
ಈ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗಳಿಗೆ ಪ್ರಕೃತಿಯು ನೈಸರ್ಗಿಕವಾಗಿ ಬೇಕು ಬೇಡಗಳನ್ನೆಲ್ಲಾ ಪೂರೈಸುತ್ತಾ ಬಂದಿದೆ. ಆದಿ ಕಾಲದಿಂದಲೂ ಮಾನವ ಪ್ರಕೃತಿಯಲ್ಲಿ ದೊರೆಯುವ ನೈಸರ್ಗಿಕ ವಸ್ತುಗಳನ್ನೇ ಬಳಸಿಕೊಳ್ಳುತ್ತಾ ತನ್ನ ಬೇಕು ಬೇಡಗಳನ್ನು ಪೂರೈಸಿಕೊಂಡು ಆರೋಗ್ಯದಿಂದ ಸುಖವಾಗಿ ಜೀವನ ಸಾಗಿಸುತ್ತ ಬಂದಿದ. ಮನುಷ್ಯನಿಗೆ ಬುದ್ಧಿಶಕ್ತಿ ಬೆಳೆದಂತೆಲ್ಲ ನೈಸರ್ಗಿಕ ವಸ್ತುಗಳೊಂದಿಗೆ ಕೃತಕ ವಸ್ತುಗಳನ್ನು ತಯಾರಿಸಿ ಬಳಸಲು ಪ್ರಾರಂಭಿಸಿದನು. ಅವುಗಳಲ್ಲಿ ಪ್ಲಾಸ್ಟಿಕ್ ಸಹ ಒಂದು.
ಕ್ರಿ.ಶ ೧೮೬೨ ರಲ್ಲಿ ಅಲೆಕ್ಸಾಂಡರ್ ಪಾರ್ಕೆಸ್ ಎಂಬ ವಿಜ್ಞಾನಿಯು ಪಾರ್ಕೆಸಿನ್ (ಮೊದಲ ಅರೆ-ಕೃತಕ ಪ್ಲಾಸ್ಟಿಕ್) ಅನ್ನು ಇಂಗ್ಲೆಂಡಿನ ‘ಬರ್ಮಿಂಗ್ಹ್ಯಾಮ್’ನಲ್ಲಿ ಕಂಡು ಹಿಡಿದನು. ಆದರೆ, ಇದು ವಾಣಿಜ್ಯಿಕವಾಗಿ ಯಶಸ್ವಿಯಾಗಲಿಲ್ಲ. ಏಕೆಂದರೆ, ಇದರ ಉತ್ಪಾದನಾ ವೆಚ್ಚ ಹೆಚ್ಚಾಗಿತ್ತು ಹಾಗೂ ಸುಲಭವಾಗಿ ಒಡೆದು ಹೋಗುತ್ತಿತ್ತು. ಇದರಿಂದಾಗಿ ಇದು ಹೆಚ್ಚು ಬಳಕೆಗೆ ಬರಲಿಲ್ಲ. ನಂತರ ಸುಮಾರು ೪೫ ವರ್ಷಗಳು ಕಳೆದ ಮೇಲೆ ಕ್ರಿ.ಶ ೧೯೦೭ ರಲ್ಲಿ ಲಿಯೋ ಬೇಕಲ್ಯಾಂಡ್ ಎಂಬ ವಿಜ್ಞಾನಿಯು ಬೇಕಲೈಟ್(ಪೂರ್ಣ ಪ್ರಮಾಣದ ಕೃತಕ ಪ್ಲಾಸ್ಟಿಕ್) ಅನ್ನು ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್‌ನ ಯಾಂಕರ್ಸ್‌ನಲ್ಲಿ ಆವಿಷ್ಕರಿಸಿದನು. ಇದು ಆಧುನಿಕ ಪ್ಲಾಸ್ಟಿಕ್ ಉದ್ಯಮದ ಪ್ರಾರಂಭಕ್ಕೆ ಪ್ರಮುಖ ಕಾರಣವಾಯಿತು. ಹಾಗಾಗಿ ಇವನನ್ನು ಪ್ಲಾಸ್ಟಿಕ್‌ನ ಪಿತಾಮಹ ಎಂದು ಕರೆಯಲಾಗುತ್ತದೆ.
