ಪಂಜು ಕಾವ್ಯಧಾರೆ

ನೈಜ ಸಂಪತ್ತು

ನಗುವಿರಲಿ ಮೊಗದ ತುಂಬ
ಗೆಳೆಯರಿರಲಿ ಈ ಜಗದ ತುಂಬ
ಮಾತು ಮಾತಿನ ಜೊತೆಗಿರಲಿ
ಖುಷಿಯ ಹೆಚ್ಚಿಸೊ ನಗೆಯ ಬಿಂಬ

ತೋರಬೇಕಿಲ್ಲ ಯಾರೂ ಸುಮ್ಮನೆ
ಬೇಡದ ಅಹಂಕಾರದ ಒಣಜಂಬ
ಮಕ್ಕಳ ನಗುವ ಕಲರವ ಹಿರಿಯರ
ಅನುಭವದ ಮಾತು ತುಂಬಿರಲಿ
ಪ್ರತಿಮನೆ ಮನಗಳ ಅಂಗಣದ ತುಂಬ

ಒಳ್ಳೆಯ ಮಾತುಗಳು ಕೇಳಿಬರಲಿ
ನಮ್ಮ ಸುತ್ತಲಿನ ಜನ ಮನದಿಂದ
ಯಾರಿಗೂ ತೊಂದರೆ ಆಗದಿರಲಿ
ತಿಳಿದೋ ತಿಳಿಯದೆಯೋ ನಮ್ಮಿಂದ

ಯಾರಿಗೆ ಯಾರೋ ಯಾರಿಗೆ ಗೊತ್ತು
ಚಿಂತೆಯ ಕಳೆಯಲಿ ಈ ಅಲ್ಪ ಹೊತ್ತು
ಸತ್ತಂತೆ ಬದುಕಬಾರದು ನಾವ್ಯಾವತ್ತು
ಶಾಂತಿ ನೆಮ್ಮದಿಯೇ ನಮ್ಮ ನೈಜ ಸಂಪತ್ತು

-ನಾಗರಾಜ ಜಿ.ಎನ್.

ಓ ಕನಸೇ

ಎಲ್ಲ ಮರೆತಿರುವಾಗ, ಮತ್ತೇಕೆ
ಬರುವೆ ಓ ಕನಸೇ!
ಮನದಲಿ ಮನೆ ಮಾಡಿ, ಮನಸು
ಕೆಡೆಸಿರುವ ಸ್ವಪ್ನದ ಬಿಂಬವೇ!

ಪಂಜರದ ಗಿಣಿಯ ಮಾತು ಕೇಳಿ
ಭವಿಷ್ಯವೇತಕೆ ನುಡಿಯುವೆ?
ವಿಶಾಲ ಕಾನನ ಸೇರಗ ಮರೆತ; ಗಿಣಿಯ
ನೆನಪು,ಹತ್ತಿರಕೇ ತರದಿರು ಓ ಕನಸೇ!

ಕಾರ್ಮೋಡ ತುಂಬಿದ ಬಾನಿನ
ಅಂಗಳದಲಿ ಚುಕ್ಕೆಯಾಗಿ ಕಾಣದಿರು.
ಎನ್ನ ಕಾಡದಿರು; ಕಣ್ಣಂಚಿನಿಂದ ಮುತ್ತು
ಹನಿ ನೀರು ಧರೆಗೆ ತರಸದಿರು,ಓ ಕನಸೇ

ಇರುವೆ ನೀ ನೀರುವೆ
ನನ್ನ ಕಂಡರೇಕೆ ಮುತ್ತಿಗೆ ಹಾಕುವೆ?
ಕನಸೇ! ನೀನು ತಾರುಣ್ಯಕ್ಕೆ ಇಷ್ಟೇಕೆ
ಇಂಬು ನೀಡುವೇ? ಓ ಒಲವಿನ ಕನಸೇ!

