ಸಹೃದಯ: ಸಂತೋಷ್ ಟಿ

ಸಹೃದಯ ಎಂದರೆ ಒಳ್ಳೆಯ ಹೃದಯವಿರುವ ಮನುಷ್ಯ. ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ಎದೆಯ ಮಧ್ಯ ಎಡ ಭಾಗದಲ್ಲಿರುವ ಕೈ ಮುಷ್ಟಿ ಗಾತ್ರದ ದೇಹದ ಅಂಗ. ಸ್ನಾಯುಗಳಿಂದ ಮಾಡಿರುವಂತ ಹೃದಯವು ನಿರಂತರವಾಗಿ ಹುಟ್ಟಿನಿಂದ ಸಾಯುವವರೆಗೂ ಕಾರ್ಯ ನಿರ್ವಹಿಸುತ್ತದೆ. ಇದನ್ನು ದಮನಿ ಎಂತಲೂ ಕರೆಯುವರು. ಇದರ ಕೆಲಸ ರಕ್ತ ಪರಿಶುದ್ಧತೆ ಮತ್ತು ಪರಿಚಲನೆ ಮಾಡಿ ಎಲ್ಲಾ ಅಂಗಗಳಿಗೂ ತಲುಪಿಸುವುದಾಗಿರುತ್ತದೆ. ಪ್ರತಿ ನಿಮಿಷಕ್ಕೆ ಎಪ್ಪತ್ತೇರಡು ಬಾರಿ ಲಬ್ ಡಬ್ ಲಬ್ ಡಬ್ ಎಂದು ಬಡಿದುಕೊಳ್ಳುತ್ತದೆ. ಅದು ನಿಂತುಬಿಟ್ಟರೆ ಮನುಷ್ಯ ಸತ್ತನೆಂದೆ ಅರ್ಥ. ಹೃದಯವು ಅಧಿಕ ರಕ್ತದೊತ್ತಡ ಇತ್ಯಾದಿ ಸಮಸ್ಯೆಗಳ ಜೊತೆಗೆ ಸಂಬಂಧ ಹೊಂದಿದೆ. ಎಲ್ಲಾ ಜೀವಜಾತ ಪ್ರಾಣಿಗಳಲ್ಲೂ ಒಟ್ಟಾರೆ ಹೃದಯವೆಂಬುದು ಇರುತ್ತದೆ. ಮಾನವ ಹೆಚ್ಚು ಬೌದ್ದಿಕವಾಗಿ ಮಾತಾಡುವ ಧ್ವನಿ ಭಾಷೆ ಕಲಿತಿರುವನು. ಬರೆಯುವ ಸಲುವಾಗಿ ಭಾಷಿಕ ಲಿಪಿಯನ್ನು ಕಂಡುಕೊಂಡನು. Block and Triger :- according to tell ” The Language is a system of Arbitery Vocal symbols by means of which Social group Co-operates” ಎಂದು ಮಾನವನು ಆಡುವ ಭಾಷೆಯ ಕುರಿತಾದ ವ್ಯಾಖ್ಯಾನವನು ಮಾಡಿರುವರು.

” ಬ್ಲಾಕ್ ಮತ್ತು ಟ್ರೇಗರ್ ರವರು “ಯಾದೃಚ್ಛಿಕ ಮೌಖಿಕ ಧ್ವನಿ ಸಂಕೇತಗಳು ವ್ಯವಸ್ಥೆಯಿಂದ ಕೂಡಿ ಸಮಾಜದ ಸಮೂಹದ ಸಹಕಾರಕ್ಕೆ ಕಾರಣವಾಗುವುದು ಭಾಷೆ” ಎಂದು ಅಭಿಪ್ರಾಯಪಟ್ಟಿರುವರು. ಇದು ಬಹುತೇಕ ಒಪ್ಪುವಂತ ಜನಪ್ರಿಯ ವ್ಯಾಖ್ಯಾನವಾಗಿದೆ. ಇದರಲ್ಲಿನ ಅಂಶಗಳನ್ನು ಪರಿಗಣಿಸಿದರೆ ಭಾಷೆ ಒಂದು ವ್ಯವಸ್ಥೆ, ಭಾಷೆಯಲ್ಲಿ ಧ್ವನಿ ಸಂಕೇತಗಳಿರುತ್ತವೆ. ಈ ಸಂಕೇತಗಳು ಮೌಖಿಕವಾಗಿರುತ್ತವೆ ಹಾಗೂ ಯಾದೃಚ್ಛಿಕವಾಗಿರುತ್ತವೆ. ಇದು ಸಾಮಾಜಿಕ ಸಂಪರ್ಕವನ್ನು ಏರ್ಪಡಿಸಿ ಪರಸ್ಪರ ಸಮೂಹದ ಜನರ ಸಹಕಾರಕ್ಕೆ ಕಾರಣವಾಗಿದೆ. ಎಂಬ ಮೂಲಭೂತ ಅಂಶಗಳನ್ನು ಒಳಗೊಂಡ ಭಾಷೆಯ ಒಂದು ವ್ಯವಸ್ಥಿತ ಪರಿಕಲ್ಪನೆಯನ್ನು ಮಾಡಿಕೊಳ್ಳಬಹುದು. ಈ ಭಾಷೆ ಎಂಬುದು ಇಷ್ಟಕ್ಕೆ ಸೀಮಿತವಾಗದೆ ಒಂದು ಭಾವಾನಾತ್ಮಕ ಸಾಂಸ್ಕೃತಿಕ ಭಾಗವಾಗಿ ಜನರಲ್ಲಿ ವಿವಿಧ ರೀತಿಯ ಕಲೆಗಳನ್ನು ಜಿಜ್ಞಾಸೆಗಳನ್ನು ಬೆಳೆಸಿತು. ಅದರಲ್ಲಿ ಭಾಷಿಕ ಲಿಪಿಯ ಮೂಲಕ ತಾಡೋಲೆ ಹಸ್ತಪ್ರತಿಗಳಲ್ಲಿ ಬರೆದ ಸಾಹಿತ್ಯ, ಚಿತ್ರಗಳು, ಶಾಸ್ತ್ರಗಳು ಇತ್ಯಾದಿಗಳನ್ನು ಪ್ರಾಚೀನರಿಂದ ಅರ್ವಾಚೀನರ ಕಾಲದವರೆಗೂ ಗಮನಿಸಬಹುದು.

ಭೌಗೋಳಿಕವಾಗಿ ಪರಿಸರದ ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ ಭಾಷೆಗಳು ಅಸ್ಥಿತ್ವದಲ್ಲಿವೆ. ಸಹೃದಯ ಎಂಬುದನ್ನು ವಿಭಿನ್ನ ಸಂಸ್ಕೃತಿ ಕಲೆಗಳ ನೆಲೆಯಲ್ಲಿ ವಿವೇಚಿಸಿಕೊಂಡರೆ ಮನಃಶಾಸ್ತ್ರದ ಪ್ರಕಾರ ತರ್ಕಕ್ಕೆ ನಿಲುಕದ ವ್ಯಾಖ್ಯೆಯು ಆಗುತ್ತದೆ. ಹೃದಯವನ್ನು ದೇಹದ ಅಂಗವೆಂದು ವೈದ್ಯಕೀಯ ಲೋಕದವರು ಕಂಡುಕೊಂಡರು. ಅವುಗಳನ್ನು ದೇಹದ ಎಕ್ಸರೇ , ಸ್ಕ್ಯಾನಿಂಗ್ ಮೂಲಕ ನೋಡುವ ವೈದ್ಯಕೀಯ ಅಭ್ಯಾಸವು ಇದೆ. ಆದರೆ, ಮಾನವನ ಮನಸ್ಸು ಎಂಬುದು ಯಾವುದು? ಮೆದುಳಿನ ಆಲೋಚನಾ ಶಕ್ತಿ ಯಾವುದು ? ಮಾನಸಿಕ ವಿಜ್ಞಾನ ಎಂದರೇನು?ಮನುಷ್ಯನ ತಲೆಯ ಮಹಾಮಸ್ತಿಷ್ಕದ ಭಾಗವನ್ನು ಆಲೋಚನೆಯ ಕೇಂದ್ರ, ಭಾಷೆಯ ಕೇಂದ್ರ, ಆಲೋಚಿಸುವ ಕೇಂದ್ರ, ನೆನಪಿನ ಕೇಂದ್ರ, ಮನಸ್ಸು ಒಂದು ಚಂಚಲ ಬುದ್ಧಿಯ ಖಿನ್ನ ಕೇಂದ್ರ. ಮನಃಸ್ಥಿತಿಯ ಕೇಂದ್ರ ಎಂದೆಲ್ಲಾ ವ್ಯಾಖ್ಯಾನಿಸಿ ಕೊಳ್ಳಬಹುದು. ಅದಕ್ಕೂ ಭಿನ್ನವಾದ ಅರ್ಥವೆಂದರೆ ಸಹೃದಯ ಎಂದರೆ ಒಳ್ಳೆಯ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಎರಡನ್ನು ಹೊಂದಿರುವ ವ್ಯಕ್ತಿ ಮತ್ತು ವ್ಯಕ್ತಿತ್ವ ಎನ್ನಬಹುದು. ವ್ಯಕ್ತಿ ಬದುಕಿರುವಾಗ ಆಲೋಚನೆಯ ಭಾವನೆಗಳನ್ನು ಕಲಾಕೃತಿಗಳಲ್ಲಿ ಬರೆದಿಡುವ ವಾಡಿಕೆಯಿಂದ ಆತ ಕವಿಯೋ , ಲೇಖಕನೋ ಆಗಿ ಮಾನಸಿಕ ಬಿಡುಗಡೆ ಹೊಂದುತ್ತಾನೆ. ತನ್ನ ಮಾನಸಿಕ ಒತ್ತಡವನ್ನು ಹೊರಹಾಕಲು ಆತ ಬಳಸುವ ಅಭಿವ್ಯಕ್ತಿ ಭಾಷೆಯ ಲಿಖಿತ ಮಾಧ್ಯಮದ ಮೂಲಕ ಹೊರಬಿದ್ದು ಆತನಲ್ಲಿರುವ ಆಲೋಚನೆಯ ಶಕ್ತಿಯನ್ನು ಅನಾವರಣಗೊಳಿಸುತ್ತದೆ. ಹಾಗಾಗಿ ಇದನ್ನು ಮಾನಸಿಕ ಖಿನ್ನತೆ ಎನ್ನಲು ಸಾಧ್ಯವಿಲ್ಲ. ಕವಿ, ಕಲಾವಿದ, ಕಲೆಗಾರ, ಗ್ರಂಥಕಾರ, ಲೇಖಕ ಎಂದು ಜನರು ಒಪ್ಪುತ್ತಾರೆ.

“ಸಾಹಿತ್ಯ ಮನಶ್ಯಾಸ್ತ್ರಜ್ಞರಿಗೆ ವಿಪುಲವಾದ ಸಾಮಗ್ರಿಯನ್ನು ಒದಗಿಸುತ್ತದೆ. ಏಕೆಂದರೆ ‘ ಮಾನವ ಮನಸ್ಸು ಸಮಸ್ತ ವಿಜ್ಞಾನ ಹಾಗೂ ಕಲೆಗಳ ಮಾತೃಗರ್ಭ. ಒಂದು ಕಡೆ ನಾವು ಕಲಾಕೃತಿ ನಿರ್ಮಾಣದ ವಿಷಯವಾಗಿ, ಮತ್ತೊಂದು ಕಡೆ ಯಾವ ಯಾವ ಶಕ್ತಿ ವಿಶೇಷಗಳಿಂದ ವ್ಯಕ್ತಿಯೊಬ್ಬ ಕಲಾವಿದನಾಗುತ್ತಾನೆ ಎನ್ನುವ ವಿಷಯವಾಗಿ ಮನೋವಿಜ್ಞಾನದ ದೃಷ್ಟಿಯಿಂದ ಸಂಶೋಧನೆ ನಡೆಸಬಹುದು.’ ಮನಃಶಾಸ್ತ್ರದ ಕೀಲಿಕೈಯಿಂದ ಕವಿಮನೋಮಂದಿರದ ಪ್ರಯೋಗಶಾಲೆಯ ಬಾಗಿಲನ್ನು ತೆರೆದು ಕವಿನಿರ್ಮಿತಿಯ ರಹಸ್ಯಗಳನ್ನು ತಿಳಿಯಬಹುದು; ಕವಿಯ ವ್ಯಕ್ತಿತ್ವದ ಪರಿಶೀಲನೆ ನಡೆಸಬಹುದು; ಕಾವ್ಯದ ಹಲವು ಪಾತ್ರಗಳ ಸ್ವಭಾವವನ್ನೋ, ಹಲವು ಸನ್ನಿವೇಶ, ಸಂಧರ್ಭಗಳ ಔಚಿತ್ಯವನ್ನೋ ಮನಶ್ಯಾಸ್ತ್ರದ ಸಹಾಯದಿಂದ ವಿವರಿಸಬಹುದು; ಅಥವಾ ಕವಿ, ಮನಸ್ಸಿನ ವ್ಯಾಪಾರಗಳನ್ನು ಎಷ್ಟೊಂದು ಸೂಕ್ಷ್ಮವಾಗಿ ನೋಡಿದ್ದಾನೆ, ನಿರೂಪಿಸಿದ್ದಾನೆ ಎನ್ನುವುದನ್ನು ಸಮರ್ಥಿಸಬಹುದು, ವಿವೇಚಿಸಿಬಹುದು.” ಎಂದಿರುವರು ಡಾ.ಜಿ.ಎಸ್.ಶಿವರುದ್ರಪ್ಪನವರು. ಉದಾಹರಣೆಗೆ ಜನ್ನನ ಯಶೋಧರ ಚರಿತೆಯ ಯಶೋಧರ – ಅಮೃತಮತಿ – ಅಷ್ಟವಂಕನ ಪಾತ್ರಗಳು ಮತ್ತು ಮಲ್ಲಿನಾಥ ಪುರಾಣದ ವಸುಷೇಣ – ಸುನಂದೆ – ಚಂಡಶಾಸನ ಪಾತ್ರಗಳ ವಿವೇಚನೆ ಕಾಣಬಹುದು. ಆದರೆ, ನಿಜವಾಗಿಯೂ ರೋಗಗ್ರಸ್ತ ಮಾನಸಿಕ ಖಿನ್ನತೆಯನ್ನು ಹೊಂದಿದವರನ್ನು ಹುಚ್ಚರೆಂದು ಹೇಳುತ್ತಾರೆ. ವ್ಯಕ್ತಿ ಮತ್ತು ವ್ಯಕ್ತಿತ್ವ ನಶಿಸಿದಾಗ ಅಂತಹ ಘನವ್ಯಕ್ತಿಗಳು ಅಳಿದು ಹೋದ ಮೇಲೆ ಅವರ ಘನತೆಯ ಕಲಾಕೃತಿಗಳ ಅವಲೋಕನ ಚಿಂತನೆಗಳಿಂದ ಅವರ ನೆನಪುಗಳನ್ನು ಕಾಪಿಟ್ಟು ಅವರ ವ್ಯಕ್ತಿತ್ವವನ್ನು ತತ್ವ ಸಿದ್ಧಾಂತಗಳನ್ನು ಸ್ಥಾಯಿಗೊಳಿಸಲಾಗುತ್ತದೆ. ಉದಾಹರಣೆಗೆ ಸಾಕ್ರೀಟಿಸ್, ಪ್ಲೋಟೋ, ಅರಿಸ್ಟಾಟಲ್ ಅವರ ಆಧುನಿಕ ತತ್ವ ಜಿಜ್ಞಾಸೆಗಳು ಇಂದಿಗೂ ಜೀವಂತವಾಗಿರುವುದು ಇಂತಹ ಪ್ರಚಾರದ ಮೂಲಕವೆ ಆಗಿದೆ.

