ತಲೆ ಭಾರ , ಸುಡುವ ಮೈ ಎದ್ದುಕೂರಲೂ ಆಗದಷ್ಟು ಸುಸ್ತು ಪುಟ್ಟಿಯ ದಿನ ಶುರುವಾಗಿದ್ದೆ ಬೇರೆ ರೀತಿ ಇಂದು. ಕಷ್ಟಪಟ್ಟು ಕಣ್ಣು ತೆರೆದು ನೋಡಿದಾಗ ಹೊರಗೆ ಬಿಸಿಲು ಮೈ ಚಾಚಿತ್ತು. ಮನೆಯಲ್ಲಿ ಎಂದೂ ಇರದ ನಿಶಬ್ದ ಕಸಿವಿಸಿ ತಂದಿತು ಪುಟ್ಟಿಯ ಮನಸ್ಸಿಗೆ. ಹತ್ತು ಜನರು ಸದಾ ಸುತ್ತಾಡೋ ಮನೆಯಲ್ಲಿ ಈ ತರದ ಸ್ತಬ್ಧತೆ, ಶಾಂತಿ ಅರ್ಥವೇ ಆಗಲಿಲ್ಲ ಅವಳಿಗೆ. ಇವತ್ತೇನಾದರೂ ರವಿವಾರವೇ? ಅಮ್ಮ ಕಿವಿ ತೂತಾಗುವಷ್ಟು ಕಿರಿಚಿ ಬೆನ್ನಿಗೆ ಎರಡು ಕೊಟ್ಟು ಎಬ್ಬಿಸಿರಲಿಲ್ಲ ಅಂದ್ರೆ ಇದು ಖಂಡಿತ ಭಾನುವಾರ!
ಆದರೆ ಅದು ಹೇಗೆ ಸಾಧ್ಯ ನಿನ್ನೆನೇ ಇತ್ತಲ್ಲ ಭಾನುವಾರ? ಎಲ್ಲರೂ ಸೇರಿ ಬಬ್ರುವಾಹನ ಸಿನಿಮಾ ನೋಡಲು ಹೋಗಿದ್ದು ನಿನ್ನೆಯೇ, ತನ್ನ ಪ್ರೀತಿಯ ಸೋಮುಕಾಕನ ಜೊತೆ ಹತ್ತು ಹನ್ನೊಂದು ಮಕ್ಕಳೆಲ್ಲ ಸೇರಿ ಹೋದದ್ದು, ಅಲ್ಲಿ ಕಾಕನ ಪಕ್ಕ ಕುಳಿತುಕೊಳ್ಳುವರು ಯಾರು ಅನ್ನೋದಕ್ಕೆ ಒಂದು ದೊಡ್ಡ ರಂಪವೇ ಆಗಿ ಕೊನೆಗೆ ಎಲ್ಲರಿಗಿಂತ ಚಿಕ್ಕವನಾದ ಶಶಿ ಮತ್ತು ಕಾಕನ ಮುದ್ದಿನ ಮಗಳಾದ ತಾನು ಎಡಬಲದಲ್ಲಿ ಕುಳಿತು ಸಿನಿಮಾ ಮುಗಿಯುವವರೆಗೂ ಪ್ರಶ್ನೆಗಳ ಮಳೆ ಸುರಿಸಿ ಕೊನೆಗೆ ಎಂದೂ ಸಿಟ್ಟಾಗದ ಸೋಮುಕಾಕಾ ಗದರಿದ್ದು ನೆನಪಾಯಿತು.
