ನಾನು ಅಂಗವಿಕಲತೆಯ ಸಮುದಾಯದಲ್ಲಿ ಕೆಲಸ ಮಾಡುವಾಗ ಕೇವಲ ಅಂಗವಿಕಲ ವ್ಯಕ್ತಿಗಳ ಕುಟುಂಬ ಮಾತ್ರವಲ್ಲದೆ ನೆರೆಹೊರೆಯವರ ಜೊತೆಯೂ ಸಂಭಾಷಣೆ ಮಾಡಬೇಕಾಗುತ್ತದೆ, ಒಂದು ದಿನ ಸಮುದಾಯದಲ್ಲಿ ಅಂಗವಿಕಲ ವ್ಯಕ್ತಿಗಳ ಮನೆ ಬೇಟಿ ಮಾಡುವ ಸಂದರ್ಬದಲ್ಲಿ ಸುಮಾರು 25 ವರ್ಷದ ಆಸು ಪಾಸಿನ ಒಬ್ಬ ಯುವಕ ಕಾರಿನಿಂದ ಇಳಿದು ನನ್ನ ಬಳಿ ಬಂದು, ನಿಮಗೆ ಸಮಯವಿದ್ದರೆ ನಿಮ್ಮ ಜೊತೆ ಸ್ವಲ್ಪ ಮಾತನಾಡಬೇಕು, ನಿಮ್ಮಿಂದ ನನಗೆ ಒಂದು ಸಹಾಯ ಬೇಕು ಎಂದು ಕೇಳಿದರು. ಇಷ್ಟು ಶ್ರೀಮಂತ ವ್ಯಕ್ತಿ ನಾನೇನು ಇವರಿಗೆ ಸಹಾಯ ಮಾಡಬಹುದು, ಏನು ಸಹಾಯ ಕೇಳಬಹುದು ಎಂದು ಯೋಚಿಸುತ್ತಾ, ನೀವು ಯಾರೆಂದು ನನಗೆ ತಿಳಿದಿಲ್ಲ, ನಿಮ್ಮನ್ನು ನಾನು ಯಾವಾಗಲೂ ನೋಡಿಲ್ಲ, ನನ್ನಿಂದ ನಿಮಗೆ ಏನು ಸಹಾಯ ಬೇಕು ಹೇಳಿ ಎಂದು ಕೇಳಿದೆ. ಆಗ ಆ ವ್ಯಕ್ತಿ ನನ್ನ ಸಂಬಂದಿಕರ ಮನೆಗೆ ನೀವು ಬಂದಾಗ ನಿಮ್ಮನ್ನು ನೋಡಿದ್ದೇನೆ, ನೀವು ಮಾಡುವ ಕೆಲಸದ ಬಗ್ಗೆ ತಿಳಿದುಕೊಂಡಿದ್ದೇನೆ. ನಿಮ್ಮ ಬಗ್ಗೆ ನನಗೆ ತಿಳಿದಿದೆ ಎಂದರು. ನಾನು ಸಂಬಂದಿಕರ ಮನೆಯ ಸದಸ್ಯರ ಬಗ್ಗೆ ವಿಚಾರಿಸಿದಾಗ ನಾನು ಕೆಲಸ ಮಾಡುತ್ತಿದ್ದ ಒಂದು ಅಂಗವಿಕಲ ವ್ಯಕ್ತಿಯ ಕುಟುಂಬದ ಪರಿಚಯ ಅದಾಗಿತ್ತು.
ಸರಿ ನನ್ನಿಂದ ನಿಮಗೇನು ಸಹಾಯ ಆಗಬೇಕು ಹೇಳಿ ಎಂದಾಗ, ಕಾರಿನ ಬಳಿ ಹೋಗಿ ಒಂದು ಕೈಚೀಲ ತಂದು ಮದುವೆಯ ಆಹ್ವಾನ ಪತ್ರಿಕೆಯನ್ನು ನೀಡಿ, ಮುಂದಿನ ವಾರ ನನ್ನ ಮದುವೆ ಇದೆ, ನೀವು ಕಂಡಿತ ಬರಬೇಕು ನಿಮ್ಮ ಜೊತೆ ಸ್ವಲ್ಪ ಅಂಗವಿಕಲ ಮಕ್ಕಳನ್ನು ಕರೆದುಕೊಂಡು ಬನ್ನಿ, ವಾಹನದ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ ಎಂದರು. ಇದಕ್ಕೆ ನಾನು ಆಗಲಿ ಬರುತ್ತೇವೆ ಎಂದು ಹೇಳಿದೆ.