” ಸಹೃದಯ ಹೃದಯಹ್ಲಾದಿ ಶಬ್ದಾರ್ಥಮಯತ್ವ ಮೇವ ಕಾವ್ಯ ಲಕ್ಷಣಂ”

(ಸಹೃದಯರ ಹೃದಯವನ್ನು ಆಹ್ಲಾದಗೊಳಿಸುವ ಶಬ್ದ ಮತ್ತು ಅರ್ಥಗಳಿಂದ ಕೂಡಿ ಪ್ರಚಾರವಾಗಿರುವ ಕಾವ್ಯವೇ ಕಾವ್ಯದ ಲಕ್ಷಣ )
ಎಂದು ಧ್ವನ್ಯಾಲೋಕ ಬರೆದ ಆನಂದ ವರ್ಧನ ‘ಕಾವ್ಯಸ್ಯಾತ್ಮಾಧ್ವನಿ’ ಎಂದು ಪ್ರತಿಪಾದಿಸಿ, ‘ಕಾವ್ಯಕ್ಕೆ ಧ್ವನಿಯೆ ಆತ್ಮ’ ಎನ್ನುವ ಮೂಲಕ ಉಚ್ಚಾರಣೆಯ ಮಾತಿನ ಧ್ವನಿಗಳಿಂದ, ಶಬ್ದಗಳಿಂದ, ಅರ್ಥಗಳಿಂದ, ಕಾವ್ಯ ಕಾಣ್ಕೆಯನ್ನು ಕಟ್ಟಬಹುದು ಎಂದು ಹೇಳಿದನು. ಅವು ಸಹೃದಯರಿಗೆ ಆಹ್ಲಾದವನುಂಟುಮಾಡುವಂತಿರಬೇಕು.

ಸಾಹಿತ್ಯ ಕ್ಷೇತ್ರದಲ್ಲಿ ಸಹೃದಯ ಎಂದರೆ ಒಳ್ಳೆಯ ಮನುಷ್ಯ ಎಂದರ್ಥ. ಯಾರು ಕವಿಯ ಜೊತೆಗೆ ಸಹ ಹೃದಯವನ್ನು ಹೊಂದಿರುವರೋ ಅವರು ಸಹೃದಯರು. ಕವಿ ಬರೆದು ಹಸ್ತಪ್ರತಿ ಓದಿ, ತಿದ್ದಿ, ಪ್ರೂಫ್ ರೀಡಿಂಗ್ ಆದಮೇಲೆ ಪ್ರಕಾಶನದವರು ಅಚ್ಚಿಟ್ಟು ಮುದ್ರಿಸಿ ಬೈಂಡಿಂಗ್ ಮಾಡಿ ಹೊರತಂದು ಪುಸ್ತಕ ಮಳಿಗೆಯಲ್ಲಿ ಇಡುವರು. ಅಂತಹ ಪುಸ್ತಕಗಳನ್ನು ಕಾವ್ಯವನ್ನು ಹಿಡಿದು ಕವಿ ಯಾರು, ಆತನ ಶೀರ್ಷಿಕೆ ಏನು, ಅದರೊಳಗಿನ ಪುಸ್ತಕದ ಒಳಭಾಗದ ಬದಿಯ ವಿಳಾಸವೇನು, ಕಾಗದದ ಗುಣಮಟ್ಟ ಎಂತಹದ್ದು ಅದರ ಮುನ್ನುಡಿಕಾರ ಯಾರು, ಅದರ ಒಳಗಿನ ಸವಿಯ ಹೂರಣ ಅಧ್ಯಾಯಗಳಾವುವು, ಅವುಗಳ ಹೆಸರೇನು, ಉದಾಹರಣೆಯ ಒಂದು ಕವಿತೆ ಎಲ್ಲಿದೆ, ಅದರ ಬೆನ್ನುಡಿಕಾರ ಯಾರು, ಹಕ್ಕುಗಳು ಯಾರವು, ಯಾವ ವರ್ಷ ಮುದ್ರಣವಾಗಿದೆ, ಎಷ್ಟನೇ ಆವೃತ್ತಿ ಯಾಗಿದೆ, ಪರಿಷ್ಕರಣೆ ಆಗಿದೆಯೇ, ಎಷ್ಟು ಪ್ರತಿಗಳು ಬಂದಿವೆ, ಉಪೋದ್ಘಾತ ಬರಹ ಯಾರು ಮಾಡಿರುವರು, ಸಂಪಾದಕ ಯಾರು, ಎಂಬಿತ್ಯಾದಿ ವಿವರಗಳಿಂದ ಸಂತುಷ್ಟನಾಗಿ ಕವಿಯ ಕಾವ್ಯವನ್ನು ಕೊಂಡು, ಅದರೊಳಗಿನ ಸವಿಯಾದ ಅಕ್ಷರಕ್ಷರವನ್ನು ಅವಲೋಕಿಸಿ ಓದಿ ಆಸ್ವಾದಿಸುವ ಕವಿಯಷ್ಟೆ ಮಹತ್ವದ ಮನಸ್ಥಿತಿಯ ಓದುಗನನ್ನು ಸಹೃದಯ ಎಂದು ಮನಸಾರೆ ಕರೆಯುತ್ತಾರೆ.

ಬಹುವಚನದಲ್ಲಿ ಓದುಗರು ಸಹೃದಯರು ಎಂದು ಸಹ ಹೇಳಬಹುದು. ‘ಓದುಗ’ ಅಥವಾ ‘ಶ್ರೋತ್ರು’ ಎಂಬ ನಮ್ಮ ಪ್ರಾಚೀನ ಕಾವ್ಯ ಶಾಸ್ತ್ರಜ್ಞರ, ಲಾಕ್ಷಾಣಿಕರ ಪದ ವಿವೇಚನೆಗೂ ‘ಸಹೃದಯ’ ಎಂಬ ಆಧುನಿಕ ಪರಿಭಾಷೆಯ ಭಾವನೆಗಳ ಸಂಬಂಧಕ್ಕೂ ಒಂದು ಮಹತ್ವದ ಬದಲಾವಣೆ ಇದೆ. ಓದುಗ ಎಂದರೆ ಶುಷ್ಕವಾದ ನೀರಸ ಭಾವ ಉಂಟುಗುವಂತೆ ಕವಿಯೇ ಶ್ರೇಷ್ಠ ಎಂಬ ಭಾವನೆ ಉಂಟಾಗುತ್ತದೆ. ಓದುಗನಿಗೆ ಅಲ್ಲಿ ಪ್ರಾಮುಖ್ಯತೆ ಕಡಿಮೆ. ಸಹೃದಯ ಎಂದರೆ ಕವಿಯಷ್ಟೆ ಪ್ರಮುಖವಾದ ಕವಿಗೆ ಸಮನಾಂತರವಾದ ಮನಃಸ್ಥಿತಿ ಇದ್ದವನು. ಹಾಗಾಗಿಯೆ ಕವಿಯ ಪುಸ್ತಕವನ್ನು ಅದರೊಳಗಿನ ಕಾವ್ಯವನ್ನು ಆದ್ರವಾಗಿ ಸವಿಯುತ್ತಾ ಆನಂದ ಆಹ್ಲಾದ ಪಡೆದು ರಸಾಸ್ವಾದನೆ ಪಡೆದವನು ಸಹೃದಯನೆಂದು ವಿವೇಚನೆ ಮಾಡಿಕೊಳ್ಳಬಹುದು. ಈ ಸಹೃದಯ ವಿಮರ್ಶಕನಾಗಿಯೂ ಹೊರಹೊಮ್ಮಬಹುದು. ತಾನು ಓದಿದ ಕಲಾಕೃತಿ ಮತ್ತು ಕವಿಯನ್ನು ವಿಮರ್ಶಿಸುವ ಗುಣವನ್ನು ಪಡೆಯಬಹುದು. ಇದು ಸಹೃದಯನಿಂದ ವಿಮರ್ಶಕನಾಗುವ ಮುಂಬಡ್ತಿ ಎನ್ನಬಹುದು. ಕವಿಯಾಗದವ ವಿಮರ್ಶಕನಾಗುತ್ತಾನೆ ಎಂಬ ಮಾತಿದೆ. ಆದರೆ ಕಾಲ ಬದಲಾಗಿದೆ ಒಳ್ಳೆಯ ಕವಿಯೆ ಒಳ್ಳೆಯ ವಿಮರ್ಶಕ ಕೂಡ ಆಗಬಲ್ಲ. ಒಳ್ಳೆಯ ವಿಮರ್ಶಕ ಕವಿಯೂ ಆಗಿರುವುದು ಇದೆ. ಹಾಗೇ ಆ ವಿಮರ್ಶೆಗಳು ಸಾಹಿತ್ಯ ಚರಿತ್ರೆಗಳಾಗಿ ಬರೆದು ವಿಮರ್ಶಕರು ಗುಣಮಟ್ಟದ ಸಂಶೋಧಕರು ಆಗಿರುವುದಿದೆ.

” ಯೇಷಾಂ ಕಾವ್ಯನುಶೀಲನವಶಾತ್
ವಿಶದೀಭೂತೇ ಮನೋಮುಕುರೇ
ವರ್ಣನೀಯ ತನ್ಮಯೀಭವನಯೋಗ್ಯತಾ
ತೇ ಹೃದಯ ಸಂವಾದಭಾಜಃ ಸಹೃದಯಾಃ”

( ಕಾವ್ಯಗಳನ್ನು ಪರಿಶೀಲಿಸಿ, ಮನಸ್ಸೆಂಬ ಕನ್ನಡಿ ನಿರ್ಮಲವಾಗಿರುವುದರಿಂದ, ವರ್ಣಿತ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗಿದೆಯೋ ಅವರೇ ಸಹೃದಯರು. ಕವಿಯೊಂದಿಗೆ ಹೃದಯ ಹೊಂದಿಕೆ ಉಳ್ಳವರು)
ಎಂಬ ಮಾತುಗಳು ಅಭಿನವ ಗುಪ್ತನ ಧ್ವನ್ಯಾಲೋಕ ಕೃತಿಯಲ್ಲಿನ ಶ್ಲೋಕವಾಗಿದೆ.
ಈ ಮಹತ್ವದ ವ್ಯಾಖ್ಯಾನವನ್ನು ಕನ್ನಡ ಸಾಹಿತ್ಯ ವಿದ್ವಾಂಸರು ಬಹುತೇಕ ಒಪ್ಪಿ ಅಂಗೀಕರಿಸಿರುವರು.

“ಸರಸ್ವಾತ್ಯಾಸ್ತತ್ವಂ ಕವಿ ಸಹೃದಯಾಖ್ಯಂ ವಿಜಯತೇ” – ಅಭಿನವ ಗುಪ್ತನು ಹೇಳುವ ಕವಿಗೆ ಇರಬೇಕಾದ ಸಾರಸ್ವತ ಜ್ಞಾನವೇ ಸಹೃದಯನಿಗೂ ಇರುವ ತತ್ವವೆಂಬುದು ವಿಧಿತವಾಗಿ ಕಾಣುತ್ತದೆ. ಕವಿ ಮತ್ತು ಸಹೃದಯರು ಒಂದೆ ಪ್ರತಿಭೆಯ ನಾಣ್ಯದ ಎರಡು ಮುಖಗಳಿದ್ದಂತೆ ಕವಿ ಟಂಕಿಸಿದರೆ ಸಹೃದಯ ಚಲಾವಣೆ ಮಾಡುತ್ತಾನೆ. ಕವಿಯು ಭಾವ ಶಾಲೆ ತೆರೆದರೆ ಸಹೃದಯ ಕೊಂಡು ವಿವೇಚಿಸಿ ಕೊಳ್ಳುವವನು. ಇಬ್ಬರೂ ಸಮ ಮನಸ್ಥಿತಿಯ ಪ್ರತಿಭಾ ಸ್ವರೂಪಗಳೇ ಆಗಿ ಕಂಡು ಕಾವ್ಯಕ್ಕೆ ಉದ್ದೀಪನ ಉಂಟುಮಾಡಿ ಅದರ ಯಶಸ್ಸಿಗೆ ಕಾರಣವಾಗುವರು. ಇದೇ ಕವಿ – ಕಾವ್ಯ – ಸಹೃದಯ – ತೆರೆಯ ಮರೆಯ ಪ್ರಕಾಶನ ಸಂಸ್ಥೆ ಅಥವಾ ಹಿಂದಿನಕಾಲದ ಹಸ್ತಪ್ರತಿ ಲಿಪಿಕಾರರ ಕೊಡುಗೆ ಎಲ್ಲವನ್ನು ಗರ್ಭೀಕರಿಸಿಕೊಳ್ಳಬಹುದು ಈ ವ್ಯಾಪ್ತಿಯಲ್ಲಿ ಎಂದು ಹೇಳಬಹುದು.

” ವಾಗ್ಭವಕೋ ಭವೇತ್ ಕಶ್ಚಿತ್ವ ಕಶ್ಚಿತ್ ಹೃದಯ ಭಾವುಕಃ
ಸಾತ್ವ್ತಿಕೈರಾಂಗಿಕೈಃ ಕಶ್ಚಿದನುಭಾವವೈಶ್ಚ ಭಾವಕಃ”

ಎಂಬುದು ರಾಜಶೇಖರನ ಕಾವ್ಯ ಮೀಮಾಂಸೆಯ ಶ್ಲೋಕವಾಗಿದೆ. ಇದರ ಅರ್ಥವನ್ನು ತಿ.ನಂ.ಶ್ರೀಯವರು ಹೀಗೆ ಭಾವಾನುವಾದ ಮಾಡುತ್ತಾರೆ. ” ಕೆಲವರು ಭಲಾ, ಭೇಷ್, ಆಹ್! ಎನ್ನುತ್ತಾರೆ. ಕೆಲವರು ಕುಣಿದಾಡಿ ಬಿಡುತ್ತಾರೆ. ಇನ್ನು ಕೆಲವರು ಹೃದಯದಲ್ಲೇ ಮೆಚ್ಚಿಕೆಯನ್ನು ಅಡಗಿಸಿಕೊಳ್ಳುತ್ತಾರೆ. ಎಲ್ಲೋ ಒಬ್ಬಿಬ್ಬರು ಅಪ್ರಯತ್ನವಾಗಿ ಮೈಯಲ್ಲಿ ಹುರಿಗೊಂಡ ಪುಳಕದಿಂದ, ಅರಳಿದ ಕಣ್ಣುಗಳಿಂದ ಅದನ್ನು ಮೌನವಾಗಿಯೇ ವ್ಯಕ್ತಪಡಿಸುತ್ತಾರೆ” ಇಲ್ಲಿನ ಭಾವಕರೆ ಅನುಕಾರ್ಯರು. ಆಂಗಿಕವಾಗಿ ಭಾವುಕವಾಗಿ ಅಭಿನಯಿಸಿ ಮಾತುಗಳಲ್ಲಿ ಉದ್ಗಾರವೆತ್ತಿ ರೊಮಾಂಚನ ಪುಳಕಗಳಿಂದ ಅತ್ಯಾನಂದರಾಗಿರುವ ಸಾಧ್ಯತೆಗಳನ್ನು ಕುರಿತು ಹೇಳುತ್ತದೆ. ” ಮನುಷ್ಯರನ್ನು ಎರಡು ಪಂಗಡಗಳಾಗಿ ವಿಭಾಗಿಸಿ ಇವರು ಕವಿಗಳು ಇವರು ಕವಿಗಳಲ್ಲದವರು ಎಂದು ಎರಡು ಭಾಗ ಮಾಡಬಹುದೇ ಎಂದರೆ ಆಗಲಾರದು ಎಂದೇ ಹೇಳಬೇಕು. ಏಕೆಂದರೆ ಈ ಎರಡು ಗುಣಗಳೂ ಎಲ್ಲರಲ್ಲಿಯೂ ಇರುತ್ತದೆ. ಕವಿಯಾದವನಲ್ಲಿ ವಿಕಸಿತವಾಗಿರುತ್ತದೆ. ಇತರರಲ್ಲಿ ವಿಕಾಸಗೊಳ್ಳಲು ಸರಿಯಾದ ಸನ್ನಿವೇಶದ ಅಭಾವದಿಂದಲೋ ಅಥವಾ ಇನ್ನಾವ ಕಾರಣದಿಂದಲೋ ಸುಪ್ತಾವಸ್ಥೆಯಲ್ಲಿರುತ್ತದೆ.

ಅಂತೂ ಸಂಪೂರ್ಣವಾಗಿ ಈ ಗುಣಗಳು ಯಾರಲ್ಲಿಯೂ ಇಲ್ಲದೇ ಹೋಗುವುದಿಲ್ಲ. ಹೀಗೆ ಕವಿಯಾದವನು ನಮಗೆ ತಾನು ಅನುಭವಿಸಿದ ಆನಂದವನ್ನು ಕಾವ್ಯ ರೂಪದಲ್ಲಿ ನೀಡುತ್ತಾನೆ. ಈ ಕಾವ್ಯಗಳನ್ನು ಓದುವುದು ನಮ್ಮ ಏಕಮಾತ್ರ ಕರ್ತವ್ಯ. ಪ್ರೌಢ ಕಾವ್ಯಗಳನ್ನು ಸ್ವಪ್ರಯತ್ನದಿಂದ ಅರ್ಥಮಾಡಿಕೊಂಡು ರಸಾಸ್ವಾದನತತ್ಪರರಾಗುವುದೊಂದೇ ನಾವು ಮಾಡಬೇಕಾಗಿರುವ ಕೆಲಸ. ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟವಾಗಿ ಕಾಣಬಹುದು. ಆದರೆ ಮನಃಪೂರ್ವಕವಾಗಿ ಪ್ರಯತ್ನಿಸಿದರೆ ಅದು ಸುದೂರ ಸಾಧ್ಯವಿಲ್ಲ. ಕವಿಹೃದಯದ ಮಿಡಿತಕ್ಕೆ ಸಮತಾನದಲ್ಲಿ ನಮ್ಮ ಹೃತ್ ವೀಣೆಯು ಮಿಡಿಯಬಲ್ಲದ್ದೇ ಆದರೆ ನಾವು ಆತನ ಕಾವ್ಯರಸವನ್ನು ಅನುಭವಿಸಲು ಅರ್ಹರೆಂದು ಹೇಳಬಹುದು. ಇಂತಹವರನ್ನೆ ಸಹೃದಯರು ಎನ್ನುವುದು” ಎಂದು ತಿ.ನಂ.ಶ್ರೀ ಅಭಿಪ್ರಾಯ ಪಡುತ್ತಾರೆ. ಸತ್ಯ ಸೌಂದರ್ಯಗಳ ಸಮನ್ವಯವನ್ನು ಕವಿಯಂತೆ ಅನ್ವೇಷಿಸಿಕೊಂಡು ಸಾಕ್ಷಾತ್ಕಾರ ಮಾಡಿಕೊಳ್ಳುವುದೆ ಸಹೃದಯತೆ. ಕೀಟ್ಸ್ ಕವಿಯ ಈ ಸಾಲುಗಳನ್ನು ಗಮನಿಸಿ” Beauty is truth- truth is Beauty that is all ye know on truth, and all ye need to know. ಇವಿಷ್ಟೆ ಕವಿ ಮತ್ತು ಸಹೃದಯರಿಗೆ ತಿಳಿಯಬೇಕಾದ ಪ್ರಪಂಚದ ಅತ್ಯುತ್ತಮ ಸತ್ಯ. ನೋಡುವ, ಗ್ರಹಿಸುವ , ದೃಷ್ಟಿಕೋನಗಳು ಬದಲಾಗಿ ಸ್ವಾರ್ಥಗಳಿಂದ ಬಿಡುಗಡೆಯಾದರೆ ಅಂತಹ ಭವತ್ಯೆಯನ್ನು ಕಾಣಬಹುದು.

ಕವಿಯು ಅಂತರಂಗದ ಸ್ಫೂರ್ತಿ ಪ್ರತಿಭೆಗಳಿಂದ ಕಾವ್ಯ ರಚನೆಯನ್ನು ಮಾಡಿ ತನ್ನ ಎದೆಯೊಳಗಿನ ಲೋಕದ ಭಾರಗಳನ್ನು ಹೊರಹಾಕುವ ಅಭಿವ್ಯಕ್ತಿ ಮಾಧ್ಯಮವಾಗಿ ತೃಪ್ತಿ ಪಡೆದುಕೊಂಡರೆ, ಅದನ್ನು ಆಸ್ವಾದಿಸುವ ಓದುವ ಆನಂದಾನೂಭೂತಿ ಪಡೆಯುವ ಸಹೃದಯ ರಸಿಕರು ಸಹ ಕಾವ್ಯಕ್ಕೆ ಬೇಕು. ರಸಿಕ ಎಂಬ ಮಾತನ್ನು ಸಹ ಓದುಗ, ಸಹೃದಯ, ಪ್ರೇಕ್ಷಕ ಮತ್ತು ಅನುಕಾರ್ಯ ಎಂಬ ವಿಭಿನ್ನ ಸನ್ನಿವೇಶಗಳನ್ನು ಸಂದರ್ಭಾನುಸಾರ ವಿವೇಚಿಸಿಕೊಳ್ಳುವ ಕ್ರಮವು ಸಾಹಿತ್ಯದಲ್ಲಿ ಇದೆ. “ಕಾವೇಷು ನಾಟಕಂ ರಮ್ಯಂ” ಎಂಬ ಮಾತು ಇದಕ್ಕೆ ಪುಷ್ಟಿ ಕೊಡುತ್ತದೆ. ಏಕೆಂದರೆ ಬಹುತೇಕ ನಾಟಕಗಳು ಕಾವ್ಯವೆಂದೆ ಪರಿಗಣಿಸಿದ ಸಂಸ್ಕೃತ ಮತ್ತು ಕನ್ನಡ ಪ್ರಾಚೀನ ಸಾಹಿತ್ಯಗಳು ಎರಡನ್ನು ಒಂದೇ ಎಂದು ಪರಿಗಣಿಸುತ್ತದೆ. ಇದರ ಜೊತೆಗೆ ಲಲಿತ ಕಲೆಗಳು ಸಹ ಸೇರಬಹುದು. ಯಾವ ಬಗೆಯ ಕಲೆ ಮತ್ತು ಕಲಾಕೃತಿಗಳು ಇರುತ್ತವೋ ಅಂತಹ ಸೃಜನಶೀಲ ಕ್ರಿಯೆ ಮತ್ತು ಚಟುವಟಿಕೆಗಳಿಗೆ ಕಲಾಕಾರನಷ್ಟೆ ಸಹೃದಯ ಗುಣಗ್ರಾಹಿಗಳು ಇರುತ್ತಾರೆ. ಸಾಹಿತ್ಯವೂ ಸಹ ಲಲಿತ ಕಲೆಗಳ ಒಂದು ಭಾಗವೇ ಆಗಿರುವ ಸಾಧ್ಯತೆ ಹೆಚ್ಚು. ಇಲ್ಲಿ ನೆನಪಾಗುವ ಅಂಶಗಳೆಂದರೆ ಸಾಹಿತ್ಯ ಲಿಪಿ ಕಂಡುಕೊಳ್ಳವ ಮುಂಚಿನ ಕಾಲದ, ಲಿಖಿತವಾಗುವ ಮೌಖಿಕ ಜನಪ್ರಿಯ ಸಂಸ್ಕೃತಿಗಳ ವಕ್ತಾರರು ಜನಪದ ಹಾಡುಗಳಿಂದ ಹಿಡಿದು ವೇದಿಕೆಯಲ್ಲಿ ಆಡುವ ಆಟಗಳವರೆಗೆ ನೋಡುವ ಮತ್ತು ಕೇಳುವ, ಚಕ್ಷು ಮತ್ತು ಶ್ರವ್ಯ ಎರಡು ಬಗೆಯ ಗುಣಗಳು ಇದ್ದವು. ಉದಾಹರಣೆಗೆ ಚಿತ್ರಪಟಗಳು, ವಾಸ್ತು ಶಿಲ್ಪಕಲೆಗಳು, ನೃತ್ಯ, ಸಂಗೀತ, ನಾಟಕ, ಭಾಷಣ ಮೊದಲಾದವುಗಳೆ ಹೆಚ್ಚು ಪ್ರಚಾರವಾಗಿ ಆಧುನಿಕ ಕಾಲದವರೆಗೂ ಬೆಳೆದು ಬಂದ ಲಲಿತಕಲೆಯ ಅಭಿವ್ಯಕ್ತಿ ಮಾಧ್ಯಮಗಳು ಎಂಬುದು ಅಲ್ಲಗಳೆಯುವಂತಿಲ್ಲ. ಇವುಗಳನ್ನು ಕಾಲ – ದೇಶ – ಅಂತರ -ಪರಿಸರಗಳಲ್ಲಿ ಮೆಟಾಫರ್ ಗಳಾಗಿ ನೋಡಿದರೆ ಪರಿಣತಮತಿ ಕಲಿತವರಷ್ಟೆ ಅಲ್ಲದೆ ಕಲಿಯದವರು ಸಹ ನೋಡುಗ ಮತ್ತು ಕೇಳುಗ ಆಗಿರಬಹುದು.

