ಅಪ್ಪ
ಅಪ್ಪನ ವರ್ಷದ ಕಾರ್ಯ. ಇದು ಮೊದಲಲ್ಲ
ವರ್ಷಾ ವರ್ಷ ತಪ್ಪದೆ. ಇಷ್ಟದ ಊಟ ತಿಂಡಿ ಮದ್ಯ
ಬೀಡಿ ಬೆಂಕಿ ಪೊಟ್ಟಣ ಜೊತೆ ಹೊಸ ಬಟ್ಟೆ ಎಡೆಗೆ
ಇಡಬೇಕು ಅವ್ವನೆದುರು ಆಕಾಶದಂಥ ಅಪ್ಪನಿಗೆ!
ನೋವಿನ ಮೂಟೆ ಹೊತ್ತು ಮಲಗಿರುವ ಅವ್ವ,
ಹಗಲು ರಾತ್ರಿ ಎನ್ನದೆ ಗಂಟೆ ಗಳಿಗೆ ಎನ್ನದೆ
ಯಾರು ಕೇಳುತ್ತಾರೊ ಬಿಡುತ್ತಾರೊ ಎಂಬರಿವಿಲ್ಲದೆ
ತನಗೆ ತಾನೇ ತುಟಿ ಕುಣಿಸುತ್ತ ಅಪ್ಪನ ಗುಣಗಾನ!!
ಅಪ್ಪ ಕಾಲವಾಗಿ ಹತ್ತಕ್ಕು ಹೆಚ್ಚು ವರ್ಷವಾಯ್ತು
ಒಂದು ಜೊತೆ ಹಸು ಒಂದು ಬಳ್ಳದ ಗಾಡಿ ಜೊತೆಗೆ
ಅವ್ವ ಮತ್ತು ಆರು ಹೆಣ್ಣು ಆರು ಗಂಡಲ್ಲಿ ಒಂದು ಕಳೆದು, ಹನ್ನೊಂದು ಮಕ್ಕಳು ಅಪ್ಪನ ಒಟ್ಟು ಆಸ್ತಿ!
ಎಷ್ಟು ಗೆಯ್ದರು ಜೇಬು ತುಂಬದ ಪುಡಿಕಾಸು ಕೂಲಿ
“ಎಲ್ರುನೂ ಗೌಡ್ರಟ್ಟಿಗ ಹಾಕುದ್ರ ನಿನ್ ಬರ ತಪ್ಪುತ್ತ’
ಅನ್ನೊ ಪುಗಸಟ್ಟೆ ಮಾತನ್ನು ಗಾಳಿಗೆ ತೂರಿದ
ಅಪ್ಪನ ಮೇಲೆ ಮೇಗಲಕೇರಿಯ ಕೆಂಡದ ಕಣ್ಣಿತ್ತು!
ಗರ್ಗೇಶ್ವರಿ ಖಾಲಕ್ ಸಾಬ್ರ ಮನೇಲಿ ಜೀತಕ್ಕಿದ್ದ ಅಪ್ಪ
ಖಾಲಕ್ ಮಾದ ಎಂದೇ ಊರಲ್ಲಿ ಫೇಮಸ್
ಅವ್ವನ ಕೈ ಹಿಡಿದ ಅಪ್ಪ ಜೀತಕ್ಕೆ ಸೆಡ್ಡು ಹೊಡೆದಿದ್ದಕ್ಕೆ
ಅವ್ವನ ಅವ್ವ ಕೊಟ್ಟ ಎಕರೆ ಭೂಮಿಯ ಖದರಿತ್ತು
ಸ್ಲೇಟು ಬಳಪ ಕೊಟ್ಟು ಸ್ಕೂಲಿಗೆ ಕಳಿಸಿದ ಅಪ್ಪನಿಗೆ
ತಲೆಗೆ ಏಟು ಬಿದ್ದು ರಕ್ತ ಜಿನುಗುವಾಗ ಧೋ ಎಂದು ಸುರಿವ ಮಳೆ. ಕಡು ಕತ್ತಲು. ಜೀತದ ಆಟ. ಬಗ್ಗದ ಅಪ್ಪನ ಕೆಚ್ಚಿಗೆ ಮನೆಮಂದಿ ಜೀತದಿಂದ ಮುಕ್ತಿ!
ವರ್ಷದ ಕಾರ್ಯ. ಅವ್ವಳನ್ನು ಏಳಿಸಬೇಕು ಪೂಜೆಗೆ
ಅವ್ವ ಏಳುತ್ತಿದ್ದುದು ಉಣ್ಣಕೆ ತಿನ್ನಕೆ ಕುಡಿಯೋಕೆ;
ಬಿಟ್ಟರೆ, ಒಂದಕ್ಕೆ ಎರಡಕ್ಕೆ ಕ್ಯಾಕರಿಸಿ ಉಗಿಯೋಕೆ
ಏಳಿಸಲೋದರೆ ಅಪ್ಪನದೇ ಮಾತು ‘ಅಂವ ಹುಲಿ’!
