ಶಕುಂತಲೆ ಕವಿತೆ ಝಲಕ್ ೧
ಶಕುಂತಲೆ ಮರೆತ ಅಭಿಜ್ಞಾನ ಉಂಗುರ
ನೀರೊಳಗಿನ ಮೀನೊಂದರ ಎದೆಯಲಿ ಆಹಾರ
ಪ್ರೀತಿಯ ಕುರುಹು ಮರೆತ ದುಃಖ ಬಲುಭಾರ
ದುಷ್ಯಂತ ರಾಜಪ್ರೇಮಿ ಮರೆತ ಗಾಂಧರ್ವ ಪ್ರೀತಿ
ಮಾಲಿನಿ ತೀರದ ಕಣ್ವರ ಸಾಕುಪುತ್ರಿ ಶಕುಂತಲೆ
ಹದಿಹರೆಯದ ಪ್ರೇಮದ ಹಾಡುಪಾಡು
ಆಶ್ರಮದ ಹೆಣ್ಣು ಸುಂದರಿ ತರುಣಿ
ಶಕುಂತಲೆಯ ಬದುಕು ಬವಣೆಯ ಬಾಳು
ತಪೋವನದ ಸಾತ್ವಿಕರ ಮಗಳು ಕಾಡಿನಲಿ
ಹೂವು ತರಲು ಹೋದ ವೇಳೆ ಮದನೋತ್ಸವ
ಮನ್ಮಥನ ಹೂ ಬಾಣ ಸುಳಿಗಾಳಿಯಾಗಿ ನಾಟಿರಲು
ಹಸ್ತಿನಾವತಿಯ ರಾಜ ದುಷ್ಯಂತ ಮದನನ ಕಣಿಯಾಗಿರಲು
ಸಂಭ್ರಮಿತಗೊಂಡವು ಲತೆ ಬಳ್ಳಿ ಕಾಡು ಮೇಡು
ಸುವಾಸಿತಗೊಂಡವು ಕಾಡು ಮೃಗ ಕಗ ಜಿಂಕೆಗಳ ಬೀಡು.
ಶಕುಂತಲೆ ಕವಿತೆ ಝಲಕ್ ೨
ಕಣ್ಣೋಟವೆ ವಿರಹದಾವಗ್ನಿ ಸುಟ್ಟಂತೆ ಅನಲ
ತಂಗಾಳಿ ನವಿರಾಗಿ ಸೂಸಿದಂತೆ ಧುತ್ತೆಂದು ಮಿಲನ
ಗಂಧರ್ವ ರಾಗರಸ ಸಂಭ್ರಮಗಳ ಹಾಡಿ ಸುಖಿಸಿದವು ತುಡುಕಿ
ಕ್ಷಣವೊಂದು ಯುಗಳಗೀತೆಯಾಗಿ ತೇಲಿ ತೇಲಿ ಬೆದಕಿ
ನವರಾಗ ಪುಪ್ಪಮಾಲಿಕೆಯೊಸೆದು ಇಳೆಗೆ ಸುರಿದಂತೆ
ಪ್ರೇಮರಾಗವೆ ನವ ತರುಣ ತರುಣಿಯರ ಆರಾಧನೆಯಾದಂತೆ
ಕುಡಿನೋಟ ಮಿಂಚ ಸಂಚಿನ ಸೆಳೆತ ಹಬ್ಬಿದಂತೆ
ದೊರೆಮಗನು ಸಾತ್ವಿಕರ ಮಗಳು ರಮಿಸಿದರು ಕಾನನವೆ ತಬ್ಬಿದಂತೆ
ಮೈಮನಸುಗಳು ಕೂಡಿ ನಲಿದಿರಲು ಎದೆಯೊಳಗೆ
ಪ್ರೇಮಗಾನ ಹಾಡಿರಲು ಗಂಧರ್ವ ಸಂಲಗ್ನ ಬೆದೆಗೆ
ರಾಗರಸ ಮುತ್ತಿನೊಲಗವೆ ಭಾಜಿಸಿರಲು ಹಕ್ಕಿಗಳಿಂಚರ
ಹೂವಿನ ಘಮಲ ತೋರಣ ಮಂತ್ರಾಕ್ಷತೆ ಚಿರ
ಬಾಂಧವ್ಯ ಯೌವನ ನದಿತೊರೆಯ ಹಾಲಧಾರೆ ಬೆಟ್ಟ ದೂರ
ಜೊಂಪು ದಿವ್ಯ ಪ್ರಸನ್ನ ಅಭಿಷೇಕ ಇಳಿದಂತೆ ಧರೆ.