ಆ ವ್ಯಕ್ತಿಯ ಆಹ್ವಾನವನ್ನು ಕೇಳಿ ತುಂಬಾ ಸಂತೋಷವಾಯಿತು, ಏಕೆಂದರೆ ಅಂಗವಿಕಲ ಮಕ್ಕಳನ್ನು ಸಹ ಮದುವೆಗೆ ಆಹ್ವಾನ ಮಾಡಿದ್ದಾರಲ್ಲ ಎಂದು ಹಾಗೆಯೇ ಅಂಗವಿಕಲ ಮಕ್ಕಳನ್ನು ಕರೆದುಕೊಂಡು ಹೋದರೆ ಮದುವೆಗೆ ಬಂದ ಜನ ಹೇಗೆ ನೋಡುತ್ತಾರೂ, ಯಾರಾದರೂ ಮಕ್ಕಳನ್ನು ಹಿಯಾಳಿಸಿದರೆ ಏನು ಮಾಡುವುದು, ಮಕ್ಕಳಿಗೆ ಬೇಸರವಾದರೆ ಏನು ಮಾಡುವುದು, ಅಲ್ಲದೆ ಮದುವೆ ದೊಡ್ಡ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿದ್ದಾರೆ. ಅಲ್ಲಿ ಅಂಗವಿಕಲ ಮಕ್ಕಳು ಒಳಗಡೆ ಸರಾಗವಾಗಿ ಹೋಗಲು ವ್ಯವಸ್ಥೆ ಇದೆಯೋ ಇಲ್ಲವೂ ಹೀಗೆ ಹಲವಾರು ಯೋಚನೆಗಳು ಪ್ರಾರಂಭವಾದವು. ಕೊನೆಗೆ ಏನಾದರೂ ಆಗಲಿ ಮಕ್ಕಳನ್ನು ಕರೆದುಕೊಂಡು ಹೋಗಿಯೇ ಬಿಡೋಣ ಎನ್ನುವ ಬಂಡು ಧೈರ್ಯ ಮಾಡಿದೆ.
ನನ್ನ ಸಹಪಾಟಿಗಳ ಸಹಾಯದಿಂದ 20 ಅಂಗವಿಕಲ ಮಕ್ಕಳ ಪಟ್ಟಿ ಮಾಡಿ ಪೋಷಕರ ಜೊತೆ ಕಾರ್ಯಕ್ರಮದ ಬಗ್ಗೆ ಮಾತನಾಡಿದಾಗ 12 ಪೋಷಕರು ಮಾತ್ರ ಮಕ್ಕಳನ್ನು ನಮ್ಮ ಜೊತೆ ಮದುವೆಗೆ ಕಳುಹಿಸಲು ಒಪ್ಪಿಕೊಂಡರು. ಅದರಲ್ಲಿ ಇಬ್ಬರು ಗಾಲಿಕುರ್ಚಿ ಬಳಸುವ ಮಕ್ಕಳು, ಕ್ಯಾಲಿಪರ್ ಬಳಸುವ ಮಕ್ಕಳು, ಬೌಧ್ದಿಕ ವಿಕಲತೆಯುಳ್ಳ ಮಕ್ಕಳು ಹಾಗೂ ಶ್ರವಣ ನ್ಯೂನ್ಯತೆಯ ಮಕ್ಕಳಿದ್ದರು. ಮದುವೆಗೆ ಆಹ್ವಾನಿಸಿದ ವ್ಯಕ್ತಿ ಮದುವೆಯ ಮುನ್ನಾ ದಿನ ಕರೆ ಮಾಡಿ ವಾಹನದ ವ್ಯವಸ್ಥೆ ಹಾಗೂ ಎಷ್ಟು ಮಕ್ಕಳು ಬರುತ್ತಾರೆ ಎಂಬುದನ್ನು ವಿಚಾರಿಸಿದರು, ಹಾಗೂ ಕಲ್ಯಾಣ ಮಂಟಪವನ್ನು ತಲುಪುವ ವಿಳಾಸ ಮತ್ತು ಸಮಯದ ಸಂಪೂರ್ಣ ವಿವರಣೆ ಹಾಗೂ ಸಂಪರ್ಕ ಮಾಡಬೇಕಾದ ವ್ಯಕ್ತಿಯ ಪೋನ್ ನಂಬರ್ ನೀಡಿದರು. ನಮ್ಮ ಶಾಲೆಯ ವಾಹನ ಲಭ್ಯವಿದ್ದರಿಂದ ನಮ್ಮದೇ ವಾಹನವಿದೆ ನಾವು ಬರುತ್ತೇವೆ ಎಂದು ಭರವಸೆ ನೀಡಿದೆನು.