ಏನು ಹೇಳಲಿ,ಓ ಕನಸೇ!
ನಿನ್ನ ನರ್ತನ ಪರಿಗೆ ದುಬಾರಿ ಮನಸು
ನಲುಗಿ ಹೋಗಿವುದು.ಮತ್ತೆ
ಬಾರದಿರು ಓ ನನ್ನ ಮನದಂಗಳದ ಕನಸೇ…

-ಅಲ್ಲಾಬಕ್ಷ ನರಗುಂದ

ಹಾಡೊಂದು ಹಾಡಬೇಕು

ಹಾಡೊಂದು ಹಾಡಬೇಕು
ನೊಂದವನ ಮುಖ ನಗುವಾಗಿ ಅರಳುವಂತೆ
ಮಾತೊಂದು ಆಡಬೇಕು
ಸೋತವನ ಬದುಕಿಗೆ ಸ್ಫೂರ್ತಿ ತುಂಬುವಂತೆ
ಕಣ್ಣೋಟ ಬೀರಬೇಕು
ಕೋಪಿಷ್ಟನ ರೋಷಾಗ್ನಿ ನಂದಿ ಹೋಗುವಂತೆ
ಕೈ ಎತ್ತಿ ಮುಗಿಯಬೇಕು
ಏರಿ ಬರುವ ವೈರಿಯೂ ತಲೆ ಬಾಗುವಂತೆ
ಹಾಡಿನಿಂದ ಸೊಗಸು; ಮಾತಿನಿಂದ ಮನಸ್ಸು
ನೋಟದಿಂದ ಪ್ರೀತಿ; ವಿನಯದಿಂದ ಶಾಂತಿ
ಗೆಲುವಾಗಿ ಬರಬೇಕು ಮಹಾದೇವ ಮೆಚ್ಚುವಂತೆ
ಎಂದ ನಮ್ಮ ರಬಕವೀಶ

ಶಿಷ್ಯೋತ್ತಮ

ಕಬ್ಬಿಣ ಕನಕವಾಗುವುದು
ದೊರೆತ ಪರುಷಮಣಿಯಿಂದ; ಕೊರೆತ ಕಲ್ಲಿನಿಂದಲ್ಲ
ಜವ್ವವನದ ಕನ್ಯೆಗೆ ಗರ್ಭಮಾಗುವುದು
ಬೆರೆತ ಪುರುಷನಿಂದ; ಬರಿ ಸ್ಪರ್ಶದಿಂದಲ್ಲ
ಸನ್ಯಾಸಿ ಸಂತನಾಗುವುದು
ಹರಿತ ತಪಸ್ಸಿನಿಂದ; ಹುಚ್ಚು ಹುಮ್ಮಸ್ಸಿನಿಂದಲ್ಲ
ಸ್ವಾತಿಹನಿ ಮುತ್ತಾಗುವುದು
ಬಲಿತ ಚಿಪ್ಪಿನಿಂದ; ಕರಗುವ ಉಪ್ಪಿನಿಂದಲ್ಲ
ಶಿಷ್ಯೋತ್ತಮ ಸೃಷ್ಟಿಯಾಗುವುದು
ನುರಿತ ಗುರುವಿನಿಂದ ಒಣ ಗರ್ವದಿಂದಲ್ಲ
ಎಂದ ನಮ್ಮ ರಬಕವೀಶ

ಸಂತೃಪ್ತಿ

ರುಚಿಯಾದ ಹಣ್ಣು ಕೊಟ್ಟ ಮರ
ತಾನದನು ತಿನ್ನಲಿಲ್ಲ.
ಶುಚಿಯಾದ ಹಾಲು ಕೊಟ್ಟ ಹಸು
ತಾನದನು ಉಣ್ಣಲಿಲ್ಲ
ಸಮೃದ್ಧಿ ಮಳೆ ಕೊಟ್ಟ ಬಾನು
ತಾನದನು ಕುಡಿಯಲಿಲ್ಲ
ಬದುಕಲು ಬೆಳೆ ಕೊಟ್ಟ ಭೂಮಿ
ತಾನದನು ಭೋಗಿಸಲಿಲ್ಲ
ದಿನವೆಲ್ಲ ಬೆಳಕು ಕೊಟ್ಟ ಸೂರ್ಯ
ತಾನದನು ಉಪಯೋಗಿಸಲಿಲ್ಲ
ಇದೆಲ್ಲವನು ಅನುಭವಿಸಿದ ಮನುಜನಿಗೆ
ಇನ್ನು ಸಂತೃಪ್ತಿಯಿಲ್ಲ ರಬಕವೀಶ

