ಬಹಳ ದಿನಕ್ಕೆ ಒಂದೊಳ್ಳೆ ಫಿಲ್ಮ್ ನೋಡ್ದೆ, ತುಂಬಾ ಕಾಮಿಡಿ ಇದೆ ನಕ್ಕುನಕ್ಕು ಸಾಕಾಯ್ತು ಅಂದ್ರು ಕೆಲವರು. ನಿಜ ನೋಡ್ಲೇಬೇಕಾದ ಸಿನೆಮಾ ನೋಡು ಅಭಿ ಅಂತ ಹಕ್ಕೊತ್ತಾಯ ಮಾಡಿದರು ಗೆಳೆಯರು. ಆದರೆ ಇವರ್ಯಾರು ಸಿನೆಮಾದ ಕಥೆಯ ಸಣ್ಣ ಎಳೆಯನ್ನೂ ಬಿಟ್ಟುಕೊಡಲಿಲ್ಲ. ಫೈನಲಿ ನಾನೂ ಸಿನೆಮಾ ನೋಡಿದೆ. ಸಿನೆಮಾದ ತಾಂತ್ರಿಕ ಮಿತಿಗಳನ್ನು ಕುರಿತು ಹೇಳೋದು ನನ್ನ ಉದ್ದೇಶ ಅಲ್ಲ. ಆ ಕೆಲಸ ಸಿನೆಮಾ ಕ್ಷೇತ್ರದ ಪರಿಣಿತರಿಗೆ ಬಿಟ್ಟದ್ದು. ಒಬ್ಬ ಸಾಮಾನ್ಯ ಸಹೃದಯ ಪ್ರೇಕ್ಷಕಳಾಗಿ ‘ಸು ಫ್ರಂ ಸೋ’ ಸಿನೆಮಾ ನನ್ನಲ್ಲಿ ಮೂಡಿಸಿದ ಅಭಿಪ್ರಾಯವನ್ನು ಹಂಚಿಕೊಳ್ಳುವೆ.
ಇದೊಂದು ಹಾರರ್ ಫಿಲ್ಮ್ ಇರಬಹುದು ಎಂದೆನಿಸುವಂತೆ ಯುವಕನೋರ್ವನು ದೆವ್ವದ ಕನಸು ಕಾಣುವ ಮೂಲಕ ಸಿನೆಮಾ ಪ್ರಾರಂಭಗೊಳ್ಳುತ್ತದೆ. ನಂತರ ಒಂದು ಸಾವು, ಆ ಸಾವಿನ ಸುತ್ತಲೂ ಕರಾವಳಿ ಭಾಗದ (ಮರ್ಲೂರು ಮತ್ತು ಸೋಮೇಶ್ವರ ಊರುಗಳಲ್ಲಿ ) ಜನರಿಗಿರುವ ನಂಬಿಕೆ ಮತ್ತು ಅದರ ಆಧಾರದ ಆಚರಣೆಗಳು. ಅದನ್ನೆಲ್ಲಾ ಮೇಲ್ವಿಚಾರಣೆ ಮಾಡುವ ಓರ್ವ ವ್ಯಕ್ತಿ ಮತ್ತು ಆತನ ವ್ಯಕ್ತಿತ್ವ (ರವಿ ಅಣ್ಣ). ಯಾವುದನ್ನೂ ಪ್ರಶ್ನಿಸದೇ ಚಾಚುತಪ್ಪದೇ ಪಾಲಿಸುವ ಮುಗ್ಧ ಜನರು. ಆ ಭಾಗದ ಆಹಾರಪದ್ಧತಿ ಮತ್ತು ಮೋಜಿನ ಸಂಗತಿಗಳು(ಕುಡಿತ), ಇದರ ನಡುವೆ ಒಂದು ಮದುವೆ, ಹಾಡು-ಕುಣಿತ, ದೈನಂದಿನ ಬದುಕು, ಕಸುಬುಗಳು, ಹಳ್ಳಿಯ ಸ್ವಚ್ಛಂದ ವಾತಾವರಣ, ಪರಸ್ಪರ ಜನರಲ್ಲಿರುವ ಸೌಹಾರ್ದ ಸ್ನೇಹ ಮತ್ತು ಸಣ್ಣತನ. ಎಲ್ಲಾ ಚರ್ಚೆಗಳಿಗೂ ಸಾಕ್ಷಿಯಾಗುವ ರಾಜಣ್ಣನ ಚಿಲ್ಲರೆ ಅಂಗಡಿ ಮತ್ತು ದೃಷ್ಟಿ ದೋಷಕ್ಕೊಳಗಾದ ಮುದುಕ, ಶಾಲೆ-ಮಕ್ಕಳು, ಯುವಕರ ಅಭಿರುಚಿಗಳು ಹೀಗೆ ಹಲವಾರು ಸಂಗತಿಗಳು ಆರಂಭಿಕ ಭಾಗದಲ್ಲಿ ಬಂದು ಹೋಗುತ್ತವೆ. ತುಳು ಮಿಶ್ರಿತ ಪ್ರಾದೇಶಿಕ ಕನ್ನಡಭಾಷೆ ಇದೆಲ್ಲವನ್ನು ಚೆಂದವಾಗಿ ಕಟ್ಟಿ ಕೊಡುತ್ತದೆ. ಮುಖ್ಯವಾಗಿ ಯುವಕ(ಅಶೋಕ) ಯುವತಿಯ ನಡುವಿನ ಸಹಜ ಪ್ರೀತಿ- ಆಕರ್ಷಣೆ, ಅವಳನ್ನು ಕಾಣುವ ಹಪಹಪಿಯಲ್ಲಿ ಯುವಕ ಮಾಡಿಕೊಳ್ಳುವ ಯಡವಟ್ಟು ಮತ್ತು ಅದರಿಂದ ಪಾರಾಗಲು ಬಳಸಿದ ತಂತ್ರ. ಈ ಒಂದು ಪ್ರೇತದ ಹೆಸರಿನ ತಂತ್ರವೇ ಇಡೀ ಸಿನೆಮಾದ ದಿಕ್ಸೂಚಿಯಾಗಿ ಪರಿಣಮಿಸುತ್ತದೆ.
ಅಶೋಕನ ಮೈಮೇಲೆ ಬಂದ ಪ್ರೇತವನ್ನು ಬಿಡಿಸಲು ವಾಡಿಕೆಯಂತೆ ಆಚಾರ್ಯ (ಅಶೋಕನ ಸ್ನೇಹಿತ)ರನ್ನು ಕರೆಸುವುದು. ಅಶೋಕ ತಮಾಷೆಗೆ ಈ ಮೊದಲಿನ ಕನ್ನಡದ ಚಲನಚಿತ್ರದ ಪೋಸ್ಟರ್ ನೋಡಿ ‘ಕಲ್ಪನಾ’ ಎಂದಂದ್ದು, ಅದನ್ನು ನೆರೆದಿದ್ದವರೆಲ್ಲಾ ‘ಸುಲೋಚನಾ’ ಎಂದು ಕೇಳಿಸಿಕೊಳ್ಳುವುದು, ಇಲ್ಲಿಂದ ಹೋಗು ಎಂದು ಕೈ ತೋರಿದ ದಿಕ್ಕಿಗಿರುವ ಪಿಂಡ ಬಿಡುವ ಸೋಮೇಶ್ವರ ಸ್ಥಳವನ್ನು ತಳುಕುಹಾಕುವುದು. ಆ ‘ಸೋಮೇಶ್ವರದ ಸುಲೋಚನಾಳೇ ‘ ಪ್ರೇತಾತ್ಮ ಎಂದು ಬಲವಾಗಿ ನಂಬುವುದು, ಇದನ್ನು ಬಿಡಿಸಲು ಪ್ರಭಾವಿ ದೈವಾಂಶವಿರುವ ವ್ಯಕ್ತಿಯನ್ನು ಕರೆಸಲು ಸಮಿತಿ ರಚಿಸುವುದು. ಆ ಸಭೆಯಲ್ಲಿ ಮಾಡುವ ಸಾಂಪ್ರದಾಯಿಕ ಭಾಷಣ ಮತ್ತು ನಿರ್ಧಾರದಂತೆ ಶ್ರೀ ಕರ್ಣಾಕರ ಗುರೂಜಿಯ ಆಗಮನವಾಗುತ್ತದೆ. ಅವರ ಆಗಮನದ ನಂತರ ಸಿನೆಮಾ ಮತ್ತಷ್ಟು ಸ್ವಾರಸ್ಯಕರವಾದ ತಿರುವು ಪಡೆದುಕೊಳ್ಳುತ್ತದೆ. ಅಲ್ಲಿ ಟೈಟಲ್ ರಿವ್ಹೀಲ್ ಮಾಡಲಾಗುತ್ತದೆ.