ಮದುವೆಯ ಮುನ್ನಾ ದಿನವೇ ಬೆಳಿಗ್ಗೆ ಮದುವೆಗೆ ಬರಲು ಸಿದ್ದರಿದ್ದ ಮಕ್ಕಳಿಗೆ, ಮದುವೆಯಲ್ಲಿ ಹೇಗಿರಬೇಕು, ಏನಾದರೂ ಸಮಸ್ಯೆಯಾದಲ್ಲಿ ಯಾರಿಗೆ ತಿಳಿಸಬೇಕು, ಒಟ್ಟಾಗಿ ಹೇಗೆ ಒಬ್ಬರೊಗೊಬ್ಬರು ಸಹಾಯ ಮಾಡಬಹುದು ಎಂಬುದರ ಕುರಿತು ವಿಶೇಷ ಶಿಕ್ಷಕರು ತಯಾರು ಮಾಡಿದ್ದರು.
ಮದುವೆಯ ದಿನ ಸಂಜೆ ಬಂದೇ ಬಿಟ್ಟಿತು, ಮಕ್ಕಳು ವರ್ಣರಂಜಿತ ಬಟ್ಟೆಗಳನ್ನು ತೊಟ್ಟು ಹೇಳಿದ ಸಮಯಕ್ಕೆ ಸರಿಯಾಗಿ ಎಲ್ಲರೂ ಒಂದೆಡೆ ಸೇರಿದರು, ಮಕ್ಕಳನ್ನು ಬಿಡಲು ಪೋಷಕರು ಬಂದಿದ್ದರು, ಮಕ್ಕಳ ಹಾಗೂ ಪೋಷಕರ ಸಂತೋಷವನ್ನು ಮಾತಿನಲ್ಲಿ ಹೇಳಲು ಸಾಧ್ಯವೇ ಇಲ್ಲ.
ಸುಮಾರು 6 ಗಂಟೆಗೆ ಹೊರಟು 7.30 ರ ಸಮಯಕ್ಕೆ 12 ಅಂಗವಿಕಲ ಮಕ್ಕಳೊಂದಿಗೆ ಶಾಲಾ ವಾಹನ ಚಾಲಕ ಸಿಬ್ಬಂದಿ ಮತ್ತು ನಾನು ಕಲ್ಯಾಣ ಮಂಟಪವನ್ನು ತಲುಪಿದೆವು. ಕಲ್ಯಾಣ ಮಂಟಪವನ್ನು ತಲುಪುವ ಒಂದು ಗಂಟೆ ಮುಂಚಿತವಾಗಿ ಸಂಪರ್ಕ ವ್ಯಕ್ತಿಗೆ ನಾವು ಬರುತ್ತಿದ್ದೇವೆ, ಪ್ರಸ್ತುತ ಎಲ್ಲಿದ್ದೇವೆ, ಎಷ್ಟು ಗಂಟೆಗೆ ಅಲ್ಲಿಗೆ ತಲುಪುತ್ತೇವೆ ಎಂಬುದನ್ನು ತಿಳಿಸಿದೆವು.