ಶಕುಂತಲೆ ಕವಿತೆ ಝಲಕ್ ೩
ಅಭಿಜ್ಞಾನ ರಾಜ ಮುದ್ರೆಯುಂಗುರ ನೀಡಿ
ಹಸ್ತಿನಾವತಿಗೆ ಸಾಗಿದನು ದುಷ್ಯಂತ ಒಲವಿನಲಿ ನಲಿದಾಡಿ
ದಿನಗಳುರುಳಿ ಮಾಸ ತುಂಬಿರಲು ಮೌನದಿಂದ ತಾನು ಬೆಳೆಸಿದ
ಗಿಡ ಮರ ಬಳ್ಳಿ ಮಲ್ಲಿಕಾಲತೆಗಳಿಗೆ ನೀರುಣಿಸಿ ಜಿಂಕೆ ವನದಲಿ
ಪ್ರಣಯ ಗೀತೆಯ ನೀರವತೆ ಕವಿದು ಕಾಡಿರಲು
ಆಶ್ರಮದ ವೃದ್ಧೆ ಗೌತಮಿದೇವಿಗೆ ನಡೆದ ಸಂಗತಿ ಭಿನೈಸಿರಲು
ವೃದ್ಧೆಯು ಆಚಾರ್ಯ ಕಣ್ವ ಮಹರ್ಷಿಗಳಿಗೆ ನಿವೇದಿಸಿದಳು
ನಡೆದ ಕತೆಯು ವಸ್ತಾವದ ಗಳಿಗೆಯೊಳಗೆ ಹೇಳಿ ಅಭಿನಂದಿಸಿದಳು
ಶಕುಂತಲೆ ಮೌನಭಾರದಿ ಕಣ್ಣೀರು ಮಿಡಿದಿರಲು ಸಖಿಯರ ಸಾಂತ್ವಾನ
ಅನುಸೂಯೆ ಪ್ರಿಯಂವದೆಯರ ಸಖ್ಯ ಕುಶಲೋಪರಿ ಸಮಾಲೋಚನೆ
ಕೂಡಲೇ ಹಸ್ತಿನಾವತಿಗೆ ಶಾರದ್ವತ ಶಾರ್ಙರವ ಗೌತಮಿ ಜೊತೆಗೆ
ಶಕುಂತಲೆ ವರಿಸಿದವನ ಬಳಿ ಬಿಟ್ಟು ಬರಲು ನೌಕೆ ಪ್ರಯಾಣ
ದೂರ್ವಾಸರ ಶಾಪದಂತೆ ಮುದ್ರೆಯುಂಗುರ ಜಾರಿ ಕಳಚಿದ ಮಾರ್ಗಯಾನ
ಭಾವ ಸ್ಮರಣೆ ಕಳೆಯಿತು ಹಾಯಿ ದೋಣಿ ತಂಗುವ ನೀರತೊರೆ ಹಳಚಿ ಬದುಕು ಯಾನ.
ಶಕುಂತಲೆ ಕವಿತೆ ಝಲಕ್ ೪
ಕುರುವಂಶದ ಕುಡಿಯು ಮೈದುಂಬಿದ ಬೀಮ್ನಸೆ
ಏನೆಂದು ಹರಹುವಳು ಗಾಂಧರ್ವ ವಿವಾಹ ವೃತ್ತಾಂತ ವಿವರಿಸೆ
ಮುದ್ರೆಯುಂಗುರ ನೀರಿನಲಿ ಕಳೆದಿರಲು ಯಾವ ನೆನಪು ಬರದಿರಲು
ಆಯಿತು ಅಪಮಾನ ನಿಂದೆ ಆರೆಂದು ನಾನರಿಯೇ ಆಶ್ರಮದ ಕನ್ಯೆ ಎಂದನು ! ಅರಸ ಆಗ್ರಹಿಸಲು
ಬಂದ ದಾರಿಗೆ ಸುಂಕವಿಲ್ಲೆಂದು ಅಲ್ಲೇ ಬಿಟ್ಟರು ಶಕುಂತಲೆಯ ನಂಟು
ತವರು ತೊರೆದ ಗಂಡ ನಿರಾಕರಿಸಿದ ಹೆಣ್ಣಿನ ಆರ್ತಗೋಳಿನ ಭವಬಂಧನದ ನಂಟು