-ಡಾ.ಯಶವಂತ ಕೊಕ್ಕನವರ

ಅತ್ತ ಇತ್ತ ಕನ್ನಡ

ಅತ್ತ ಕತ್ತಿನೊಳು ಕನ್ನಡದ
ಶಾಲು ಕಂಗೊಳಿಸುತಿವೆ,
ಇತ್ತ ಗೊತ್ತಿಲ್ಲದೆ ಕನ್ನಡದ
ಶಾಲೆ ಕಣ್ಮರೆಯಾಗುತಿವೆ

ಅತ್ತ ಸನ್ಮಾನ, ಸತ್ಕಾರಾದಿ
ಬಿಡದೇ ಜರುಗುತಲಿದೆ,
ಇತ್ತ ನಾಡು ನುಡಿ ತಾತ್ಸಾರ
ತುಂಬಿ ತುಳುಕುತಲಿದೆ

ಅತ್ತ ಬಹುತೇಕರ ಮಕ್ಕಳು
ಇಂಗ್ಲೀಸು ಸ್ಕೂಲಿನಲ್ಲಿವೆ,
ಇತ್ತ ಸಾಮಾನ್ಯರ ಮಕ್ಕಳೇ
ಕನ್ನಡದ ಶಾಲೆಯಲ್ಲಿವೆ

ಅತ್ತ ನಾಡು ನುಡಿ ಪ್ರೇಮ
ಕೇವಲವದು ಪ್ರದರ್ಶನ,
ಇತ್ತ ಇಟ್ಟ ನಡೆ ಭವಿಷ್ಯಕ್ಕೆ
ಆಗಬೇಕಿದೆ ನಿದರ್ಶನ

ಅತ್ತ ಪುಣ್ಯಾತ್ಮರೇ ಆಗಲಿ
ನಿಮ್ಮ ಆತ್ಮ ಸಾಕ್ಷಾತ್ಕಾರ,
ಇತ್ತ ಮಾತೆಲ್ಲ ಕೃತಿಗಿಳಿದು
ನಡೆಯಲಿ ಚಮತ್ಕಾರ

ಅತ್ತ ಶಾಲು,ಬಾವುಟ ದಾಟಿ
ಜೀ(ಧಾ)ವಿಸಲೆಮ್ಮ ಕನ್ನಡ
ಇತ್ತ ಭಿ(ಖಿ)ನ್ನತೆ ಬದಿಗಿಟ್ಟು
ಕಟ್ಟ ಬನ್ನಿರಯ್ಯ ಕನ್ನಡ

ಎಮ್ಮಾರ್ಕೆ


ಗಜಲ್

ಅನ್ಯಕೋಮಿನವರು ಪ್ರೀತಿಸುವುದು ನಿಷೇಧಿಸಲಾಗಿದೆ, ಸಹಕರಿಸಿ
ಜಾತಿ ಕುಲ ಕಿಚ್ಚುಗಳ ಆರಿಸುವುದು ನಿಷೇಧಿಸಲಾಗಿದೆ, ಸಹಕರಿಸಿ

ಸಂಪ್ರದಾಯವ ಪಾಲಿಸಿ, ಅನಿಷ್ಟಗಳ ಪ್ರೀತಿಸಿ ವಿರೋಧಿಸಬೇಡಿ
ಜಾತಿಧರ್ಮಗಳ ಮೀರಿ ಬದುಕುವುದು ನಿಷೇಧಿಸಲಾಗಿದೆ, ಸಹಕರಿಸಿ