ಇನ್ನೇನು ಕಲ್ಯಾಣ ಮಂಟಪ ಹತ್ತಿರವಾಗುತ್ತಿದ್ದಂತೆ ಮನಸ್ಸಿನಲ್ಲಿ ಹಲವಾರು ಗೊಂದಲಗಳು ತೇಲಿ ಹೋಗುತ್ತಿದ್ದವು, ಆದರ ಮಧ್ಯೇ ಮಕ್ಳಳ ಕಲರವದ ಸದ್ದು, ಹಾಡುಗಳು ಕಿವಿಯಲ್ಲಿ ಗುಂಗುಡುತ್ತಾ ಗೊಂದಲಗಳನ್ನು ಮರೆಮಾಚುತ್ತಿದ್ದವು. ಕೊನೆಗೂ ಕಲ್ಯಾಣ ಮಂಟಪವನ್ನು ತಲುಪಿದೆವು, ವಾಹನವನ್ನು ಪಾರ್ಕ ಮಾಡಿ, ಗಾಲಿಕುರ್ಚಿಗಳನ್ನು ಕೆಳಗೆ ಇಳಿಸುತ್ತಿದ್ದಾಗ ಇಬ್ಬರು ಯುವಕರು ಓಡಿ ಬಂದು ಮಕ್ಕಳನ್ನು ವಾಹನದಿಂದ ಕೆಳಗೆ ಇಳಿಸಲು ಸಹಾಯ ಮಾಡಿದರು, ಅದರಲ್ಲಿ ಒಬ್ಬರು ನಾನು ಸಂಪರ್ಕಿಸಿದ ವ್ಯಕ್ತಿಯಾಗಿದ್ದರು, ನಾವು ಬರುವುದನ್ನೇ ಎದುರು ನೋಡುತ್ತಿದ್ದರು ಎಂದರೆ ತಪ್ಪಾಗಲಾರದು. ಮಕ್ಕಳೆಲ್ಲಾ ಕೆಳಗೆ ಇಳಿದ ನಂತರದಲ್ಲಿ ಇಬ್ಬರು ಯುವಕರು ತಮ್ಮ ಪರಿಚಯ ಮಾಡಿಕೊಂಡು ಗಾಲಿಕುರ್ಚಿಯಲ್ಲಿದ್ದ ಮಕ್ಕಳನ್ನು ಕರೆದುಕೊಂಡು ಇನ್ನುಳಿದ ಮಕ್ಕಳ ಜೊತೆ ಕಲ್ಯಾಣ ಮಂಟಪದ ಆವರಣಕ್ಕೆ ಕರೆತಂದರು.
ಕಲ್ಯಾಣ ಮಂಟಪದ ಹಿಂಭಾಗದ ಆವರಣದ ಒಳಗೆ ಭಪೆಟ್ ಮಾದರಿ ಉಪಚಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು, ಆದರೆ ಅಲ್ಲಿ ನಿಂತುಕೊಂಡು ತಿನ್ನಲು ನಮ್ಮ ಮಕ್ಕಳಿಗೆ ಕಷ್ಟ ಎಂಬುದು ಅವರು ಅರಿತು ಒಂದು ಕಡೆ ಮಕ್ಕಳು ಕುಳಿತುಕೊಳ್ಳಲು ಕುರ್ಚಿ ಮತ್ತು ಟೇಬಲ್ ವ್ಯವಸ್ಥೆಯನ್ನು ಮಾಡಿಕೊಟ್ಟು, ಉಪಹಾರವನ್ನು ಸೇವಿಸುವಂತೆ ಹೇಳಿದರು. ನಮಗೆ ಸಹಾಯ ಮಾಡಿದವರಿಗೆ ಧನ್ಯವಾದಗಳನ್ನು ಹೇಳಿ, ಎಲ್ಲರೂ ಇಲ್ಲೇ ಇರಿ ನಾವು ನಿಮಗೆ ಬೇಕಾಗಿರುವುದನ್ನು ತಂದು ಕೊಡುತ್ತೇವೆ ಎಂದು ನಾನು ಮತ್ತು ನನ್ನ ಜೊತೆ ಬಂದಿದ್ದ ಮತ್ತೊಬ್ಬ ಸಿಬ್ಬಂದಿ ಹೊರೆಟೆವು, ಆಗ ಆ ಯುವಕರು ನಮ್ಮನ್ನು ತಡೆದು ಮಕ್ಕಳಿಗೆ ಬೇಕಾಗಿರುವುದನ್ನು ಅವರೇ ಆಯ್ಕೆ ಮಾಡಿಕೊಳ್ಳಲಿ ಬಿಡಿ ಎಂದರು, ನಾವು ಎಷ್ಟೇ ಹೇಳಿದರೂ ಕೇಳದೆ ಇಬ್ಬಿಬ್ಬರು ಮಕ್ಕಳನ್ನು ಒಬ್ಬ ಕ್ಯಾಟರಿಂಗ್ ಸಹಾಯಕಯ ಸಿಬ್ಬಂದಿಯ ಜೊತೆ ಕಳುಹಿಸಿ ತಮಗೆ ಬೇಕಾದ ಉಪಹಾರವನ್ನು ಆಯ್ಕೆ ಮಾಡಿ ಕ್ಯಾಟರಿಂಗ್ ಸಹಾಯಕರಿಗೆ ಹೇಳುವಂತೆ ಹೇಳಿದರು ಮತ್ತು ಮಕ್ಕಳಿಗೆ ಬೇಕಾಗಿರುವುದನ್ನು ನಿಗದಿಪಡಿಸಿದ ಸ್ಥಳಕ್ಕೆ ತಂದುಕೊಡುವಂತೆ ಆದೇಶಿಸಿದರು. ಈ ರೀತಿಯ ಆದರದ ಸತ್ಕಾರದಿಂದ ಮುಜುಗರವಾಯಿತು ಜೊತೆಗೆ ಮಕ್ಕಳು ತಮ್ಮ ಬೇಕಾಗಿರುವುದನ್ನು ಆಯ್ಕೆ ಮಾಡಲು ಅವಕಾಶ ಸಿಕ್ಕಿದೆ ಎಂದು ಸಂತೋಷವಾಯಿತು.
