ನಾಗಚಂದ್ರ ಕವಿಯ ಸಾಲು ಇದು. ನನಗೆ ಒಂದು ಪ್ರಶ್ನೆ ಉದಾತ್ತನಾದ ರಾವಣನಲ್ಲಿ ನೀಲೀ ರಾಗವೇ ಏಕೆ ಪುಟ್ಟುವುದು. ಕೆಂಪೋ, ಹಸಿರೋ ಅದರಲ್ಲೂ ಕಪ್ಪು ಅಜ್ಞಾನದ ಸಂಕೇತವಲ್ಲವೇ, ಅಂಧಃ ತಮಸ್ಸು ಅದರಿಂದ ಹೊರ ಬಂದ ಬೆಳಕಿನ ಕಿರಣದ ಬಿಳಿಯಾದರೂ ಮೂಡಬಹುದಾಗಿತ್ತಲ್ಲವೇ. ಅದೆಲ್ಲಾ ಬಿಟ್ಟು ಈ ನೀಲೀ ರಾಗವೇ ಯಾಕೆ ಪುಟ್ಟಿದೆ ಎನ್ನುವುದು.
ನೀಲಿ ವರ್ಣವೆಂದರೆ ಆಕಾಶ. ಆಕಾಶವೆಂದರೆ ಅವಕಾಶ. ಆಕಾಶಕ್ಕೇ ಏಣಿ ಇಡುವಷ್ಟು ಅವಕಾಶ ತೆರೆವುದು ಇದು ನೀಲಿ ವರ್ಣ. ಅಗಾಧ ಸಾಗರದ ವರ್ಣವೂ ನೀಲಿಯೇ ಅಲ್ಲವೇ. ಅದಕ್ಕೇ ಆಧ್ಯಾತ್ಮಿಕತೆಯಲ್ಲಿ ನೀಲೀ ಎಂದರೆ ಸ್ವರ್ಗದ ಸಂಕೇತವಂತೆ. ಈ ಅಗಾಧತೆಗೇನೇ ನೀಲೀ ರಾಗವೇ. ನೀಲೀ ಎಂದರೆ ಘನತೆ ಗೌರವದ ಸಂಕೇತವಂತೆ. ಅದಕ್ಕೇ ರಾವಣನಲ್ಲಿ ನೀಲೀ ರಾಗ ಪುಟ್ಟಿತೆ? ರಾವಣನೇ ಘನತೆವೆತ್ತವನೆಂದು ತೋರಿಸಲು ಕವಿಯು ನೀಲೀ ರಾಗವೆಂಬುದನ್ನು ಬಳಸಿದ್ದಾನೆಯೇ?.
ನೀಲ ಮಣಿಯು ಅತ್ಯಂತ ಅಪರೂಪದ ಹರಳು. ಆಭರಣದಲ್ಲಿ ಇಂದ್ರ ನೀಲ ಮಣಿಯ ಕಾಂತಿಯದೇ ವಿಶೇಷ. ಇದನ್ನು ಧರಿಸಿದವರನ್ನು ಯಶಸ್ಸಿನ ಉತ್ತುಂಗಕ್ಕೇರಿಸುವುದಂತೆ ಈ ನೀಲ ಮಣಿ. ಆದರೇನು, ಯಶಸ್ಸಿನ ಉತ್ತುಂಗದಲ್ಲೇ ಇರುವ ರಾವಣನಿಗೆ ಮತ್ಯಾಕೆ ಬೇಕಿತ್ತು ಈ ನೀಲೀ ರಾಗದ ಉತ್ತುಂಗ. ಆದರೆ ಈ ನೀಲ ಮಣಿಯು ಎಲ್ಲರಿಗೂ ಓಂ ಬರುವುದಿಲ್ಲವಂತೆ. ಅದನ್ನು ಧರಿಸುವವರೂ ಅಪರೂಪವೇ ಆಗಿರುತ್ತಾರೆ ಅಲ್ಲವೇ. ರಾವಣನೂ ಸಹ ಅಪರೂಪದಲ್ಲಿ ಅಪರೂಪದವ ಎಂಬುದನ್ನು ತಿಳಿಸಲು ನಾಗಚಂದ್ರನು ಇಲ್ಲಿ ನೀಲೀ ರಾಗ ಎಂಬುದನ್ನು ಹೇಳಿದ್ದಾನೆಯೇ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಇಂದ್ರ ನೀಲಮಣಿಯು ಶನಿಯೊಂದಿಗೆ ಸಂಬಂಧ ಹೊಂದಿರುವ ಅತ್ಯಂತ ಶಕ್ತಿಶಾಲಿ ಮಂಗಳಕರ ರತ್ನ. ಇದನ್ನು ಧರಿಸುವುದರಿಂದ ಆರ್ಥಿಕ ಲಾಭ, ವೃತ್ತಿ ಯಶಸ್ಸು, ಮಾನಸಿಕ ಶಾಂತಿ, ಸ್ಪಷ್ಟ ಚಿಂತನೆ ಮತ್ತು ಉತ್ತಮ ಆರೋಗ್ಯದಂತಹ ಲಾಭಗಳು ಸಿಗುತ್ತವೆ. ವಿಶೇಷವಾಗಿ ಗಂಟಲು ಮತ್ತು ಮೂರನೇ ಕಣ್ಣಿನ ಚಕ್ರಗಳಿಗೆ ಇದು ಪ್ರಯೋಜನಕಾರಿ ಎಂದು ಹೇಳುತ್ತಾರೆ. ರಾವಣನೊಬ್ಬ ಅತ್ಯದ್ಭುತ ಜ್ಯೋತಿಷ್ಯ ಶಾಸ್ತ್ರಜ್ಞನಲ್ಲವೇ. ತನ್ನ ಮಗ ಮೇಘನಾದನ ಜನನದ ಸಮಯದಲ್ಲಿ ಎಲ್ಲಾ ಗ್ರಹಗಳನ್ನೂ ತಮ್ಮ ತಮ್ಮ ಶುಭ ಸ್ಥಾನದಲ್ಲೇ ಇರುವಂತೆ ಕಟ್ಟಿ ಹಾಕಿದ್ದನಂತಲ್ಲವೇ. ಅದನ್ನು ಸೂಚಿಸುವುದಕ್ಕಾಗಿಯೇ, ರಾವಣನಲ್ಲಿ ನೀಲಿ ರಾಗವೇ ಪುಟ್ಟಿತೇ.
ಅಂದು ರಾವಣನ ದಿಗ್ಬಂಧನವನ್ನು ಮೀರಿ ನಿಂತ ಗ್ರಹವೆಂದರೆ, ಅದು ಶನಿ ಮಹರಾಜ ಮಾತ್ರ. ಅದಕ್ಕೇ ರಾವಣನು ಈ ಶನಿಗೆ ವಿರುದ್ಧ. ನೀಲಿ ವರ್ಣವು ಶನಿಯ ವರ್ಣ. ಆದ್ದರಿಂದ, ಶನಿಯು ನಿನ್ನ ಬೆನ್ನು ಹತ್ತಿದೆ, ಎಂದು ರಾವಣನಿಗೆ ತೋರುವ ಸೂಚಕವಾಗಿಯೇ ನೀಲಿ ರಾಗ ಪುಟ್ಟಿರಬಹುದಲ್ಲವೇ.
ನೀಲಿ ವರ್ಣದ ಧ್ವಜವು ದಲಿತರ ಅವಿಭಾಜ್ಯ ಅಂಗವೇ. ಆದರೆ ರಾವಣನೋ ಮಹಾ ಬ್ರಾಹ್ಮಣ. ಪರಶಿವನಿಂದಲೇ ಆತ್ಮ ಲಿಂಗವನ್ನೇ ತಂದವನು. ಆದರೂ ರಾವಣನಿಗೆ ದಲಿತರ ನೀಲೀ ರಾಗವೇ ಯಾಕೆ ಪುಟ್ಟಿದೆ ಎಂದಷ್ಟೆ ಅಲ್ಲವೇ. ಆದರೂ ರಾವಣವ ಆರಾಧ್ಯ ದೈವವೇ ಆದ ಆ ಪರ ಶಿವನೂ ನೀಲವರ್ಣದವನೇ. ಹಾಗೆಯೇ ಆತನ ಜಟೆಯಲ್ಲಿರುವ ಗಂಗೆಯೂ ನೀಲಿಯೇ. ಆದರೆ, ಶಂಕರಿಯಾದ, ಅರ್ಧನಾರೀಶ್ವರನಾದ ಪರಶಿವನ ಹೆಂಡತಿ ಪಾರ್ವತಿದೇವಿ ಮಾತ್ರ ಶುಭ್ರವರ್ಣದವಳು. ಅದಕ್ಕಾಗಿಯೇ ಶಿವಭಕ್ತನಾದ ರಾವಣನು, ತನ್ನ ಆರಾಧ್ಯ ದೈವವಾದ ಆ ಶಿವನು ಹೇಗೆ ಸುಂದರಿಯಾದ ಪಾರ್ವತಿಗೆ ಸವತಿಯಾಗಿ ಗಂಗೆಯನ್ನು ತಂದನೋ ಹಾಗೆಯೇ ರಾವಣನೂ ತನ್ನ ಪಟ್ಟದ ರಾಣಿ ಮಂಡೋದರಿಯಿದ್ದರೂ ಸೀತೆಯನ್ನು ಹೊತ್ತು ತಂದವನಾದ್ದರಿಂದಲೇ, ರಾವಣನಲ್ಲಿ ಪುಟ್ಟಿದ್ದು ನೀಲಿ ರಾಗವೇ.
ನಮ್ಮ ರಾಷ್ಟ್ರ ಧ್ವಜದಲ್ಲಿ, ಮಧ್ಯದ ಬಿಳಿಯ ಬಣ್ಣದ ನಟ್ಟ ನಡುವೆ, ಇಪ್ಪತ್ನಾಲ್ಕು ಅರೆಗಳುಳ್ಳ ಅಶೋಕ ಚಕ್ರ ಕೂಡಾ ನೀಲಿ ವರ್ಣದ್ದೇ. ಬಿಳಿಯ ಶುಭ್ರತೆಯ ಮಧ್ಯೆ ಮೂಡುವುದು ನೀಲಿಯೇ ಎಂದು ಇಲ್ಲಿ ಸೂಚಿಸುದಕ್ಕಾಗಿಯೇ, ರಾವಣನ ಮನವು ಶುಭ್ರವಾದಾಗ, ನೀಲೀ ರಾಗವೇ ಪುಟ್ಟಿದೆ ಎಂಬುದೇ ಕವಿಯ ಕೃತಿಯ ಆಳ ಅಥವಾ ಈ ಇಪ್ಪತ್ನಾಲ್ಕು ಅರೆಗಳು, ಈ ಚಕ್ರ, ನೀಲೀ ರಾಗದಲ್ಲಿ ತಲೆಯನ್ನು ತಿನ್ನುತ್ತವೆ, ಚಕ್ರದಂತೆ ಬೆನ್ಹತ್ತಿರುತ್ತವೆಯೇ?
ಹೋಗಲಿ, ಸಂಗೀತದ ಈ ರಾಗಗಗಳಲ್ಲಿಯಾದರೂ ಯಾವುದಾದರೂ ನೀಲೀ ರಾಗ ಇದೆಯೇ ಎಂದರೆ, ಮೇಳ ಕರ್ತ ರಾಗಗಳಲ್ಲಿ ಒಂದೂ ನೀಲಿ ರಾಗದ ಹೆಸರು ಕೇಳಲಿಲ್ಲವಪ್ಪ. ಆ ರಾವಣನು ಸಂಗೀತಜ್ಞನಂತೆ, ಆತನು ವೀಣಾ ವಾದನ ಪ್ರಿಯನಂತೆ, ಬಲ್ಲವನೂ ಹೌದಂತೆ, ಏನಾದರೇನಂತೆ, ಹಲವು ಗುಣವ ಒಂದೆಲೆ ನುಂಗಿತು ಎಂದು, ಅವನ ನೂರು ಗುಣವ ಸೀತಾಪಹರಣವೊಂದು ತಿಂದು ಹಾಕಿತು. ಅದರ ನಂತರವೇ ಅಲ್ಲವೇ ಈ ನೀಲಿರಾಗವೇ ಹುಟ್ಟಿದ್ದು. ಆದರೂ ರಾವಣನಲ್ಲಿ ಆ ನೀಲೀ ರಾಗವೇ ಏಕೆ ಹುಟ್ಟಿದ್ದು.
ಆಧ್ಯಾತ್ಮದಲ್ಲಿ ನೋಡಿದರೆ, ರಾವಣನ ವೈರಿಯಾದವ ಶ್ರೀ ರಾಮಚಂದ್ರನು ದೇವ. ಅನಿರುದ್ಧ ರೂಪೀ ಪರಮಾತ್ಮನೇ ನೀಲೀ ರಾಗಕ್ಕೆ ಅಭಿಮಾನಿಯಂತೆ. ದೇವ ಜಗನ್ನಾಥನನ್ನು ನೀಲಾದ್ರಿಯೊಡೆಯನೆಂದೇ ಕರೆಯುತ್ತಾರೆ. ಏಕೆಂದರೆ ಅವನ ವಾಸವೇ ನೀಲಾದ್ರಿಯಲ್ಲಿ, ಕೃಷ್ಣನ ಷಣ್ಮಹಿಷಿಯರಲ್ಲಿ ನೀಲೆಯೂ ಒಬ್ಬಳಲ್ಲವೇ. ಈ ನೀಲ ವರ್ಣವು ಭೂ ದೇವಿಯ ಸಂಕೇತವಂತೆ. ಆದ್ದರಿಂದ ಪರಮಾತ್ಮನಂತೆಯೇ ರಾವಣನಿಗೂ ನೀಲ ವರ್ಣ ಪ್ರಿಯವಾಯಿತೇ. ನೀಲೀ ರಾಗವೇ ಪುಟ್ಟಿತೇ.
