ಜೇನನ್ನು ಉತ್ಪಾದಿಸುವ ಜೇನು ನೊಣಗಳಲ್ಲಿ ಹಲವಾರು ವಿಧಗಳಿದ್ದು ಮುಖ್ಯವಾಗಿ ಭಾರತದಲ್ಲಿ ಹೆಜ್ಜೇನು, ತುಡುವೆ ಜೇನು, ಯೂರೋಪಿಯನ್ ಜೇನು, ಕಡ್ಡಿ ಜೇನು (ಕೋಲು ಜೇನು), ಮತ್ತು ಮುಳ್ಳುರಹಿತ ಜೇನು, ಕಂಡುಬರುತ್ತವೆ. ಕರ್ನಾಟಕದ ಮಲೆನಾಡು ಅರಣ್ಯಗಳ ಸುತ್ತ-ಮುತ್ತಲಿನ ಸ್ಥಳೀಯ ಅರಣ್ಯವಾಸಿಗಳಾದ ಕುಣಬಿಗಳು, ಹಾಲಕ್ಕಿ ಜನಾಂಗದವರು, ಮಲೆಕುಡಿಯರು, ಸೋಲಿಗರು, ಬೆಟ್ಟಕುರುಬರು, ಜೇನುಕುರುಬರು, ಕೊಡವರು, ಗೌಳಿಗಳು, ಕಾಡುಗೊಲ್ಲರು, ಕಾಡುಕುರುಬರು ಕೊರಗರು ಇನ್ನಿತರ ಅರಣ್ಯಕ್ಕೆ ಹೊಂದಿಕೊಂಡು ಜೀವನ ನಡೆಸುತ್ತಿರುವ ಜನರು ಸ್ಟಿಂಗ್‌ಲೆಸ್ ಜೇನು ಪ್ರಭೇದವನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ಟಿಂಗ್‌ಲೆಸ್ ಜೇನು ಅವೈಜ್ಞಾನಿಕ ಪದ್ದತಿಯ ಜೇನುಕೊಯ್ಲಿನಿಂದ ನಾಶವಾಗುತ್ತಿದೆ ಮತ್ತು ಸಂರಕ್ಷಣೆಯ ದೃಷ್ಟಿಯಿಂದ ನಿರ್ಲಕ್ಷಕ್ಕೆ ಒಳಗಾಗುತ್ತಿದೆ.
ರಾಳಜೇನು, ಕಿರುಜೇನು, ನಸುರಿಜೇನು, ಮೂಲಿಜೇನು, ಮೂಲಿತೇನು, ಮುಜಂಟಿಜೇನು, ನಸ್ರಿಜೇನು, ಮಿಸ್ರಿಜೇನು, ಮಿಸ್ರಿಕೂಳ ಸೊಳ್ಳೆಜೇನು, ಚುಚ್ಚದ ಜೇನು ಮುಂತಾದ ಹೆಸರಿನಿಂದ ಕನ್ನಡದಲ್ಲಿ ಪ್ರಾದೇಶಿಕವಾಗಿ ಕರೆಯಲ್ಪಡುತ್ತದೆ. ಹಳೆಯ ಮನೆಯ ಗೋಡೆಯ ಬಿರುಕುಗಳಲ್ಲಿ ಅಥವಾ ವಿದ್ಯುತ್ ಪೆಟ್ಟಿಗೆಗಳಲ್ಲಿ, ಹಳೆಯ ಅಥವಾ ಒಣಗಿದ ಮರದ ಕೊಳವೆಗಳಲ್ಲಿ ಕಂಡುಬರುತ್ತವೆ. ಹೆಚ್ಚಾಗಿ ಇವುಗಳು ಬಿದಿರಿನ ಬೊಂಬುಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತಿದ್ದವು ಮತ್ತು ಸಾಕಾಣಿಕೆಗೆ ಒಳಪಟ್ಟಿರಲಿಲ್ಲ. ಆದರೆ ಇಂದು ಒಂದು, ಹತ್ತು, ನೂರರಿಂದ ಹಿಡಿದು ಸಾವಿರಾರು ಗೂಡಿನ ಸರದಾರರೂ ದಕ್ಷಿಣ ಭಾರತದಲ್ಲಿ ಕಂಡು ಬರುತ್ತಿದ್ದಾರೆ. ಕರ್ನಾಟಕ ಮತ್ತು ಕೇರಳದ ಭಾಗಗಳಲ್ಲಿ ಸಂಪ್ರದಾಯಿಕ ಮತ್ತು ಪರಾಂಪರಿಕವಾಗಿ ಸಾಕಲ್ಪಡುತ್ತಿದ್ದ ಈ ಜೇನು ನೋಣಗಳನ್ನು ಇಂದು ಶಾಸ್ತ್ರೀಯವಾಗಿ ಮತ್ತು ವೈಜ್ಞಾನಿಕವಾಗಿ ಸಾಕಾಣಿಕೆ ಮಾಡುತ್ತಿದ್ದಾರೆ. ಮುಜೆಂಟಿ ಜೇನು ಪರಾಗಸ್ಪರ್ಶಕ್ಕೆ ಹೆಚ್ಚಿನ ಬೇಡಿಕೆ ಇರುವ ಕಾರಣ ಮತ್ತು ಜೌಷಧೀಯ ಗುಣಗಳು ಇರುವುದರಿಂದ ಜನ ಇತ್ತೀಚೆಗೆ ಸಾಕಲು ಮುಂದೆ ಬರುತ್ತಿದ್ದಾರೆ.
ಈ ಜೇನುನೊಣಗಳಿಗೆ ಚುಚ್ಚಲು ಮುಳ್ಳುಗಳಿಲ್ಲದ ಕಾರಣ ಆಂಗ್ಲಭಾಷೆಯಲ್ಲಿ ಸ್ಟಿಂಗ್‌ಲೆಸ್ ಜೇನು ಎಂದು ಕರೆಯುತ್ತಾರೆ. ಮುಳ್ಳುರಹಿತ ಜೇನು ನೊಣಗಳಲ್ಲಿ ಸುಮಾರು 600 ಕ್ಕೂ ಹೆಚ್ಚು ಪ್ರಭೇದಗಳಿದ್ದು, ಭಾರತದಲ್ಲಿ 22 (2025) ಪ್ರಭೇದಗಳು ಸಿಕ್ಕಿವೆ, ಕರ್ನಾಟಕದಲ್ಲಿ ಹೆಚ್ಚಿನ ಸಂಶೋಧನೆಯ ಅವಶ್ಯಕತೆ ಇದೆ. ಏಕೆಂದರೆ ಕರ್ನಾಟಕದಲ್ಲಿ ಚುಚ್ಚದ ಜೇನಿನ ಪ್ರಭೇದಗಳು ಎಷ್ಟಿವೆ ಎಂಬುದಕ್ಕೆ ನಮ್ಮ ಹತ್ತಿರ ಉತ್ತರ ಇರುವುದಿಲ್ಲ. ಯುರೋಪಿಯನ್ ಜೇನು ಮತ್ತು ತುಡುವೆ ಜೇನುಗಳನ್ನು ಮಾತ್ರ ಸಾಕಾಣಿಕೆಗೆ ಯೋಗ್ಯವೆಂದು ಪರಿಗಣಿಸಲಾಗಿತ್ತು, ಮುಜಂಟಿ ಜೇನಿನ ಕಡಿಮೆ ಇಳುವರಿಯಿಂದಾಗಿ ಇವುಗಳನ್ನು ಇದುವರೆಗೂ ಪೆಟ್ಟಿಗೆಗಳಲ್ಲಿ ಇಟ್ಟು ಸಾಕುವುದು ಅಷ್ಟಾಗಿ ನಡೆದಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಈ ಜೇನಿನ ತುಪ್ಪಕ್ಕಿರುವ ಬೇಡಿಕೆಯಿಂದಾಗಿ ಹಾಗೂ ಪರಾಗಸ್ಪರ್ಷಕ್ಕಿರುವ ಅವಕಾಶಗಳಿಂದ ಇವುಗಳನ್ನು ಸಾಕುವ ಪ್ರಯತ್ನ ನಡೆಯುತ್ತಿದೆ. ಕರ್ನಾಟಕದಲ್ಲಿ ಇದನ್ನು ವೈಜ್ಞಾನಿಕವಾಗಿ ಮುಜಂಟಿ ಜೇನುಕೃಷಿ ಅಷ್ಟಾಗಿ ಪ್ರಸಾರವಾಗಿರುವುದಿಲ್ಲ.
