ಮೇನೇಜರ್ ಸಾಹೇಬ್ರೇ, ಪಾಪ ! ನಮ್ಮ ಜಯಂತಿ ಬರೀ ಕೈ ಕಾಲು ವೀಕ್ ಎಂದು ಆಸ್ಪತ್ರೆಗೆ ಸೇರಿ ಹತ್ತು ದಿನಗಳಾದವು, ಇನ್ನೂ ಡಿಸ್ಚಾರ್ಜ್ ಆಗಿಲ್ಲ. ನಾನೀಗ ಅವಳನ್ನು ನೋಡಲು ಹೋಗುತ್ತಿದ್ದೇನೆ, ನೀವೂ ಒಮ್ಮೆ ಹೋಗಿ ನೋಡಿದ್ರೆ ಅವಳ ಮನಸ್ಸಿಗೆ ಸ್ವಲ್ಪ ಸಮಧಾನವಾಗಬಹುದು ಸಾರ್” ಎಂದಳು ಸ್ಟೆನೋ ಸುಮತಿ. “ನೀನ್ಹೋಗಿ ನೋಡ್ಕೊಂಡು ಬಾಮ್ಮ ಸುಮತಿ. . . ಇಲ್ಲಿ ನನ್ನ ಕೆಲಸ ಯಾವಾಗ ಮುಗಿಯುತ್ತೋ. . . . . .?” ಅದಿರಲಿ ಸಾರ್, ಹೇಗಾದರು ಒಮ್ಮೆ ನೀವು ಖಂಡಿತ ಹೋಗಿ ಅವಳನ್ನು ನೋಡಲೇ ಬೇಕು, ನೀವು ಹಿಂದೇಟು ಹಾಕುತ್ತಿರುವ ಕಾರಣ ನನಗೆ ಗೊತ್ತು. ನೀವು ಹಿಂದಿನ ಘಟನೆ ಬಗ್ಗೆ ಯೋಚಿಸ್ಬೇಡಿ, ಅದನ್ನ ಮನಸ್ಸಿನಲ್ಲಿ ಇಟ್ಕೋಬೇಡಿ, ತಪ್ಪದೆ ಹೋಗಿ ಅವಳನ್ನು ನೋಡಿ ಬನ್ನಿ. ನೀವೊಬ್ಬರೇ ಹೋಗಲು ಸಂಕೋಚವಾದರೆ, ನನ್ನ ಜೊತೆಯಲ್ಲೇ ಬನ್ನಿ,” ಎಂದಳು ಸುಮತಿ. ಹಾಗೆಯೇ ಮುಂದುವರೆದು, “ಕಳೆದ ಮೂರು ವರ್ಷಗಳಲ್ಲಿ ಅವಳೆಷ್ಟು ಬದಲಾಗಿ ಬಿಟ್ಟಳು, ಅವಳ ಪ್ರಾಣಕ್ಕೀಗ ಆಪತ್ತು ಬಂದಿದೆ. ಇಂಥಹ ಸಮಯದಲ್ಲಿ. . . . .” ಎಂದು ತಡವರಿಸಿದಳು. “ ನನ್ನ ಮನಸ್ಥಿತಿಯನ್ನೂ ಸ್ವಲ್ಪ ಅರ್ಥಮಾಡಿಕೋ ಸುಮತಿ, ನನಗೆ ಆಕೆಯ ಬಗ್ಗೆ ಏನೂ ಇಲ್ಲಮ್ಮ. . . ಹಿಂದೆ ಈಚಲ ಮರದ ಕೆಳಗೆ ಮಜ್ಜಿಗೆ ಕುಡಿದರೆ ತಪ್ಪಾಗಿ ಭಾವಿಸುತ್ತಿದ್ದರು, ಈಗ ಯಾವುದೇ ಮರದ ಕೆಳಗೆ ಏನು ಕುಡಿದರೂ ತಪ್ಪಾಗಿ ತಿಳಿಯುವ ಕಾಲವಿದು ! ನಾನು ಈ ಆಫೀಸ್ನಿಂದ ನಿರ್ಗಮಿಸುವವರೆಗೂ ನನಗೆ ಒಳ್ಳೆಯ ಹೆಸರು ಬರಲು ಸಾಧ್ಯವಿಲ್ಲವೇನೋ.. . . . . .”