ಸಿನಿಮಾ ಮುಗಿಸಿ ಬರುವಾಗ ಕೋಪದಿಂದ ಕೆನ್ನೆ ಉಬ್ಬಿಸಿದ್ದ ಪುಟ್ಟಿಯ ಮನಸ್ಸು ಅರಳಿಸಲು ಲಂಚವಾಗಿ ಬಣ್ಣ ಬಣ್ಣದ ಗೋಲಾ ಕೊಡೆಸಿದ್ದ ಕಾಕಾ. ಉಳಿದ ಮಕ್ಕಳು ಪುಟ್ಟಿಯ ಕೋಪದಿಂದ ಲಾಭ ಪಡೆದಿದ್ದಾಯ್ತು. ರಾತ್ರಿ ಮನೆಗೆ ಬಂದು ಊಟ ಮಾಡಿ ಮಲಗಿದರೂ ಎಲ್ಲರಿಗೂ ಬಬ್ರುವಾಹನ ಚಿತ್ರದ ಹಾಡುಗಳು ಕಿವೀಲಿ ಕೊರೀತಾ ಇದ್ದವು.
ಸೋಮುಕಾಕಾ ಡಾ|| ರಾಜಕುಮಾರ್ ಅವರ ಮಹಾ ಅಭಿಮಾನಿ, ಅವರ ಯಾವುದೇ ಸಿನಿಮಾ ಬಂದರೂ ಕಾಕಾ ನೋಡಲೇಬೇಕು. ಅದರಲ್ಲೂ ಮೊದಲ ದಿನ ಮೊದಲ ಆಟ. ಸಿನಿಮಾ ಮುಗಿದು ಮನೆಗೆ ಬಂದ ಮೇಲೆ ಸಿನಿಮಾ ಕಥೆ ಮಕ್ಕಳಿಗೆ ಹೇಳುತ್ತಿದ್ದ ರೀತಿ ಅತ್ಯದ್ಭುತ. ಮೂರು ಗಂಟೆಗಳ ಸಿನಿಮಾ ಕಥೆ ಮೂರು ದಿನಗಳಾದರೂ ಮುಗಿಯುತ್ತಲೇ ಇರಲಿಲ್ಲ. ಚಿತ್ರದ ಸಂಭಾಷಣೆ, ಹಾಡುಗಳ ಜೊತೆಗೆ ವಿಶೇಷವಾದ ತನ್ನದೇ ಟಿಪ್ಪಣಿಗಳನ್ನು ಸೇರಿಸಿ ಹೇಳುತ್ತಿದ್ದರೆ ಮನೆಯ ಮಕ್ಕಳೊಂದಿಗೆ ನೆರೆಹೊರೆ ಹುಡುಗರೂ ಬಂದು ಮನೆ ಹೊರಗಿನ ಅಂಗಳ, ಕೂಡುಕಟ್ಟೆ ಕೇಳುಗರಿಂದ ತುಂಬಿ ತುಳುಕುತ್ತಿತ್ತು. ಪುಟ್ಟಿಗೆ ಮಾತ್ರ ವಿಶೇಷ ಆಸನ ಕಾಕಾನ ಮಡಿಲು. ಕೆಲಸಾರಿ ಶಶಿ ಅವಳನ್ನು ಕೆಳಗೆಳೆದು ಅಪ್ಪನ ತೊಡೆ ಏರಿದಾಗ ಪುಟ್ಟಿಯ ಕಣ್ಣುಗಳಿಂದ ಕೃಷ್ಣೆ ಕಾವೇರಿಯರೇ ಹರಿದು ಕೊನೆಗೆ ಶಶಿ ಸೋಲೊಪ್ಪಿಕೊಂಡು ಆಸನ ಬಿಟ್ಟುಕೊಡುತ್ತಿದ್ದ.
ಕೂಡು ಕುಟುಂಬದ ಹತ್ತು ಮಕ್ಕಳಲ್ಲಿ ಪುಟ್ಟಿ ಒಬ್ಬಳೇ ಹುಡುಗಿ ಹಾಗಾಗಿ ಅವಳೇ ಮನೆಗೆ ಮಹಾರಾಣಿ, ಅವಳ ಅಮ್ಮನನ್ನ ಬಿಟ್ರೆ ಬೇರಾರೂ ಅವಳನ್ನು ದಂಡಿಸಿದ್ದೇ ಇಲ್ಲ. ಈ ದೃಶ್ಯ ಎಂದಾದರೂ ಕಾಕಾ ನೋಡಿದ್ದಾದರೆ ಅತ್ತಿಗೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ತನ್ನ ಸೈಕಲ್ ಮೇಲೆ ಪುಟ್ಟಿಯನ್ನು ಕೂರಿಸಿಕೊಂಡು ಬಣ್ಣ ಬಣ್ಣದ ಬಳೆ ಹಾಗೂ ರಿಬ್ಬನ್ ಕೊಡಿಸಿಕೊಂಡು ಬಂದು ಸಮಾಧಾನಪಡಿಸುತ್ತಿದ್ದ.
