“ಸಂಸ್ಕೃತಿ, ಸಂಪ್ರದಾಯ ಹಾಗೂ ಸಮೃದ್ಧಿಯ ಹಬ್ಬ -ಸಂಕ್ರಾಂತಿ”: ಚಲುವೇಗೌಡ ಡಿ ಎಸ್

ವರ್ಷದ ಮೊದಲ ಹಬ್ಬ:-
ಭಾರತೀಯ ಹಬ್ಬಗಳ ಸಾಲಿನಲ್ಲಿ ಸಂಕ್ರಾಂತಿಯು ಒಂದು ಮಹತ್ವದ ಸ್ಥಾನವನ್ನು ಪಡೆದಿರುವ ಸಂಭ್ರಮ, ಸಡಗರದ ಹಬ್ಬ. ರವಿಯು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸುದಿನವನ್ನು ಮಕರ ಸಂಕ್ರಾಂತಿ ದಿನ ಅಥವಾ ಮಕರ ಸಂಕ್ರಮಣ ದಿನವೆಂದು ಆಚರಿಸುತ್ತೇವೆ. ಈ ದಿನದಿಂದ ಉತ್ತರಾಯಣ ಆರಂಭವಾಗುತ್ತದೆ. ಅಂದರೆ ಸೂರ್ಯನು ದಕ್ಷಿಣನಿಂದ ಉತ್ತರಕ್ಕೆ ಚಲಿಸುವ ಆರು ತಿಂಗಳ ಅವಧಿಯು ಆರಂಭವಾಗುವ ಸಂಕೇತವನ್ನು ಈ ಹಬ್ಬವು ಸೂಚಿಸುತ್ತದೆ. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಸಂಕ್ರಾಂತಿಯಂದೆ ಮಕರ ಜ್ಯೋತಿ ದರ್ಶನದ ಭಾಗ್ಯ ಸಿಗುತ್ತದೆ.

ಪ್ರಕೃತಿಯ ಋತುಚಕ್ರದಲ್ಲಿ ಬದಲಾವಣೆ:-
ಈ ಸಮಯದಲ್ಲಿ ಹಗಲುಗಳ ಕಾಲವು ಉದ್ದವಾಗಿರುತ್ತವೆ, ರಾತ್ರಿಗಳ ಸಮಯ ಕಡಿಮೆಯಾಗಿರುತ್ತದೆ. ಅಂದರೆ ಸೂರ್ಯೋದಯ ಬೇಗ, ಸೂರ್ಯಾಸ್ತವು ಅಂದರೆ ಸೂರ್ಯನು ಮುಳುಗುವ ಸಮಯ ತಡವಾಗಿರುತ್ತದೆ. ಅಂದರೆ ರಾತ್ರಿಗಿಂತ ಹಗಲಿನ ಅವಧಿಯು ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಸಂಕ್ರಾಂತಿಯು ವರ್ಷದ ಮೊದಲ ಮಾಸದ 14 ಅಥವಾ 15 ರಂದು ಬರುತ್ತದೆ. ಜೊತೆಗೆ ಪ್ರಕೃತಿಯ ಋತುಚಕ್ರದಲ್ಲಿ ಇದೊಂದು ಹೊಸ ಬೆಳಕು, ಹೊಸ ಶಕ್ತಿ, ವಾತಾವರಣ ಬದಲಾವಣೆ, ಹೊಸ ಫಸಲು ಹಾಗೂ ಹೊಸ ಆಶಯಗಳನ್ನು ಸೂಚಿಸುತ್ತದೆ.

