ಪಂಜು ಕಾವ್ಯಧಾರೆ

ಮಕರ ಸಂಕ್ರಾಂತಿ

ಉತ್ತರಾಯಣದ ಪುಣ್ಯ ಕಾಲವಿದು
ದೀರ್ಘ ದಿನಗಳ ಆರಂಭವಿದು
ವಸಂತ ಋತುವಿನ ಸಮಯವಿದು
ಸುಖ ಸಮೃದ್ಧಿಯ ಸಂಕೇತವಿದು

ಭೂರಮೆಗೆ ಚಿರ ಯವ್ವನದ ಆನಂದ
ಅನುದಿನವೂ ನವ ಚೈತನ್ಯದ ನಿನಾದ
ಬಾನೇರುವ ಬಾಲಂಗೋಚಿ ಸಂಭ್ರಮವು
ರಂಗೇರುವ ರಸದೌತಣ ಉತ್ಸವವು

ಎಳ್ಳು – ಬೆಲ್ಲದ ಸಿಹಿ ಹೂರಣ
ಮನ – ಮಾನಸದ ಸವಿ ಪೂರಣ
ಬಾಂಧವ್ಯ ಬೆಸೆಯುವ ಈ ಹಬ್ಬ
ಸೌಹಾರ್ದ ಸಾರುವ ಸುಗ್ಗಿಯ ಹಬ್ಬ

ಕಹಿ ನೆನಪುಗಳು ಮರೆಯಾಗಲಿ
ಸಿಹಿ ಮಧುರತೆ ಚಿರವಾಗಲಿ
ದ್ವೇಷ ಅಸೂಯೆಗಳ ಮರೆಯೋಣ
ಹಬ್ಬದ ಸಂಭ್ರಮ ಸಾರೋಣ

-ಗಾಯತ್ರಿ ನಾರಾಯಣ ಅಡಿಗ

“ಉರುಲು”

ಹಾರು ಮಗಳೇ ಹಾರು
ಬೇಡವೆಂದವರಾರು ?
ಆದರೆ…
ಹಾರದಿರು ಹದ್ದು ಮೀರಿ !
ಹದ್ದುಗಳಿದ್ದಾವೆ ಎಲ್ಲೆಲ್ಲೂ
ಹೋದಂತೆ ಮೇಲೆ ಮೇಲೆ…
ಓದು ಮಗಳೇ ಓದು
ಮನೆ ಮಾರು ಸಂಸಾರದ
ನಂತರ ಸಮಯವಿದ್ದರೆ ಓದು
ಧಾರಾಳವಾಗಿ ಓದು !

ಎಲ್ಲೆ ಮೀರದ ಪಾಠ
ಕಲಿಸಿದರು ಪುಟ್ಟ ಹೆಜ್ಜೆಗೆ ಒಜ್ಜೆ
ಬೆಳ್ಳಿ ಗೆಜ್ಜೆಯ ವಲಯ
ಅದು ಬೇಕು ಇದು ಬೇಕು
ಸಾಕು ! ಮಿತಿ ಬೇಕು ಆಸೆಗೆ !
ಹಾಕಿದರು ತೋರಿದ ಬೆರಳಿಗೆ
ಉಂಗುರ ಉರುಲು
ಮಿಡುಕದಂತೆ ಒಡ್ಯಾಣ ನಡುವಿಗೆ
ಅದೆಷ್ಟು ಮಾತು ಹೆಣ್ಣಿಗೆ !
ಕಟ್ಟಿದರು ಕರಿಮಣಿ ಕೊರಳಿಗೆ
ತಾಳಿಬೊಟ್ಟು ಮೂರು ಗಂಟು
ಕಾಲಿಗೂ ಉಂಗುರ
ದಾಟದಂತೆ ಹೊಸ್ತಿಲು…