” ಪದನರೆದು ನುಡಿಯಲುಂ ನುಡಿ
ದುದನರೆಯದಾರಯಲುಮಾರ್ಪರಾ ನಾಡವರ್ಗಳ್”
ಎಂಬ ಜಾಣತನವಷ್ಟೆ ನಮ್ಮ ನಾಡಿನ ನೋಡುಗ ಕೇಳುಗ ಪಡೆದಿದ್ದರು ಎಂದು ಕವಿರಾಜಮಾರ್ಗದಲ್ಲಿ ಹೇಳಲಾಗಿದೆ. ಹಾಗೆಯೇ

” ಚದುರರ್ ನಿಜದಿಂ ಕುರಿತೋ
ದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್”

ಲೋಕ ರೂಢಿಯಿಂದ ಕಲಿತ ಕುರಿತೋದದವರು ಸಹ ನಿಜವಾದ ಜಾಣ್ಮೆಯ ಚತುರರು ಆಗಿ ಕಾವ್ಯ ಪ್ರಯೋಗ ಮತಿಗಳು ಸಹ ಆಗಿರುವ ಸಾಧ್ಯತೆ ಇದೆ. ಅದು ದೇಸಿ ಜನಪದ ಕಾವ್ಯದ ಕುರಿತು ಹೇಳಿದ ಮಾತುಗಳಾಗಿವೆ. ಹಾಗೆ ಹಳ್ಳಿಗಳಲ್ಲಿ ಪ್ರಯೋಗವಾಗುತ್ತಿದ್ದ ಶಿಷ್ಟ ಕಾವ್ಯಗಳ ಗಮಕ – ವಾಚನ – ವಿಶ್ಲೇಷಣೆ – ಕಂಠಸ್ಥ ಮೌಖಿಕ ಸಂಪ್ರದಾಯವೂ ಅಕ್ಷರ ಕಲಿಯದ ಶ್ರಮಣ ಸಂಸ್ಕೃತಿಯ ಜನಪದರಿಂದ ಜನಪದರಿಗೋಸ್ಕರ ಪ್ರಯೋಗವಾದ ನಾಟಕ ಪರಂಪರೆಯನ್ನು ಬೆಳೆಸಿದೆ. ಯಕ್ಷಗಾನ ಇದಕ್ಕೆ ಹೊರತಲ್ಲ. ಎಷ್ಟೋ ಪ್ರಾಚೀನ ಕಾವ್ಯಗಳ ಕಾವ್ಯದ ಯಥಾವತ್ಭಾಗಗಳು ಯಕ್ಷಗಾನ ಮೇಳವಾಗಿರುವುದನ್ನು ಗಮನಿಸಬಹುದು.
ಆದರೆ, ಅಭಿನವ ಗುಪ್ತ ಹೇಳುವಂತೆ ಕವಿಗೆ ಇದ್ದ ಮನಸ್ಥಿತಿ ಸಹೃದಯನಿಗೂ ಇರಬೇಕಾದರೆ ಅವನಿಗೂ ಸಹ ಕವಿಯಷ್ಟೇ ಶಿಕ್ಷಣ ಇರಬೇಕಾಗುತ್ತದೆ. ಇನ್ನು ಕೆಲವು ಕವಿಗಳು ತಮ್ಮ ಕಾವ್ಯ ಎಂತವರಿಗೆ ಎಂದು ಸಹ ಹೇಳಿಕೊಂಡಿರುವ ಉದಾಹರಣೆಗಳು ಭಾರತೀಯ ಗ್ರಂಥ ಸಂಸ್ಕೃತಿ ಸಂಪಾದನೆಯಲ್ಲಿ ದಾಖಲಾಗಿವೆ. ನಿರಕ್ಷರ ಕುಕ್ಷಿಗಳಿಂದ ಹೊರತಾದ ಪಂಡಿತ ಆಸ್ಥಾನ ಕವಿಗಳು, ರಾಜ ಮಹಾರಾಜರು, ಸಾಮಂತರು, ಶ್ರೀಮಂತ ಜನರು, ವಿದ್ವಾಂಸರ ಪ್ರಜಾಮಂಡಳಿಗೆ ತಮ್ಮ ಕಾವ್ಯ ಹೇಳತಕ್ಕ ಕೇಳತಕ್ಕ ಕೃತಿಗಳು ಎಂದು ಹೇಳಿಕೊಂಡಿರುವ ಸಾಧ್ಯತೆಗಳನ್ನು ಗಮನಿಸಬಹುದು. ವಾಚನಕ್ಕೆ ಯೋಗ್ಯವಾದ ವಾಚಕರು, ಪಾಠಕರು, ಶೃತಿಕಾರರು, ಇದ್ದರೆಂಬುದು ಸಹ ಇದರಿಂದ ಧೃಢವಾದ ಮಾತೇ ಆಗಿದೆ. ಇಲ್ಲಿ ವಾಚಿಸುವ ಅಂದರೆ ಕವಿ ಕಾವ್ಯವನ್ನು ಓದುವ, ಹಾಡುವ, ವಿಶ್ಲೇಷಣೆ, ವ್ಯಾಖ್ಯಾನ ಮಾಡುವ ಗಮಕ ವಾಚನ ಕಲೆಗಳು ಶಿಕ್ಷಣ ವರ್ಗದ ಕುರಿತಂತೆ ಪ್ರಾಚೀನರು ಹೇಳುವ ಕಾವ್ಯದ ಕ್ರಮಗಳನ್ನು ಅನುಲಕ್ಷಿಸಿದರೆ

“ಅರಸಿಕೇಷು ಕವಿತ್ವನಿವೇದನಂ
ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ”

ಇಲ್ಲಿ ನಿರೂಪಣೆಯಾಗುವ, ನಿವೇದನೆಯಾಗುವ, ಅರ್ಪಿಸುವ ಸಾಧ್ಯಗಳಿದ್ದಂತೆ ಅರಸಿಕರೆಂದರೆ ಕಾವ್ಯವನ್ನು ಆಸ್ವಾದಿಸದ ಕೇಳದ ಕುಕವಿಗಳ ಮುಂದೆ ಅರಸಿಕರ ಮುಂದೆ ತಾನು ಕವಿತೆಯನೊಪ್ಪಿಸುವದನೊಂದು ಬರೆಯದಿರು ಬರೆಯದಿರು ಬರೆಯದಿರು ಶಿರದಿ ಎಂದು ಸವಿನಯದಿಂದ ವಿನಮ್ರ ಮಾಡಿದ ಬಗೆಯೊಂದು ಕಾಣಬಹುದು. ಅರ್ಥವಾಗದವರ ಮುಂದೆ ಅದರ ಜ್ಞಾನ ಇಲ್ಲದವರ ಮುಂದೆ ಕವಿತೆಯನ್ನಿಡುವುದು ಬರೆಯುವುದು ನನ್ನ ಹಣೆಯಲ್ಲಿ ಬರೆಯದಿರು ಭಗವಂತ ಎಂಬ ಮಾತುಗಳನ್ನು ಕಾಣಬಹುದು.

ಕವಿಯಾದವನ ಕಾವ್ಯವನ್ನು ಓದುವ ಇಂಟಲೆಕ್ಚುವಲ್ ಆದ ವಾಚಕ ವರ್ಗ, ವಿಮರ್ಶಿಸುವ ವಿಮರ್ಶಕ ವರ್ಗ, ವಿಶ್ಲೇಷಿಸುವ ವಿಶ್ಲೇಷಕ ವರ್ಗ ಹೇಗಿರಬೇಕೆಂದು ರನ್ನ ತನ್ನ ಕಾವ್ಯದ ಮಹತ್ತಿನ ಬಗ್ಗೆ ತಾನೆ ಹೇಳಿಕೊಂಡು ಸಹೃದಯ ವಿಮರ್ಶಕರನ್ನು ಅಸಡ್ಡೆಯಿಂದ ಕಾಣುವ ಒಂದು ಸಣ್ಣತನದ ಅಹಂ ಪರಿಪಾಠವನ್ನು ಕಾಣಬಹುದು.

” ರತ್ನ ಪರೀಕ್ಷಕನಾಂ ಕೃತಿರತ್ನ ಪರೀಕ್ಷಕನೆಂದು ರನ್ನನ ಕೃತಿ ರತ್ನಮುಮಂ ಪೇಳ್ ಪರೀಕ್ಷಿಪಂಗೆಟೆರ್ದೆಯೇ?”

ತನ್ನ ಕೃತಿ ರತ್ನವನ್ನು ಪರೀಕ್ಷೆ ಮಾಡುವವನಿಗೆ, ಪ್ರಶ್ನಿಸುವವನಿಗೆ ಎಂಟೆದೆ ಇರಬೇಕು. ತಾನು ಸರಸ್ವತಿಯ ರತ್ನ ಭಂಡಾರದ ಮುದ್ರೆಯೊಡೆದ ಕವಿ ಎಂದು ತನ್ನನ್ನು ತಾನೇ ಹೊಗಳಿಕೊಂಡರೆ ನಿಜವಾಗಿಯು ಪಂಪನ ಕಾವ್ಯದ ಮುಂದೆ ನಾಟಕೀಯವಾದ ಪ್ರಪಂಚ ತೆರೆಯುವ ರನ್ನ ಸೋಲುತ್ತಾನೆ. ಆದರೆ ಪಂಪನಷ್ಟು ಸಮೃದ್ಧವಲ್ಲದ ಜೀವನ ರನ್ನ ಕವಿಯದು. ಅವನು ತನ್ನ ಕಾವ್ಯದ ಕುರಿತು ಹೇಳಿಕೊಳ್ಳಲೇ ಬೇಕಾದ ಅನಿವಾರ್ತೆ ಸ್ವಾಭಿಮಾನ ಇದೆ. ಆತನಿಗಿದ್ದ ಲೌಕಿಕ ಬಡತನ ಹಲವರಾದಿಯಾಗಿ ಆತನಿಗೆ ಕಾವ್ಯ ರಚನೆಗೆ ಜೀವನಕ್ಕೆ ಸಹಾಯ ಮಾಡಿರುವರು. ಹಾಗಾಗಿ ಅಂತಹ ಸ್ವಾಭಿಮಾನ ಸಾತ್ವಿಕ ಕೋಪ ರನ್ನನಿಗಿದೆ. ಪಂಪನಿಗಾದರೋ ಅರಿಕೇಸರಿಯ ಆಸ್ಥಾನ ಕವಿಯೆಂದು ಪರಿಗಣಿಸುವಷ್ಟು ಗೌರವ ಅಭಿಮಾನ ಸಕಲ ಭೋಗ ಭಾಗ್ಯಗಳು ಇದ್ದವು.

‘ ಇನಿಯ ಕವಿತೆ ಪಂಪನ ಕವಿತೇ’ , “ಪುದಿದಿರೆ ರಾಗಮರ್ಕೆಪೊಸವೇಟದಲಂಪುಗಳೆಲ್ಲಮೋದಿದರ್ಗಿದರನುಯಾಯಿಗಳ್ಗೆ ಸೆವುದಾರ ಗುಣಂ ಸಕಳಾವನೀಶ್ವರರ್ಗದಟಿನಳುರ್ಕೆ ಭೃತ್ಯ ನಿವಹಕ್ಕೆ ಚದುರ್ ಗಣಿಕಾ ಜನಕ್ಕೆ ಕುಂದದೆ ನೆಲಸಿರ್ಕಯೀ ಮಹಿತಳಕ್ಕೆ ಮದೀಯ ಕೃತಿಪ್ರಬಂಧದಿಂ”,

“ಭಾರತಮಾದಿಪುರಾಣಮುಮೀಗಳೊಂದಳಂಕೃತಿಯವೊಲಿರ್ದುವು ‘, ವರ್ಣಕಂ ಕತೆಯೊಳೊಡಂಬಡಂಪಡೆಯೆ… ಪೇಳಲೊಡರ್ಚಿದೆನೀ ಪ್ರಬಂಧಂ”

“ಮೃದು ಪದಗತಿಯಿಂ ರಸಭಾವದ ಪೆರ್ಚಿಂ ಪಣ್ಯವನಿತೆಯೊಲ್ ಕೃತಿ ಸೌಂದರ್ಯದ ಚಾತುರ್ಯದ ಕಣಿಯಿನೆ ವಿದಗ್ಧಬುಧಜನಮನ್ ಅಲೆಯಲೆವೇಡಾ, ಕಿವಿಯಂ ಬಗೆವುಗುವೊಡೆ ಕೊಂಕುವೆತ್ತ ಪೊಸನುಡಿಯೆ ಪುಗುಗುಂ…”

“ಮೃಧುಮಧುರವಚನರಚನೆಯೊಳ್
ಉದಾತ್ತಂ ಅರ್ಥಪ್ರತೀತಿಯಂ ಕೇಳ್ವ ಜನಕ್ಕಿದಿರೊಳ್ ಕುಡದಂದದು… ಕವಿಯ ಮನದೊಳಿರ್ದಂತೆವಲಂ.”

