“ಝೂನೋಟಿಕ್ (ಪ್ರಾಣಿಜನ್ಯ) ರೋಗಗಳು”: ಡಾ. ವೀಣಾಕುಮಾರಿ ಎ. ಎನ್.‌,

ಝೂನೋಟಿಕ್ (ಪ್ರಾಣಿಜನ್ಯ) ರೋಗಗಳು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಪರಸ್ಪರ ಹರಡುವ ರೋಗಗಳಾಗಿವೆ. ʼಝುನೋಸಿಸ್ʼ ಎಂಬ ಪದವು ರುಡಾಲ್ಫ್ ವಿರ್ಚೊ (Rudolph Virchow) ಎಂಬಾತನಿಂದ 1880ರಲ್ಲಿ ಪರಿಚಯಿಸಲ್ಪಟ್ಟಿದೆ. ʼಝೂನೋಸಿಸ್ʼ ಎಂಬ ಪದವು ಮೂಲತಃ ಗ್ರೀಕ್ ಭಾಷೆಯ ಪದವಾಗಿದ್ದು, ʼಝೂನೋʼ ಎಂದರೆ ʼಪ್ರಾಣಿʼ ಹಾಗೂ ʼನೊಸೆಸ್ʼ ಎಂದರೆ ʼಅನಾರೋಗ್ಯʼ ಎಂದರ್ಥ. ಇವುಗಳು ವೈರಸ್ ಗಳು (ರೇಬೀಸ್‌, ಆರ್ಬೋವೈರಸ್‌ ಸೋಂಕುಗಳು, ಕ್ಯಾಸನೂರ್‌ ಫಾರಸ್ಟ್‌ ಡಿಸೀಸ್/ಮಂಗನ ಕಾಯಿಲೆ, ಹಳದಿ ಜ್ವರ, ಇನ್ ಫ್ಲುಯೆಂಜಾ), ಬ್ಯಾಕ್ಟೀರಿಯಾಗಳು (ಉದಾಹರಣೆ: ಆಂಥ್ರಾಕ್ಸ್‌, ಬ್ರುಸೆಲ್ಲೋಸಿಸ್‌, ಪ್ಮೇಗ್‌, ಲೆಪ್ಟೋಸ್ಪೈರೋಸಿಸ್‌, ಸಾಲ್ಮೊನೆಲ್ಲೋಸಿಸ್‌, ಲೈಮ್‌ ರೋಗ), ಫಂಗಸ್ (ಹಿಸ್ಟೋಪ್ಲಾಸ್ಮೋಸಿಸ್‌, ಕ್ರಿಪ್ಟೋಕಾಕೋಸಿಸ್) ಅಥವಾ ಪರೋಪ ಜೀವಿಗಳಿಂದ (ಟಾಕ್ಸೋಪ್ಲಾಸ್ಮೋಸಿಸ್‌, ಟ್ರಿಪ್ಯಾನೋಸೋಮಿಯಾಸಿಸ್‌, ಲಿಶ್ಮನಿಯಾಸಿಸ್‌, ಕ್ಯೂ-ಫೀವರ್‌, ಟೈಫಸ್‌ ಗಳು, ಹೈಡಾಟಿಡೋಸಿಸ್‌, ಟೇನಿಯಾಸಿಸ್‌, ಸ್ಕೇಬೀಸ್‌, ಮಯಾಸಿಸ್)‌ ಉಂಟಾಗುತ್ತದೆ.

