ಹೇಮಂತ್ನ ಮನದರಸಿ ಆಗಿ ಮಹಾರಾಣಿಯಂತೆ ಇರಬೇಕೆಂದಿದ್ದ ವಿಭಾ ಮನಸಲ್ಲಿ ತನ್ನ ತಾಯಿ, ತಂದೆ ಮಾಡಿದ ಕುತಂತ್ರದ ಬಗೆಗೆ ಹೇಸಿಗೆ ಅನಿಸತೊಡಗಿತು. ನಿಷ್ಕಲ್ಮಶ ಹೃದಯಿ, ತನ್ನ ಪ್ರೇಯಸಿಗಾಗಿ ತನ್ನ ತನು, ಮನ, ಧನ ಸರ್ವಸ್ವವನ್ನೂ ಅರ್ಪಿಸಿಕೊಂಡ ತೇಜುವಿನ ನೆನಪು ಬಂದು ಮೈ ಬೆವರುತ್ತಿದೆ, ಈಗ ಏನು ಮಾಡಲಿ, ಏನು ಮಾಡಲಿ. ವಿಲಿ ವಿಲಿಯಾಗಿ ವಿಭಾಳ ಮನಸು ಒದ್ದಾಡುತ್ತಿದೆ. ತನಗರಿವಿಲ್ಲದೇ ತನ್ನ ನಿಶ್ಚಿತಾರ್ಥದ ಉಂಗುರವನ್ನು ತಿರುವುತ್ತಿದ್ದಾಳೆ. ತಕ್ಷಣ ಉಂಗುರದ ಸ್ಪರ್ಶ ಗಮನಕ್ಕೆ ಬಂದು ನೋಡುತ್ತಾಳೆ. ಊಗಿ ಎಂದು ಅಚ್ಚು ಹಾಕಿಸಿದ ಗೋಲ್ಡನ್ ರಿಂಗ್. ಜೊತೆಗೆ ತನ್ನ ಮನದನ್ನೆಗೆಂದು ಹೇಮಂತ್ ನೀಡಿದ ಮತ್ತೊಂದು ಡೈಮಂಡ್ ರಿಂಗ್. ಕೋಟಿ ಬೆಲೆ ಬಾಳುವ ಡೈಮಂಡ್ ರಿಂಗ್ ನೋಡಿದವಳ ಮೈಂಡ್ ಮತ್ತೆ ಡೈವರ್ಟ್ ಆಗತೊಡಗಿತು. ಈಗ ಎಲ್ಲವೂ ಸುಸೂತ್ರ ಆಗುತ್ತಿದೆ. ಅಪ್ಪ ಅಮ್ಮ ಇಬ್ಬರಿಗೂ ಈ ಮದುವೆ ಒಪ್ಪಿಗೆ ಇದೆ, ಒಪ್ಪಿಗೆ ಇದೆ ಅನ್ನುವುದಕ್ಕಿಂತ ಅವರೇ ಬಲೆ ಹೆಣೆದು ಅದರಲ್ಲಿ ತನ್ನನ್ನು ಬಂಧಿಯಾಗಿಸಿದ್ದಾರೆ. ತನ್ನ ಮಗಳು ಭಿಕಾರಿಯನ್ನು ಮದುವೆ ಆಗೋದು ಯಾವ ಹೆತ್ತವರಿಗಾದರೂ ಸಹಿಸಲಸಾಧ್ಯ. ಆಗರ್ಭ ಶ್ರೀಮಂತರ ಮನೆ ಸೇರಬೇಕೆಂಬುದೇ ಅವರ ಬಯಕೆ ಆಗಿರುತ್ತದೆ. ಆದರೆ ತೇಜು ಈ ಮುಂಚೆ ಭಿಕಾರಿ ಆಗಿದ್ದ, ಈಗ ಅವನೂ ಕೂಡ ಎಂಬಿಬಿಎಸ್ ಮುಗಿಸಿದ್ದಾನೆ, ಜೀವನಕ್ಕೆ ಬೇಕಾದಷ್ಟು ದುಡೀತಿದಾನೆ, ಆದರೆ ಹೇಮಂತ್ನ ಶ್ರೀಮಂತಿಕೆಯ ಮುಂದೆ ಅವನು ಈಗ ಹುಟ್ಟಿದ ಹಸುಗೂಸು ಇದ್ದಂತೆ, ಹೇಮಂತ್ ಹಣದ ಶ್ರೀಮಂತಿಕೆಯಲ್ಲಿ ಕೋಟ್ಯಾಧಿಪತಿ, ಆದರೆ… ಆದರೆ.. ಆದರೆ..
ಅಯ್ಯೋ ಈ ಆದರೆ .. ಆದರೆ.. ನನ್ನ ಮನಸ್ಸನ್ನು ಬಿಟ್ಟು ಹೋಗ್ತಿಲ್ವಲ್ಲಪ್ಪ ದೇವರೇ..
ಯಾವುದು ಸರಿ? ಯಾವುದು ತಪ್ಪು? ಗೊಂದಲದ ಗೂಡಾದ ವಿಭಾ ಮನದಲ್ಲಿ ಮತ್ತೆ ಹೊಯ್ದಾಟ ಪ್ರಾರಂಭ ಆಗ್ತಿದೆ. ಹೇಮಂತ್ ಹಣದ ಶ್ರೀಮಂತಿಕೆಯಲ್ಲಿ ಕೋಟ್ಯಾಧಿಪತಿ ನಿಜ, ಆದರೆ ತೇಜುವಿನ ಹೃದಯ ಶ್ರೀಮಂತಿಕೆಗೆ ಸಮನಾದ ಸಿರಿವಂತಿಕೆ ಹೇಮಂತ್ನಲ್ಲೀ? ಸಿಗಬಹುದೇ, ಪ್ರೇಮ ನಾ? ಐಶ್ವರ್ಯ ನಾ? ಪ್ರೇಮದ ಮಳೆ ನಾ? ಹಣದ ಹೊಳೆ ನಾ? ಅನಾಥ ತೇಜು ನಾ! ಸಿರಿನಾಥ ಹೇಮಂತಾ !!
