
ಮಳೆ ಹನಿ ಆಸೆ
ನೀನು ತುಂಬಾ ವಿಶಾಲ
ಪ್ರಶಾಂತ, ವಿಸ್ಮಯ
ನಿನ್ನ ಸುಂದರ ಸೆಳೆಯುವ ನೋಟಕ್ಕೆ
ಸೂರ್ಯ ಚಂದ್ರರ ಹಗಲು ಇರುಳು ಆಟಕ್ಕೆ
ನಿನ್ನ ಮೊಗದ ಬಣ್ಣ ಬಣ್ಣ
ಚಿತ್ತಾರ ಕಂಡು
ಹರ್ಷದಿ ಪುಳಕಿತಗೊಂಡೆ.
ನಾ ಬೆಳ್ಳಿ ಮೋಡವಾಗಿ
ಸನಿಹ ಬಂದಾಗ
ಕಣ್ಣಿನ ನೋಟಕೆ ನಿಲುಕದ
ಅಗಾಧ ಭಾವ
ಬಣ್ಣ ರಹಿತ ಕಲ್ಪನಾತೀತ
ರೂಪ ನಿನ್ನದು.
ನಾ ನಿನ್ನಲ್ಲೊಂದು
ಕಾಮನ ಬಿಲ್ಲಿನ ಚಿತ್ತಾರ ಮೂಡಿಸಿ
ಉಲ್ಲಾಸ ಹೊಂದುವ ಮುನ್ನವೇ
ಮಾಯದ ಮಳೆಗೆ ಸಿಲುಕಿ
ಬಿಸಿಲುಗಾಡಿನ ಸರೋವರದಲಿ ಹನಿಯಾಗಿ
ಉಬ್ಬರವಿಳಿತದ ಅಲೆಯಾಗಿರುವೆ.
ಮತ್ತೊಮ್ಮೆ
ಮುಂಗಾರು ಕಾಲದಲಿ
ಆವಿಯಾಗಿ ನೀಲಿ ಮುಗಿಲಿನ
ಹೊನ್ನಿನ ಬಣ್ಣವ ನೋಡುವ
ಸ್ನೇಹ ಚಿತ್ತಾರ ಕಂಡು
ತನ್ಮಯವಾಗುವಾಸೆ.
-ತೇಜಸ್ವಿನಿ
ನಾನೆಂಬ ಮರ
ಬಾನೆತ್ತರಕೆ ಬೆಳೆದು ನಿಂತಿದೆ
ಬೋಳಾದ ಮರ!
ವಿರಾಗಿಣಿಯಂತೆ.
ಅದರಂತೆ ನಾನೂ…
ನೀನು! ಅವನು! ಅವಳೂ!
ಚಿಗುರಿದ್ದಾಗ ಎಷ್ಟೊಂದು ವೈಭವ!
ಅಕ್ಕರೆಯ ಅಪ್ಪುಗೆ, ಬೆಲ್ಲ ಸಕ್ಕರೆ.
ಉಂಡದ್ದು, ಉಟ್ಟು ತೊಟ್ಟದ್ದು ಲೆಕ್ಕವಿಲ್ಲ
ಇರುವುದೆಲ್ಲವೂ ನಂದೆನ್ನುವ ಭಾವ
ಮೈ ತುಂಬಾ ಹೂವರಳಿದಾಗ
ಯೌವ್ವನದ ಸೊಕ್ಕೆಲ್ಲ ನೆತ್ತಿಗೆ;
ಜಗವೆಲ್ಲ ಹಗಲ ಕಾಲಡಿಗೆ!
ಹೊರಳುದಾರಿಯ ತುಂಬ
ನನ್ನದೇ ಗತ್ತು! ಒನಫು ಒಯ್ಯಾರ.
ಬೇಡಿ-ಬಯಸಿದ್ದು, ದಕ್ಕಿದ್ದು, ಮಿಕ್ಕಿದ್ದೆಲ್ಲ
ನೀಲಿ ಬಾನಲಿ ತೇಲಿ ಹೋದ ಹಾಡು
ಸಂಜೆ ಸೂರ್ಯನ ಬಿಸಿ
ತುಸು ಕಮ್ಮೀ
ಹೂ ಬಿಟ್ಟರೂ ಬೇಡದು
ಯಾರ ಮುಡಿ
ಹಣ್ಣಾಗಲು ಕಸುವಿಲ್ಲ;
ಸ್ವಂತ ನೆರಳಿಗೆ ದಾರಿ ಬಲುದೂರ!
ಅಪರಿಚಿತ!
ಅಲ್ಲೊಂದು ಇಲ್ಲೊಂದು
ಒಣಗಿದ ಬಳ್ಳಿ, ಕಳ್ಳಿ
ಬೆಳಕು ತೀರಿದೆ!
ಬೆಳ್ಳಿ ಚುಕ್ಕಿ ಮೂಡಲೇ ಇಲ್ಲ
ಕನಸು ಬಿತ್ತಿ ಹೋದ ಚಂದ್ರ
ಮತ್ತೆ ಬರಲಾರ!
ಗಿರಾಕಿಗಳಿಲ್ಲದೆ ಮುಚ್ಚಿದ ಅಂಗಡಿಯಲಿ
ನೆನಫುಗಳ ಮೆರವಣಿಗೆ
ಒಣಗಿದೆಲೆಗಳ ದಿವ್ಯಮೌನ!
ಮರ ಬೀಳಲು
ಬಿರುಗಾಳಿಯೇನು ಬೇಕಿಲ್ಲ
ಇಂದೋ ನಾಳೆಯೋ
ಬರಬಹುದು ವಾರಸುದಾರರು
ಲೆಕ್ಕ ಚುಕ್ತಾ ಮಾಡಲು
ಇಲ್ಲವೇ
ಅಳಿದುಳಿದ ಅವಶೇಷ ಬಾಚಿ ತಬ್ಬಲು!
-ಎಂ. ಡಿ. ಚಿತ್ತರಗಿ, ಹುನಗುಂದ
ಹೇಳು ಅಲ್ಲಮ
ಹೇಳು ಅಲ್ಲಮ
ಭಾವನೆಗಳೆಂದರೇನು?
ನೋವು ನುಂಗುವುದೋ?
ಹಸಿವು ನುಂಗುವುದೊ?
ತ್ಯಾಗ ಮಾಡುವುದೋ?
ಪ್ರೀತಿಸುವುದೋ?
ಕಾಮಿಸುವುದೊ?
ಮರುಗುವುದೊ?
ಕರಗುವುದೋ?
ಹೇಳು ಅಲ್ಲಮ …..!
ವಿದಾಯವೆಂದರೇನು.?
ಮಾತು ಮುಗಿದಮೇಲೆ ಕಳಿಸುವುದೋ….?
ಇಲ್ಲ ಉಸಿರು ನಿಂತಮೇಲೆ ಕಳಿಸುವುದೋ…?
ನಗುವ ನುಂಗಿ ನಮ್ಮ ಮನಸ್ಸನ್ನು ಕೊಲ್ಲುವುದೋ?
ನಾವೇ ಇಲ್ಲವಾಗಿ ಭೂಮಿ ಮೇಲೆ ಕಳೆದೊಗುವುದೋ?
ಹೇಳು ಅಲ್ಲಮ
ನನ್ನ ಶವಪೆಟ್ಟಿಗೆ ಮೇಲೆ ಮೊದಲ ಮಣ್ಣು ಯಾರದ್ದು?
ಹಸಿದಾಗ ಕೈತುತ್ತು ಕೊಟ್ಟವರದ್ದೊ?
ಜನ್ಮನಿಟ್ಟವರದ್ದೊ?
ಕಂಬನಿ ಒರಸಿ ನೆನಪು ಹೊತ್ತವರದ್ದೊ?
ಅಲ್ಲೆಲ್ಲೊ ರಸ್ತೆ ಮಧ್ಯ ಸಿಕ್ಕವರದ್ದೊ?
ಒಂದು ಹೃದಯದಿಂದ ಇನ್ನೂಂದು ಹೃದಯಕ್ಕೆ
ಭಾವನೆಗಳು ದಾಟಿ ನುಸುಳಲು
ಜಾಗ ಇಲ್ಲದ ಕಾರಣ
ನಿರುಮ್ಮಳಗೊಳ್ಳದ ಈ ಪ್ರೇಶ್ನೆಗಳು,
ಮನದ ಉನ್ನತ್ತಗಳು
ಕೇವಲ ನಮ್ಮಿಬ್ಬರ ನಡುವೆಯಷ್ಟೇ ಸುಳಿಯ ಬೇಕು.
-ಶಿವರಾಜ್ ವತ್ತುಮುರುವಣಿ

ಊರಿಗೆ ವೃದ್ದಾಪ್ಯವೇ ? ಊರಲ್ಲ ವೃದ್ಧಾಶ್ರಮ
ಬಾಳಿಬದುಕಿದ ಮಹಲಿನಲ್ಲಿ ಹಿರಿ ಜೀವವೊಂದು ಹೊಸ್ತಿಲಿನ ಒಳಗೆ ತಲಬಾಗಿಲಿಗೆ ಆಣಿಸಿಕೊಂಡು ನೋಡುತ್ತಿದೆ ತನ್ನ ಭೂತ ಕಾಲವನ್ನು ನೆನೆಯುತ್ತಾ ವರ್ತಮಾನಗಳನ್ನು ಕಲ್ಪಿಸಿ ಈ ವರ್ತಮಾನದ ಶಬ್ಧ ,ಗದ್ದಲ, ಗೌಜಲಗಳನ್ನು ಮೂಕವಿಶ್ಮಿತದ ಕಣ್ಣುಗಳಿಂದ ಕುತೂಹಲಕ್ಕೆ ಇಂಬುಕೊಟ್ಟು..