ಕೃಷಿ ಹಾಗೂ ರೈತರ ಹಬ್ಬ:-
ಸಂಕ್ರಾಂತಿ ಹಬ್ಬವು ರೈತರು ಹಾಗೂ ಕೃಷಿಯೊಂದಿಗೆ ಹಿಂದಿನಿಂದಲೂ ಬೆಸೆದುಕೊಂಡಿದೆ. ವಿಶೇಷವಾಗಿ ಅನ್ನದಾತರಿಗೆ ಸುಗ್ಗಿಯ ಕಾಲದ ಹಬ್ಬ. ಅಂದರೆ ರೈತರು ತಾವು ಬೆಳೆದ ಬೆಳೆಯನ್ನು ಕಟಾವು ಅಥವಾ ಕೊಯ್ಲು ಮಾಡುವ ಕಾಲದ ಸುಗ್ಗಿಯ ಹಬ್ಬ. ಭತ್ತ, ರಾಗಿ, ಜೋಳ, ಸಕ್ಕರೆಕಬ್ಬು, ಎಳ್ಳು ಇತ್ಯಾದಿ ಬೆಳೆಗಳ ಕೊಯ್ಲು ಈ ಕಾಲಕ್ಕೆ ಪೂರ್ಣಗೊಳ್ಳುತ್ತವೆ. ಒಕ್ಕಣೆ ಮಾಡಿದ ಹೊಸ ಬೆಳೆಯನ್ನು ರಾಶಿ ಮಾಡಿ ಮನೆಗೆ ತಂದು ಸಂತೋಷದಿಂದ ರೈತರು ದೇವರಿಗೆ ಸಮರ್ಪಿಸುವ ಮೂಲಕ ಪೂಜೆ ಸಲ್ಲಿಸಿ ಕುಟುಂಬದವರೆಲ್ಲ ಸಂಭ್ರಮಿಸುವ ದಿನವೇ ಸಂಕ್ರಾಂತಿ. ಹೀಗಾಗಿ ಸಂಕ್ರಾಂತಿಯನ್ನು ರೈತರ ಹೊಲಮನೆಯ ಹಬ್ಬ ಹಾಗೂ ಬೆಳೆಗಳ ಹಬ್ಬ ಎಂದು ಹೆಸರಾಗಿದೆ. ಅನ್ನದಾತರ ಪರಿಶ್ರಮಕ್ಕೆ ಗೌರವ ಸಲ್ಲಿಸುವುದು ಮತ್ತು ಭೂತಾಯಿಗೆ ಕೃತಜ್ಞತೆ ಹೇಳುವುದು ಈ ಹಬ್ಬದ ವಿಶೇಷತೆ.

ಎತ್ತುಗಳ ಪೂಜಿಸುವ ಸಂಪ್ರದಾಯ:-
ಎತ್ತುಗಳು ರೈತರ ಅವಿಭಾಜ್ಯ ಅಂಗ ಹಾಗೂ ಅವುಗಳು ಎರಡು ಕಣ್ಣುಗಳು ಇದ್ದಂತೆ. ಹಳ್ಳಿಗಳಲ್ಲಿ ಈ ಸಮಯದಲ್ಲಿ ವರ್ಷವಿಡೀ ಮಣ್ಣನ್ನು ಉಳುಮೆ ಮಾಡಿ ರೈತನಿಗೆ ಬೆಳೆಯಲು ಸಹಕರಿಸಿದ ಎತ್ತುಗಳು ಹಾಗೂ ದನಗಳನ್ನು ತೊಳೆದು, ಅಲಂಕಾರ ಮಾಡಿ ಪೂಜೆ ಮಾಡುವ ಪದ್ದತಿ ಇದೆ. ಹೊಲದ ಕೆಲಸದಲ್ಲಿ ದುಡಿದ ಮೂಕ ಪ್ರಾಣಿಗೆ ಗೌರವಿಸುವ ಭಾವನೆ ಈ ಹಬ್ಬದಲ್ಲಿ ಎದ್ದುಕಾಣುತ್ತದೆ. ಇದರಿಂದ ಮಾನವನಿಗೂ ನಿಸರ್ಗಕ್ಕೂ ಪರಸ್ಪರ ಸಂಬಂಧವಿದೆ ಎಂಬ ಸಂದೇಶ ನೀಡುತ್ತದೆ. ಭಾರತೀಯ ಪರಂಪರೆಯಲ್ಲಿ ಸೂರ್ಯನಿಗೆ ದೇವತ್ವದ ಸ್ಥಾನವಿದೆ. ಸೂರ್ಯನು ಜೀವದ ಮೂಲ, ಶಕ್ತಿಯ ಕೇಂದ್ರವಾಗಿದೆ. ಸಂಕ್ರಾಂತಿ ದಿನದಂದು ಸೂರ್ಯ ಆರಾಧನೆ ಮಾಡುವ ಪದ್ಧತಿ ಪುರಾತನವಾದುದು. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ, ದಾನ ಧರ್ಮ, ಪೂಜೆಗಳು ನಡೆಯುತ್ತದೆ. ಸೂರ್ಯನಿಗೆ ನಮಸ್ಕಾರ ಮಾಡುವ ಮೂಲಕ ಆರೋಗ್ಯ , ಆಯಸ್ಸು, ಸಮೃದ್ಧಿಯನ್ನು ಬೇಡುವುದು ಸಂಪ್ರದಾಯವಾಗಿದೆ.

ಭಾವೈಕ್ಯತೆಯ ಸಾರುವ ಹಬ್ಬ:-
ಮುಖ್ಯವಾಗಿ ಸಂಕ್ರಾಂತಿ ಹಬ್ಬದ ಆಚರಣೆಯು ಕರ್ನಾಟಕ(ಎಳ್ಳು ಬೆಲ್ಲ ಹಂಚುವುದು), ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ(ಪೊಂಗಲ್) ಇನ್ನಿತರ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ, ವಿಭಿನ್ನ ಸಂಪ್ರದಾಯಗಳೊಂದಿಗೆ ಸಂಭ್ರಮಿಸುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಆಚರಣೆಗಳಲ್ಲ, ಅವು ಜೀವನದ ತತ್ವ, ಪ್ರಕೃತಿಯ ಜೊತೆಗಿನ ಮಾನವನ ಸಂಬಂಧ, ಮನುಷ್ಯರ ನಡುವಿನ ಭಾವನೆಗಳು ಹಾಗೂ ಸಮಾಜದ ಒಗ್ಗಟ್ಟಿನ ಪ್ರತಿಬಿಂಬಗಳಾಗಿವೆ. ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತೇವೆ. ಮನೆಗಳನ್ನು ಸ್ವಚ್ಛಗೊಳಿಸಿ, ಬಾಗಿಲ ಮುಂದೆ ರಂಗೋಲಿ ಬಿಡಿಸುವುದು, ಹೆಣ್ಣು ಮಕ್ಕಳು ಹೊಸ ಸೀರೆ ಧರಿಸುವುದು, ಗಂಡಸರು ಪಂಚೆ ಉಡುವುದು ಸಾಮಾನ್ಯ. ಸಂಕ್ರಾಂತಿಯ ವಿಶೇಷ ಆಕರ್ಷಣೆಯಾದ ‘ಎಳ್ಳು ಬೆಲ್ಲ’ ವನ್ನು ಮನೆಮನೆಗೆ ಹಂಚುವ ವಿನಿಮಯ ಸಂಪ್ರದಾಯ ಪರಸ್ಪರ ಭಾವೈಕ್ಯತೆಯ ಸಾರುತ್ತದೆ. ಎಳ್ಳು, ಬೆಲ್ಲ, ಕಡಲೆ, ಸಕ್ಕರೆ, ಕಬ್ಬು, ಕರಿಬೇವು, ಹಣ್ಣು, ಮುತ್ತೈದೆಯರಿಗೆ ಅರಿಶಿನ ಕುಂಕುಮ, ಹೂ ಸೇರಿಸಿ ನೆರೆಹೊರೆಯವರಿಗೆ ಮತ್ತು ಬಂಧು ಮಿತ್ರರಿಗೆ ನೀಡುತ್ತಾರೆ.

ಎಳ್ಳುಬೆಲ್ಲ ಸವಿದು ಒಳ್ಳೆಯ ಮಾತು:-
ಕುಟುಂಬದವರೆಲ್ಲ ಸೇರಿ ಒಟ್ಟಿಗೆ ಕುಳಿತು “ಎಳ್ಳು ಬೆಲ್ಲ ಸವಿದು, ಒಳ್ಳೆಯ ಮಾತಾಡಿ” ಎಂಬ ನುಡಿಯು ಸಂಕ್ರಾಂತಿ ಹಬ್ಬದ ತತ್ವವನ್ನು ಅತ್ಯಂತ ಸರಳವಾಗಿ ವಿವರಿಸುತ್ತದೆ. ಜೀವನದಲ್ಲಿ ಸಿಹಿಕಹಿ ಅನುಭವಗಳು ಸಹಜ ಅದನ್ನು ಎಲ್ಲರೂ ಬಾಳಲ್ಲಿ ಸಮಾನಾಗಿ ಸ್ವೀಕರಿಸಿ, ಪರಸ್ಪರ ಒಳ್ಳೆಯ ಮಾತುಗಳ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸಬೇಕು, ನಗುತ್ತಿರಬೇಕು ಎಂಬ ಸಂದೇಶ ಇದರಲ್ಲಿ ಅಡಗಿದೆ. ಈ ಹಬ್ಬದ ಸಂಕೇತವಾಗಿ ಮಕ್ಕಳು ಗಾಳಿಪಟ ಹಾರಿಸುವುದು, ಹೆಣ್ಣುಮಕ್ಕಳು ಬಗೆಬಗೆಯ ರಂಗೋಲಿಬಿಡಿಸುವುದು, ಹಿರಿಯರು ಪೂಜೆ ಪುನಸ್ಕಾರಗಳಲ್ಲಿ ತೊಡಗುವುದು, ಎತ್ತಿನಗಾಡಿ ಮೆರವಣಿಗೆ, ಕೋಲಾಟ ಮುಂತಾದವುಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ಕೆಲವು ಪ್ರದೇಶಗಳಲ್ಲಿ ಸುಗ್ಗಿಯ ಕುಣಿತ, ಸುಗ್ಗಿಯ ಜನಪದ ಹಾಡು, ದೇವಸ್ಥಾನಗಳಲ್ಲಿ ದನಗಳ ಜಾತ್ರೆಗಳು, ಸಾಂಪ್ರದಾಯಿಕ ನೃತ್ಯಗಳು ಹಾಗೂ ಜನಪದ ಕಲೆಗಳ ಪ್ರದರ್ಶನಗಳು ಸಹ ನಡೆಯುತ್ತವೆ. ಇವು ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಇಂದಿನ ಪೀಳಿಗೆಯವರಿಗೆ ತಿಳಿಸುತ್ತದೆ.