ಮಾನವರು, ಪ್ರಾಣಿಗಳು ಮತ್ತು ಪರಿಸರವು ವಿವಿಧ ಸಾಂಕ್ರಾಮಿಕ ರೋಗಗಳ ಹೊರಹೊಮ್ಮುವಿಕೆ ಹಾಗೂ ಪ್ರಸರಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇತ್ತೀಚಿನ ದಶಕಗಳಲ್ಲಿ ಮನುಷ್ಯರಲ್ಲಿ ಕಾಣಿಸಿಕೊಂಡ ಹೊಸ ರೋಗಗಳು ಪ್ರಾಣಿ ಮೂಲದಾಗಿದ್ದು, ಪ್ರಾಣಿಮೂಲದ ಆಹಾರಗಳೊಂದಿಗೆ ನೇರವಾಗಿ ಸಂಬಂಧ ಹೊಂದಿವೆ. ವಿಶ್ವಸಂಸ್ಥೆಯ ಪ್ರಕಾರ ಪ್ರಾಣಿಗಳಿಂದ ಮನುಷ್ಯರಿಗೆ ಅಥವಾ ಮನುಷ್ಯರಿಂದ ಪ್ರಾಣಿಗಳಿಗೆ ಸ್ವಾಭಾವಿಕವಾಗಿ ಹರಡುವ ಯಾವುದೇ ರೋಗ ಅಥವಾ ಸೋಂಕನ್ನು ʼಝೂನೋಸಿಸ್ʼ ಎಂದು ವರ್ಗೀಕರಿಸಲಾಗಿದೆ. ಮಾನವ ರೋಗಕಾರಕಗಳಲ್ಲಿ ಸುಮಾರು 61% ರಷ್ಟು ಪ್ರಾಣಿಜನ್ಯ ಸ್ವಭಾವದವು ಝೂನೋಸಿಸ್ (ಸಾಂಕ್ರಾಮಿಕ ರೋಗ) ಒಂದು ದೊಡ್ಡ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ ಹಾಗೂ ಇದು ನೇರ ಮಾನವನ ಆರೋಗ್ಯದ ಅಪಾಯವಾಗಿದೆ. ಇದು ಮನುಷ್ಯರ ಮತ್ತು ಪ್ರಾಣಿಗಳ ಸಾವಿಗೂ ಕಾರಣವಾಗಬಹುದು. ವಿಶ್ವಾದ್ಯಂತ 13 ಸಾಮಾನ್ಯ ಝೋನೊಸಿಸ್ ರೋಗಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಬಡ ಜಾನುವಾರು ಕಾರ್ಮಿಕರ ಮೇಲೆ ಹೆಚ್ಚು ಪರಿಣಾಮ ಬೀರಿವೆ ಹಾಗೂ ಮಾನವನ ಆರೋಗ್ಯದ ಮೇಲಿನ ನಕಾರಾತ್ಮಕ ಪರಿಣಾಮದ ಜೊತೆಗೆ ವರ್ಷಕ್ಕೆ ಅಂದಾಜು 2.4 ಶತಕೋಟಿ ಕಾಯಿಲೆಗಳು ಹಾಗೂ 2.7 ದಶಲಕ್ಷ ಮಾನವನ ಸಾವುಗಳಿಗೆ ಕಾರಣವಾಗಿವೆ ಎಂದು ಅಂದಾಜಿಸಲಾಗಿದೆ. ಈ ಹೆಚ್ಚಿನ ರೋಗಗಳು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಜಾನುವಾರು ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