“ನಾಲ್ಕು ದಿನ ಕಳೆಯಲಿ ಸುಮತಿ, ಅಷ್ಟರಲ್ಲಿ ನನ್ನ ಮನಸ್ಸು ಬದಲಾದರೆ ಜಯಂತಿಯನ್ನು ನೋಡಿ ಬರುವ ಬಗ್ಗೆ ಯೋಚಿಸ್ತೇನೆ” ಎಂದೆ. ನನ್ನ ಮಾತಿಗೆ ಯಾವ ಪ್ರತಿಕ್ರಿಯೆಯೂ ನೀಡದೆ, ಮುಖ ಚಿಕ್ಕದು ಮಾಡಿಕೊಂಡ ಸುಮತಿ ತಕ್ಷಣ ಜಾಗ ಖಾಲಿ ಮಾಡಿ ಹೊರಟೇಬಿಟ್ಟಳು. ನನ್ನ ಮಾತು ಅವಳಿಗೆ ಕಸಿವಿಸಿ ಉಂಟು ಮಾಡಿತೆಂದು ಅವಳು ಎದ್ದು ಹೋದ ದಾಟಿಯಲ್ಲೇ ನನಗದು ಅರ್ಥವಾಯಿತು.
ಅಂದೊ೦ದು ದಿನ ಬೆಳಿಗ್ಗೆ ೧೧ ಗಂಟೆಗೆ ಮನೆಯಲ್ಲಿ ತುರ್ತು ಕೆಲಸವಿದೆ ಎಂದು, ಮಧ್ಯಾಹ್ನ ೨.೩೦ ಗಂಟೆಗೆ ವಾಪಸ್ ಬರುವುದಾಗಿಯೂ ಸ್ಟೆನೋ ಜಯಂತಿ ನನ್ನ ಬಳಿ ಪರ್ಮಿಶನ್ ಕೇಳಿದಳು. “ಇಂದು ಅತಿ ಮುಖ್ಯವಾದ ಪತ್ರಗಳನ್ನು ಟೈಪ್ ಮಾಡುವ ಕೆಲಸವಿದೆಯಲ್ಲಮ್ಮ” ಎಂದು ನೆನಪಿಸಿದೆ. “ಸಾರ್ ಮಧ್ಯಾಹ್ನದ ಹೊತ್ತಿಗೆ ಬಂದು ಬಿಡುತ್ತೇನೆ” ಎಂದು ಹೇಳಿ ಹೊರಟವಳು ಸಂಜೆ ನಾಲ್ಕು ಗಂಟೆಯಾದರೂ ಬರಲಿಲ್ಲ. ಕಾಯುತ್ತಾ ಇದ್ದಂತೆ ಗಡಿಯಾರದ ಮುಳ್ಳು ಐದು ಘಂಟೆಗೆ ಜಾರಿತು. ಮನಸ್ಸಿಗೆ ಬೇಸರವಾಗಿ ಕುರ್ಚಿಯಿಂದ ಏಳುವಷ್ಟರಲ್ಲಿ ಛೇಂಬರ್ ಬಾಗಿಲನ್ನು ದೂಡಿಕೊಂಡು ಜಯಂತಿ ಒಳಗೆ ಬಂದಳು.
“ಸಾರಿ ಸಾರ್, ಬರುವುದು ಸ್ವಲ್ಪ ಲೇಟಾಯಿತು” ಎಂದು ಹೇಳುತ್ತಿದ್ದವಳ ಮುಖವನ್ನೇ ದಹಿಸುವಂತೆ ನನ್ನ ಕಣ್ಣುಗಳು ಅವಳತ್ತ ತೀಕ್ಷ್ಣ ದೃಷ್ಟಿ ಬೀರಿದವು.
“ ಸಾರಿ ಅನ್ನೋ ಪದ ನನಗೆ ಬೇಕಾಗಿಲ್ಲಮ್ಮ. ಮೊದಲು ನನಗೆ ಕೆಲಸವಾಗಬೇಕು. ಬಹಳ ಅರ್ಜೆಂಟ್ ಇದೆ, ಆದಷ್ಟು ಬೇಗ ಮುಗಿಸಿಕೊಡು” ಎಂದು ಆಗ್ರಹಿಸಿದೆ.