ಎಷ್ಟೋ ಸಾರಿ ಅಮ್ಮ ಪುಟ್ಟಿಗೆ ಬೆದರಿಕೆ ಹಾಕಿದ್ದೂ ಉಂಟು, ಚಿಕ್ಕಮ್ಮನ ಹೊಟ್ಟೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ನಿನ್ನ ಪಟ್ಟ ಹೋಗುತ್ತೆ ಅಂತ. ಅಂದಿನಿಂದ ಪುಟ್ಟಿ ದೇವರಲ್ಲಿ ಕೇಳುತ್ತಾ ಇದ್ದಿದ್ದು ಒಂದೇ, ನನಗೆ ಇನ್ನೂ ಒಬ್ಬ ಚಿಕ್ಕ ತಮ್ಮನನ್ನೇ ಕೊಡು ಅಂತ.
ನಿನ್ನೆ ರಾತ್ರಿ ಸಹ ಇದಕ್ಕಿಂತ ಬೇರೇನೂ ಆಗಿರಲಿಲ್ಲ.
ಮಕ್ಕಳೇ ಕಾಕಾನ ಜೊತೆಗೆ ಸಿನಿಮಾ ನೋಡಿ ಬಂದರೂ ಇನ್ನೂ ಅದರ ಕಥೆ ಕೇಳವ ಅಗತ್ಯ ಏನು? ಅಂತ ಉಳಿದ ಹಿರಿಯರ ಪ್ರಶ್ನೆ. ಅಮ್ಮಂದಿರ ಸಮಸ್ಯೆ ನಾಳೆ ಬೆಳಗ್ಗೆ ಸೋಮವಾರ, ಶಾಲೆಗೆ ಮಕ್ಕಳನ್ನು ಬಡಿದೆಬ್ಬಿಸಬೇಕು. ಅಂಥದರಲ್ಲಿ ಈ ಕಥೆಯ ಮೋಡಿಯಿಂದ ಹೇಗೆ ಮಕ್ಕಳನ್ನ ಬಿಡಿಸಿ ಮಲಗಲು ಎಳೆದು ಒಯ್ಯಬೇಕು? ಅನ್ನೋದು. ಕೊನೆಗೆ ಅಣ್ಣಂದಿರು ಸನ್ನೆ ಮಾಡಿ ಸೂಚಿಸಿದಾಗ ಕಾಕಾ ಮಕ್ಕಳಿಗೆ ಮುಂದಿನ ಭಾನುವಾರ ಗೋಳಗುಮ್ಮಟಕ್ಕೆ ಪಿಕ್ನಿಕ್ ಹೋಗುವಾಸೆ ತೋರಿಸಿ ಒಳಗೋಡಿಸಿದನು. ಮಡಿಲಲ್ಲೇ ನಿದ್ರೆಗೆ ಜಾರಿದ್ದ ಪುಟ್ಟಿಯನ್ನ ಮೆತ್ತಗೆ ಎತ್ತಿಕೊಂಡು ಮಂಚದ ಮೇಲೆ ಮಲಗಿಸಿ ತಾನು ಮಹಡಿಯ ಮೇಲಿನ ಕೋಣೆಗೆ ಮಲಗಲು ಹೋದನು.