ಕೊಡಚಾದ್ರಿ ಬೆಟ್ಟದ ಸುತ್ತ-ಮುತ್ತಲಿನ ಪ್ರದೇಶದಲ್ಲಿ ದನ ಮೇಯಿಸುವ ಜನ ಕಾಡಿನಲ್ಲಿ ಎಲ್ಲಿಯಾದರೂ ಮುಜಂಟಿ ಸಿಕ್ಕರೆ, ಆಗಲೇ ಕೊಡಲಿಯಿಂದ ಒಡೆದು ತೆಗೆದು, ಜೇನುತುಪ್ಪವನ್ನು ತಿಂದು ಗೂಡನ್ನು ಹಾಳುಗೆಡವುತ್ತಾರೆ. ಉತ್ತರಕನ್ನಡ ಜಿಲ್ಲೆ ಸಂಪೂರ್ಣ ಸಂಪದ್ಭರಿತವಾದ ಕಾಡನ್ನು ಹೊಂದಿದೆ. ಯಲ್ಲಾಪುರದ ಸುತ್ತಮುತ್ತಲ ಕಾಡಂಚಿನ ಜನಗಳು ಪ್ರತಿವರ್ಷ ಸಾಕಷ್ಟು ಕೆ.ಜಿ ಗಟ್ಟಲೆ ಮುಜಂಟಿ ಜೇನು ತುಪ್ಪವನ್ನು ಮಾರಾಟ ಮಾಡುತ್ತಾರೆ. ಆದರೆ, ಅವರಾರೂ ಮುಜಂಟಿ ಸಾಕಣೆ ಮಾಡುತ್ತಿಲ್ಲ. ಕಾಡಿನಲ್ಲಿ ಅಥವಾ ನೈಸರ್ಗಿಗ ಗೂಡುಗಳ ಮೂಲಕ ಮುಜಂಟಿ ತುಪ್ಪದ ಕೊಯ್ಲು ಮಾಡುತ್ತಾರೆ. ಕರ್ನಾಟಕದಲ್ಲಿ ಮುಜಂಟಿ ಕುಟುಂಬದ ವರ್ಷದ ಸರಾಸರಿ ಇಳುವರಿ 250-300 ಗ್ರಾಂ. ಆದರೆ 10-20 ಕೆ.ಜಿ ಜೇನುತುಪ್ಪ ಒಟ್ಟು ಮಾಡಲು ಎಷ್ಟುಗೂಡುಗಳನ್ನು ಕೀಳಬೇಕು ಎಂಬ ಪ್ರಶ್ನೆ ಇಲ್ಲಿ ಗಮನಾರ್ಹ. ಈ ಕಾಡಂಚಿನ ಜನಗಳ ಪ್ರಕಾರ ಒಮ್ಮೆ ಬೆಂಕಿಹಾಕಿ ನೈಸರ್ಗಿಕ ಮುಜಂಟಿ ಗೂಡು ಕಿತ್ತ ಮೇಲೆ ಮುಂದಿನ ವರ್ಷ ಆ ಗೂಡು ಅಲ್ಲಿರುವುದಿಲ್ಲ (ಎಂದರೆ ಅದರ ಆವಾಸಸ್ಥಾನ ನಾಶವಾಗಿರುತ್ತದೆ). ಪ್ರತಿ ವರ್ಷ ಮಳೆಗಾಲ ನಿಂತ ನಂತರ ಕಾನಿನಲ್ಲಿ (ಕಾಡು) ಮುಜಂಟಿ ಗೂಡನ್ನು ಹುಡುಕಿಕೊಂಡು ಹೋಗುತ್ತಾರೆ. ಯುಗಾದಿಯ ಆಸು-ಪಾಸಿನಲ್ಲಿ ಒಮ್ಮೆ ಮತ್ತು ಮಳೆಗಾಲಕ್ಕೂ ಮುಂಚೆ ಒಮ್ಮೆ ಜೇನು ಕೊಯ್ಲು ಮಾಡುತ್ತಾರೆ.
