ಅಂದು ಶುಕ್ರವಾರ ಸಂಜೆ, ಶಾಲೆ ಮುಗಿಸಿ ಮನೆಗೆ ಬರುವಾಗ ಎಲ್ಲಾ ಮಕ್ಕಳು ಖುಷಿಯಿಂದ ಕುಣಿಯುತ್ತಿದ್ದರು. ಕಾರಣ ಕೇಳಿದರೆ ನಾಳೆ ಶನಿವಾರ ನಮಗೆಲ್ಲಾ ಆಫ್ ಡೇ ಕ್ಲಾಸ್ ಆಮೇಲೆ ಭಾನುವಾರ ಫುಲ್ ಡೇ ಮಜಾ ಅಂತ ಖುಷಿಯಿಂದ ಹೇಳುತ್ತಿದ್ದರು. ನಾನು ಒಂದು ಕ್ಷಣ ಯೋಚಿಸಿ ಅದರಲ್ಲೇನಿದೆ ವಿಶೇಷತೆ? ಪ್ರತಿವಾರ ಶನಿವಾರ ಭಾನುವಾರ ಬರ್ತಾ ಇರುತ್ತೆ ಅಲ್ವಾ . ಆದರೆ ಮಕ್ಕಳನ್ನು ಪ್ರಶ್ನಿಸಿದರೆ ಅವರ ಉತ್ತರ ಬೇರೆನೇ ಇತ್ತು. ಆಗ ಖುಷಿಯಿಂದ ನಾಳೆ ನಮ್ ಮಾವ ಬರ್ತಾರೆ , ಇನ್ನೊಬ್ಬ ನಮ್ ಚಿಕ್ಕಪ್ಪ ಬರ್ತಾರೆ. ಅವರತ್ರ ಲ್ಯಾಪ್ಟಾಪ್ ಇರುತ್ತೆ. ಅದ್ರಲ್ಲಿ ವಿಭಿನ್ನ ರೀತಿಯ ಗೇಮ್ಸ್ ಡೌನ್ಲೋಡ್ ಮಾಡಿ ಆಟ ಆಡಬಹುದು ಮೊಬೈಲ್ನಲ್ಲಿ ರೀಲ್ಸ್ ನೋಡಬೋದು ಅಂತ ಖುಷಿಯಿಂದ ಕುಣಿತ ಇದ್ರು.
ನಾನೊಂದು ಕ್ಷಣ ಅಯ್ಯೋ ಅಂತ ಸುಮ್ಮನೆ ನಿಂತೆ. ಈಗಿನ ಕಾಲದ ಮಕ್ಕಳಿಗೆ ಏನಾಯ್ತು ಕೇವಲ ನೆಟ್ವರ್ಕ್ ಗೇಮ್, ರೀಲ್ಸ್, ಮೊಬೈಲ್ ಇದ್ದರೆ ಸಾಕು, ದಿನ ಕಳೆದು ಬಿಡ್ತಾರೆ. ಆದರೆ ನಾವೆಲ್ಲ ಚಿಕ್ಕೋರಾಗಿದ್ದಾಗ ರಜಾ ಸಿಕ್ರೆ ಸಾಕು, ಒಮ್ಮೊಮ್ಮೆ ಅಜ್ಜಿ ಊರಿಗೆ ಹೋಗ್ತಿದ್ದ್ವು ಅಥವಾ ನಮ್ಮೂರಲ್ಲೇ ಎಲ್ಲಾ ಮಕ್ಕಳನ್ನೆಲ್ಲ ಸೇರಿಸಿ ಮರ್ಕೊತಿಯಾಡೋದು, ಲಗೋರಿ ಆಡೋದು, ಕೋಲಾಟ ಆಡೋದು ಹೀಗೆ ಎಲ್ಲಾ ದೈಹಿಕ ಶಕ್ತಿ ಬಿಡುಗಡೆಯಾಗುವಂತ ಆಟಗಳು. ಆದರೆ ಈಗಿನ ಜನರೇಶನ್ ಮಕ್ಕಳಿಗೆ ಈ ತರಹದ ಆಟಗಳು ಇಷ್ಟನೇ ಆಗಲ್ಲ. ಎಲ್ಲಾ ಐಡಲ್ ಗೇಮ್ ಗಳೇ. ಏನಾದ್ರೂ ಮಾಡ್ಕೊಳ್ಳಿ ಅಂತ ಮನೆಗ್ ಹೋದರೆ ನನ್ನ ಮಗ ಜೀವಧ್ಯಾನ್ ಸಹ ಮೊಬೈಲ್ ಹಿಡ್ಕೊಂಡೆ ಊಟ ಮಾಡುತ್ತಿದ್ದಾನೆ. ಕೇಳಿದರೆ ಮೊಬೈಲ್ ಊಟ ಮಾಡುತ್ತಿದ್ದೀನಿ ಅಪ್ಪ ಅಂದ. ಒಂದು ಕ್ಷಣ ನನಗೆ ನನಗೆ ಫುಲ್ ಟೆನ್ಶನ್ ಆಯ್ತು, ಏನ್ ಮಾಡದಪ್ಪ ಅಂತ ಅನ್ಕೊಂಡೆ ಈ ಶನಿವಾರ ಸಂಜೆನೂ ಆಗೋಯ್ತು. ಆಮೇಲೆ ಇದ್ದಕ್ಕಿದ್ದಂಗೆ ಏನೋ ಫ್ಲಾಶ್ ಆದಂಗಾಯ್ತು, ಯಾಕೆ ನಾವು ಎಲ್ಲಾದರೂ ಒನ್ ಡೇ ಟ್ರಿಪ್ ಹೋಗ್ಬಾರ್ದು ಅಂತ ಅನ್ನಿಸ್ತು. ತಕ್ಷಣ ನೆನಪಾಗಿದ್ದು ನನ್ನ ಅಕ್ಕನ ಮಗನ ನೆನಪಾಯಿತು . ಅವನಿಗೂ ಸಹ ಈ ತರಹದ ಟ್ರಿಪ್ ಅಂದ್ರೆ ತುಂಬಾ ಇಷ್ಟ. ಆದರೆ ಅವನಿಗೆ ಏನಾದರೂ ಹೇಳಿದರೆ ಸಣ್ಣ ಮಕ್ಕಳ ಜೊತೆ ಹೇಗೆ ಹೋಗೋದು ಅಂತ ಬೇಸರ ಆಗುತ್ತೆ ಅನ್ಕೊಂಡೆ ಅವನಿಗೆ ಕಾಲ್ ಮಾಡಿದ್ರೆ ಅವ ತಕ್ಷಣ ಸರಿ ಅಂತ ಖುಷಿಯಿಂದ ಒಪ್ಪಿಕೊಂಡ. ನನಗಂತೂ ಖುಷಿಯೋ ಖುಷಿ. ಒಂದು ದಿನದಿಂದಾದರೂ ಮೊಬೈಲ್ ನನ್ನ ಮಗನಿಂದ ದೂರ ಇಡಬಹುದು ಅಂತ ಹೋಗೋ ಜಾಗಗಳನ್ನು ಪ್ಲಾನ್ ಮಾಡ್ಕೊಂಡೆವು. ನಮ್ಮ ಎಲ್ಲಾ ಚಿಕ್ಕ ಮಕ್ಕಳ ಸೇರಿಸ್ಕೊಂಡು ಭಾನುವಾರ ಬೆಳಿಗ್ಗೆ ನಮ್ಮ ಸುತ್ತಮುತ್ತ ಇರುವ ಚಿಕ್ಕ ಪುಟ್ಟ ಪ್ರೇಕ್ಷಣೀಯ ಸ್ಥಳಗಳನ್ನು ನೋಡೋಣ ಅನ್ಕೊಂಡೆವು. ಏಕೆಂದರೆ ಸುತ್ತಮುತ್ತಲ ಪ್ರದೇಶಗಳನ್ನೇ ಮಕ್ಕಳು ನೋಡಿರಲ್ಲ ಅಂತ ಯೋಚನೆ ಮಾಡ್ಕೊಂಡು ಎರಡು ಗಾಡಿ ಮಾಡ್ಕೊಂಡು ಬೆಳಗ್ಗೆ 6 ಗಂಟೆಗೆ ಹೊರಟೆವು.
