ಮೂರು ಕವಿತೆಗಳು: ಕವಿತಾ ವಿರುಪಾಕ್ಷ

ಮಗು ಮಾತಾಡಿದಾಗ

ಕೈ ಬೆರಳ ನಡುವಿನ ಸೀಮೇಸುಣ್ಣ
ಕರಗಿತು;ಅವಧಿ ಮುಗಿಯುವ ಸಮಯ… ಎಲ್ಲದರಂತೆಯೇ

ಪಾಠ ಮುಗಿಯಿತೆಂದು
ಕೈಯೊರಸಿ ಹೊರಡಲಾದೀತೆ..?
ಪುಟ್ಟ ಸಸಿಗಳು ಮಾತಾಡುವ ಸಮಯ’ಹೊರಡಲಿಟ್ಟ ಹೆಜ್ಜೆ ಥಟ್ಟನೆ ನಿಂತಿತು..ನೂರಾರು ಪ್ರಶ್ನೆಗಳು.

ಅನತಿ ದೂರದ ಮೂಲೆಯಿಂದ
ಕೂತೂಹಲ ತುಂಬಿದ
ತಲೆಯ ಹೊತ್ತು,ಜೋಲಿ ಹೊಡೆಯುತ್ತಾ ಎದ್ದಿತೊಂದು
ಪುಟ್ಟ ಸಸಿ….

ಮಿಸ್..,
ಧರ್ಮ ದೊಡ್ಡದಾ?
ಜಾತಿ ದೊಡ್ಡದಾ?
ಪಾಠಕ್ಕಂಟದ ಪ್ರಶ್ನೆ ತೂರಿ ಬಂದಿತ್ತು ಅಲ್ಲಿಂದ… ಆವಾಸ್ತವ ಬದುಕಿನಂತೆ
ಅನಿರೀಕ್ಷಿತ ಪ್ರಶ್ನೆ;ಜ್ಯಾತ್ಯಾತೀತ ಮನದಲ್ಲಿ ಮೌನ ಸಂಕಟ.

ಕ್ಷಣ ಸುಮ್ಮನಾದೆ;ಜ್ಯಾತ್ಯಾತೀತ ಪಾಠ ಮಾಡಿದವಳು ನಾನೇ ಅಲ್ಲವೇ ?ಪ್ರಶ್ನಿಸಿಕೊಂಡೆ..

ಕರುಳಿಗೇ ಕೊಡಲಿಪೆಟ್ಟು
ಕೊಡುವಷ್ಟು ಜಾತಿ ದೊಡ್ಡದಾದರೆ
ಮತ್ತೆ ಧರ್ಮ ಇನ್ನೆಷ್ಟೋ..?
ಮರ್ಯಾದೆಗೆ ಮನ ಮಸಣ ಮಾಡಿಕೊಂಡು ಕಿಚ್ಚಿಡುವವರಿಗೆ
ಜಾತಿಯೇ ದೊಡ್ಡದು.
ತಾನೇ ದೊಡ್ಡವ ಎನ್ನುವ ಅಫೀಮು
ಕುಡಿದವರಿಗೆ ಧರ್ಮವೇ ದೊಡ್ಡದು.

ಹೇಗೆ ಉತ್ತರಿಸಿದರೂ
ಹಾಲ ಮನಸಿಗೆ ಹಾಲಾಹಲ
ಉಣಿಸಿದಂತೆ;ಬಗೆಹರಿಯದ ಪ್ರಶ್ನೆಗೆ
ಬಾಗಿ ತಲೆ ನೇವರಿಸಿ
ಇದೆಲ್ಲದಕ್ಕಿಂತ ಮಾನವೀಯತೆ
ದೊಡ್ಡದು ಮಗು ;ಸಸಿಯ ಕಣ್ಣಲ್ಲಿ ಮಿಂಚು ನಗು..!