ಎಲ್ಲವೂ ಮುತ್ತು ಬೆಳ್ಳಿ ಬಂಗಾರ
ಎಲ್ಲವೂ ಉರುಟು ಉರುಟು ಉರುಟು
ಕೊನೆ ಇಲ್ಲ ಮೊದಲಿಲ್ಲ ವಿಷವರ್ತುಲ
ಸುತ್ತುತ್ತ ಸುತ್ತುತ್ತ ಮುಗಿವುದೆಂದಿಲ್ಲ !
ಸದ್ಯ ! ಕಟ್ಟಿ ಕರುಳ ಬಳ್ಳಿಯ ಉರುಳು
ಉಸಿರ ಉಡುಗಿಸಲಿಲ್ಲ ಬಸಿರಲ್ಲೆ
ನಾನೇ ಭಾಗ್ಯವತಿ ಅಲ್ಲವೇ ಅಕ್ಕ !!!

-ಸುಮತಿ ನಿರಂಜನ

ಯಾವ ತಪ್ಪಿಗಾಗಿ

ಸತ್ತೆ ಯಾಕೆಂದು ಅರಿತಿಲ್ಲ ಸತ್ತವರು
ಕೊಂದೆ ಯಾಕೆಂದು ತಿಳಿದಿಲ್ಲ ಕೊಂದವರು
ಆದರೂ ಅವರು ಇವರ ಕೊಂದರು
ಇವರು ಅವರ ಕೊಂದರು
ಬದುಕಿ ಬಾಳಬೇಕಾದ ಯುವಕರು
ಕೋಮು ದ್ವೇಷಕ್ಕೆ ಬಲಿಯಾದರು
ಮಾಡಿದ ತಪ್ಪಿಗೆ ಜೈಲು ಪಾಲಾದರು|

ಹೋದ ಜೀವಕ್ಕಾಗಿ ಹರಿಯಿತು ಕಣ್ಣೀರು
ವಿದಾಯ ಹೇಳಲು ಸಾಗರದಷ್ಟು ಜನ ಸೇರಿದರು
ಒಂದೆರಡು ದಿನ ಮನೆ ಬಾಗಿಲಿಗೆ ಬಂದ ಗಣ್ಯರು
ಆದರೇನು ಲಾಭ ಹೆಂಡತಿ ವಿಧವೆಯಾದರು
ಹೆತ್ತ ತಾಯಿ ತಂದೆ ಮಕ್ಕಳು ಅನಾಥರಾದರು
ಜೀವನ ಪೂರ್ತಿ ಕೊರಗುವಂತಾದರು
ಯಾವ ತಪ್ಪು ಮಾಡದವರು|

ಧರ್ಮ ರಕ್ಷಣೆಂದು ಹೆಸರಿಟ್ಟರು
ಧರ್ಮ ಗ್ರಂಥಗಳನ್ನೇ ಓದದವರು
ಧರ್ಮವೆಂದು ಅಧರ್ಮವನ್ನೇ ಮಾಡಿದರು
ಸಮಾಜದ ಶಾಂತಿಯನ್ನು ಕೆಡವಿದರು
ರಕ್ತಕ್ಕೆ ರಕ್ತವೆಂದ ನರ ಸತ್ತ ಮನುಜರು
ಮನುಷ್ಯತ್ವ ಕಳೆದುಕೊಂಡವರು
ಕೊಂದವರಿಗಿಂತಲೂ ಕ್ರೂರಿಗಳಾದರು|

-ಫೌಝಿಯ ಸಲೀಂ

ಸಂಗಾತಿ ಸಿಕ್ಕಾಗ

ಜೀವದ ವೀಣೆ ಹೊಸತೊಂದು ರಾಗ ಮಿಡಿದಿದೆ
ಬಾಳಿನ ಗೀತೆಗೊಂದು ಹೊಸತು ತಾಳ ಕಂಡಿದೆ
ಪದ ಅರ್ಥಗಳ ಮೀರಿದ ಹೊಸತು ಭಾವದಲಿ
ಬಾಳಿಗೆ ಹೊಸ ಸಂಗಾತಿ ಸಿಕ್ಕ ಖುಷಿಯಲಿ