ಹೌದು, ತೇಜು ಹುಟ್ಟು ಅನಾಥ ನಿಜ, ಈಗ ತೇಜುವಿನ ಪ್ರೇಮ ಬಾಂಧವ್ಯಕ್ಕೆ ಸಿಕ್ಕವರೆಲ್ಲಾ ಅವನ ನೆಂಟರೇ ಆಗುತ್ತಿರುವಾಗ, ಅವನು ಅನಾಥನಾದರೂ ಹೇಗೆ ಆದಾನು, ನನ್ನ ತೇಜು ನನ್ನ ತೇಜು. ಛೇ ಛೇ.. ಮತ್ತೆ ತೇಜು ನನ್ನನ್ನು ಆವರಿಸಿಕೊಳ್ಳುತ್ತಿದ್ದಾನೆ. ತೇಜುವಿನ ಆ ಮುಗ್ಧ ಮುಖ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ, ತೇಜುವಿನ ನಿಷ್ಕಲ್ಮಶ ಪ್ರೇಮದ ಮುಂದೆ ಧನವೆಲ್ಲ ದಮನವಾಗುತ್ತದೆ, ನೋವೆಲ್ಲ ಶಮನವಾಗುತ್ತದೆ. ಅವನು ಮಾಡಿದ ತ್ಯಾಗದ ಫಲ ನನ್ನ ಪದವಿ, ಅವನ ತ್ಯಾಗಕ್ಕೆ ಪ್ರತಿಫಲವಾಗಿ ಅವನು ನಿರೀಕ್ಷಿಸಿರುವುದು ನನ್ನ ಪ್ರೇಮವನ್ನು ಮಾತ್ರ. ಆದರೆ ತಂದೆ, ತಾಯಿಯ ಹುನ್ನಾರದಿಂದ ನನ್ನ ಮನಸು ವಿಚಲಿತವಾಯಿತು. ಹೇಮಂತ್ನ ಸಿರಿವಂತಿಕೆ ನನ್ನ ಕಣ್ಣಿಗೆ ಪೊರೆ ತಂದುಬಿಟ್ಟಿತು. ನಾನೆಂತಹ ಪಾಪಿ, ನಾನೆಂತಹ ಸ್ವಾರ್ಥಿ, ನಾನೆಂತಹ ಕ್ರೂರಿ. ಇಡೀ ಕಾಲೇಜಿನಲ್ಲೇ ನಮ್ಮ ಪ್ರೇಮವನ್ನು ಹೊಗಳದವರಿಲ್ಲ, ಇದ್ದರೆ ಇಂತಹ ಪ್ರೇಮ ಇರಬೇಕು, ಇದ್ದರೆ ಇಂತಹ ಪ್ರೇಮಿಗಳಿರಬೇಕು, ಪ್ರೀತಿಸಿದರೆ ವಿಭಾ, ತೇಜುವಿನಂತೆ ಪ್ರೀತಿಸಬೇಕು ಎಂದು ಮಾತಾಡುತ್ತಿದ್ದರು. ಯಾವುದೇ ಕಾಲೇಜಾಗಿರಲಿ ಪ್ರೇಮಿಗಳನ್ನು ಕಂಡರೆ ಉರಿದು ಬೀಳುತ್ತಾರೆ, ಲವ್ ಮಾಡ್ತಿದಾರೆ ಎಂದರೆ ಸಾಕು ಅವರನ್ನು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ, ಆದರೆ ನಮ್ಮ ಪ್ರೇಮವನ್ನು ಕಂಡು ನಮ್ಮ ಗೆಳೆಯರು ಮಾತ್ರವಲ್ಲ, ಕಾಲೇಜಿನ ಪ್ರಾಧ್ಯಾಪಕರೂ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ನಾನೀಗ ಮಾಡ ಹೊರಟಿರುವ ಕುಕೃತ್ಯ ಪ್ರೇಮ, ಪ್ರೇಮಿಗಳ ಮೇಲೆ ಕಿಂಚಿತ್ತು ಇರುವ ನಂಬಿಕೆಯನ್ನೇ ಕಳೆಯುವಂತದ್ದಾಗಿದೆ. ಈಗಾಗಲೇ ಸಮಯ ಮೀರಿದೆ, ಆಗಲೇ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ರವಾನೆ ಆಗಿರುತ್ತದೆ. ತಕ್ಷಣವೇ ನಾನು ಎಚ್ಚೆತ್ತುಕೊಂಡು ಬದಲಾಗಬೇಕು. ನನ್ನ ತೇಜು, ನನ್ನ ಶ್ರೇಯಸ್ಸಿಗೆ ತನ್ನನ್ನೇ ಅರ್ಪಿಸಿಕೊಂಡ ತೇಜಸ್ವಿ. ಈಗಲೇ ಫೋನು ಮಾಡುತ್ತೇನೆ. ಆದದ್ದೆಲ್ಲ ಹೇಳಿ ಇದೆಲ್ಲ ನನ್ನ ತಂದೆ ತಾಯಿಯ ಹುನ್ನಾರ ಎಂದು ಹೇಳಿದರೆ ಖಂಡಿತ ನನ್ನ ತೇಜು ನನ್ನನ್ನು ಅರ್ಥಮಾಡಿಕೊಳ್ಳುತ್ತಾನೆ. ನನ್ನನ್ನು ಮತ್ತೆ ಸ್ವೀಕರಿಸುತ್ತಾನೆ.