“ ಆಗಲಿ ಸಾರ್, ಖಂಡಿತ ಮುಗಿಸಿ ಕೊಡ್ತೇನೆ . . . . . . . . . ಆದರೆ. . . . .? ಅವಳಿಂದ ಮುಂದಿನ ಮಾತು ಹೊರಡದಿದ್ದರೂ ಅವಳ ಮನೋ ಇಂಗಿತವನ್ನು ಅರಿತ ನಾನು, “ ನೀನು ಏನು ಹೇಳ್ತಾ ಇದ್ದೀಯಾ ಅಂತ ನನಗೆ ಗೊತ್ತಮ್ಮ, ಆಫೀಸ್ನಲ್ಲಿ ಒಬ್ಬಳೇ ಇರಬೇಕಲ್ಲ ಅಂತ ತಾನೇ? ನಿನ್ನ ಕೆಲಸ ಮುಗಿಯುವವರೆಗೆ ನಾನೂ ಇರ್ತೇನೆ,” ಎಂದೆ.
ಜಯಂತಿ ಪೈಲ್ ತೆಗೆದುಕೊಂಡು ಪತ್ರಗಳನ್ನು ಟೈಪ್ ಮಾಡಲು ಪ್ರಾರಂಭಿಸಿದಳು. ಅವಳು ಕೆಲಸ ಮುಗಿಸಿದಾಗ ರಾತ್ರಿ ೭.೦೦ ಗಂಟೆ. ಟೈಪ್ ಮಾಡಿದ ಪತ್ರಗಳ ಫೈಲ್ನ್ನು ನನ್ನ ಮೇಜಿನ ಮೇಲಿಟ್ಟು “ನಿಮ್ಮ ಕೆಲಸವೆಲ್ಲ ಮುಗಿಸಿದ್ದೇನೆ, ಸರಿ ತಾನೆ?” ಎಂದು ಸ್ವಲ್ಪ ವ್ಯಂಗ್ಯದ ಧಾಟಿಯಲ್ಲಿ ಹೇಳಿದಳು.
“ಹೀಗೆ ಮಾತಾಡುವುದು ಸುಲಭ ಜಯಂತಿ. ಆದರೆ ನನ್ನ ಜವಾಬ್ದಾರಿಯನ್ನು ಸ್ವಲ್ಪ ಅರ್ಥಮಾಡಿಕೊ. ನಾಳೆ ಬೆಳಿಗ್ಗೆ ೧೧ ಗಂಟೆ ಹೊತ್ತಿಗೆ ಈ ಪತ್ರಗಳು ಹೆಡ್ ಆಫೀಸಿಗೆ ತಲುಪದಿದ್ದರೆ, ಪರಿಸ್ಥಿತಿ ಏನಾಗುವುದೆಂದು ನನಗೆ ಗೊತ್ತು” ಎನ್ನುತ್ತ ಬೆರಳಚ್ಚಾಗಿದ್ದ ಪತ್ರಗಳಿಗೆ ಸಹಿ ಹಾಕತೊಡಗಿದೆ.
“ನಾನಿನ್ನು ಬರ್ತೇನೆ ಸಾರ್” ಎಂದು ಗಡಿಯಾರ ನೋಡಿಕೊಂಡು ಜಯಂತಿ ನನ್ನ ಛೇಂಬರಿನಿ೦ದ ನಿರ್ಗಮಿಸುವಷ್ಟರಲ್ಲಿ ವಿದ್ಯುತ್ ಕೈಕೊಟ್ಟಿತು. ಅವಳು ಛೇಂಬರ್ನಿ೦ದ ಹೊರಗೆ ಅಡಿ ಇಡುವಷ್ಟರಲ್ಲಿ ಉರಿಯುತ್ತಿದ್ದ ಲೈಟ್ಗಳು ಇದ್ದಕ್ಕಿದ್ದಂತೆ ಆರಿಹೋದವು. ನನ್ನ ಛೇಂಬರ್ ಹಾಗು ಇಡೀ ಆಫೀಸ್ನೊಳಗೆ ಕತ್ತಲು ಆವರಿಸಿಕೊಂಡಿತು. ಗೋಡೆಗೆ ತೂಗುಹಾಕಿದ್ದ ಎಮರ್ಜೆನ್ಸಿ ಲೈಟನ್ನು ತೆಗೆದು ಹೊತ್ತಿಸಿ ಕುಳಿತು ಪತ್ರಗಳನ್ನು ಓದುತ್ತ ಸಹಿ ಮಾಡುವುದನ್ನು ಮುಂದುವರೆಸಿದೆ. ನನ್ನ ಛೇಂಬರ್ನೊಳಗಿನ ಬೆಳಕನ್ನು ಕಂಡು ಜಯಂತಿ ವಾಪಸ್ ಬಂದು, “ಛೇ ! ಛೇ ! ಎಂಥಾ ಮನುಷ್ಯರು ನೀವು ! ಉದ್ದೇಶಪೂರ್ವಕವಾಗಿ ಈ ನಾಟಕ ಆಡ್ತಿದ್ದೀರ” ಎಂದಳು. ನನಗೆ ದಿಕ್ಕು ತೋಚದೆ ಕಕ್ಕಾಬಿಕ್ಕಿಯಾಗಿ “ಏನಮ್ಮ ಜಯಂತಿ ಏನಾಯಿತು?” ಎಂದೆ.
