ಏನಿದು ಟಿಕೆಟ್ ಎಂದು ಕೇಳಬೇಡಿ. ? ಎಲ್ಲರಿಗೂ ಗೊತ್ತಿರುವ ವಿಚಾರವಿದು, ಟಿಕೆಟ್ ಎಂದರೆ ಬೇರೇನೂ ಅಲ್ಲ ಕನ್ನಡದಲ್ಲಿ ಇದರರ್ಥ ಅನುಮತಿ ಚೀಟಿ, ಪರವಾನಿಗೆ ಚೀಟಿ ಎಂದರ್ಥವಾಗುತ್ತದೆ. ಕೆಲವೊಂದು ಜಾಗದಲ್ಲಿ ಇದಿಲ್ಲದೆ ಪ್ರವೇಶವೆ ಸಿಗುವುದಿಲ್ಲ ಅದಕ್ಕಾಗಿ ಪರದಾಡಬೇಕಾಗುತ್ತದೆ.
ಟಿಕೆಟ್ ಇಲ್ಲದೆ ಕೆಲವೊಂದು ನಿರ್ದಿಷ್ಟ ಪ್ರದೇಶಗಳಲ್ಲಿ ತಿರುಗಾಡಲು ಸಾಧ್ಯವೆ ಇಲ್ಲ, ಎನ್ನುವಷ್ಟರ ಮಟ್ಟಿಗೆ ಟಿಕೆಟ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ರಾಜವೈಭವದಲ್ಲಿ ಮೆರೆಯುತ್ತಿದೆ.
ಯಾವುದೆ ಸಿನಿಮಾ ಥಿಯೇಟರನಲ್ಲಿ ಸಿನಿಮಾ ವಿಕ್ಷಿಸಲು ಈ ಟಿಕೇಟ್ ಅತಿ ಅವಶ್ಯಕ ಹೇಗೆ ಎಕ್ಸಾಂ ಹಾಲ್ ನಲ್ಲಿ ಹಾಲಟಿಕೆಟ್ ಇದ್ದರೆ ಒಳಗೆ ಪ್ರವೇಶವೋ ಅದೇ ರೀತಿ ಸಿನಿಮಾ ನೋಡಲು ಟಿಕೆಟ್ ಬೇಕೆ ಬೇಕು. ಇದನ್ನು ಪಡೆದು ಸಿನಿಮಾ ವೀಕ್ಷಿಸುವುದು ಜೊತೆಗೆ ಸಿನಿಮಾ ಮುಗಿಯುವವರೆಗೆ ಟಿಕೆಟ್ ಕಾಯ್ದಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಒಂದು ಸಲ ಗೆಳೆಯರೊಂದಿಗೆ ಟಿಕೆಟ್ಟಿಗಾಗಿ ಹೊಡೆದಾಡಿ, ಬಡಿದಾಡಿ ಕೈಕಾಲುಗಳನ್ನು ಜಖಂ ಮಾಡಿಕೊಂಡು ಸಿನಿಮಾ ನೋಡಿದ್ದು ಈಗಲೂ ನಮ್ಮ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ.
ಯಾವುದೆ ಪ್ರಾಣಿ ಸಂಗ್ರಹಾಲಯಕೆ ಹಾಗೂ ಹಳೆಕಾಲದ ಸ್ಮಾರಕಗಳನು ವೀಕ್ಷಿಸಲು ಮೊದಲು ಕೌಂಟರನಲ್ಲಿ ಟಿಕೆಟ್ ಪಡೆದೆ ಮುಂದೆ ಸಾಗಬೇಕು. ಒಮ್ಮೆ ನಮ್ಮ ವಿದ್ಯಾರ್ಥಿಗಳನ್ನೆಲ್ಲ ಸ್ಮಾರಕ ವೀಕ್ಷಣೆಗೆ ಕರೆದೊಯ್ದಾಗ ಸರತಿಯ ಸಾಲಿನಲ್ಲಿ ನಿಲ್ಲಿಸಿ ಕರೆದೊಯ್ಯುತಿರಲು ಒಂದು ಟಿಕೆಟ್ಟಿನ ಹಣ ಕಡಿಮೆ ಬಿದ್ದು ಕೊನೆಗೆ ಏನು ಮಾಡುವುದೆಂದು ಪೇಚಿಗೆ ಸಿಲುಕಿದ್ದುಂಟು. ಆ ಟಿಕೆಟ್ ಕೌಂಟರನವನು ನನ್ನ ಹಳೆ ವಿದ್ಯಾರ್ಥಿಯೆಂದು ಗುರುತಿಸಿ ಮಾತನಾಡಿಸಿ ನಮ್ಮ ಒಬ್ಬ ವಿದ್ಯಾರ್ಥಿಯನ್ನು ಉಚಿತವಾಗಿ ವಿಕ್ಷಣೆಗೆ ಬಿಟ್ಟು ಕಳಿಸಿದ್ದು ನಿಜವಾಗಿಯೂ ನನ್ನ ಶಿಕ್ಷಕವೃತ್ತಿ ಸಾರ್ಥಕವೆನಿಸಿತು ಹಾಗೂ ಆ ಘಟನೆ ಎಲ್ಲರಿಗೂ ನಿರಾಳತೆ ತಂದುಕೊಟ್ಟಿತು.
ಇನ್ನು ಈ ಪದ ವ್ಯಂಗ್ಯತೆಯಲ್ಲೂ ಬಳಕೆಯಾಗುತ್ತಿದೆ. ಹೇಗೆಂದರೆ ನಮ್ಮ ಓಣಿಯಲ್ಲೊಬ್ಬ ಕೆಲದಿನಗಳ ಕುಡಿದು ಕುಡಿದು ತೀರಿಕೊಂಡಿದ್ದ, ಓಣಿಯವರೆಲ್ಲ ಸತ್ತ ಸುದ್ದಿಕೇಳಿ ಅಳುವ ಬದಲು ಆತನ ಸಾವನ್ನು ವಿಷಾದನಿಯವಾಗಿ ಅಂದರೆ ” ಅವಾ ನಿನ್ನೆ ರಾತ್ರಿ ಟಿಕೆಟ್ ತಗೊಂಡ” ವ್ಯಂಗ್ಯತೆಯಿಂದ ಮಾತನಾಡಿದ್ದು ನನಗೆ ದುಃಖ ಉಕ್ಕುವ ಬದಲು ನಗು ತಂದಿಟ್ಟಿತು.
ಈ ರಾಜಕೀಯ ಕ್ಷೇತ್ರದಲ್ಲೂ ಈ ರಾಜಬೀದಿಯ ಆನೆಯಂತೆ ಟಿಕೆಟ್ ಲಗ್ಗೆಯಿಟ್ಟದ್ದು ಸುಳ್ಳಲ್ಲ. ರಾಜ್ಯವಾಳುವ ಆಕಾಂಕ್ಷೆಯಿಂದ ಯಾವುದೆ ಪಕ್ಷದಿಂದ ಎಲೆಕ್ಷನ ನಿಲ್ಲಬೇಕೆಂದರೂ, ಅವಕಾಶ ಮತ್ತು ಜನರ ಬೆಂಬಲ ಎಷ್ಟು ಮುಖ್ಯವೋ. . ? ಅಷ್ಟೆ ಮುಖ್ಯವಾದದ್ದು ಎಲೆಕ್ಷನ್ ಗೆ ಸ್ಪರ್ಧಿಸಲು ಟಿಕೆಟ್ ಬೇಕೆಬೇಕು. ಸಿಕ್ಕ ಮೇಲೆ ಗೆದ್ದು ಏನು ಮಾಡುತ್ತಾರೋ, ಬಿಡುತ್ತಾರೋ ಎಂಬುದು ನಮಗೆಲ್ಲ ಗೊತ್ತೆ ಇದೆ. ಆ ಟಿಕೆಟ್ ಸಾಮಾನ್ಯವಾದದ್ದಲ್ಲ, ಸಿಕ್ಕರೆ ಗೆದ್ದಷ್ಟೆ ಸಂತೋಷ, ಸಿಗದಿದ್ದರೆ ಮನದಲ್ಲಿ ಒಂದು ರೀತಿಯ ವೇದನೆ, “ನನಗೆ ಈ ಸಲ ಎಲೆಕ್ಷನನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ” ಅದು ಸಿಗಲು ಬಕೆಟ್ ಹಿಡಿಯುವ ಜನರ ಗುಂಪು ಇದೆ ಎಂದು ಸ್ನೇಹಿತ ಮಿತ್ರರೊಬ್ಬರು ಎಲೆಕ್ಷನ ಟಿಕೆಟ್ಟಿಗಾಗಿ ಕಂಬನಿ ಸುರಿಸಿದ್ದು ಉಂಟು.