ಪ್ರಾಣಿಗಳು ಮತ್ತು ಮಾನವರ ನಡುವೆ ರೋಗಗಳು ಹರಡಲು ಹಲವಾರು ಮಾರ್ಗಗಳಿವೆ. ಸೋಂಕಿತ ಪ್ರಾಣಿಗಳೊಂದಿಗಿನ ನೇರ ಸಂಪರ್ಕ ಅಥವಾ ಪರೋಕ್ಷ ಸಂಪರ್ಕದಿಂದ, ಸೋಂಕಿತ ಪ್ರಾಣಿಗಳ ಲಾಲಾ ರಸ, ರಕ್ತ, ಮೂತ್ರ ಮುಂತಾದ ದೇಹದ ದ್ರವಗಳ ಮೂಲಕ, ಪ್ರಾಣಿಗಳ ಕಡಿತ ಮತ್ತು ಗೀರುಗಳಿಂದ, ಸೋಂಕಿತ ಪ್ರಾಣಿಗಳ ತ್ಯಾಜ್ಯದಿಂದ ಕಲುಷಿತಗೊಂಡ ನೀರು ಅಥವಾ ಆಹಾರವನ್ನು ಸೇವಿಸುವುದರಿಂದಲೂ ಸೋಂಕು ಹರಡಬಹುದು. ಇದಲ್ಲದೆ, ಸೊಳ್ಳೆ, ಕೀಟ ಮುಂತಾದವುಗಳು ರೋಗಾಣುಗಳನ್ನು ಒಂದು ಜೀವಿಯಿಂದ ಇನ್ನೊಂದಕ್ಕೆ ಸಾಗಿಸುವ ವಾಹಕಗಳಾಗಿ ಕಾರ್ಯನಿರ್ವಹಿಸುವವು.

ಇನ್ನು ಪ್ರಾಣಿಗಳಿಂದ ಮಾನವನಿಗೆ ಹರಡುವ ರೋಗಗಳನ್ನು ಆಂಥ್ರೋಪೋಝೂನೋಸಿಸ್ ಎಂದೂ ಉದಾಹರಣೆ: ರೇಬಿಸ್, ಪ್ಮೇಗ್, ಲೆಪ್ಟೋಸ್ಪೈರೋಸಿಸ್‌; ಮನುಷ್ಯರಿಂದ ಪ್ರಾಣಿಗಳಿಗೆ ಹರಡುವ ರೋಗಗಳನ್ನು ಝೂಆಂಥ್ರೋಪೋಝೂನೋಸಿಸ್ ಎಂದೂ ಉದಾಹರಣೆಗೆ ಸ್ಟ್ರೆಪ್ಟೋಕಾಕಸ್‌, ಸ್ಟ್ಯಾಪೈಲೋಕಾಕಸ್‌, ಡಿಪ್ತಿರಿಯಾ ಹಾಗೂ ಮನುಷ್ಯರಿಂದ ಪ್ರಾಣಿಗಳಿಗೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳನ್ನು ಆಂಫಿಕ್ಸೆನೋಸಿಸ್ ಎಂದು ಉದಾಹರಣೆಗೆ ಸಾಲ್ಮೊನೆಲ್ಲೋಸಿಸ್‌, ಸ್ಟಫೈಲೋಕಾಕೋಸಿಸ್ ವರ್ಗೀಕರಿಸಲಾಗಿದೆ.

ಪ್ರಾಣಿಜನ್ಯ (ಝೂನೋಟಿಕ್ ) ರೋಗಗಳ ಹರಡುವಿಕೆಯ ಮೇಲೆ ಪರಿಣಾಮ ಬೀರುವ ಅಂಶಗಳು

·ಮಾನವ ಪರಿಸರದಲ್ಲಿ ತರುವ ಬದಲಾವಣೆಗಳು ಪರಿಸರ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರುತ್ತವೆ. ನಗರಾಭಿವೃದ್ಧಿಗಾಗಿ ಕೈಗಾರಿಕೀಕರಣ ಮತ್ತು ಅರಣ್ಯ ನಾಶ, ಜಲಾಶಯ (ಡ್ಯಾಮ್) ನಿರ್ಮಾಣ ಮುಂತಾದವುಗಳ ಮಾನವನ ವಿಸ್ತರಣಾ ಚಟುವಟಿಕೆಗಳಿಂದ ರಕ್ತ ಹೀರುವ ವೆಕ್ಟರ್ಸ್ಗಳ ಕಚ್ಚುವ ಅಭ್ಯಾಸಗಳು ಹಾಗೂ ರೋಗ ಹರಡುವ ಪ್ರಾಣಿಗಳ (ರಿಸರ್ವ್ವಯರ್ ಅನಿಮಲ್ಸ್) ಸಂಖ್ಯೆಯಲ್ಲಿ ಏರಿಳಿತವಾಗುವುದು.

