ತನ್ನದಲ್ಲದ ಮನೆಯಲ್ಲಿ ಹುಟ್ಟಿ
ಮನೆಯ ಲಕ್ಷ್ಮಿ ಎನಿಸಿಕೊಂಡರು..
ಆಸ್ತಿಯ ಭಾಗವಿಲ್ಲದ ಹೊರೆಯಾಗಿ,
ಪ್ರೀತಿ ಚೆಲ್ಲಿ, ಬೆವರು ಸುರಿಸಿ,
ಎಲ್ಲರ ಮಾನ ಮರ್ಯಾದೆ ಎತ್ತಿ ಹಿಡಿದು
ಇನ್ನೊಬ್ಬರ ಮನೆ ತುಂಬುವ ಹೆಣ್ಣು..
ಇನ್ಯಾವುದೋ ನೆಲೆಯಲ್ಲಿ ತನ್ನ ಒಲೆ ಉರಿಸಿ,
ತಾನೇ ಬೆಳೆದ ಆಹಾರ ಆಯ್ದು ತಂದು
ಮತ್ತೆ ಮತ್ತೆ ತನ್ನ ಬುಡವನ್ನು ಕಿತ್ತಿ ಹಚ್ಚಿ
ಮತ್ತೆ ಚಿಗುರುವ ಹೂವು ಹಣ್ಣು
ಕಾಯಿಯಾಗಿ ಆಸರೆಯಾಗುವ ಹೆಣ್ಣು..
ಮಳೆ ಹನಿಯ ಕಲೆಹಾಕಿ, ಬೆಟ್ಟದ ತುದಿಯಿಂದ ಜಾರಿ
ಎಲ್ಲರೊಂದಿಗೆ ಒಂದಾಗಿ ಇಳಿಯುವ ನದಿಯಂತೆ,
ಗಂಡನ ಮನೆಯಲ್ಲಿ, ಸಮಾಜದಲ್ಲಿ ,
ವೃತ್ತಿಯಲ್ಲಿ ನೆಲೆಯೂರಿ ಹರಿಯುವ
ನದಿಯಿಂದ ಉಪ್ಪಿನ ಸಾಗರ ಸೇರುವ ಹೆಣ್ಣು..
ಹೆಣ್ಣೆಂದರೆ ಸೌಂದರ್ಯ, ಐಶ್ವರ್ಯ, ಸಂಭ್ರಮ,
ಸಂಪತ್ತು ಸುಖ ಸಂತೋಷ ಸಮಾಧಾನ.. ಆದರೂ
ಹೆಣ್ಣೆಂದರೆ ಒಡಲ ಬೆಂಕಿ, ಬೇಡದ ಜವಾಬ್ದಾರಿ,
ಮನೆ ಒಡೆಯುವ ಮಾರಿ, ಕಿರಿಕಿರಿ ಹಚ್ಚುವ ತಲೆನೋವು,
ಕಾಮುಕನ ಕಣ್ಣಿಗೆ ಬೀದಿಗೆ ಬಿದ್ದ ಕಸ,
ಲೋಕ ಜ್ಞಾನ ವಿಲ್ಲದ ಪೆದ್ದು, ಮನೆ ಕೆಲಸದಾಳಿಗಿಂತಲೂ ಕೀಳು..
ಬದಲಾಯಿಸುತ್ತಲೇ ಬರುತ್ತಿರುವೆವು ಈ ಭ್ರಮೆಗಳನ್ನು..
ಕಿಚ್ಚು ಹತ್ತಿಸಿ, ಸೆಡ್ಡು ಹೊಡೆದು, ಗಟ್ಟಿಯಾಗಿ ಮುನ್ನಡೆಯಲು..
ಹೆಣ್ಣೆಂದರೆ ಸ್ನೇಹ, ಹೆಣ್ಣೆಂದರೆ ವಿಧ್ಯೆ, ಹೆಣ್ಣೆಂದರೆ ಧೈರ್ಯ,
ಹೆಣ್ಣೆಂದರೆ ಶಕ್ತಿ, ಈ ಸಮಾಜದ ಸರಿಸಮಾನವಾದ ಭಾಗ.