ಸ್ನೇಹ, ಸಹನೆ, ಮಾನವೀಯ ಮೌಲ್ಯಗಳು:-
ಸಂಕ್ರಾಂತಿ ಕೇವಲ ಕೃಷಿ ಅಥವಾ ಧಾರ್ಮಿಕ ಸಂಪ್ರದಾಯಗಳ ಸಂಬಂಧಿಸಿದ ಹಬ್ಬವಲ್ಲ. ಇದು ಸಾಮಾಜಿಕ ಐಕ್ಯತೆ, ಸ್ನೇಹ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ತೋರಿಸುವ ಹಬ್ಬವೂ ಹೌದು. ಈ ಪವಿತ್ರವಾದ ದಿನದಂದು ಉಳ್ಳವರು ದಿನಸಿಧಾನ್ಯಗಳನ್ನು ಬಡವರಿಗೆ ದಾನ ಮಾಡುತ್ತಾರೆ. ತಮ್ಮ ಕೈಲಾದಷ್ಟು ಬಡವರಿಗೆ ಅನ್ನ, ಹೊಸಬಟ್ಟೆ, ಒಂದಿಷ್ಟು ಹಣ ನೀಡುವ ಮೂಲಕ ಮಾನವೀಯತೆ ಕಾಣುತ್ತದೆ. ಬಂಧು ಮಿತ್ರರು, ಕುಟುಂಬ ಹಾಗೂ ನೆರೆಹೊರೆಯವರು ಒಟ್ಟಾಗಿ ಹಬ್ಬ ಆಚರಿಸುವುದರಿಂದ ಸಮಾಜದಲ್ಲಿ ಸ್ನೇಹ, ಸಹಭಾಳ್ವೆ ಮತ್ತು ಸಹಾನುಭೂತಿ ಬೆಳೆಯುತ್ತದೆ. ಇತ್ತೀಚಿಗೆ ವೇಗವಾಗಿ ಬೆಳೆಯುತ್ತಿರುವ ಯಾಂತ್ರಿಕ ಜೀವನದಲ್ಲಿ ಮಾನವ ಸಂಬಂಧಗಳು ದುರ್ಬಲವಾಗುತ್ತಿರುವ ಸಂದರ್ಭದಲ್ಲಿ ಸಂಕ್ರಾಂತಿ ಹಬ್ಬವು ಹಂಚಿಕೆ, ಸಹನೆ, ಪ್ರೀತಿ ಹಾಗೂ ಪರಸ್ಪರ ಸಹಕಾರ ಮತ್ತು ಗೌರವದ ಮಹತ್ವವನ್ನು ನೆನಪಿಸುತ್ತದೆ. ತಂತ್ರಜ್ಞಾನದಿಂದ ದೂರ ಸರಿದು ಕುಟುಂಬದ ಜೊತೆ ಕಾಲ ಕಳೆಯುವ ಅವಕಾಶವನ್ನು ಈ ಹಬ್ಬ ನೀಡುತ್ತದೆ. .

