್ಲ ಎಂಬ ಮನಸ್ಸಿನ ಒಂದು ಮೂಲೆಯಲ್ಲಿ ನೋವಿದ್ದರೆ…ದೇವಿಕಗೆ ತುಂಬಾ ವೇಳೆ, ಎಲ್ಲಾರ ಹಾಗೆ ನಾನು ಗಂಡನ ಜೊತೆಗೆ ಒಳ್ಳೆಯ ದಿನಗಳಲ್ಲಿ ದೇವಸ್ಥಾನ, ಸಂಬಂಧಿಕರ ಮನೆಗೆ ಹೋಗುವಂತೆ ಇದ್ದರೆ, ಹಾಗೇಯೇ ಹೊರಗಡೆ ಸ್ವಲ್ಪವಾದರೂ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿದ್ದರೆ ಎಂದು ಅನ್ನಿಸುತ್ತಿತ್ತು. ಕೆಲವೊಮ್ಮೆ ಬಡವರನ್ನು ನೋಡಿ, ಅವರಿಗೆ ಹಣವಿಲ್ಲದೇ ಇರಬಹುದು…ನನಗೆ ಹಣವಿದ್ದು ಅನುಭವಿಸುವ ಯೋಗವೇ ಇಲ್ಲವೆಂದು ಯೋಚನೆ ಮಾಡಿದ್ದು ಇದೆ. ಕೆಲಸದ ಒತ್ತಡದಿಂದಾಗುವ ಕಿರಿಕಿರಿಯನ್ನು ಹೆಂಡತಿ ಮಕ್ಕಳೋಂದಿಗೆ ಜಗಳವಾಡಿ ಮನಸ್ಸನ್ನು ಇನ್ನೂ ಘಾಸಿಗೊಳಿಸುವುದೇ ಜಾಸ್ತಿಯಾಗುತ್ತಿತ್ತು. “ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು”ಎನ್ನುವ ಹಾಗೆ, ಮಕ್ಕಳಿಗೂ ಮನಸ್ಸಿನ ಮೇಲೆ ಪರಿಣಾಮ ಬೀರತೊಡಗಿತು. ಮನೆಯ ವಾತಾವರಣ ಹಾಳಾಗುತ್ತದೆಂದು ದೇವಿಕ ಎಲ್ಲವನ್ನೂ ಅನುಸರಿಸಿ ಹೋಗ ತೊಡಗಿದಳು. ಎಲ್ಲಾ ಐಟಿ ಕಂಪನಿ ಉದ್ಯೋಗಿಗಳ ಹಣೆಬರಹ ಹೆಚ್ಚು ಕಡಿಮೆ ಇದೆ ರೀತಿಯಲ್ಲಿ ಇರುತ್ತದೆ ಎಂದುಕೊಂಡು ಸುಮ್ಮನಾಗುವುದು ಸಾಮಾನ್ಯ ಆಗಿತ್ತು. ವರ್ಷದ ಒಳಗೆ ಹೊಂದಾಣಿಕೆ ಇಲ್ಲದೆ ಡೈವೋರ್ಸ್ ಅದ ಕೇಸುಗಳು ತುಂಬಾ ನೋಡುತ್ತಿದ್ದ ದೇವಿಕ, ಕೊನೆಗೆ ತನಗೆ ತಾನೇ ಸಮಾಧಾನ ಮಾಡಿಕೊಂಡು ಮನೆಯಲ್ಲಿ ಒಬ್ಬರು ದುಡಿದು, ಒಬ್ಬರು ಸಂಸಾರದ ನೌಕೆ ಮುನ್ನೆಡೆಸಿದರೆ ಚನ್ನಾಗಿದೆ ಎಂಬುದು ಅರಿತು ಹೊರಗಡೆ ಪ್ರಪಂಚಕ್ಕೆ ಕಾಲಿಡಲು ಹಿಂದೇಟು ಹಾಕಿ, ಮಕ್ಕಳಿಗೆ ಒಳ್ಳೆಯ ತಾಯಿಯಾಗ ಬೇಕು, ಹಾಗೇಯೇ ಗಂಡನಿಗೆ ಬೇಕು ಬೇಡ ತಿಳಿಯುವಂತ ಹೆಂಡತಿ ಅಗಬಯಸಿದಳು. ಸಂಸಾರದಲ್ಲಿ ಒಬ್ಬರು ತಗ್ಗಿ ನಡೆದರೆ ಎಲ್ಲರೂ ಸುಖವಾಗಿರಲು ಸಾಧ್ಯ.
