ಎಲ್ಲಿ ಕವಿತೆ?
ಹಾರಿದ ಕರ್ಕಶ ವಿಮಾನ
ಕಾಣದ ಡ್ರೋನು
ಟ್ಯಾಂಕರು ಕ್ಷಿಪಣಿ ಶೆಲ್ಲು
ಬಂದೂಕ ಟ್ರಿಗರು ಎಳೆವ ಸದ್ದು
ಅಣುಸ್ಥಾವರಕ್ಕಳಿವುಂಟೆ!
ಕಗ್ಗಂಟು
ಉಕ್ರೇನು ಗಾಜಾ
ಇಸ್ರೇಲು ಇರಾನು
ಮತ್ತೆಲ್ಲೋ ಗುಪ್ತ
ಮಸೆಯುತ್ತಿವೆ ಹಲ್ಲು
ಒಪ್ಪಂದಗಳಿಗೆಲ್ಲ ಕಲ್ಲು
ಸುಟ್ಟ ಕಿಟಕಿ ಬಾಗಿಲು ಕಪ್ಪಿಟ್ಟ
ಅರೆ ಗೋಡೆಗಳ ಬೂದಿ
ಮುದಿ ನಾಯಕರ ಮುಖ ವಿಕಾರಗಳು
ಎಚ್ಚರ ತಪ್ಪಿದ ಧಮಕಿ
ಧಿಮಾಕು ಹೇಳಿಕೆಗಳ ತೆವಲು
ಹೃದಯವಿಹೀನ ಭೃತ್ಯರ
ಭೂತ ನೃತ್ಯ
ಆಕ್ರಂದನ ಸಾಮಾನ್ಯ ಹುಯಿಲು
ವಿಶ್ವತುಂಬಾ ಕದನ ಕುತೂಹಲಿಗಳು
ಯಾರು ಗೆದ್ದರು ಏಕೆ ಬಿದ್ದರು
ತನ್ನ ಮನೆ ಬಾಗಿಲ ಭದ್ರ ಗುಮಾನಿಗರು
ಪುಟಾಣಿ ಕೈಗಳ ಗೊಂಬೆಗಳು
ನೆಲಕ್ಕುರುಳು
ಮರೆತ ಅಳು
ಚಿಣ್ಣರು ಬರೆವ ಚಿತ್ರಗಳಲ್ಲು
ಕಪ್ಪು ಹೊಗೆಯಾರದ ಪಿಸ್ತೂಲು
ಇಂತಿರುವಲ್ಲಿ
ಎಲ್ಲಿ ಯಾರಿಗೆ ಏಕೆ
ಕವಿ ಕವಿತೆ ಗೀತೆ
ಕಿವಿ ಕಣ್ಣು ಎದೆಗಳ ನಿತ್ಯದ ಸೊಲ್ಲು
ಯುದ್ಧ ವಾರ್ತೆ
-ಅನಂತ ರಮೇಶ್
ಗಝಲ್.
ಜನಹಿತ ಬಯಸಿ ನಡೆದರೆ ವ್ಯಕ್ತಿತ್ವ ಮಾಗುವುದು ಗೆಳೆಯಾ
ಜರೆದು ಕರೆಯದೆ ಮೌನವಾಗಿದ್ದರೆ ಅಸ್ತಿತ್ವ ಬೀಗುವುದು ಗೆಳೆಯಾ
ಬದುಕು ಬಂದಂತೆ ಸ್ವೀಕರಿಸಿ ಮುಂದಡಿ ಇಟ್ಟರೆ ಒಳ್ಳೆಯದಲ್ಲವೇ
ತದುಕುವದು ಬಿಟ್ಟು ಸಾಗಿದರೆ ಮಸ್ತಿಷ್ಕ ಬಾಗುವುದು ಗೆಳೆಯಾ
ಕೂಡಿ ಬಾಳಿದರೆ ಸ್ವರ್ಗ ಸುಖದಲಿ ತೇಲುವುದು ಸಮಾಜವು
ದುಡಿಯದೆ ಉಂಡರೆ ಕಡೆಗಣಿಸಿ ಬಿಸುಟುತ ತೇಗುವುದು ಗೆಳೆಯಾ
ಎಲ್ಲರೊಳಗೆ ಒಂದಾಗಿ ಚೆಂದಾಗಿ ಹಿತವರಿತು ಹಿರಿಯರ
ಪೋಷಿಸಬೇಕು
ಬಲ್ಲವರ ಬಳಗದ ಬಲಶಾಲಿಯ ಬಹುಪರಾಕ ತೂಗುವುದು ಗೆಳೆಯಾ
ಮಾನವೀಯ ಗುಣವೇ ಜಯದ ದಾರಿಗೆ ಸುಗಮ ಸಂಗೀತದಂತೆ.