ಅವ್ವ ಅಂತಲ್ಲ ಮನೆಮಂದಿ ಅಂತಲ್ಲ
ಕೇರಿ ಅಂತಲ್ಲ ಕೇರಿಯಾಚೆಯೂ
ಮಾತು ಮಾತು ಅಪ್ಪನದೇ ಮಾತು..
‘ಸಾಬ್ರಟ್ಟಿ ಜೀತಗಾರನಾಗಿದ್ದ ಖಾಲಕ್ ಮಾದ
ಹೆತ್ತೈಕ್ಳ ಜೀತಕ್ಕಳಿಸದೆ ಅ ಆ ಇ ಈ ಕಲಿಯಕೆ ಸ್ಕೂಲಿಗೆ ಕಳಿಸಿದ ಭೂಪ”
*
‘ಕಗ್ಗತ್ತಲು ಸದ್ದಿಲ್ಲದೆ ಜೋಗುಳವ ಹಾಡಿದೆ”
ಅರಿವಿನ ನೋವೊಂದು
ಸಂತೋಷದ ಅಂಗಳದಲ್ಲಿ
ಹೆಪ್ಪುಗಟ್ಟಿ ಒಣಗಿದೆ!
ಅರಿವಿರದ ಪ್ರಸ್ತ ಜರುಗಿ
ಕತ್ತಲು ಜೀವಸುಖಿಯಾಗಿಸಿದೆ
ಸಾವಿನ ಸೂತಕದಲ್ಲಿ!
ಕನಸುಗಳು ಬೀಜವಾಗಿ
ಮಣ್ಣು ಸೇರಿ ಬಸಿರಾಗಿ
ಜೀವದ ಬೇರು ಹೊಕ್ಕಳಿಗಂಟಿದೆ!
ಪ್ರಸವವಾಗಿ ರಕ್ತ ಸೃಜಿಸಿ
ಜೀವ ಭುವಿಗೆ ಬಿದ್ದಿದೆ
ಕಗ್ಗತ್ತಲು ಸದ್ದಿಲ್ಲದೆ ಜೋಗುಳವ ಹಾಡಿದೆ!
ಬಿಟ್ಟೂ ಬಿಡದೆ ಅರಚುತ್ತಿರುವ
ಹಾಲ್ಗಲ್ಲದ ಜೀವಕೀಗ
ಮೊಲೆ ಹಾಲು ಬೇಕಿದೆ!
ಚಿಗುರು ಮೊಲೆಯ ಕಿರು ದೇಹದ
ಹೆತ್ತ ಜೀವದುಸಿರು ನಿಂತಿದೆ
ಅನಾಥವಾಗಿ ಅನಂತವಾಗಿ!
ಜೀವದಸಿವು ಮುಗಿಲು ಮುಟ್ಟಿ
ದಿಕ್ಕುಗಳೇ ದಿಕ್ಕೆಟ್ಟು
ಬಿಕ್ಕಿಬಿಕ್ಕಿ ಅಳುತಿವೆ!
ಸೃಜಿಸಿದ ಸುಖಪುರುಷನಿಗೀಗ
ಅಳುಕಿಲ್ಲ ಸಾವಿನ ಸೂತಕವಿಲ್ಲ
ಕಂಕಣ ಭಾಗ್ಯ ಪ್ರಸ್ತದ ಪ್ರಸ್ತಾವ!
ಶೋಧ
ಜಿಟಿಜಿಟಿ ಮಳೆಯ ಚಳಿಗೆ ಟೀ ಕಾಫಿ ಕುಡಿಯುತ್ತ
ಬೀಡಿ ಸಿಗರೇಟು ಸೇದುತ್ತ ನಿಂತಿರುವ ಹತ್ತಾರು ಜನ;
ಮೈ ಬೆಚ್ಚಗೆ ಮಾಡಿಕೊಳ್ಳುವ ಗುರಿ ಇಟ್ಟ ಕಣ್ಣುಗಳು
‘ಇವಳು ಅದೆ’ ಎನ್ನುವ ಗುಸುಗುಸು ಮಾತು!
ಸಬರ್ಬನ್ ಬಸ್ಟ್ಯಾಂಡ್ ಸುತ್ತಲೇ ಅತ್ತಿಂದಿತ್ತ ಇತ್ತಿಂದತ್ತ ಅತ್ತಿತ್ತ ಕಣ್ಣಾಡಿಸುತ್ತ ಹೆಜ್ಜೆ ಇಟ್ಟು ಸುತ್ತುವ
ಎಣೆಗೆಂಪು ಮೈಬಣ್ಣದ ಅವಳ ಮೇಕಪ್ಪು ಸಿಂಪಲ್! ಸಂಜೆಗತ್ತಲಾದರು ಬಿಡದ ಜಿಟಿಜಿಟಿ ಮಳೆಯ ಧಾರೆ!
