ನೆನಪಿದೆ ನನಗೆ
ಕೊಂಕಣಿ ಮೂಲ: ವಲ್ಲಿ ಕ್ವಾಡ್ರಸ್
ಕನ್ನಡಕ್ಕೆ ಅನುವಾದ: ಜಾನ್ ಸುಂಟಿಕೊಪ್ಪ
ನಾನು ಬದುಕಿದ್ದೆ
ಈ ಭೂಮಿಯಲ್ಲಿ ಮನುಷ್ಯನಾಗಿ!
ಸಮಯವು ಅಂದೂ ಇದ್ದಿರಲಿಲ್ಲ
ಎಂದಿಗೂ ಅರ್ಥವಾಗದ ಅವಸರದಲ್ಲಿ;
ಒಂದೆರಡು ಬಾರಿ
ಹೇಗೋ ನಾನು ಬದುಕಿದ್ದೆ
ನೆನಪಿದೆ ನನಗೆ
ಸತ್ಯವಾಗಿಯೂ
ಇಂದೂ ನೆನಪಿದೆ….
ಹೆಣಗಳ ರಾಶಿ ಬಿದ್ದಿತ್ತು!
ರಣಭೂಮಿ ದಾಟಿ ಬಂದಿದ್ದೆ
ಕೊಂದವರು ಯಾರು!?ಸತ್ತವರು ಯಾರು!?
ನನಗೇನಾಗಬೇಕಿದೆ…
ಯಾರು ಕೊಲ್ಲವವರು,
ಯಾರು ಸಾಯುವವರು,
ದಟ್ಟಗಿನ ಕೆಂಪು ನೆತ್ತರ
ವಾರೆ ಕಣ್ಣಲ್ಲಾದರೂ
ನೋಡುತ್ತಾ ಬಂದಿದ್ದೇನೆ
ನಿಜವಾಗಿಯೂ ನನಗೆ
ಇಂದಿಗೂ ನೆನಪಿದೆ…
ದೇವಾಲಯಕ್ಕೆ ಹೊಕ್ಕುವಾಗ
ನನ್ನ ದಿರಿಸು ನೋಡಿ
ಬರೆ ಹೊಟ್ಟೆಯವರು ಬೇಡುವುದನ್ನು
ಸತ್ಯವಾಗಿಯೂ ನಾನು ಕೇಳಿಸಿಕೊಂಡಿದ್ದೆ –
’ಅಯ್ಯಾ ಏನಾದ್ರೂ ಕೊಡಪ್ಪಾ..!’
ಹುಂ….
ನನ್ನ ಭಕ್ತಿಯೇ ನನ್ನ ಶಕ್ತಿ
ಕಣ್ಣ ಮುಚ್ಚಿ ಕೈ ಎತ್ತಿ
ಭಕ್ತಿಯಿಂದ ಮಾಡಿದ ಪ್ರಾರ್ಥನೆಗಳೆಲ್ಲಾ
ಇಂದಿಗೂ ನೆನಪಿವೆ…
ಕೈಯಲ್ಲಿ ಪೆನ್ನು ಹಿಡಿದು
ರವಿಯನ್ನು ಸಾಗರವನ್ನು ನೋಡುತ್ತಾ
ಹಸಿವು-ನಿರುದ್ಯೋಗವನ್ನು ಸ್ಮರಿಸುತ್ತಾ
ರಚಿಸಿದ ಆ ಕವಿತೆಗಳು,
ಶಬ್ಧ ಜೋಡಣೆಯ ಆಟದಲ್ಲಿ
ಹೈಕು-ಗಝಲ್-ಸೋನೆಟಿನಲ್ಲಿ
ಪ್ರಾಸದ ಲೇಪ ಬಳಿಯುತ್ತಿದ್ದುದು
ನೆನಪಿದೆ ನನಗೆ…
ಈಗ ಏನು ಬದಲಾಗಿದೆ!?
ಅದೇ ಭೂಮಿ – ಅದೇ ಹಸಿವು
ಅದೇ ನಿರುದ್ಯೋಗ – ಅವೇ ಯುದ್ದಗಳು
ಹರಿಯುತ್ತಿರುವುದು ಮಾತ್ರ ಅಮಾಯಕರ
ಅದೇ ಕೆಂಪು ನೆತ್ತರು..
ನೆನಪಿದೆ ನನಗೆ
ಏನೂ ಮಾಡದ ನಾನು
ಅಂದೂ ಹೇಗೋ ಇಂದೂ ಹಾಗೆಯೇ
ಇಂದಿಗೂ ನೆನಪಿದೆ..
ನನ್ನ ಕವಿತೆ
ಕೊಂಕಣಿ ಮೂಲ: ವಲ್ಲಿ ಕ್ವಾಡ್ರಸ್
ಕನ್ನಡಕ್ಕೆ ಅನುವಾದ: ಜಾನ್ ಸುಂಟಿಕೊಪ್ಪ
ಚಿಗುರೆಲೆಯಾಗಿ ಅರಳುವಾಗ
ಊರಿಗೆ ಊರೇ ಗದ್ದಲ!