ಕ್ರಿ.ಶ ೧೯೨೦ ದಶಕದಲ್ಲಿ ಮೊಟ್ಟ ಮೊದಲ ಬಾರಿಗೆ ಬ್ರಿಟಿಷ್ ಮೂಲಗಳಿಂದ ಭಾರತಕ್ಕೆ ಈ ಪ್ಲಾಸ್ಟಿಕ್ ಆಮದುಗೊಂಡಿತ್ತು. ಭಾರತದಲ್ಲಿ ‘ಇಂಡಿಯನ್ ಪೆಟ್ರೋಕೆಮಿಕಲ್ಸ್ ಕಾರ್ಪೊರೇಷನ್ ಲಿಮಿಟೆಡ್’ (IPCL) ಎಂಬ ಪ್ಲಾಸ್ಟಿಕ್ ಉತ್ಪಾದನೆಯ ಮೊದಲ ವಾಣಿಜ್ಯಿಕ ಕಂಪನಿಯು ಕ್ರಿ.ಶ ೧೯೬೯ರಲ್ಲಿ ಗುಜರಾತಿನ ವಡೋದರಾದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಪ್ರಾರಂಭವಾಯಿತು. ನಂತರ ಇದು ಕ್ರಿ.ಶ ೨೦೦೨ ರಲ್ಲಿ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ NDA ಸರ್ಕಾರದ ವತಿಯಿಂದ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ನ ಖಾಸಗಿ ಸಂಸ್ಥೆಗೆ ಮಾರಾಟ ಮಾಡಲಾಯಿತು.
ಈ ಪ್ಲಾಸ್ಟಿಕ್ ಬಹು ಉಪಯೋಗಕಾರಿಯೇ ಆದರೂ ಸಹ ಇದು ಪ್ರಕೃತಿಗೆ ಕಂಟಕಪ್ರಾಯವಾದದ್ದು.! ಹಾಗೂ ಜೀವಿಗಳಿಗೆ ಅತ್ಯಂತ ಹಾನಿ ಉಂಟು ಮಾಡುವಂತದ್ದು. ಯಾಕೆಂದರೆ, ಪ್ಲಾಸ್ಟಿಕ್ನ್ ಪಾಲಿಥೀನ್ ಮತ್ತು ಪಾಲಿಪ್ರೊಪಿಲೀನ್‌ನ ಹೈಡ್ರೋಕಾರ್ಬನ್ ಆಧಾರಿತ ರಚನೆಯ ಸ್ಥಿರವಾದ C-C ಮತ್ತು C-H ಬಂಧಗಳಿಂದಾಗಿ ಜಲನಿರೋಧಕ ಗುಣ, ಹೆಚ್ಚಿನ ಆಣ್ವಿಕ ತೂಕ, ಮತ್ತು ಕಿಣ್ವ ವಿರೋಧಕ ಸ್ವಭಾವದಿಂದ ಕೂಡಿದ್ದು ಸೂಕ್ಷ್ಮಜೀವಿಗಳಿಗೆ ಇವುಗಳನ್ನು ವಿಘಟಿಸಲು ಸಾಧ್ಯವಾಗುವುದಿಲ್ಲ. ಅದರಿಂದ ಇದು ದೀರ್ಘಕಾಲದ ವರೆಗೂ ಕೊಳೆಯಾದೆ ಪ್ರಕೃತಿಯಲ್ಲಿ ಉಳಿದು ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗುತ್ತದೆ.
ಬಳಕೆ ಮಾಡಿ ಬಿಸಾಡಿದ ಪ್ಲಾಸ್ಟಿಕ್ ಸಾವಿರಾರು ವರ್ಷಗಳಾದರೂ ಸಂಪೂರ್ಣವಾಗಿ ಕೊಳೆಯದಿರುವ ಕಾರಣ ಭೂಮಿಯ ಮೇಲೆ ತ್ಯಾಜ್ಯ ಶೇಖರಣೆಯಾಗುತ್ತದೆ. ಹೀಗೆ ಶೇಖರಣೆಯಾದ ಪ್ಲಾಸ್ಟಿಕ್‌ನಿಂದ ಬಿಡುಗಡೆಯಾಗುವ ಫ್ಥಾಲೇಟ್‌ಗಳು, ಬಿಸ್ಫೆನಾಲ್ A ನಂತ ರಾಸಾಯನಿಕಗಳು ವಿಷಕಾರಿಯಾಗಿದ್ದು ಇವು ಮಣ್ಣಿನಲ್ಲಿ ಫಲವತ್ತತೆಗೆ ಅಗತ್ಯವಾದ ಪೋಷಕಾಂಶಗಳ ಚಕ್ರೀಕರಣದಲ್ಲಿ ಪ್ರಮುಖ ಪಾತ್ರವಹಿಸುವ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುತ್ತವೆ. ಇದರಿಂದ ಮಣ್ಣಿನ pH ಮಟ್ಟ ಬದಲಾಗಿ ಫಲವತ್ತತೆ ಕಡಿಮೆಯಾಗುತ್ತದೆ. ಹಾಗೂ ಈ ಪ್ಲಾಸ್ಟಿಕ್‌ನ ದೊಡ್ಡ ತುಂಡುಗಳು ಮತ್ತು ಪ್ಲಾಸ್ಟಿಕ್ ಚೀಲಗಳು, ಮಣ್ಣಿನ ಮೇಲ್ಮೈಯಲ್ಲಿ ತಡೆಯಂತೆ ಕಾರ್ಯನಿರ್ವಹಿಸುವುದರಿಂದ ನೀರು ಮತ್ತು ಗಾಳಿಯ ಸಂಚಾರವು ಮಣ್ಣಿನ ಆಳಕ್ಕೆ ತಲುಪದೇ ನೀರಿನ ಒಳನುಸುಕುವಿಕೆ ಕಡಿಮೆಯಾಗಿ ಬೆಳೆಗಳ ಬೇರುಗಳಿಗೆ ಸಾಕಷ್ಟು ತೇವಾಂಶ ದೊರೆಯುವುದಿಲ್ಲ. ಇದರಿಂದ ಮಣ್ಣಿನ ಸಂಕುಚಿತಗೊಳ್ಳುವಿಕೆ (compaction) ಸಂಭವಿಸಿ, ಬೇರುಗಳ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ಹಿಂಗಾಗಿ ಇದರಿಂದ ರೈತರಿಗೆ ಇಳುವರಿ ಕಡಿಮೆ ಬಂದು ಭಾರಿ ಪ್ರಮಾಣದ ನಷ್ಟ ಉಂಟಾಗುವುದು.! ಮತ್ತು ಪ್ಲಾಸ್ಟಿಕ್‌ನ ವಿಷಕಾರಕ ರಾಸಾಯನಿಕಗಳಿಂದ ಮಾಲಿನ್ಯಗೊಂಡ ಬೆಳೆಗಳು ಮಾನವ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವಂತದ್ದು.!
ಪ್ಲಾಸ್ಟಿಕ್ ಕೊಳೆಯದಂತ ಹಗುರವಾದ ವಸ್ತು ಅದ ಕಾರಣ ಮಳೆ ಬಂದಾಗ ನೀರಿನೊಂದಿಗೆ ತೇಲಿಕೊಂಡು ನದಿ ಮತ್ತು ಸಾಗರ ಸೇರಿಕೊಳ್ಳುತ್ತದೆ. ಪ್ರತಿವರ್ಷ ಸುಮಾರು ೮ ರಿಂದ ೧೧ ದಶಲಕ್ಷ ಮೆಟ್ರಿಕ್ ಟನ್‌ಗಳಷ್ಟು ಪ್ಲಾಸ್ಟಿಕ್ ಸಾಗರಕ್ಕೆ ಸೇರುತ್ತಿದೆ. ಹೀಗೆ ಸೇರುವ ಪ್ಲಾಸ್ಟಿಕ್ ಸಾಗರದಲ್ಲಿ ‘ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್’ ನಂತಹ ಬೃಹತ್ ಆಕಾರದ ತ್ಯಾಜ್ಯದ ದಿಬ್ಬಗಳನೆ ರಚಿಸಿದೆ.! ಪ್ರಸ್ತುತ ಅಂದಾಜು ಸಾಗರದಲ್ಲಿ ೨೫೦ ದಶಲಕ್ಷ ಮೆಟ್ರಿಕ್ ಟನ್‌ಗಳಿಗಿಂತಲು ಅಧಿಕ ಪ್ಲಾಸ್ಟಿಕ್ ತ್ಯಾಜ್ಯವಿದ್ದು, ಪ್ರತಿವರ್ಷವು ಸಾಗರಕ್ಕೆ ಸೇರುವ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ೪% ರಷ್ಟು ಹೆಚ್ಚುತ್ತಿದ್ದು, ಇದು ೨೦೪೦ ರ ವೇಳೆಗೆ ೬00 ದಶಲಕ್ಷ ಮೆಟ್ರಿಕ್ ಟನ್‌ಗಳಿಗೆ ಏರುವ ಸಾಧ್ಯತೆ ಇದೆ.! ಹೀಗೆ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯವು ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡಿ, ಜಲಚರ ಜೀವಿಗಳಿಗೆ ಬದುಕಲು ಕಷ್ಟಕರವಾದ ವಾತಾವರಣವನ್ನು ಸೃಷ್ಟಿಸುತ್ತದೆ.!