“ಇನ್ನೇನು ಸಾರ್, ಎಷ್ಟು ದಿನದಿಂದ ಈ ಸಂಚು ಹೂಡಿದ್ದೀರಾ? ಹೊರಗಡೆಯಿಂದ ಬಾಗಿಲಿಗೆ ಬೀಗ ಹಾಕಿಸಿ ನನ್ನನ್ನು ಒಳಗೆ ಕೂಡಿ ಹಾಕಿ ನಿಮ್ಮ ಕೆಲಸ ಸಾಧಿಸಿಕೊಳ್ಬೇಕ? ನಿಮಗೆ ಒಡಹುಟ್ಟಿದ ಅಕ್ಕ, ತಂಗಿಯರು ಯಾರೂ ಇಲ್ಲವಾ?” ಎಂದು ಬಾಯಿಗೆ ಬಂದ೦ತೆ ಮಾತಾಡಿದಳು, ಜಯಂತಿ.
ಗರ ಬಡಿದವನಂತಾಗಿ, ನೀರಿನಿಂದ ಜಿಗಿದು ನೆಲಕ್ಕೆ ಬಿದ್ದ ಮೀನಿನಂತೆ ವಿಲವಿಲನೆ ಒದ್ದಾಡಿಬಿಟ್ಟೆ ! ಏನು ಹೇಳೋಬೇಕೊ ತೋಚಲ್ಲಿಲ್ಲ. ನಿಟ್ಟುಸಿರು ಬಿಟ್ಟು, “ಆಯ್ಯೋ ಜಯಂತಿ ನಾನು ಅಂಥಹವನಲ್ಲಮ್ಮ”. . . . . . . ಎಂದು ನನ್ನನ್ನು ನಾನು ಸಮರ್ಥಿಸಿಕೊಳ್ಳುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು. ಖುರ್ಚಿಯಲ್ಲಿ ಮುದುಡಿ ಸುಮ್ಮನೆ ಕುಳಿತುಬಿಟ್ಟೆ. ಅಷ್ಟರಲ್ಲಿ ವಿದ್ಯುತ್ ಮರಳಿ ಬಂದು ಆರಿಹೋಗಿದ್ದ ಲೈಟುಗಳು ಹತ್ತಿಕೊಂಡವು. ಅದರ ಬೆನ್ನಲ್ಲೇ ಬಾಗಿಲನ್ನು ತೆರೆದುಕೊಂಡು ಒಳಗೆ ಬಂದ ರಾಮ್ಸಿಂಗ್, “ಅರೆ ಕ್ಯಾ ಸಾಬ್ ಆಪ್ಲೋಗ್ ಅಬೀ ಗಯಾ ನಹಿ?” ಎಂದು ಕೇಳಿದ.
ಒಳಗೆ ಲೈಟುಗಳು ಆರಿಹೋದ ಮೇಲೆ, ಯಾರೂ ಇಲ್ಲವೆಂದು ಆಫೀಸಿಗೆ ಹೊರಗಿನಿಂದ ಬೀಗ ಹಾಕಿ ಟೀ ಕುಡಿದು ಬರುವಷ್ಟರಲ್ಲಿ ವಿದ್ಯುತ್ ಮರಳಿ ಬಂತು. ಒಳಗೆ ಲೈಟುಗಳು ಉರಿಯುವುದನ್ನು ಕಂಡು ಅವುಗಳನ್ನು ಆರಿಸಲು ಬೀಗ ತೆರೆದು ಒಳಗೆ ಬಂದುದಾಗಿ ವಾಚ್ಮನ್ ಹೇಳಿದ. ಆದರೆ ಅವನು ಹೇಳಿದ್ದನ್ನು ಜಯಂತಿ ನಂಬಲಿಲ್ಲ. ನಾನು ವಾಚ್ಮನ್ಗೆ ಮೊದಲೇ ಹೇಳಿಕೊಟ್ಟು ನಾನೇ ರೂಪಿಸಿದ ಸಂಚು ಎಂದು ವಾದಿಸುವಲ್ಲಿ ಜಯಂತಿ ತನ್ನ ಹಟ ಸಾಧಿಸಿಬಿಟ್ಟಳು.
