ಕಲಿಯುಗದಲ್ಲಿ ವಿದ್ಯಾರ್ಥಿಗಳು ಗುರು-ಶಿಷ್ಯರ ಸಂಬಂಧ ಕೇವಲ ಪುಸ್ತಕದಲ್ಲಿ ಇರುವುದನ್ನು ಬೋಧಿಸುವ ತನಕ ಎಂದು ಭಾವಿಸಿದ್ದಾರೆ. ಆದರೆ ಗುರುಗಳಕ ತಮ್ಮ ವಿದ್ಯಾರ್ಥಿಗಳಲ್ಲಿ ಇಟ್ಟಿರುವ ಪ್ರೀತಿ, ವಿಶ್ವಾಸ ಯಾವುದಕ್ಕೂ ಸಮನಾಗಿರುವುದಿಲ್ಲ. ಶಿಕ್ಷಕರು ಹೇಳುವ ಒಂದು ಸಾಲಿನ ಅರ್ಥ ಮೇಲ್ನೋಟಕ್ಕೆ ಸಾಮಾನ್ಯವಾಗಿರಬಹುದು. ಆದರೆ ಅದರಲ್ಲಿ ನಿಗೂಢ ಅರ್ಥವನ್ನು ತಿಳಿದುಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿರುತ್ತದೆ. ಇದನ್ನು ಅರ್ಥಮಾಡಿಕೊಂಡ ವಿದ್ಯಾರ್ಥಿಗಳ ಜೀವನವು ಕಾಮನ ಬಿಲ್ಲಿನಂತೆ ಸುಂದರವಾಗಿರುತ್ತದೆ.
ವಿದ್ಯಾರ್ಥಿಗಳ ಜೀವನವು ಒಂದು ಸುಂದರವಾದ ಬಿಳಿಯ ಹಾಳೆಯ ರೀತಿ. ಅದರ ಮೇಲೆ ಸಣ್ಣ ಕಪ್ಪುಚುಕ್ಕೆ ಬಿದ್ದರು ಅವರ ತಂದೆ ತಾಯಿಯರಿಗೆ ಆಗುವಂತಹ ಆಘಾತ, ದುಃಖವೂ ಅವರ ಶಿಕ್ಷಕರಿಗೂ ಆಗಿರುತ್ತದೆ. ಇದನ್ನು ಹೋಗಲಾಡಿಸುವ ಕಾರ್ಯದಲ್ಲಿ ಪೋಷಕರೊಡನೆ ಶಿಕ್ಷಕರ ಪಾತ್ರವೂ ಬಹುಮುಖ್ಯವಾದದ್ದು. ಈ ಕೆಲಸದಲ್ಲಿ ತೊಡಗಿರುವ ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಹೇಗೆ ಮುಟ್ಟಬೇಕೆಂಬುವ ದಾರಿಯನ್ನು ತಿಳಿದುಕೊಳ್ಳುವುದು ಮುಖ್ಯವಾದ ಅಂಶವಾಗಿರುತ್ತದೆ.
ಕೆಲವರು ಹೇಳುತ್ತಾರೆ “ಒಳ್ಳೆಯ ವಿದ್ಯಾರ್ಥಿಗಳು ಹೇಗೆ ಶಿಕ್ಷಕರ ನೆನಪಿನಲ್ಲಿ ಉಳಿದಿರುತ್ತಾರೋ ಹಾಗೆ ತುಂಬಾ ತರ್ಲೆ ತುಂಟಾಟ, ಗಲಾಟೆ ಮಾಡುವ ವಿದ್ಯಾರ್ಥಿಗಳು ಸಹ ಅವರ ನೆನಪಿನಲ್ಲಿ ಉಳಿಯುತ್ತಾರೆ” ಎಂದು. ಇಲ್ಲೇ ನಾವು ಕಾಣಬಹುದು ಶಿಕ್ಷಕರ ನೆನಪಿನಲ್ಲಿ ಉಳಿಯುವುದು ದೊಡ್ಡ ವಿಷಯವಲ್ಲ. ನಾವು ಅವರ ಮನಸ್ಸಿನಲ್ಲಿ ಉಳಿಯುವುದು ದೊಡ್ಡ ವಿಷಯ. ಇದಕ್ಕಾಗಿ ನಾವು ಆಯ್ಕೆ ಮಾಡಿಕೊಳ್ಳುವ ದಾರಿಯೂ ನಮ್ಮ ಕೈಯಲ್ಲಿದೆ.