ಸಮುದ್ರಕ್ಕೆ ಸೇರಿದ ಪ್ಲಾಸ್ಟಿಕ್‌ನ್ನು ಜಲಚರ ಜೀವಿಗಳಾದ ಮೀನುಗಳು, ಕಡಲಾಮೆಗಳು ಮತ್ತು ಸಮುದ್ರ ಪಕ್ಷಿಗಳು ಆಹಾರವೆಂದು ತಪ್ಪಾಗಿ ಭಾವಿಸಿ ತಿನ್ನುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗೆ ಒಳಗಾಗಿ ಹಾಗೂ ಕರುಳು, ಗಂಟಲಲ್ಲಿ ಸಿಕ್ಕಿಕೊಂಡು ಉಸಿರಾಟದಂತ ತೊಂದರೆಗಳಿಂದ ಮತ್ತು ಪ್ಲಾಸ್ಟಿಕ್ ತಂತಿಗಳಲ್ಲಿ , ಚೀಲಗಳಲ್ಲಿ ಸಿಕ್ಕಿಕೊಂಡು ಈಜಲಾಗದೆ ಸಾವನ್ನಪ್ಪುತ್ತಿವೆ.
ಸೂರ್ಯನ ನೇರಳಾತೀತ (UV) ಕಿರಣಗಳಿಂದ ಪ್ಲಾಸ್ಟಿಕ್ ಮೈಕ್ರೋಪ್ಲಾಸ್ಟಿಕ್‌ಗಳ ರೂಪದಲ್ಲಿ ಒಡೆಯುತ್ತದೆ. ಈ ಮೈಕ್ರೋಪ್ಲಾಸ್ಟಿಕ್‌ಗಳು ಸಣ್ಣ ಜಲಜರ ಜೀವಿಗಳಿಂದ ತಿನ್ನಲ್ಪಟ್ಟು, ಆಹಾರ ಸರಪಳಿಯ ಮೂಲಕ ದೊಡ್ಡ ಜೀವ ಜಾತಿಗಳಿಗೆ ವರ್ಗವಾಗುತ್ತವೆ, ಇದರಿಂದ ವಿಷಕಾರಿ ಪರಿಣಾಮಗಳು ಹೆಚ್ಚಾಗಿ ಜೀವಿಗಳ ಸಾವು ಸಂಭವಿಸುವುದು. ಇದು ಮೀನು ತಿನ್ನುವ ಮಾನವನಿಗೂ ಅಪಾಯ ಉಂಟುಮಾಡುತ್ತದೆ.! ಮತ್ತು ಮೈಕ್ರೋಪ್ಲಾಸ್ಟಿಕ್‌ನ ಕಣಗಳು ನೀರಿನೊಂದಿಗೆ ಬೆರೆತು ಕುಡಿಯುವ ನೀರು ಕಲುಷಿತ ಗೊಳಿಸುತ್ತದೆ. ಇಂತಹ ನೀರು ಸೇವನೆಯಿಂದ ಮಾನವ ರೋಗಕ್ಕೆ ಬಲಿಯಾಗುವನು.
ಈ ಪ್ಲಾಸ್ಟಿಕ್ ತ್ಯಾಜ್ ಸುಡುವುದರಿಂದ ಡಯಾಕ್ಸಿನ್‌ನಂತ ಅತ್ಯಂತ ವಿಷಕಾರಿ ಅನಿಲಗಳು ಬಿಡುಗಡೆಯಾಗುತ್ತಿವೆ. ಇವು ಪರಿಸರದಲ್ಲಿ ದೀರ್ಘಕಾಲ ಉಳಿಯುವುದರಿಂದ ಉಸಿರಾಟದ ಮೂಲಕ ಮಾನವನ ದೇಹ ಸೇರಿಕೊಂಡು ನೇರವಾಗಿ ಶ್ವಾಸಕೋಶದ ಒಳಪದರದ ಮೇಲೆ ದಾಳಿ ಮಾಡುತ್ತವೆ. ಇದರಿಂದ ಶ್ವಾಸಕೋಶದ ಉರಿಯೂತ, ಉಸಿರಾಟದ ತೊಂದರೆ, ಗಂಟಲಿನ ಕಿರಿಕಿರಿಕೆ, ಕೆಮ್ಮು, ತಲೆತಿರುಗುವಿಕೆ, ರೋಗ ನಿರೋಧಕ ಶಕ್ತಿಯ ಕುಸಿತ, ಅಂಗಾಂಗ ವೈಶಾಲ್ಯತೆ ಮತ್ತು ಹಾರ್ಮೋನ್ ಅಸಮತೋಲನ, ನಪುಂಸಕತ್ವದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟುಮಾಡುತ್ತವೆ. ಡಯಾಕ್ಸಿನ್‌ನಂತ ಅತ್ಯಂತ ವಿಷಕಾರಿ ಅನಿಲಗಳಿಗೆ ದೀರ್ಘಕಾಲಿಕ ಒಡ್ಡಿಕೊಳ್ಳುವಿಕೆಯಿಂದ ಶ್ವಾಸಕೋಶದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತವೆ.!