ವಿಶ್ವಾಸನ ಬಗ್ಗೆ ಅನುಕಂಪವೂ ಅಗುತ್ತಿತ್ತು. ಇನ್ನೂ ಬೇಕು…. ಮತ್ತು ಬೇಕು. . . ಎಂದು ವರುಷಗಳು ಉರುಳಿ ಹೋಗುವುದು ಗೊತ್ತಾಗುತ್ತಿಲ್ಲ. ತನ್ನ ಜೀವನ ಬರೀ ಹೆಸರು ಮತ್ತು ಹಣಕ್ಕಾಗಿ ಮೀಸಲಾಗಿಟ್ಟು, ತನ್ನಲ್ಲಿ ಬಂದಿರುವ ಮಧುಮೇಹ ಖಾಯಿಲೆ ಬಗ್ಗೆಯೂ ಯೋಚನೆ ಮಾಡದೆ ಹಗಲು ರಾತ್ರಿ ಕೆಲಸ ಮಾಡಿ. . ಹೊತ್ತಲ್ಲದ ಹೊತ್ತಿನಲ್ಲಿ ಊಟ, ತಿಂಡಿಗಳನ್ನು ಮಾಡಿ ಇರುವ ಹಣದ ಕಾಲು ಭಾಗ ಆಸ್ಪತ್ರೆಗೆ ಮತ್ತು ಮೆಡಿಕಲ್ ಶಾಪ್ ಗೆ ಹಾಕುವುದು ನೋಡಿ, ಎಷ್ಟು ಕಷ್ಟಪಟ್ಟು ದುಡಿದರು ತಿನ್ನುವ ಅನ್ನವೇ ಜಾಷಧಿ ರೂಪದಲ್ಲಿದ್ದರೆ ಏನು ಪ್ರಯೋಜನ ಅನ್ನಿಸಿದ್ದು ಇದೆ. ಲಕ್ಷಾಂತರ ಹಣವನ್ನು ಸಂಪಾದನೆ ಮಾಡಿ ಔಷಧಿ, ಮಾತ್ರೆಗಳನ್ನು ತಿನ್ನುವಷ್ಟು ಊಟ ಮಾಡದಿರುವುದು ದಿನಕಳೆದಂತೆ ಬೇಸರದ ಸಂಗತಿ ಆಯಿತು. ಊಟಕ್ಕಿಂತ ಇನ್ಸುಲಿನ್ ಮುಖ್ಯವಾಗುತ್ತಾ ಹೋಯಿತು. ಎಷ್ಟೋ ವೈಭವ, ವೈಭೋಗವಿದ್ದರು ತಿನ್ನುವ ಆನ್ನಕ್ಕೂ ಇನ್ಸುಲಿನ್ ತೆಗೆದುಕೊಂಡು ತಿನ್ನ ಬೇಕಾದ ಪರಿಸ್ಥಿತಿ ಬಂದೊದಗಿದೆಂದರೆ ತಪ್ಪಾಗಲಾರದು. ಮೊದ ಮೊದಲು ಹೆಸರು ಮತ್ತು ಹಣಕ್ಕೊಸ್ಕರ ದುಡಿಯಲು ಪ್ರಾರಂಭವಾಗಿದ್ದು, ಈಗ ದೊಡ್ಡ ದೊಡ್ಡ ಹುದ್ದೆಗೆ ಹೋದಾಗಲೂ ವಿಪರೀತ ಮಾನಸಿಕ ಕಿರಿಕಿರಿಯಿಂದ ಖಾಯಿಲೆ ಸಹ ಸ್ನೇಹಿತರ ರೀತಿಯಲ್ಲಿ ಬರಲು ಕಾರಣವೆಂದರೆ ತಪ್ಪಾಗಲಾರದು.