ಸಾಮಾನ್ಯವಾಗಿ ಕೆಲವು ಸಿನೆಮಾಗಳ ಶೀರ್ಷಿಕೆಯೇ ಪ್ರೇಕ್ಷಕರ ಬಳಗವನ್ನು ಹುಟ್ಟು ಹಾಕಿಬಿಡುತ್ತದೆ. ಆದರೆ ವಿಚಿತ್ರವೆನಿಸುವ ಈ ಸಿನೆಮಾದ ಶೀರ್ಷಿಕೆಯು ಆನ್ ಸ್ಕ್ರೀನ್ ಡಿಫೈನ್ ಆಗೋ ಆ ನಿರ್ದಿಷ್ಟ ಸಂದರ್ಭದಲ್ಲಿ ನಿಜಕ್ಕೂ ಮೆಚ್ಚುಗೆ ಪಡೆದುಕೊಳ್ಳುತ್ತದೆ. ಅಲ್ಲಿಂದ ಸಿನೆಮಾ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತದೆ. ನಂತರ ಕರ್ಣಾಕರ ಗುರೂಜಿಯ ಆಶಾಡಭೂತಿತನ. ಆತ ನೀಡುವ ಅತಾರ್ಕಿಕ ಸಲಹೆಗಳು ಆ ಪ್ರಯೋಗಕ್ಕೊಳಗಾಗಿ ಸುಸ್ತಾದ ಅಶೋಕನು ತಾನು ಹುಡುಗಾಟಿಕೆಗೆ ಮಾಡಿಕೊಂಡ ಈ ಅವಾಂತರವನ್ನು ಹೇಳಿಕೊಳ್ಳಲು ಮಾಡುವ ಪ್ರಯತ್ನಗಳು. ಅದರಿಂದ ಮತ್ತಷ್ಟು ಭಯಭೀತರಾಗುವ ಸ್ನೇಹಿತರು ಮತ್ತು ಊರಿನವರು. ಹೇಳತೀರದ ಪಜೀತಿ ಅಶೋಕನದ್ದು.
ಕೊನೆಗೆ ಸೋಮೇಶ್ವರದ ನಿವಾಸಿ ಸತ್ತ ಸುಲೋಚನಳ ಮಗಳು(ಭಾನು)ಬಂದು ತನ್ನ ತಾಯಿ ಅಶೋಕನ ಮೈಮೇಲೆ ಬಂದಿರುವುದಾಗಿ ನಂಬಿ ತನ್ನೆಲ್ಲಾ ಸಂಕಟಕವನ್ನು ಹೇಳಿಕೊಳ್ಳುವಾಗ ಅವಳ ಮಗ್ಧತೆ ಎಂತವರನ್ನು ಕರಗಿಸುತ್ತದೆ. ಅಲ್ಲದೇ ಸಭ್ಯಸ್ಥನಂತೆ ಕಾಣುವ ಅವಳ ಚಿಕ್ಕಪ್ಪನ ಹೇಸಿಗೆಯಂತಹ ವ್ಯಕ್ತಿತ್ವ. ಇವು ಪ್ರೇಕ್ಷಕರನ್ನು ಗಂಭೀರಗೊಳಿಸುತ್ತಾ ಹೋಗುತ್ತವೆ.
