Facebook

ಹೂವಾಗಿ ಅರಳಿ: ವೆಂಕಟೇಶ ಚಾಗಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

 

ಬೆಳಗಿನ ೬ ಗಂಟೆಯ ಸಮಯ. . ಕಣ್ಣಲ್ಲಿ ಇನ್ನೂ ನಿದ್ದೆ ಮಂಪರು. ಆದರೂ ಕಣ್ತೆರೆಯುವಂತೆ ಮಾಡಿತ್ತು ಮೊಬೈಲ್. ಯಾರದೋ ಮೆಸೆಜ್ ಬಂದಿರುವ ರಿಂಗ್ ಟೋನ್ ಆಗಾಗ ಕೇಳಿಸುತ್ತಿತ್ತು. ಚಳಿಗಾಲದ ಚಳಿಯಲ್ಲಿ ಮುದುಡಿಕೊಂಡು ಮಲಗಿದ್ದ ನಾನು ಮನಸ್ಸಿಲ್ಲದೇ ಕಣ್ತೆರೆಯಬೇಕಾಯಿತು. ಒಂಟಿ ಕಣ್ಣು ತೆರೆದು ಮೊಬೈಲ್ ತಡಕಾಡಿದೆ. ಮೆಸೆಜ್ ಟೋನ್ ನ ಶಬ್ದ ಮೊಬೈಲ್ ನ್ನು ಬೇಗ ಕೈಗೆ ಸಿಗುವಂತೆ ಮಾಡಿತ್ತು. ಆನ್ ಮಾಡುತ್ತಿದ್ದಂತೆ ಸುಮಾರು ೧೦ ಮೆಸೆಜ್ ಗಳಲ್ಲೂ ಸಾರಿ ಸಾರಿ ಸಾರಿ. . .

ಹಿಂದಿನ ದಿನ ಸರಿ ರಾತ್ರಿ ೧೨ ರವರೆಗೂ ಮೊಬೈಲ್ ನಲ್ಲೇ ಚಾಟಿಂಗ್ ನಡೆದಿತ್ತು. ಸಲಿಗೆಯ ಕಾರಣದಿಂದೆನೋ ನಾನು ಐ ಲವ್ ಯು ಎಂದು ರಿಪ್ಲೆ ಮಾಡಿದ್ದೆ. ಅವಳಿಗೆ ಅದೇಕೊ ಬೇಸರ ತರಿಸಿತ್ತೋ ಏನೋ  ಚೆನ್ನಾಗಿ ಬೈದಿದ್ದಳು. ಆದರೆ ಮರುದಿನ  ೧೦ ಮೆಸೆಜ್ ಕಳಿಸಿದ್ದಳು. ” ನೀನು ಎಲ್ಲ ಹುಡುಗರಂತೆ” , ” ನೀನು ಇಂಥವನೆಂದು ಅಂದುಕೊಂಡಿರಲಿಲ್ಲ” ” ನಮ್ಮ ಸ್ನೇಹಕೆ ನೀನು ಮಸಿ ಬಳಿದೆ” ಎಂದೆಲ್ಲಾ ರಿಪ್ಲೆಗಳು ಬರತೊಡಗಿದ್ದವು. OK ಮಾ ಐ ಆ್ಯಮ್ ಸಾರಿ ಎನ್ನುತ್ತಾ ಸುಮ್ನೆ ಕಿಂಡಲ್ ಮಾಡಿದೆ ಎಂದು ಹೇಳಿ ಚಾಟಿಂಗ್ ಗೆ ಕೊನೆ ಹೇಳಿದ್ದೆ.