ಇಪ್ಪತ್ತು ವರ್ಷಗಳ ಹಿಂದೆ ಇದ್ದ ಉತ್ಸಾಹ ಈಗ ಬತ್ತಿ ಹೋಗಲಾರಂಭಿಸಿದೆ. ಮದುವೆ ಹೊಸತನದಲ್ಲಿ ಗಂಡ ಹೆಂಡತಿಯ ಆಕರ್ಷಣೆ ತುಂಬಾ ಇರುತ್ತದೆ. ದಿನ ಕಳೆದಂತೆ ಜವಾಬ್ದಾರಿಯಿಂದ ಎಲ್ಲವನ್ನೂ ಕಳೆದು ಕೊಂಡು ಬಿಡುತ್ತೇವೆ. ಒಂದೊಂದು ದಿನ ಹೇಗೆ ಹೋಗುತ್ತಿದೆ ಯಂತ್ರದ ಬದುಕು ಎಂದು ಮನಸ್ಸಿಗೆ ಬಂದಾಗ ಅದನ್ನು ಯೋಚನೆ ಮಾಡಲು ಅಗುತ್ತಿಲ್ಲ.
ಗಂಡ ಹೆಂಡತಿ ಎಂಬುದು ನಾಣ್ಯದ ಎರಡು ಮುಖವಿದ್ದ ಹಾಗೆ, ಒಂದು ಕಡೆ ನಾಣ್ಯದ ಬರಹ ಅಳಿಸಲ್ಪಟ್ಟರು ಅದು ಚಲಾವಣೆಗೆ ಬರುವುದು ಕಷ್ಟ. ಹಾಗೇನೇ ಗಂಡ ಹೆಂಡತಿಯ ನಡುವಿನ ಭಿನ್ನಾಭಿಪ್ರಾಯಗಳು ಕೂಡಲೇ ಅಲ್ಲಿಯೇ ಬಗೆಹರಿಸಲು ಅನುವು ಮಾಡಿಕೊಳ್ಳಬೇಕು. ಒಬ್ಬರಲ್ಲಿ ಯಾವ ವಿಷಯಕ್ಕೆ ಜಗಳ ಪ್ರಾರಂಭವಾಯಿತು ಅರಿತು, ಆ ವಿಷಯದ ಬಗ್ಗೆ ನಿಧಾನವಾಗಿ ಯೋಚಿಸಿ ತೀರ್ಮಾನ ತೆಗೆದು ಕೊಳ್ಳಬೇಕು. ಇಲ್ಲವಾದರೆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಇಪ್ಪತ್ತು ವರ್ಷಗಳ ಕಾಲ ದೇವಿಕ ಸಹ ಅದೇ ರೀತಿಯ ಜೀವನ ನೆಡೆಸಿಕೊಂಡು ಬಂದಿದ್ದರಿಂದ ಸಂಸಾರದಲ್ಲಿ ಎಷ್ಟೇ ಕಷ್ಟ ಇದ್ದರೂ ಕಷ್ಟವೆಂದು ಆನಿಸಲಿಲ್ಲ. ಕೆಲವೊಮ್ಮೆ ತನ್ನ ಬಗ್ಗೆ ಅಂದು ಕೊಂಡಿದ್ದು ಇದೆ… ಇದೇ ನನ್ನ ಜೀವನ ಎಲ್ಲಾ ಇದ್ದರೂ ಗಂಡಸಿನ ಪದವಿ ದೊಡ್ಡದು, ಅವನು ದುಡಿದು ತಂದರೆ ಸಂಸಾರ ಸುಖವಾಗಿ ಬಾಳಲು ಸಾಧ್ಯ. ಕೆಲವರ ಮನೆಯಲ್ಲಿ ಹೆಣ್ಣಿನ ದುಡಿಮೆಯಿಂದ ಬದುಕು ನೆಡೆಸುವುದು ನೋಡಿದ್ದೇನೆ. ಇಲ್ಲಿ ಬರೀ ಮನೆಯ ಜವಾಬ್ದಾರಿಯನ್ನು ಹಾಕಿದ್ದಾರೆ. ಅವರ ಗೌರವ ಕಾಪಾಡಿಕೊಂಡು ಹೋಗುವುದು ತನ್ನ ಜವಾಬ್ದಾರಿ ಎಂದರೆ ತಪ್ಪಾಗಲಾರದು. ಎಲ್ಲಿಯಾದರೂ ತನ್ನ ಆಸೆಯಂತೆ ನೆಡೆದು ಕೊಂಡರೆ ಮನೆಯ ನೆಮ್ಮದಿ ಹಾಳಾಗುತ್ತದೆ. ಅದ್ದರಿಂದ ಗಂಡನ ದಾರಿಯಲ್ಲಿ ನಾವು ಹೋದರೆ ಒಳ್ಳೆಯದು. ಒಂದು ದಾರವನ್ನು ಯಾರೇ ಆಗಲಿ ಎಷ್ಟು ಎಳೆಯಬೇಕು ಎಂಬುದು ನಿರ್ಧಾರ ಅವರಿಗೆ ಬಿಟ್ಟ ವಿಷಯ. ಜಾಸ್ತಿ ಎಳೆದರೆ ತುಂಡಾಗಿ ಹೋಗುವುದು ಖಂಡಿತಾ. ಇದನ್ನೆಲ್ಲಾ ಅರಿತು ಈದಿನ ಸಹ ಸುಂದರವಾದ ಸಂಸಾರ ನೆಡೆಸುತ್ತಿದ್ದಾಳೆ ದೇವಿಕ ಎಂದರೆ ತಪ್ಪ. ಹೆಣ್ಣು ಮನೆಯ ಕಣ್ಣು.