ಮರುದಿನ ಕಛೇರಿಯೊಳಗೆ ಗುಸು ಗುಸು ಮಾತುಗಳು ! ಪ್ರಕರಣ ಸೀರಿಯಸ್ ಆಯಿತು. ಮೇಲಧಿಕಾರಿಗಳಿಗೆ ದೂರು ಮುಟ್ಟಿ ನನ್ನ ವಾದವನ್ನು ತಳ್ಳಿ ಹಾಕಿದ ಅವರು ಅನುಮಾನದ ಶಂಕೆಯಲ್ಲಿ ನನ್ನ ವರ್ಗವಾಯಿತು. ದೂರದ ಮಲೆನಾಡು ಪ್ರದೇಶಕ್ಕೆ ನನ್ನ ವರ್ಗಾವಣೆಯಾಗಿದ್ದು, ಅಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳಲಾಗದೆ ಪ್ರಯತ್ನಪಟ್ಟು ಇದೇ ಕಛೇರಿಗೆ ವಾಪಸ್ ಬರಲು ಎರಡು ವರ್ಷವಾಯಿತು. ಅಷ್ಟರಲ್ಲಿ ಜಯಂತಿ ನಮ್ಮ ಉಪವಿಭಾಗಕ್ಕೆ ವರ್ಗವಾಗಿದ್ದಳು. ಅವಳನ್ನು ನೋಡುವ, ಮಾತಾಡಿಸುವ ಅವಶ್ಯಕತೆಯಾಗಲಿ ಸಂದರ್ಭವಾಗಲಿ ನನಗೆ ಒದಗಿ ಬಂದಿರಲಿಲ್ಲ.
ಸುಮತಿಯಂತೆ ಗೌರವ ಕೊಡುವ ಹೆಣ್ಣು ಮಕ್ಕಳು ವಿರಳ. ಸಮಾಜದಲ್ಲಿ ಒಂದು ಹೆಣ್ಣು ಅಸಭ್ಯವಾಗಿ ನಡೆದುಕೊಂಡರೆ ಅದು ಅಷ್ಟು ಬೆಳಿಕಿಗೆ ಬರುವುದಿಲ್ಲ. ಆದರೆ ಪುರುಷ ಪ್ರಧಾನವಾದ ಈ ಸಮಾಜವು ಹೆಣ್ಣು ಕೆಡಲು ಗಂಡೇ ಕಾರಣ ಎಂದು ಗಂಡಿನ ಮೇಲೆಯೇ ಬೊಟ್ಟು ಮಾಡುತ್ತದೆ. ಎಲ್ಲಾ ತಪ್ಪನ್ನು ಅವನ ಮೇಲೆಯೇ ಹೊರಿಸುತ್ತದೆ. ನನ್ನ ಮುಗ್ಧತೆಯು ಹೆಣ್ಣಿನ ಕಣ್ಣಿಗೆ ಕ್ರೌರ್ಯ ರೂಪದಲ್ಲಿ ಕಂಡದ್ದು ಸಹಜವೇ. ಹಳೆಯ ಘಟನೆಯನ್ನು ಮೇಲುಕು ಹಾಕುತ್ತಿದ್ದಂತೆ ಸುಮತಿ ಮಾತಿಗೆಳೆದುದರಿಂದ ನಾನು ವಾಸ್ತವಕ್ಕೆ ಬಂದೆ. “ ಸಾರ್ ನಿಮ್ಮ ಮೇಲೆ ಉದ್ದೇಶಪೂರ್ವಕವಾಗಿ ತಪ್ಪು ಹೊರಿಸಿದ ಆ ಜಯಂತಿಗೆ ಇನ್ನೂ ವಿವಾಹವೇ ಆಗಿಲ್ಲ” ಎಂದಳು. ಅವಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ನನಗಿಲ್ಲದಿದ್ದರೂ ಅವಳು ಪ್ರಸ್ತುತ ಖಾಯಿಲೆ ಬಿದ್ದು ಆಸ್ಪತ್ರೆಯಲ್ಲಿರುವುದರಿಂದ ನನಗೆ ದುಃಖವಾಯಿತು. ಅಷ್ಟರಲ್ಲಿ ಆಫೀಸ್ ಪೋನ್ ರಿಂಗಾಯಿತು. ರಿಸೀವರ್ ತೆಗೆದು ಮಾತಾಡಿದೆ. ಜಯಂತಿ ದಾಖಲಾಗಿದ್ದ ಆಸ್ಪತ್ರೆಯಿಂದಲೇ ಬಂದ ಕರೆ ಅದು.