ಅಮ್ಮನನ್ನು ಒಂದು ಮಾತು ಕೇಳಲೇ? ಅಪ್ಪನನ್ನು ಕೇಳಲೇ? ಅಯ್ಯೋ..! ಖಂಡಿತ ಬೇಡ ಅವರ ಹುನ್ನಾರವೇ ನನ್ನ ಮನಸ್ಸು ಹೇಮಂತ್ ಕಡೆಗೆ ವಾಲುವಂತೆ ಮಾಡಿದ್ದು.
ಹುನ್ನಾರ… ಹ ಹ ಹ ಹ… ಹುನ್ನಾರ… ಅವರೇನು ಹುನ್ನಾರ ಮಾಡಿದರು, ಆದರೆ ನಿನ್ನ ಮನಸ್ಸಿಗೇನಾಗಿತ್ತು ವಿಭಾ..?! ನಿನ್ನ ಮನದಲ್ಲಿ ಪ್ರೇಮದ ಪರದೆ ಹರಿದು ಹಣದ ವ್ಯಾಮೋಹದ, ನಿರ್ಭಾವನೆಯನ್ನೇ ಮೈಗೂಡಿಸಿಕೊಂಡಿರುವ ಸಿರಿವಂತಿಕೆಯನ್ನು ಮೆತ್ತಿಕೊಂಡ ತೆರೆ(ಮುಸುಕು) ಬಿದ್ದಿದೆ. ನಿನ್ನ ಮಹದಾಸೆ ಈಡೇರಿದ ಮರುಘಳಿಗೆಯಲ್ಲಿ ಅಹಂಕಾರ ಮೈದೋರಿದೆ, ಹತ್ತಿದ ಏಣಿಯನ್ನೇ ಒದೆಯುವ ನಿನ್ನಂತಹವರಿಂದ ಪ್ರೇಮಕ್ಕೇ ಅವಮಾನ. ಪ್ರೇಮಿಗಳಿಗೆ ಬೇರೆಯವರಿಂದ ಅವಮಾನ ಆಗೋದು ಸಹಜ, ಆದರೆ ಪ್ರೇಮಕ್ಕೆ ಪ್ರೇಮಿಗಳೇ ಅವಮಾನಮಾಡೋದಕ್ಕೆ ನೀನೇ ಜ್ವಲಂತ ಉದಾಹರಣೆ ನೋಡು. ಯಾವುದೇ ಪ್ರೇಮಿಯಾಗಲಿ ಮದುವೆ ಮುಂಚೆ ತನ್ನ ಹೆಂಡತಿಯಾಗುವವಳನ್ನು ಆಕೆ ಹೇಳಿದ ಕಡೆಗೆ ಸುತ್ತಾಡಿಸುತ್ತಾನೆ, ಅವಳಿಗೆ ಏನು ಇಷ್ಟವೋ ಅದನ್ನು ಕೊಡಿಸುತ್ತಾನೆ. ಅವಳಿಗೆ ಇಷ್ಟವಾದುದನ್ನೇ ಮಾಡ್ತಾನೆ, ಆದರೆ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಓದಿಸೋದು ಕೇಳಿದೀಯಾ? ನೋಡಿದೀಯಾ? ಅಂತಹ ದೊಡ್ಡ ಮನಸ್ಸು ತೇಜುಗೆ ಇದೆ ಎಂದರೆ, ಅಂತಹವನು ನಿನ್ನ ಪ್ರೇಮಿ ಎಂದರೆ ಎಷ್ಟು ಹೆಮ್ಮೆ ಪಡಬೇಕು, ನೀನು ಅವನಿಗೆ ಎಷ್ಟು ವಿಧೇಯಳಾಗಿರಬೇಕು, ಎಷ್ಟು ಆಭಾರಿಯಾಗಿರಬೇಕು. ಆದರೆ… ನೀನು… ಛೇ… ಛೇ..
ನಿನ್ನ ಮನಸೇ ಸ್ಥಿಮಿತದಲ್ಲಿಲ್ಲದಿದ್ದಾಗ ಬೇರೆಯವರ ಮಾತು ಹೀಗೇ, ನಮ್ಮ ಬಲಹೀನ ಮನಸಿನ ಮೇಲೆ ಪ್ರಭಾವ ಬೀರುತ್ತವೆ. ನಿನ್ನ ಮನೋ ದೌರ್ಬಲ್ಯವೇ ನಿನ್ನ ಶತ್ರು, ನಿನ್ನ ಈ ಹೊತ್ತಿನ ಸ್ಥಿತಿಗೆ ಕಾರಣ. ನೀನು ನಂಬಿಕೆ ದ್ರೋಹಿ, ವಿಶ್ವಾಸ ಘಾತುಕಿ, ಒಂದು ಮುಗ್ಧ ಮನಸನ್ನು ನೋಯಿಸಿದ ಹೃದಯ ಹೀನ ಹೃದಯ ತಜ್ಞೆ, ಹೃದಯದ ಶಸ್ತçಚಿಕಿತ್ಸೆ ಮಾಡಿ ಪ್ರಾಣ ಉಳಿಸುವ ವೈದ್ಯೆ, ತನ್ನ ಸಾಧನೆಗೆ ಕಾರಣವಾದ ಹೃದಯವನ್ನೇ ಹಿಂಡುತ್ತಿರುವ ಕೊಲೆ ಪಾತಕಿ… ಕೊಲೆ ಪಾತಕಿ… ಎಂದು ಅಂತರಂಗ ನುಡಿಯುತ್ತಿರುವಾಗಲೇ, ವಿಭಾ…. ಎಂಬ ಕೂಗು ಕಿವಿಗೆ ತಾಕಿ ಕಲ್ಪನಾ ಲೋಕದಿಂದ ಹೊರಬರುತ್ತಾಳೆ.