ಟಿಕೆಟ್ ಶಿಕ್ಷಣ ಕ್ಷೇತ್ರಕ್ಕೂ ಕಾಲಿಡದೆ ಬಿಟ್ಟಿಲ್ಲ. ಇಲ್ಲೂ ತನ್ನ ಕಬಂಧ ಬಾಹುವನ್ನು ಚಾಚುತ್ತ ಮಕ್ಕಳ ಭವಿಷ್ಯವನ್ನು ಬರೆಯುತ್ತಿದೆ. ಪಕ್ಕದ ಮನೆಯ ಆಂಟಿಯ ಮಗ ಸರಿಯಾಗಿ ಶಾಲೆಗೆ ಹೋಗದ ಕಾರಣ (shot-ಶಾರ್ಟೆಜ್ ಆಫ್ ಅಟೆಂಡೆನ್ಸ) ಮಾಡಿ ಹಾಲ್ ಟಿಕೆಟ್ ಬರದಂತೆ ಮಾಡಿದ್ದಾರೆ ಎಂದು ಗೋಳಿಡುತ್ತ ಪ್ರಿನ್ಸಿಪಾಲರನ್ನು ನಿಂದಿಸುತ್ತಿದ್ದಳು, ಏಕೆ. . ? ಎಂದು ಪ್ರಶ್ನಿಸಿದ ನನಗೆ ಸವಿಸ್ತಾರ ಮಾಹಿತಿಯನ್ನು ಮಾನ್ಯ ಪ್ರಿನ್ಸಿಪಾಲರು ತಿಳಿಸಿದರು. ನಾನು ಮುಂದಿನ ದಾರಿಯನ್ನು ತಿಳಿಸಿ ಆ ಜಗಳಕ್ಕೆ ಅಂತ್ಯ ಹಾಡಿದೆ. ಹಾಲ್ ಟಿಕೆಟ್ ವಾರ್ಷಿಕ ಪರೀಕ್ಷೆ ಬರೆಯುವ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಅತಿ ಅವಶ್ಯಕ ಇದಿಲ್ಲದೆ ಪರೀಕ್ಷಾ ಕೊಠಡಿ ಒಳಗೆ ಹೋಗಲು ಸಾಧ್ಯವಿಲ್ಲ, ಇದಲ್ಲದೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಕಡ್ಡಾಯವಾಗಿ ಇರಲೇಬೇಕು ಜೊತೆಗೆ ಇತರ ಗುರುತಿನ ಚೀಟಿಯನ್ನು ತರಬೇಕೆಂದು ಸೂಚನೆ ನೀಡಿರುತ್ತಾರೆ ಏನೆ ಇರಲಿ, ” ಹಾಲ್ ಟಿಕೆಟ್ ಇಸ್ ವೇರಿ ಇಂಪಾರ್ಟಟೆಂಟ್ ಇನ್ ದಿಸ್ ಎಕ್ಸಾಂ ಟೈಂ” ಎನ್ನುವಂತೆ ಇದು ಬೇಕೆ ಬೇಕು. ಎಷ್ಟೋ ಸಲ ನಾವು ಜಾಗೃತದಳದ( ಸ್ಕ್ವಾಡ) ಸದಸ್ಯರಾಗಿ ಕರ್ತವ್ಯ ನಿರ್ವಹಿಸುವಾಗ ಹಾಲ್ ಟಿಕೆಟ್ ಇಲ್ಲದ ವಿದ್ಯಾರ್ಥಿಗಳನ್ನು ಹೊರಹಾಕಿದ್ದು ಕೆಲವು ಸಲ ಕಾಡಿ ಬೇಡಿದಾಗ ಮರಳಿ ಎಕ್ಸಾಂಗೆ ಅವಕಾಶ ಮಾಡಿಕೊಟ್ಟದ್ದು ಈಗಲೂ ನನಗೆ ನೆನಪಿದೆ.