ಈ ಕಾಡಂಚಿನ ಜನರಿಗೆ ತರಬೇತಿ ನೀಡಿ ವೈಜ್ಞಾನಿಕ ಮುಜಂಟಿ ಜೇನುಸಾಕಾಣಿಕೆಯಲ್ಲಿ ತೊಡಗುವಂತೆ ಮಾಡಿದಲ್ಲಿ ಮುಜಂಟಿ ಪ್ರಬೇಧಗಳ ಸಂರಕ್ಷಣೆಯೂ ಆದಂತಾಗುತ್ತದೆ. ಏಕೆಂದರೆ ನನ್ನ ಸಂಶೋಧನಾ ಸರ್ವೆಯ ಪ್ರಕಾರ ಪ್ರತಿ ತಲೆಮಾರಿಗೂ ಮುಜಂಟಿ ಗೂಡುಗಳ ಸಾಂಧ್ರತೆ ಕಡಿಮೆಯಾಗುತ್ತಾ ಹೋಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅವೈಜ್ಞಾನಿಕ ಪದ್ದತಿಯಿಂದ ಜೇನಿನ ಕೊಯ್ಲು ಮತ್ತು ಆವಾಸಸ್ಥಾನದ ನಾಶ (ಗೂಡುಕಟ್ಟಲು ಬೇಕಾದ ಸೂಕ್ತವಾದ ಮರಗಳ ನಾಶ), ಜೊತೆಯಲ್ಲಿ ಕೃಷಿಯಲ್ಲಿ ಅತಿಯಾದ ಕೀಟನಾಶಕಗಳ ಬಳಕೆ. ಕಾಡಿನೊಂದಿಗೆ ತಲೆತಲಾಂತರ ಅವಿನಾಭವ ಸಂಬಂಧ ಹೊಂದಿರುವ ಈ ಜನರಿಗೆ ಮುಜಂಟಿ ಬಗ್ಗೆ ಹೊಸದಾಗಿ ಪರಿಚಯಿಸುವ ಅವಶ್ಯಕತೆ ಇಲ್ಲ. ಆದರೆ, ವೈಜ್ಞಾನಿಕ ಮುಜಂಟಿ ಸಾಕಾಣಿಕೆಯ ಮಾಹಿತಿ ಮತ್ತು ತರಬೇತಿ ನೀಡಿದಲ್ಲಿ, ನಾವು ಸಮರೋಪಾದಿಯಲ್ಲಿ ಮುಜಂಟಿ ಪ್ರಬೇಧಗಳ ಸಂರಕ್ಷಣೆ ಮಾಡಬಹುದು. ಇದು ಪ್ರಸ್ತುತ ದಿನಗಳ ಅಭಿವೃದ್ಧಿಯ ಅಜೆಂಡಾವಾದ “ಕೃಷಿಯಲ್ಲಿ ಸುಸ್ಥಿರತೆ” ಮತ್ತು ಪೂರಕ ಸಂರಕ್ಷಣೆ ಎಂಬ ಘೋಶವಾಕ್ಯವನ್ನು ಪಾಲಿಸಿ, ಅನುಸರಿಸಲು ಸಾಧ್ಯವಾಗುತ್ತದೆ.
-ಚರಣಕುಮಾರ್
ಸೂಚನೆ: Nature Conservation Foundation (NCF) ನ ಸಹಯೋಗದಲ್ಲಿ ಈ ಲೇಖನವನ್ನು ಪಂಜುವಿನಲ್ಲಿ ಪ್ರಕಟಿಸಲಾಗಿದೆ…




Thank nature conservation foundation and Panju magazine for selecting my article.