“ಯುದ್ದಕ್ಕೂ ಸಿದ್ದ ಶಾಂತಿಗೂ ಬದ್ದ”: ಚಲುವೇಗೌಡ ಡಿ ಎಸ್

ನಾವು ಭಾರತೀಯರು, ಭಾರತಾಂಬೆಯ ಮಡಿಲಲಿ ಜೀವಿಸುತ್ತಿರುವ ಮಕ್ಕಳು, ಶಾಂತಿ, ಸೌಹಾರ್ದತೆ, ತ್ಯಾಗ, ಕರುಣೆ, ಮಮತೆ, ಏಕತೆ, ಧರ್ಮ ಸಹಿಷ್ಣುತೆ ಹಾಗೂ ಪರಸ್ಪರ ಸಹಕಾರ ಮನೋಭಾವನೆ ಪ್ರಜೆಗಳುಳ್ಳ ಬೃಹತ್ ರಾಷ್ಟ್ರ ನಮ್ಮದು. ಸರ್ವ ಧರ್ಮಗಳನ್ನು ಸಮಾನವಾಗಿ ಕಾಣುವ, ಅರಸಿ ಬಂದವರಿಗೆ ಆಶ್ರಯ ನೀಡುವ, ಮಾನವೀಯ ಗುಣಗಳನ್ನು ಹೊಂದಿರುವ ಶಾಂತಿಪ್ರಿಯವಾದ ರಾಷ್ಟ್ರ ನಮ್ಮದು. ನಾವು ನಮ್ಮ ಪಾಡಿಗೆ ಯಾವ ರಾಷ್ಟ್ರದ ತಂಟೆಗೂ ಹೋಗದೆ ಶಾಂತಿಯಿಂದ ಬದುಕು ಸಾಗಿಸುತ್ತಿದ್ದೆವು ಆದರೂ ನಮ್ಮ ಭಾರತಾಂಬೆಯ ನೆಲಕ್ಕೆ ಕಾಲಿಟ್ಟ ಉಗ್ರರಕ್ಕಸರು ಭಾರತಮಾತೆಯ ಪುತ್ರರ ಕೊಂದು ಹೆಣ್ಣು ಮಕ್ಕಳ ಸಿಂಧೂರವನು ಅಳಿಸಿಬಿಟ್ಟರು. ಶಾಂತಿಯಿಂದ ಇದ್ದಂತಹ ಪ್ರತಿಯೊಬ್ಬ ಭಾರತೀಯರ ಎದೆಯಲಿ ನೆತ್ತರು ಕುದಿಯುವಂತೆ ಮಾಡಿಬಿಟ್ಟರು.

ಪುಲ್ವಮಾ ದಾಳಿಯಿಂದ ಭಾರತಾಂಬೆಯ ನಲವತ್ತು ಅಮೂಲ್ಯ ಜೀವಗಳು ಹೋದವು ಆಗಲೇ ಇವರ ಸಂಹಾರ ಮಾಡಿ ಉಗ್ರರ ಹುಟ್ಟಡಗಿಸಬೇಕಿತ್ತು. ಅಂದು ಭಾರತ ಇವರಿಗೆ ಪ್ರಾಣಭಿಕ್ಷೆಯನು ನೀಡಿದ ಫಲವಾಗಿ ಇನ್ನೂ ಹಲವು ಅಮೂಲ್ಯ ಪ್ರಾಣಗಳ ಕಸಿದುಕೊಳ್ಳಲು ಹಾದಿಯಾಯಿತು. ನರಿಬುದ್ಧಿಯ ಪಾಕಿಸ್ತಾನಕ್ಕೆ ಬದ್ಧತೆ ಹಾಗೂ ಮಾನವೀಯತೆಯೆಂಬುದೆ ಇಲ್ಲ.
ಉಗ್ರರಿಗೆ ಆಶ್ರಯ ಕೊಟ್ಟು, ಸಾಕಿ, ಸಲುಗಿ, ಬೆಂಬಲಿಸಿ ಕಟುಕರಂತೆ ಜಗಕೆ ಬಿಟ್ಟು, ಅವರು ಎಸಗುವ ಹೀನ ಕೃತ್ಯ ಭಯೋತ್ಪಾದಕ ಚಟುವಟಿಕೆಯನು ಬೆಂಬಲಿಸುತಿದೆ. ಆದರೂ ಇದನ್ನೆಲ್ಲ ಸಹನೆಯಿಂದ ಸತತ ಸಹಿಸಿಕೊಳ್ಳುತ ಬರುತಿದೆ ಶಾಂತಿಪ್ರಿಯ ಭವ್ಯಭಾರತ.

