ಯಕ್ಷಗಾನವು ದೈವಾರಾಧನೆಯ ಮೂಲದಿಂದ ಉಗಮಿಸಿತು ಎಂಬುದು ವಿದ್ವಾಂಸರ ಅಂಬೋಣ. ಕಾಲ ಕ್ರಮದಲ್ಲಿ ನಾಟ್ಯ, ವೇಷಭೂಷಣ, ವಾಚನ, ಹಿಮ್ಮೇಳ, ರಂಗಸ್ಥಳ ಮೈಗೂಡಿಸಿಕೊಂಡು ಸರ್ವಾಂಗ ಸುಂದರ ಕಲಾ ಪ್ರಕಾರವಾಗಿ ಹೊರ ಹೊಮ್ಮಿತು. ಯಕ್ಷಗಾನಕ್ಕೆ ಭಾಗವತರ ಆಟ, ಬೆಳಕಿನ ಸೇವೆ ಎಂಬ ಹೆಸರು ಕೂಡ ಇದೆ. ಭಗವಂತನನ್ನು ಸ್ತುತಿಸುವವ ಭಾಗವತ. ಯಕ್ಷಗಾನ ದೇವರ ಆರಾಧನೆಯ ಜೊತೆ ಜೊತೆಗೆ ಮನೋರಂಜನೆ, ಕಲೆ, ಸಾಹಿತ್ಯಗಳ ಬೆಳವಣಿಗೆಗೆ ಪೂರಕವಾಗಿದೆ. ಯಕ್ಷಗಾನದಿಂದ ಜ್ಞಾನವರ್ಧನೆ, ನೀತಿ ಬೋಧನೆ ಪ್ರಾಪ್ತವಾಗುತ್ತದೆ. ಪ್ರಬುದ್ಧ ಕಲಾವಿದರ ಯಕ್ಷ ಸಂಭಾಷಣೆ ತರ್ಕ ಶಕ್ತಿ & ಬುದ್ಧಿ ಮತ್ತೆಗೆ ಗ್ರಾಸ ಒದಗಿಸುತ್ತದೆ. ಅವಿದ್ಯಾವಂತನು ಕೂಡ ಪೌರಾಣಿಕ ಕಥೆಗಳ ಬಗ್ಗೆ ಮಾಹಿತಿ ಗಳಿಸಿಕೊಳ್ಳುತ್ತಾನೆ.
ಯಕ್ಷಗಾನ ಸರ್ವಾ೦ಗ ಸುಂದರ, ನವರಸಭರಿತ, ಪವಿತ್ರ, ಪರಿಶುದ್ಧ, ದೈವಿಕ ಗಂಡು ಕಲೆ. ಭಾವ ಭಂಗಿ, ಗತ್ತು ಗಾಂಭೀರ್ಯ, ಜಾಪು, ಝರಿ, ಧೀರ ನಡೆ ನುಡಿ, ನಿಲುವು, ಶ್ರುತಿ, ರಾಗ, ತಾಳ, ದಾಟಿ, ಹಿಮ್ಮೇಳ, ಮುಮ್ಮೇಳಗಳ ಸಮತೋಲನದ ಹೂರಣ. ಸುಮದುರ ಗಾಯನ, ಸುಂದರ ವೇಷಭೂಷಣ, ಆಕರ್ಷಕ ನರ್ತನ, ವಿಶಿಷ್ಟ ಸಂಭಾಷಣೆ, ಅದ್ಭುತವಾದ ಕಥಾನಕ ಯಕ್ಷಗಾನದ ಅನರ್ಘ್ಯ ಸಂಪತ್ತು. ನಮ್ಮ ಹೆಮ್ಮೆಯ, ಹಿರಿಮೆ, ಗರಿಮೆ ಅಗ್ಗಳಿಕೆ ಮತ್ತು ಹೆಗ್ಗಳಿಕೆಯ ಭವ್ಯವಾದ ಕಲಾ ಪ್ರಕಾರ. ಸುಂದರಾತಿ ಸುಂದರವಾದ ತರೇವಾರಿ ಪಟ್ಟುಗಳು, ಮೂರೂ ತಿಟ್ಟುಗಳು ಕೆಲವು ಮಟ್ಟುಗಳ ಹಿರಿಮೆ ಯಕ್ಷಗಾನಕ್ಕಿದೆ.