ಜಯಂತಿಯ ಎರಡು ಕಿಡ್ನಿಗಳು ನಿಷ್ಕ್ರಿಯಗೊಂಡಿದ್ದು ಅವುಗಳನ್ನು ಬದಲಾಯಿಸಿದರೆ ಮಾತ್ರ ಆಕೆ ಉಳಿಯಬಲ್ಲಳು. ಇದಕ್ಕೆ ಏನಾದರೂ ನಿಮ್ಮ ವಿಭಾಗೀಯ ಖಚೇರಿಯಿಂದ ವ್ಯವಸ್ಥೆ ಮಾಡಲು ಸಾಧ್ಯವೇ, ಎಂಬುದಾಗಿತ್ತು ಅಲ್ಲಿಂದ ಬಂದ ಕರೆಯ ಸಾರಾಂಶ.
ನಾನು ಸುಮತಿಯಿಂದ ಆಕೆಯ ಎಲ್ಲ ಮಾಹಿತಿ ಪಡೆದೆ. “ಸುಮತಿ ನೀನು ಈ ಕೂಡಲೆ ಆಸ್ಪತ್ರೆಗೆ ಹೋಗು. ನಾನು ಜಯಂತಿಯ ಅಣ್ಣನನ್ನು ಖುದ್ದು ಭೇಟಿ ಮಾಡಿ, ಅಲ್ಲಿಂದ ಆಸ್ಪತ್ರೆಗೆ ಬರುತ್ತೇನೆ” ಎಂದೆ.
“ಸಾರ್ ದಯವಿಟ್ಟು ಅಲ್ಲಿಗೆ ಹೋಗ್ಬೇಡಿ. ನಿನ್ನೆಯೇ ನಮ್ಮ ಆಫೀಸ್ ಸಿಬ್ಬಂದಿಗಳೆಲ್ಲ ಒಟ್ಟು ಗೂಡಿ ಆಕೆಯ ಅಣ್ಣನ ಬಳಿಗೆ ಹೋಗಿ ಒಂದು ಕಿಡ್ನಿಯ ದಾನಕ್ಕಾಗಿ ಕೇಳಿಕೊಂಡೆವು. ಅವರಿಗೆ ಮನುಷ್ಯನ ಪ್ರಾಣಕ್ಕಿಂತ ಹಣವೇ ಮುಖ್ಯವಾಗಿದೆ. ಆತನ ಹೆಂಡತಿಯಿ೦ದ ನಾವು ಕೇಳಿದ್ದು ಸಾಕು. ಅಣ್ಣನಾದವನು ತನ್ನ ತಂಗಿಗೆ ಒಂದು ಕಿಡ್ನಿ ನೀಡಲು ಆತನ ಪತ್ನಿ ಇಟ್ಟ ಬೇಡಿಕೆ ಎರಡು ಲಕ್ಷ ರೂಪಾಯಿ ! ಅಷ್ಟು ಮೊತ್ತವನ್ನು ನಿಮ್ಮ ಆಫೀಸ್ನಿಂದ ನೀಡುವುದಾದರೆ ಕಿಡ್ನಿಗೆ ವ್ಯವಸ್ಥೆ ಮಾಡ್ತೇವೆ” ಎಂದಿದ್ದಾರೆ, ಎಂದಳು ಸುಮತಿ.
ನನಗೆ ಗಾಬರಿಯಾಯಿತು. ಸುಮತಿ ನೀನು ಕೂಡಲೆ ಆಸ್ಪತ್ರೆಗೆ ಹೋಗು, ಜಯಂತಿಗೆ ಧೈರ್ಯ ಹೇಳು, ನಾನು ಹೇಗಾದರೂ ಹಣದ ವ್ಯವಸ್ಥೆ ಮಾಡಿ ಅವಳ ಅಣ್ಣನನ್ನು ಒಪ್ಪಿಸುತ್ತೇನೆ” ಎಂದು ಹೇಳಿ ಅಲ್ಲಿಂದ ಹೊರಟೆ.