ಪ್ಲಾಸ್ಟಿಕ್ ಸುಟ್ಟಾಗ ಕಾರ್ಬನ್ ಡೈಆಕ್ಸೈಡ್(CO₂), ಮೀಥೇನ್(CH), ಕಪ್ಪು ಕಾರ್ಬನ್(Black Carbon) ನಂತಹ ಹಸಿರುಮನೆ ಅನಿಲಗಳು(Greenhouse gases) ಬಿಡುಗಡೆಯಾಗುತ್ತವೆ. ಡಯಾಕ್ಸಿನ್‌ನಂತಹ ಇತರ ವಿಷಕಾರಿ ಅನಿಲಗಳ ಜೊತೆಗೆ, ಈ ಹಸಿರುಮನೆ ಅನಿಲಗಳು ಕೂಡಿಕೊಂಡು ಆರೋಗ್ಯ ಮತ್ತು ಪರಿಸರದ ಮೇಲೆ ದ್ವಿಮುಖ ಹಾನಿಯೂ ಉಂಟು ಮಾಡುತ್ತವೆ.! ಈ ಹಸಿರುಮನೆ ಅನಿಲಗಳು ವಾತಾವರಣದಲ್ಲಿ ಶಾಖವನ್ನು ಸೆರೆಹಿಡಿಯುವ ಮೂಲಕ ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗುತ್ತವೆ. ಈ ಶಾಖದ ಒತ್ತಡ(Heatstroke) ದಿದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.! ಮತ್ತು ಧ್ರುವದ ಹಿಮನದಿಗಳು ಹಾಗೂ ಹಿಮಾಲಯದ ಗ್ಲೇಸಿಯರ್‌ಗಳ ಕರಗುವಿಕೆಯಿಂದ ಸಮುದ್ರ ಮಟ್ಟ ಏರಿಕೆಯಾಗಿ ಕರಾವಳಿ ಪ್ರದೇಶಗಳು ಮುಳುಗಡೆಯ ಅಪಾಯದಲ್ಲಿವೆ.! ಈ ಹಸಿರುಮನೆ ಅನಿಲಗಳಿಂದ ಹವಾಮಾನ ಬದಲಾವಣೆಯಾಗಿ ಪರಿಸರ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತಿರುವುದರಿಂದ ಸಸ್ಯಗಳು, ಪ್ರಾಣಿಗಳು ಮತ್ತು ಸಮುದ್ರ ಜೀವಿಗಳ ಆವಾಸಸ್ಥಾನಗಳು ನಾಶವಾಗುತ್ತಿವೆ. ಗುಬ್ಬಚ್ಚಿಗಳು ಅಳಿವಿನ ಅಂಚಿಗೆ ಬಂದು ತಲುಪಿರುವುದಕ್ಕೆ ಇದು ಒಂದು ರೀತಿಯ ಕಾರಣ ಎಂದು ಹೇಳಿದರೆ ತಪ್ಪಾಗಲಾರದು.
ಹವಾಮಾನ ವೈಪರೀತ್ಯದಿಂದ ಸಮುದ್ರದ ತಾಪಮಾನ ಏರಿಕೆಯಾಗಿ ಮೀನುಗಾರಿಕೆಯ ಕೃಷಿಗೂ ಹಾನಿಯಾಗುತ್ತಿದೆ. ನಮ್ಮ ಭಾರತದಲ್ಲಿ ಈ ರೀತಿಯ ಹವಾಮಾನ ವೈಪರೀತ್ಯಕ್ಕೆ ಸಿಕ್ಕು ಪ್ರತಿ ವರ್ಷ ೫೦ ರಿಂದ ೬೦ ಜನ ಮೀನುಗಾರರು ಸಾವನ್ನಪ್ಪುತ್ತಿದ್ದಾರೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ(ILO) ವರದಿಯು ಪ್ರಕಾರ ವಿಶ್ವದಾದ್ಯಂತ ಪ್ರತಿ ವರ್ಷ ಅಂದಾಜು ಸುಮಾರು ೨೪,೦೦೦ ರಿಂದ ೩೨,೦೦೦ ಜನ ಮೀನುಗಾರರು ಸಮುದ್ರ ಮತ್ತು ಸಾಗರಗಳಲ್ಲಿ ದುರಂತವಾಗಿ ಸಾವಿಗೀಡಾಗುತ್ತಿದ್ದಾರೆ.