ಮಹಾ ಲಕ್ಷ್ಮಿಯು ಮಹಾ ಚಂಚಲೆ, ಸಾಗರದಲೆಯ ಮೇಲೆ ಕೆಂಪು ಕಮಲದಲ್ಲಿ ನಿಂತಿರುತ್ತಾಳೆ. ಸಾಗರವಂತೂ ನೀಲಿ ವರ್ಣವೇ. ಆದರೆ ಆಕೆಯು ನಿಂತಿರುವುದು ಕೆಂಪು ಕಮಲದಲ್ಲಿಯಾದರೂ, ಮಹಾಲಕ್ಷ್ಮಿ ದೇವಿಯ ಕೈಯಲ್ಲಿರುವ ಕಮಲವು ಕೆಂಪು ವರ್ಣದ್ದವು ಅಲ್ಲವಂತೆ, ಅದು ನೀಲವರ್ಣದ ಕಮಲವಂತೆ. ಸೀತೆ ಮಹಾ ಲಕುಮಿಯ ಅವತಾರವಲ್ಲವೇ. ಆಕೆಯನ್ನು ಒಲಿಸುವುದಕ್ಕಾಗಿಯೇ ರಾವಣನಲ್ಲಿ ನೀಲಿ ರಾಗವು ಪುಟ್ಟಿದೆಯೇ.
ಸೂರ್ಯನನ್ನೇ ಸಖನನ್ನಾಗಿಸಿ ಕೊಂಡಿರುವವು ಕಮಲಗಳು. ಸೂರ್ಯ ಹುಟ್ಟಿದಾಗಲೇ ಅರಳುವಂತಹವು. ಅಂತಹ ಕಮಲಗಳು ಮುಖ ಮುಚ್ಚಿಕೊಳ್ಳುವುದು. ಸೂರ್ಯಾಸ್ತದ ನಂತರ, ಚಂದ್ರ ಮೂಡಿ ಬೆಳದಿಂಗಳು ಬಂದಾಗ. ಆದರೆ, ಚಂದ್ರನಾಗಮನವನ್ನೇ ಕಾಯುತಿರುವವು, ಕೆನ್ನೈದಿಲೆಯ ಪುಷ್ಪಗಳು. ಇವು ನೀಲ ವರ್ಣದವು, ರಾವಣ ತನ್ನ ರಾಜಕಾರ್ಯವನ್ನು ಮುಗಿಸಿ, ಸೀತೆಯನ್ನು ಒಲಿಸಿಕೊಳ್ಳಲೆಂದು ಹೊರಡುವ ಸಮಯವೇ ಸಂಜೆ ಅಥವಾ ರಾತ್ರಿಯಲ್ಲವೇ. ಆ ಸಮಯದಲ್ಲಿಯೇ ಅರಳುವ ಕೆನ್ನೈದಿಲೆಯ ನೀಲ ವರ್ಣವನ್ನು ಕಂಡ ಮೇಲೆಯೇ ರಾವಣನಲ್ಲಿ ನೀಲೀ ರಾಗವು ಪುಟ್ಟಿದೆಯೇ.
ನೀಲಿ ಬಣ್ಣವು ಸಾಮಾನ್ಯ ಜನರಿಗೆ ಪ್ರಿಯವಾದ ವರ್ಣವಿರಬೇಕು. ಯಾಕೆಂದರೆ, ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮ ವಸ್ತ್ರವದು ನೀಲ ವರ್ಣವೇ. ಸೀತಾಪಹರಣದ ನಂತರ, ರಾವಣನ ಮನದ ಕದಡಿದ ಕಳವಳ ಕಳೆದು ಶಾಂತವಾದ ನಂತರ, ರಾವಣನಲ್ಲಿ ತಾನು ಶ್ರೇಷ್ಠನು ಎಂಬ ಅಹಂಭಾವವು ಅಳಿದು, ತಾನೂ ಸಾಮಾನ್ಯನೇ ಎಂಬುದು ಮೂಡಿತು ಎಂಬುದನ್ನು ತೋರಿಸಲೆಂದೇ ಕವಿಯು ರಾವಣನಲ್ಲಿ ನೀಲಿರಾಗವು ಪುಟ್ಟಿದೆ ಎಂದು ಹೇಳಿದನೇನೋ.