·ಪ್ರಾಣಿಗಳ ಉಪ ಉತ್ಪನ್ನಗಳು ಮತ್ತು ತ್ಯಾಜ್ಯಗಳನ್ನು ನಿರ್ವಹಿಸುವುದು (ವೃತ್ತಿಪರ ಅಪಾಯಗಳು). ಉದಾಹರಣೆಗೆ ಕಾರ್ಪೆಟ್ ಮಾಡುವವರು ಮತ್ತು ಜಾನುವಾರು ಸಾಕಾಣಿಕೆದಾರರಲ್ಲಿ ಆಂಥ್ರಾಕ್ಸ್, ನೆಲ್ಲಿಕಾಯಿ ಗದ್ದೆ ಕೆಲಸಗಾರರಲ್ಲಿ ಲೆಪ್ಟೋಸ್ಫಿರೋಸಿಸ್, ಕೃಷಿ ಕೆಲಸಗಾರರಲ್ಲಿ ಲಿಶ್ಚೀರಿಯೋಸಿಸ್ ಮುಂತಾದವುಗಳು…

·ಮಾನವರ ಚಲನವಲನ ಹೆಚ್ಚಾಗುತ್ತಿರುವುದರಿಂದ, ಭೂ ಅಭಿವೃದ್ಧಿ, ಇಂಜಿನಿಯರಿಂಗ್ ಯೋಜನೆಗಳ ಕೆಲಸ, ಯಾತ್ರೆ, ಪ್ರವಾಸೋದ್ಯಮ ಮುಂತಾದವುಗಳಿಂದ ಜನರು ಕಲುಷಿತ ಆಹಾರ ಮತ್ತು ನೀರನ್ನು ಬಳಸುವುದು.

·ಪ್ರಾಣಿಗಳ ಉತ್ಪನ್ನಗಳಾದ ಉಣ್ಣೆ, ಮೂಳೆ ಹಿಟ್ಟು, ಮಾಂಸ ಇತ್ಯಾದಿಗಳ ವ್ಯಾಪಾರ ಹೆಚ್ಚಾದಾಗ ಕೆಲವು ಝೂನೋಟಿಕ್ ರೋಗಗಳು ಎಂಡಮಿಕ್ ಆಗಿರುವ ಪ್ರದೇಶಗಳಿಂದ ಬಂದು ಆ ರೋಗಗಳು ಹೊಸ ಪ್ರದೇಶಗಳಿಗೆ ಹರಡುವ ಸಾಧ್ಯತೆ ಇರುತ್ತದೆ

·ವೈರಸ್ ಸೋಂಕಿತ ಸೊಳ್ಳೆಗಳ ಸಾಗಾಣಿಕೆ: ವಿಮಾನ, ಹಡಗು, ರೈಲು, ಮೋಟಾರು ಮತ್ತು ಇತರ ವಾಹನಗಳು ವೈರಸ್ ಗಳನ್ನು ಹೊಸ ಪ್ರದೇಶಕ್ಕೆ ತರುತ್ತವೆ. ಉದಾಹರಣೆಗೆ ಹಳದಿ ಜ್ವರ, ಚಿಕನ್ ಗುನ್ಯಾ ಜ್ವರ, ಡೆಂಗ್ಯೂ ಜ್ವರ ಇತ್ಯಾದಿ…