ಸಮಾಜದ ಗಬ್ಬುನಾರುವ ವಾಸ್ತವದ ಸಂಗತಿಗಳನ್ನು ವಿದ್ವತ್ಪೂರ್ಣ ಚರ್ಚೆಗಳಲ್ಲಿ ವಿಮರ್ಶಿಸುವಾಗ ಗುರುತರವಾದ ಆರೋಪಗಳಿಗೆ ಬಲಿಯಾಗುವ ಸಾಧ್ಯತೆಗಳೇ ಹೆಚ್ಚು. ಇಲ್ಲಿ ಅಂತಹ ಸಂಗತಿಗಳನ್ನು ಹಾಸ್ಯಾಸ್ಪದವಾಗಿ ಮತ್ತು ತೀರ ಸಾಮಾನ್ಯವೆಂದು ಬಿಂಬಿಸುತ್ತಲೇ ಎಲ್ಲಾ ಕಾಲಕ್ಕೂ ಅಗತ್ಯವಾದ ವಿಚಾರಶೀಲ ಮತ್ತು ನೀತಿಯುತ ಬದುಕಿನ ಸಂದೇಶವನ್ನು ಈ ಮೂಲಕ ಸಾರಲಾಗಿದೆ.
ಗುಡುಗು ಮಿಂಚಿನ ಸಂಚಲನ ಸೃಷ್ಟಿಸುವ ಶಬ್ದಗಳು, ಆಧುನಿಕ ವಸ್ತ್ರ ವಿನ್ಯಾಸಗಳು, ಡಬಲ್ ಮೀನಿಂಗ್ ಸಾಹಿತ್ಯದ ಹಾಡುಗಳು, ಕಣ್ಣಿಗೆ ಹಬ್ಬವೆನಿಸುವ ಸ್ಥಳಗಳು ಮತ್ತು ಮೊದಲಾದ ಆಡಂಬರದ ಸಂಗತಿಗಳು ಮಾತ್ರ ಇವತ್ತಿನ ಸಿನಿ ಪ್ರೇಕ್ಷಕರ ಅಭಿರುಚಿಗಳು ಎಂದು ಭಾವಿಸಿರುವಾಗ, ಆಡು ನುಡಿ, ಮನುಷ್ಯ ಸಹಜ ಜೀವನಕ್ರಮದ ಭಾಗವಾಗಿ ಈ ಸಿನೆಮಾ ಅನಿರೀಕ್ಷಿತ ಆಪ್ತತೆ ಗಳಿಸುತ್ತದೆ.
ಮನುಷ್ಯ ಹೇಗೆ ತನ್ನದಲ್ಲದ ಅತೀತವಾದ ವ್ಯಕ್ತಿತ್ವವನ್ನು ಆರೋಪಿಸಿಕೊಳ್ಳಬಲ್ಲ. ಕಾಕತಾಳೀಯ ಎನಿಸುವ ಘಟನೆಗಳ ಸರಣಿ ಹೇಗೆ ನಂಬಿಕೆಯನ್ನು ಬಲಪಡಿಸುತ್ತಾ ಹೋಗುತ್ತದೆ. ಅದರ ಮಿತಿ ಮತ್ತು ಸಾಧ್ಯತೆಗಳೇನು ಎಂಬುದನ್ನು ಸಿನೆಮಾ ಸೂಕ್ಷ್ಮವಾಗಿ ನಿರೂಪಿಸುತ್ತಾ ಹೋಗುತ್ತದೆ. ಅಂತಹ ನಂಬಿಕೆಗಳನ್ನು ಸದುದ್ದೇಶಕ್ಕೆ ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಸಿನೆಮಾದಲ್ಲಿದೆ. ಅಸಂಬದ್ಧ ಆಚರಣೆಗಳ ವಿಡಂಬನೆಯಿದೆ. ಸ್ತ್ರೀ ಪೀಡನೆ ಮತ್ತು ಅಂಧಶ್ರದ್ಧೆಗಳ ಕುರಿತು ಇಡೀ ಸಿನೆಮಾ ತಂಡ ಮಗುಮ್ಮಾಗಿ ಮಾಡಿದ ವೈಚಾರಿಕತೆ ಬಿತ್ತುವ ಕೆಲಸ ಶಹಬ್ಬಾಶ್ ಗಿರಿಗೆ ಪಾತ್ರವಾಗುತ್ತದೆ. ತಿಳಿಹಾಸ್ಯ ಮತ್ತು ಮಗ್ಧತೆಯೊಂದಿಗೆ ತಲೆತಲಾಂತರದ ಜಡ್ಡು ತೊಳೆಯುವ ವಿಚಾರವನ್ನು ಈ ಸಿನೆಮಾ ತಣ್ಣನೆ ಹರಿಬಡುತ್ತದೆ. ಹುಚ್ಚನ ಮದುವೆಲಿ ಉಂಡೋನೆ ಜಾಣ ಅನ್ನೋ ಹಾಗೇ ಇಂತಹ ಇನ್ನೊಸೆಂಟ್ಸ್ ನಡುವೆ ಸುಲೋಚನಾಳ ಮಗಳಿಗೆ ನ್ಯಾಯ ಕೊಡಿಸಿ ಅಶೋಕ ಜಾಣನಾದ. ಹುಡುಗಾಟಿಕೆ ಬುದ್ದಿಯ ಅಶೋಕ ಕೊನೆಗೆ ಧೀಮಂತನಂತೆ ಕಾಣಿಸಿಕೊಂಡ. ಕೊನೆಯಲ್ಲಾದರೂ ಅಶೋಕನ ಪ್ರೀತಿಯನ್ನು ಅವನಿಗೆ ದಕ್ಕಿಸಿದ್ದರೆ ಇನ್ನೂ ಚೆಂದವೆನಿಸುತ್ತಿತ್ತು. ಇನ್ನೊಂದು ವಿಷಯ ಮರೆತಿದ್ದೆ ‘ಬಂದರೋ ಬಂದರು ಭಾವ ಬಂದರೋ’ ಹಾಡು ಹಾಸ್ಯಾಸ್ಪದವಾದರೂ ಮನದಲ್ಲಿ ಉಳಿಯುತ್ತದೆ.
ಸಿನೆಮಾ ಗೆದ್ದಿತು ಅಥವಾ ಸೋಲು ಕಂಡಿತು ಎಂಬುದು ಅದು ತಂದುಕೊಟ್ಟ ದುಡ್ಡಿನಿಂದಷ್ಟೇ ಅಳೆಯಲ್ಪಡಬಾರದು. ಮುಖ್ಯವಾಗಿ ಅದು ನೀಡಿದ ಸಂದೇಶ ಜನಮಾನಸದಲ್ಲಿ ಉಳಿಯುವುದು ಕೂಡ ಅದರ ಪ್ರಧಾನ ಮಾನದಂಡವಾಗುತ್ತದೆ. ಈ ಎರಡೂ ವಿಷಯಗಳಲ್ಲಿ ಸಿನೆಮಾ ತಂಡ ವಿಜಯಶಾಲಿಯಾಗಿದೆ.
ರಾಜ್ ಬಿ. ಶೆಟ್ಟಿ, ರವಿ ರೈ ಕಳಸ, ಶಶಿಧರ್ ಶೆಟ್ಟಿ ಬರೋಡ, ಜೆ.ಪಿ. ತುಮಿನಾಡ್, ಶನೀಲ್ ಗೌತಮ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ, ಮೈಮ್ ರಾಮ್ ದಾಸ್, ತನಿಷ್ಕಾ ಶೆಟ್ಟಿ, ಮತ್ತು ಸಂಧ್ಯ ಅರೆಕೆರೆ ಹಾಗೂ ಇತರೇ ಕಲಾವಿದರಿಗೂ ಅಭಿನಂದನೆಗಳು. ಇಂಥಹ ಪ್ರಯತ್ನಗಳಿಂದಾಗಿ ಕನ್ನಡ ಚಿತ್ರರಂಗವು ಇನ್ನಷ್ಟು ಉನ್ನತ ಸ್ಥಾನಕ್ಕೇರಲಿ ಎಂದು ಹಾರೈಸುವೆ.
–ಡಾ. ಅಭಿಲಾಷ ಹೆಚ್ ಕೆ
ವಿಶ್ಲೇಷಣೆ ಚೆನ್ನಾಗಿ ಮಾಡಿದ್ದೀರಿ