೧. ನಜ಼ರುದ್ದೀನ್ ಹಣ್ಣುಗಳನ್ನು ಮಾರಿದ್ದು
ಬೇಸಿಗೆಯಲ್ಲಿ ವಿಪರೀತ ಸೆಕೆ ಇದ್ದ ಒಂದು ದಿನ ನಜ಼ರುದ್ದೀನ್ ಹಣ್ಣುಗಳನ್ನು ಮಾರುತ್ತಿದ್ದ.
ಗಿರಾಕಿ: “ಒಂದು ಮಿಣಿಕೆ ಹಣ್ಣಿನ ಬೆಲೆ ಎಷ್ಟು?”
ನಜ಼ರುದ್ದೀನ್: “ನಾಲ್ಕು ದಿನಾರ್‌ಗಳು.”
ಗಿರಾಕಿ: “ಮಿತಿಮೀರಿದ ಬೆಲೆ ಹೇಳುತ್ತಿರುವೆ. ಅಷ್ಟು ಹೆಚ್ಚು ಬೆಲೆ ಹೇಗೆ ಕೇಳುತ್ತಿರುವೆ? ನಿನಗೇನು ನ್ಯಾಯ ನೀತಿ ಎಂಬುದೇ ಇಲ್ಲವೇ?”
ನಜ಼ರುದ್ದೀನ್: “ಇಲ್ಲ. ನೀವು ಹೇಳುತ್ತಿರುವ ಯಾವ ಸರಕುಗಳೂ ನನ್ನ ಹತ್ತಿರ ದಾಸ್ತಾನು ಇಲ್ಲ!”
*****
೨. ನಜ಼ರುದ್ದೀನ್‌ನ ರೋಗಪೀಡಿತ ಕತ್ತೆ
ತನ್ನ ರೋಗಪೀಡಿತ ಕತ್ತೆಯ ಹತ್ತಿರ ಕುಳಿತುಕೊಂಡು ನಜ಼ರುದ್ದೀನ್ ಗೋಳಾಡುತ್ತಿದ್ದದ್ದನ್ನು ಅವನ ಗೆಳೆಯನೊಬ್ಬ ನೋಡಿದ.
ಗೆಳೆಯ: “ನೀನೇಕೆ ಅಳುತ್ತಿರುವೆ? ನಿನ್ನ ಕತ್ತೆ ಈಗಲೂ ಜೀವಂತವಾಗಿದೆಯಲ್ಲ.”
ನಜ಼ರುದ್ದೀನ್: “ನಿಜ. ಆದರೂ ಒಂದು ಸಮಯ ಅದು ಸತ್ತು ಹೋದರೆ ನಾನು ಅದನ್ನು ಹೂಳಬೇಕಾಗುತ್ತದೆ, ತದನಂತರ ಹೋಗಿ ಹೊಸ ಕತ್ತೆಯೊಂದನ್ನು ಖರೀದಿಸಬೇಕಾಗುತ್ತದೆ, ತದನಂತರ ನಾನು ಹೇಳುವ ಕೆಲಸಗಳನ್ನು ಮಾಡಲು ಅದಕ್ಕೆ ತರಬೇತಿ ನೀಡಬೇಕಾಗುತ್ತದೆ. ಆಗ ನನಗೆ ಅಳಲು ಪುರಸತ್ತು ಇರುವುದೇ ಇಲ್ಲ!”
*****
೩. ನಜ಼ರುದ್ದೀನ್ ತೆರಿಗೆ ಪಾವತಿಸಿದ್ದು
ಹಿಂದಿನ ತೆರಿಗೆ ಬಾಕಿ ೫೦೦೦ ದಿನಾರ್ ಕಟ್ಟುವಂತೆ ನಜ಼ರುದ್ದೀನ್‌ನಿಗೆ ಸ್ಥಳೀಯ ಸರ್ಕಾರ ಸೂಚನಪತ್ರ ರವಾನಿಸಿತು.
ನಜ಼ರುದ್ದೀನ್ ತನ್ನ ಎಲ್ಲ ಆಸ್ತಿಯನ್ನು ಮಾರಿ ಬಂದ ಹಣವನ್ನೆಲ್ಲ ಕಟ್ಟಿದ ನಂತರವೂ ೨೦೦೦ ದಿನಾರ್ ಬಾಕಿ ಉಳಿಯಿತು. ನಗರಾಧ್ಯಕ್ಷರು ನಜ಼ರುದ್ದೀನ್‌ನನ್ನು ತನ್ನ ಸಮ್ಮುಖಕ್ಕೆ ಕರೆಯಿಸಿ ಬಾಕಿ ಹಣವನ್ನು ಕೂಡಲೇ ಕಟ್ಟುವಂತೆ ತಾಕೀತು ಮಾಡಿದರು.
ನಜ಼ರುದ್ದೀನ್ ಹೇಳಿದ, “ನನ್ನ ಹತ್ತಿರ ಹಣ ಸ್ವಲ್ಪವೂ ಉಳಿದಿಲ್ಲ. ನನ್ನ ಹೆಂಡತಿ ಹಾಗು ನನ್ನ ಹತ್ತಿರ ಈಗ ಉಳಿದಿರುವುದು ೩೦೦೦ ದಿನಾರ್‌ಗಳು ಮಾತ್ರ. ಆ ಹಣ ನನ್ನ ಹೆಂಡತಿಯದ್ದು, ನನ್ನದಲ್ಲ.”