ಈ ಟಿಕೆಟ್ಟು ಲಾಟರಿಯೆಂಬ ಅದೃಷ್ಟದ ಕ್ಷೇತ್ರಕ್ಕೂ ಹೊರತಾಗಿಲ್ಲ. ನನ್ನ ಸ್ನೇಹಿತನೊಬ್ಬ ಜ್ಯೋತಿಷಿಯ ಮಾತನು ನಂಬಿ ಸಾವಿರ ರೂಪಾಯಿಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ. ನಾ ಮುಂದು ನೀ ಮುಂದು ಎನುವಂತೆ ಟಿಕೆಟ್ ಖರೀದಿಸಿ ಕೊನೆಗೆ ಯಾವುದೆ ಅದೃಷ್ಟ ಖುಲಾಯಿಸದೆ ಕೊಟ್ಟ ಹಣವನ್ನು ಕಳೆದುಕೊಂಡು ಪೆಚ್ಚಾಗಿ ಹೋದ ಉದಾಹರಣೆಯೂ ಇದೆ. ಅದೃಷ್ಟ ಎನ್ನುವುದು ಚೆನ್ನಾಗಿದ್ದರೆ ಲಾಟರಿ ಹೊಡೆಯುತ್ತದೆ, ಚೆನ್ನಾಗಿ ಇಲ್ಲದಿದ್ದರೆ ಹೊಡೆಯುವುದಿಲ್ಲ ಎಂಬ ಮಾತು ಸುಳ್ಳಷ್ಟೆ.
ಬಸ್, ರೈಲು, ವಿಮಾನದಲ್ಲಿ ಸಂಚರಿಸಬೇಕಾದರೆ ಈ ಟಿಕೆಟ್ ಅವಶ್ಯ. ಹಣಕೊಟ್ಟರೆ ಕಂಡಕ್ಟರ ಟಿಕೆಟ್ ಕೊಟ್ಟೆ ಕೊಡುತ್ತಾನೆ. ಇದು ಸಾಮಾನ್ಯ ಸಂಗತಿ. ರೈಲಿನಲ್ಲಿ ಮತ್ತು ವಿಮಾನದಲ್ಲಿ ಕೌಂಟರನತ್ತ ಹೋಗಿ ಟಿಕೆಟ್ ಪಡೆದು ಹತ್ತಬೇಕು. ಆನಲೈನನಲ್ಲಿ ಸೀಟನ್ನು ಅಡ್ವಾನ್ಸ ಬುಕಿಂಗ ಮಾಡಿ ರಾಜನಂತೆ ಕುಳಿತು ಹೋಗುವ ಕಾಲವೂ ನಮಗೆ ಹೊಸದೇನಲ್ಲ. ಬುಕಿಂಗ ಮಾಡಿದ ರಶೀದಿ ನಮ್ಮ ಜೊತೆಗೆ ಇರಲೆಬೇಕು. ಬಸ್ಸಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವಂತಿಲ್ಲ, ಟಿಕೆಟ್ ಮೊದಲಿನಂತೆ ಡಬ್ಬದಲ್ಲಿ ಚೀಟಿಗಳನ್ನು ಹರಿದ್ದು ಪೆನ್ನಿನಿಂದ ಚುಚ್ಚಿ ಕೊಡುವ ಜಾಯಮಾನವಿಲ್ಲ ಬದಲಾಗಿ ಎಟಿಎಂ ಮಶಿನನಂತೆ ಐದಾರು ಬಟನ್ ಒತ್ತಿದರೆ ಚಿರ್ ಎಂದು ಟಿಕೆಟ್ ತಾನೆ ಬರುತ್ತದೆ. ಒಂದು ವೇಳೆ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಟಿಕೆಟ್ ಕಲೆಕ್ಟರ ಹತ್ತಿರ ಸಿಕ್ಕಿಹಾಕಿಕೊಳ್ಳುವ ಪ್ರಸಂಗ ಬರುತ್ತದೆ. ಹಾಗಾಗಿ ಪ್ರತಿ ಬಸ್ಸಿನಲ್ಲಿ ” ಟಿಕೆಟ ಇಲ್ಲದ ಪ್ರಯಾಣ ಜನರ ನಡುವೆ ಅವಮಾನ” ಎಂಬ ಶೀರ್ಷಿಕೆಯನ್ನು ರಾರಾಜಿಸುವಂತೆ ಬರೆದು ಹಾಕಿರುತ್ತಾರೆ. ವಯಸ್ಕರಿಲ್ಲ ಪುಲ್ ಟಿಕೆಟ್ಟಾದರೆ ಚಿಕ್ಕಮಕ್ಕಳಿಗೆ ಅರ್ಧ ಟಿಕೆಟ್. ಒಮ್ಮೆ ತಬಲಾವಾದಕೊಬ್ಬ ಬಸ್ ಹತ್ತಿದ ಕಂಡಕ್ಟರ ಕೂಡ ಮಿಮಿಕ್ರಿ ಆರ್ಟಿಸ್ಟ ಆಗಿದ್ದ. ಬರುವಾಗ ಟಿಕೆಟ್ ಟಿಕೆಟ್ ಎನ್ನುತ್ತಾ ತಬಲಾವಾದಕನ ಹತ್ತಿರ “ಟಿಕಿಟ್ ಟಿಕಿಟ್ ಎನ್ನುತ್ತಾ ಬಂದಾಗ ಆತ ಗದಗದ ಟಿಕಿಟ್ ಪುಕಟ್ ತಾ ಪುಕಟ್ ತಾ ಎಂದ, ಅದೆ ಧಾಟಿಯಲ್ಲಿ, ಟಿಕಿಟ್ ಪುಕಟ್ ಕೊಡಾಕ ನನಗ ತಲಿಕೆಟತಾ, ತೆಲಿಕೆಟತಾ” ಎನ್ನುತ್ತಾ ಹಣಪಡೆದು ಟಿಕಿಟ್ ಕೊಟ್ಟಾಗ ತಬಲಾವಾದಕ ಮುಖಕೆಳಗೆ ಹಾಕಿದ್ದ. ಒಟ್ಟಿನಲ್ಲಿ ಬಸ್ಸಿನ ಪ್ರಯಾಣಕ್ಕೆ ಟಿಕೆಟ್ ಅವಶ್ಯಕ ಎಂಬುದನ್ನು ಮರೆಯುವಂತಿಲ್ಲ.