ವಿದ್ಯಾರ್ಥಿಗಳಿಂದ ತಪ್ಪಾದಾಗ ಶಿಕ್ಷಕರು ಅವರನ್ನು ಶಿಕ್ಷಿಸುವುದರ ಬದಲು ಆ ತಪ್ಪಿಗೆ ಕಾರಣವೇನು? ಅದನ್ನು ಹೇಗೆ ಸರಿಪಡಿಸಬಹುದು? ಅವರ ಮನಸ್ಸಿನಲ್ಲಿ ಏನಿದೆ? ಎಂದು ತಿಳಿದುಕೊಂಡು ಅದಕ್ಕೆ ತಕ್ಕಂತೆ ಅವರಿಗೆ ಬುದ್ಧಿಮಾತು ಹೇಳಿದರೆ ಅವರು ಬದಲಾಗುತ್ತಾರೆ. ಬದಲಾಗುವುದರ ಜೊತೆಗೆ ಮುಂದೆ ಜೀವನದಲ್ಲಿ ದೊಡ್ಡ ವ್ಯಕ್ತಿಗಳಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯುತ್ತಾರೆ.
ಗುರು ಎಂಬ ಪದವು ಬಹಳ ಸುಂದರವಾದ ಹಾಗೂ ಬಹಳ ಮಹತ್ವಪೂರ್ಣವಾದ ಪದವಾಗಿದೆ. ಗುರುವಿಗೆ ಗೌರವಿಸುವುದು ವಿದ್ಯಾರ್ಥಿಗಳ ಕರ್ತವ್ಯ. ಹಾಗೆ ವಿದ್ಯಾರ್ಥಿಗಳ ಮಾತಿಗೂ ಹಾಗೂ ಅವರ ಗುರಿಗೂ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿ ಸಹಕರಿಸುವುದು ಶಿಕ್ಷಕರ ಕರ್ತವ್ಯ. ಗುರು ಎಂಬ ಪದಕ್ಕೂ ಗುರಿ ಎಂಬ ಪದಕ್ಕೂ ಬಹಳ ಬಿಡಿಸಲಾಗದ ನಂಟಿದೆ. ಗುರುವಿನಿಂದಲೇ ಗುರಿ ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಗುರುಗಳ ಸಹಕಾರದಿಂದ ಇಡೀ ವಿಶ್ವವನ್ನೇ ಗೆಲ್ಲಬಹುದು.
ಚಂದ್ರನಂತೆ ಪ್ರಕಾಶಿಸುವ ಯಶಸ್ವಿ ವಿದ್ಯಾರ್ಥಿಗಳ ಜೀವನದ ಹಿಂದೆ ಗುರು ಎಂಬ ಸೂರ್ಯನ ಕಿರಣಗಳು ಇರುತ್ತವೆ ಎಂಬುದನ್ನು ಮರೆಯಬಾರದು. ಜನ್ಮ ಕೊಟ್ಟ ತಂದೆ ತಾಯಿಯರ ಋಣವನ್ನೇ ತೀರಿಸಲಾಗದು. ಇನ್ನೂ ನೂರಾರು, ಸಾವಿರಾರು ಅಪರಿಚಿತ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಗುರುಗಳ ಋಣ ವಿದ್ಯಾರ್ಥಿಗಳ ಮೇಲೆ ಅಪಾರವಾಗಿದೆ. ಹಾಗಾಗಿ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಿರುವುದು. ಇಂತಹ ಗುರುಗಳ ಮಾತೇ ವೇದ ವಾಕ್ಯ, ಅವರು ತೋರಿಸುವ ದಾರಿಯೇ ಸುಗಮ ಎಂದು ನಡೆದು ಮನೆಗೆ ಒಳ್ಳೆಯ ಮಕ್ಕಳಾಗಿ, ಶಾಲೆಗೆ ಒಳ್ಳೆಯ ವಿದ್ಯಾರ್ಥಿಗಳಾಗಿ ಹಾಗೂ ದೇಶಕ್ಕೆ ಸತ್ಪ್ರಜೆಗಳಾಗಿ ಬಾಳಿದಾಗ ಮಾತ್ರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ಬರ ಸಾಧನೆಯ ಬಿಂಬ ಪ್ರತಿಬಿಂಬವಾಗಲು ಸಾಧ್ಯವಾಗುತ್ತದೆ.
ಚಂದನ ಮಲ್ಲಿಕಾರ್ಜುನ್
10ನೇ ತರಗತಿ ‘ಇ’ ವಿಭಾಗ
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.