ಭಾರತಾಂಬೆಯ ಪುತ್ರಿಯರ ಸಿಂಧೂರವನು ಅಳಿಸಿದವರ ಉಸಿರು ನಿಲ್ಲಿಸಲು ಭಾರತವು ‘ಆಫರೇಷನ್ ಸಿಂಧೂರ’ ಹೆಸರಿನಲಿ ದಾಳಿ ಆರಂಭಿಸಿತು, ಅವರ ವಾಸದ ನೆಲೆಗಳನ್ನೆಲ್ಲ ನಮ್ಮ ವೀರಯೋಧರು ಧ್ವಂಸ ಮಾಡಿ ಏಟಿಗೆ ಎದುರೇಟು ನೀಡಿ ಪ್ರತ್ಯುತ್ತರ ಕೊಟ್ಟಿದ್ದು ನಿಜಕ್ಕೂ ರೋಚಕ. ಯುದ್ಧ ಮಾಡಲು ಮುಂಬಾರದ ರಣಹೇಡಿಗಳು ಕದನ ವಿರಾಮದ ನಾಟಕವಾಡಿಬಿಟ್ಟರು. ಅಲ್ಲದೆ ಗಡಿಗಳಲಿ ಆಗಾಗ ಗುಂಡಿನ ದಾಳಿಯ ಮಾಡಿ ಕೆರಳಿಸುತಿರುವರು. ಅಮಾಯಕ ಭಾರತೀಯರನು ಕೊಂದಕೀಚಕರು ಇನ್ನುಮುಂದೆಯಾದರು ಪಾಠ ಕಲಿಯದಿದ್ದರೆ ಯುದ್ಧದ ಮೂಲಕವೇ ಉತ್ತರಿಸಬೇಕಿದೆ. ಶಾಂತಿಸಂಧಾನ ಪಾಲಿಸದ ನರ ರೂಪದ ರಕ್ಕಸರಿಗೆ ದಾಳಿಯ ಮಾಡಿ ಎದೆಯ ಸೀಳುವರು ಹೃದಯ ವಿಶಾಲವಂತ ಭಾರತೀಯರು…

ಪವಿತ್ರವಾಗಿದ್ದ ಭಾರತಾಂಬೆಯ ನೆಲವು ಅಯೋಗ್ಯರ, ಪಾಪಿಗಳ ಹಾಗೂ ರಕ್ಕಸರ ಪಾದಸ್ಪರ್ಶದಿಂದ ಭರತನಾಡು, ಸ್ವರ್ಗದಂತಿದ್ದ ಪುಣ್ಯ ಭೂಮಿ, ಗಂಗಾ ಯಮುನಾ ಪವಿತ್ರ ನದಿ ಅಪವಿತ್ರಗೊಂಡು ಭಾರತಾಂಬೆಯ ಪುಣ್ಯನೆಲವು ಸೂತಕದಿಂದ ಆವರಿಸಿದೆ. ಭಾರತ ಮಾತೆಯ ಪುತ್ರರ ಹತ್ಯೆ ಮಾಡಿದವರ ನೆತ್ತರನು ಭರತಭೂಮಿಗೆ ಹರಿಸಿ ಸೂತಕ ತೊಳೆದು ಪಾವನಮಾಡೋಣ. ಶಾಂತಿಯಿಂದಿದ್ದ ಅಮಾಯಕ ಭಾರತೀಯರ ತಂಟೆಗೆ ಬಂದು ಸುಖಾಸುಮ್ಮನೆ ಕೊಂದು ವಿಕೃತ ಮೆರೆದ ಕಟುಕರಿಗೆ ಭಾರತೀಯರ ಬಲವೇನೆಂದು ಯುದ್ಧದ ಮೂಲಕವೇ ತೋರಿಸಬೇಕಾಗಿದೆ. ಪಾಪದ ಕೊಡವು ತುಂಬಿ ಬಂದಂತಿದೆ ಇನ್ನೂ ಮಾಡಿದನ್ನೆಲ್ಲ ಕ್ಷಮಿಸುತ್ತಾ ಸಹಿಸುತ್ತಾ ಹೋದರೆ ಅರ್ಥವಿಲ್ಲ. ಉಗ್ರರ ಅಟ್ಟಹಾಸವನು ಮಟ್ಟ ಹಾಕಲು ಗುಂಡೇಟುಗಳ ಸುರಿಮಳೆಯನು ಸುರಿಸಬೇಕಾಗಿದೆ.