” ಬಗೆ ಪೊಸತಪ್ಪುದಾಗಿ ಮೃದುಬಂಧದೊಳೆಂದುವುದು ಒಂದಿ ದೇಸಿಯೊಳ್
ಪುಗುವುದು ಪೊಕ್ಕ ಮಾರ್ಗದೊಳೆ ತಳ್ವದು ತಳ್ತೊಡೆ ಕಾವ್ಯಬಂಧಮೊಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ಪೊಳೆಯಿಂ ಬರಲ್ದು ತುಂಬಿಗಳಿನೆ ತುಂಬಿ ಕೋಗಿಲೆ ಬಗ್ಗಿಸೆ ಸುಗ್ಗಿಯೊಳೂಪ್ಪುವಂತೆವೋಲ್”

” ಆ ಸಕಳಾರ್ಥ ಸಂಯುತಮಳಂಕೃತಿಯುಕ್ತಮುದಾತ್ತ (ವೃತ್ತಿ) ವಿನ್ಯಾಸಮನೇಕ ಲಕ್ಷಣಗುಣಪ್ರಭವಂ ಮೃದುಪಾದಮಾದ ವಾಕ್ಛ್ರೀ ಸುಭಗಂ ಕಳಾಕಳಿತಮೆಂಬ ನೆಗಳ್ತೆಯನಾಳ್ದ ಕಬ್ಬಮಂ ಕೂಸುಮನೀವುದೀವುದರಿಕೇಸರಿಗಲ್ಲದವಸ್ತುಗೀವುದೇ “

” ಕವಿಗಳ ನಾಮಧಾರಕ ನರಧಿಪರೋಳಿಯೊಳೀತನೊಳ್ಳಿದಂ ಕವಿ ನೃಪನೀತನೊಳ್ಳಿದನೆನಲ್ ದೊರೆಯಲ್ತು ನೆಗಳ್ತೆವೆತ್ತ ಸತ್ಕವಿಗಳ ಷೋಡಶಾವನಿಪರೋಳಿಯೊಳಂ ಕವಿತಾಗುಣಾರ್ಣವಂ ಕವಿತೆಯೊಳೆಗ್ಗಳಂ ಗುಣದೊಳಗ್ಗಳಮೆಲ್ಲಿಯುಮೀ ಗುಣಾರ್ಣವಂ “

” ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾರತಮನಪೂರ್ವಮಾಗೆ ಸೇಲೆ ಪೇಳ್ದ ಕವೀಶ್ವರರಿಲ್ಲ ವರ್ಣಕಂ ಕತೆಯೊಳೊಡಂಬಡಂ ಪಡೆಯೆ ಪೋಳ್ವೊಡೆ ಪಂಪನೆ ಪೇಳ್ಗುಮೆಂದು ಪಂಡಿತರೆ ತಗುಳ್ದು ಬಿಚ್ಚಳೆಸೆ ಪೇರಲೊಡರ್ಚಿದೆನೀ ಪ್ರಬಂಧಂ “

” ಲಲಿತಪದಂ ಪ್ರಸನ್ನ ಕವಿತಾಗುಣಮಿಲ್ಲದೆ ಪೂಣ್ದು ಪೇಳ್ದ ಬೆಳ್ಗಳ ಕೃತಿಬಂಧಮುಂ ಬರೆಪಕಾರರ ಕೈಗಳ ಕೇಡು ನುಣ್ಣನಪ್ಪಳಕದ ಕೇಡು ಪೇಳಿಸಿದೊಡರ್ಥದ ಕೇಡೆನೆ ಪೇಳ್ದು ಬೀಗಿ ಪೊಟ್ಟಳಿಸಿ ನೆಗಳ್ತೆಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೇ “

” ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿ ವ್ಯಾಸನೆ ನೆಂಬ ಗರ್ವಮೆನಗಿಲ್ಲ ಗುಣಾರ್ಣವನೊಳ್ಪು “

ಎಂಬ ಎಲ್ಲಾ ಮಾತುಗಳು ಆತನ ವಿಚಾರದಲ್ಲಿ ವಿಧಿತವಾದ ಕಾವ್ಯ ಉನ್ನತಿಯ ಅಂಶಗಳೇ ಆಗಿವೆ. ಎಂಬುದು ಪಂಪನ ಕುರಿತು ಡಾ.ಶಾಂತಿನಾಥ ದಿಬ್ಬದ ಅವರ ಪಂಪ ಒಂದು ಸಾಂಸ್ಕೃತಿಕ ಅಧ್ಯಯನ ಪ್ರಬಂಧದಲ್ಲಿ ಸ್ಪಷ್ಟಪಡಿಸಿದ್ದಾರೆ.

ರನ್ನನಿಗೆ ಅಂತಹ ಸೌಲಭ್ಯಗಳು ಇರಲಿಲ್ಲ ಅತ್ತಿಮಬ್ಬೆ ಚಾವುಂಡರಾಯ ಮೊದಲಾದವರ ಸಹಾಯವನ್ನು ನೆನೆದಿರುವ ಬಗೆ ಇದನ್ನು ಸ್ಪಷ್ಟ ಪಡಿಸುತ್ತದೆ. ಆಕಾಲದಲ್ಲೂ ಸೃತಿಕಾರರು ಟೀಕೆ ಟಿಪ್ಪಣಿ ಮಾಡುವ ಕುಕವಿಗಳು, ನಿಂದಕರು ಇದ್ದರು. ಅಂತವರ ಬಗ್ಗೆಯೆ ಈ ಅಸಹನೆ ಎಂದು ಪರಿಗಣಿಸಬೇಕು. ಉಳಿದಂತೆ ಅವರವರ ಪ್ರತಿಭೆ ಪಾಂಡಿತ್ಯಗಳ ಸಾಮರ್ಥ್ಯ ಸಿದ್ಧಿ ಅವರವರಿಗೆ ಧಕ್ಕಿರುವ ಭಾಗ್ಯ ಎಂದು ಹೇಳಬಹುದು. ಕವಿಗಳ ಅಗ್ಗಳಿಕೆಗಳನ್ನು ಹೇಳುತ್ತಾ ಓಲೆ ಕಂಠ ಪಿಡಿದ ಬಳಪಗಳಿಂದಲೂ, ತಾಡೋಲೆ ಹಸ್ತಪ್ರತಿ ಗರಿಗಳಿಂದಲೂ ಹೇಳಿದ ಹಲವು ಮಾತುಗಳಿವೆ.

” ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ
ಮುಟ್ಟುಗೆ ಮುಟ್ಟದಿರ್ಕೆ ನಭಮಂ ಹರನಂ ನರನೊತ್ತಿ ಗಂಟಲಂ
ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ್ ಕವಿಬಂಧದೊಳಲ್ತೆ ಕಟ್ಟಿದರ್
ಮುಟ್ಟಿದರಿಕ್ಕಿ ಮೆಟ್ಟಿದರಿದೇನಳವಗ್ಗಳಮೋ ಕವೀಂದ್ರರಾ”
ಎಂದು ನೇಮಿಚಂದ್ರ ಲೀಲಾವತಿ ಪ್ರಬಂಧದಲ್ಲಿ ಕವಿಗಳ ಕಲ್ಪನೆಯ ಶಕ್ತಿ ಎಂತಹದು ಎಂದು ಅತಿಶಯವಾಗಿ ಹೇಳಿದ್ದಾನೆ.

” ಕಟ್ಟಿಯುಮೇನೋ ಮಾಲೆಗಾರನು ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೆ” ಎಂದು ಜನ್ನ ಕವಿಯು ಸಹೃದಯರ ಅಗತ್ಯತೆ ಮತ್ತು ಅನಿವಾರ್ಯತೆಗಳ ಕುರಿತು ಕಾವ್ಯಕ್ಕೆ ಬೇಕಾಗಿರುವ ಗುಣವಂತರ ಬಗ್ಗೆ ಹೇಳುತ್ತಾನೆ. ತನ್ನ ಕೃತಿಯನ್ನು ಆದರಿಸುವ ಪಾರಂಭರಿಸುವವರಿಲ್ಲದಿದ್ದರೆ ಕವಿಯ ಉತ್ಸಾಹ ಕುಗ್ಗಬಹುದು. ಹಾಗಾಗಿ ಕವಿ ಕಾವ್ಯವೆಂಬ ಹೂಮಾಲೆಯನ್ನು ಮುಡಿಯುವ ಸಹೃದಯ ಭೋಗಿಗಳು ಇರಬೇಕಾದ ಮಹತ್ವವನ್ನು ಮನಗಂಡಿರುವನು.

” ಎರೆಯ ವಂಕಿಯೊ ಕಳಿತ ಮೆಕ್ಕೆಯೊ
ಹುರಿಯ ಬರೆಯೋ ರಾಗ ಸನ್ನೆಯೊ
ಸರಿಯ ಗೊರೆಯೋ ಠಕ್ಕಿನುಂಡೆಯೊ ಸವಿಯ ಚಿತ್ರಕವೊ
ಅರಸನಂಕೆಯ ಮನದ ಬಯಕೆಯ
ಹೊರೆಯ ಬಳಕೆಯನೀ ಸಮಂಜಸ
ತರದ ಸಾತ್ತ್ವಿಕರೆತ್ತ ಬಲ್ಲರು ಭೂಪ ಕೇಳೆಂದ” ಎಂದು ಕನ್ನಡ ಭಾರತ ಗದುಗಿನ ಭಾರತವನ್ನು ಬರೆದ ಕುಮಾರವ್ಯಾಸ ಅಥವಾ ನಾರಾಣಪ್ಪನ ಅತಿಶಯೋಕ್ತಿಯಾಗಿದೆ. ಹಾಗೆ ಅವನು ಬರೆದ ಕಾವ್ಯ ಯಾರಿಗೆ ಮತ್ತು ಏನೆಲ್ಲಾ ಪ್ರಯೋಜನ ಮಾಡಿದೆ ಎಂದರೇ

” ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋ
ಗೀಶ್ವರರ ತತ್ವ ವಿಚಾರ ಮಂತ್ರಿ ಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕ್ಕೆ
ಗುರುವಾಗಲು ರಚಿಸಿದ ಕುಮಾರವ್ಯಾಸ ಭಾರತವನು ” ಎಂಬ ಸಾಲುಗಳು ಕನ್ನಡ ಭಾರತದ ಎಲ್ಲಾ ಸಾಧ್ಯತೆಗಳ ಪ್ರಯೋಜನವನ್ನು ಹೇಳಿವೆ.

” ಇನಿಯಳ ಸೋಂಕಿನಂತೆ ಪೊಸಮಾವಿನ ಜೊಂಪಿನಂತೆ
ನನೆಯೇರಿದ ಮಲ್ಲಿಗೆಯಂತೆ ಪೂರ್ಣಚಂ
ದ್ರವ ಸಿರಿಯಂತೆ ಬಂದೆಸೆವ ತೆಂಕಣ ಗಾಳಿಯಂತೆ
ಮನವನ್ ಇರ್ಕುಳಿಗೊಳ್ವುದು ಸಜ್ಜನರ್ಕಳಾ” ಎಂದು ರುದ್ರಭಟ್ಟ ಕಾವ್ಯ ಮತ್ತು ಸಜ್ಜನ ಸಹೃದಯರ ರಸಾನುಭವದ ಕುರಿತು ಹೇಳಿರುವುದನ್ನು ಗಮನಿಸಬಹುದು.

“ರಸಜೀವ ಭಾವವೊಡಲರ್ಥವವಯವ ಶಬ್ದ
ವಿರಸವೇ ನುಡಿಯಲಂಕಾರವೇ ತೊಡಿಗೆಯು ತ
ವೆಸುಲಕ್ಷಣವೆ ಲಕ್ಷಣ ವಿಮಳ ಪದ ವಿನ್ಯಾಸ ನಡೆ ರೀತಿ ಸುಕುಮಾರತೆ
ರಸಿಕತನ ಸುಳಿ ಸುಖಂ ನಿಳಯವಂತಪ್ಪಯೀ
ಪೊಸಕಾವ್ಯಕನ್ಯಕೆಯನು ಪಡೆದು ಪಂಪಾಂಬಿಕೆಯ
ರಸ ವಿರೂಪಾಕ್ಷಂಗೆ ಕೊಟ್ಟ ಹಂಪೆಯ ರಾಘವಂಕನೇ ಕೃತಕೃತ್ಯನೋ ” ಎಂದು ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯ ಎಂಬ ಅದ್ಭುತವಾದ ಕರುಣಶೋಕ ರಸಗಳ ಉನ್ಮಾದ ತುಡಿವ ಹಂಬಲವ ಹೆಚ್ಚಿಸುವ ಕಾವ್ಯವನ್ನು ದರ್ಶನ ಕಾವ್ಯದಂತೆ ಬರೆದದ್ದು ಸಹ ಒಂದು ಬಹಳ ದೊಡ್ಡ ನಿದರ್ಶನ.

” ಹೊತ್ತು ಹೋಗದೆ ಪುಂಡರಾಲಿಪ
ಮತ್ತಮತಿಗಳ ಗೋಷ್ಠಿಯಲ್ಲಿದು ” ಎಂದು ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿ ಹೇಳಿರುವನು.

“‘ವರ ವರ್ಣದಿಂದೆ ಶೋಭಿತಮಾಗಿ ರೂಪ
ಸ್ತರದಿಂದೆ ಚೆಲ್ವಾಗಿ ಮಧುರತರ ನವರಸೋ
ದರ ಭರಿತದಿಂದೆ ವಿಲಸಿತಮಾಗಿ ಸುಮನೋನುರಾಗದಿಂ
ನಿರುತ ಮಂಜುಳ ಶಬ್ದದಿಂದೆ ಕಿವಿಗಿಂಪಾಗಿ
ಚರಿಸುವ ಸುಲಲಿತ ಷಟ್ಪದಿಗಳೆಡೆಬಿಡದೆ ಝೇಂ
ಕರಿಸದಿರ್ಪುವೆ ಬಂದು ನೆರೆದ ವಿದ್ವತ್ಸಾಭಾನೀರೇರುಹಾಕರದೊಳು ” ಎಂದು ಷಟ್ಪದಿಗಳ ಮಹತ್ವವನ್ನು ಲಕ್ಷ್ಮೀಶ ಕವಿ ವಿದ್ವತ್ ಸಭೆಯಲ್ಲಿ ಮಂಡಿಸಿದಂತೆ ಬಹಳ ರಮ್ಯವಾಗಿ ಹೇಳುತ್ತಾನೆ.

“ದರ್ಶನಧ್ವನಿ ರಸಾಮೃತಪಾನದಾನಂದದಿಂ
ಲೋಕಶೋಕವನಳಿಸಿ ಭುವನತ್ರಯಂಗಳಂ
ತಣಿಪ ನಂದನ ತಪೋದೀಕ್ಷೆಯಂ ಕೊಂಡೆಸೆವ
ರಸಋಷಿಗೆ ಯೋಗಮತಿಗೆ ಸಹೃದಯ ವಿಭೂತಿಗೆ ನಮೋ “

ಎಂದು ಆಧುನಿಕ ರಾಷ್ಟ್ರ ಕವಿ ಕುವೆಂಪು ಶ್ರೀರಾಮಾಯಣಂದರ್ಶನಂ ಮಹಾಕಾವ್ಯದಲ್ಲಿ ಕವಿ ಆದವನಿಗೆ, ಯೋಗಿ ಆದವನಿಗೆ, ಸಹೃದಯನಿಗೆ ವಿಭೂತಿಗಳಿಗೆ ನಮನಗಳನ್ನು ಹೇಳಿರುವ ರಸದಾರ್ಶನಿಕತೆಯನ್ನು ಗಮನಿಸಬಹುದು. ಹಾಗೆ ಆವೇಶದಲ್ಲಿ ಬರೆದ ಕವಿತೆಯೊಂದು ಗಮನಿಸಿ

” ನೀನೇರ ಬಲ್ಲೆಯಾ ನಾನೇರುವೆತ್ತರಕೆ
ನೀ ಹಾರಬಲ್ಲೆಯಾ ನಾ ಹಾರುವೆಗಲಕ್ಕೆ
ನೀ ಮುಳುಗಬಲ್ಲೆಯಾ ನಾ ಮುಳುಗುವಾಳಕ್ಕೆ?
ಇಲ್ಲ? ನಡೆ, ದೂರ ಸರಿ! ಹೌದು? ಬಾ, ಹತ್ತಿರಕೆ.”

