ಸಾಲುಮರದ ತಿಮ್ಮಕ್ಕ
ವೃಕ್ಷ ಶಾಸ್ತ್ರ ಕಲಿತವರೆಲ್ಲ
ತರಗತಿಗಳಲ್ಲಿ ಹೇಳಿ ದಣಿದರು
ನೀನು ಮಾತ್ರ
ಹಸಿರು ಧರಣಿಗೆ ಕಸುವು
ಪ್ರಾಣವಾಯು ನೀಡುವ
ಪಾದಪಗಳೇ ಧರೆಗೆ ಪ್ರಾಣ
ಪರಿಸರ ಹಸಿರು ಹಸಿರೆನಿಸಿದರೇನೇ
ಜನರಿಗೆ ಉಸಿರು
ಎಂದು ಅರಿತು
ಯಾವ ಶಾಲೆಗೂ ಹೋಗದೆ
ಯಾವ ಶಾಸ್ತ್ರದ ನೆರವು ಬೇಡದೆ
ಭೂಮಿಗೆ ಹಸಿರ ಹೊದಿಕೆ
ಹೊದಿಸುವ ಕಾಯಕ ಮಾಡಿದೆಯಲ್ಲ
ಪ್ರಶಸ್ತಿ ಬಂದೀತೆಂದು ಕಾಯಲಿಲ್ಲ
ಪತ್ರಿಕೆಗಳಲ್ಲಿ ಫೋಟೋ ಹಾಕಿಸಲಿಲ್ಲ
ಮರ ನೆಡುವ ದುಡಿಮೆ
ಮಾಡುತ್ತ ಜನರ ಸೇವೆ ಗೈದೆ
ಪ್ರಶಸ್ತಿ ಕೊಟ್ಟ ಸರಕಾರ
ತನ್ನನ್ನ ತಾನೇ ಗೌರವಿಸಿಕೊಂಡಿತು
ಇನ್ನ ನನ್ನ ಸರದಿ ಮುಗಿಯಿತು
ದೇವಲೋಕದ ಹಸಿರು ನಿಶಾನೆ ಬಂತು
ನೀವು ಮುಂದುವರೆಸಿ ಎನ್ನುತ್ತ
ಶತಾಯುಷಿಯೆನಿಸಿ
ಶತಮಾನಗಳಷ್ಟು ಕೀರ್ತಿ ಗಳಿಸಿ
ಮರಗಳನ್ನ ಅಮರವಾಗಿಸಿ
ಮರೆಯಾದೆ ತಿಮ್ಮಕ್ಕ!
ಮಳೆಯ ಅವಾಂತರ
ನಿರ್ಮಲ ಆಕಾಶ ನೋಡಲು ಚೆಂದ
ಚೆಂದ ಕಾಣೋದು ಬಿಟ್ಟರೆ ಒಣ ಒಣ
ಮೋಡ ಮುಸುಕಿದ ಗಗನ
ತುಂಬಿದ ಬಸುರಿ
ಜಲಧಾರೆಯ ಗುಡಾಣ
ಅಂದು ಮೇಲೆ ಮೋಡ ಕೂಡಿತ್ತು
ಬರಗೆಟ್ಟ ನೆಲ ವರ್ಷಧಾರೆಗೆ ಕಾದಿತ್ತು
ಜಲಂ ದೇಹಿ ಎಂದು ಮುಗಿಲಿಗೆ ಮೊರೆ ಇಟ್ಟಿತ್ತು
ಕರುಣಿಸಿತು ಪರ್ಜನ್ಯನ ಸೇನೆ
ಗರ್ಜನೆ, ಮಿಂಚುಗಳೊಂದಿಗೆ
ಇಳೆಯ ತಣಿಸಲು ಇಳಿಯಿತು
ತನ್ನಲ್ಲಿಯ ನಳ ತಿರುಗಿಸಿತು
ಜೀವಧಾರೆಯ ಸಿಂಚನೆಯೊಂದಿಗೆ ಶುರುವಿಟ್ಟು
ಪುಷ್ಕಳ ಮಳೆ ಸುರಿಯಲಾರಂಭಿಸಿತು
ವಿಪರ್ಯಾಸವೆಂದರೆ
ನಳ ಬಂದು ಮಾಡುವುದೇ
ಬಿಟ್ಟುಹೋಗಿತ್ತು
ಮೋಡವೆಲ್ಲ ಸುರಿದು ಸುರಿದು
ನೀರೆಲ್ಲ ಖಾಲಿಯಾಗಿ
ಆಕಾಶ ಮತ್ತೆ ನಿರ್ಮಲವಾಗಿತ್ತು
ಚೆಂದ ಕಾಣುತ್ತಿತ್ತು
ನೆಲದ ಮೇಲೆ ಮಾತ್ರ
ಕೊಚ್ಚಿ ಹೋಗುವಷ್ಟು ಕೋಡಿ ಹರಿದಿತ್ತು
ಜನ ಜೀವನ ಕಂಗೆಡಿಸಿತ್ತು
ಗದ್ದಲವಿದ್ದರೆ ಮಾತ್ರ ಜೀವ
ಸದ್ದು ಮಾಡುತ್ತಿದ್ದರೆ ಮಾತ್ರ ಭಾವ
ಬರೀ ಅಂದ ಚೆಂದ
ಬಿಳಿಚಿಕೊಂಡ ಮುಖ ನಿರ್ಭಾವ
ಮುಕ್ತ ಕವನ
ಮುಕ್ತ ಕವನ ಬರೆಯಿರಿ
ಯಾವುದರಿಂದ ಮುಕ್ತ
ಭಾವನೆಗಳಿಂದ ಮುಕ್ತ?
ಖಂಡಿತಾ ಅಲ್ಲ
ಆಗ ಕವನ ನಿರ್ಜೀವ
ಬರೀ ಅಕ್ಷರಗಳ ಪಾರ್ಥಿವ
ಛಂದಸ್ಸನ್ನು ಇನ್ನು ಕೈಬಿಡಿ
ಪ್ರಾಸಕ್ಕಾಗಿ ಒದ್ದಾಡಬೇಡಿ
ಮೂರು ಸಾಲು ನಾಲ್ಕುಸಾಲು
ಬೇಕೇಬೇಕಂತಿಲ್ಲ
ಮತ್ತಿನ್ಯಾವುದರಿಂದ ಮುಕ್ತ?
ಯಾವ ವಿಷಯ ಕವನಕ್ಕೆ
ಎಂಬುದೇ ಸಂದಿಗ್ಧ
ಮುಂದುಗಡೆ ಒಂದು ಚಿತ್ರ
ಅಥವಾ ಜಗತ್ತಿನ ವಿಚಿತ್ರ
ಒಂದು ದತ್ತ ವಿಷಯ ನಾಣ್ಣುಡಿ
ಸಿಕ್ಕರೆ ಕವನ ಹರಿದೀತು ನೋಡಿ
ಯಾವುದಾದರೂ ಆರಿಸಿಕೊಳ್ಳಿ
ಯಾವುದರ ಮೇಲಾದರೂ ಇರಲಿ
ಕವನವಾಗಿದ್ದರೆ ಸಾಕು ಅಂತೀರಾ
ಹಾಗಾದರೆ ಇಕೋ ತೊಗೊಳ್ಳಿ
ಇದೇ ಮುಕ್ತ ಕವನವೆಂದು
ಒಪ್ಪಿಸಿಕೊಳ್ಳಿ!
-ಚಂದಕಚರ್ಲ ರಮೇಶ ಬಾಬು