ನೇಹಾ ಮತ್ತು ನಾನು ಒಂದೇ ದಿನ ಕೆಲಸಕ್ಕೆ ಸೇರಿದ್ದೆವು. ದೂರದ ಊರಿನಿಂದ ಬಂದು ಕೆಲಸಕ್ಕೆ ಸೇರಿದ್ದ ನಾವು ಅಂದಿನಿಂದ ಪರಿಚಿತರಾಗಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಕೆಲಸದಲ್ಲಿ ಬರುವ ತೊಂದರೆಗಳಿಗೆ , ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸ್ನೇಹಿತರಾಗಿದ್ದೆವು. ನೇಹಾ ಎಲ್ಲಾ ಇದ್ರು ಅನಾಥಳಾಗಿದ್ದಳು. ಕಷ್ಟ ಪಟ್ಟು ಓದಿದ್ದಕ್ಕೆ ಕೆಲಸ ಸಿಕ್ಕಿತ್ತು. ಅವಳ ನಿಷ್ಠುರತೆಗೆ ಸ್ನೇಹಿತರೂ ಕಡಿಮೆ. ಆದರೂ ಅವಳ ನನ್ನ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು. ಸ್ನೇಹ ಪ್ರೀತಿಗೆ ಬದಲಾಗಬೇಕು ಎಂಬ ಹಂಬಲ ನನ್ನಲ್ಲಿತ್ತು. ತುಂಬಾ ದಿನಗಳ ನಂತರ ನಿನ್ನೆಯ ದಿನ ಮನದ ಮಾತನ್ನು ಅವಳಿಗೆ ತಿಳಿಸಿದ್ದೆ. ಆದರೆ ಅದಕ್ಕೆ ಅವಳ ನಿಷ್ಠುರ ಮಾತುಗಳಿಗೆ ಉತ್ತರಿಸದಾಗಿದ್ದೆ. ಕೊನೆಯ ಕ್ಷಣದಲ್ಲಿ ನಾನು ಹೇಳಿದ್ದು ತಮಾಷೆಗಾಗಿ ಎಂದು ಹೇಳಿ ಸುಮ್ಮನಾಗಿದ್ದೆ.

ಅವಳ ಅಂತರಾಳವನ್ನು ಸರಿಯಾಗಿ ಅರಿಯದಿದ್ದ ನಾನು ಮರುದಿನ ಸಾರಿ ಎಂಬ ಮೆಸೆಜ್ ಕಂಡ ನನಗೆ ದಿಘ್ರಮೆಯಾಗಿತ್ತು. ಅದಕ್ಕೆ ಉತ್ತರವಾಗಿ It’s ok ಎಂದಷ್ಟೇ ಉತ್ತರ ನೀಡಿದೆ. ಮತ್ತೆ ಅದೇ ಚಾಟಿಂಗ್ , ಕಾಲೆಳೆಯುವ ಕೆಲಸ , ತುಂಟಾಟ ಶುರುವಾಯಿತು. ನಾವಿಬ್ಬರೂ ಮದ್ವೆ ಆದ್ರೆ ನಿನ್ನ ಸುಮ್ಮನೆ ಬಿಡಲ್ವೋ ನಿನ್ನ ಜೀವ ತಿಂದುಬಿಡ್ತೀನಿ. ಯಾಕಾದ್ರೂ ಮದ್ವೆ ಆದ್ನೋ ಅನ್ಬೇಕು ಆ ತರ ಮಾಡ್ತೇನೆ. ಅಂತ ಅವಳೆಂದರೆ, ಅದಕ್ಕುತ್ತರವಾಗಿ “ಅಯ್ಯೋ, ನಿನ್ ಯಾರು ಮದ್ವೆ ಆಗ್ತಾರೆ ಬಿಡು. ಇಷ್ಟು ದಿನ ನಿನ್ನ ಸ್ನೇಹ ಮಾಡಿ ಅನುಭವಿಸಿದ್ದೇ ಸಾಕು ಇನ್ನು ಜೀವನ ಪರ್ಯಂತ ಯಾಕೆ ಅನುಭವಿಸ್ಲಿ ” ಎನ್ನುತ್ತಿದ್ದುದು ಉಂಟು. ಆಗಾಗ ಸಣ್ಣ ಪುಟ್ಟ ಜಗಳಗಳಾದರೂ ಒಬ್ಬರನೊಬ್ಬರು ಸಂತೈಸುವುದನ್ನು ಮರೆಯುತ್ತಿರಲಿಲ್ಲ.

ಅದೊಂದು ದಿನ ನೇಹಾಳಿಂದ ಕಾಲ್ ಬಂತು. ತಾನು ವಾಸವಾಗಿರುವ ಊರಿನಲ್ಲಿ ಜಾತ್ರೆ ಇದ್ದು ನೀನು ಬರಲೇ ಬೇಕು ಎಂದಿದ್ದಳು. ನೂರೆಂಟು ಕೆಲಸಗಳ ಮಧ್ಯೆ ಅವಳ ಕರೆಗೆ ಓಕೆ ಎಂದಿದ್ದೆ. ಜಾತ್ತೆಗೆ ಬಂದ್ರೆ ನನಗೇನಿದೆ ಆತಿಥ್ಯ ಎಂದು ಕಾಲೆಳೆದರೆ , ಒಂದು ಕಪ್ ಟೀ ಅಷ್ಟೇ ಕೊಡುವೆ ಎಂದು ರೇಗಿಸುತ್ತಿದ್ದಳು. ಹಾಗಾದ್ರೆ ನಾ ಬರಲ್ಲ ಎಂದಾಗ ನೀ ಬರದೇ ಇದ್ರೆ ಜಾತ್ರೆ ನಿಲ್ಲಲ್ಲ ಎಂದಿದ್ದಳು.