ತೇಜುಗೆ ಫೋನಾಯಿಸಿ ಮಾತನಾಡಬೇಕೆಂದುದು ಅಲ್ಲಿಗೇ ನಿಲ್ಲುತ್ತದೆ.
“ವಿಭಾ.. ಇಲ್ನೋಡು ನಿಮ್ಮತ್ತೆಯವರು ನನಗೆ ಕೊಟ್ಟ ರೇಷಿಮೆ ಸೀರೆ, ಎಷ್ಟು ಚೆನ್ನಾಗಿದೆ? ಇದಕ್ಕೆ ಎಷ್ಟು ರೇಟ್ ಗೊತ್ತಾ? ನಿಮ್ಮಪ್ಪಂಗೂ..”
“ಹೋಗ್ಲಿ ಬಿಡಮ್ಮ. ನಂಗ್ಯಾಕ್ ಹೇಳ್ತಿದೀಯಾ? ಇದೆಲ್ಲ”.
“ಯಾಕೇ ವಿಭಾ ಏನಾಯ್ತು ನಿಂಗೆ? ಅಲ್ಲಿಂದ ಬರೋವಾಗ ಚೆನ್ನಾಗಿದ್ಯಲ್ವಾ? ಏನ್ ಶ್ರೀಮಂತಿಕೆ, ಎಷ್ಟು ದೊಡ್ಡ ಮನೆ, ಎಷ್ಟೊಂದು ಕಾರುಗಳು.. ಆಳುಗಳು.. ಅಬ್ಬಬ್ಬಾ! ಪುಣ್ಯ ಮಾಡಿದ್ದೆ ವಿಭಾ.. ನೀನು. ಆ ಭಿಕಾರಿನ ಕಟ್ಕೊಂಡಿದ್ರೆ ನೀನ್ ಏನು ಕಾಣ್ತಿರ್ಲಿಲ್ಲ ನೋಡು”.
ತಾಯಿ ತೇಜೂನ ಭಿಕಾರಿ ಅಂದ ಕೂಡಲೇ ವಿಭಾ ಮನಸು ಕುಟುಕೋಕೇ ಪ್ರಾರಂಭ ಆಯ್ತು. ಅಮ್ಮಾ! ನನ್ ತೇಜೂನ ಭಿಕಾರಿ ಅನ್ನಬೇಡ. ಅವನು ದೇವತಾ ಮನುಷ್ಯ. ನನಗಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆದ ಮಹಾನ್ ವ್ಯಕ್ತಿ, ನನಗಾಗಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧ ಇರುವ ಹೃದಯವಂತ. ನಾನೇ.. ನಾನೇ.. ಎಲ್ಲ ಮರೆತು, ನಿಮ್ಮ ದುರುಳ ಉಪಾಯಕ್ಕೆ ಬಲಿಯಾದೆ, ಮೋಸ ಹೋದೆ, ಏನು ಮಂಕು ಬಡೆದಿತ್ತೋ ನನ್ನ ಮನಸಿಗೆ, ಹೇಮಂತ್ನ ಮಾತಿಗೆ ಮರುಳಾಗಿ, ಅವನ ಸಿರಿವಂತಿಕೆಯ ಸಂಪತ್ತನ್ನು ಕಂಡು ವಿಶ್ವಾಸ ದ್ರೋಹಿ ಆದೆ, ಮೋಸಗಾತಿ ಆದೆ. ಈ ನಂಬಿಕೆ ದ್ರೋಹವೂ ಒಂಥರಾ ವ್ಯಭಿಚಾರನೇ. ನಾನು ಹೇಮಂತ್ನ ಮದುವೆ ಆಗೋದಿಲ್ಲ, ನಾನು ತೇಜಸ್ನೇ ಮದುವೆ ಆಗೋದು. ನನಗೆ ಜೀವನ ಕೊಟ್ಟವನಿಗೇ ನನ್ನ ಜಿವ ಮುಡಿಪು. ಹಣಕ್ಕಿಂತ ಗುಣ ಮುಖ್ಯ, ಎಷ್ಟು ಐಶಾರಾಮಾಗಿ ಬದುಕುತ್ತೇವೆ ಎಂಬುದಲ್ಲ, ಎಷ್ಟು ಪ್ರೀತಿ, ನೆಮ್ಮದಿಯಿಂದ ಬದುಕುತ್ತೇವೆ ಎನ್ನುವುದು ಮುಖ್ಯ. ನಾನು ಎಂದಿಗೂ ನನ್ನ ತೇಜಸ್ಗೆ ಮೋಸ ಮಾಡೋದಿಲ್ಲ, ಆಗಿದ್ದಾಯ್ತು, ಈಗಲೇ ಫೋನ್ ಮಾಡಿ ನಡೆದಿದ್ದೆಲ್ಲ ಹೇಳ್ತೀನಿ, ಖಂಡಿತ ತೇಜು ನನ್ನನ್ನು ಕ್ಷಮಿಸುತ್ತಾನೆ. ನಮ್ ಪ್ರೀತಿ ಮೇಲೆ ಅವನಿಗೆ ಬಹಳ ನಂಬಿಕೆ, ಯಾವತ್ತಿಗೂ ತೇಜು ನನ್ ಕೈ ಬಿಡೋದಿಲ್ಲ. ಈಗಲೇ ಫೋನ್ ಮಾಡ್ತೀನಿ. ಎಂದು ಫೋನ್ ಡಯಲ್ ಮಾಡುವಷ್ಟರಲ್ಲೇ. ಛಟಾರ್ ಎಂದು ಕೆನ್ನೆಗೆ ಏಟು ಬೀಳುತ್ತದೆ. ವಿಭಾಳ ತಂದೆ, ತಮ್ಮ ಆಕ್ರೋಶವನ್ನೆಲ್ಲ ಕೈಯಲ್ಲಿ ತಂದುಕೊಂಡು ಬಾರಿಸಿದ ಏಟಿಗೆ ವಿಭಾ. ಪ್ರಜ್ಞೆ ತಪ್ಪಿ ಬೀಳುತ್ತಾಳೆ. ತಲೆತಿರುಗಿ ಬಿದ್ದ ವಿಭಾಳಿಗೆ ನೀರು ಚಿಮುಕಿಸಿದರೆ ಅರ್ದಂಬರ್ಧ ಎಚ್ಚರದ ಸ್ಥಿತಿಯಲ್ಲಿ ತೇಜೂ… ತೇಜೂ… ಎಂದು ಕನವರಿಸುತ್ತಾಳೆ.