ಈ ಟಿಕೆಟ್ ಮಹಿಮೆ ಇಷ್ಟಕ್ಕೆ ನಿಲ್ಲಲಿಲ್ಲ ಆನಲೈನಿನ ಪ್ರತಿ ಸಮಸ್ಯೆಗೂ ಈಗ ಟಿಕೆಟ್ ಬಳಸಬೇಕಾಗಿದೆ. ಹೇಗೆಂದರೆ ಈಗಂತೂ ಪ್ರತಿಯೊಬ್ಬ ಸರ್ಕಾರಿ ನೌಕರನ ವೇತನವನ್ನು ಹೆಚ್ ಆರ್ ಎಮ್ ಎಸ್ ಮತ್ತು ಖಜಾನೆ ೨ ದಲ್ಲಿ ವೇತನ ಸೆಳೆಯಬೇಕಾಗಿದ್ದರಿಂದ ಯಾವುದೆ ಸಮಸ್ಯೆ ಉಂಟಾದರೆ ತಾಂತ್ರಿಕ ಸಿಬ್ಬಂದಿಗೆ ಕರೆ ಮಾಡಿ ಬಗೆಹರಿಸಿಕೊಳ್ಳುವ ಕಾಲವಿತ್ತು. ಇಲ್ಲವೇ ನೇರ ಹೆಡ್ಡಾಫಿಸಿಗೆ ಹೋಗಿ ಬಗೆಹರಿಸಿಕೊಳ್ಳುವ ಪರಿಪಾಠವಿತ್ತು. ಈಗ ಹಾಗಿಲ್ಲ ಎರಡು ತಿಂಗಳ ಹಿಂದೆ ನಮ್ಮ ಸಂಸ್ಥೆಯ ಸಹೋದ್ಯೋಗಿ ಒಬ್ಬರು ರಿಟೈರ ಆಗಿದ್ದು ಅವರ ಬಾಕಿ ವೇತನ ಸೆಳೆಯಲು ಖಜಾನೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ “ಟಿಕೆಟ್ ರೈಜ್ “ಮಾಡಿ ಎಂದರು. ಏನಿದು ಟಿಕೆಟ್ ಎಂದಾಗ ಬಸ್ಸು, ಕಾರು, ಏರೋಪ್ಲೇನ್ ಯಾವ ಟಿಕೆಟ್ಟು ಅಲ್ಲ ಬದಲಾಗಿ ಕಂಪ್ಲೆಂಟ್ ಎಂಬ ಆನಲೈನನಲ್ಲಿ ಕಂಪ್ಲೆಟ್ ಬಾಕ್ಸನಲ್ಲಿ ಟಿಕೆಟ್ ರೈಜ್ ಮಾಡಿ ಸಲಹೆ ನೀಡಿ ಕೊನೆಗೆ ಹೇಗೋ ವಿಷಯ ಬಗೆ ಹರಿಸಿ ಈಗ ಅವರು ಪೆನ್ಶನದಾರರಾಗಿದ್ದಾರೆ.
ಈಜುಕೊಳಕ್ಕೂ, ಆನಲೈನ ಗೇಮ್ ಸೆಂಟರಗಳಿಗೂ ಟಿಕೆಟ್ ಕಡ್ಡಾಯ. ಒಂದು ವೇಳೆ ಟಿಕೆಟ್ ಕಳೆದುಕೊಂಡರೆ ಅದೆ ಜಾಗವೆ ನಿಮ್ಮ ಖಾಯಂ ಕ್ಷೇತ್ರವಾಗಬಹುದು. ಈಜುಕೊಳದಿ ಜಿಗಿಯುವ ಮುನ್ನ ಎಚ್ಚರವಹಿಸಿ.