ಯಾವುದೇ ಕೆಲಸ ಆರಂಭ ಆಗ್ಬೇಕು ಅಂದ್ರೆ ದೇವರು ಆಶೀರ್ವಾದ ಮೊದಲು ಬೇಕು ಅಂತ ಹಾಸನ ಜಿಲ್ಲೆ, ಆಲೂರು ತಾಲೂಕು, ಹೊಸಕೋಟೆ ಕೆಂಚಾಂಬಿಕಾ ದೇವಸ್ಥಾನ ನಾವು ಮೊದಲು ಸೇರಿದ್ದು. ಬೆಳಿಗ್ಗೆ ತುಂಬಾ ಬೇಗನೆ ಹೋಗಿದ್ದರಿಂದ ದೇವರ ದರ್ಶನ ಕಿಟಕಿಯಲ್ಲಿ ಆಯ್ತು. ನಂತರ ಅಲ್ಲಿ ಒಂದೆರಡು ಫೋಟೋ ಕ್ಲಿಕ್ಕಿಸಿ, ಮಾಗಲ ಸೇತುವೆ ಮೇಲೆ ನಿಂತ್ಕೊಂಡು ಕಾಫಿ ಕುಡಿದು, ಅಲ್ಲಿಂದ ಸೀದಾ ಸಕಲೇಶಪುರ ತಾಲೂಕಿನ ಮಂಜರಾಬಾದ್ ಕೋಟೆಯನ್ನು ತಲುಪಿದವು. ಮೆಟ್ಟಿಲುಗಳನ್ನು ಲೆಕ್ಕ ಮಾಡುತ್ತಾ ಎಲ್ಲಾ ಮಕ್ಕಳು ಖುಷಿಯಿಂದ ಕೋಟೆಯನ್ನು ಹತ್ತಿದರು. ಯಾರು ಸಹ ಸುಸ್ತಾಯಿತು ಅಂತ ಹೇಳಲೇ ಇಲ್ಲ. ಮಂಜರಾಬಾದ್ ಕೋಟೆಯ ಇತಿಹಾಸವನ್ನ ಚರ್ಚಿಸುತ್ತಾ ಎಲ್ಲಾರೂ ಅಲ್ಲೇ ತಿಂಡಿಯನ್ನು ತಿಂದು ಮುಗಿಸಿದೆವು. ಆದರೆ ಫೋಟೋ ತೆಗೆಯೋದು ಮಾತ್ರ ಬೇಗ ಮುಗಿಲೇ ಇಲ್ಲ. ಸಮಯ ಕಳೆದು ಹೋಗಿದ್ದೆ ಗೊತ್ತಾಗ್ಲಿಲ್ಲ.
ನಂತರ ಅಲ್ಲಿಂದ ಕಾಡುಮನೆ ಎಸ್ಟಿಗೆ ಪ್ಲಾನ್ ಮಾಡಿದ್ದೆವು. ಆದರೆ ಸಮಯದ ಅಭಾವವಾಗಿದ್ದರಿಂದ, ಸಕಲೇಶಪುರದಿಂದ ಬೇಲೂರು ಮಾರ್ಗ ದತ್ತ ಬೈಕೆರೆ ಎಂಬ ಚಿಕ್ಕ ಗ್ರಾಮಕ್ಕೆ ಸೇರಿದೆವು. 1750ನೇ ಇಸವಿಯಲ್ಲಿ ಸ್ಥಾಪನೆಯಾದ ಶ್ರೀ ಗುಡ್ಡೆ ಬಸವಣ್ಣ ದೇವಸ್ಥಾನ ತಲುಪಿದ್ವು. ಅದನ್ನು ಇತ್ತೀಚಿಗೆ ಅಷ್ಟೇ ಪುನರ್ ನಿರ್ಮಾಣ ಮಾಡಲಾಗಿತ್ತು. ಆ ದೇವಸ್ಥಾನದ ಸುತ್ತಮುತ್ತ ಪ್ರಶಾಂತವಾದ ವಾತಾವರಣವಿದ್ದು, ಅಲ್ಲಿನ ಗಿಡಗಳಲ್ಲಿ ತರತರಹದ ಹೂಗಳಿದ್ದು, ಆ ಹೂವುಗಳು ಮಕ್ಕಳನ್ನು ಆಕರ್ಷಿಸಿದವು. ಎಲ್ಲರೂ ಅವುಗಳ ಮುಂದೆ ಹೋಗಿ , ಎಲ್ಲಾ ಗಿಡಗಳ ಮುಂದೇನುಫೋಟೋ ಕ್ಲಿಕ್ಕಿಸಿದರು. ಅಷ್ಟೇ ಅಲ್ಲ ಎಲ್ಲರೂ ಅಲ್ಲಿಯೇ ಹಾಡಿದ್ರು, ಕುಣಿದರು, ಕಬಡ್ಡಿ ಆಡಿದ್ರು. ಅವರ ಆಟಗಳು ಒಂದ ಎರಡ? ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಲ್ಲಿದ್ದ ಫೀಲ್ಡ್ ಎಲ್ಲಾ ತರದ ಆಟಗಳನ್ನು ಆಡಿಸಿತು. ನಾವು ಸಹ ಅವರೊಂದಿಗೆ ಖುಷ್ ಖುಷಿಯಾಗಿ ಬೆರೆತು ಸೇರಿಕೊಂಡದ್ದು ಆ ದಿನ ಕಳೆದಿದ್ದೇ ಗೊತ್ತಾಗ್ಲಿಲ್ಲ. ಯಾಕಂದ್ರೆ ಅವರೊಂದಿಗೆ ಆಟವಾಡುತ್ತಾ ನಮ್ಮ ಬಾಲ್ಯದ ಜೀವನವು ಸಹ ನೆನಪಾಗ್ತಾ ಇತ್ತು. ಸ್ವಲ್ಪ ಮುಂದೆ ಹೋದರೆ ಅದೇ ಊರಲ್ಲಿ ಭತ್ತದ ಗದ್ದೆಯ ನಡುವೆ ನಿಂತಿರುವ ಒಂದು ಶಿವ ಪಾರ್ವತಿಯ ದೇವಸ್ಥಾನ ನಮ್ಮನ್ನು ಸೆಳೆಯಿತು. ಅಲ್ಲಿ ಹೋಗಿ ನೋಡಿದರೆ ಸುತ್ತಲು ಭತ್ತದ ಗದ್ದೆ , ಮಧ್ಯದಲ್ಲಿ ಮಾತ್ರ ಒಂದು ದೇವಸ್ಥಾನ. ಸುತ್ತಮುತ್ತಲೂ ಬಣ್ಣ ಬಣ್ಣದ ಹೂಗಳಿದ್ದವು ಅಲ್ಲೂ ಸಹ ಹಲವಾರು ಫೋಟೋಗಳನ್ನು ತೆಗೆದುಕೊಂಡು ಎರಡು ಮೂರು ಗಂಟೆ ಟೈಮ್ ಅಲ್ಲೇ ಆಟವಾಡಿದವು. ಆದರೆ ನನಗೆ ಖುಷಿಯಾಗಿದ್ದೇನಪ್ಪ ಅಂದ್ರೆ ನನ್ನ ಮಗ ಜೀವಧ್ಯಾನ್ ಮೊಬೈಲ್ನ ಕೇಳಲೇ ಇಲ್ಲ. ಮೊಬೈಲ್ ಇಸ್ಕೊಂಡು ಎಲ್ಲಿ ರೀಲ್ಸ್ ನೋಡ್ತಾನಪ್ಪ ಅನ್ಕೊಂಡ್ರೆ, ಅವನು ಸಹ ಫೋಟೋ ತೆಗಿಯೋಕೆ ಹೋಗ್ತಿದ್ದ. ಕುಣಿದು ಕುಡಿದು ಕುಪ್ಪಳಿಸುತ್ತಿದ್ದನು. ಅಷ್ಟೊತ್ತಿಗೆ ಸಂಜೆ 3:00 ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ಆದರೆ ಕಟ್ಟಿಕೊಂಡು ಹೋಗಿದ್ದ ಬುತ್ತಿ ಮಾತ್ರ ಖಾಲಿ ಆಯ್ತು ಹಾಗೇ ಖುಷಿ ಮಾತ್ರ ಸಿಕ್ಕಾಪಟ್ಟೆ ಆಯ್ತು.