ಸಂದೇಶ ಹೊಸತೊಂದು ಕಂಡು ಮನ ತಣಿದಿದೆ
ಸಂತೋಷವ ಪಡೆದ ಮರುಕ್ಷಣವೇ ದೇಹದೆ
ಸಂತತ ಉಲ್ಲಾಸದ ಹೊಸತು ನಶೆಯೇರಿದೆ|

ಕನಸುಗಳು ಹೊಸತು ಮೂಡಿವೆ ಎದೆಬಯಲಲಿ
ಮಿಂಚಂತೆ ಹೊಳೆದಿವೆ ಮನದ ಮುಗಿಲಲಿ
ತನುವು ಹಗುರಾಗಿ ತೇಲಾಡಿದೆ ಹಗಲಿರುಳಲಿ

ಮುಗುಳು ನಗೆಯೇ ಭರವಸೆ ಹೊಸತು ಕೊಟ್ಟಿದೆ
ಸಂಗ ಸರಸ ಬೇಕೆಂದು ಮನ ರಚ್ಚೆ ಹಿಡಿದಿದೆ
ಮಗುವಿನಂತೆ ಹಠವ ಬಿಡದೆ ನನ್ನ ಕಾಡಿದೆ

-ಮನೋ’ರಮೆ’


ನರಕ

ಸ್ವರ್ಗಕ್ಕೆ
ಟಿಕೇಟು ಕಾಯ್ದಿರಿಸಲಾಗಿದೆ
ಅದರಲ್ಲೇನೂ ತಕರಾರಿಲ್ಲ ಬಿಡಿ
ಯಮರಾಜ ಚಿತ್ರಗುಪ್ತ
ರಂಭೆ ಮೇನಕೆ ಊರ್ವಶಿ
ಇಂದ್ರ ಗಾನ ಗಂಧರ್ವ
ಯಕ್ಷ ಕಿನ್ನರ ಕಿಂಪುರುಷ
ಮೊದಲಾದ ಸ್ವರ್ಗವಾಸಿಗಳು
ಚಲಿಸುವ ಮೋಡಗಳು
ಪುಷ್ಪಕ ವಿಮಾನಗಳು
ನೋಡಲಿಕ್ಕೆ ಸಿಕ್ಕೇ ಸಿಗುತ್ತಾರೆ
ಹಾ..! ಸ್ವರ್ಗಕ್ಕೆ ಟಿಕೇಟು ಸಿಕ್ಕ ದಿನ!

ಆದರೆ
ಬದುಕಿನ ಅಸಾಮಿ
‘ಸ್ವರ್ಗ ಕಾಣಬೇಕೆಂದರೆ
ಮೊದಲು ನರಕ ಅನುಭವಿಸಬೇಕು”
ಎಂಬ ಕಂಡೀಷನ್ ಬಿಗಿದು
ಕೈಯನ್ನೋ, ಕಾಲನ್ನೋ ಮುರಿದು
ಬ್ಯಾಂಡೇಜು ಕಟ್ಟಿಸಿ ಅಥವಾ
ಗಂಭೀರ ಖಾಯಿಲೆಯೊಂದನ್ನು
ಮೈಗೋ, ಮನಸ್ಸಿಗೋ ಅಂಟಿಸಿ
ಪರಾರಿಯಾಗಿಬಿಡುತ್ತಾನೆ!