ಪ್ರಸ್ತುತ ವಿಶ್ವದಾದ್ಯಂತ ವರ್ಷಕ್ಕೆ ೩೦೦ ಮಿಲಿಯನ್ ಟನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾತಿಯಾಗುತ್ತಿದೆ. ಇದರಲ್ಲಿ ಸುಮಾರು ೯.೩ ರಿಂದ ೧೦.೨ ಮಿಲಿಯನ್ ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿಸುವ ಭಾರತ ಪ್ರಪಂಚದಲ್ಲೇ ಮೊದಲನೇ ಸ್ಥಾನದಲ್ಲಿರುವುದು ತುಂಬ ಆತಂಕಕಾರಿ ವಿಷಯ..!
ಭಾರತ ಸಂವಿಧಾನದ ಪ್ಲಾಸ್ಟಿಕ್ ಅಧಿನಿಯಮದ ಪ್ರಕಾರ ಭಾರತದಲ್ಲಿ ಏಕಬಾರಿ-ಬಳಕೆಯ ಪ್ಲಾಸ್ಟಿಕ್‌ನ ನಿಷೇಧವಿದೆ. ಆದರು ಸಹ ಪ್ರಸ್ತುತ ಭಾರತದಲ್ಲಿ ಸಭೆ ಸಮಾರಂಭಗಳಲ್ಲೆಲ್ಲಾ ಏಕಬಾರಿ-ಬಳಕೆಯ ಪ್ಲಾಸ್ಟಿಕ್‌ನೆ ಅತಿ ಹೆಚ್ಚಾಗಿ ಬಳಸಲಾಗುತ್ತಿದೆ. ವಿಶೇಷವಾಗಿ ಭಾರತದಲ್ಲಿನ ಪ್ರತಿಷ್ಠಿತ ಕಂಪನಿಗಳು ಕಾನೂನಿನ ಭಯವಿಲ್ಲದೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಏಕಬಾರಿ ಬಳಕೆಯ ಪ್ಲಾಸ್ಟಿಕ್ ತಯಾರಿಸಿ ಬಳಕೆ ಮಾಡುತ್ತಿವೆ. ಈ ರೀತಿ ಕಾನೂನಿನ ವಿರೋಧವಾಗಿ ಏಕಬಾರಿ ಬಳಕೆಯ ಪ್ಲಾಸ್ಟಿಕ್ ತಯಾರಿಸಿ ವಿವಿಧ ಪದಾರ್ಥಗಳ ಪ್ಯಾಕಿಂಗ್ ಗೆ ಬಳಸಿ ಮಾರಾಟ ಮಾಡುತ್ತಿರುವ ಈ ಬಂಡವಾಳಿಗರ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳುವ ದಮ್ಮು-ತಾಕತ್ತು ಬಂಡವಾಳಿಗರ ಕೈ ಗೊಂಬೆಯಂತಿರುವ ಇಂದಿನ ರಾಜಕೀಯ ನಾಯಕರುಗಳಲ್ಲಿ ಇಲ್ಲ! ಸಂವಿಧಾನದ ಕಾಯ್ದೆ ಕಾನೂನುಗಳು ಎಷ್ಟೇ ಶ್ರೇಷ್ಠವಾಗಿದ್ದರು ಅದನ್ನು ಜಾರಿಗೊಳಿಸಿ ಕಾರ್ಯರೂಪಕ್ಕೆ ತರುವ ಜಾಗದಲ್ಲಿ ಈ ರೀತಿಯ ನಾಲಾಯಕರು ಕುಳಿತರೆ ಹೀಗೆ ಆಗುವುದು.