ಅವಳಿಗೆ ಮತ್ತೆ ಮತ್ತೆ ನೀರು ಚಿಮುಕಿಸಿ ಎಚ್ಚರಗೊಳಿಸಿದ್ದೇ ತಡ, “ತೇಜುವನ್ನು ಮದುವೆ ಆದರೆ ಬಾಳು ಪ್ರಥಮ ಪಾದದಿಂದ ಪ್ರಾರಂಭವಾಗುತ್ತದೆ, ಹೇಮಂತ್ ಈಗಾಗಲೇ ಸಾವಿರ ಮೆಟ್ಟಿಲುಗಳಿಗಿಂತ ಮೇಲಿದ್ದಾನೆ. ನೀನು ದುಡಿದು ಕೂಡಿಡಬೇಕಾದದ್ದೇನಿಲ್ಲ. ಅಲ್ಲಾದರೆ ಎಲ್ಲದಕ್ಕೂ ಚೌಕಾಸಿ ಮಾಡಿ ಹಣ ಕೂಡಿಟ್ಟರೆ ಮನೆ ನಡಿಯೋದು, ಆಸ್ಪತ್ರೆ ಆಗೋದು. ಅಷ್ಟೇ ಅಲ್ಲದೆ ತೇಜು ಬೇರೆ ಆದರ್ಶ ಪುರುಷ. ಬಡ ಜನರು, ನಿರ್ಗತಿಕರು, ಅನಾಥರು ಅಂತ ಅವರ ಸೇವೆ ಮಾಡಬೇಕು ಅಂತಿರ್ತಾನೆ. ಇಷ್ಟೆಲ್ಲಾ ಇರುವಾಗ ಅವನನ್ನು ಕಟ್ಟಿಕೊಂಡರೆ ನಿನ್ನನ್ನೂ ಆಶ್ರಮಕ್ಕೆ ಕರೆದು ಅಲ್ಲೇ ಇರೋಣ ಎಂದರೂ ಅಚ್ಚರಿಯಿಲ್ಲ. ಹೇಮಂತ್ನ ಮನೆ, ಕಾರು, ಆಸ್ಪತ್ರೆ, ಬಿಜ್ನೆಸ್ ಒಂದು ದಿನದ ಆದಾಯವೇ ಲಕ್ಷ ದಾಟುತ್ತದೆ. ಇಂಥ ಅವಕಾಶ ಬಿಡಬಾರದು. ನಿನ್ನ ಪೂರ್ವ ಪ್ರೇಮದ ವೃತ್ತಾಂತವೇನು ಅವರಿಗೆ ತಿಳಿಯೋದಿಲ್ಲ. ನಿಶ್ಚಿತಾರ್ಥನೂ ಆಗೋಯ್ತು, ಇನ್ನೇನು ಮದುವೆನೂ ಆಗುತ್ತದೆ. ಮುಂದೆ ಸುಖದಾ ಸ್ವಪ್ನ ಗಾನವೇ ನಿನ್ನ ಬದುಕು. ನೋಡು, ನನ್ನ ಮಾತನ್ನು ಕೇಳು. ಸರಿಯಾಗಿ ಯೋಚಿಸಿ ನೋಡು. ಈ ಪವಿತ್ರ ಪ್ರೇಮ, ಆದರ್ಶ, ತ್ಯಾಗ, ಮೋಸ, ವಂಚನೆ, ಎಲ್ಲವೂ ಸುಳ್ಳು. ಈ ಪ್ರಾಮಾಣಿಕತೆ, ನಿಷ್ಠೆ, ಸೇವೆ ಎಲ್ಲವೂ ಆಗಿನ ಮಟ್ಟಿಗೆ ತಾತ್ಕಾಲಿಕ ಸಂತೋಷ ನೀಡುತ್ತವೆ ಅಷ್ಟೆ. ಬದುಕನ್ನು ಸುಖವಾಗಿ ಅನುಭವಿಸಬೇಕು ಅಂದ್ರೆ ದುಡ್ಡು ಬೇಕೇ ಬೇಕು. ಬದುಕಿನಲ್ಲಿ ಸಂತೋಷಕ್ಕಿಂತ ಅನುಕೂಲಗಳು ಮುಖ್ಯ. ಆದರ್ಶತನ ಅನ್ನೋದು ಪ್ರಾರಂಭದಲ್ಲಿ ಬಹಳ ಚೆನ್ನಾಗಿದೆ ಅನ್ಸುತ್ತೆ, ಆದರೆ ಕಷ್ಟ ಅಂತ ಬಂದಾಗ ಕೈ ಹಿಡಿಯೋದು ಹಣವೇ ಹೊರತು, ನಿಮ್ಮ ಆದರ್ಶ, ಪ್ರಾಮಾಣಿಕತನ, ಮತ್ತೆ ನೀವೇನೋ ಹೇಳ್ತೀರಲಾ.. ಆಂ.. ಅದೇ ಪವಿತ್ರ ಪ್ರೇಮ.. ಅದೂ ಅಲ್ಲ. ಅರ್ಥ ಮಾಡ್ಕೋ ವಿಭಾ, ನಾ ಹೊಡ್ದೆ ಅಂತ ಬೇಜಾರ್ ಆಗಬೇಡಮ್ಮಾ. ನಿಶ್ಚಿತಾರ್ಥ ಕೂಡ ಆಗೋಗಿದೆ. ಶೀಘ್ರದಲ್ಲೇ ಮದುವೆನೂ ಮಾಡಿಬಿಡ್ತೀವಿ. ನಿನ್ನ ಬೇಡವಾದ ಆಲೋಚನೆಗಳನ್ನು ಪಕ್ಕಕ್ಕಿಟ್ಟು, ಸುಖವಾಗಿರೋದು ನೋಡು, ನೀನು ಮತ್ತೆ ನಿನ್ ಹಠ ಮುಂದುವರೆಸೋದಾದ್ರೆ ನಮ್ಮನ್ನ ಕಳ್ಕೋಬೇಕಾಗುತ್ತದೆ. ನಿಶ್ಚಿತಾರ್ಥ ಆದಮೇಲೆ ಓಡಿ ಹೋದ್ಲಾ ನಿಮ್ ಮಗಳು ಎಂಬ ಮಾತನ್ನು ಕೇಳಿ ಬದುಕೋಕೆ ನಮ್ಮಿಂದ ಸಾಧ್ಯ ಇಲ್ಲಮ್ಮ, ವಿಚಾರ ಮಾಡು” ಎಂದು ತಂದೆ ತಲೆ ಸವರಿ ಹೋಗ್ತಾರೆ.
ವಿಭಾಳ ತಾಯಿಯೂ ಇದೇ ಪುರಾಣ ಹೇಳಿ, “ಇಷ್ಟಕ್ಕೂ ಮೀರಿ ನೀನೇನಾದ್ರೂ ಮತ್ತೆ ಪ್ರೀತಿ, ಪ್ರೇಮ, ತೇಜು ಅಂತ ಹೋದ್ಯೋ ಹುಷಾರ್!” ಎಂದು ಎಚ್ಚರಿಕೆ ಕೊಟ್ಟು ಜಾಣತನದಿಂದ ಮಲ್ಕೋ, ಬೆಳಿಗ್ಗೆ ಮಾತಾಡೋಣ ಎಂದು ಫೋನ್ ತೆಗೆದುಕೊಂಡು ಹೊರ ನಡೀತಾಳೆ.
ವಿಭಾಳ ಮನಸ್ಥಿತಿ ಮತ್ತಷ್ಟು ಹದಗೆಟ್ಟು, ವಿಲ ವಿಲ ಒದ್ಯಾಡತೊಡಗುತ್ತದೆ. ಮತ್ತೆ ಮನದ ತೂಗು ತಕ್ಕಡಿಯಲ್ಲಿ ತೇಜೂನ ಪ್ರೀತಿ, ತ್ಯಾಗ, ತಂದೆ ತಾಯಿ, ಅತ್ತೆ ಮಾವ ಯಾರೂ ಇಲ್ಲದ ಅವನೊಂದಿಗಿನ ಬದುಕು, ಕಷ್ಟ, ನಷ್ಟ ಒಂದು ಕಡೆ, ಹೇಮಂತ್, ಅವನ ಸಂಪತ್ತು, ಸುಖದ ಸುಪ್ಪತ್ತಿಗೆ, ರಾಣಿಯ ಬದುಕು ಜೊತೆಗೆ ತಂದೆ ತಾಯಿ, ಅತ್ತೆ ಮಾವ ಒಂದು ಕಡೆ.
ತೂಗುತ್ತಿದೆ, ತೂಗುತ್ತಿದೆ, ಅತ್ತ ಇತ್ತ ಹೊಯ್ದಾಡಿದ ತಕ್ಕಡಿಯಲ್ಲಿ ಕೊನೆಗೆ ಮನ ಹೆಚ್ಚು ವಾಲಿದ್ದು ಹೇಮಂತನ ಸಿರಿತನದ ಕಡೆಗೆ. ಕೊನೆಗೂ ಆದರ್ಶ ಪ್ರೇಮ ಪತನವಾಯಿತು. ಕಟ್ಟಿದ ಪ್ರೇಮದ ಸೌಧ ಲೋಭದಿಂದ ನೆಲಸಮವಾಯಿತು. ತ್ಯಾಗಕ್ಕೆ ಬೆಲೆ ಇಲ್ಲ ಎಂಬುದು ಸಾಬೀತಾಯಿತು. ಅನುಕೂಲ ಸಿಂಧುವಾಗಿ ವಿಭಾ. ಹೇಮಂತನೊಡನೆ ಕೆಲವೇ ದಿನಗಳಲ್ಲಿ ಅದ್ಧೂರಿಯಾಗಿ ಸಪ್ತಪದಿ ತುಳಿದಳು. ಮನೆ ತುಂಬ ಆಳುಗಳು, ಕಾಲಿಟ್ಟರೆ ಸವೆಯುತ್ತದೆ, ಮುಟ್ಟಿದರೆ ಕೈ ನೋವಾಗುತ್ತದೆ ಎಂಬಂತಹ ಉಪಚಾರ ಅತ್ತೆ ಮನೆಯಲ್ಲಿ. ಕ್ರಮೇಣ ತೇಜುವಿನ ನೆನಪು ಕ್ಷೀಣಿಸಿತು, ಸಾಧನೆಗೆ ಕಟಿಬದ್ಧವಾಗಿ ಹೆಗಲು ಕೊಟ್ಟ ತೇಜುವಿನ ಹಸ್ತಕ್ಕಿಂತ ಹೇಮಂತನಲ್ಲಿನ ಗರಿಗರಿ ನೋಟಿನ ವ್ಯಾಮೋಹ ಮಿಗಿಲಾಯಿತು. ಈ ನಡೆಗೆ ಪ್ರತ್ಯಕ್ಷವಾಗಿಯೇ ವಿಭಾಳ ತಂದೆ ತಾಯಿ ಹೊಣೆಗಾರರಾದರು.