·ಕೆಲವು ಸಾಂಸ್ಕೃತಿಕ ರೂಢಿಗಳು: ಉದಾಹರಣೆಗೆ ಕೀನ್ಯಾದಲ್ಲಿ ಕೆಲವು ಸಮುದಾಯಗಳು ಹೈಡಟಿಡೋಸಿಸ್ ನ ಸೋಂಕಿತ ಮಾನವ ದೇಹಗಳನ್ನು ನಾಯಿಗಳು ಮತ್ತು ಕತ್ತೆ ಕಿರುಬಗಳು ತಿನ್ನಲು ಬಿಡುವುದು ರೋಗದ ಹರಡುವಿಕೆಯ ಚಕ್ರವನ್ನು ಮುಂದುವರಿಸಲು ಸಹಾಯ ಮಾಡುತ್ತದೆ ಈ ಅಭ್ಯಾಸವು ರೋಗದ ಹರಡುವಿಕೆಯನ್ನು ಪ್ರಭಾವಿಸುವ ಒಂದು ಸಾಂಸ್ಕೃತಿಕ ರೂಢಿಯಾಗಿದೆ.

ಝೂನೋಟಿಕ್ ರೋಗಗಳು ಮತ್ತು ಭಾರತ

·ಭಾರತವು ಸಾರ್ವಜನಿಕ ಆರೋಗ್ಯದ ಪ್ರಮುಖ ಸಮಸ್ಯೆಯಾಗಿರುವ ಜಾಗತಿಕ ಹಾಟ್ ಸ್ಪಾಟ್ ಗಳಲ್ಲಿ ಒಂದಾಗಿದೆ. ಇದು ಹೆಚ್ಚಿನ ಪ್ರಮಾಣದ ಅನಾರೋಗ್ಯ ಹಾಗೂ ಸಾವಿಗೆ ಕಾರಣವಾಗುತ್ತದೆ.

·ಬ್ರುಸೆಲ್ಲೋಸಿಸ್ ನಂತಹ ಹೆಚ್ಚಿನ ಆದ್ಯತೆಯ ಝೂನೋಟಿಕ್ ರೋಗಗಳು ಹರಿಯಾಣದಿಂದ ಗೋವಾದದವರೆಗೆ ಕಾಣಿಸಿಕೊಂಡಿವೆ. ವೃತ್ತಿಪರ ಝೋನೋಟಿಕ್ ರೋಗವಾದ ಆಂಥ್ರಾಕ್ಸ್‌ ಪ್ರಸರಣ ಮತ್ತು ಹರಡುವಿಕೆಯು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.

·ಅಂತೆಯೇ ಜಾನುವಾರು ಟಿಬಿ ಜಾನುವಾರುಗಳ ದೀರ್ಘಕಾಲದ ಕಾಯಿಲೆಯಾಗಿದ್ದು, ಇದು ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆಯನ್ನು ಉಂಟುಮಾಡುತ್ತದೆ ಮತ್ತು ಭಾರತದಲ್ಲಿ ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಗಿದೆ.

·ಇದಲ್ಲದೆ ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಬ್ಯಾಕ್ಟೀರಿಯಾದ ರೋಗಗಳಿರುವ ದೇಶಗಳಲ್ಲಿ ಒಂದಾಗಿರುವುದರಿಂದ ಪ್ರತಿಜೀವಕಗಳು, ಅನಾರೋಗ್ಯ ಮತ್ತು ಸಾವನ್ನು ಮಿತಿಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿವೆ ಮತ್ತು ಪರಿಣಾಮವಾಗಿ ಆಂಟಿ ಮೈಕ್ರೋಬಿಯಲ್ ಪ್ರತಿರೋಧ ಪರಿಣಾಮಗಳನ್ನು ಹೊಂದಿದೆ.