ಹಿಂದಿನಿಂದಲೂ ಹೆಣ್ಣಿಗೆ ಅವಳದೇ ಅದ ಜವಾಬ್ದಾರಿಗಳು ಇವೆ. ಅರಿತು ನಡೆದರೆ ಬಾಳು ಸೊಗಸು. ಗಂಡು ಹಾಗೆ ಹೆಣ್ಣಾದವನ್ನು ಅರ್ಥ ಮಾಡಿಕೊಂಡು ಅವಳ ಬೇಕು ಬೇಡಗಳನ್ನು ಗಮನಿಸಿ, ಇರುವ ಸಮಯದಲ್ಲಿ ಕಷ್ಟಸುಖ ಹಂಚಿಕೊಂಡು ನಡೆದರೆ ಅದಕ್ಕಿಂತ ಸುಂದರವಾದ ಕುಟುಂಬ ಇನ್ನೊಂದು ಇರಲಿಕ್ಕಿಲ್ಲ. ಹೀಗೆ ಯೋಚಿಸುತ್ತಾ ದೇವಿಕ…ವಿಶ್ವಾಸ್ ನ ಹಾದಿಯನ್ನು ಕಾಯತೊಡಗಿದಳು.
-ವೇದಾವತಿ ಹೆಚ್. ಎಸ್.
"ಗಂಡ ಹೆಂಡತಿ ಎಂಬುದು ನಾಣ್ಯದ ಎರಡು ಮುಖವಿದ್ದ ಹಾಗೆ, ಒಂದು ಕಡೆ ನಾಣ್ಯದ ಬರಹ ಅಳಿಸಲ್ಪಟ್ಟರು ಅದು ಚಲಾವಣೆಗೆ ಬರುವುದು ಕಷ್ಟ. ಹಾಗೇನೇ ಗಂಡ ಹೆಂಡತಿಯ ನಡುವಿನ ಭಿನ್ನಾಭಿಪ್ರಾಯಗಳು ಕೂಡಲೇ ಅಲ್ಲಿಯೇ ಬಗೆಹರಿಸಲು ಅನುವು ಮಾಡಿಕೊಳ್ಳಬೇಕು" – ಈ ಕಥೆಯಲ್ಲಿ ಬರುವ ಅಪರೂಪದ ಮಾತು. ಹಾಗೂ ಕತೆಯು ಕೊಡಬೇಕಾದ ಸಂದೇಶ ಈ ವಾಕ್ಯದಲ್ಲಿ ಅಡಗಿದೆ.
ಸಾಫ್ಟ್ ವೇರ್ ಹೆಂಡತಿಯ ನೋವು ನಲಿವು ಕತೆಯ ಶಿರ್ಷಿಕೆ ಬೇರೆಯಿಡಬೇಕಾಗಿತ್ತೀನೋ ಎಂದು ನನ್ನ ಅನಿಸಿಕೆ. ಶಿರ್ಷಿಕೆ ಕತೆಯ ಸಾರವನ್ನು ಬಿಟ್ಟುಕೊಡುವಂತಿರಬಾರದು. ಲೇಖಕಿ ವೇದಾವತಿ ಎಚ್. ಎಸ್ ಅವರಿಗೆ ಧನ್ಯವಾದಗಳು
ವೇದಾವತಿಯವರೇ ಕಥೆ ಮನಮುಟ್ಟುವಂತಿದೆ.ಈಗ ಇದು ಮನೆಮನೆಯ ಕಥೆಯಾಗಿದೆ.ಪರಿಹಾರೋಪಾಯವಿದೆಯೇ?