ಕದ ತೆರೆಯಿರಿ
ಗಾಳಿಗೆ ಆಹ್ವಾನವಿರಲಿ, ಬೆಳಕಿಗೆ ಪ್ರವೇಶವಿರಲಿ,
ಸೆರೆಹಿಡಿದ ಮನದಿ, ಬರಿದೆ ಗತದ ನೆನಪಲಿ,
ಕತ್ತಲೆಯ ಗವಿಯಲಿ ಸುಮ್ಮನೆ ಅಲೆಯದಿರಿ.
ನೆನಪಿಸಿಕೊಳ್ಳಿ ಬಂದ ದಾರಿಯ ಪಯಣವನು,
ಎಲ್ಲ ಭಾವಗಳ ಬಿಡುಗಡೆ ಮಾಡಿ,
ಯಾವುದೇ ದ್ವಾರದಿಂದ ಜಾರಿಹೋಗದಿರಿ.
ನಿಮ್ಮ ಸತ್ವ ಜಗಕೆ ಕಾಣಲಿ, ಕಿಟಕಿ-ಬಾಗಿಲು ತೆರೆಯಿರಿ,
ಬರುವವರು ಬರಲಿ, ಹೋಗುವವರು ಸಾಗಲಿ.
ಮುಚ್ಚಿದ ಕಿಟಕಿಗಳ ಹಿಂದೆ ಅಡಗದಿರಿ ನೀವಿಂದು,
ಅನಾದಿ ಕಾಲದ ಸ್ವಾತಂತ್ರ್ಯದ ಬೀಗಗಳ ಕಿತ್ತೊಗೆಯಿರಿ.
ಮನದ ಕದವ ತೆರೆದಿಡಿ, ತೊಳೆಯಿರಿ ಕಲ್ಮಷಗಳನು,
ಮುಖ್ಯದ್ವಾರಗಳು ಸದಾ ತೆರೆದಿರಲಿ ಪೂರ್ಣವಾಗಿ,
ಯಾವುದನ್ನೂ ಕಳೆವ ಭಯದ ಭ್ರಮೆಯ ಬಿಡಿ.
ಹೃದಯದ ಕೋಣೆಗಳಿಗೆ ಬೀಗ ಹಾಕುವುದು ಸಲ್ಲ, ಅರಿಯಿರಿ.
ಓ ನಿರ್ಮಲ ರಾತ್ರಿಯೇ, ಸುತ್ತಿದ ಬಂಧನ ಹರಿದುಹಾಕು,
ನೋವಿನ ಸಮೂಹದ ಕೊನೆಯಲ್ಲಿ ಇನ್ನೇನೋ ಅರಸದಿರು.
ಬದುಕು ಕಲಿಸಿದ ಪಾಠವೇ ದೊಡ್ಡದು,
ತೆರೆಯಿರಿ ನಿಮ್ಮ ಅಸ್ತಿತ್ವದ ದ್ವಾರಗಳನು..!
ತೆಲುಗು ಮೂಲ : ಡಾ।। ಕಟುಕೋಝ್ವಲ ರಮೇಶ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್
ಗಾಯಕ್ಕೆ ಮುಲಾಮಾಗ್ಬೇಕು
ಕವಿ ಸಮಯ ಅಂದ್ರೆ ಒಂಥರಾ ವಿಚಿತ್ರ,
ನಿದ್ದೆ ಇಲ್ಲದ ರಾತ್ರಿಗಳನ್ನ
ಹುಡುಕಿ ತರುತ್ತೆ.
ಮನಸ್ಸಲ್ಲಿ ಮೂಡಿ ಬರೋ ಎಲ್ಲ ಭಾವನೆಗಳನ್ನ
ತನ್ನ ಗೂಡಲ್ಲಿ ಕೂಡಿಡುತ್ತೆ.
ಬಾಲ್ಕನಿ ಕಿಟಕಿ ಮೇಲೆ ಕೂತ ಪಾರಿವಾಳನ್ನ
ಪ್ರೀತಿಯಿಂದ, ಲವಲವಿಕೆಯಿಂದ ನೋಡಿ
ಮಾತಾಡಿಸುತ್ತೆ.
ಸಂಪಿಗೆ, ಜಾಜಿಮಲ್ಲಿಗೆಗಳಿಗೂ ಹೊಟ್ಟೆ ಉರಿ ಆಗೋ ತರ,
ಮಂದಾರ ಹೂಗಳ ಜೊತೆ
ಪಿಸುಗುಡುತ್ತೆ.
ಆಗಿನ ಸಂದರ್ಭ, ಪರಿಸ್ಥಿತಿಗಳನ್ನ
ಸಂಭಾಷಣೆಯಲ್ಲಿ ಬೆರೆಸಿ
ಜೀವನದಲ್ಲಿ ಇರೋ ದುಃಖಕ್ಕೆ ಧ್ವನಿಯಾಗುತ್ತೆ.
ಬೇಜಾರು ಅನ್ನೋ ಅತಿಥಿ ಆಗಾಗ
ನಮ್ಮ ಮನೆಗೆ ಬಂದು ಹೋಗುತ್ತೆ.
ಅದು ಗಾಯಕ್ಕೆ ಮುಲಾಮಾಗ್ಬೇಕು.
ನೋವನ್ನ ನಾವು ಸಹಿಸಿಕೊಂಡ ಮೇಲೆ
ಗಾಯದ ಬಗ್ಗೆ ಚಿಂತೆನೇ ಇರಲ್ಲ ಅಲ್ವಾ!
ತೆಲುಗು ಮೂಲ : ಡಾ|| ರಾಧೇಯ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್