ಉಪಹಾರ ಮುಗಿದ ನಂತರದಲ್ಲಿ ಮದುವೆಯ ರಿಸೆಪ್ಷನ್ ಸ್ಥಳಕ್ಕೆ ಆ ಇಬ್ಬರು ಯುವಕರು ನಮ್ಮನ್ನು ಕರೆದುಕೊಂಡು ಬಂದರು, ಮಂಟಪದ ಮೊದಲ ಸಾಲಿನಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿತ್ತು ಗಾಲಿಕುರ್ಚಿಯಲ್ಲಿನ ಇಬ್ಬರು ಮಕ್ಕಳು ಅದರಲ್ಲೇ ಕುಳಿತಿದ್ದರು, ಉಳಿದ ಮಕ್ಕಳು ನಿಗದಿಪಡಿಸಲಾದ ಆಸನಗಳಲ್ಲಿ ಕುಳಿತರು, ಆ ಇಬ್ಬರು ಯುವಕರು ಮಕ್ಕಳ ಹತ್ತಿರವೇ ತಾವು ಕುಳಿತುಕೊಂಡು ಮಕ್ಕಳ ಜೊತೆ ಸಂಭಾಷಿಸಲು ಪ್ರಾರಂಭಿಸಿದರು. ಮಕ್ಕಳಿಗೆ ದೊಡ್ಡ ಕಲ್ಯಾಣ ಮಂಟಪ, ಮಂಟಪದ ತುಂಬಾ ಪರಿಚಯವಿರದ ಹೊಸ ಮುಖಗಳು, ಹೂವಿನ ಅಲಂಕಾರ, ದೊಡ್ಡ ದೊಡ್ಡ ಟೀವಿಗಳು ಒಂದು ರೀತಿಯ ಆಶ್ಚರ್ಯವನ್ನುಂಟು ಮಾಡಿದರೆ, ಇಂಪಾದ ಸಂಗೀತದ ಧ್ವನಿ ಮಕ್ಕಳ ಮನಸ್ಸಿಗೆ ಉಲ್ಲಾಸ ನೀಡುತ್ತಿತ್ತು.