ಕಪ್ಪು ಹಲಗೆಗಂಟಿದ ಧೂಳೊರೆಸಿ ನಡೆವಾಗ;ರಸ್ತೆಯಲ್ಲಿ ಗುಂಪೊಂದು
ತಲ್ವಾರ್ ಹಿಡಿದು ಧರ್ಮಕ್ಕೆ ಜಯವಾಗಲಿ ಎಂಬ ಕೂಗು…
ಸಮಾಜಕ್ಕಂಟಿದ ಈ ಜಾತಿ,ಧರ್ಮದ ಕಪ್ಪುಮಸಿಯ ವರೆಸುರಾರೋ.???
*

ಬಸ್ ನಿಲ್ದಾಣದ ಬೆಂಚು

ಇದ್ದ ಹತ್ತು ಬೆಂಚುಗಳಲ್ಲಿ
ಹತ್ತಾರು ಜನ ;
ಜಾಗ ಹುಡುಕಿದೆ
ಕುಳಿತವರ ನಡುವಿನ
ಆರಾಮದ ಅಂತರ
ಬೆಂಚುಗಳ ತುಂಬಿಸಿತ್ತು.
ಅಲ್ಲೇ
ಅನತಿ ದೂರದಿ
ಹೆಗಲಿಗೆ ಬ್ಯಾಗೇರಿಸಿ ನಿಂತೆ.

ವಯಸ್ಸು,ಲಿಂಗ,
ಆರೋಗ್ಯ,ರೋಗ
ಉತ್ತಮ,ಅಧಮ,
ಜಾತಿ,ಧರ್ಮ
ಯಾವುದನ್ನೂ,
ಯಾರನ್ನೂ ಲೆಕ್ಕಿಸದೆ
ಹೊತ್ತು ಹೊತ್ತು ಮೆತ್ತಗಾಗದೆ
ದೃಢವಾಗಿ ಮಲಗಿತ್ತು ಬೆಂಚು.

ಆಹಾ..
ಧ್ಯಾನಸ್ಥ ಬೆಂಚು
ಅದೆಷ್ಟು ತಾದಾತ್ಮ್ಯ .
ನಕ್ಕವರೆಷ್ಟೋ
ಅತ್ತವರೆಷ್ಟೋ
ಕೈಗಂಟಿದ ಕೊಳಕ ಒರೆಸಿ ಎದ್ದವರೆಷ್ಟೋ..,

ಹೆಂಗಸರ ಮಕ್ಕಳ
ಮುಟ್ಟು,ಮೈಲಿಗೆ
ಕಾಲ್ಮಡಿ,ಹೇಸಿಗೆ
ಯಾವುದನ್ನೂ ಲೆಕ್ಕಿಸದೆ
ಎಲ್ಲವ ಮೈಗಂಟಿಸಿ
ತಣ್ಣಗೆ ಮಲಗಿತ್ತು
ಉಗ್ರ ಅಂತಃಕರಣೀಯ..

ದೂರದಿ ನಿಂತು
ಇದೆಲ್ಲವ ನೋಡುತ್ತಿದ್ದ ನಾನು
ಕ್ಷಣ ಕಲ್ಲು.

ಎಲ್ಲರನ್ನೂ
ಪ್ರೀತಿಸುವಂತೆ,ಓಲೈಸುವಂತೆ,
ಸಂಭಾಳಿಸುವಂತೆ,ಗುರುತಿಸುವಂತೆ,
ಸಹಿಸುವಂತೆ
ನಟನೆ ಮಾಡುವ
ಮನುಷ್ಯನಿಗೂ ,
ಎಲ್ಲರನ್ನೂ ಎಲ್ಲವನ್ನೂ
ನಿಜಕ್ಕೂ ಸಹಿಸುವ ನಿನಗೂ
ಅದೆಷ್ಟು ವ್ಯತ್ಯಾಸ?!

ಸಮಯವಾಯಿತು
ಕಾಯುತ್ತಿದ್ದ ಬಸ್ಸು ಬಂದಿತು.
ಎಲ್ಲರೂ ಹೊರಟರು;
ಜೊತೆಗೆ ನಾನೂ.,
ಆದರೆ
ಮನಸ್ಸಾಗಲಿಲ್ಲ
ಕಾಲ್ಗಳೇ ಅತ್ತ ಹೆಜ್ಜೆ ಕಿತ್ತವು,
ಹತ್ತಿರವಾದಂತೆ ರೂಪ ಸ್ಪಷ್ಟ ಬೆಂಚಿನೊಳಗಣ ಬುದ್ಧ
ಕಣ್ಮುಚ್ಚಿ ನಕ್ಕ!
ಸ್ಥಾವರ ಬುದ್ಧ !!
ಮುಟ್ಟಿ ಕಣ್ಗೊತ್ತಿಕೊಂಡೆ.