ಮರದ ಮಿಲ್ಲುಗಳೇ ತಲೆಯೆತ್ತಿಬಿಟ್ಟವು
ಕವಿತೆಯನ್ನೇ ಪಾಲು ಹಾಕಿ ಬಿಟ್ಟರು
ಇಗೋ,..
ಎಲೆ ಬೇರೆ… ಕಾಂಡ ಬೇರೆ
ಮುಳ್ಳೂಗಳೂ ಬೇರೆ ಬೇರೆ…!?
ಕಾಯಿಗಳಾಗಿ ಬದಲಾಗುವಾಗ
ಊರೂರಲ್ಲೂ
ಹಳ್ಳಿ ನಗರಗಳಲ್ಲೂ
ಎಲೆಗಳ ವ್ಯಾಪಾರವಾಯಿತು;
ಎಲ್ಲೆಲ್ಲೂ ಹೂ ಹಣ್ಣುಗಳ ಅಂಗಡಿಗಳು
ಮುಳ್ಳು – ಕೊಂಬೆಗಳೂ ಕೂಡಾ ಖರ್ಚಾದವು ಕವಿತೆಗಳೊಂದಿಗೆ ಹರಾಜಿನಲ್ಲಿ!
ನಾನು ಮಾತ್ರ ಉಪವಾಸವೇ ಸತ್ತೆ;
ಧ್ವನಿಯಾಗಿ ಕಣ್ಣು ಬಿಡುವಾಗ
ಭಕ್ತರ ಸಾಲೋ ಸಾಲು!
ಆತ್ಮ ಸಾಕ್ಷಾತ್ಕಾರದ ಇವರ ಸ್ತುತಿಗೀತೆಗಳಿಗೆ
ಖುದ್ದು ದೇವರೇ ಕಿವಿಮುಚ್ಚಿಕೊಂಡರು..
ಪ್ರಾಸವನ್ನು ಉಸಿರುಗಟ್ಟಿಸಿ
ಯಾರಿಗೂ ಗೊತ್ತೇ ಆಗದಂತೆ
ಅಂತರಾತ್ಮದ ಕತ್ತು ಸೀಳಿ
ಹಲ್ಲೆ- ಒಪ್ಪಂದ ಮಾಡಿ
ಊರಿಗೆ ಊರೇ ಬೂದಿ ಮಾಡಿಬಿಟ್ಟರು;
ಆ ಕಿಚ್ಚಿನಲ್ಲಿ ಮನೆಗಳು ಸುಡುತ್ತಿರುವಾಗ
ಅದೆಷ್ಟು ಜನ ಗಂಜಿ-ಬೇಳೆ ಬೇಯಿಸಿಕೊಂಡರು!
ಕವಿತೆ ನನ್ನದೇ ಆದರೂ..
ನಾನು ಮಾತ್ರ ಜೀವಂತ ಹೆಣವಾಗಿದ್ದೆ ;
ಹಾಳೆ ಹಾಳೆಗಳಲ್ಲಿ
ನೆತ್ತರು ಹರಿಸುವ ಸಾಲುಗಳಂತೆ-
ನನ್ನ ಕವಿತೆ!?
ನೆರಳಿಗೇ ಬಣ್ಣ ಹಚ್ಚುವ
ಪಟ್ಟ ಕಟ್ಟಿ ಸ್ತುತಿಸಿ ಆರಾಧಿಸುವ
ಸಾಹಿತ್ಯದ ದೇವದೂತರು
ಅವರ ಮಹಲುಗಳಲ್ಲಿ
ಐಶಾರಾಮಿ ಕಾರುಗಳಲ್ಲಿ
ಶಬ್ದ – ಸೂತ್ರಗಳನ್ನು ಕಟ್ಟಿ ಅಲಂಕರಿಸುತ್ತಾರೆ
ಹಸಿವು ನೀರಡಿಕೆ ತೆವಲುಗಳನ್ನೂ ಈಡೇರಿಸಿಕೊಳ್ಳುತ್ತಾರೆ,
ನನಗೆಂದೂ ಪ್ರಯೋಜನಕ್ಕೆ ಬಾರದ
ನನ್ನದೇ ಕವಿತೆ ಇದಾದರೂ
ನಾನು ಬದುಕುತ್ತೇನೆ ಗುಡಿಸಲಿನಲ್ಲಿ
ಆತ್ಮ ಪ್ರಜ್ಞೆಯ ಅರಿವಿಂದ
ಹಸಿವು – ಬಾಯಾರಿಕೆಯಿಂದ.
-ಜಾನ್ ಸುಂಟಿಕೊಪ್ಪ