ತಕ್ಷಣ ಅಲ್ಲಿಂದ ಹೊರಟು ಆಲೂರು ತಾಲೂಕಿನ ಪಾರ್ವತಮ್ಮ ಬೆಟ್ಟಕ್ಕೆ ಬಂದು ತಲುಪಿದೆವು. ಆದರೆ ಅಷ್ಟೊತ್ತಿಗಾಗಲೇ ಸಮಯ ಮಾತ್ರ 4:00 ಆಗಿದ್ದು ಯಾರಿಗೂ ತಿಳಿಯಲಿಲ್ಲ. ಚಿರತೆ ಇದೆ ಅನ್ನುವ ಭಯ ಒಂದೆಡೆ ಕಾಡುತ್ತಿತ್ತು. ನಮ್ಮ ಜೊತೆ ಇರುವ ಮಕ್ಕಳನ್ನ ಎಲ್ಲಿ ಹೊತ್ಕೊಂಡು ಹೋಗುತ್ತೋ ಅನ್ನುವ ಭಯ ಇತ್ತು. ಆದ್ರೆ ಸುಳ್ಳು ಸುದ್ದಿ ಬಗ್ಗೆ ಸ್ಥಳೀಯರು ತಿಳಿಸಿದ ನಂತರ ಬೆಟ್ಟಹತ್ತಲು ನಾ ಮುಂದೆ ತಾ ಮುಂದೆ ಎಂದು ಓಡಿದರು. ಸ್ನಾಕ್ಸ್ ಎಲ್ಲಾ ಖಾಲಿ ಮಾಡಿ ಕುಣಿದು ಕುಪ್ಪಳಿಸಿದರು. ಬೆಟ್ಟದ ದೈವ ಪಾರ್ವತಮ್ಮ ಮತ್ತು ಶಿವ ಪಾರ್ವತಿಯ ದರ್ಶಿಸಿ, ಅಲ್ಲಿನ ಒಂದೊಂದು ಗಿಡದ ಮುಂದೆಯೂ ಫೋಟೋ ಕ್ಲಿಕ್ಕಿಸಿ ಎಂಜಾಯ್ ಮಾಡಿದೆವು. ಫೋಟೋಗಳ ಸಂಖ್ಯೆಯು ಅಷ್ಟೊತ್ತಿಗೆ ಸಾವಿರಕ್ಕೂ ಹೆಚ್ಚು ಆಗಿದ್ದಲ್ಲದೆ, ಕತ್ತಲು ಆಗುವ ಮುನ್ಸೂಚನೆಗಳು ಕಾಣಿಸಿಕೊಂಡವು. ತಕ್ಷಣ ಹೊರಟು ಎಲ್ಲರೂ ಮನೆ ಸೇರಿದೆವು. ಆದರೂ ಕೂಡ ಪ್ರವಾಸದ ಅಮಲು ಇಳಿಯುತ್ತಿರಲಿಲ್ಲ. ಅಲ್ಲಿ ಕಳೆದ ಕ್ಷಣಗಳು ಹಾಡು, ಡ್ಯಾನ್ಸ್ , ಆಟ ಎಲ್ಲವೂ ರಾತ್ರಿ ಕನಸಿನಲ್ಲಿಯೂ ಸಹ ಅಲ್ಲಿನ ಸನ್ನಿವೇಶನಗಳನ್ನು ಕಂಡು ತುಂಬಿಕೊಂಡಿದ್ದವು. ನಮ್ಮ ಪುಟಾಣಿಗಳು ಸಹ ಎರಡು ಮೂರು ದಿನ ಕಳೆದರೂ ಈ ವಿಚಾರಗಳನ್ನೇ ನಮ್ಮೊಂದಿಗೆ ಆಗಾಗ ಚರ್ಚಿಸುತ್ತಿದ್ದರು. ಅವರು ಆ ಚಳಿಗಾಲದ ರೋಮಾಂಚನಕಾರಿ ಪುಟಾಣಿಗಳೊಂದಿಗೆನ ಪುಟ್ಟ ಪ್ರವಾಸ ಮತ್ತೊಮ್ಮೆ ಬೇಸಿಗೆಯಲ್ಲೂ ಸಹ ಮತ್ತೆ ಹೋಗಬೇಕೆಂಬ ಆಕಾಂಕ್ಷೆಗಳನ್ನು ಮೂಡಿಸಿದವು. ನಮ್ಮ ಮಕ್ಕಳನ್ನು ಮೊಬೈಲ್ ನಿಂದ ದೂರ ಇಡಲು ಈ ರೀತಿ ಅವರನ್ನ ಬ್ಯುಸಿ ಇಟ್ಟರೆ ಒಳ್ಳೆ ಪ್ರವಾಸದ ಮನೋರಂಜನೆ ಆಗುತ್ತದೆ ಮತ್ತು ಅವರ ಚೈತನ್ಯವನ್ನು ಸಮೃದ್ಧಿ ಗೊಳಿಸುವುದು ಎಂಬುದೇ ನನ್ನ ಅಭಿಪ್ರಾಯ .
–ಚಂದ್ರು ಪಿ ಹಾಸನ್