ಭರತ, ಬಸವಣ್ಣ, ಬುದ್ಧ, ವಿವೇಕರು ಜನಿಸಿದ ನಾಡು ನನ್ನದು, ಶಾಂತಿ ಮಂತ್ರವ ಭೋಧಿಸಿದ ಈ ಪವಿತ್ರವಾದ ನಾಡಲ್ಲಿ ಯುದ್ದವನು ಬಯಸದೆ, ಸದಾ ಶಾಂತಿಯನ್ನೇ ಬಯಸುವೆವು. ವಿವಿಧತೆಯಲಿ ಏಕತೆಯ ಸಂದೇಶವ ಸಾರುವ, ಸರ್ವಧರ್ಮವನು ಸಮಾನವಾಗಿ ಕಾಣುವ, ಹಲವು ನಾಯಕರ ಅಹಿಂಸಾ ಮಾರ್ಗ, ಸತ್ಯ, ನ್ಯಾಯವನು ಸಾರುವ ದೇಶವೇ ನಮ್ಮ ಭಾರತ. ಪುಟ್ಟ ಪುಟ್ಟ ಬಿರುಗಾಳಿ, ಸಿಡಿಲು, ಗುಡುಗಿಗೆ ಬೆದರುವ ಭಾರತೀಯರ ಎದೆಯು ಮುಂದೊಂದು ದಿವಸ ರಣಭೀಕರ ಯುದ್ಧದಲಿ ಸಿಡಿವ ಅಣುಬಾಂಬುಗಳ ಘೋರ ಶಬ್ದಗಳಿಗೆ ತಯಾರಾಗಬೇಕಾಗಿದೆ. ಗಡಿಗಳಲಿ ನುಸುಳುಕೋರರು, ಉಗ್ರರು ಹಾಗೂ ಯಾರೋ ಕಿಡಿಗೇಡಿಗಳು ಮಾಡುವ ಹೀನಕೃತ್ಯಕೆ ಭಾರತ ದೇಶದ ಯೋಧ ಸಂಕುಲವೇ ಸಜ್ಜಾಗಬೇಕಿದೆ ಶತ್ರುಗಳ ಸಂಹರಿಸುವ ಯುದ್ದಕ್ಕೆ.