ಕ್ರಿಮಿ ಕೀಟಗಳು ಮನುಷ್ಯನ ರಕ್ತವನ್ನು ಕುಡಿದರೆ, ನರ ರೂಪದಲ್ಲಿರುವ ಪಿಶಾಚಿಗಳು ಮನುಷ್ಯನ ರಕ್ತವನ್ನೇ ಹೀರುತ್ತವೆ ! ಯಾವುದೇ ಪೂರ್ವ ಸಂಬ೦ಧವಿಲ್ಲದ ಮುಂದೆ ನಿಂತು ಒಂದು ಹೆಣ್ಣಿಗೆ ಮಾಡುವ ನನ್ನ ಸಹಾಯವನ್ನು ಶ್ಲಾಘಿಸದ ಅವರು ಅದನ್ನು ತಪ್ಪಾಗಿ ತೂಗಿ ಕಿಡ್ನಿ ಸಂಭಾವನೆಯ ಮೊತ್ತವನ್ನು ಮೂರು ಲಕ್ಷಕ್ಕೆ ಏರಿಸಿದರು.
‘ ಛೇ ! ನೀವು ಮನುಷ್ಯರಾ? ಒಡ ಹುಟ್ಟಿದ ಸಹೋದರಿಗೆ ಕಿಡ್ನಿ ಕೊಡಲು ಮೂರು ಲಕ್ಷಾನ?’ ನೆತ್ತಿಗೆ ಏರಿದ ಕೋಪವನ್ನು ಸಹಿಸಿಕೊಂಡು ಆಸ್ಪತ್ರೆಗೆ ಧಾವಿಸಿದೆ. ಡಾಕ್ಟರನ್ನು ಕಂಡು ಮಾತಾಡಿದೆ. ಅತಿ ಶೀಘ್ರದಲ್ಲೇ ನನ್ನ ತಪಾಸಣೆ ಸಹ ಮುಗಿಯಿತು.
“ಕಂಗ್ರ್ಯಾಜುಲೇಶನ್ಸ್ ಮಿಸ್ಟರ್ ಮನೋಹರ್ ! ನಿಮ್ಮ ಕೋರಿಕೆ ಈಡೇರಲಿದೆ. ನಿಮ್ಮ ರಕ್ತಕ್ಕೂ ಜಯಂತಿಯ ರಕ್ತಕ್ಕೂ ಹಾಗು ಕಿಡ್ನಿ ಮ್ಯಾಚಿಂಗ್ ಸಹ ಪರ್ಪೆಕ್ಟ್ ಆಗಿದೆ. ನಾಳೆಯೇ ಅವರಿಗೆ ಅಂಗಾ೦ಗ ಕಸಿ ಮಾಡಬಹುದು” ಎಂದರು ಆಸ್ಪತ್ರೆಯ ಮುಖ್ಯ ಡಾಕ್ಟರ್.
ಜಯಂತಿಗೆ ದುಃಖ ಸಂತೋಷ ಎರಡೂ ಒಟ್ಟಿಗೆ.
ದೇವತೆಯಂತೆ ಅವಳನ್ನು ಸುತ್ತುವರೆದಿದ್ದ ಸಪ್ತವರ್ಣದ ಕಾಮನ ಬಿಲ್ಲಿನೊಳಗೆ ಅವಳ ನಲಿಯುವ ಮುಖವನ್ನು ದೂರದಿಂದಲೇ ಕಂಡೆ. ನನ್ನನ್ನು ನೋಡಿದ ಅವಳ ಕಣ್ಣುಗಳು ಆರ್ದ್ರಗೊಂಡವು. ನಾನೂ ಗದ್ಗದಿತನಾದೆ.