ರಿಸೆಪ್ಷನ್ ಪ್ರಾರಂಭವಾಯಿತು, ಮದುಮಗ, ಮದುಮಗಳು ವೇದಿಕೆಗೆ ಬಂದರು, ಅವರ ಜೊತೆ ಪೋಟೋಗ್ರಾಫರ್, ವಿಡಿಯೋಗ್ರಾಫರ್ ಮತ್ತು ಲೈಟ್ ಮೆನ್ಸ ಫೋಟೋಗಳನ್ನು ತೆಗೆಯುವದರಲ್ಲಿ ತಲ್ಲೀನರಾಗಿದ್ದರು. ಕೆಲವು ಮಕ್ಕಳಿಗೆ ಇದೆಲ್ಲಾ ಹೊಸದು, ಎಲ್ಲವನ್ನು ಆಶ್ಚರ್ಯದಿಂದ ನೋಡುತ್ತಾ ಕುಳಿತಿದ್ದರು. ನಮ್ಮ ಜೊತೆ ಕುಳಿತಿದ್ದ ಒಬ್ಬ ಯುವಕ ಮಂಟಪದ ಮೇಲೆ ಹೋಗಿ ಮದುಮಗನ ಕಿವಿಯಲ್ಲಿ ಏನೂ ಪಿಸುಗುಟ್ಟಿದ, ಆಗ ಮದುಮಗ ಮಕ್ಕಳ ಕಡೆ ಕೈಬೀಸಿ ಕೈ ಜೋಡಿಸಿ ನಮಸ್ಕಾರ ಮಾಡಿ, ನಮ್ಮ ಜೊತೆ ಕುಳಿತಿದ್ದ ಮತ್ತೊಬ್ಬ ಯುವಕನಿಗೆ ಸನ್ನೆ ಮಾಡಿ ಎಲ್ಲರನ್ನು ವೇದಿಕೆಯ ಮೇಲೆ ಕರೆತರುವಂತೆ ಹೇಳಿದರು. ಇನ್ನು ಯಾವುದೇ ಸಂಬಂಧಿಕರೂ ಮದುಮಕ್ಕಳಿಗೆ ಶುಭಕೋರಲು ವೇದಿಕೆಗೆ ಹೋಗಿರಲಿಲ್ಲ, ನಾವೇ ಮೊದಲು ಹೋಗುವುದು ಹೇಗೆ ಎಂದು ಹೋಗಲು ಹೊಂದೇಟು ಹಾಕುತ್ತಿದೆವು. ಆಗ ನಮ್ಮ ಜೊತೆ ಇದ್ದ ಯುವಕರು ಬನ್ನಿ ಬೇರೆಯವರು ಬಂದರೆ ತುಂಬಾ ಜನ ಆಗುತ್ತಾರೆ, ಅವರೆಲ್ಲಾ ಆಮೇಲೆ ಬರುತ್ತಾರೆ ಎಂದು ನಮ್ಮನ್ನು ಮಂಟಪದ ಮೇಲೆ ಕರೆದುಕೊಂಡು ಹೋದರು, ಮಂಟಪದ ಒಂದು ಬದಿಯಲ್ಲಿ ಮರದ ಹಲಗೆಗಳಿಂದ ತಾತ್ಕಾಲಿಕವಾದ ಗಾಲಿಕುರ್ಚಿ ಹೋಗಲು ಇಳಿಜಾರು ವ್ಯವಸ್ಥೆಯನ್ನು ಮಾಡಲಾಗಿದ್ದರಿಂದ ಎಲ್ಲಾ ಮಕ್ಕಳು ಮೇಲೆ ಹೋಗಲು ಯಾವುದೇ ಸಮಸ್ಯೆಯಾಗಲಿಲ್ಲ.
ವೇದಿಕೆಗೆ ಬಂದ ನಂತರದಲ್ಲಿ ಮದುಮಗ ನಮ್ಮನ್ನು ಮದುಮಗಳಿಗೆ ಪರಿಚಯ ಮಾಡಿಸಿದರು, ಮಕ್ಕಳೆಲ್ಲಾ ಮದುಮಗ, ಮದುಮಗಳಿಗೆ ಮದುವೆಯ ಶುಭಾಷಯವನ್ನು ಕೋರಿದರು, ಹಾಗೆಯೇ ಒಂದು ಮಗು ತಮ್ಮನ್ನು ಮದುವೆಗೆ ಆಹ್ವಾನ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿತು. ಶುಭಾಷಯ ಕೋರಿದ ನಂತರದಲ್ಲಿ ನಮ್ಮೆಲ್ಲರೊಂದಿಗೆ ಮದುಮಕ್ಕಳು ಒಂದು ಪೋಟೋ ತೆಗೆಸಿಕೊಂಡರು. ನಂತರದಲ್ಲಿ ವೇದಿಕೆಯಿಂದ ನಿರ್ಗಮಿಸಲು ಮುಂದಾದೆವು, ಆಗ ಮದುಮಗ ನನ್ನನ್ನು ಕರೆದು ಒಂದು ಕವರ್ ನನ್ನ ಕೈಗೆ ಕೊಟ್ಟು ಇದರಲ್ಲಿ ಸ್ವಲ್ಪ ಹಣ ಇದೆ, ಇದನ್ನು ಕೊಡಬೇಕೋ ಬೇಡವೋ ಗೊತ್ತಿಲ್ಲ, ಇದರಲ್ಲಿ ಮಕ್ಕಳಿಗೆ ಏನಾದರೂ ಕೊಡಿಸಿ, ಊಟ ಮಾಡಿಕೊಂಡು ಹೋಗಿ ಎಂದು ಹೇಳಿದರು, ನಾನು ಅದನ್ನು ತೆಗೆದುಕೊಂಡು ನಿಮ್ಮ ವಿಳಾಸ ಕಳುಹಿಸಿ, ನಿಮಗೆ ರಶೀದಿ ನೀಡಬೇಕು ಎಂದು ತಿಳಿಸಿ ಧನ್ಯವಾದ ಹೇಳಿ ವೇದಿಕೆಯಿಂದ ಕೆಳಗೆ ಇಳಿದು ಬಂದೆವು.