ಬಂದ ದಾರಿಯಲಿ ತಬ್ಬಲಿ ಹೆಣ್ಣು ಕಾಡಿನಲಿ ಬಾಳೆ ದಿಂಡಿನಂತೆ ಇಳೆಗೊರಳಿದಳು
ಮದಗಜವೇ ಬಿದ್ದಂತೆ ತನುಲತಿಕೆ ಶಕುಂತಲೆ ನಸು ಬಿಸಾಡಿದಳು
ದೇವಲೋಕದ ಇಂದ್ರನೊಡ್ಡೋಲಗದಲಿ ಕುಣಿವ ವೇಳೆಯೊಳು
ಮೇನಕೆಯ ಕಳವಳದಿ ಕಿವುಚಿದಂತಾದ ಹೆತ್ತ ಕರುಳು
ಬಳಿ ಸಾರಿರಲು ದಿವ್ಯ ದೃಷ್ಟಿಗೆ ತಿಳಿಯಿತು ಮಗಳ ನಲುಮೆ
ಕೂಡಲೇ ಧಾವಿಸಿರಲು ತಾಯೋಲುಮೆ ಸಂತೈಸಿತು ಒಲುಮೆ
ತಾಪಸಿ ಮಗಳ ಹೆಣ್ಣಿನ ಗೋಳಟ್ಟಿ ಬನ್ನಿಯಮರಬೆಂದೋ ಅಲ್ಲಿ
ಸನ್ಯಾಸಿ ಮಠ ಬೆಂದು ಹಾರುವರ ಪಂಚಾಂಗ ಕತ್ತಿ ಉರಿದಾವೆ ಅಲ್ಲಿ
ಶಕುಂತಲೆ ಕವಿತೆ ಝಲಕ್ ೫
ಸುಖ ಎಲ್ಲಾರಿಗೆಲ್ಲೇದವ್ವ ದುಃಖ ಚೆಲ್ಲೇದ ಮರ್ತ್ಯದ ಮ್ಯಾಲೆ
ಎಂದು ಎದೆಗವುಚಿ ಅತ್ತು ಮುದ್ದಿಸಿದಳು ಮೇನಕೆ ಶಕುಂತಲೆ
– ಯ ಹಿಂದೊಮ್ಮೆ ತನ್ನ ಆಪತ್ತಿಗಾದ ಮರೀಚಿ ಋಷಿಗಳ ನೆನೆದು
ಹೇಮಕೂಟದತ್ತ ಸಾಗಿದಳು ಮಗಳ ಕೈಹಿಡಿದು
ನಡೆದ ಸಂಗತಿಗಳ ಹೇಳಿ ಅಬಲೆ ಮಗಳಿಗೆ ಆಶ್ರಯ ಧಕ್ಕಿಸಿದಳು
ಅನಿಮಿಷ ಮಾತ್ರದಿ ಬಾಡಿಹೋದ ಹೂವಿಗೆ ಆಶಾಕಿರಣ
ಶಕುಂತಲೆಯ ಬಾಳಿನಲಿ ಬೆಳಕು ಮೂಡಿತು ಹೊಂಗಿರಣ
ಮೇನಕೆ ಮಗಳ ಕಡೆ ನೋಡಿ ನಿಟ್ಟುಸಿರೊಂದು ಬಿಟ್ಟು ಹೋದಳು ದೇವಲೋಕಕೆ ಅರೆ ಕ್ಷಣ
ನವಮಾಸ ತುಂಬಿ ಕೂಸು ಜನಿಸಿರಲು ಭರತನೆಂದರು
ಹೇಮಕೂಟದ ಮರೀಚಿ ಋಷಿಗಳು ಆಶ್ರಮದ ಸಾತ್ವಿಕರು
ದಿನದಿನವು ಸಪ್ತ ವರುಷದಿ ಹುಣ್ಣಿಮೆಯ ಚಂದಿರನ
ನವಮಿಯಂತೆ ಬೆಳೆದನು ಕುರುಕುಲದ ನಂದನಂದನ
ತಾಪಸಿ ತಾಯಿ ಸಕಲ ಜೀವಾತ್ಮಗಳ ಕಾಯೇ ಮಮತೆ ಕೈಯಂತೆ ಪೊರೆದಳು
ಅಬಲೆ ಶಕುಂತಲೆಯು ಬಾಲ ಭರತನ ತಬ್ಬಿ ಹುಲಿಯ ಹಾಲಿನ ನೋಟ ಬೇಟದಂತೆ ಬೆಳೆಸಿದಳು.
ಸಂತೋಷ್ ಟಿ