“ನನ್ನನ್ನು ಕ್ಷಮಿಸಿ ಬಿಡಿ ಸಾರ್. ನಿಮ್ಮಂತ ಹೃದಯವಂತರನ್ನು ನಾನು ಕಂಡದ್ದು ಇದೇ ಮೊದಲು. ಅಂದು ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಹೋದದ್ದು ನನ್ನ ದೊಡ್ಡ ತಪ್ಪು, ನಿಮ್ಮನ್ನು ವೃಥಾ ನೋಯಿಸಿಬಿಟ್ಟೆ, ನಾನೆಂತಹ ಪಾಪಿ ! ನಾನು ಬದುಕುವುದಕ್ಕಿಂತ ಸತ್ತು ಹೋಗಿದ್ದರೆ ನನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಗುತ್ತಿತ್ತು ! ನಿಮ್ಮ ಸಹಾಯದ ಋಣವನ್ನಂತು ಈ ಲೋಕದಲ್ಲಿ ತೀರಿಸಲು ಸಾಧ್ಯವೇ ಇಲ್ಲ. ಒಡ ಹುಟ್ಟಿದ ಅಣ್ಣನೇ ಸಹಾಯ ಮಾಡದೆ ಹೋದಾಗ ನೀವು ಯಾರೋ ಇನ್ನೂ ಅವಿವಾಹಿತರಾದ ನೀವು ಯಾರೂ ಮಾಡಲಾಗದ ಸಹಾಯವನ್ನು ಮಾಡಿದ್ದೀರ. ನಿಮ್ಮ ಸಹಾಯ ಮಾನವತೆಗೆ ಮೀರಿದ್ದು,” ಎಂದಳು ಜಯಂತಿ.
“ಜಯಂತಿ, ಸಂಬ೦ಧವನ್ನು, ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಮನುಷ್ಯನಿಗೆ ಕಷ್ಟಗಳು ಬರಬೇಕು, ಕಷ್ಟಗಳು ಬಂದಾಗ ಮಾತ್ರ ಮನುಷ್ಯ ಅದನ್ನು ಅರ್ಥಮಾಡಿಕೊಳ್ಳ ಬಲ್ಲ. ಅದಕ್ಕೆ ನಾವಿಬ್ಬರೂ ಒಂದು ನಿದರ್ಶನ. ನನ್ನ ಒಂದು ಅಂಗ ಹೋದರೇನು, ಒಂದು ಜೀವ ಉಳಿಯಿತಲ್ಲ ! ದಾನಕ್ಕಿಂತ ಶ್ರೇಷ್ಟವಾದುದು ಯಾವುದೂ ಇಲ್ಲ, ಆದರೆ ಅದಕ್ಕಿಂತ ಮಿಗಿಲಾದುದು ಮನುಷ್ಯನ ಜೀವ. ಸಾಯುವ ಜೀವ ಉಳಿದದ್ದಕ್ಕಿಂತ ಬೇರೆ ಸಂತೋಷವೇನಿದೆ? ಪ್ರೀತಿಗೂ-ಸಂಬ೦ಧಕ್ಕೂ ಇರುವ ವ್ಯತ್ಯಾಸವನ್ನು ತಿಳಿದವನು ಮಾತ್ರ ಮನುಷ್ಯನಾಗಬಲ್ಲ, ಮನುಷ್ಯನ ಆದ್ಯ ಕರ್ತವ್ಯವೇ ಮನುಷ್ಯತ್ವವನ್ನು ಮೊದಲು ಅರ್ಥಮಾಡಿಕೊಳ್ಳುವುದು.” ಎಂದೆ.
ನನ್ನ ಮಾತುಗಳನ್ನು ತದೇಕಚಿತ್ತದಿಂದ ಆಲಿಸಿದ ಜಯಂತಿ, ತಕ್ಷಣ ನನ್ನ ಕಾಲಿಗೆ ಎರಗಿದಳು. ನಾನು ಅವಳನ್ನು ಹಿಡಿದೆತ್ತಿ ಪ್ರೀತಿಯಿಂದ ನನ್ನೆದೆಗೆ ಆಲಂಗಿಸಿಕೊ೦ಡೆ.
ವನಸುಮಗಳು ಅರಳಿ ಕಂಪು ಸೂಸುವಂತೆ ನಮ್ಮಿಬ್ಬರ ಹೃದಯಗಳು ಒಟ್ಟಿಗೆ ಮಿಡಿದವು, ಕಣ್ಣುಗಳಿಂದ ಕಂಬನಿ ತೊಟ್ಟಿಕ್ಕಿತು.
ಅದು ಬೆಲೆ ಕಟ್ಟಲಾಗದ ಕಂಬನಿ.
-ಎಲ್.ಚಿನ್ನಪ್ಪ, ಬೆಂಗಳೂರು