ಮರುದಿನ ಎಂದಿನಂತೆ ಎದ್ದು ಸಭ್ಯ ಉಡುಪು ಧರಿಸಿ ಜಾತ್ರೆಗೆ ಹೊರಡಲು ಸಿದ್ದನಾದೆ. ” ಎಲ್ಲಿದಿಯಾ “ಎಂದು ಮೆಸೇಜ್ ಕಳಿಸಿದ ನೇಹಾಳಿಗೆ  ನಾನು   ಬರೋದಿಲ್ಲ ಎಂದು ರಿಪ್ಲೆ ಮಾಡಿದೆ. ನಂಗೆಲ್ಲಾ ಗೊತ್ತು ದೇವಸ್ಥಾನದ ಬಳಿ ಬಾ ಎಂದು ಹೇಳಿ ಚಾಟಿಂಗ್ ನಿಲ್ಲಿಸಿದಳು. ನಾನು ಖಂಡಿತ ಬರುತ್ತೇನೆ ಎಂಬುದು ಅವಳಿಗೆ ಗೊತ್ತಿತ್ತು. ನನ್ನ ಮನದ ಸೂಕ್ಷ್ಮ ವಿಚಾರಗಳನ್ನು ಅವಳು ಬಲ್ಲವರಾಗಿದ್ದಳು. ಅವಳ ಮಾತನ್ನು ನಾನೆಂದೂ ಅಲ್ಲಗಳೆಯುವುದಿಲ್ಲವೆಂಬುದು ಅವಳಿಗೆ ಗೊತ್ತಿತ್ತು. ಸ್ನೇಹಿತರಿದ್ದರೆ ನಮ್ಮಂತೆ ಇರಬೇಕು ಎಂದು ಆಗಾಗ ಹೇಳುತ್ತಿದ್ದಳು‌.

ಸಮಯವಾಗುತ್ತಿದ್ದಂತೆ ನನ್ನ ಬೈಕನ್ನು ಏರಿ ದೇವಸ್ಥಾನದತ್ತ ತೆರಳಿದೆ. ನೇಹಾ ನಾನು ಬರುವುದನ್ನೇ ಕಾಯುತ್ತಿದ್ದಳು. ಇಬ್ಬರೂ ದೇವರ ದರ್ಶನ ಪಡೆದು ಹೊರಗಡೆ ಬಂದೆವು. ನಾನು ಸುಮ್ಮನಿರದೆ ದೇವರ ಬಳಿ ಏನು ಬೇಡಿಕೊಂಡೆ? ಒಳ್ಳೆ ಗಂಡ ಸಿಗ್ಲಿ ಅಂತಾನಾ? ಎಂದು ರೇಗಿಸಲು ಪ್ರಾರಂಭಿಸಿದೆ. ಹಾಗೇನೂ ಇಲ್ಲ ನಿಂಗೆ ಬಜಾರಿ ಹುಡುಗಿ ಸಿಗ್ಲಿ ಅಂತ ಬೇಡ್ಕೊಂಡೆ ಎಂದು ನನಗೇ ತಿರುಗು ಬಾಣ ಕೊಟ್ಟಳು‌. ನಾನು ಅಷ್ಟೇ ನಿನಗೆ ಕುಡುಕ ಗಂಡ ಸಿಗ್ಲಿ ಅಂತಾನೇ ಬೇಡ್ಕೊಂಡೆ ಎಂದು ಅವಳನ್ನು ರೇಗಿಸಿದೆ. ಹೀಗೆ ಮಾತುಕತೆ ಅವಳ ಮನೆ ತಲುಪುವ ವರೆಗೂ ಮುಂದುವರೆಯಿತು.