ಮನೆಯ ಜಂತಿ ಗೆದ್ದಲಿಡಿದಿದೆ ಮರದ
ತೊಲೆಗಳು ಎಷ್ಟೋ ಮಳೆಗಾಲದ ನೀರುಂಡಿವೆ ನಡುಗಂಬಗಳಿಗೆ ಎಷ್ಟು ಕೈಗಳಿಂದ ತಾಳೆ ಎಣ್ಣೆಯನ್ನು ಸವರಿಸಿಕೊಂಡಿವೆ ಮನೆ ಒಳಗಿನ ಮಾಡದಲ್ಲಿ ಎಷ್ಟು ವರ್ಷಗಳಿಂದ ಚೌತಿಗಣಪ ಸ್ಥಾಪಿತನಾಗಿ ಎದ್ದು ಹೋಗಿದ್ದಾನೆ.
ಪ್ರತಿಷ್ಠೆ ಕುದುರೆಗಾಗಿ ನಗ ನಾಣ್ಯ ಒಡವೆ ಕಚ್ಚಾ ಬಂಗಾರ ಕಾಳುಕಡಿಗಳ ನಿಟ್ಟುಗಳನ್ನು ಕಂಡ ಪಡಶಾಲೆ ದಾನ ಧರ್ಮದ ಹೆಸರಿನಲ್ಲಿ ಊರ ಜಾತ್ರೆ ಮಾಡಿದೆ ಹಸಿದು ಬಂದವರನ್ನು ಅಂಗಳದಲ್ಲಿ ನಿಲ್ಲಿಸದೆ ಒಳ ಕರೆದು ಊಟ ನೀಡಿದೆ
ಋತುಮಾನಗಳು ಕಳೆದವು ಸರಿಕರೆಲ್ಲರೂ ಸಾವಿಗೆ ಸರಿದು ಹೋದರು ನನಗೆ ಊರು ಹೋಗು,ಕಾಡು ಬಾ ಎನ್ನುತ್ತಿದೆ..
ನನ್ನ ಭವಿಷ್ಯವೇ ಒಣಮರದ ಕೊನೆಯ ಕಡ್ಡಿಯಂತೆ ಹಣ್ಣೆಲೆ ಉದುರುವಂತೆ ಈಗಲೂ ಆಗಲೂ ಎನ್ನುವ ದಿನ ಎಣಿಕೆಯಲ್ಲಿಯೂ ಪದೇ ಪದೇ ನನ್ನ ಮನೆಯ ವೈಭವ ಕಣ್ಣೊಳಗೆ ಇಣುಕುವ ಚಿತ್ರಪಟದಂತೆ ಅರೇ ಮೊಮ್ಮಗ ತುತ್ತು ಅನ್ನಕ್ಕಾಗಿ ಊರು ಬಿಟ್ಟ ಹೊಲ ತೋಟ ತೊರೆದ ನೆನಪು, ಅವನು ತುಂಟ ಕೈ ಕೀಟಲೆ ಸೀರೆ ಸೆರಗಿನಲ್ಲಿದೆ…
ಕಷ್ಟವೋ ನಷ್ಟವೋ ಇಲ್ಲಿಯೆ ಉಂಡು ಇಲ್ಲಿಯೆ ಬೆಳೆದು ಬದುಕಿಗೆ ಆಸರೆಯಾದ ಗೂಡಿನಲ್ಲಿ ನಾನೀಗ ಒಂಟಿ ಜೀವ ಇದು ವೃದ್ಧಾಶ್ರಮವಲ್ಲ ನನ್ನ ಕುಟುಂಬದ ಪ್ರತಿಷ್ಠಿತ ಹೆಮ್ಮೆಯ ಸೌಧ ಆದರೂ ನಾ ಈಗಲ್ಲಿ ಒಂಟಿ ನನ್ನ ಬದುಕಿನ ಭೂತಕಾಲದ ನೆನಪುಗಳೇ ನನಗಿಲ್ಲಿ ಜಂಟಿ..
-ವೃಶ್ಚಿಕಮುನಿ ಪ್ರವೀಣಕುಮಾರ