ಸಾಮನ್ಯರು, ಸಜ್ಜನರು ನೋಡಲಾರದ, ನೋಡ ಬಾರದ, ಕಾಮ ಪ್ರಚೋದಕ ಚಿತ್ರಗಳನ್ನು ನೀಲಿ ಚಿತ್ರಗಳು ಎಂದು ಕರೆಯುತ್ತಾರೆ. ನೈತಿಕತೆಯಿಲ್ಲದ, ಅನೈತಿಕತೆಯ ಭಾವದವನು ರಾವಣ, ಸುಶೀಲ ಸ್ವಭಾವವಿಲ್ಲದ ಅಶ್ಲೀಲಗಳ ಭಾವ ತುಂಬಿರುವವನು ರಾವಣ, ಸಭ್ಯತೆ ಇಲ್ಲದೆಯೇ ಪರ ಸ್ತ್ರೀಯನ್ನು ಹೊತ್ತ ತಂದ ಅಸಭ್ಯನು. ಅಂತಹವನಲ್ಲಿ ತುಂಬಿರುವುದು ಈ ನೀಲಿ ಚಿತ್ರಗಳ ಭಾವವೇ, ಆದಾಗ್ಯೂ, ಕವಿಯು ಉದಾತ್ತನೊಳ್ ಪುಟ್ಟದಲ್ತೆ ನೀಲಿರಾಗಂ ಎಂದಿದ್ದಾನೆಂದರೆ, ನೀಲಿ ಚಿತ್ರದ ಭಾವನೆಯು ತೊಲಗಿ, ಉದಾತ್ತ ಭಾವನೆಯು ಹುಟ್ಟಿದೆ ಎಂದರ್ಥವೇ.
ನೀಲಿ ವರ್ಣವೇನೋ ಬಿಳಿಯ ಬಣ್ಣದಲ್ಲಿರುವ ಏಳು ಬಣ್ಣಗಳಲ್ಲಿ ಒಂದು. ಅದೂ ಕಾಮನ ಬಿಲ್ಲಿನ ಬಣ್ಣದಲ್ಲೇ ಇರುವುದು. ಆದರೆ, ನೀಲಿ ಕಣ್ಣಿನ ದೃಷ್ಟಿ ಎಂಬ ಪಡೆನುಡಿಗೆ ಒಂದು ಹೊಸ ಅರ್ಥವಿದೆ. ಪೂರ್ವಾಗ್ರಹ ಪೀಡಿತ ಎಂಬುದರ ಅರ್ಥವೂ ಆಗುತ್ತದೆ. ಅದಕ್ಕೇ ಹೇಳುತ್ತಾರೆ, ನೀಲಿ ಕಣ್ಣಿನ ದೃಷ್ಟಿ ಬಡತನದ ದೃಶ್ಯವನ್ನ ನೋಡಿದರೆ, ನೀಲಿ ಮನವು ಅಜ್ಞಾನ, ಮೂಢತನವನ್ನು ಗಮನಿಸುವುದು. ನೀಲಿ ದೃಶ್ಯಗಳ ಚಿತ್ರಣವೂ ಹೃದಯವಿದ್ರಾವಕವಾಗಿರುತ್ತವೆ. ಒಟ್ಟಿನಲ್ಲಿ ನೀಲಿಯಂದರೆ, ಒಳ್ಳೆಯದಲ್ಲದ ಎಂದರ್ಥವೇ ಆಗುತ್ತದೆ ಆದರೂ ಉದಾತ್ತನಾದ ರಾವಣನಲ್ಲಿ ನೀಲಿ ರಾಗವೇಕೆ ಹುಟ್ಟಿದೆ. ಅಂದರೆ ರಾವಣನು ಬದಲಾಗಲಿಲ್ಲವೇ ಅಥವಾ ಇಷ್ಟೆಲ್ಲಾ ಆದ ಮೇಲೂ ನೀಲಿ ಎಂಬ ದೃಷ್ಟಿಬೊಟ್ಟೊಂದು ಅವನಲ್ಲಿ ಉಳಿದೇ ಇತ್ತೇ. ಅಂದಾಗ, ನಾಗಚಂದ್ರನಿಲ್ಲಿ, ಉದಾತ್ತನೋಳ್ ಪುಟ್ಟದಲ್ತೆ ನೀಲೀರಾಗಂ ಎಂದು ಏಕೆ ಹೇಳಿದ್ದಾನೆ.