ಭಾಗವತಿಕೆ ಯಕ್ಷಗಾನದ ಪ್ರದಾನ ಅಂಗ. ಒಂದೇ ಪದ್ಯವನ್ನು ಬೇರೆ ಬೇರೆ ಭಾಗವತರು ಬೇರೆ ಬೇರೆ ದಾಟಿಗಳಲ್ಲಿ ಹಾಡುತ್ತಾರೆ. ಭಾಗವತರು ಒಂದನೇ ವೇಷಧಾರಿ, ಸಂಪೂರ್ಣ ಯಕ್ಷ ನಡೆಯ ಸೂತ್ರದಾರರು, ಸಂದರ್ಭ ಬಂದರೆ ಪಾತ್ರಧಾರಿಗಳ ತಪ್ಪನ್ನು ತಿದ್ದಿ ಸರಿಪಡಿಸಿ ಪ್ರದರ್ಶನವನ್ನು ಚಂದಗಾಣಿಸುತ್ತಾರೆ. ಭಾಗವತರು ಪದ್ಮಾಸನದಲ್ಲಿ ಕೆಲವಾರು ಘಂಟೆಗಳ ಕಾಲ ಕುಳಿತುಕೊಳ್ಳುವುದು ತುಂಬಾ ತ್ರಾಸದಾಯಕ. ಭಾಗವತರಿಗೆ ಮತ್ತು ಮದ್ದಳೆವಾದಕರಿಗೆ ಬೆನ್ನಿನ ಹಿಂಬದಿಗೆ ಆಸರೆ ನೀಡುವ ಪೀಠೋಪಕರಣದ (ಸ್ವಾಮೀಜಿಗಳ ಪೀಠದಂತೆ ಇರುವ ) ಅಗತ್ಯ ಇದೆ. ಹಾಗೆ ಫ್ಯಾನ್ ಅಥವಾ ಕೂಲರಿನ ವ್ಯವಸ್ಥೆ ಕೂಡ ಮಾಡ ಬಹುದು. ಎಲ್ಲ ವಿಷಯದಲ್ಲಿ ಯಕ್ಷಗಾನದಲ್ಲಿ ಸಾಕಷ್ಟು ಸುಧಾರಣೆ ಆಗಿದೆ ಆದರೆ ಭಾಗವತರ ಮತ್ತು ಮದ್ದಳೆವಾದಕರ ಆಸನ ಸುಧಾರಣೆ ಮಾಡುವ ವಿಷಯದಲ್ಲಿ ದಿವ್ಯ ನಿರ್ಲಕ್ಷ್ಯ ತೋರಲಾಗಿದೆ.
ಯಕ್ಷಗಾನ ನಿಂತ ನೀರಾಗಿರದೆ ತನ್ನ ಪಯಣ ಪಥದಲ್ಲಿ ಸಾಕಷ್ಟು ಸುಧಾರಣೆ, ಬದಲಾವಣೆ, ಮಾರ್ಪಾಡು ಮತ್ತು ಪ್ರಯೋಗಗಳಿಗೆ ನೂಕಲ್ಪಟ್ಟಿದೆ. . ನಿರಂತರವಾಗಿ ಹೊಸ ಹೊಸ ಆವಿಷ್ಕಾರಕ್ಕೆ ತನ್ನನ್ನು ಸಮರ್ಪಿಸಿಕೊಂಡಿದೆ ಕೆಲವು ಪೂರಕವಾದರೆ ಹಲವು ಮಾರಕ. ಅಲ್ಲಲ್ಲಿ ನವೀನತೆಯನ್ನು ಸೇರಿಸಿಕೊಂಡರೆ, ಹಳೆಯದನ್ನು ಕಡೆಗಣಿಸಲಾಗಿದೆ ಇಲ್ಲವೇ ಮೊಟಕುಗೊಳಿಸಿಲಾಗಿದೆ. ಉದಾಹರಣೆಗೆ ಪೂರ್ವ ರಂಗ & ಬಣ್ಣದ ವೇಷ ಬಲಿಪಶುವಾಗಿದೆ. ಮೂಲ ಸಂಪ್ರದಾಯ ಮತ್ತು ಪರಂಪರೆಗೆ ದಕ್ಕೆಯಾಗದಂತೆ ಹಳೆಯ ಬೇರು ಹೊಸ ಚಿಗುರು ಜೊತೆಗೂಡಿದರೆ ಚೆನ್ನ. ಹೊಸತನಕ್ಕೆ ತುಡಿಯುದು ಮನುಷ್ಯ ಸಹಜ ಪ್ರವೃತ್ತಿ. ಪರಿವರ್ತನಶೀಲ ಪ್ರಪಂಚದಲ್ಲಿ ಸುಧಾರಣೆ ಅಗತ್ಯ ಮತ್ತು ಅನಿವಾರ್ಯ. ಕೂಡ. ಕಾಲಕ್ಕೆ ತಕ್ಕಂತೆ ಕೋಲ. ಬದಲಾವಣೆ ಎಂಬುದು ನಾಳೆಯ ಗಟ್ಟಿತನಕ್ಕೆ ಇಂದಿನ ಅಡಿಪಾಯ ನಿನ್ನೆಯಲ್ಲಿ ಹುದುಗಿರುವ ಮೂಲ ಪರಂಪರೆಯ ಸತ್ತ್ವದ ಸಾರದ ಮೂಲ ತಾಯಿ ಬೇರಿಗೆ ಪೂರಕವಾದ ಬದಲಾವಣೆಯ ಗೊಬ್ಬರ & ನೀರನಿತ್ತು ಪೋಷಿಸಿ ಉಳಿಸಿ ಬೆಳೆಸುವ ಪ್ರಕ್ರಿಯೆಯಾಗಿರಬೇಕೇ ಹೊರತು ಮೂಲ ಪರಂಪರೆಯನ್ನು ಹಾಳುಗೆಡವುದಲ್ಲ. ನಿಂತ ನೀರಾಗಿದ್ದರೆ ಯಕ್ಷಗಾನ ಇಂದು ಇಷ್ಟೊಂದು ಸಮೃದ್ಧ ಶ್ರೀಮಂತ ಕಲೆಯಾಗಿ ಬೆಳೆಯುತ್ತಿರಲಿಲ್ಲ. ಅದು ದೇವರನ್ನು ಸ್ತುತಿಸುವಲ್ಲಿಗೆ ಸೀಮಿತವಾಗಿರುತಿತ್ತು.
ಯಕ್ಷ ಸೀಹ್ವಲೋಕನ ಮಾಡಿದಾಗ ಅದರ ಹುಟ್ಟಿನ ಕಥೆ, ಬಯಲು ರಂಗಸ್ಥಳ, ಪುಂಗಿ ನಾದ, ದೊಂದಿ ಬೆಳಕು, ಪೆಟ್ರೋಮ್ಯಾಕ್ಸ್, ಧ್ವನಿವರ್ಧಕ ರಹಿತ, ಚಂಡೆ ರಹಿತ, ಕಲಾವಿದರ ಕಾಲ್ನಡಿಗೆ ಇತ್ಯಾದಿ ಯಕ್ಷ ಸಾಗರ ಬಗೆದಷ್ಟು ಸ್ವಾರಸ್ಯಪೂರ್ಣ ಮತ್ತು ಕುತೂಹಲಭರಿತ ಮಾಹಿತಿಗಳ ಯಕ್ಷ ರಸ ಜೋಳಿಗೆ ತೆರೆದುಕೊಳ್ಳುತ್ತದೆ.