ಮೋಸ, ವಿಶ್ವಾಸ ದ್ರೋಹ, ಪ್ರೀತಿ ಎಂಬ ಪವಿತ್ರ ಪದಕ್ಕೆ ಮಾಡುತ್ತಿರುವ ಅವಮಾನ, ವಂಚನೆ, ಪ್ರಾಮಾಣಿಕ ಪ್ರೇಮಿಗೆ ಹೃದಯಾಘಾತ ಮಾಡುತ್ತಿದ್ದೇನೆ ಎಂಬುದು ಹಣದ ಮದ, ಲೋಭ ತುಂಬಿದ ಹೃದಯ ತಜ್ಞೆಯ ನಾಡಿ ಮಿಡಿತಕ್ಕೆ ಅರಿವಿಗೆ ಅಂತಿಮವಾಗಿ ಬಾರದೇ ಹೋಯಿತು.
ವಿಭಾಳ ಬದುಕಲ್ಲಿ ಎಲ್ಲವೂ ಸುಸೂತ್ರವಾಗಿಯೇ ಸಾಗಿತ್ತು. ಏಳೇಳು ಜನ್ಮದ ಪುಣ್ಯದ ಫಲ ಎಂಬಂತೆ ಸುಖದ ಉತ್ತುಂಗದಲ್ಲಿ ವಿಭಾ ಇದ್ದಳು. ಸ್ಪುರದ್ರೂಪಿ ಗಂಡ, ಐಶಾರಾಮಿ ಬದುಕು, ಮನೆಯಲ್ಲಿ ಮೈಬಗ್ಗಿಸೋ ಅನಿವಾರ್ಯತೆ ಇಲ್ಲ. ಪಾತ್ರೆ, ಬಟ್ಟೆ, ಕಸ ಅಂಗಡಿಗೆ ಹೋಗೋದು ಕನಿಷ್ಠ ಪಕ್ಷ ಅಡುಗೆ ಮನೆಗೂ ಹೋಗುವ ಅನಿವಾರ್ಯತೆ ಇಲ್ಲ. ಎಲ್ಲದಕ್ಕೂ ಆಳುಗಳು. ಒಮ್ಮೊಮ್ಮೆ ತೇಜು ನೆನಪಾಗೋನು, ಅವನಿಗೆ ಮೋಸ ಮಾಡಿದೆ ಅನಿಸೋದು. ಈ ಪದವಿ, ವಿದ್ಯೆ ಅವನ ಭಿಕ್ಷೆ ಅಲ್ವಾ ಅನಿಸೋದು. ಮರುಕ್ಷಣ ಅವನೊಂದಿಗಿನ ಬಡತನದ ಬದುಕು ನೆನಪಾಗಿ ಮನದಲ್ಲೇ ದುಗುಡ ಪಟ್ಟು ಈಗಿನ ಸುಖದ ಬದುಕು ಕಂಡು ಅವನನ್ನ ಮದುವೆ ಆಗದೇ ಇದ್ದದ್ದೇ ಒಳ್ಳೇದಾಯ್ತು ಅನಿಸೋದು. ಮತ್ತೆ ತತ್ಕ÷್ಷಣವೇ ಅವನು ತೋರಿದ ಪ್ರೀತಿ, ಆದರ, ಸಹಕಾರ ನೆನಪಿಗೆ ಬಂದು ತನ್ನ ಕಾರ್ಯದ ಬಗೆಗೆ ಅಸಹ್ಯ ಅನಿಸೋದು. ಹೀಗೆ ವಿಭಾಳ ಮನ ತಪ್ಪು ಸರಿಯ ಚಿಂತನೆಯಲ್ಲಿ ಸಾಗ್ತಾಯಿತ್ತು.
*
ಇತ್ತ ತೇಜಸ್ ದಿನೇ, ದಿನೇ ವಿಭಾಳ ನೆನಪಲ್ಲಿ ಕೊರಗುತ್ತಿದ್ದ. ಬಡಪಾಯಿ, ಸಹೃದಯಿ, ನಿಷ್ಕಲ್ಮಶ ಜೀವಿ, ತ್ಯಾಗಮೂರ್ತಿ ತೇಜಸ್ ಪ್ರಾರಂಭದಲ್ಲಿ ಡಿಪ್ರೆಶನ್ಗೆ ಹೋಗಿ ಇಂದೋ ನಾಳೆನೋ ಅನ್ನೋ ಸ್ಥಿತಿಯಲ್ಲಿದ್ದ. ಆದರೆ ಬದುಕನ್ನು ಕಷ್ಟದಿಂದಲೇ ಗೆದ್ದು ಬಂದವರಿಗೆ ಮಾನಸಿಕ ಸ್ಥೈರ್ಯ ತುಸು ಜಾಸ್ತಿನೇ ಇರುತ್ತೆ. ಹೆಣ್ಣಿನ ಮೋಹದಿಂದ ಹೊರಬರೋಕೆ ಕೇವಲ ಮಾನಸಿಕ ಸ್ಥೈರ್ಯವಷ್ಟೇ ಇದ್ದರೆ ಸಾಲದು ಅಂತರಂಗದ ನೋವನ್ನು ಮರೆಯುವ ಮಾರ್ಗೋಪಾಯವೂ ಇರಬೇಕು.