ಕೆಲವು ಮಕ್ಕಳು ಶೌಚಾಲಯಕ್ಕೆ ಹೋಗಬೇಕೆಂದು ಕೇಳಿದರು, ಆರಣದಲ್ಲೇ ಇದ್ದ ಶೌಚಾಲಯಗಳ ಬಳಿ ಮಕ್ಕಳನ್ನು ಕರೆದುಕೊಂಡು ಹೋದೆವು, ಗಾಲಿಕುರ್ಚಿಯಲ್ಲಿದ್ದ ಮಕ್ಕಳನ್ನು ಶೌಚಾಲಯದ ಒಳಗೆ ಕರದುಕೊಂಡು ಹೋಗಲು ನಮ್ಮ ವಾಹನದ ಚಾಲಕ ಸಿಬ್ಬಂದಿಗೆ ಆ ಇಬ್ಬರು ಯುವಕರು ಸಹಾಯ ಮಾಡಿದರು. ನಂತರದಲ್ಲಿ ನಮ್ಮನ್ನು ಊಟದ ವ್ಯವಸ್ಥೆ ಮಾಡಿದ್ದ ಆವರಣಕ್ಕೆ ಮೊದಲೇ ನಿಗದಿಪಡಿಸಿದ ಸ್ಥಳಕ್ಕೆ ಕರೆತಂದು, ಕ್ಯಾಟರಿಂಗ್ ಸಹಾಯಕರಿಗೆ ಮಕ್ಕಳಿಗೆ ಬೇಕಾದದ್ದನ್ನು ತಂದು ಕೊಡುವಂತೆ ಹೇಳಿದರು, ಅವರೂ ನಮ್ಮ ಜೊತೆ ಊಟ ಮಾಡಿದರು, ಮಕ್ಕಳು ಸಂತೋಷದಿಂದ ಬೇಕಾದ ವಿವಿಧ ತಿನಿಸುಗಳನ್ನು ಸವಿದರು. ಊಟದ ನಂತರ ನಾವೆಲ್ಲರೂ ಆ ಇಬ್ಬರು ಯುವಕರಿಗೆ ಧನ್ಯವಾದ ಹೇಳಿ ಅಲ್ಲಿಂದ ನಿರ್ಗಮಿಸಿದೆವು, ಶಾಲಾ ವಾಹನದಲ್ಲಿಯೇ ಮಕ್ಕಳನ್ನು ಮೊದಲೇ ನಿಗದಿಪಡಿಸಿದ ಸ್ಥಳಗಳಲ್ಲಿ ಡ್ರಾಪ್ ಮಾಡಿದೆವು, ರಾತ್ರಿ ತುಂಬಾ ಸಮಯವಾದ್ದರಿಂದ ನಾವು ಹೋಗುವ ಮುಂಚೆಯೇ ಪೋಷಕರು ಮಕ್ಕಳ ಬರುವಿಕೆಗಾಗಿ ಎದುರು ನೋಡುತ್ತಿದ್ದರು.
ಈ ಘಟನೆಯು ಒಂದು ಸವಿ ನೆನಪು, ಮಕ್ಕಳ ಸಂತೋಷವನ್ನು ಯಾರೂ ಹಿಡಿದಿಡಲು ಸಾಧ್ಯವಿಲ್ಲ, ಅವಕಾಶ ಕೊಟ್ಟರೆ ಅಂಗವಿಕಲ ಮಕ್ಕಳೂ ಇತರೆ ಮಕ್ಕಳ ಹಾಗೆ ಅವರೂ ಎಂಜಾಯ್ ಮಾಡುತ್ತಾರೆ.