ನಗರಾಧ್ಯಕ್ಷರು ಪ್ರತಿಕ್ರಿಯಿಸಿದರು, “ನಮ್ಮ ಕಾನೂನಿನ ಪ್ರಕಾರ ಆಸ್ತಿ ಹಾಗು ಸಾಲ ಈ ಎರಡರಲ್ಲಿಯೂ ಪತಿ ಪತ್ನಿಯರದ್ದು ಸಮಪಾಲು. ಆದ್ದರಿಂದ ನೀನು ನಿನ್ನ ಪತ್ನಿಯ ೩೦೦೦ ದಿನಾರ್‌ಗಳನ್ನು ನಿನ್ನ ತೆರಿಗೆ ಬಾಕಿ ಪಾವತಿಸಲು ಉಪಯೋಗಿಸಬಹುದು.”
“ಹಾಗೆ ನಾನು ಮಾಡಲು ಸಾಧ್ಯವಿಲ್ಲ.”
“ಏಕೆ ಸಾಧ್ಯವಿಲ್ಲ?”
“ಏಕೆಂದರೆ ಅದು ನಾನು ಮದುವೆಯ ಸಮಯದಲ್ಲಿ ಅವಳಿಗೆ ಕೊಡಬೇಕಾಗಿದ್ದ, ಇನ್ನೂ ಕೊಡಲು ಬಾಕಿ ಇರುವ ಸ್ತ್ರೀಧನ!”
*****
೪. ನಗರಾಧ್ಯಕ್ಷನ ಅಂತಿಮಯಾತ್ರೆ
ನಜ಼ರುದ್ದೀನ್‌ನ ಹೆಂಡತಿ: “ಬೇಗಬೇಗ ಹೊರಡಿ. ನೀವಿನ್ನೂ ಸರಿಯಾಗಿ ಉಡುಪು ಧರಿಸಿಯೇ ಇಲ್ಲವಲ್ಲ. ನಗರಾಧ್ಯಕ್ಷರ ಅಂತಿಮಯಾತ್ರೆಗೆ ನಾವು ಆಗಲೇ ಹೋಗಬೇಕಾಗಿತ್ತು.”
ನಜ಼ರುದ್ದೀನ್: “ಅವನ ಅಂತಿಮಯಾತ್ರೆಗೆ ಹೋಗಲು ನಾನೇಕೆ ಅವಸರಿಸಬೇಕು? ಹೇಗಿದ್ದರೂ ನನ್ನದಕ್ಕೆ ಬರುವ ತೊಂದರೆಯನ್ನು ಅವನು ಖಂಡಿತ ತೆಗೆದುಕೊಳ್ಳವುದಿಲ್ಲ!”
*****
೫. ನಜ಼ರುದ್ದೀನ್‌ನ ತರಾತುರಿ ಪ್ರಾರ್ಥನೆ
ಒಂದು ದಿನ ನಜ಼ರುದ್ದೀನ್ ತುರ್ತು ಕಾರ್ಯನಿಮಿತ್ತ ಎಲ್ಲಿಗೋ ಹೋಗಬೇಕಾಗಿದ್ದದ್ದರಿಂದ ಮಸೀದಿಗೆ ಹೋಗಿ ಸಂಜೆಯ ಪ್ರಾರ್ಥನೆಯನ್ನು ತರಾತುರಿಯಲ್ಲಿ ಮಾಡಿ ಮುಗಿಸಿದ. ಇದನ್ನು ನೋಡಿದ ಮತೀಯ ನಾಯಕನೊಬ್ಬ ಕೋಪದಿಂದ ಹೇಳಿದ, “ಇಂತು ತರಾತುರಿಯಲ್ಲಿ ಪ್ರಾರ್ಥನೆ ಮಾಡುವುದು ಸರಿಯಲ್ಲ. ಇನ್ನೊಮ್ಮೆ ಸರಿಯಾಗಿ ಪ್ರಾರ್ಥನೆ ಮಾಡು.”
ನಜ಼ರುದ್ದೀನ್ ಮರು ಮಾತನಾಡದೆ ಅಂತೆಯೇ ಮಾಡಿದ. ಮತೀಯ ನಾಯಕ ಕೇಳಿದ, “ಮೊದಲು ತರಾತುರಿಯಲ್ಲಿ ಮಾಡಿದ ಪ್ರಾರ್ಥನೆಗಿಂತ ಎರಡನೆಯ ಸಲ ಮಾಡಿದ್ದನ್ನು ದೇವರು ಮೆಚ್ಚಿದ್ದಾನೆ ಎಂಬುದಾಗಿ ನಿನಗನ್ನಿಸುತ್ತಿಲ್ಲವೇ?”
ನಜ಼ರುದ್ದೀನ್ ಉತ್ತರಿಸಿದ, “ಇಲ್ಲ. ಏಕೆಂದರೆ ಮೊದಲನೆಯ ಸಲ ಪ್ರಾರ್ಥನೆಯನ್ನು ತರಾತುರಿಯಾಗಿ ಮಾಡಿದ್ದರೂ ಅದನ್ನು ಮಾಡಿದ್ದು ದೇವರಿಗಾಗಿ. ಎರಡನೇ ಸಲ ಮಾಡಿದ್ದು ನಿನಗಾಗಿ!”
*****