ಅದೊಂದು ಎರಡು ಕೋಣೆಗಳ ಮನೆ. ಅಚ್ಚುಕಟ್ಟಾಗಿ ಜೋಡಿಸಿದ ವಸ್ತುಗಳು. ಗೋಡೆಗಳ ಮೇಲೆ ಚಿತ್ರಪಟಗಳ , ಕೈಕುಸುರಿಯ ಚಿತ್ತಾರ‌. ಇದೇ ನೋಡು ನನ್ನ ಅರಮನೆ ಎಂದು ಮನೆಯನ್ನು ಪರಿಚಯಿಸಿದಳು‌. ಮೂಲೆಯಲ್ಲಿ ಇದ್ದ ಚೇರನ್ನು ಎಳೆದು ಕುಳಿತುಕೊಳ್ಳಿ ಯಜಮಾನ್ರೆ ಎಂದು ಹೇಳಿ, ಸ್ವಲ್ಪ ದೂರದಲ್ಲಿ ಕಾಣುತ್ತಿದ್ದ ಅಂಗಡಿಗೆ ಟೀ ಮಾಡಲು ಹಾಲು ತರಲು ತೆರಳಿದಳು‌.

ಸುಮ್ಮನೇ ಕುಳಿತುಕೊಳ್ಳದೇ ಕಿಸೆಯಿಂದ ಮೊಬೈಲ್ ತೆಗೆದು ನೋಡುತ್ತಾ ಕುಳಿತೆ. ಮೊಬೈಲ್ ಗೆ ಹಸಿವಾಗಿದ್ದರಿಂದ ಕೂಗುತ್ತಿತ್ತು. ಸರಿ, ಮೊಬೈಲ್ ಗೆ ಚಾರ್ಜರ್ ಸಿಗಬಹುದೋ ಎಂದು ಆ ಕೋಣೆಯಲ್ಲಿ ಹುಡುಕಿದೆ. ಕೊನೆಗೂ ಚಾರ್ಜರ್ ಸಿಕ್ಕಿತು, ಅದರ ಜೊತೆಗೆ ಒಂದು ಡೈರಿ ಯೂ ಸಿಕ್ಕಿತು. ಮೊಬೈಲ್ ನು ಚಾರ್ಜ ಗೆ ಹಾಕಿ ಡೈರಿ ಓದಲು ಪ್ರಾರಂಭಿಸಿದೆ.

ಡೈರಿ ಯಲ್ಲಿ ಹೆಚ್ಚು ನಮ್ಮ ಚಾಟಿಂಗ್ ಬಗ್ಗೆ ಬರೆದಿದ್ದಳು. ನನ್ನ ಹಲವಾರು ಪ್ರಶ್ನೆಗಳಿಗೆ ಡೈರಿಯಲ್ಲೇ ಉತ್ತರಗಳನ್ನು ಬರೆದಿದ್ದಳು. ಪ್ರತಿ ದಿನದ ಪುಟದ ಕೊನೆಯಲ್ಲಿ ” ನಿನ್ನ ಬಿಟ್ಟಿರಲಾರೆ ” ಎಂಬ ನನಗಾಗಿ ಬರೆದ ಸಾಲುಗಳು ನನ್ನ ಪ್ರೀತಿಯ ಭಾವನೆಗಳಿಗೆ ಮತ್ತೆ ನೀರೆರೆದಂತಾಯಿತು.

ತುಂಬಾ ಸಮಯ ಅದೇ ಪುಟಗಳನ್ನು ಮತ್ತೆ ಮತ್ತೆ ಓದತೊಡಗಿದ್ದೆ. ಪಕ್ಕದಲ್ಲಿ ನೇಹಾ ಬಂದು ನಿಂತಿರುವುದು ನನ್ನ ಗಮನಕ್ಕೆ ಬರಲೇ ಇಲ್ಲ. ಕಣ್ಣುಗಳು ಅವಳತ್ತ ತಿರುಗುತ್ತಿದ್ದಂತೆಯೇ ನನ್ನ ತಬ್ಬಿಕೊಂಡು ಐ ಲವ್ ಯು ಎಂದಳು. ಅವಳ ಪ್ರೀತಿಯನ್ನೇ ನಿರೀಕ್ಷಿಸುತ್ತಿದ್ದ ನನಗೆ ತಾನೇ ಒಲಿದಿತ್ತು. ಐ ಟೂ ಲವ್ ಯು ಎಂದು ಪ್ರೀತಿಯಲ್ಲಿ ಬಂದಿತನಾದೆ. ನಮ್ಮ ಸ್ನೇಹ ಎಂದೋ ಪ್ರೀತಿಗೆ ಮರಳಿತ್ತು. ಆದರೆ ಇಂದು ನಮ್ಮ ಪ್ರೀತಿ ಹೂವಾಗಿ ಅರಳಿತ್ತು. .

ವೆಂಕಟೇಶ ಚಾಗಿ


 


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

Leave a Reply