·ಭಾರತದಲ್ಲಿ ಪ್ರಮುಖ ಸಾರ್ವಜನಿಕ ಆರೋಗ್ಯ ಝೂನೋಟಿಕ್ ರೋಗಗಳಲ್ಲಿ ರೇಬಿಸ್, ಬ್ರುಸೆಲ್ಲೋಸಿಸ್, ಟಾಕ್ಸೋಪ್ಲಾಸ್ಮೋಸಿಸ್‌, ಸಿಸ್ಟಿಸರ್ರ್ಕೋಸಿಸ್‌, ಎಕಿನೋಕಾಕೋಸಿಸ್‌, ಮಂಗನ ಕಾಯಿಲೆ, ನಿಪಾಹ್‌, ಜಪಾನೀಸ್‌ ಎನ್ಸೆಫಲೈಟಿಸ್‌, ಪ್ಲೇಗ್, ಲೆಪ್ಟೋಸ್ಪಿರೋಸಿಸ್‌, ಟ್ರಿಪ್ಯಾನೋಸೋಮಿಯಾಸಿಸ್‌ ಮತ್ತು ಕ್ರಿಮಿಯನ್- ಕಾಂಗೋ ಹಿಮೋರೋಜಿಕ್ ಜ್ವರ ಸೇರಿವೆ.

·ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಪ್ರಕಾರ ಸುಮಾರು 75% ಹೊಸದಾಗಿ ಕಾಣಿಸಿಕೊಳ್ಳುವ ಮತ್ತು ಮರು ಕಾಣಿಸಿಕೊಳ್ಳುವ ಸೋಂಕುಗಳು ಝೂನೋಟಿಕ್ ಆಗಿವೆ ಮತ್ತು ಹೊಸ ರೋಗಾಣುಗಳು (ವೈರಸ್ ಗಳು) ದೇಶಾದ್ಯಂತ ಹೊರಹೊಮ್ಮುತ್ತಿವೆ ಮತ್ತು ಹರಡುತ್ತಿವೆ.

ಭಾರತದಲ್ಲಿ ಪ್ರಾಣಿಜನ್ಯ ರೋಗಗಳನ್ನು ನಿಯಂತ್ರಿಸುವ ಸವಾಲುಗಳು

·ಹೆಚ್ಚುತ್ತಿರುವ ಜನಸಂಖ್ಯೆಯ ಕಾರಣ ಜನರ ಮತ್ತು ಪ್ರಾಣಿಗಳ ನಡುವಿನ ನಿಕಟ ಸಂಪರ್ಕವು ಹೆಚ್ಚುತ್ತಿರುವುದು ರೋಗಗಳ ಹರಡುವಿಕೆಗೆ ಕಾರಣವಾಗಬಹುದು.

·ಬಡತನ: ಬಡತನದಿಂದಾಗಿ ಜನರು ಪ್ರಾಣಿಗಳನ್ನು ಸಾಕಾಣಿಕೆ ಮಾಡುವುದರ ಮೇಲೆ ಹೆಚ್ಚು ಅವಲಂಬಿತವಾಗುತ್ತಾರೆ. ಇದರಿಂದಾಗಿ ಮಾನವ ಮತ್ತು ಪ್ರಾಣಿಗಳ ನಡುವಿನ ನಿಕಟ ಸಂಪರ್ಕವು ಕೆಲವು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

·ಅರಿವು: ಅರಿವಿನ ಕೊರತೆ ಅನೇಕ ಜನರು ಮೂಲಭೂತ ನೈರ್ಮಲ್ಯದ ಬಗ್ಗೆ ತಿಳಿದಿರುವುದಿಲ್ಲ. ಇದು ರೋಗಗಳ ಹರಡುವಿಕೆಗೆ ಕಾರಣವಾಗಬಹುದು.

·ಸರಿಯಾದ ಲಸಿಕೆ ಕಾರ್ಯಕ್ರಮಗಳ ಕೊರತೆ ಲಸಿಕಾ ಕಾರ್ಯಕ್ರಮಗಳು ಮತ್ತು ರೋಗನಿರ್ಣಯ ಸೌಲಭ್ಯಗಳ ಕೊರತೆಯಿಂದಾಗಿ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಕಷ್ಟವಾಗುತ್ತದೆ.