ಅಂದಭಿಮಾನದ ಮೆದುಳುಗಳಿಗೆ ಮೇಲುಕೀಳಿನ ವಿಷ ತುಂಬಲಾಗಿದೆ
ಅನ್ಯಾಯಗಳಿಗೆ ಪ್ರಶ್ನೆ ಮಾಡುವುದು ನಿಷೇಧಿಸಲಾಗಿದೆ, ಸಹಕರಿಸಿ

ಚಂದ್ರನ ಅಂಗಳವ ಮುಟ್ಟಿರಿ ಮಂಗಳನ ಮನೆ ಸೇರಿರಿ ಪರವಾಗಿಲ್ಲ
ನಮ್ಮ ದೇಗುಲ ಮೆಟ್ಟಿಲು ಹತ್ತುವುದು ನಿಷೇಧಿಸಲಾಗಿದೆ, ಸಹಕರಿಸಿ

ಹುಟ್ಟು ನೆಲವ ಅಡವಿಟ್ಟ ದೊರೆಗಳು ನೆತ್ತರು ಹರಿಸಿ ಮೋಜು ಮಾಡುವರು
ತಪ್ಪಿಗೆ ಪ್ರತಿರೋಧವ ನೀಡುವುದು ನಿಷೇಧಿಸಲಾಗಿದೆ, ಸಹಕರಿಸಿ

ಗಾಂಧಿ ಬಸವ ಬುದ್ಧ ಬಾಬಾರವರ ಆಶಯ ಹೂತ ನೆಲವಿದು ‘ಕಾಂತ’
ವೈಚಾರಿಕ ಬೀಜಗಳ ಬಿತ್ತುವುದು ನಿಷೇಧಿಸಲಾಗಿದೆ, ಸಹಕರಿಸಿ.

-ಡಾ.ಲಕ್ಷ್ಮಿಕಾಂತ ಮಿರಜಕರ. ಶಿಗ್ಗಾಂವ

ಸಂಕ್ರಾಂತಿಗೊಂದು ಸಾನೆಟ್

ರಾಜನಾಜ್ಞೆಗೆ ನವಿಲು ನಾಟ್ಯಗೈಯಲುಂಟೆ
ಕಾನೂನು ಕಟ್ಟಳೆಗೆ ಕೋಗಿಲೆ ಕೂಗಲುಂಟೆ
ಬೆದರಿಕೆಗೆ ಹೆದರಿ ರವಿ ಪಥ ಬದಲಿಸಲುಂಟೆ
ಕೋಟಿ ನೋಟಿನಲಿ ಚಂದಿರನ ತೂಗಲುಂಟೆ

ಜಾಲತಾಣದಿ ಗೆಣಸು ಗೆಜ್ಜರಿ ಬೆಳೆಯಲುಂಟೆ
ಚಿನ್ನದ ಬಳ್ಳದಲಿ ಅನ್ನವನು ಅಳೆಯಲುಂಟೆ
ಪಬ್ಬು ಬಾರ್ ಗಳಲಿ ಕಬ್ಬು ಬಿಕರಿಯಾಗಲುಂಟೆ
ಐಟಿ ಬಿಟಿಯಲಿ ಎತ್ತು ಬಂಡಿ ಓಡುವುದುಂಟೆ

ಮುಷ್ಕರವು ಮಳೆಯನು ಇಳೆಗೆ ತರಿಸಲುಂಟೆ
ಚಳುವಳಿಗಳು ಚಳಿಯ ತಡೆದು ನಿಲಿಸಲುಂಟೆ
ಬಂಧಿಖಾನೆಯಲಿ ಬಿಸಿಲನು ಬಂಧಿಸಲುಂಟೆ
ತಿರುಗುವ ಭೂಮಿಗೆ ತೈಲವನು ತುಂಬಲುಂಟೆ

ಪ್ರಕೃತಿಯನು ಪ್ರೀತಿಸೋಣ ಅದುವೇ ಸಂಕ್ರಾಂತಿ
ಸಂಸ್ಕೃತಿಯ ಗೌರವಿಸೋಣ ಬಾಳಿಗಿದೆ ಶಾಂತಿ

ಎ.ಎಂ.ಪಿ ವೀರೇಶಸ್ವಾಮಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x