ವರಂಗ ಜೈನ ಕ್ಷೇತ್ರ: ಪ್ರವೀಣ ಶೆಟ್ಟಿ, ಕುಪ್ಕೊಡು


ವರಂಗ ಹೆಸರೇ ಒಂದು ಅದ್ಬುತ. ವರಂಗ ಇರುವುದು ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ 5 ಕಿ.ಮೀ. ದೂರದಲ್ಲಿ. ಅದೊಂದು ಜೈನ ಕ್ಷೇತ್ರ, ವಿಶಾಲವಾದ ಕೆರೆಯ ಮಧ್ಯದಲ್ಲಿ ನೆಲೆನಿಂತ ಜೈನ ಬಸದಿಯನ್ನು ದೊಣಿಯ ಮೂಲಕ ನಿಧಾನವಾಗಿ ಸಾಗುವುದೇ ಒಂದು ರೋಮಾಂಚಕಾರಿ ಅನುಭವ.

ನಾನು ಮದುವೆಯಾದ ಸಮಯದಲ್ಲಿ ಮೊದಲ ಬಾರಿ ಪತ್ನಿ ಶ್ರುತಿ ಜೊತೆ ಭೇಟಿ ನೀಡಿದ್ದೆ, ಆದರೆ ಅದು ನವರಾತ್ರಿಯ ಸಮಯವಾದ್ದರಿಂದ ಮಳೆ ತುಂಬಾ ಬರ್ತಾ ಇತ್ತು ಆದ್ದರಿಂದ ದೋಣಿಯನ್ನು ಬಿಡುತ್ತಿರಲಿಲ್ಲ. ಶ್ರುತಿಗೆ ತುಂಬಾ ಬೇಸರವಾಗಿತ್ತು. ಅವಳು ಪ್ರತೀ ಬಾರಿ ಊರಿಗೆ ಹೋದಾಗಲೂ ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ಆಸೆ ತೋಡಿಕೊಳ್ಳುತ್ತಿದ್ದಳು ಆದರೆ ಅದಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಆದರೆ ಕಳೆದವಾರ ಮತ್ತೆ ಅಲ್ಲಿಗೆ ಹೋಗುವ ಸಮಯ ಕೂಡಿಬಂತು. ಇಳಿ ಸಂಜೆಯ ಹೊತ್ತು, ಸೂರ್ಯ ತನ್ನ ದಿನದ ಕೆಲಸ ಮುಗಿಸಿ ಹೊರಡುವ ಸಮಯ. ದೋಣಿಯವನ ಆ ದಿನದ ಕೊನೇಯ ಟ್ರಿಪ್ ನಾವು ದೋಣಿ ಏರಿದೆವು. ನಮ್ಮ ಜೊತೆ ಇನ್ನೂ ನಾಲ್ಕೈದು ಮಂದಿ ಇದ್ದಿದ್ದರು. ದೋಣಿ ಆ ಕೆರೆಯ ನೀರಿನ ಮೇಲೆ ನಿಧಾನವಾಗಿ ಚಲಿಸಲು ಪ್ರಾರಂಭಿಸಿತು. ಶ್ರುತಿಯಂತೂ ತುಂಬಾ ಖುಷಿಯಾಗಿದ್ದಳು. ಮೂರ್ನಾಲ್ಕು ನಿಮಿಷ ಅಷ್ಟೇ ಕರೆಯ ಮಧ್ಯ ಭಾಗದಲ್ಲಿ ವಿರಾಜಮಾನವಾಗಿರುವ ಪಾಶ್ವನಾಥರ ಬಸದಿಗೆ ಬಂದು ನಿಂತೆವು.