ಕಡ್ಡಿಪುಡಿ ಪಾನ್ ಪರಾಗ್ ಕ್ವಾಟರ್ ಓಲ್ಡ್ ಮಂಕ್ ಟೆಟ್ರಾಪ್ಯಾಕ್ ಕಚ್ಚಿ ಹೀರಿ ಬಿಸಿಬಿಸಿ ಕಾಟ್ಲಾ ಫಿಶ್ ಕಡಿ ರುಚಿಗೆ ನಶೆ ಏರಿ ತೂರಾಡಿ ಮನೆ ಬಾಗಿಲಲಿ ಕುಂತು ಪೇಚಾಡುವ ಪೈಲ್ವಾನಪ್ಪನ ಮೈ ಬಟ್ಟೆ ಅಸ್ತವ್ಯಸ್ತ!
‘ಅಕ್ಕ ನೆಕ್ಸ್ಟ್ ಮಂತ್ ಎಕ್ಸಾಂ, ಬ್ಯಾಲೆನ್ಸ್ ಫೀಸ್ ಕಟ್ಟಬೇಕು’ ತಂಗಿಯರ ಅಹವಾಲು ಆಲಿಸಿ
ತಲೆ ನೇವರಿಸಿ ಕೆನ್ನೆ ಚಿವುಟಿ ಮುದ್ದಿಸಿ ಮುತ್ತಿಕ್ಕಿ ಮಲಗಿಸುವಾಗ ಎತ್ತಲೊ ಹೋದ ಅವ್ವನ ನೆನೆಪು!
ಕ್ವಿಂಟಾಲ್ ತೂಕದವನನ್ನು ಎತ್ತುವ ತಾಕತ್ತಿದ್ದ ಅಪ್ಪನ ಕುಡಿತ ಊರೂರಿಗೆ ಹಬ್ಬಿ ಗರಡಿ ಮನೆಯಿಂದ ನೂಕಿ ನೋಡುವ ಕಣ್ಣಿಗೆ ಆಡುವ ಬಾಯಿಗೆ ಎರವಾಗಿ ಅವಳ ಎದೆಗೆ ನಾಟಿತ್ತು!
ಕೆಲಸ ಮುಗಿಸಿ ಸಂಜೆ ‘ಅದೆತರ’ದವಳಂತೆ
ಸಬರ್ಬನ್ ಬಸ್ಟ್ಯಾಂಡ್, ಆರ್ಗೇಟು, ಲಾಡ್ಜು, ಕಂಡ
ಕಂಡ ಗಲ್ಲಿ ಸುತ್ತಿ ಅವ್ವನನ್ನು ಹುಡುಕುವ ಹಕೀಕತ್ತು!
ಊರಲ್ಲಿ ಗುಲ್ಲು. ಯಾರದೋ ಕಾರಲ್ಲಿ
ಆಟೋದಲ್ಲಿ ಹಾಗೇ ಸ್ಲಮ್ಮಲ್ಲಿ ತಿರುಗಾಟ
‘ನಿಂದೂ ಒಂದ್ ಬಾಳ’ ರಪ್ಪನೆ ಪೈಲ್ವಾನನ ಮುಖಕೆ!
ಮಳೆ! ವಿಪರೀತ ಮಳೆ. ಕುಡಿತದ ನಶೆ ಏರಿತ್ತು.
ಊರು ಮಗ್ಗಲು ಮಲಗಿತ್ತು. ಬೋರಿಡುವ ಗಾಳಿ. ನೆಂದ ಸೀರೆ ಸೆರಗು ಜಾರಿಸಿ ಒದರಿ ಅಪ್ಪನ ಏಳಿಸಿ ಒಳ ನಡೆದಳು ತಂಗಿಯರಿಗೆ ಭರವಸೆಯಾಗಿ!
ರಚ್ಚೆ ಹಿಡಿದು ಹಿಂದೆ ಬಿದ್ದ ಪೋಲಿಗೆ ಚಪ್ಪಲಿ ತೂರಿದರು ಭಂಡ ಬಲು ಭಂಡ! ನೋವಲ್ಲೆ ನಕ್ಕು ಓಡಿ ಹೋದ ಅವ್ವಳ ಚಿಂತೆಗೆ ಬಿದ್ದ ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅಳುವಾಗ ಆ ಪೋಲಿಗೆ ನಗು!
‘ಪೈಲ್ವಾನಪ್ಪ ಗಂಡುಸ್ರ ಚೆಡ್ಡಿ ಒಳಕೆ ಕೈಯಾಕದಲ್ದೆ ಸಣೈಕಳ ಖಯಾಲಿಯಂವ. ಅಂವ ‘ಅಪ್ಪ’ ಹೆಂಗಾದ?”
ಅವನ ಮಾತು ಗಂಟಲು ಕಟ್ಟಿ ಕಣ್ಣು ಕತ್ತಲಿಡಿದು ಓಡೋದ ಅವ್ವಳನ್ನು ಹುಡುಕಬೇಕು; ಬಿಟ್ಟೋದ ಅಪ್ಪನನ್ನು ಹುಡುಕಿ ನೀನು ಮನುಷ್ಯನಾ..? ಅಂತ ಕೇಳಬೇಕು! ಸ್ವಗತದಲ್ಲಿ ಆ ಪೋಲಿಯ ಬಂಧದಲ್ಲಿ!
-ಎಂ. ಜವರಾಜ್