ನೀಲಿ ಕಣ್ಣು ಎಂದರೆ, ಬೆಕ್ಕಿನ ಕಣ್ಣು. ಬೆಕ್ಕಿನ ಕಣ್ಣಿನ ಬೆಳಕು, ಕ್ರೌರ್ಯದ ಸಂಕೇತವಂತೆ, ಮನಃ ಶಾಸ್ತ್ರದಲ್ಲಿ. ಬೆಕ್ಕು ಸಾಕು ಪ್ರಾಣಿ. ಕ್ರೂರತೆ ಅದು ಹೇಗೋ. ಇರಲಿ, ಬೆಕ್ಕಿನ ಕಣ್ಣಿನ ದೃಷ್ಟಿಗಿಂತ, ಮೂಢ ನಂಬಿಕೆಗಳಿಗಿಂತ, ಕಣ್ಣಿನ ಛಾಯೆ ನೀಲಿ ಎನ್ನುವುದನ್ನು ಗಮನಿಸಿದರೆ, ರಾವಣನಿಗೆ ಬೆಕ್ಕಿನ ಕಣ್ಣುಗಳಿತ್ತೇ ಗೊತ್ತಿಲ್ಲ. ಹತ್ತು ತಲೆಯ ರಾವಣನಿಗೆ ಇರುವ ಇಪ್ಪತ್ತು ಕಣ್ಣುಗಳಲ್ಲಿ ಯಾವುದೋ ಎರಡು ಕಣ್ಣುಗಳು ಬೆಕ್ಕಿನ ಕಣ್ಣುಗಳಾಗಿದ್ದವೇನೋ. ಇರಲಿ ಬಿಡಿ, ಆದರೆ, ಆ ನೀಲೀ ವರ್ಣವ ಕಂಡು ಕವಿ ನೀಲೀ ರಾಗ ಪುಟ್ಟಿದೆ ಎಂದನೇನೋ.
“ಕದಡಿದ ಸಲಿಲಂ ತಿಳಿವಂದದೆ ಎಂದು ಹೇಳುವ ನಾಗಚಂದ್ರನು, ರಾವಣನ ವ್ಯಕ್ತಿತ್ವ ಪ್ರಶಂಸನೀಯವಾಗಿಸಿದ್ದಾನೆ. ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮಚಂದ್ರ ನಾಯಕನಾದರೆ, ರಾವಣನು ಖಳನಾಯಕನು. ನಾಗಚಂದ್ರನ ರಾಮಾಯಣದಲ್ಲಿ ರಾವಣನು ಪೂರ್ಣ ರೂಪದ ಖಳ ನಾಯಕನಾಗಿಲ್ಲ. ಅರಿಯದೆಯೋ, ಆವೇಶದಲ್ಲಿಯೋ ಮಾಡಿದ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುವ ಖಳನಾಗುತ್ತಾನೆ. ರಾವಣನು ಎಂತಹ ಕ್ಲಿಷ್ಟಕರ ವ್ರತವಾದರೂ ದೃಢ ಮನಸ್ಸಿನಿಂದ ಭಕ್ತಿ ಪರಾವಶನಾಗಿ ಅನನ್ಯ ಭಕ್ತಿಯಿಂದ ಅದನ್ನು ಸಾಧಿಸುತ್ತಾನೆ. ಅದಕ್ಕೆ ಆತನು ಶಿವನನ್ನು ಒಲಿಸಿಕೊಂಡಿದ್ದೇ ಸಾಕ್ಷಿ.
ತನ್ನ ಕರ್ಮಾಧೀನತೆಯಿಂದ ಆದಂತಹ ಕೆಟ್ಟ ಪಾಪದ ಕೆಟ್ಟ ಪರಿಣಾಮವನ್ನು ರಾವಣನು ತನ್ನ ಮನದಲ್ಲಿ ತಾನೇ ಕದಡಿದ ನೀರು ತಿಳಿಯಾಗುವಂತೆ, ತನ್ನನ್ನು ತಾನೇ ಹಳಿದುಕೊಂಡನು. ಮನಸ್ಸು ತಿಳಿಯಾದ ಮೇಲೆ ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಹುಟ್ಟಿತು ಎಂದು ರಾವಣನ ಈ ಮನಃ ಪರಿವರ್ತನೆಯನ್ನು ಹೇಳುತ್ತಾ ನಾಗಚಂದ್ರನು ರಾವಣನ ಮನಃ ಪರಿವರ್ತನೆಯ ಸಂದರ್ಭವನ್ನು ಈ ರೀತಿ ವರ್ಣಿಸಿದ್ದಾನೆ. “ಉದಾತ್ತ ಮನೋ ಗುಣವುಳ್ಳವನ ಮನಸ್ಸು ನೀಲಾಕಾಶದಂತೆ ವಿಸ್ತಾರವಾದ, ಸ್ಥಿರವಾದ ಪ್ರೀತಿಯಿಂದ ಕೂಡಿರುತ್ತದೆ. ಹತ್ತಿ ಕೊಂಡ ಸಂಜೆಯ ಅನುರಾಗವನ್ನು ಸೂರ್ಯನು ತೊರೆಯದಿರುವನೇ? ಮನಸ್ಸಿನ ದುರಾಸೆಯಿಂದ ಎಲ್ಲಿಯಾದರೂ ಕೆಟ್ಟದ್ದನ್ನು ಆಚರಿಸಿದರೆ ಉತ್ತಮನಾದವನು ತೊರೆದು ಬಿಡದಿರುವನೆ?”