ಈ ಪ್ಲಾಸ್ಟಿಕ್ ಪರಿಸರದ ಮೇಲೆ ಮತ್ತು ಆರೋಗ್ಯದ ಮೇಲೆ ಇಷ್ಟೇಲ್ಲಾ ದುಷ್ಪರಿಣಾಮ ಬೀರುತ್ತಿರುವುದು ನಮ್ಮನ್ನಾಳುವ ನೇತಾರುಗಳಿಗೆ ಗೊತ್ತಿದ್ದರು ಗೊತ್ತಿಲ್ಲದವರಂತೆ ಕೈ ಬಾಯಿ ಕಟ್ಟಿಕೊಂಡು ಸುಮ್ಮನೆ ಕುಳಿತಿದ್ದಾರೆ. ಹೀಗೆ ಕುಳಿತರೆ ಮುಂದಿನ ದಿನಗಳಲ್ಲಿ ಮಾನವ ಸಮಾಜ ಬಹು ದೊಡ್ಡ ಅಪಾಯ ಎದುರು ನೋಡುವ ದುಸ್ಥಿತಿ ಬಂದೊದಗಲಿದೆ.! ಹಾಗಾಗಿ ಸರ್ಕಾರ ಈ ಕೆಳಗಿನ ಅಂಶಗಳ ಕಡೆಗೆ ಗಮನ ಹರಿಸಬೇಕು.
೧. ಏಕಬಾರಿ ಬಳಕೆಯ ಪ್ಲಾಸ್ಟಿಕ್ ನಿಷೇಧ ಕಾಯ್ದೆಯು ಕಟ್ಟುನಿಟ್ಟಾಗಿ ಕಾರ್ಯ ರೂಪಕ್ಕೆ ತರಬೇಕು.
೨. ಕಾನೂನಿನ ವಿರೋಧವಾಗಿ ಏಕಬಾರಿ ಬಳಕೆಯ ಪ್ಲಾಸ್ಟಿಕ್ ತಯಾರಿಸುವ ಕಂಪನಿಗಳನ್ನು ಬ್ಯಾನ್ ಮಾಡಬೇಕು.
೩. ಉದ್ಯಮಗಳಿಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಮಾರ್ಗಸೂಚಿಗಳನ್ನು ರೂಪಿಸಿ, ಪ್ಯಾಕೇಜಿಂಗ್‌ಗೆ ಪರ್ಯಾಯ ವಸ್ತುಗಳನ್ನು ಬಳಸಲು ಪ್ರೇರೇಪಿಸಬೇಕು.
೪. ಪ್ಲಾಸ್ಟಿಕ್ ತಯಾರಿಸುವ ಕಂಪನಿಗಳಿಗೆ, ಬಳಸಿದ ಪ್ಲಾಸ್ಟಿಕ್ ಉತ್ಪನ್ನಗಳನ್ನು ಗ್ರಾಹಕರಿಂದ ಹಿಂದಿರುಗಿ ಖರೀದಿಸುವಂತೆ ತಾಕಿತು ಮಾಡಬೇಕು.
೫. ಪ್ಲಾಸ್ಟಿಕ್‌ನ ಪರ್ಯಾಯವಾಗಿ, ಕಾಗದ, ಬಟ್ಟೆ ಅಥವಾ ಜೈವಿಕ ವಿಘಟನೀಯ ವಸ್ತುಗಳಿಂದ ತಯಾರಾಗುವ ಉತ್ಪನ್ನಗಳಿಗೆ ಪ್ರೋತ್ಸಾಹಿಸಿ ತೆರಿಗೆ ರಿಯಾಯಿತಿ ನೀಡಬೇಕು.
೬. ಪ್ಲಾಸ್ಟಿಕ್‌ನ ಮರುಬಳಕೆ ಕೇಂದ್ರಗಳ ಸಂಖ್ಯೆ ಹೆಚ್ಚಿಸಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ವಿಂಗಡಿಸಲು ಮತ್ತು ಸಂಸ್ಕರಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಬೇಕು.
೭. ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
೮. ಪ್ಲಾಸ್ಟಿಕ್‌ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸ್ಥಳೀಯ ಜಾನಪದ ಕಲಾವಿದರಿಂದ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.
೯. ಸ್ವಚ್ಛ ಭಾರತ ಅಭಿಯಾನದಂತಹ ಯೋಜನೆಗಳ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಜನರನ್ನು ಒಗ್ಗೂಡಿಸಬೇಕು.
೧೦. ಪ್ಲಾಸ್ಟಿಕ್‌ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ೬ ರಿಂದ ೮ ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಪಾಠವಾಗಿ ಸೇರಿಸಬೇಕು.
೧೧. ಪರಿಸರ ಸ್ನೇಹಿ ಪ್ಲಾಸ್ಟಿಕ್‌ನ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಣಕಾಸಿನ ನೆರವು ಮತ್ತು ಬೆಂಬಲ ನೀಡಬೇಕು.( ಇದನ್ನು ಸಸ್ಯ ಆಧಾರಿತ ಸಂಪನ್ಮೂಲಗಳಿಂದ ತಯಾರಿಸಲಾಗುತ್ತದೆ. ಇನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ.)
೧೨. ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಿ, ತಂತ್ರಜ್ಞಾನ ಮತ್ತು ಜ್ಞಾನ ವಿನಿಮಯವನ್ನು ಉತ್ತೇಜಿಸಬೇಕು.
ಈ ಪ್ಲಾಸ್ಟಿಕ್ ಎಂಬ ಮಹಾ ಭೂತವನ್ನು ನಿರ್ನಾಮ ಮಾಡಲು ಸರ್ಕಾರದೊಂದಿಗೆ ಸಾಮಾನ್ಯರು ಸಹ ಸ್ವ ಇಚ್ಛೆಯಿಂದ ಈ ಕೇಳಗಿನ ಅಂಶದಂತೆ ಕಾರ್ಯಗತವಾಗಬೇಕು. ಇದು ಪ್ರಜ್ಞಾವಂತರ ಕರ್ತವ್ಯವೂ ಹೌದು.
- ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು.
- ಸಭೆ ಸಮಾರಂಭಗಳಲ್ಲಿ ಯಾವುದೇ ರೀತಿಯ ಏಕಬಾರಿ ಬಳಕೆಯ ಪ್ಲಾಸ್ಟಿಕ್ ಬಳಸದೆ ಇರುವುದು. ( ನೆನಪಿರಲಿ ಸಭೆ ಸಮಾರಂಭಗಳಲ್ಲಿ ಒಮ್ಮೆ ಬಳಸಿ ಬಿಸಾಕುವಂತ ಪ್ಲಾಸ್ಟಿಕ್‌ನ ತಟ್ಟೆ, ಲೋಟ, ಚಮಚ ಇತ್ಯಾದಿಗಳಿಗೆ ನಿರ್ಬಂಧವಿದೆ. ಇವುಗಳ ಬಳಕೆಯಿಂದ ದಂಡಕ್ಕೆ ಒಳಗಾಗಬಹುದು. ದಂಡ ವಿಧಿಸುವ ಸಂಪೂರ್ಣ ಅಧಿಕಾರ ನಗರ ಸಭೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಹೊಂದಿದ್ದಾರೆ.)
- ಅನಿವಾರ್ಯವಾಗಿ ಬಳಕೆ ಮಾಡಿದ ಪ್ಲಾಸ್ಟಿಕ್‌ನು ಎಲ್ಲೆಂದರಲ್ಲಿ ಎಸೆಯದೆ ಮರು ವಿಂಘಟನೆಗಾಗಿ ಕೊಂಡೊಯ್ಯುವವರಿಗೆ ನೀಡುವುದು ಅಥವ ಮಾರುವುದು.
- ಪ್ಲಾಸ್ಟಿಕ್ ಬದಲಾಗಿ ಪೇಪರ್, ಗಾಜು, ಮರ, ಎಲೆ ಇತ್ಯಾದಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ವಸ್ತುಗಳನ್ನು ಬಳಸುವುದು.
- ಪೌರ ಕಾರ್ಮಿಕರಿಗೆ ಕಸ ನೀಡುವಾಗ ಪ್ಲಾಸ್ಟಿಕ್ ಮತ್ತು ಕಸ ಬೆರೆ ಬೆರೆ ಮಾಡಿ ನೀಡುವುದು.
- ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಪ್ಲಾಸ್ಟಿಕ್ ಮಾಲಿನ್ಯದ ಕುರಿತು ಅರಿವು ಮೂಡಿಸುವುದು.
- ಸಾಮಾಜಿಕ ಜಾಲತಾಣಗಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು.
- ಸ್ಥಳೀಯ ಪರಿಸರವನ್ನು ಶುಚಿಗೊಳಿಸುವ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು.
ಈ ಮೇಲಿನ ಕ್ರಮಗಳನ್ನು ಅಳವಡಿಸಿಕೊಂಡರೆ, ಪ್ಲಾಸ್ಟಿಕ್ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಬನ್ನಿ ಪ್ರಬುದ್ಧ ಭಾರತದ ಕನಸನ್ನು ಹೊತ್ತು ಪ್ಲಾಸ್ಟಿಕ್ ಬಳಕೆ ತ್ಯಾಜಿಸೋಣ; ಪರಿಸರವನ್ನು ರಕ್ಷಿಸಿಕೊಳ್ಳೋಣ. ದೇಶದ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡೋಣ.
–ಅಶ್ವಜೀತ ದಂಡಿನ