ಬದುಕುವುದು ಕೆಲವೇ ದಿನ ಎಂದ ಮೇಲೆ….
	ಬದುಕುವುದು ಇನ್ನು ಕೆಲವೇ ದಿನ
	ಎನ್ನುವ ಸತ್ಯ ತಿಳಿದ ಮೇಲೆ…..
	ನೀನು ದೂರವಾದ ದಿನಗಳ 
	ಲೆಕ್ಕ ಹಾಕುತ್ತ ಕಣ್ಣೀರು ಹಾಕುವುದಿಲ್ಲ
	ಕೊನೆಯ ಭೇಟಿಯಲ್ಲಿ 
	ನೀನಾಡಿದ ಮಾತುಗಳನ್ನು ಮೆಲಕು ಹಾಕುತ್ತ 
	ಮನಸ್ಸನ್ನು ರಾಡಿಯಾಗಿಸಿಕೊಳ್ಳುವುದಿಲ್ಲ
	ನೀನು ಕೊನೆಯದಾಗಿ ಕಳಿಸಿದ ಸಂದೇಶವನ್ನು
	ಪುನಃ ಪುನಃ ಓದುತ್ತ
	ನಿನ್ನ ದ್ವೇಷಕ್ಕೆ ಹೊಸ ಅರ್ಥ ಹುಡುಕುವುದಿಲ್ಲ
	ಯಾಕೆಂದರೆ,
	ನಾನು ಬದುಕ ಬೇಕಿದೆ
	ನಿನ್ನ ಧೂರ್ತ, ಕುತಿತ್ಸ ಮಾತುಗಳನ್ನು ಮರೆತು
	ಬರೀ ನನ್ನೊಳಗಿನ ಮಾತನ್ನಷ್ಟೇ ಕೇಳಬೇಕಿದೆ
	ನನ್ನೆದೆಯೊಳಗಿನ ಪ್ರೀತಿಯನ್ನು ಕೊಳೆತು
	ನಾರುವಂತೆ ಮಾಡಿದ ನಿನ್ನನ್ನು 
	ಮನಸ್ಸಿನಿಂದ ಹೊರನೂಕಿ
	ಕೆಲವೇ ಕೆಲವು ದಿನಗಳಾದರೂ
	ಕೇವಲ ನನ್ನೊಂದಿಗೆ ನಾನು ಬದುಕಬೇಕಿದೆ
	ಮರೆತು ಬಿಡುತ್ತಿದ್ದೇನೆ
	ನೀನಾಡಿದ ಎಲ್ಲ ದ್ವೇಷದ ಮಾತುಗಳನ್ನು
	ಸಾಧ್ಯವಾದರೆ ಮತ್ತೆ ಹೊಸದಾಗಿ ಬಾ
	ಬರೀ ಸ್ನೇಹಿತರಾಗಿದ್ದು ಬಿಡೋಣ
	ಕಡಲ ತಡಿಯಲ್ಲಿ ಕುಳಿತು
	ಅಲೆಗಳಿಗೆ ಕಾಲು ಚಾಚೋಣ
	ಎಲ್ಲವನ್ನೂ ಮರೆತು ಹರಟೋಣ
	ನನ್ನ ಕೊನೆಯ ಕ್ಷಣದವರೆಗೆ…..
	……ಸಿರಿ
	ಪ್ರೀತಿ ಎಂದರೆ …
	ಪ್ರೀತಿ ಎಂದರೆ ತಂಗಾಳಿಯಂದುಕೊಂಡಿದ್ದೆ
	ಆದರೆ ಗೆಳೆಯ
	ನಿನ್ನ ಪ್ರೀತಿ 'ಬಿರುಗಾಳಿ'
	ತರಗೆಲೆಯಾಗಿ ಹೋದೆ 
	ಆದರು ಹಿತವಿತ್ತು ಮನಕೆ
	ಪ್ರೀತಿ ಎಂದರೆ ಬೆಳದಿಂಗಳೆಂದುಕೊಂಡಿದ್ದೆ
	ಆದರೆ ಗೆಳೆಯ
	ನಿನ್ನ ಪ್ರೀತಿ 'ಸುಡುಬಿಸಿಲು'
	ಬೆಂದು ಬೆವರಾದೆ.
	ಆದರು ಹಿತವಿತ್ತು ಮನಕೆ.
	ಪ್ರೀತಿ ಎಂದರೆ ಶಾಂತ ಸರೋವರ ಎಂದುಕೊಂಡಿದ್ದೆ
	ಆದರೆ ಗೆಳೆಯ
	ನಿನ್ನ ಪ್ರೀತಿ 'ಹುಚ್ಚುಹೊಳೆ'
	ಪ್ರವಾಹದ ಸುಳಿಯಲ್ಲಿ ಕೊಚ್ಚಿ ಹೋದೆ 
	ಆದರು ಹಿತವಿತ್ತು ಮನಕೆ.