ಇತ್ತ,
ಹೊರಡಲನುವಾದ ಬಸ್ಸು
ಹಾರ್ನ್ ಮಾಡಿತು
ಕಾಲವೇ ಕೂಗಿದಂತೆ..

ಬದುಕಿನರ್ಧ ನಟನೆ
ಕೊನೆ ಕ್ಷಣದ ಜ್ಞಾನವನ್ನು
ಪಡೆದ ಜಂಗಮ
ನಾನು,ಬಸ್ಸತ್ತಿ ಕುಳಿತೆ.

ಬಸ್ಸೇನೋ ಹೊರಟಿತು;
ಹಾಗೆ ಕಾಲವೂ..
ಆದರೆ
ಮನುಜನಲ್ಲಾಗದ ಬದಲಾವಣೆ
ಬಸ್ಟ್ಯಾಂಡಿನ ಮೂಲೆಯಲ್ಲಿ
ಬೋರಲು ಬಿದ್ದಿತ್ತು,
ದೀರ್ಘಕಾಲದ ರೋಗಗ್ರಸ್ಥ
ರೋಗಿಯಂತೆ…!!
*
ಪ್ರೀತಿಯ ಸಾಕಿ…!

ನನ್ನ ಮೇಲೆ ನಿನಗೆ
ಅದೆಂತಹ ನಫರತ್ ಸಾಕಿ…
ನೋವುಗಳೆಲ್ಲಾ ಅವನಿಗೇ ಇರುವಂತೆ;
ದರ್ದುಗಳಿಗೆಲ್ಲಾ ಅವನೇ ವಾರಸುದಾರನಂತೆ..,
ಸದಾ..
ಕೇವಲ ಅವನನ್ನಷ್ಟೇ
ಸಂಭಾಳಿಸುತ್ತೀಯ…!

ಅವನ ನೋವು ತೊಳೆಯಲು
ಶರಾಬನ್ನು ಕೈಯಲ್ಲಿಡಿದು,
ಮೈಖಾನವನ್ನು ಸದಾ ತೆರೆದಿರುತ್ತೀಯಾ…?!

ಹೇಳೇ ಸಾಕಿ
ನಾನು ನಿನ್ನ ಕುಲವೇ ಅಲ್ಲವೇ..?
ನನಗೂ ನೋವುಗಳಿಲ್ಲವೇ..?
ನನಗೂ..,
ಹೇಳಲಾರದ ದರ್ದುಗಳಿಲ್ಲವೇ..??

ಕೇಳು..,
ಶರಾಬು ಸುರುವಿಕೊಂಡು
ವಾಸ್ತವವ ಕಳಚಿ
ಅಮಲಿನ ಜನ್ನತ್ ನಲ್ಲಿ ತೇಲಲು
ನಾನು ಅವನಲ್ಲ ಸಾಕಿ….

ವಾಸ್ತವಕ್ಕೆ ಚೂರೇ ಚೂರು
ಬೆನ್ನು ತಿರುಗಿದರೂ
ನನ್ನೆಲ್ಲಾ ಖಾಂದಾನ್ ಕತ್ತಲಾಗುವುದು ….!

ಸಾಕು ಸಾಕಿ…,
ಯಾವುದೇ ದುಃಖ
ದೂರುಗಳಿಲ್ಲದೆ ಬದುಕಿ ಬಿಡುವೆ.
ಗೆಳತಿಯಾಗಿ
ನನಗೂ ಯಾವುದಾದರೂ
ದವಾ ಕೊಟ್ಟುಬಿಡು…!
……….
………..
ಮತ್ತೇರಬಾರದು ಅಷ್ಟೆ…!!!

-ಕವಿತಾ ವಿರೂಪಾಕ್ಷ


ಕನ್ನಡದ ಬರಹಗಳನ್ನು ಹಂಚಿ ಹರಡಿ
3 2 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಕೊಟ್ರೇಶ್ T A M ಅರಸೀಕೆರೆ
ಕೊಟ್ರೇಶ್ T A M ಅರಸೀಕೆರೆ
11 days ago

ಅರ್ಥಪೂರ್ಣ ಕವಿತೆಗಳು

1
0
Would love your thoughts, please comment.x
()
x