ಅವರಂತೆ ಏಕಾಏಕಿ ನಾಗರಿಕರು, ಹೆಂಗಸರು ಮಕ್ಕಳ ಮೇಲೆ ದಾಳಿ ಮಾಡುವ ಹೇಡಿಗಳಲ್ಲ ನಾವು ಭಾರತೀಯರು, ಎದೆಗೆ ಎದೆಗೊಟ್ಟು ಹೋರಾಡುವ ವೀರ ಶೂರ ಕಲಿಗಳು, ಸಾಹಸಿಗಳು ನಮ್ಮ ಹೆಮ್ಮೆಯ ಭಾರತೀಯರು. ಯುದ್ಧಕೆ ಒತ್ತು ನೀಡದೆ ಶಾಂತಿ ಸಹಬಾಳ್ವೆ ಬಯಸುವ, ದೇಶದ ಅಭಿವೃದ್ಧಿ, ಸಮೃದ್ಧಿಗಾಗಿ ಪ್ರಾರ್ಥಿಸುವ, ಆರೋಗ್ಯಕರ ವಾತಾವರಣ, ಪರಿಸರ ಕಾಪಾಡುವ, ಪರಸ್ಪರ ಪ್ರೀತಿ ಸ್ನೇಹ ಬಯಸುವ, ಭೀಕರ ಯುಧ್ದಗಳು ಮುಗಿದು ರಕ್ತಪಾತಗಳು ಮರೆಯಾಗಲಿ ಎನ್ನುವ, ವಿಶ್ವದಾದ್ಯಂತ ಭಯೋತ್ಪಾದನೆ ಅಂತ್ಯವಾಗಲಿ ಅನ್ನುವ, ರಾಷ್ಟ್ರ ರಾಷ್ಟ್ರಗಳ ನಡುವೆ ದ್ವೇಷವು ಅಳಿದು ಸ್ನೇಹವು ಅರಳಲಿ ಎಂದು ಬಯಸುವ, ಅಮಾಯಕರ ಜೀವಗಳನು ತೆಗೆಯದೆ ಮನುಷ್ಯತ್ವ, ಮಾನವೀಯತೆ ಗುಣವನು ಹೊಂದಿರುವ, ಯುದ್ಧಗಳಿಂದ ದೇಶದ ಸಂಪತ್ತು ನಷ್ಟ, ಅಭಿವೃದ್ಧಿಗೆ ಮಾರಕವೆಂದು ತಿಳಿದು ತಾಳ್ಮೆಯಿಂದ ಬಾಳುತ್ತಿರುವ ಶುದ್ಧ ಮನಸಿನ ಶಾಂತಿಪ್ರಿಯವಾದ ರಾಷ್ಟ್ರ ನಮ್ಮದು. ನಾವು ಸದಾ ಶಾಂತಿ ಸೌಹಾರ್ದತೆ, ತ್ಯಾಗ, ಪ್ರೀತಿಯನು ಬಯಸುವೆವು ನಮ್ಮ ತಾಯ್ನಾಡು ಭಾರತದ ಸಹವಾಸಕೆ ಬಂದರೆ ಅದೆಲ್ಲೆ ಅಡಗಿದರು ನುಗ್ಗಿ ಹೊಡೆವೆವು, ಕ್ಷಮಿಸಿ ಬಿಡೆವು.

ವಿಶ್ವದಲ್ಲೇ ಭಾರತವು ಶಾಂತಿಪ್ರಿಯ ಹಾಗೂ ಸರ್ವಧರ್ಮಗಳ ಸಹಬಾಳ್ವೆ ರಾಷ್ಟ್ರವೆಂಬ ಹೆಗ್ಗಳಿಕೆಗೆ ಹೆಸರಾಗಿದೆ, ಅರಸಿ ಬಂದವರಿಗೆ ಆಶ್ರಯತಾಣವೂ ಆಗಿದೆ. ಆದರೆ ಭಾರತೀಯರ ಪ್ರಾಣವ ತೆಗೆದವರ ಎದೆಯನು ಬಗೆದು ತಲೆಯನು ತೆಗೆದು “ಭಾರತ ರಾಷ್ಟ್ರವು ಯುದ್ಧಕ್ಕೂ ಸಿದ್ಧ ಶಾಂತಿಗೂ ಬದ್ದ, ಪ್ರೀತಿಗೂ ಸಿದ್ದ ದ್ವೇಷಕೂ ಬದ್ದ, ತ್ಯಾಗಕ್ಕೂ ಸಿದ್ದ ಬಲಿದಾನಕ್ಕೂ ಸಿದ್ದ’ವೆಂಬ ಸಂದೇಶವನ್ನು ಪ್ರಪಂಚಕ್ಕೆ ಸಾರುವೆವು. ನಾವೆಂದೂ ಯುದ್ಧಕ್ಕೆ ಪ್ರಾಮುಖ್ಯತೆ ನೀಡೆವು, ನಾವು ಸದಾ ಶಾಂತಿಯನ್ನೇ ಬಯಸುವವರು, ಹಾಗಂತ ಸಹಿಸಿ ಮೌನದಿಂದ ಕೈ ಕಟ್ಟಿ ಕೂರಲಾರೆವು ಅಗತ್ಯವಿದ್ದರೆ ದೇಶಕ್ಕಾಗಿ ಹೋರಾಡಿ ಪ್ರಾಣವನೆ ತ್ಯಾಗಮಾಡುವೆವು… ಜೈ ಹಿಂದ್ ಜೈ ಭಾರತ ಮಾತೆ.

-ಚಲುವೇಗೌಡ ಡಿ ಎಸ್

ಕನ್ನಡದ ಬರಹಗಳನ್ನು ಹಂಚಿ ಹರಡಿ
1 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x