ಎಷ್ಟು ದಿನ ಅಂತ ಕೊರಗಲು ಸಾಧ್ಯ, ಮನಸು ಜಾಗ್ರತೆ ಆಯ್ತು. ತನ್ನ ವೃತ್ತಿ ಸಾಮಾನ್ಯವಾದುದಲ್ಲ ಜನರ ಜೀವ ಉಳಿಸೋ ಸೇವಾಪರವಾದ ಕಾರ್ಯ. ನಾನೇ ಜೀವ ಕಳೆದುಕೊಳ್ಳೋ ಸ್ಥಿತಿಗೆ ಬಂದರೆ ನನ್ನ ಬಳಿ ಬಂದ ರೋಗಿಗಳಿಗೆ ಏನು ತಾನೆ ಧೈರ್ಯ ತುಂಬಲು ಸಾಧ್ಯ. ನಾನು ವಿಭಾಳನ್ನು ಮರೆಯಬೇಕು, ನನ್ನ ಬದುಕಿನಲ್ಲಿ ರೂಢಿಸಿಕೊಂಡ ಮೌಲ್ಯದ ಕಡೆಗೆ ನಾನು ಹೆಜ್ಜೆ ಇಡಬೇಕು. ಮುಂದೆ ಉನ್ನತ ವ್ಯಾಸಂಗವನ್ನು ಮಾಡಬೇಕು. ಸಾಧನೆಗೆ ಯಾವ ನೋವೂ ಅಡ್ಡಿ ಬರಬಾರದೆಂದು ತೋರಿಸಬೇಕು. ಹೌದು, ಹೌದು ನಾನು ಸಾಧಿಸಬೇಕು, ಸಾಧಿಸಬೇಕು. ಹೌದು ಹೌದು ಎಂದು ಜೋರಾಗಿ ಮಾತನಾಡುವನನ್ನು, “ಏ ಏನಾಯ್ತೋ? ಏನಾದ್ರೂ ಕನಸು ಕಾಣ್ತಿದಿಯಾ ಹೇಗೆ? ಏಳೋ ತೇಜಸ್ ನಿನ್ನ ಪರಿಸ್ಥಿತಿ ನೋಡೋಕಾಗ್ತಿಲ್ಲ ಕಣೋ ಏಳೋ.. ಹೀಗೆ ಆದ್ರೆ ಮುಂದೆ ನಿನ್ನ ಜೀವನದ ದಿಕ್ಕೆ ಬದಲಾಗುತ್ತೆ. ಏಳೋ” ಎಂಬ ಜೀವದ ಗೆಳೆಯನ ಮಾತಿಗೆ ಎಚ್ಚರಗೊಂಡ ತೇಜಸ್ನ ಮುಖ ಸಂಪೂರ್ಣ ಬಾಡಿತ್ತು. ಗೆಳೆಯನ ಈ ಪರಿಸ್ಥಿತಿಯನ್ನು ಬದಲಾಯಿಸಲೆಂದೇ ಮಾಧವ ಒಂದು ತೀರ್ಮಾನಕ್ಕೆ ಬಂದಿದ್ದ.
ವಿಭಾಳ ಪ್ರೀತಿಯಿಂದ ವಂಚಿತನಾದ ತೇಜಸ್ಗೆ ಪ್ರೀತಿ ತೋರಿಸೋ ಒಂದು ಜೀವದ ಅಗತ್ಯತೆ ಇದೆ ಎಂದು ಅರಿತ ಮಾಧವ ತನ್ನ ತಂಗಿ ಅನುಪಮಾಳನ್ನು ಕೊಟ್ಟು ಮದುವೆ ಮಾಡಿಸಬೇಕೆಂದಿದ್ದ. ಇದಕ್ಕೆ ಅನುಪಮಾಳದ್ದಾಗಲಿ, ಅವರ ತಂದೆ ತಾಯಿಯದ್ದಾಗಲೀ ಯಾವುದೇ ಆಕ್ಷೇಪ ಇರಲಿಲ್ಲ. ಪ್ರಾರಂಭದಲ್ಲಿ ತೇಜಸ್ ಮದುವೆ ಆಗೋಕೆ ತಿರಸ್ಕರಿಸಿದನಾದರೂ ಮಾಧವ ಮತ್ತು ವಿಭಾಳ ಗೆಳತಿ ವೇದಶ್ರೀಯ ಓಲೈಕೆಯಿಂದ, ಸತತ ಪ್ರಯತ್ನದಿಂದ ತೇಜು ಮದುವೆಗೆ ಸಮ್ಮತಿಸಿದ. ಸರಳವಾಗಿ ತೇಜಸ್ನ ಆದರ್ಶದಂತೆ ಅವನ ಮದುವೆ ಅನುಪಮಾಳೊಂದಿಗೆ ಆಶ್ರಮದಲ್ಲೇ ಆಯಿತು.
–ವರದೇಂದ್ರ ಕೆ.