ಚತುರ್ಮುಖ ಗರ್ಭಗುಡಿ, ಪ್ರತ್ಯೇಕ ನಾಲ್ಕು ದ್ವಾರಗಳು, ಪ್ರತಿಯೊಂದು ದಿಕ್ಕಿಗೂ ಒಂದೇ ಅಳತೆಯ ಮುಖ ಮಂಟಪಗಳು, ಹೊರಭಾಗದಲ್ಲಿ ಪ್ರದಕ್ಷಿಣೆ ಪಥ ಮತ್ತು ನಕ್ಷತ್ರಾಕಾರದ ಜಗುಲಿ. ಇಡೀ ಬಸದಿಯನ್ನು ಕಟ್ಟಿದ್ದು ಕಲ್ಲಿನಿಂದ. ಚಾವಣಿಯೂ ಕಲ್ಲಿನದೆ. ನಾಲ್ಕೂ ಬದಿಗಳಲ್ಲಿ ಜೈನ ತೀರ್ಥಂಕರರಾದ ಪಾರ್ಶ್ವನಾಥ, ಅನಂತನಾಥ, ನೇಮಿನಾಥ, ಶಾಂತಿನಾಥ ವಿಗ್ರಹಗಳು ಖಡ್ಗಾಸನ ಭಂಗಿಯ ಕರಿ ಶಿಲೆಯಲ್ಲಿ ಕೆತ್ತಲ್ಪಟ್ಟವೆ. ಅಲ್ಲಿಯ ಮೂಲ ದೇವರು ಪೂರ್ವಾಭಿಮುಖವಾಗಿ ನಿಂತ ಪಾರ್ಶ್ವನಾಥ ವಿಗ್ರಹದ ಪಕ್ಕ ಪದ್ಮಾವತಿ ದೇವಿಯ ಬಿಂಬವಿದೆ. ಅವಳೇ ಇಲ್ಲಿನ ಪ್ರಧಾನ ಶಕ್ತಿ. ಅವಳಿಗೆ ಅರ್ಚಕರಿಂದ ಪೂಜೆ ಮತ್ತು ಮಂಗಳಾರತಿ ಸೇವೆ ನೆಡೆಯುತ್ತದೆ. ಬಸದಿಯ ಒಳ ಭಾಗದಿಂದಲೂ ಪ್ರದಕ್ಷಿಣೆ ಹಾಕಬಹುದು, ದಾರಿ ಮಾತ್ರ ತುಂಬಾ ಕಿರಿದಾಗಿದೆ.

ಹೆಚ್ಚೆಂದರೆ ಅರ್ಧಗಂಟೆ ಸಮಯ ಅಲ್ಲಿರಲು ನೀಡುತ್ತಾರೆ, ಮತ್ತೆ ಅದೇ ದೋಣಿಯ ಮೂಲಕ ನಾವು ಹತ್ತಿದ ಸ್ಥಳಕ್ಕೆ ಬಂದು ತಲುಪಿಸುತ್ತಾರೆ. ಅಲ್ಲಿಂದ ವಾಪಾಸು ಬರುವಾಗ ಶ್ರುತಿಯ ಮೊಗದಲ್ಲಿ ಒಂದು ಸಂತೃಪ್ತಿಯ ಭಾವ.. ಏನೊ ತುಂಬಾ ಖುಷಿಯಾಗಿದ್ದಳು. ಟಿಕೇಟನ್ನು ಅಲ್ಲೇ ಪಕ್ಕದಲ್ಲಿರು ಇನ್ನೊಂದು ಬಸದಿಯಲ್ಲಿರುವ ಕಛೇರಿಯಲ್ಲಿ ತೆಗೆದುಕೊಳ್ಳಬೇಕು ಒಬ್ಬರಿಗೆ ಕೇವಲ 20 ರೂಪಾಯಿ ಮಾತ್ರ. ಕೆರೆಯ ಮುಂದೆ ಮೂರು ಎಕರೆ ವಿಸ್ತೀರ್ಣದ ಬ್ರಹಧಾಕಾರದ ಗದ್ದೆ ಇದೆ. ಅದರಲ್ಲಿ ವರ್ಷಕ್ಕೊಂದು ಭತ್ತದ ಬೆಳೆ ತಗೆಯುತ್ತಾರೆ. ಇನ್ನು, ಕೆರೆಯ ತುಂಬಾ ಪಾಚಿ ಮತ್ತು ಕಳೆ ಬೆಳೆದಿವೆ ಅವುಗಳನ್ನು ಸ್ವಚ್ಛಗೊಳಿಸಿ ಮತ್ತು ಹೂಳು ಎತ್ತುವ ಕೆಲಸವಾಗಬೇಕು. ಇದರಿಂದಾಗಿ ನಮ್ಮ ಹಿರಿಯರು ಕಟ್ಟಿಸಿದ ಕರೆ ಅದರಿಂದ ಸುತ್ತಮುತ್ತಲಿನ ಜನರ ನೀರಿನ ದಾಹ ತೀರಿಸಬಹುದು.

-ಪ್ರವೀಣ ಶೆಟ್ಟಿ, ಕುಪ್ಕೊಡು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x