ಹಿಂದೆ ಜಮಖಾನದ ಬದಲು ರಂಗಸ್ಥಳಕ್ಕೆ ಭತ್ತದ ಹೊಟ್ಟನ್ನು ಹಾಕಿ ನುಣುಪುಗೊಳಿಸುತ್ತಿದರು. ಭತ್ತ ಬಡಿಯಲು ಬಳಸುವ ಹಡಿಮಂಚವೇ ಭಾಗವತರು & ಮದ್ದಲೆಯವರಿಗೆ ಪೀಠವಾಗಿತ್ತು. ಹಿಂದೆ ಹುರಿ ಚೆಂಡೆ ಹೊಡೆದು ಯಕ್ಷಗಾನ ಪ್ರದರ್ಶನ ಇರವುದನ್ನು ಪ್ರಚುರ ಪಡಿಸುತ್ತಿದ್ದರಂತೆ. ಚಂಡೆಯ ಸದ್ದನ್ನು ಆಲಿಸಿ ಸುತ್ತೂರಿನಿಂದ ಪ್ರೇಕ್ಷಕರು ಬರುತ್ತಿದ್ದರಂತೆ. ಸಂಪರ್ಕ ಸಾದನಗಳು ಇಲ್ಲದ ಅಂದು ನಿದ್ದೆಗಣ್ಣಿನಲ್ಲಿ ಕಲಾವಿದರು ಮತ್ತು ಸಹಾಯಕರು ಮೈಲುಗಟ್ಟಲೆ ನಡೆದು ಹೋಗ ಬೇಕಿತ್ತು. ಸಹಾಯಕರು ಯಕ್ಷ ಪರಿಕರ ತುಂಬಿದ ಭಾರವಾದ ಬೆತ್ತದಿಂದ ಮಾಡಿದ ಮೇಳದ ಪೆಟ್ಟಿಗೆಯನ್ನು ತಲೆಯ ಮೇಲೆ ಹೊತ್ತು ಸಾಗಿಸುತ್ತಿದ್ದರು. ನಿದ್ದೆಯ ಮಂಪರು, ಪ್ರಯಾಣದ ಆಯಾಸ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೂ ಕೂಡ ಯಕ್ಷ ಕಲಾ ಸೇವೆಯನ್ನು ನಿಷ್ಠೆಯಿಂದ ಗೈಯುತ್ತಿದ್ದರು. ಒಮ್ಮೆ ಯಕ್ಷಲೋಕ ಪಯಣ ಹೊರಟರೆ ಕಲಾವಿದರು ಮನೆ ಸೇರುವುದು ವಾರ್ಷಿಕ ಪಯಣ ಮುಗಿದ ನಂತರ. ಬಣ್ಣದ ವೇಷದವರು ಸಂಜೆಯಾಗುತ್ತಲೇ ಬಣ್ಣ ಬಳಿದುಕೊಳ್ಳಲು ಕುಳಿತುಕೊಳ್ಳುತ್ತಿದ್ದರು. ಬಣ್ಣದ ವೇಷದ ಅಬ್ಬರದ ಪ್ರವೇಶ & ವಿಶೇಷವಾದ ಬಣ್ಣದ ವೇಷದ ತೆರೆ ಕುಣಿತ ಮನಮೋಹಕವಾಗಿರುತ್ತಿತ್ತು. ವೇಷಧಾರಿಗಳು ಘಂಟೆಗಟ್ಟಲೆ ಮುಂಡಾಸಿನ ಅಟ್ಟೆ ಮೇಲೆ ಅಟ್ಟೆ ಕಟ್ಟುತ್ತಾ ಸುಂದರ ಸ್ವರೂಪ ನೀಡುತ್ತಿದ್ದರು.
ಕೆಲವು ದಶಕಗಳ ಹಿಂದೆ ಯಕ್ಷಗಾನವೇ ಪ್ರದಾನ ಮನೋರಂಜನೆಯ ಮಾಧ್ಯಮವಾಗಿತ್ತು. ಟಿವಿ ಮತ್ತು ಮೊಬೈಲುಗಳ ಹಾವಳಿ ಇಲ್ಲದ ಕಾರಣ ಜನಮನದಲ್ಲಿ ಯಕ್ಷಗಾನ ಹಾಸುಹೊಕ್ಕಾಗಿತ್ತು ಅದಕ್ಕೆ ಅಂಥ ದಿವ್ಯ ಶಕ್ತಿ ಇದೆ. ಒಂದು ಕಾಲಮಾನದಲ್ಲಿ ಅನೇಕ ಡೇರೆ ಮೇಳಗಳು ವಿಜೃಂಬಿಸುತ್ತಿದ್ದವು. ನೂತನ ಪ್ರಸಂಗಗಳ ಭರಾಟೆ ಜೋರಾಗಿತ್ತು ಮತ್ತು ಪೌರಾಣಿಕ ಪ್ರಸಂಗಗಳು ಬಹಳ ಅಪರೂಪವಾಗಿದ್ದವು. ಆದರೆ ಇಂದು ಹಲವು ಸಂಖ್ಯೆಗಳಲ್ಲಿ ಇದ್ದ ಡೇರೆ ಮೇಳಗಳು ಬೆರಳೆಣಿಕೆಗೆ ಇಳಿದಿವೆ.
ಯಕ್ಷ ಸಂಭಾಷಣೆ ಎಂದರೆ ಕೇವಲ ಊರು ಹೊಡೆದು ಒಪ್ಪಿಸುವ ಗಿಣಿಪಾಠ ಅಲ್ಲ. ಸ್ಪುಟವಾದ, ವಿಶಿಷ್ಟ ಶೈಲಿಯ ಭಾಷಾ ಪರಿಶುದ್ಧತೆ ಮೈಗೂಡಿಸಿಕೊಂಡಿರುವ ನಿರರ್ಗಳ ಮಾತುಗಾರಿಕೆ ಯಕ್ಷಗಾನದ ಮುಕುಟಕ್ಕೆ ಸ್ವರ್ಣ ಗರಿ. ಒಮ್ಮೊಮ್ಮೆ ಮಾತಿಗೆ ಮಾತು ಬೆಳೆದು ಸಂಭಾಷಣೆ ಕಥಾ ಚೌಕಟ್ಟಿನಿಂದ ಆಚೆ ಸಾಗಿ ಅಡ್ಡ ದಾರಿ ಹಿಡಿದು ಎದುರಾಳಿ ತಬ್ಬಿಬ್ಬಾಗುವ ಅಥವಾ ಪರಿಸ್ಥಿತಿ ವಿಕೋಪಕಕ್ಕೆ ಹೋಗುವ ಸಂದರ್ಭ ಕೂಡ ಎದುರಾಗುತ್ತದೆ. ಮಾತುಗಾರಿಕೆಯ ಸ್ವಾತಂತ್ರ್ಯ ಅದರ ವಿಶೇಷತೆ ಆದರೂ ಕೂಡ ಯಕ್ಶಗಾನದ ಕಥಾವಸ್ತು ಘನತೆ ಮತ್ತು ಗೌರವಕ್ಕೆ ಒಪ್ಪುವ ಸಂಭಾಷಣೆ ಅಗತ್ಯ. ಪ್ರತ್ಯುತ್ಪನ್ನ ಪ್ರೌಢಿಮೆ ಯಕ್ಷ ಸಂಭಾಷಣೆಯ ಉನ್ನತಿಗೆ ಪೂರಕ. ಇದು ತರ್ಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಂಭಾಷಣೆಯಲ್ಲಿ ಸಾಹಿತ್ಯದ ಅಳವಡಿಕೆ ಪಲ್ಯಕ್ಕೆ ಹಾಕಿದ ಒಗ್ಗರಣೆಯಂತೆ ಯಕ್ಷ ರಸ ಸ್ವಾದವನ್ನು ಇಮ್ಮಡಿಸುತ್ತದೆ.
ಬಡಗು ತಿಟ್ಟಿನ ಯಕ್ಶಗಾನದ ವೇಷಭೂಷಣ ಅತ್ಯಂತ ಸುಂದರ, ನಯನ ಮನೋಹರ, ಕಣ್ಮನ ಸೆಳೆದು, ಎಂಥ ಅರಸಿಕರನ್ನು ಕೂಡ ಮಂತ್ರಮುಗ್ದಗೊಳಿಸುವ ಶಕ್ತಿ ಇದೆ. ಅದರ ಸ್ವರೂಪದ ರೂಪುರೇಷೆಯನ್ನು ವಿನ್ಯಾಸಗೊಳಿಸಿದ ರೂವಾರಿಯ ಅದ್ಬುತ ಕಲ್ಪನ ಶಕ್ತಿಗೆ ತಲೆ ತೂಗಲೇ ಬೇಕು. ಅದರ ಭವ್ಯತೆ & ಸುಂದರತೆ ಇತರ ಭಾಷಿಗರನ್ನು ಅಲ್ಲದೆ ವಿದೇಶಿಗರ ಮನ ಸೂರೆಗೊಂಡಿದೆ. ವೇಷಭೂಷಣ ತೊಟ್ಟ ಕಲಾವಿದ ಸುಂದರ ಮದನ ರೂಪ ತಾಳುತ್ತಾನೆ. ವೇಷದಾರಿ ತನಗೆ ತಾನೇ ಪ್ರಸಾದನಕರ್ತನಾಗಿರುವುದು ಇಲ್ಲಿಯ ವಿಶೇಷತೆ.