ವೈಜ್ಞಾನಿಕ ದೃಷ್ಟಿಕೋನ:-
ಸಂಕ್ರಾಂತಿ ಹಬ್ಬದ ಆಚರಣೆಯು ತನ್ನದೇ ಆದ ವೈಜ್ಞಾನಿಕ ಮಹತ್ವವನ್ನು ಹೊಂದಿದೆ. ಉತ್ತರಾಯಣದ ಆರಂಭದಿಂದ ಸೂರ್ಯನ ಕಿರಣಗಳು ಭೂಮಿಯ ಮೇಲೆ ಹೆಚ್ಚು ಕಾಲ ಬೀಳುತ್ತದೆ. ಚಳಿಗಾಲದ ಸಮಯವಾಗಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಉತ್ತಮ ಆರೋಗ್ಯಕ್ಕೆ ಅನುಕೂಲಕರವಾಗಿದೆ. ಎಳ್ಳು, ಬೆಲ್ಲ, ಕಡಲೆಯಂತಹ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಚಳಿಗಾಲದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ನಮ್ಮ ಪೂರ್ವಜರು ಪರಿಸರದ ನಿಯಮಗಳು ಹಾಗೂ ಬದಲಾವಣೆಗಳನ್ನು ಅರಿತು, ಆರೋಗ್ಯಕ್ಕೆ ಅನುಕೂಲವಾದ ಆಹಾರ ಮತ್ತು ಆಚರಣೆಗಳನ್ನು ಹಬ್ಬಗಳ ರೂಪದಲ್ಲಿ ನಮಗೆ ನೀಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ಸಂಕ್ರಾಂತಿಯ ಸಂದೇಶ:-
ಸಂಕ್ರಾಂತಿ ಹಬ್ಬವು ನಮಗೆ ಹಲವಾರು ಸಂದೇಶಗಳನ್ನು ನೀಡುತ್ತದೆ. ಪ್ರಕೃತಿಗೆ ಸಲ್ಲಿಸುವ ಪೂಜೆ, ಪ್ರಾಣಿಗಳಿಗೆ ನೀಡುವ ಗೌರವ, ಹೊಸ ಫಸಲಿಗೆ ನೀಡುವ ಕೃತಜ್ಞತೆ, ಶ್ರಮಕ್ಕೆ ಪ್ರತಿಫಲ, ಹಂಚಿಕೆಗೆ ಸಂತೋಷ, ಸಹನೆಗೆ ಪ್ರೀತಿ, ಸಂಬಂಧಗಳಿಗೆ ಬಲ ಇವೆಲ್ಲವೂ ಸಂಕ್ರಾಂತಿಯ ಅಂತರಾಳವಾಗಿವೆ. ಇದು ಕತ್ತಲೆಯಿಂದ ಬೆಳಕಿನತ್ತ ಸಾಗುವ ಬದುಕಿನ ಸಂಕೇತವಾಗಿವೆ. ಹಳೆಯದನ್ನು ಬಿಟ್ಟು, ಹೊಸತನವನ್ನು ಸ್ವೀಕರಿಸಿ, ಸಕರಾತ್ಮಕ ಚಿಂತನೆಯೊಂದಿಗೆ ಮುಂದುವರಿಸಿಕೊಂಡು ಸಾಗಲು ಪ್ರೇರೇಪಿಸುವ ಹಬ್ಬವೇ ಈ ಸಂಕ್ರಾಂತಿ. ಈ ಹಬ್ಬವು ಬೆಳಕಿನ ದಿಕ್ಕಿಗೆ ನಮ್ಮ ಬದುಕನ್ನು ಮುನ್ನಡೆಸುವ ಸಂಸ್ಕೃತಿ ಹಾಗೂ ಸಂಪ್ರದಾಯದ ಹಬ್ಬ. ಒಟ್ಟಿನಲ್ಲಿ ಸಂಕ್ರಾಂತಿ ನಮ್ಮ ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸಿ ಶ್ರೀಮಂತಗೊಳಿಸುವ, ಕೃಷಿ ಬದುಕಿನ ಮಹತ್ವವನ್ನು ಸಾರುವ ಹಾಗೂ ಮಾನವೀಯ ಮೌಲ್ಯಗಳನ್ನು ಉಳಿಸುವ ಹಬ್ಬವಾಗಿದೆ. ವೇಗವಾಗಿ ಬದಲಾಗುತ್ತಿರುವ ಈ ಜಮಾನದಲ್ಲೂ ಸಂಕ್ರಾಂತಿಯ ತತ್ವವನ್ನು ತಿಳಿದು ಉಳಿಸಿಕೊಂಡು ಆಚರಿಸಿದರೆ, ಅದು ಕೇವಲ ಒಂದು ದಿವಸದ ಹಬ್ಬದ ಸಡಗರವಾಗಿರದೆ, ನಮ್ಮ ದಿನನಿತ್ಯದ ಬದುಕಿಗೆ ದಾರಿ ತೋರಿಸುವ ದೀಪವಾಗಿದೆ.

ಚಲುವೇಗೌಡ ಡಿ ಎಸ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x