ಎಲ್ಲ ದೇವಸ್ಥಾನಗಳಲ್ಲೂ ಈಗ ವಿದ್ಯುತ್ಚಾಲಿತ ಟಿಕೆಟ್ ಲಗ್ಗೆಯಿಟ್ಟಿದ್ದು ದೇವರ ದರ್ಶನವು ಟಿಕೆಟ್ ಇಲ್ಲದೆ ಸಾಧ್ಯವಿಲ್ಲ. ದೇವರು ಕರುಣಾಮಯಿ ಎಂದು ನಾವೆಲ್ಲ ನಂಬಿದ್ದೇವೆ. ದೇವರ ದರ್ಶನ ಟಿಕೆಟ್ ಇಲ್ಲದಿದ್ದರೆ ಅಸಾಧ್ಯ ಎನ್ನುವಷ್ಟರ ಮಟ್ಟಿಗಾಗಿದೆ. ಇನ್ನು ಒಂದೊಂದರ ದರ ಒಂದೊಂದು ರೀತಿ. ಶೀಘ್ರದರ್ಶನಕ್ಕೆ ಒಂದು ದರದ ಟಿಕೆಟ್ಟು, ರುದ್ರಾಭಿಷೇಕ, ಕುಂಭಾಭಿಷೇಕ, ಹೀಗೆ ಹಲವಾರು ಸೇವೆಗಳಿಗೆ ಟಿಕೆಟ್ ದರ ಒಂದೊಂದು ತರ. ಬಡಭಕ್ತನೊಬ್ಬ ಹೇಳಿದ “ದೇವರೆ, ಟಿಕೆಟ್ ಇಲ್ಲದೆ ನಿನ್ನ ದರ್ಶನ ಬಡವರಿಗೆ ಅಸಾಧ್ಯ ತಂದೆ, ಎಲ್ಲರಿಗೂ ಟಿಕೆಟ್ ಕೊಡಿಸುವ ನಿನಗೊಂದು ಟಿಕೆಟ್ಟೆ ಎಂದು ಗೋಳಾಡಿದ.
ಮೊನ್ನೆ ನಡೆದ ಕ್ರಿಕೆಟ್ ಪಂದ್ಯದಲ್ಲಿ ಗೆದ್ದ ಟೀಮಿನ ಸಂಭ್ರಮದ ಆಚರಣೆಗೆ ಕ್ರೀಡಾಂಗಣ ಸಜ್ಜಾಗಿತ್ತು. ಕೊನೆಗೆ ಕಾಲ್ತುಳಿತದಲ್ಲಿ ಜನರು ಅಸುನೀಗಿ ದೊಡ್ಡ ಸಂಚಲನವನ್ನೆ ಸೃಷ್ಟಿಸಿತ್ತು. ಅದಕ್ಕೆಲ್ಲ ಕಾರಣೀಭೂತವಾದದ್ದು ಇದೆ ಟಿಕೆಟ್. ಟಿಕೆಟ್ ಪಡೆದವರು ಹಾಗೂ ಪಡೆಯದ ಅಮಾಯಕರು ನೂಕುನುಗ್ಗಲಿನಲ್ಲಿ ವಿಕೆಟ್ಟಾಗಿ ಇಹಲೋಕ ತೊರೆದು ಹೋದರು ಎಂಬುದು ದುರದೃಷ್ಟಕರ ಸಂಗತಿ.
ಏನೆ ಇರಲಿ ಎಲ್ಲ ಕ್ಷೇತ್ರಕ್ಕೂ ಟಿಕೆಟ್ ಇದೆ. ತಂತ್ರಜ್ಞಾನವೂ ಮುಂದುವರೆದಿದೆ. ನಾವು ಕೊನೆಗೆ ಟಿಕೆಟ್ ತಗೆದುಕೊಂಡರೂ
ಈ ಟಿಕೆಟ್ಟಾಯಣ ತಲೆಚಿಟ್ಟು ಹಿಡಿಸಿ ಒಂದಿಷ್ಟು ಜನರಿಗೆ ಖುಷಿಕೊಡಿಸಿ, ಕೆಲವಷ್ಟು ಜನರಿಗೆ ಪೇಚಿಗೆ ಸಿಲುಕಿಸಿ, ಕೆಲವರಿಗೆ ಮೋಸ ಮಾಡಿಸಿ, ಈಗ ಸಾಮ್ರಾಟನಾಗಿ ಮೆರೆಯುತ್ತಿದೆ. ಕೊನೆಗೆ ಇತಿಶ್ರೀ ಟಿಕೆಟ್ಟಾಯಣ ಪುರಾಣ ಸಂಪೂರ್ಣಂ ಎಂದು ಮುಗಿಸೋಣ
-ಶಂಕರಾನಂದ ಹೆಬ್ಬಾಳ