ಸಮಾಜದಲ್ಲಿ ಎಲ್ಲರೂ ಒಂದೇ ರೀತಿ ಇರುವುದಿಲ್ಲ, ಸಾಮಾನ್ಯವಾಗಿ ನಾವು ಹೇಳುತ್ತೇವೆ. ಪ್ರಪಂಚದಲ್ಲಿ ಎಲ್ಲಾ ಕೆಟ್ಟವರೇ ಇದ್ದಾರೆ, ಎಲ್ಲರೂ ಸ್ವಾರ್ಥಿಗಳೇ ಎಂದು. ಆದರೆ ಸ್ವಾರ್ಥಿಗಳಲ್ಲೂ ಒಳ್ಳೆ ಸ್ವಾರ್ಥಿಗಳು ಇರುತ್ತಾರೆ. ಅವರು ನೀಡಿದ ಕವರ್ ನಲ್ಲಿ 20 ಸಾವಿರ ಹಣವಿತ್ತು, ಅದನ್ನು ಆ ಮಕ್ಕಳ ಶಾಲಾ ಶುಲ್ಕಕ್ಕೆ ಉಪಯೋಗಿಸಲಾಯಿತು, 12 ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಲ್ಪ ಸಹಾಯವಾಯಿತು.
ಮದುವೆಗೆ ಕರೆದುಕೊಂಡು ಹೋಗುವ ಮೊದಲು ಇದ್ದ ಆತಂಕ ಮರೆಯಾಯಿತು, ಮಕ್ಕಳ ಖುಷಿಗೆ ಕಾರಣವಾದ ಆ ವ್ಯಕ್ತಿಯ ಉದ್ದೇಶ ಏನೂ ಗೊತ್ತಿಲ್ಲ, ನಾನು ಕೇಳಲು ಹೋಗಲಿಲ್ಲ, ಆದರೆ ಅದು ಮಕ್ಕಳ ಮನಸ್ಸುಗಳಲ್ಲಿ ಮರೆಯಲಾರದ ನೆನಪಾಗಿ ಉಳಿಯಿತು ಎಂದು ಹೇಳಲಷ್ಟೇ ಸಾಧ್ಯ. ನಾವು ಹೇಗಿದ್ದೇವೆ, ಎಷ್ಟು ಹಣವಿದೆ ಮುಖ್ಯವಲ್ಲ ಹೃದಯ ಶ್ರೀಮಂತಿಕೆ ಮುಖ್ಯ, ಒಳ್ಳೆಯ ಉದ್ದೇಶ ಮುಖ್ಯ. ಜೊತೆಗೆ ಕಲ್ಯಾಣ ಮಂಟಪ ಪ್ರವೇಶವಾದಾಗಿನಿಂದ ನಿರ್ಗಮಿಸುವ ತನಕ ನಮ್ಮ ಜೊತೆ ಇದ್ದ ಆ ಇಬ್ಬರು ಯುವಕರ ಸಹಾಯವನ್ನು ಮರೆಯಲು ಸಾಧ್ಯವೇ ಇಲ್ಲ.
ಅಂಗವಿಕಲ ಮಕ್ಕಳಿಗೂ ಮನಸ್ಸಿದೆ, ಅವರೂ ನಮ್ಮ ನಿಮ್ಮೆಲ್ಲರಂತೆ, ಅವರಿಗೂ ಅವಕಾಶ ನೀಡಿ. ಒಂದು ಚಿಕ್ಕ ಅವಕಾಶ, ಸಹಾಯ ದೊಡ್ಡ ಬದಲಾವಣೆಗೆ ನಾಂದಿಯಾಗುತ್ತದೆ. ಬದಲಾವಣೆ ಎಲ್ಲಿಂದಲೋ ಬರುವುದಲ್ಲ ನಮ್ಮಿಂದಲೇ ಬದಲಾಗಬೇಕು, ಇದಕ್ಕೆ ಇದೊಂದು ಚಿಕ್ಕ ಉದಾಹರಣೆಯಷ್ಟೇ.
-ರಶ್ಮಿ ಎಂ ಟಿ