	ಪ್ರೀತಿ ಎಂದರೆ 'ಮಲ್ಲಿಗೆಯ ಹಾರ' ಎಂದುಕೊಂಡಿದ್ದೆ
	ಆದರೆ ಗೆಳೆಯ
	ನಿನ್ನ ಉಕ್ಕಿನ ಬಾಹುಗಳ 
	ನಡುವೆ ನರಳಿ ನಲುಗಿದೆ.
	ಆದರು ಹಿತವಿತ್ತು ಮನಕೆ.
	ಈ ಬಂದನಗಳ ನಡುವೆಯೇ 
	ಮುಕ್ತವಾಗಿತ್ತು ಮನಸು.
	ಇದೆಯೇನೂ 
	'ಪ್ರೀತಿಯೆಂದರೆ'
-ಅರುಣ್ ಕುಮಾರ್ ಹೆಚ್ ಎಸ್
ಏಣಿ!
	ಕೆಲವರು
	ಏ…ರಿ
	ಮರೆತು ಬಿಡುತ್ತಾರೆ
	ಏಣಿ 
	ಇನ್ನು ಕೆಲವರು
	ದೂಡಿಬಿಡುತ್ತಾರೆ!
	ಏರಿದವರು
	ಇಳಿಯಲೇಬೇಕಾಗುವುದ
	ಮರೆತೇಬಿಡುತ್ತಾರೆ!
ಏರುವುದು!
	ಏಣಿಯಂತೆಯೇ
	ನೇಣು ಕೂಡ!
	ಸಹಾಯ
	ಮಾಡುತ್ತದೆ
	ಮೇಲೇರಲು!
ಏಣಿ-ಗೋಣಿ
	ಏಣಿಗೆ 
	ಗೋಣಿಗೆ
	ಜಾಗ
	ಮನೆಯ ಮಾಡು
	ಇಲ್ಲವೆ ಕತ್ತಲ ಗೂಡು!
	ಏರಲು
	ಕಾಲೊರೆಸಲು
	ಹುಡುಕಿ ತಂದು
	ಮೆರೆಸುತ್ತೇವೆ
	ಕೆಲವು ಕ್ಷಣಗಳಷ್ಟೆ!
****
ಭಲೇ..!
	ಬಿದ್ದು ಹೋದ 
	ದೇಹವನು
	ಎಬ್ಬಿಸಿ ಕೂರಿಸಿಬಿಡುತ್ತಾರೆ
	ಇಂದಿನ ಹೈಟೆಕ್ಕು ವೈದ್ಯರು!!
	`ಭಲೇ..’ಎನ್ನಬೇಡಿ
	ಎದ್ದವರ 
	ಒಮ್ಮೆಲೇ
	ಬೀಳಿಸಿ ಬಿಡುತ್ತದೆ
	ಡಾಕ್ಟರರ ಬಿಲ್ಲು! 
ಪರಿಣಾಮ!
	ನಿರ್ಜನ
	ದುರ್ಗಮ
	ಪ್ರಶಾಂತ
	ಪರಿಸರವನರಸಿ
	ನೆಲೆಗೊಂಡು
	ಅನಂತದಲಿ ಒಂದಾಗುವರು
	ಮಹಾಮಹಿಮರು
	ಮುಂದೊಮ್ಮೆ 
	ಅದು ಭಕ್ತರ
	ಯಾತ್ರಾಸ್ಥಳ!
	ಕೊನೆಗೊಮ್ಮೆ
	ಜನಸಾಗರ
	ಜಾತ್ರಾಸ್ಥಳ!
ಎಸ್.ಜಿ.ಶಿವಶಂಕರ್
					


ಸಿರಿಯವರ ಕವನ
"ಬದುಕುವುದು ಇನ್ನು ಕೆಲವೇ ದಿನ
ಎನ್ನುವ ಸತ್ಯ ತಿಳಿದ ಮೇಲೆ….."
ಸುಂದರ ಅರ್ಥಪೂರ್ಣ ಕವನ .
"ಬರೀ ಸ್ನೇಹಿತರಾಗಿದ್ದು ಬಿಡೋಣ
ಕಡಲ ತಡಿಯಲ್ಲಿ ಕುಳಿತು
ಅಲೆಗಳಿಗೆ ಕಾಲು ಚಾಚೋಣ
ಎಲ್ಲವನ್ನೂ ಮರೆತು ಹರಟೋಣ
ನನ್ನ ಕೊನೆಯ ಕ್ಷಣದವರೆಗೆ…." .ತುಂಬಾ ಇಷ್ಟ ಆಯಿತು