ದಾನವೀಯ ಮನವು ಅಪಕೀರ್ತಿಯ ಹೆಜ್ಜೆಗಳಲಿ ತಾಗುವುದು ಗೆಳೆಯಾ
ಜಯಶ್ರೀ ಭ.ಭಂಡಾರಿ ಬಾದಾಮಿ
ಒಂದು ನಿವೇದನೆ …..
ನಿನ್ನ ಹೃದಯದಲ್ಲಿ ಬಚ್ಚಿಟ್ಟುಕೊಂಡ
ನೋವಿನ ಮೂಟೆಯನ್ನೊಮ್ಮೆ ಬಿಚ್ಚಿಬಿಡು
ಅಂಗಳದ ತುಂಬಾ ಚದುರಿಬಿದ್ದ
ಹೂ ಹೆಕ್ಕುವಂತೆ
ಒಂದಿಷ್ಟು ಆರಿಸಿಕೊಳ್ಳುತ್ತೇನೆ
ನಗುವ ಮುಖದ ಹಿಂದಿರುವ
ನೋವಿನ ಗೆರೆಗಳಲ್ಲಿ
ಒಂದು ಚೂರು ನೋವಾದರೂ
ಕಡಿಮೆ ಆಗಲಿ
ಹತ್ತಿ ಉರಿಯುವ ಹೃದಯದೊಳಗೆ
ಪ್ರೀತಿಯ ಬೀಜ ಮೊಳಕೆಯೊಡೆದು
ಹಂಚುವ ನಿನ್ನ ಪರಿ ಅನನ್ಯ !
ಅದರಲ್ಲೊಂದು ಪಾಲು ಪಡೆದ
ನಾನೇ ಧನ್ಯ !
ನಿನ್ನ ಫಳ ಫಳ ಹೊಳೆಯುವ ಕಣ್ಣುಗಳಲಿ
ಮಿನುಗುವ ನಕ್ಷತ್ರಗಳನು ಎಣಿಸಲು
ನಾ ಬಯಸುವುದಿಲ್ಲ
ಆದರೆ, ನೋವಿನ ಮಧ್ಯದಲ್ಲೊಂದು
ಕೋರೈಸುವ ಮಿಂಚಿನ ಬೆಳಕನ್ನು
ಕಾಣಲು ತವಕಿಸುತ್ತೇನೆ
ಹೃದಯದಾಂತರ್ಯದಿಂದ ಬರುವ
ಭಾವನೆಗಳಿಗೆ ಬೇಲಿಕಟ್ಟಿ
ನಾಳೆಯ ಕನಸುಗಳಿಗೆ
ತಡೆಯೊಡ್ಡಿ ಸಾಯಿಸಬೇಡ
ಭಾವನೆಗಳ ಭಾರ ಹೊರಲು
ಕನಸುಗಳು ಚೂರಾಗದಂತೆ
ಜೋಪಾನ ಮಾಡಲು ನಾನಿದ್ದೇನೆ
ನಿನ್ನ ಪುಟ್ಟ ಹೃದಯವನು
ನನಗೆ ಕೊಟ್ಟುಬಿಡು
ಅದನ್ನು ಎಂದಿಗೂ ನೋವಾಗದಂತೆ ಕಾಪಾಡುತ್ತೇನೆ
-ಪ್ರಭಾಕರ ತಾಮ್ರಗೌರಿ, ಗೋಕರ್ಣ
ಅಭಿಷೇಕ
ಕೆರೆಯ ನೀರ
ಬಸಿಯುತಿಹೆ ನಾನು
ಮಂತ್ರಗಳ ಜಪಿಸಿ
ಶುಭದಿನದಿ ತಾಯಿಯ
ಅಭಿಷೇಕಕೆ….
ಜಾತಿ, ಮತಗಳ
ಕೊಳಕು ಕೊಳೆಯ
ಬೇರ್ಪಡಿಸುವೆ ನಾನು
ಮಡಿಯಲಿ ತಾಯಿಯ
ಅಭಿಷೇಕಕೆ….
ಶುಭ ಮುಹೂರ್ತಕೆ
ಮಿತಿಯಿದೆ ಕಾಣು
ಮೀರದಿರಲಿ ಸಮಯ
ಸಮೀಪಿಸಿದೆ ಸುಸಮಯ
ಅಭಿಷೇಕಕೆ…
ಬೇರ್ಪಡಿಸಲಾಗದ ಕಸ
ಕೈಗಳಲೇ ಕಗ್ಗಂಟಾಗುತಿದೆ
ಮೈಲಿಗೆ ಹಿಡಿದರೆ
ಇಂದು ಅಭಿಷೇಕವಾಗದು
ಭಾರತಾಂಬೆಗೆ….!!
-ನಿರಂಜನ ಕೆ ನಾಯಕ
[…] https://panjumagazine.com/panju-poems-380/ […]