ಝೂನೋಟಿಕ್ ರೋಗಗಳನ್ನು ನಿಯಂತ್ರಿಸಲು ಏಕೀಕೃತ ರೋಗಗಳ ಕಣ್ಗಾವಲು ಕಾರ್ಯಕ್ರಮ, ರಾಷ್ಟ್ರೀಯ ಸೂಕ್ಷ್ಮಜೀವಿ ನಿರೋಧಕ ಪ್ರತಿರೋಧಕ ನಿಯಂತ್ರಣ ಕಾರ್ಯಕ್ರಮ, ರಾಷ್ಟ್ರೀಯ ವೈರಲ್ ಹೆಪಟ ತೈಟಿಸ್ ಖಂಡವನ್ನು ಕಣ್ಗಾವಲು ಕಾರ್ಯಕ್ರಮ, ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಅಂತರ ವಲಯ ಸಮನ್ವಯ, ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ, ಲೆಪ್ಟೋಸ್ಪೈರೋಸಿಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಉಪಸಂಹಾರ

·ಝೂನೋಸಿಸ್ ರೋಗಗಳು ಹೊಸದಾಗಿ ಪತ್ತೆಯಾದ ಸಾಂಕ್ರಾಮಿಕ ರೋಗಗಳು ಮತ್ತು ಅಸ್ತಿತ್ವದಲ್ಲಿರುವ ಸಾಂಕ್ರಾಮಿಕ ರೋಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತವೆ.

·ಮಾನವ-ಪ್ರಾಣಿ-ಪರಿಸರ ಇಂಟರ್ಫೇಸ್ ನಲ್ಲಿ ಸಾರ್ವಜನಿಕ ಆರೋಗ್ಯದ ಅಪಾಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ವಹಿಸಲು ಮತ್ತು ಜಾಗತಿಕ ಆರೋಗ್ಯ ಭದ್ರತೆಯನ್ನು ಸುಧಾರಿಸಲು ಕ್ರಾಸ್-ಸೆಕ್ಟೋರಲ್ ಸಹಯೋಗವು ಮುಖ್ಯವಾಗಿದೆ.

·ವೈದ್ಯರು, ಪಶು ವೈದ್ಯರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ನಡುವೆ ಸಮನ್ವಯವನ್ನು ಬಲಪಡಿಸುವುದು ಬಹುಮುಖ್ಯವಾದುದು.

·ದೇಶದ ಪ್ರತಿ ಜಿಲ್ಲೆ ಮತ್ತು ರಾಜ್ಯವು ರೋಗಕಾರಕಗಳು ಮತ್ತು ರೋಗಗಳ ಚಟುವಟಿಕೆಯ ಬಗ್ಗೆ ನೈಜ ಸಮಯದ ಡೇಟಾವನ್ನು ಸಂಗ್ರಹಿಸಲು ಗೊತ್ತು ಪಡಿಸಿದ ರಾಷ್ಟ್ರೀಯ ಪ್ರಧಾನ ಕಚೇರಿಗೆ ಉಪಗ್ರಹದ ಮೂಲಕ ಸಂಪರ್ಕ ಹೊಂದಿರಬೇಕು

·ಡಬ್ಲ್ಯೂ ಎಚ್ ಓ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ ಎ ಓ) ಮತ್ತು ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ (ಒಐಇ) ಯಂತಹ ಅಂತರಾಷ್ಟ್ರೀಯ ಸಂಸ್ಥೆಗಳು ಇಂತಹ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ವಿಸ್ತಾರವಾದ ಸಂಶೋಧನೆ ನಡೆಸಲು ನಿಕಟ ಸಹಯೋಗದಲ್ಲಿ ಕೆಲಸ ಮಾಡಬೇಕು.

ಡಾ. ವೀಣಾಕುಮಾರಿ ಎ. ಎನ್.‌,

ಕನ್ನಡದ ಬರಹಗಳನ್ನು ಹಂಚಿ ಹರಡಿ
4 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x