ಅವಳಿಲ್ಲದೆ ಜಗವಿಲ್ಲ, ಸೃಷ್ಟಿ, ಸ್ಥಿತಿ ಲಯ ಎಲ್ಲವೂ ಹೆಣ್ಣು..
ನಾವಂದುಕೊಂಡಂತೆ ಜಗತ್ತು.
ಬೇಕಾಗಿರುವುದು ನಮಗೆ ನಾವೇ ಆಸರೆಯಾಗುವ ಕಾಲ,
ಮಕ್ಕಳು ಮನೆ ಸಮಾಜಕ್ಕೆ ದಾರಿ ದೀಪವಾಗುವ ಹೊತ್ತು.
ನಾನೇನು ಎಂಬುದು ನನಗೆ ಗೊತ್ತಿದ್ದರೆ,
ಮಾದರಿ ನಾನು ಮಗಳಿಗೆ, ಗೆಳತಿಗೆ, ಸಮಾಜಕ್ಕೆ, ಜಗತ್ತಿಗೆ.. ಹೆಣ್ಣೆ!
ಆಸರೆಯಾಗಿ ಬದುಕು ಮೊದಲು ನಿನಗೆ, ನಿನ್ನ ಹೆಣ್ತನಕ್ಕೆ,
ನಿನ್ನನ್ನು ದೂಷಿಸಿ ಮೆರೆಯುವ ಎಲ್ಲಾ ದುಶ್ಯಕ್ತಿಗಳ ಮೆಟ್ಟಿ ನಿಂತು,
ಮನಸ್ಸು ಗಟ್ಟಿ ಮಾಡಿ ಕನಸು ಕಾಣು..
ವಿಧ್ಯೆ ಸಂಪತ್ತು ನಮ್ಮಲ್ಲಿದರೆ ಜಗತ್ತು ಕೂಡ ನಮ್ಮದೇ.
ಗೌರವದ ನಡೆ ನುಡಿ, ಪ್ರೀತಿ ಸ್ನೇಹ,
ಆಸ್ತಿ ಆಸರೆ ಎಲ್ಲವೂ ನಮ್ಮ ಹಕ್ಕು. ಅದನ್ನು ಪಡೆಯಲು
ಬೇಡಬೇಕಿಲ್ಲ ಯಾರಿಗೂ ಅತ್ತು ಕರೆದು.
ಕರೆದರೆ ಬರಲಾರೆಯೇ ಗೆಳತಿ! ಒಗ್ಗಟ್ಟಿನಲ್ಲಿರುವ ಬಲವ ಹೆಚ್ಚಿಸಲು,
ಪ್ರೀತಿ ಹಂಚಲು, ಹೆಣ್ತನದ ಒಲವು ಹೆಚ್ಚಿಸಲು,
ಕೈಗೊಂಬೆಯಲ್ಲಿ ಜೀವ ತುಂಬಿ ರಾಣಿಯ ಪಟ್ಟಕಟ್ಟಲು..
ಬೇಕು ನನ್ನವರ, ನನ್ನವನ ಪ್ರೀತಿ ತುಂಬಿಕೊಂಡು,
ಕೊಡಲು ಮುಂದಿನ ಪೀಳಿಗೆಗೆ ಆಶಾಭಾವದ ಒತ್ತಾಸೆಯೊಂದು..
ಅದಕ್ಕಾಗಿ ಎಣ್ಣೆಬತ್ತಿಯಾಗಿ ಗೆಳತಿಯರು.
ದೀಪ ಬೆಳಗಿ, ಬೆಳಕು ಚೆಲ್ಲಲು ಮತ್ತೆ ಉರಿಯುವ
ಪರಂಜ್ಯೋತಿಯಂತೆ ನೀವಿರಲು ಸದಾ ನನ್ನ ಜೊತೆಗೆ.
–ವಾಣಿ ಕಂಟ್ಲಿ