ಹಿಂದಿನ ದಿನದ ಈ ಎಲ್ಲ ಘಟನೆಗಳು ಚೆನ್ನಾಗಿ ನೆನಪಿಗೆ ಬಂದಾಗ ಪುಟ್ಟಿಗೆ ಗೊಂದಲವಾಯಿತು. ಇಂದು ಸೋಮವಾರ ಹಾಗಾದ್ರೆ ತಾನು ಇನ್ನೂ ಹಾಸಿಗೆಯಲ್ಲೇ ಏಕೆ ಇದ್ದೇನೆ? ಉಳಿದ ಮಕ್ಕಳು ಎಲ್ಲಿ? ಅಮ್ಮ, ದೊಡ್ಡಡಮ್ಮ ,ಚಿಕ್ಕಮ್ಮರ ಹರಟೆ ಧ್ವನಿ ಸಹ ಕೇಳ್ತಾ ಇಲ್ಲ. ಎಲ್ಲರೂ ತನ್ನನ್ನು ಬಿಟ್ಟು ಯಾವುದಾದರೂ ಸಿನಿಮಾ ನೋಡಲು ಹೋದ್ರಾ? ಅನಿಸಿದ್ದೇ ತಡ ಅವಳ ಸ್ವರ ಜೋರಾಯಿತು. ಕೆಲ ನಿಮಿಷಗಳಾದರೂ ಯಾರೂ ಬರದಿದ್ದಕ್ಕೆ, ಮೇಘ ಮಲ್ಹಾರ ರಾಗ ಶುರುವಾಗಿ ಕಣ್ಣೀರಿನ ಮಳೆ ಹರಿಯ ತೊಡಗಿತ್ತು. ಆಗಲೂ ಸಹ ಯಾರ ಸುಳಿವು ಇರದೇ ಭಯ ಆವರಿಸತೊಡಗಿದಾಗ ನಿಧಾನವಾಗಿ ಎದ್ದು ಒಂದೊಂದೇ ಹೆಜ್ಜೆ ಇಡುತ್ತಾ ಕೋಣೆಯಿಂದ ಆಚೆ ಬಂದಳು. ಮನೆ ಎಲ್ಲಾ ಸುತ್ತಾಡಿದರೂ ಯಾರೂ ಕಾಣದೆ ಹೊರಬಾಗಿಲಿಗೆ ಬಂದಾಗ ಕಟ್ಟೆ ಮೇಲೆ ಬುಟ್ಟಿ ಇಟ್ಟುಕೊಂಡು ಮೊರದಲ್ಲಿ ಜೋಳ ಹಸನು ಮಾಡುತ್ತಿದ್ದ ಪಾರ್ವತಿ ಆಯಿ ಕಂಡಾಗ ಎದೆ ಬಡಿತ ಕಡಿಮೆಯಾಗಿ ಓಡುತ್ತಲೇ ಹೋಗಿ ಆಯಿಯನ್ನು ತಬ್ಬಿಕೊಂಡಳು ಪುಟ್ಟಿ. ಅವಳ ಕೈಗಳನ್ನು ಹಿಡಿದು ತೊಡೆಯ ಮೇಲೆ ಕೂರಿಸಿಕೊಂಡು ಪಾರ್ವತಿ ಆಯಿ ಸೆರಗಿನಿಂದ ಅವಳ ಕಣ್ಣು ಮೂಗುಗಳಿಂದ ಇಳಿದ ಧಾರೆಗಳನ್ನು ಒರೆಸಿ, ಸುಡುವ ಹಣೆಯನ್ನು ಮುಟ್ಟಿ “ಅಯ್ಯೋ ನನ್ನ ಬಂಗಾರ ಮೈ ಎಲ್ಲಾ ಸುಡಾಕ ಹತ್ಯದ, ಚಂದನ ಮಾರಿ ಸುಟ್ಟು ಬದನೆಕಾಯಿ ಕಂಡಂಗ್ ಕಾಣಾಕತ್ತದ. ಯಾರ ನೆದರ ಹತ್ತತೋ ಏನೋ? ಮನ್ಯಾನವರೆಲ್ಲ ದವಾಖಾನಿ ಹೋಗ್ಯಾರ ಮುಂಜಾನಿ ನಿಮ್ಮ ಕಾಕಾಗ ಹೆಣ್ಣುಮಗು ಹುಟ್ಯದಲ್ಲ ಆ ಕೂಸಿನ ನೋಡಾಕಂತ ಹತ್ತೂ ಮಂದಿ ಸೇರಿ ಹೋಗ್ಯಾರ್ ನೋಡು. ರಾತ್ರಿ ನಿನ್ನ ಮೈ ಬೆಚ್ಚಿಗಿತ್ತಂತ ನಿಮ್ಮವ್ವ ನಿನ್ನ ಸಾಲಿಗೆ ಕಳಸಾಕ ಬ್ಯಾಡ ಅಂದ್ಲು.