ಎಂಬ ಮೂಲಭೂತ ಪ್ರಶ್ನೆಯನ್ನು ಸಹೃದಯರನ್ನು ಕುರಿತು ಆಡಿದ ಸಾಲುಗಳೆ ಆಗಿವೆ. ಕವಿಯ ಹೃದಯಕ್ಕೆ ಅದೇ ಜ್ಞಾನದಿಂದ ನಿಕಟವಾದ ಹತ್ತಿರದ ಸಂಬಂಧವಿದ್ದಾಗಲೇ ಕವಿ ಕಾವ್ಯ ಸಾಕ್ಷಾತ್ಕಾರ ಸಾಧ್ಯ. ಕವಿಯ ಎತ್ತರ ಭಿತ್ತರ, ಅರಿವಿನ ಆಳ ಅಗಲ, ಮುಳುಗುವ ಏಳುವ ತೇಲುವ ಎಲ್ಲಾ ಸಾಮರ್ಥ್ಯಗಳು ಸಹೃದಯನಿಗೆ ಇರಬೇಕಾದ ಲಕ್ಷಣಗಳನ್ನು ಹೇಳುತ್ತದೆ. ಪ್ರಕೃತಿಯಲ್ಲಿನ ನವಚೈತನ್ಯದ ಹದ್ದಿನ ಶಕ್ತಿಯನ್ನು ಕುರಿತ ಆಯಾಮಗಳು ಕಾವ್ಯ ಸಹೃದಯನಿಗೆ ಇರಬೇಕು. ಅಲ್ಲದೆ, ವೈಜ್ಞಾನಿಕವಾದ ಅನ್ವೇಷಣೆಗಳನ್ನು ಕುರಿತದದ್ದು ಆಗಿರುವುದು ವಿಶೇಷ. ವಿಮಾನ ಹಕ್ಕಿಯಂತೆ ಎತ್ತರಕ್ಕೆ ಏರಬಲ್ಲದು ಆಕಾಶದ ಅಗಲಕ್ಕೆ ಹಾರಬಲ್ಲದು, ನೀರಿನಲ್ಲಿ ನೌಕೆಗಳು ಹಾಯಬಹುದು. ಮೀನು ತಿಮಿಂಗಿಲಗಳಂತೆ ಈಜಬಹುದು. ಈ ಎಲ್ಲಾ ಪ್ರಕ್ರಿಯೆ ಹದ್ದಿಗೆ ಮಾತ್ರ ಸಾಧ್ಯ. ಅದರ ದೃಷ್ಟಿ ಅಷ್ಟು ತೀಷ್ಣವಾಗಿರುತ್ತದೆ. ಅಂತಹ ಕವಿಯ ಅರಿವಿನ ದ್ರಾಷ್ಟ್ರತೆಯ ಜೊತೆಗಿನ ಬಾಂದವ್ಯ ಸಹೃದಯನಿಗಿರಬೇಕು ಎಂಬ ಕಳಕಳಿ ಈ ಕವಿತೆಯಲ್ಲಿ ವ್ಯಕ್ತವಾಗಿದೆ. ಹಾಗೆ ಛೇಡಿಸಿ ಮತ್ತೊಮ್ಮೆ ಹತ್ತಿರ ಕರೆವ ಗುಣಗ್ರಾಹಕತೆ ಕವಿಯ ಅಂತಃಕರಣದಕ್ಕೆ ಇರುತ್ತದೆ. ಯಾಕೆಂದರೆ ಕಾವ್ಯ ಎಂಬುದು ಸಹೃದಯರ ಟಂಕಸಾಲೆಯಲ್ಲಿ ಉಜ್ಜೀವನಗೊಂಡು ತನ್ನ ಕಾವ್ಯ ಕಾಣ್ಕೆಯನ್ನು ಅರಿಯುವ ಉದ್ದೇಶದಿಂದ ಸಹೃದಯರು ಸಫಲರಾದ ಬಗೆಯನ್ನು ಕವಿ ಎಂದಿಗೂ ಮರೆಯುವುದಿಲ್ಲ. ” ಕೃತಿಯ ಪರಿಚಯ, ಪರಿಶ್ರಮವಿರುವವರು ಯಾರಾದರೂ ಅದನ್ನು ಕುರಿತು ಸಹೃದಯತೆಯಿಂದ ಅದರ ಸೊಗಸನ್ನು ಆಸ್ವಾದಿಸಿ, ವಿವೇಚಿಸಿ ನಮಗಾಗಿ ವ್ಯಾಖ್ಯಾನಿಸಿದಾಗ ನಮಗೆ ಕೃತಿಯ ಬಗೆಗೆ ಕುತೂಹಲವೂ, ಕೃತಿಯ ಗುಣಾವಗುಣಗಳ ಪರಿಚಯವೂ ಆಗುತ್ತದೆ.

ಈ ನಿದರ್ಶನದಿಂದ ಮೂರು ಅಂಶಗಳು ಸ್ಪಷ್ಟವಾಗುತ್ತವೆ. ಒಂದು ನಿರ್ಮಿತವಾದ ಕಲಾಕೃತಿ; ಕಲಾಕೃತಿಯ ಸೊಗಸನ್ನು ಸಹೃದಯರಿಗೆ ಪರಿಚಯ ಮಾಡಿಕೊಡಲು ನಿಂತ ನಿರ್ದೇಶಕ ಅಥವಾ ವಿಮರ್ಶಕ; ಮೂರು ವಿಮರ್ಶಕನ ಮುಖಾಂತರ ರಸಾಸ್ವಾದಕ್ಕೆ ಒಪ್ಪಿಕೊಂಡ ಸಹೃದಯ.” ಎಂದು ಜಿ.ಎಸ್. ಶಿವರುದ್ರಪ್ಪನವರ ಅಭಿಪ್ರಾಯವಾಗಿದೆ. ಇಲ್ಲಿ ಕವಿಯ ಕಲಾಕೃತಿಗೆ ಸಹೃದಯನ ಅಗತ್ಯತೆ ಬಹುವಾದದ್ದು. ಸಹೃದಯ ಅದನ್ನು ಓದಿ ವಸ್ತುನಿಷ್ಠವಾಗಿ ಅದರಲ್ಲಿನ ಸೌಷ್ಠವ ಸಮಗ್ರ ಅಂಶಗಳನ್ನು ಪರಿಚಯ ಮಾಡುವ ಹಂತಕ್ಕೆ ಬೆಳೆದರೆ ಅವನು ಉತ್ತಮ ವಿಮರ್ಶಕನಾಗುತ್ತಾನೆ. ಇನ್ನು ವಿಮರ್ಶೆಯನ್ನು ಓದದೆ ನೇರವಾಗಿ ಕೃತಿ ಓದುವ ಸಹೃದಯರು ಯಾವ ವಿಮರ್ಶಕರ ಮರ್ಜಿ, ಶಿಫಾರಸ್ಸಿಗೂ ಕಾಯುವುದಿಲ್ಲ. ಅವರು ಪ್ರತಿಕ್ರಿಯೆ ನೀಡುವುದು ಇಲ್ಲ. ಬದಲಾಗಿ ಕೃತಿಯ ಪ್ರಯೋಜನಗಳ ಕುರಿತು ರಾಸಾಸ್ವಾದನೆ ಹೊಂದಿ ಆನಂದಾನೂಭೂತಿ ಹೊಂದುವ ಸ್ಥಿತಿಯುಳ್ಳವರು ಸಹೃದಯರು. ಅವರು ಕೃತಿಯ ಬಗ್ಗೆ ಚಕಾರವನ್ನು ಎತ್ತುವುದಿಲ್ಲ. ಅಧ್ಯಾಹಾರ ಮಾಡಿಕೊಳ್ಳುವರು. ಅಲ್ಲಿ ರಸಗಳ ಅವೇದನೆ ಪ್ರಮುಖವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಓದುಗರ ಓದುವ ಅಭಿರುಚಿ ಹೆಚ್ಚಿಸಲು ಪುಸ್ತಕ ಮೇಳಗಳು, ಪುಸ್ತಕ ಮಳಿಗೆಗಳು, ಪುಸ್ತಕಗಳ ಮುದ್ರಣ ಪ್ರಕಾಶನ ಸಂಸ್ಥೆಗಳು, ಪುಸ್ತಕ ಅಂಗಡಿಗಳು, ಪುಸ್ತಕ ಸಂತೆಗಳು, Book fire ಗಳು ಸಜ್ಜಾಗಿವೆ. ಕವಿ – ಸಹೃದಯ – ವಿಮರ್ಶಕ ಸಾಹಿತ್ಯ ಲೋಕದ ಮುಕ್ಕಣನಾದರೂ ಕವಿ ಕೃತಿಗಳಿಲ್ಲದೆ ಯಾವ ವಿಮರ್ಶೆಯನ್ನು ಮಾಡಲಾರನು. ಸಾಹಿತ್ಯ ವಿಮರ್ಶೆಯೆ ಸಾಹಿತ್ಯವಾಗಿರುವ ಪರಂಪರೆ ಹತ್ತೋಂಬತ್ತನೆ ಶತಮಾನದ ಇಚೇಗೆ ಬೆಳೆದ ಒಂದು ಅಕಾಡೆಮಿಕ್ ಆದ ಬೆಳವಣಿಗೆಯಾಗಿದೆ. ತರಗತಿ ಮತ್ತು ತರಗತಿಗಳಾಚೆಗಿನ ಪಠ್ಯ ಕೇಂದ್ರೀತ ವಿಮರ್ಶೆ ಬೆಳೆದು ಹೆಸರಿಸುವಂತ ವಿಮರ್ಶೆಯ ಕೃತಿಗಳು ಬೆಳೆದವು. ವಿಮರ್ಶಕರ ತಂಡವು ಬೆಳೆದಿದೆ.

ಇದು ಸಾಹಿತ್ಯದ ಬೈ ಪ್ರಾಡೆಕ್ಟ್ ಆದ ನೆಲೆಯಲ್ಲಿ ರೂಪುಗೊಂಡ ಅಧ್ಯಯನ ಶಿಸ್ತು.ಕೃತಿಯ ಪುನರ್ ಸೃಷ್ಟಿ ಕಾರ್ಯ. ಈ ಸಹೃದಯನು ಕೃತಿಗಳನ್ನು ಓದುವುದು ಅದರ ಕುರಿತು ಚರ್ಚಿಸುವುದು, ಬರೆಯುವುದು, ವಾಚಿಸುವುದು ಈ ಎಲ್ಲಾ ವರ್ತುಳದೊಳಗೆ ಆಧುನಿಕವಾದ ವಾಚಕ ಸಂವೇದನೆ, ವಾಚಕ ಪ್ರತಿಕ್ರಿಯೆ, ವಾಚಕಾಭಿಮುಖ ವಿಮರ್ಶೆ Readrs Response ಸಾಹಿತ್ಯ ಸಿದ್ಧಾಂತವಾಗಿ ಬೆಳೆದಿದೆ. ವಿಮರ್ಶೆಯು ಸಹೃದಯ ಓದುಗರ ಅಭಿರುಚಿಯನ್ನು ಹೆಚ್ಚು ಮಾಡುವ ಸಲುವಾಗಿಯೇ ಹುಟ್ಟಿಕೊಂಡು ಶಿಕ್ಷಿತವರ್ಗದ ಕಣ್ಣು ತೆರೆಸಿದೆ. ಆಧುನಿಕ ಕಾದಂಬರಿಗಳು, ಕಥೆಗಳು, ಕವಿತೆಗಳು ಬರಹದ ವಸ್ತು ನಿಷ್ಠ ಅಭ್ಯಾಸವನ್ನು ಹೆಚ್ಚಿಸಿದಂತೆ ಅದಕ್ಕೆ ಪ್ರತಿಕ್ರಿಯೆ ನೀಡುವ ಸಹೃದಯ ವಿಮರ್ಶಕರ ತಂಡವನ್ನು ನಿರ್ಮಿಸಿತು. ಈ ಹಿನ್ನೆಲೆಯಲ್ಲಿ ಪೌರ್ವಾತ್ಯ ಪಾಶ್ಚಿಮಾತ್ಯ ಪರಿಕಲ್ಪನೆಗಳ ಸಂಸ್ಕೃತಿಯ ಪ್ರಭಾವ ದಟ್ಟವಾಗಿ ಕಾಣಬಹುದು. ಸಿದ್ಧಾಂತಗಳ ಸೈದ್ಧಾಂತಿಕ ನಿಲುವುಗಳನ್ನು ಸಹ ಕಾಣಬಹುದು. ಸಾಹಿತ್ಯ ವಿಮರ್ಶೆಯು ಸಾಹಿತ್ಯ ಕೃತಿಯಷ್ಟೆ ಮಹತ್ವ ಪಡೆದು ಅಧ್ಯಯನ ಶಿಸ್ತಾಗಿ ಪರಿಣಮಿಸಿದ ಕಾಲಘಟ್ಟದಲ್ಲಿ ನಾವಿದ್ದೇವೆ. ವಸಾಹತ್ತುಶಾಹಿ ಕಾಲಘಟ್ಟದಲ್ಲಿ ಚಾರಿತ್ರಿಕ ಘಟನೆಗಳು, ಸನ್ನಿವೇಶಗಳು ಸೃಜನಶೀಲ ಸಾಹಿತ್ಯ ಮತ್ತು ವಿಮರ್ಶಾ ಕೃತಿಗಳಿಗೆ ಒಂದು ಆಧುನಿಕವಾದ ನೆಲೆ ಬೆಲೆಯನ್ನು ಒದಗಿಸಿಕೊಟ್ಟವು. ಪಠ್ಯ ಕೇಂದ್ರಿತ ನೆಲೆಯಲ್ಲಿ ಭಿನ್ನ ಭಿನ್ನ ಮನಸ್ಥಿತಿಯ, ಭಿನ್ನ ಭಿನ್ನ ಸಂಸ್ಕೃತಿಯ, ಭಿನ್ನ ಭಿನ್ನ ಅಭಿರುಚಿಯ ಸಹೃದಯ ಓದುಗರು ನಿರೀಕ್ಷಿಸುವ ಸಾಹಿತ್ಯ ಕೃತಿಯೊಳಗಿನ ಭಿನ್ನ ಆಲೋಚನೆಯ ಗ್ರಹಿಕೆಗಳು, ನಿರೂಪಣೆ, ಭಾಷೆಯ ಬಿಗಿ, ಬಂಧ, ಶೈಲಿ, ಪಾತ್ರ ಪೋಷಣೆಗಳು ತೆರೆದುಕೊಳ್ಳುವ ಅರ್ಥವಲಯಗಳನ್ನು ಅವಲೋಕಿಸುವ ವಿಶಿಷ್ಟ ಸಂವೇದನೆಯನ್ನು ಬೆಳೆಸುವುದು.