ಇತ್ತ ದುರ್ದೈವಿಗಳು
ನಿಸ್ತೇಜ ಮುಖವಿಳಿಬಿಟ್ಟುಕೊಂಡು
ಹರಡಿದ ಹಾಸಿಗೆಯಲ್ಲಿ
ಅಂಗಾತ ಬಿದ್ದುಕೊಂಡು
ಭೂತ ಭವಿತವ್ಯದ ಸಂಕೋಲೆಯಲ್ಲಿ
ಸಿಕ್ಕು ನಲುಗುವ
ವರ್ತಮಾನದ ಕ್ಷಣಗಳನ್ನು
ಅವಡುಗಚ್ಚಿ ಸಹಿಸಿ
ಯಾತನೆ ಅನುಭವಿಸುತ್ತಾ
‘ಇನ್ನೆಷ್ಟು ದಿನ ಈ ವನವಾಸ
ಅಲ್ಲಲ್ಲ ನರಕವಾಸ.?’ ಎಂದು
ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾ
ಸ್ವರ್ಗದ ಟೀಕೆಟನ್ನು
ಕೈಗೆತ್ತಿಕೊಳ್ಳಬೇಕೆನ್ನುವಷ್ಟರಲ್ಲಿ
ಬದುಕಿನ ಅಸಾಮಿ
ದುತ್ತನೆ ಎದುರಾಗಿ
ಮೆಟ್ಟಿಲುಗಳು ಮುಗಿದಿಲ್ಲ
ದಾರಿ ಸವೆದಿಲ್ಲ
ಸಾವಧಾನ ಎಂದು ಕಿವಿಯಲ್ಲುಸಿರಿ
ಮತ್ತೆ ಮತ್ತೆ ಸತಾಯಿಸಿಬಿಡುತ್ತಾನೆ!

ಅಷ್ಟರಲ್ಲಿ
ಸುದ್ದಿ ಸಮಾಚಾರ
ಊರಿಗೆಲ್ಲಾ ಹಬ್ಬಿ
ಬಂಧು ಬಳಗ ಬಂದು
ಖಾರ – ಸಿಹಿ
ಹಣ್ಣು – ಹಂಪಲು ತಂದು
ಹ್ಯಾಂಗಿದ್ದಿ ? ಎಂದು ಕೇಳಿದಾಗ
“ಇದ್ದೇನೆ’ ಎಂದಷ್ಟೇ ಹೇಳಿ
ಎದುರಿಗಿರುವವರ ಮುಂದೆ
ಹರಸಾಹಸ ಪಟ್ಟು
ನಗಲು ಪ್ರಯತ್ನಿಸುತ್ತಾರೆ
ಆದರೆ ನಗಲಾಗುವುದಿಲ್ಲ!

-ಮಧು ಕಾರಗಿ

ಮೌನದ ಮಾತುಗಳು.

ಬೆಳಗಿನ ಬೆಳಕು ಕಿಟಕಿಯಲಿ ನಗಿದಂತೆ,
ಮನದ ಕತ್ತಲೆಗೆ ಸಣ್ಣ ದೀಪ ಹಚ್ಚಿದಂತೆ,
ನಿನ್ನ ನೆನಪು ಒಂದು ತಂಗಾಳಿ ಆಗಿ,
ಹೃದಯದ ಒಳಗೆ ಮೃದುವಾಗಿ ಹರಿಯುತ್ತದೆ.

ಕಾಲದ ಹೆಜ್ಜೆಗಳು ನಿಧಾನವಾಗಿ ಸಾಗುವಾಗ,
ಕ್ಷಣಗಳೂ ಕಥೆಗಳಾಗಿ ಬದಲಾಗುವಾಗ,
ಮೌನವೇ ನನ್ನ ಮಾತಾಗಿ ಉಳಿದು,
ಅದರಲ್ಲಿ ಸಾವಿರ ಅರ್ಥಗಳು ಹುಟ್ಟುತ್ತವೆ.

ಬಿಸಿಲು–ಮಳೆ ಒಂದೇ ಆಕಾಶದಡಿ,
ಸಂತೋಷ–ದುಃಖ ಒಂದೇ ಉಸಿರಲ್ಲಿ,
ಬದುಕು ಕಲಿಸುವ ಪಾಠ ಒಂದೇ—
ಎಲ್ಲವೂ ಹಾದುಹೋಗುವ ಕ್ಷಣ ಮಾತ್ರ.

ಸಂಜೆಯ ನೆರಳು ದೀರ್ಘವಾಗುವಂತೆ,
ನಂಬಿಕೆಯ ಬೆಳಕು ಇನ್ನೂ ಹೊಳೆಯುತ್ತದೆ,
ನಾಳೆಯೆಂಬ ಪುಟ ತೆರೆಯುವಾಗ,
ಹೊಸ ಕನಸುಗಳು ಮತ್ತೆ ಬರೆಯಲ್ಪಡುತ್ತವೆ.