ಇನ್ನೇನು ಬಂದೇ ಬಿಡ್ತಾರೆ. ಅಲ್ಲಿ ತನಕ ನಿನ್ನ ಮುಖ ತೊಳೆದು ತಿನ್ನಾಕ ಏನರೆ ಕೊಡ್ತೀನಿ ಬಾ. ಹೊಟ್ಟಿ ಹಸಿದಿರಬೇಕಲ್ಲ ನನ್ನವ್ವ ನಿನಗ?” ಅಂತ ಹೇಳ್ತಾ ಕೈ ಕಾಲು ಸವರಿದಾಗ ಪುಟ್ಟಿ ಮನಸ್ಸು ಹಗುರಾಯಿತು.
“ಆಯಿ ನನಗೆ ಬಿಸಿ ಮುಟಗಿ ಮಾಡಿ ಕೊಡು”. ಅಂತ ಪುಟ್ಟಿ ಹೇಳಿದ್ದೆ ತಡ ಪಾರ್ವತಿ ಆಯಿ ಜೋಳ ತುಂಬಿದ ಮರ, ಬುಟ್ಟಿ ಎಲ್ಲಾ ಕಟ್ಟೆ ಮೇಲೆ ಎಸೆದು, “ಬಾ ನನ್ನ ಕೂಸ ನಿನಗ ಭಾಳಷ್ಟು ಬಿಸಿತುಪ್ಪ, ಬಳ್ಳೊಳ್ಳಿ ಹಾಕಿ, ದಪ್ಪನ ರೊಟ್ಟಿ ಕಲ್ಲಾಗ ಕುಟ್ಟಿ ಉಪ್ಪಿನಕಾಯಿ ಹಚ್ಚಿ, ಎರಡು ಬಿಸಿ ಬಿಸಿ ಮುಟಗಿ ಮಾಡಿ ಕೊಡ್ತೀನಿ. ಜಲ್ದಿ ತಿನ್ನು. ಹೊಟ್ಟಿನೂ ತುಂಬುತ್ತದ ಜ್ವರಾನೂ ಬಿಡತದ ನಡಿ.” ಎನ್ನತ್ತಾ ಅಡಿಗೆ ಮನೆ ಕಡೆಗೆ ನಡೆದಾಗ ಗುಂಡನೆಯ ಬಿಸಿ ಮುಟಗಿಯ ಚಿತ್ರ ಕಣ್ಣುಗಳಲ್ಲಿ ಮೂಡಿ ಪುಟ್ಟಿಯ ಬಾಯಿ ನೀರೂರಿತು. ಗೆಜ್ಜೆ ಕಾಲುಗಳನ್ನು ಕುಣಿಸುತ್ತಾ “ತಂಗಿ ಹೆಸರೇನ ಇಡೋಣ ಆಯಿ?” ಅಂತ ಕೇಳ್ತಾ ಆಯಿಯ ಹಿಂದೆ ಹೆಜ್ಜೆ ಹಾಕುತ್ತಾ ಒಳ ನಡೆದಳು.
(ಮುಟಗಿ-ಜೋಳದ ರೊಟ್ಟಿ, ತುಪ್ಪ ಮತ್ತು ಮಸಾಲೆಗಳೊಂದಿಗೆ ಕುಟ್ಟಿ ತಯಾರಿಸುವ ಒಂದು ವಿಶಿಷ್ಟ ಖಾದ್ಯ)
–ಡಾ. ನೀತಾ ಕಲಗೊಂಡ