ಈ ಆಲೋಚನೆಯ ಕ್ರಮಗಳ ಕೃತಿ ಸಂವೇದನೆಗಳು ಓದುಗರಲ್ಲಿ ಉಂಟುಮಾಡುವ ಪರಿಣಾಮವನ್ನು ಕುರಿತು ಸಹೃದಯ ವಿಮರ್ಶೆ ಕೆಲಸ ಮಾಡುತ್ತದೆ. ಅದು ಐ.ಎ. ರಿಚರ್ಡ್ಸ್ ನ ಪ್ರಾಯೋಗಿಕ ವಿಮರ್ಶೆಯ ಹಿನ್ನೆಲೆಯಲ್ಲಿ ಬೆಳೆಯಿತು. ಓದುವಿಕೆಯ ಅನುಭವದಿಂದಲೇ ರೂಪುಗೊಂಡ ಶೈಕ್ಷಣಿಕ ವಲಯದ ವಿಮರ್ಶಕರು ವಿಮರ್ಶೆಯನ್ನು ಬೋಧಿಸುವ ಹಂತಕ್ಕೆ ಒಯ್ಯುದರು. ಅದು ಪಠ್ಯವೆಂದು ಪರಿಗಣಿತವಾಗಿ ಬೆಳೆದಿರುವುದನ್ನು ಕಾಣಬಹುದು. ಈ ವಿಮರ್ಶೆಯ ಮಾನದಂಡಗಳಲ್ಲಿ ಓದುಗಗನ್ನು ಸಹ ಬಹಳ ಮಹತ್ವದಿಂದ ಕಾಣಲಾಗಿದೆ. ಸೂಚಿತ ಓದುಗ Emplied Reader , ಆದರ್ಶ ಓದುಗ Actual Reader, ಮಾದರಿ ಓದುಗ Model Reader, ಸಂವೃತ್ತ ಓದುಗ Open Reader, ವ್ಯಾವೃತ್ತ ಓದುಗ Close Reader ಎಂಬ ಓದುಗರ ವರ್ಗವನ್ನು ನಿರ್ದೇಶಿಸುವರು. ಪಠ್ಯವನ್ನು ಓದುವ ಆಲೋಚನೆಯ ಕ್ರಮಗಳಿಂದ ಈ ಎಲ್ಲಾ ಬಗೆಯ ಓದುಗರ ಚರಿತ್ರೆಯು ವಿವಿಧ ಕ್ರಮವಾಗಿದೆ. ಸಂರಚನೆ ವಾದ, ನಿರಚನ ವಾದ ಎಲ್ಲವೂ ರೂಪುಗೊಂಡಿದೆ ಎನ್ನಬಹುದು. ಓದುವ ಅಭಿರುಚಿಯ ಹಿನ್ನೆಲೆಯಲ್ಲಿ ಇವೆಲ್ಲಾ ರೂಪುಗೊಂಡ ಶಾಖೆಗಳು ಎನ್ನಬಹುದು. ವಿಶ್ವವಿದ್ಯಾನಿಲಗಳ ಮಟ್ಟದಲ್ಲಿ ಪ್ರವಾಚಕರು Reader ಎಂಬ ಹುದ್ದೆಯು ಇತ್ತು. ಅವರು ಅಕಾಡೆಮಿಕ್ ಐಕಾನಿಕ್ ಸಾಹಿತ್ಯ ಪಠ್ಯಗಳನ್ನು ಓದುವುದು ಮತ್ತು ವಿಮರ್ಶಿಸುವುದು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಹಲವು ನಿಬಂಧಗಳ – ಪ್ರಬಂಧಗಳ ರಚನೆಗೆ ಪ್ರೋತ್ಸಾಹಿಸುವುದು ಹಾಗೂ ಸಂಶೋಧನೆ ವಿಮರ್ಶೆಯ ಶಾಖೆಯಾಗಿ ಬೆಳೆಸುವ ಕೆಲಸವನ್ನು ಮಾಡುತ್ತಾರೆ. ಫಿಲಾಸಫಿ ಎಂಬ ಶಾಖೆ ಡಾಕ್ಟರೇಟ್ ಪದವಿ ನೀಡುವ ಕ್ರಮವಿದೆ. ಎಲ್ಲವೂ ಶಿಕ್ಷಣದ ಓದು ಮತ್ತು ಬಾಹ್ಯದ ಜನಸಂಸ್ಕೃತಿಯ ಓದಿನಿಂದ ರೂಪುಗೊಂಡ ಪ್ರಯೋಜನಗಳು ಇವು.

ಡೇರಿಡಾ Reconstruction And OF Gramatalagy, ಡೇವಿಡ್ ಬ್ಲೀಚ್ Subjective Criticism , ಸ್ಟ್ಯಾನ್ಲಿ ಫಿಶ್ ಕರಿ Surprised by sin, The Reader in Pardise Lost and The Experience of Seventeen Century Literature, ರೋಮನ್ ಇನ್ ಗಾರ್ಡೇನ್ The literatare work of airt, ಜೊನಾಥನ್ ಕಲರ್ ಪ್ರೆಂಚ್ ಸಂರಚನಾವಾದಿ Structuralist Poetics And The Pursuit of Sings, ವುಲ್ಫಾಗಾಂಗ್ ಇಶರ್ ಫೆಮಿನಿಸ್ಟ್ The Implied Reader And The act of Reading A Theory of Aesthetic Response, ರೊಲಾನ್ ಬಾರ್ಥೆ ನ S/Z, ನಾರ್ಮನ್ ಹೋಲಾಡ್ The Dynamics of Literary Respanse, Five Readrs Reading, ಎಡ್ವರ್ಡ್ ಸೈದ್ ಓರಿಯಂಟಲಿಸಂ ಮೊದಲಾದವರ ಕೃತಿಗಳ ಆಲೋಚನೆಯ ವಿಚಾರಗಳು ಓದುಗ – ಸಹೃದಯನ ಬಗ್ಗೆ ವಿವೇಚನೆ ಮಾಡಿವೆ. ಇವು ಸಾಹಿತ್ಯ ವಲಯಕ್ಕೆ ಅಷ್ಟೇ ಸೀಮಿತವಾಗದೆ ಮಾನವ ಶಾಸ್ತ್ರ, ಭಾಷಾಶಾಸ್ತ್ರ, ಸಮಾಜಶಾಸ್ತ್ರ ಮೊದಲಾದ ಶಿಸ್ತುಗಳೊಂದಿಗೆ ಅಂತರ ಶಿಸ್ತೀಯ ಜ್ಞಾನ ಕ್ರಮವನ್ನು ಪೋಷಿಸಿವೆ.

ದೇಶ – ಕಾಲ – ಅಂತರ – ಸಂಸ್ಕೃತಿ – ಯ ಪ್ರವಾಹದಲ್ಲಿ ವಿಭಿನ್ನ ದೃಷ್ಟಿಕೋನಗಳನ್ನು ಬೆಳೆಸಿವೆ. ಮಾರ್ಕ್ಸ್ ವಾದಿ ಪರಿಕಲ್ಪನೆಗಳಲ್ಲಿ ಓದಿನ ವಿಷಯದ ವ್ಯಾಪ್ತಿ ಅದು ಯಾವ ರೀತಿಯ ಕಾರ್ಯಕಾರಣವನ್ನು ಅವಲಂಭಿಸಿದೆ ಎಂಬ ಇನೊಂದು ಪದದೊಂದಿಗೆ ನಿರ್ದೇಶನವಾಗುತ್ತದೆ. ನಿದರ್ಶನಕ್ಕೆ ಓದಿನ ಆನಂದ, ಓದಿನ ಸ್ವಾತಂತ್ರ್ಯ, ಓದಿನ ಅಭಿವ್ಯಕ್ತಿ, ಓದಿನ ಪರಿಣಾಮ, ಓದು ಮತ್ತು ಸಂಘಟನೆ, ಓದು ಮತ್ತು ಹೋರಾಟ, ಓದು ಮತ್ತು ವಿಮುಕ್ತಿ, ಓದು ಮತ್ತು ಸಾಮಾಜಿಕತೆ, ಓದು ಮತ್ತು ಪೂರ್ವಗ್ರಹಿಕೆ, ಓದು ಮತ್ತು ತಿಳುವಳಿಕೆ, ಓದು ಮತ್ತು ಶಿಕ್ಷಣ, ಓದು ಮತ್ತು ಅಧ್ಯಾಪನ, ಓದು ಮತ್ತು ಸಂಶೋಧನೆ, ಓದು ಮತ್ತು ಸಂಸ್ಕೃತಿ, ಓದು ಮತ್ತು ಪರಂಪರೆ, ಓದು ಮತ್ತು ಸಾಮಾಜಿಕ ವಿಚಾರಗಳ ಉತ್ಪಾದನೆ, ಓದು ಮತ್ತು ಮಾರ್ಕ್ಸ್ ವಾದ , ಓದು ಮತ್ತು ರಚನೆ ಹೀಗೆ ಓದು ಎಂಬುದು ಅನೇಕ ವಸ್ತಾವದ ಪ್ರಚಲಿತ ಘಟನೆ ವಿಚಾರಗಳನ್ನು ಸಹ ಅದು ಒಳಗೊಳ್ಳುತ್ತದೆ. ಓದಿನೊಂದಿಗೆ ನಿಕಟವರ್ತಿಯಾದ ಪದದೊಂದಿಗೆ ಸಂಮಿಳತಗೊಂಡರೆ ಅದರ ಅರ್ಥ ವ್ಯಾಪ್ತಿ ಬೇರೆ ಬೇರೆ ಹೊಳಹುಗಳನ್ನು ಆಯಾಯಾ ಗಳನ್ನು ಒಳಗೊಳ್ಳುತ್ತದೆ. ಪ್ರಸ್ತುತ ಓದುಗಳು ಜಗತ್ತಿನಲ್ಲಿ ಏನು ನಡೆಯುತ್ತಿದೆ ಮತ್ತು ಯಾವ ವಿಪ್ಲವಗಳು ಸಂಭವಿಸಿವೆ ಎಂಬ ಗ್ರಾಂಥಿಕ ಸ್ವರೂಪದ ಓದಿನಿಂದ ಇಡಿದು ಪತ್ರಿಕೋದ್ಯಮದ ವಾರ್ತಾ ಪತ್ರಿಕೆ ಓದಿನವರೆಗೂ ಅದರ ವ್ಯಾಪ್ತಿ ಹರಡಿಕೊಂಡಿದೆ. ಆಧುನಿಕ ಕಾಲದಲ್ಲಿ ಪುಸ್ತಕ ಓದುವ ಸಮಯದ ಕಲ್ಪನೆ, ಕೆಲಸದ ಓತ್ತಡ, ಓದಿದ್ದನ್ನು ಅರ್ಥೈಸಿಕೊಳ್ಳುವ ವಿವೇಕ, ಯಾವ ಬಗೆಯ ಕೃತಿಗಳ ಓದು ಮುಖ್ಯ, ಸಾಹಿತ್ಯ ಪ್ರಕಾರಗಳಲ್ಲಿ ಧೀರ್ಘ ಸಮಯದ ಓದಿನ ಕಾದಂಬರಿ, ತಾಸುಗಟ್ಟಲೆಯ ಕತೆ, ನಿಮಿಷಗಳ ಲಘು ಪ್ರಬಂಧ, ಪ್ರಾಕ್ಷನ್ ನಿಮಿಷದ ಕವಿತೆ, ಪ್ರಾಕ್ಷನ್ ಸೆಕೆಂಡಿನ ಚುಟುಕು,