-ಸುಕನ್ಯಾ ಭಟ್


ನನ್ನವರು

ನನ್ನವರು ಇವರು ನನ್ನವರು
ನಾನು ಸತ್ತಾಗ ಓಡೋಡಿ ಬರುವರು
ಕೊನೆಯ ಬಾರಿ ಮುಖ ನೋಡಲೆಂದು
ಮಣ್ಣು ಹಾಕಿ ಮುಚ್ಚಲೆಂದು

ಎಲ್ಲಾ ಬಂದು ಸೇರುವರು
ನನ್ನವರು ಇವರು ನನ್ನವರು
ನಾನು ಬದುಕಿದ್ದಾಗ ಮಾಡುತ್ತಾರೆ ಅವಮಾನ
ಸತ್ತ ಮೇಲೆ ಮಾಡುತ್ತಾರೆ ಹಾರ ಹಾಕಿ ಸನ್ಮಾನ

ಬದುಕಿದ್ದಾಗ ಹಾಕುವರು ಹಿಡಿಶಾಪ
ಸತ್ತಾಗ ಸಲ್ಲುಸುತ್ತಾರೆ ಸಂತಾಪ
ನಾನು ಇರುವ ತನಕ ಅಪಹಾಸ್ಯ ಮಾಡಿ ನಗುತ್ತಾರೆ
ನಾ ಹೋದ ಬಳಿಕ ಯಾಕೋ ಅಳುತ್ತಾರೆ

ನಾನು ಬದುಕಿದ್ದಾಗ ಮರುಗಲಿಲ್ಲ ಯಾವ ಜೀವವೂ
ನಾ ಸತ್ತಾಗ ಏಕೆ ಈ ಅನುಕಂಪವೂ
ಅ ದೇವರು ಮಾಡಿದನಂತೆ ಬಂಧು ಬಳಗ
ಹೊತ್ತುಕೊಂಡು ಹೋಗಲೆಂದು ನಾವು ಸತ್ತಾಗ

ಜೀವ ಕಳೆದುಕೊಂಡ ಶವಕ್ಕೆ
ಪೂಜೆ ಪುನಸ್ಕಾರ ಏತಕ್ಕೆ
ಹೊತ್ತುಕೊಂಡು ಹೋಗುವರು ಮೆರವಣಿಗೆ
ಮೌನವಾದ ಮಸಣದ ಕಡೆಗೆ

ಗುಂಡಿ ತೋಡಿ ಮಲಗಿಸಿ ಬಿಟ್ಟಾರಲ್ಲ
ಅಂತಿಮ ಪಯಣಕ್ಕೆ ಮಣ್ಣು ಹಾಕಿದರಲ್ಲ
ನನ್ನವರು ಇವರು ನನ್ನವರು
ನಾನು ಸತ್ತಾಗ ಓಡೋಡಿ ಬರುವರು
ಇವರೆ ನೋಡಿ ನನ್ನವರು