ಪೌರಾಣಿಕ ಪ್ರಸಂಗಗಳೇ ಯಕ್ಷಗಾನಕ್ಕೆ ಸೂಕ್ತ. ನೋಡಿದ್ದನ್ನೇ ನೋಡಿ ಪ್ರೇಕ್ಷಕರು ಬೋರುಗೊಳ್ಳುತ್ತಾರೆ. ಹಿಂದು ಧರ್ಮದಲ್ಲಿ ಉಲ್ಲೇಖಿಸರುವ ೧೮ ಪುರಾಣದಲ್ಲಿ ಅತ್ಯಂತ ಸ್ವಾರಸ್ಯಕರ, ಕುತೂಹಲಭರಿತ, ರೋಮಾಂಚನಕಾರಿ, ಸುಂದರಾತಿಸುಂದರ ಕಥಾ ವಸ್ತುಗಳಿವೆ. ಅವುಗಳನ್ನು ಯಕ್ಷಗಾನಕ್ಕೆ ಅಳವಡಿಸಿಕೊಂಡರೆ ಪ್ರೇಕ್ಷಕರು ಖಂಡಿತ ಮೆಚ್ಚಿಕೊಳ್ಳುತ್ತಾರೆ. ಇತ್ತೀಚಿನ ದಿನಗಲ್ಲಿ ಸ್ಥಾನಿಕ ದೈವ ಮಹಾತ್ಮೆ ಪ್ರಸಂಗಗಳು ಜನ ಮನ ಸೂರೆಗೊಳ್ಳುತ್ತಿವೆ. ಆದರೆ ಅದು ಇಂದು ಅತಿಯಾಗಿ ಕೋಲದ ರೂಪ ಪಡೆದುಕೊಳ್ಳುತ್ತಿದೆ. ಯಾವುದೇ ಪ್ರಸಂಗ ಇರಲಿ ಲೀಲಾಜಾಲವಾಗಿ ಪ್ರಸ್ತುತಪಡಿಸುವ ಪ್ರೌಢಿಮೆ ಯಕ್ಷಗಾನ ಕಲಾವಿದರಿಗೆ ಇದೆ. ಇಂಥ ಅದ್ಬುತ ಕಲೆಗಾರಿಕೆಗೆ ಭೇಷ್ ಎನ್ನಲೇ ಬೇಕು. ಯಕ್ಷ ಪ್ರಸಂಗಗಳು ಕನ್ನಡ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕೂಡ ಶ್ರೀಮಂತಗೊಳಿಸಿವೆ. ನವರಸಭರಿತ ಯಕ್ಷ ಕಥಾನಕ, ಛಂದಸ್ಸು, ಅಲಂಕಾರ, ವ್ಯಾಕರಣ, ಪ್ರಾಸಗಳಿಂದ ಕೂಡಿದ ಯಕ್ಷಗಾನ ಪ್ರಸಂಗ, ಪದ್ಯ ಮತ್ತು ಸಂಭಾಷಣೆಗಳು ಸಾಹಿತ್ಯ ಸಮೃದ್ಧ ಮತ್ತು ಅರ್ಥಗರ್ಬಿತವಾಗಿವೆ.
ಯಕ್ಷ ಕಲಾರಾಧನೆ ಎಂದರೆ ತಪಸ್ಸು ಇದ್ದ ಹಾಗೆ ಮತ್ತು ಕಲಾವಿದ ಯಕ್ಷ ತಪಸ್ವಿ. ಇದೊಂದು ಸಾಧನೆ ಕೂಡ ಹೌದು. ಯಕ್ಷಗಾನದ ಘನತೆಯನ್ನು ಏತ್ತರಿಸುವಲ್ಲಿ ಕಲಾವಿದರ ಕೊಡುಗೆ ಅಪಾರ. ಅನೇಕ ದಿಗ್ಗಜ ಕಲಾವಿದರು ಯಕ್ಷಗಾನವನ್ನು ಬೆಳೆಸಿ, ಉಳಿಸಿ ತಮ್ಮ ಪಾಂಡಿತ್ಯದ ಛಾಪನ್ನು ಅಮರಗೊಳಿಸಿದ್ದಾರೆ. ಯಾವುದೇ ಪ್ರಸಂಗದ ಎಲ್ಲ ಪದ್ಯ ಅರ್ಥ & ಸಂದರ್ಭವನ್ನು ಕ್ಷಣಾರ್ಧದಲ್ಲಿ ಪ್ರಸ್ತುತಪಡಿಸುವ ಪ್ರಬುದ್ಧ ಕಲಾವಿದರು ಕೂಡ ಇದ್ದಾರೆ. ಪ್ರೌಢ ಕಲಾವಿದರನ್ನು ಯಕ್ಷ ಲೋಕ ನಿರಂತರವಾಗಿ ಸ್ಮರಿಸುತ್ತದೆ. ಅವರನ್ನು ಅನುಸರಿಸುವ ಪ್ರಯತ್ನ ಕೂಡ ನಡೆಯುತ್ತದೆ. ಕಲಾವಿದರನ್ನು ತುಂಬಾ ಗೌರವ & ಅಭಿಮಾನಗಳಿಂದ ನೋಡುವ ಪರಿಪಾಠ ಇನ್ನು ಕೂಡ ಇದೆ.