ಹೈಕು , ಸುಭಾಷಿತ ಕಂಡ ತಕ್ಷಣ ಕಣ್ಣಿಗೆ ಬಿದ್ದ ಅಕ್ಷರಗಳಿಂದ ಕೂಡಿದ ಸಾರವತ್ತತ್ತೆ ಸಮೀಕರಿಸಿದ ಜ್ಞಾನವನ್ನು ಓದುವ ಸಮಯದ ಅಭಾವದ ಸಹೃದಯ ಓದುಗರನ್ನು ಸಹ ಕಾಣಬಹುದು. ಓದು ಎನ್ನುವುದು ಗ್ರಾಂಥಿಕ ಸ್ವರೂಪದ ಪುಸ್ತಕ ಎಂದೇ ಪರಿಗಣಿಸಬೇಕಾಗಿಲ್ಲ. ಇಂದಿನ ಜಾಗತಿಕ ಯುಗದಲ್ಲಿ ಕೆಲಸ ಮಾಡುವ ಕಂಪ್ಯೂಟರ್, ಮೊಬೈಲ್, ವೆಬ್ ಸೈಟಗಳು, ಜಾಲಾತಾಣಗಳು, ಈ – ಪತ್ರಿಕೆಗಳು, ನಿಯತಕಾಲಿಕೆಗಳು, ಪಾಕ್ಷಿಕಗಳು , ಮಾಸಿಕಕಗಳು , ತೈಮಾಸಿಕಗಳು, ಕ್ವಾರ್ಟರ್ ವರದಿಗಳು, ವಾರ್ಷಿಕಗಳು ಸಹ ಸಾಹಿತ್ಯದ ಅಂಶಗಳನ್ನು ಪ್ರಚಾರಗೊಳಿಸಿವೆ. ಇನ್ನು ಪುಸ್ತಕ ಓದಲು ಗ್ರಂಥಾಲಯಕ್ಕೆ ಹೋಗಬೇಕು ಎನ್ನುವಂತಿಲ್ಲ. ಸಿಸ್ಟಮ್ ನಲ್ಲಿ ಅಂತರ್ಜಾಲದಲ್ಲಿ ಕೇಳಿದರೆ ಮಾಹಿತಿ ಕೊಡುವ ಮಾಹಿತಿ ಕಣಜಗಳು, ಪುಸ್ತಕಗಳು ಅಪ್ ಲೋಡ್ ಆಗಿ ಪಿಡಿಎಫ್ ಸಹ ಸಿಕ್ಕಿ ಬಿಡುತ್ತದೆ. ಬಸ್, ರೈಲು, ವಿಮಾನಗಳಲ್ಲೂ ಸುಮ್ಮನೆ ಕೂರುವ ಸಮಯದಲ್ಲಿ ಒಳ್ಳೆಯ ಮತ್ತು ಬೇಕಾದ ಲೇಖಕರ ಪುಸ್ತಕಗಳ ಓದು, ನವೀನ ತಂತ್ರಜ್ಞಾನದಿಂದ ಲಭ್ಯವಿದೆ. ಸಹೃದಯ ಓದುಗನ ಪರಿಶ್ರಮವನ್ನು ಕಡಿಮೆ ಮಾಡಿ ಅವನ ಕೆಲಸದ ಬಿಡುವಿನ ಸಮಯದಲ್ಲೂ ಓದಬಹುದಾದ ಮನಸ್ಸಿಗೆ ಮುದನೀಡುವ, ಹಾಯ್ ಎನ್ನಿಸುವ ಬರಹಗಳನ್ನು ಓದಬಹುದು ಎಂಬಷ್ಟು ಸಾರ್ಥಕ ಪ್ರಪಂಚದಲ್ಲಿ ನಾವಿದ್ದೇವೆ ಎಂದರೆ ಅದು ಧನ್ಯ. ಸಾಹಿತ್ಯ ಕೃತಿಗಳು ಸ್ಕ್ಯಾನ್ ಮಾದರಿಗಳು ಬಂದಿವೆ. ಪುಸ್ತಕಗಳನ್ನು ಸಂರಕ್ಷಿಸುವ ವಿಧಾನವದೂ. ಇವೆಲ್ಲವೂ ನಮ್ಮ ಪರಂಪರೆಯ ಕವಿ – ಸಹೃದಯ – ವಿಮರ್ಶಕ – ಸಹೃದಯ ಅದರ ಜೊತೆಗೆ ತೆರೆಮರೆಯಲ್ಲಿ ಕೆಲಸ ಮಾಡುವ ಗ್ರಂಥ ಸಂಪಾದಕ, ಗ್ರಂಥ ಸಂಪಾದನಾ ಶಾಸ್ತ್ರದ ಶಿಸ್ತು, ಲೇಖಕ – ಪ್ರಕಾಶಕ – ಪುಸ್ತಕೋದ್ಯಮ – ಮಾರಾಟ -ಸಹೃದಯ – ವಿಮರ್ಶಕ ಹೀಗೆ ಸಂಬಂಧಗಳೇರ್ಪಡುತ್ತವೆ. ವಿಶ್ವವಿದ್ಯಾನಿಲಯಗಳಾದರೆ ಅಧ್ಯಯನಾಂಗ – ಪ್ರಸಾರಂಗ – ಸಂಶೋಧನಾಂಗ ಎಂಬ ಶಾಖೆಗಳು ಬೆಳೆದಿರುವುದು ಶೈಕ್ಷಣಿಕ ಓದಿನ ಬಲದಿಂದಲೇ ಎಂದು ಹೇಳಬಹುದು. ಸಹೃದಯ ಓದಿನ ವಿದ್ಯಾರ್ಥಿಗಳಿಂದ ಎಂದು ಪರಿಗಣಿಸಬಹುದು.

ಬಾರಿಸು ಕನ್ನಡ ಡಿಂಡಿಮವ,
ಓಂ ಕರ್ನಾಟಕ ಹೃದಯ ಶಿವ!

ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು;
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು!

ಬಾರಿಸು ಕನ್ನಡ ಡಿಂಡಿಮವ,
ಓಂ ಕರ್ನಾಟಕ ಹೃದಯ ಶಿವ!

ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ ;
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!

ಬಾರಿಸು ಕನ್ನಡ ಡಿಂಡಿಮವ,
ಓಂ ಕರ್ನಾಟಕ ಹೃದಯ ಶಿವ!

ಎಂದು ಕವಿತೆಯನ್ನು ಬರೆದ ಡಾ.ಕುವೆಂಪು ಸತ್ಯಂ – ಶಿವಂ – ಸುಂದರಂ ಎಂಬ ರಸದ ಪರಿಕಲ್ಪನೆಯನ್ನು ಕನ್ನಡ ಡಿಂಡಿಮದ ಹೃದಯ ಶಿವನನ್ನು ಆತ್ಮೀಕರಿಸಿಕೊಂಡು ಹೇಳುವ ಮಾತುಗಳಿವು. ಸತ್ತಂತಿಹರನು ಬಡಿದೆಚ್ಚರಿಸುವ , ಕಚ್ಚಾಡುವವರನ್ನು ಜ್ಞಾನ ಜಿಜ್ಞಾಸೆಯಲ್ಲಿ ಕೂಡಿಸಿ ಒಲಿಸುವ, ಹೊಟ್ಟೆಯ ಕಿಚ್ಚಿಗೆ ಕಣ್ಣೀರು ಸುರಿಸುವ ಎಲ್ಲರನ್ನು ಒಟ್ಟಿಗೆ ಬಾಳುವ ತೆರದಲಿ ಹರಸುವ ರೀತಿಯನ್ನು ಕಾಣಬಹುದು. ಮುಂದುವರಿದು ಶಿವೇತರವಾದ ಯಾವ ಅನ್ಯವೂ ಜ್ಞಾನವಲ್ಲ ಅಂತವುಗಳು ಕೃತಿಗಳಲ್ಲಿ ಕ್ಷಯಿಸಲಿ ಎಂದು ವಿರಚನಾ ವಾದದ ತತ್ವವನ್ನು ಹೇಳುತ್ತಾರೆ. ಮೌಢ್ಯಗಳಿಂದ ಹೊರತಾದ ಮಂಗಳ ಮೂಡಲಿ ಮತಿ ಮತಿಗಳಲ್ಲಿ , ಹಾಗೆ ಕವಿ ಋಷಿ ಸಂತರ ಆದರ್ಶದಲ್ಲಿ ಸರ್ವರಿಗೂ ಸರ್ವೋದಯವಾಗಲಿ ಎನ್ನುತ್ತಾರೆ. ಇಲ್ಲಿ ಹೃದಯ ಶಿವ ಸಹೃದಯ ಶಿವನ ಪರಿಕಲ್ಪನೆ ಬಹಳ ಅದ್ಭುತವಾಗಿದೆ. ಕೃತಿಯೊಂದರ ನಿಜವಾದ ಪ್ರಯೋಜನ ಇದು ಎಂಬುದು ವೇದ್ಯವಾದ ಸಂಗತಿಯಾಗಿದೆ. ” ರಸಾನುಭೂತಿಯೆಂದರೆ ಈಗ ತಿಳಿಯಿತಲ್ಲವೇ! ” ರಸೋವೈಸಃ” – ಅಂದರೆ ರಸವೇ ಆ ಬ್ರಹ್ಮ ಚೈತನ್ಯ. ಆ ಬ್ರಹ್ಮ ಚೈತನ್ಯದಲ್ಲಿಯೇ ಆನಂದವಿದೆ. ವಿಜ್ಞಾನವಿದೆ. ಓಂಕಾರವಿದೆ. ಶಬ್ದವು ಅದರಿಂದಲೇ ಹೊರಡುತ್ತದೆ. ಕವಿ ಅಲ್ಲಿ ಹುಟ್ಟಬೇಕು. ಕವಿ ಅಲ್ಲಿ ಬರೆಯಬೇಕು. ಪಾಠಕನು ಅಲ್ಲಿ ಸ್ನಿಗ್ಧನಾಗಬೇಕು. ಭಾವುಕನು ಅಲ್ಲಿ ರಂಜಿಸಿಬೇಕು. ಇದು ಕಾವ್ಯ ಪರಮಾರ್ಥ” ಎಂದು ತೆಲುಗಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ವಿಶ್ವನಾಥ ಸತ್ಯನಾರಾಯಣ ಅವರ ಅಭಿಪ್ರಾಯವಾಗಿದೆ.

ಅಭಿನವ ಗುಪ್ತನ ಇನೊಂದು ಶ್ಲೋಕವನ್ನು ನೋಡಿ

” ಸ್ಥಾಯೀ ಪ್ರಬುದ್ಧ ಹೃದಯೇ ವ್ಯಭಿಚಾರಿ ಭೂತಃ
ಕಾಮಾಕುಲಾಸು ಜನತಾಸು ಮಹಾನುಭಾವಃ
ಅಂತರ್ವಿಭಾವ ವಿಶೇಷತಃ ರಸಮಾತ್ರ ಮೂರ್ತಿಃ
ಶ್ರೀಮಾನ್ ಪ್ರಸನ್ನ ಹೃದಯೋಸ್ತು ಮಮತ್ರಿನೇತ್ರಃ!

ಇದು ಪ್ರಬುದ್ಧ ಹೃದಯ. ಶಿವಮಯ ಕಲ್ಪನೆಯಾಗಿದೆ. ತ್ರಿನೇತ್ರ ಶಬ್ದದಿಂದ ಜ್ಞಾನ ಉಂಟಾಗುತ್ತದೆ. ಶಿವನೇ ನಿಜವಾದ ಸ್ಥಾಯಿಭಾವ. ಇದೊಂದು ರಸವೆಂದು ಭಾವಿಸಿದರೆ ಶಿವನೆಂಬ ಸ್ಥಾಯಿಭಾವಕ್ಕೆ ರತಿ ಉತ್ಸಾಹ ಶೋಕ ಕ್ರೋಧಾದಿಗಳು ಸ್ಥಾಯಿ ಭಾವಗಳಾದರೆ ಅವು ವಿಭಾವಾನುಭಾವಗಳಿಂದ ಸಮೃದ್ಧಿ ಪಡೆದು ರಸಗಳ ಪರಿಕಲ್ಪನೆಗಳಾಗುತ್ತವೆ. ಅದರ ಅಂತಿಮ ಸ್ವರೂಪ ಆನಂದ. ಇವೆಲ್ಲವೂ ದರ್ಶನ ಮೀಮಾಂಸೆಯ ಸಾಕ್ಷತ್ ಶಿವನ ಪ್ರಮೇಯಗಳು. ಇಲ್ಲಿ ಶಿವನು ಮಹಾನುಭಾವನಾಗಿದ್ದಾನೆ. ರಸಮೂರ್ತಿಯಾಗಿದ್ದಾನೆ. ಶಿವೆಯೊಂದಿಗೆ ಇದ್ದಾನೆ. ಕಾಮಾಕುಲನಾಗಿದ್ದಾನೆ. ಇಲ್ಲಿ” ರಸ್ಯತೇ ಆ ಸ್ವಾದ್ಯತೇ ” ಆಗಿ ಕಂಡುಬರುತ್ತಿದ್ದಾನೆ. ತ್ರೀಣಯ ನೇತ್ರನಾಗಿ ಧರ್ಮಾರ್ಥ ಕಾಮ ಮೋಕ್ಷದ ಜಿಜ್ಞಾಸೆಯಲ್ಲಿ ಕಂಡಿದ್ದಾನೆ. ಇವೆಲ್ಲಾ ಭಾವಗಳಿಂದ ಪುರಿಪುಷ್ಟಿಯಾದ ಶಿವನು ಸಂತುಷ್ಟನಾದ ನನ್ನ ಹೃದಯಕ್ಕೆ ಪ್ರಸನ್ನ ಹೃದಯನಾಗಲಿ. ಜೀವ ಚೈತನ್ಯವನ್ನು ತುಂಬಲಿ ಇದು ಆನಂದ ತುಲ್ಯನಾದ ಸಹೃದಯನ ತುಷ್ಟಿಗುಣವಾಗಿದೆ. ಇದು ಹೃದಯದ ಪ್ರಬುದ್ಧತೆಯಾಗಿದೆ. ಇದು ಚಿತ್ತ ವೃತ್ತಿಯಾಗಿದೆ.
ಓಂ ಸಚ್ಚಿದಾನಂದ ತ್ರಿದ್ವಮುಖವಾದ ಪರಬ್ರಹ್ಮದಲ್ಲಿ ಎಂಬಂತೆ ಇದರ ಸಾಕ್ಷಾತ್ಕಾರ.

ಸಂತೋಷ್ ಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x