ಭಾರತಿ ಎಚ್ ಎನ್


ಋತು ಚಕ್ರದ ರಜೆ

ಈಗ ಸಂದಿದೆ ಋತುಮಾನಕೆ ರಜೆ
ಹಲವು ಹೆಣ್ಣಿನ ಜೀವಕೊಂದಿಷ್ಟು ….
ಸಾಸಿವೆ ಕಣದ ನಿರಾಳ ಅಳಾರ

ನಾಕೈದು ಶತಮಾನದಿಂದಕೆ ಘೋರ…
ಘನ ಘೋರ… ಮುಟ್ಟು ಮೈಲಿಗೆ
ಮುಡಿಚಟ್ಟಿಗೆ ಚಟ್ಟವಿರಲಿಲ್ಲ
ದಟ್ಟವಾಗಿ ಬೆಟ್ಟವೇರಿ ಹಟ್ಟಿ ಹೊರ
ಜೋಪಡಿಯೊಳಗೆ ತಾವ ಕೊಟ್ಟು
ಚಂಬು ಲೋಟ ಈಚಲು ಚಾಪೆ
ಹೊದೆಯಲೊಂದು ಹರುಕು ಕೌದಿಯನಿಟ್ಟು
ಎತ್ತಿ ಹೊಯ್ದು ನೀರು ಕಾಫಿ ಬಂಧಿಸಿ
ಬೇಯಿಸಿ ತನು ಮನವ
ಆಚರಣೆಗೊಂದಿಷ್ಷು ಬೆಂಕಿ ಬೀಳದೇ
ಹರಿದು ಮುಕ್ಕಿದವು ಮುಟ್ಟಿನ ಕಟ್ಟುಪಾಡುಗಳು
ಕಣ್ಣಿಯೊಳಗಿದ್ದ ದನಗಳು
ಮತ್ತೆ ಮತ್ತೆ ಕನಿಕರದ ನೋಟ
ಮಾನವನೇಕೆ ವಿಕೃತವನೊತ್ತು ಬೆಕ್ಕು
ನಾಯಿ ಗಿಂತ ಬೋಳಾಗಿ ಹಾಳಾಗಿ
ತಿಪ್ಪೆ ಕೆದರುವ ಕೋಳಿಗೆ ಏಣಿಯಾಕೋ
ಗೊಡ್ಡು ಸಂಪ್ರದಾಯ ಬೇಲಿ ಸಾಲಿನಲಿ
ಹರಿವ ಹಾವು ಚೇಳು ಮಂಡರಗಬ್ಬೆಗೆ
ಜೀವ ಅಡವಿಟ್ಟು ನಿದ್ದೆಯಿಲ್ಲದೆ ಭಯ
ಆತಂಕ ಕಚ್ಚೆ ಒದ್ದೆಯಾಗಿ ಚಳಿಗಾಳಿ ಗೆ
ನಡುಗಿ ಹೆಣ್ಣಿನ ಜನ್ಮ ಮಣ್ಣಿನಲಿ
ತಣ್ಣಗಿರಿಸೆಂದು ಶಿವನ ಬೇಡುತ
ಹೊಟ್ಟೆ ನೋವು ಪುಳಕ್ಕನೆ ಚಿಮ್ಮೋ
ನೆತ್ತರ ಕಾಲು ಸೆಳೆತ ಸುಸ್ತು
ಮನಸ್ಸಿನ ತುಂಬಾ ಕಸಿವಿಸಿ
ಬೆಂಡಾದ ದೇಹದಲಿ
ಕುಂದಿ ಕಂದಿದ ಮನೋಲ್ಲಾಸ.
ಬಿಳಚಿದಮುಖ
ತೇಪೆ ಮೆದ್ದ ಹಳೆಯ ಲಂಗೋಟಿ ಹಬ್ಬಾ…
ನೆನೆಸಬಾರದು
ಆ…ಕಡು ಕಷ್ಟದ ದಿನಗಳನು.

ಈಗ ಬಿಡಿ ಬೆಲಿಯೇ ಇಲ್ಲ
ಎಲ್ಲಾ ಅಯೋಮಯ ಟೆಕ್ನಾಲಜಿ
ಪ್ಯಾಡಂತೆ ತೊಳಿದೆ ಹಾಗೆ ಎಸವರು
ಎಲ್ಲಂದರಲ್ಲಿ ತಿಪ್ಪೆಗಳಲ್ಲೂ ಬೆಳ್ಳಗೆ
ಗೋಚರ ಪರಿಸರ ಕಲುಷಿತ
ನಿಗದಿತ ಜಾಗ ನಿಯಮ ಪಾಲನೆ
ಜಾಗ್ರತೆಗೆ ಹಾದಿ ಹೂಡಿ ಭೋಧಿಸತ್ವಕೆ
ಅರಳಿಮರ ನೆಟ್ಟು ಕಟ್ಟೆ ಕಟ್ಟಿ ಹಟ್ಟಿ ಮಂದಿಗೆ
ಸತ್ಯ ಬಿತ್ತರಿಸಿ ಹೊತ್ತೆರಿಸಿ ನಗಬೇಕು

-ಡಿ.ಶಾರದಮ್ಮ ಕಂಪಾಲಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x