ಇತ್ತೀಚಿಗೆ ಹರಕೆ ಮೇಳದ ಆಟಗಳು ವಿಜೃಂಭಿಸುತ್ತಿವೆ. ಮೇಳಗಳು ತಮ್ಮ ಬೇಡಿಕೆಗೆ ಅನುಗುಣವಾಗಿ ಟಿಸಿಲೊಡೆದಿವೆ. ಮಳೆಗಾಲದ ಹರಕೆ ಆಟಗಳು ಪ್ರಾರಂಭಗೊಂಡಿವೆ. ಆದರೂ ಎಷ್ಟೋ ವರ್ಷಗಳಿಗೆ ಮುಂಗಡ ಬುಕ್ ಆಗಿದೆ. ದೈವ ಮತ್ತು ದೇವಸ್ಥಾನಗಳ ಆಶ್ರಯ, ಹಿನ್ನಲೆ ಮತ್ತು ಜನರ ನಂಬಿಕೆ ಯಕ್ಷಗಾನದ ಅಸ್ತಿತ್ವ & ಉಳಿವಿಗೆ ಅತಿ ದೊಡ್ಡ ವರವಾಗಿ ವರದಾನವಾಗಿದೆ.
ದೇಶ ವಿದೇಶಗಳಲ್ಲಿನೆಲೆಸಿರುವ ಯಕ್ಷ ಪ್ರಿಯ ಕರಾವಳಿ ಕನ್ನಡಿಗರು ಕಲಾವಿದರನ್ನು ಕರೆಸಿಕೊಂಡು ಆಟ ಆಡಿಸಿ ಯಕ್ಷ ರಸ ಸ್ವಾದವನ್ನು ಸವಿಯುತ್ತಾರೆ. ಇದರಿಂದ ಕಲಾವಿದರಿಗೆ ಮಳೆಗಾಲದ ಬಿಡುವಿನ ಸಮಯದ ಸದುಪಯೋಗವಾಗಿ ಆರ್ಥಿಕ ಬೆಂಬಲ ಕೂಡ ದೊರಕುತ್ತದೆ. ಹರಕೆ ಬಯಲಾಟಗಳು ಬ್ರಹತ್ ವಾಣಿಜ್ಯ ಉದ್ಯಮದಂತೆ ಬೆಳೆದಿವೆ. ಈಗ ಹರಕೆ ಆಟ ಆಡಿಸವುದು ಒಂದು ರೀತಿಯ ಫ್ಯಾಷನ್ & ಸ್ಪರ್ಧೆಯಂತೆ ಭಾಸವಾಗುತ್ತಿದೆ. ಸೇವೆ ಆಟಗಳಲ್ಲಿ ಭಯಭಕ್ತಿಗಳಿಗಿಂತ ಆಡಂಬರ, ತೋರಿಕೆ, ಬೂಟಾಟಿಕೆ ಮತ್ತು ದೊಡ್ಡಸ್ತಿಕೆಯ ಪ್ರದರ್ಶನ ನಿಚ್ಚಳವಾಗಿದೆ. ಹರಕೆ ಆಟ ಆಡಿಸುವವರು ಕೈ ಬಿಚ್ಚಿ ಖರ್ಚು ಮಾಡುತ್ತಾರೆ. ಅದರಲ್ಲಿ ಹೆಚ್ಚಿನ ಪಾಲು ಕಲಾವಿದರಿಗೆ ಸಂದಾಯವಾದರೆ ಆರ್ಥಿಕವಾಗಿ ಸಹಾಯವಾಗುತ್ತದೆ. ಕಲಾವಿದರು & ಪ್ರಕ್ಷಕರ ಕೊರತೆ ಡಾಳಾಗಿ ಗೋಚರಿಸುತ್ತಿದೆ. ಪ್ರೇಕ್ಷಕರು ನಡುರಾತ್ರಿ ಕಳೆಯುವ ಮೊದಲೇ ಜಾಗ ಖಾಲಿ ಮಾಡುತ್ತಾರೆ. ಸಾಕಷ್ಟು ಪ್ರೇಕ್ಷಕರು ಇದ್ದರೂ ಕೂಡ ಪ್ರಸಂಗವನ್ನು ಆದಷ್ಟು ಮೊಟಕುಗೊಳಿಸಿ ಬೆಳಗಿನ ಜಾವಾ ನಾಲ್ಕೂವರೆಗೆ ಕಡ್ಡಾಯವಾಗಿ ಮಂಗಳ ಹಾಡುತ್ತಾರೆ. ಕಾಲಮಾನಕ್ಕೆ ತಕ್ಕಂತೆ ಪೂರ್ಣರಾತ್ರಿ ಯಕ್ಷಗಾನದಿಂದ ಕಾಲಮಿತಿ ಬಂದಿದೆ. ಇನ್ನು ಮುಂದಿನ ದಿನಗಳಲ್ಲಿ ಇದು ಮುಂದುವರಿದು ಇನ್ನೂ ಮೊಟಕುಗೊಂಡು ಟೆಸ್ಟ್ ಮಾಚ್ನಿಂದ ಒನ್ ಡೇ, ಒನ್ ಡೇಯಿಂದ ೨೦-೨೦ ಮ್ಯಾಚ್ನನಂತೆ ಆಗಬಹುದು. ಈಗ ದೇವಸ್ಥಾನಗಳಲ್ಲಿ ಮಳೆಗಾಲದ ಯಕ್ಷಗಾನ ನಡೆದಂತೆ ಮುಂದೆ ಸಾಂಕೇತಿಕ ಯಕ್ಷಗಾನ ನಡೆದರೂ ಅಚ್ಚರಿ ಇಲ್ಲ. ಅಥವಾ ಆನ್ ಲೈನ್ ಹರಕೆ ಆಟ ಪ್ರಾರಂಭವಾಗಬಹುದು. ಯಕ್ಷಗಾನವನ್ನು ಚಿತ್ರೀಕರಿಸಿ ಪರದೆಯ ಮೇಲೆ ಬಿತ್ತರಿಸುವ ದಿನ ಕೂಡ ಬರಬಹುದು.
ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಯಕ್ಷಗಾನ ಇಷ್ಟೊಂದು ಬೇರೂರಿದರೂ ಕೂಡ ಅನ್ಯ ಭಾಷಿಗರಿಗೆ ಇದರ ಪರಿಚಯ ಅಷ್ಟಕಷ್ಟೆ. ಮೂಲದಿಂದ ಒಂದಿನಿತು ಬದಲಾವಣೆ ಕಾಣದ & ಅಷ್ಟೇನು ಪ್ರಚಾರ ಇಲ್ಲದ ಕೇರಳದ ಕಥಕಳಿಯನ್ನು ದೇಶದ ಯಾವ ಭಾಗದ ಜನರು ಕೂಡ ತುಂಬಾ ಸುಲಭವಾಗಿ ಗುರುತಿಸುತ್ತಾರೆ. ಯಕ್ಷಗಾನದ ಹಿರಿಮೆ ಮತ್ತು ಗರಿಮೆಗಳನ್ನು ದೇಶ ಮತ್ತು ವಿದೇಶಗಳಲ್ಲಿ ಪ್ರಚುರ ಪಡಿಸಿ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹರಿಸುವ ಅಗತ್ಯ ಇದೆ. ಯಕ್ಷಗಾನವನ್ನು ವಿಶ್ವಗಾನಗೊಳಿಸುವ ನಿಟ್ಟಿನಲ್ಲಿ ಶಿವರಾಮ ಕಾರಂತರು ಪ್ರಯತ್ನಿಸಿದ್ದರು.
ಯಕ್ಷಗಾನಮ್ ವಿಶ್ವಗಾನಂ. ಯಕ್ಷಗಾನಮ್ ಗೆಲ್ಗೆ. ಯಕ್ಷಗಾನ ಅಚಂದ್ರಾರ್ಕವಾಗಿ ಬೆಳಗಲಿ. ಯಕ್ಷಗಾನಕ್ಕೆ ಅಜರಾಮರ ಅದಕ್ಕೆ ಅಳಿವಿಲ್ಲ.
-ದಿನೇಶ್ ಕೆ ನಾಯಕ್