ಇಲ್ಲಿ, ರಾವಣನು ನೀಲೀ ರಾಗ ಹುಟ್ಟಿದುದರಿಂದ, ಉದಾತ್ತನಾದ, ಈ ಉದಾತ್ತತೆಯನ್ನು ಉದಾರಚರಿತರಾದ ಓದುಗರು ಒಪ್ಪಿಕೊಂಡು, ರಾವಣನ ಪಾತ್ರವನ್ನು ವರ್ಣ ರಂಜಿತವನ್ನಾಗಿಸುವುದೋ ಅಥವಾ ಖಳ ನಾಯಕನನ್ನು ನಾಯಕನನ್ನಾಗಿಸುವುದೋ ನಾಗಚಂದ್ರನ ಉದ್ದೇಶವಾಗಿದ್ದೀತು. ಆದರೆ, ಇಂದಿನ ದಿನಗಳಲ್ಲಿ “ನಾಯಕ ನಹೀಂ ಖಲನಾಯಕ ಹೂಂ ಮೈಂ” ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಪೀಳಿಗೆಯಲ್ಲಿ, ಉದಾತ್ತನೋಳ್ ಪುಟ್ಟಿದ ನೀಲಿ ರಾಗವೆಂದು ಹೇಳುವ ವಿಶೇಷತೆ ಏನೂ ಅನ್ನಿಸುವುದಿಲ್ಲ.
ಅಂದರೆ, ಈ ನೀಲಿ ರಾಗವು, ರಾವಣನ ಮನಃ ಪರಿವರ್ತನೆಗೆ ಕಾರಣವಾದಂತೆ, ನೀಲಿ ನಮ್ಮ ಅತ್ಮಾವಲೋಕನಕ್ಕೆ ಒಂದು ಸಾಧನವಾಗಲಿ, ನೀಲಿ ನಮ್ಮ ನೈತಿಕ ಶುದ್ದತೆಯ ಸಂಕೇತವಾಗಲಿ, ನೀಲಿ ಸಾಮಾಜಿಕ ಬದಲಾವಣೆಯ ಸಂದೇಶವಾಗಲಿ ಎಂಬುದೇ ಕವಿಯ ಆಶಯವಾಗಿದೆಯೇ.
ಈ ಬದುಕಿನ ಸಂತೆಯಲ್ಲಿ ತಿರುಗಾಡಿದರೆ, ಎಷ್ಟೆಲ್ಲಾ ರಾಗಗಳಿವೆ. ತಾಳ್ಮೆಯಿಂದ ಕೇಳುವವರಾರು. ಪ್ರತಿಯೊಂದು ಕ್ಷಣವೂ ಒಂದೊಂದು ರಾಗವನ್ನೇ ಹೊಮ್ಮಿಸುವುದು ಈ ಬದುಕು. ಸುಖವೋ, ದುಃಖವೋ, ರಾಗದ ತಾನವನ್ನು ಎಲ್ಲ ಕೇಳಲಿ ಎಂದು ಹಾಡುವುದಲ್ಲ, ಹುಟ್ಟಿ ಬಂದಿದ್ದಕ್ಕೆ ಅದು ಹಾಡುವ ಕರ್ಮ ಎಂದೇ ಬಹಳ ಸಲ ಹಾಡುವುದು. ಈ ಹಾಡಿನ ರಾಗವು ಚನ್ನಾಗಿದ್ದಲ್ಲಿ ಕೇಳುವವರು ಯಾರೂ ಸಿಗಲಿಕ್ಕಿಲ್ಲ, ಹೊಟ್ಟೆ ಉರಿಸಿಕೊಳ್ಳುವವರೇ ಎಲ್ಲ. ಕೆಟ್ಟ ಕರ್ಕಶ ರಾಗದ ದುಃಖವನ್ನು ಕೇಳಿ, ಸಮಾಧಾನಪಡುವವರೂ, ಆನಂದಪಡುವವರೂ ಇದ್ದಾರೆ. ಹೊರ ಹೊಮ್ಮಿಸಲಾಗದ ಕುದಿ ಉಸಿರಿನ ರಾಗಗಳೇ ಸಂಸಾರದಲ್ಲಿರುವವರಿಗೆ ಹೆಚ್ಚು, ಅಂದ ಮೇಲೆ ರಾವಣನೋ, ಲಂಕಾ ಪಟ್ಟಣಕ್ಕೇ ರಾಜ, ಅಂದಾಗ ಅವನಲ್ಲಿ ತುಂಬಿದ್ದ ಒಂದು ರಾಗವು, ಇನ್ನೊಂದರ ಬೆನ್ನುಹತ್ತಿ ಮೂಲ ಸ್ವರೂಪವನ್ನೇ ಕಳೆದುಕೊಂಡಿರ ಬೇಕು, ಇಂದಿಗೆ ಅದು ತಿಳಿಗಟ್ಟಿ,ಇಬ್ಬಗೆಯ ಧರ್ಮವು, ಮೂಲವಾಗಿ ಹೊಮ್ಮಿರುವುದು ನೀಲಿ ರಾಗವಾಗಿರಬೇಕು. ಯಾಕೆಂದರೆ, ಕವಿ ರಾವಣನನ್ನು ಉದಾತ್ತ ಎಂದೇ ಪ್ರತಿಪಾದಿಸುತ್ತಿದ್ದಾನಲ್ಲವೇ.
ನೀಲಿ ರಾಗ ಎಂಬುದು ಒಂದು ಕವಿಸಮಯ ಅನ್ನಬಹುದೇನೋ! ನೀಲೀರಾಗ ಅಂದ್ರೆ ಅದೊಂದು ಧೃಡತೆಯ ಭಾವ – ಬಾಂಧವ್ಯ, ಪ್ರೀತಿ, ಪ್ರೇಮ, ಬಂಧನ….ಈ ರೀತಿ. ಇಲ್ಲಿ ನಾಗಚಂದ್ರ ಜೈನಕವಿಯಾದ್ದರಿಂದ ಆತ ರಾವಣನನ್ನ ಜಿನಭಕ್ತ ಅಂತಾನೆ. ಹಿಂದೂ ಧರ್ಮಶಾಸ್ತ್ರ, ಪುರಾಣಗಳ ಪ್ರಕಾರ ರಾವಣ ಶಾಪಗ್ರಸ್ತ ದೇವತೆ – ವೈಕುಂಠದ ದ್ವಾರಪಾಲಕ; ಅನುಗಾಲ ವಿಷ್ಣುವಿನ ಸನ್ನಿಧಾನದಲ್ಲಿರುವಾತ. ಮತ್ತೆ ಆದಷ್ಟು ಬೇಗ ಆತನ ಸನ್ನಿಧಾನಕ್ಕೆ ವಾಪಸ್ ಹೋಗಲು ವಿಷ್ಣು ವೈರತ್ವವನ್ನೇ ಆರಿಸಿಕೊಂಡಾತ ಆತ. ಆ ಕ್ಷಣಿಕ ಭಾವ ಕರಗಿ ತಿಳಿಯಾಗಿ ಅದೇ ಆ ಧೃಡ ಭಕ್ತಿ, ಧನ್ಯತೆಯ ಭಾವ ರಾಗ ನೀಲೀರಾಗ ಮೂಡಿತು ಅಂತ ಆತನ ನೀಲದಲ್ಲೊಂದಾಗುವ ಆಶಯಕ್ಕೆ ಪುಷ್ಟಿ ಕೊಡುವಂತೆ ಕವಿ ಹೇಳಿದನೇನೋ!!
ನೀಲ ನೀರದವರ್ಣನ ಅನುಗಾಲ ಸೇರುವ ಗಳಿಗೆ ಹತ್ತಿರ ಬಂದಂತೆ ನೀಲಿ ರಾಗವಲ್ಲದೆ ಇನ್ನೇನು ಮೂಡಲು ಸಾಧ್ಯ. ಕ್ಷಣಿಕ ವೈರವನ್ನ ಮರೆತು ನಿರ್ಮಲನಾದ ಆ ಉದಾತ್ತನಲ್ಲಿ!!! ಅಲ್ವಾ?
-ಡಾ.ವೃಂದಾ ಸಂಗಮ್
