ಚೆಲುವೆ
ಮಬ್ಬುಗವಿದ ಮುಸ್ಸಂಜೆ
ಆಡು-ಹಸು-ಕುರಿ ಮರಳಿ ಬರುವಾಗ
ಕೆಂಧೂಳು ಮೇಲೆದ್ದು ತಂಗಾಳಿಯು ಸೋಕಿದಂಗೆ
ನೀ ನನ್ನ ಸನಿಹ ಬರಲು ಮೈ ಜುಮ್ಮೆಂದಿತು
ಓ ನನ್ನ ಒಲವೇ ಜಗವೆಲ್ಲಾ ನಾವೇ
ಕೆಮ್ಮುಗಿಲು ನಕ್ಕು ಸೂರಪ್ಪ ನಾಚಿದ
ಕದರಪ್ಪನ ಗುಡ್ಡವು ಕೆಂಪೇರಿತಾಗ
ಕೆಂದಾವರೆಯಂತಹ ನಿನ್ನ ಕೆನ್ನೆ ಮನಸೆಳೆಯಿತು
ಇಳಿಜಾರಿನ ಕಲ್ಲು ಮುಳ್ಳು ನಗೆಬೀರಿ
ಬೇಲಿ ಮೇಗಳ ಹೂ ಘಮ್ಮೆನ್ನೋ ಸುವಾಸನೆಯು
ನಿನ್ನ ಬೆವರಿನ ಸೌಗಂಧ ತಂದಾಗ
ಮನದಲ್ಲೇನೋ ಆನಂದ
ಮೊದಲ ಮಳೆ ಹನಿ ನೆಲವನ್ನು ಮುತ್ತಿಟ್ಟು
ಗಾಳಿ ಗಂಧವಾಗಿ ಬಯಲೆದೆ ಮೇಲೆ ನಿನ್ನ ಹೆಸರು
ನಾ ಬಯಸಿದೆ ನಿನ್ನ ಸಂಗ
ನಾನಾಗ ಅಲೆದಲೆದು ಬಳಲಿದೆ
ಮೊದಲ ಚುಂಬನಕ್ಕೆ ನರನಾಡಿ ರೋಮಾಂಚನ
ಉಸಿರು ಉಸಿರಲ್ಲಿ ಬೆರೆಯಲು ಎಂಥಾ ಚೆಂದವಿತ್ತೇ
ನಿನ್ನೊಳಗೆ ಆಟವೇನೋ ನಡೆದಿತ್ತೇ…
ನನ್ನ ಕನಸನ್ನೇ ಸೀರೆಯಾಗುಟ್ಟು
ಬಳುಕಾಡಿ ವೈಯ್ಯಾರಿಯಾದೆ
ನನ್ನ ಪ್ರೀತಿ ಬೆಳದಿಂಗಳಿನ ಬೊಟ್ಟು
ಅಧರಗಳಲ್ಲಿ ಹಾಲ್ಜೇನ ಇಟ್ಟು
ಕಣ್ಗಳಲ್ಲೇ ನೀ ಎನ್ನ ಕರೆದಾಗ
ಸ್ವರ್ಗವನ್ನಲ್ಲೇ ಕಂಡೇ ಚೆಲುವೆ
2
ಪ್ರೀತಿ ಅಂಬೋದು
ಬೆಂಕಿ ಇದ್ದಂಗೆ
ನೀನು-ನಾನು
ಒಂದಾದರೆ…
ಪ್ರಣಯದ ಬೆಂಕಿ
ಹೊತ್ತಿ
ಒಲವಿನ ದೀವಿಗೆಯಾದೀತು
ನೀನು-ನಾನು
ದೂರಾದರೆ
ಪ್ರಳಯದ ಬೆಂಕಿ
ಹೊತ್ತಿ
ಮಸಣದ ದೀವಿಗೆಯಾದೀತು.
-ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ
ಜಾಣೆ ತರುಣಿ
ಬಾಚಿಕೊಳ್ವಳು ತರುಣಿ ಬಾಚಿಕೊಳ್ವಳು
ಬಾಚಿಕೊಳ್ವಳು ತರುಣಿ ಬಾಚಿಕೊಳ್ವಳು
ಕೂದಲನ್ನು ಮೇಘದಂತೆ ಹರಡಿಕೊಂಡು ಮೊಗದ ಸುತ್ತ
ಏನೊ ಮನದಿ ಭಾವಿಸುತ್ತ ಹೆಣಿಗೆಯನ್ನು ಹಿಡಿದು ಕೈಲಿ ||೧||
ಅಂದು ಸುರಿದ ಮುಸಲಧಾರೆ ಗಿರಿಯ ಶಿಖರದಂಥ ಶಿರಕೆ
ಧೋ ಎಂದು ಸುರಿಯಿತಂತೆ ಕೇಶ ತೊಯ್ದು ಹೋಯಿತಂತೆ ||೨||
ದಟ್ಟ ಕಾಡಿನಂಥ ಕೇಶ ಅಸ್ತವ್ಯಸ್ತವಾಗಿ ಹೋಗಿ
ಭೀತಿಗೊಂಡ ಮನುಜ ಕುಲದ ರೀತಿ ಚದುರಿ ಹೋಯಿತಂತೆ ||೩||
ವಿವಿಧ ಬಗೆಯ ಹೆಣಿಗೆಗಳನು ಯುದ್ಧಶಸ್ತ್ರದಂತೆ ಬಳಸಿ
ಸಿಕ್ಕುಗಳನು ಬಿಡಿಸುತಿಹಳು ದರ್ಪಣದೊಳು ನೋಡುತಿದ್ದು||೪||
ಸಿದ್ಧಗೊಂಡ ಕೇಶ ರಾಶಿ ಸ್ವಸ್ಥ ಮನದ ಮನುಜರಂತೆ
ಅಂದಗೊಂಡು ಶಿಸ್ತಿನಿಂದ ನೀಳವಾಗಿ ಹೊಳೆಯುವಂತೆ ||೫||
ನಕ್ಕಳೀಗ ತೃಪ್ತಿಯಿಂದ ಎದ್ದು ನಿಂತು ಬಿಂಬ ನೋಡಿ
ಬಾಳ ಕಷ್ಟ ಬಿಡಿಸುವಂಥ ಆತ್ಮವಿಶ್ವಾಸ ಹೊಂದಿ||೬||
-ಶೀಲಾ ಅರಕಲಗೂಡು
ಮೊಹರಂ ….!!
ದೌರ್ಜನ್ಯ
ದಬ್ಬಾಳಿಕೆಯ
ವಿರುದ್ದ ಹೋರಾಡಿ
ಹುತಾತ್ಮರಾದವರ
ಸ್ಮರಿಸುವ,
ತ್ಯಾಗ ಬಲಿದಾನದ
ಹಬ್ಬ ಮೊಹರಂ,
ಹಿಂದೂ ಮುಸ್ಲಿಂರಲ್ಲಿ
ಭಾವೈಕ್ಯತೆಯ
ಮೂಡಿಸಿ,
ಕಹಿಗಳನ್ನು ಅಲಾಯಿ
ಕುಣಿಯಲಿ
ದಹಿಸಿ;
ದ್ವೇಷ ಅಸೂಯೆಗಳನು
ಮರೆತು; ಸ್ನೇಹ
ಪ್ರೀತಿಯ ಬೆಸೆದು
ಸೌಹಾರ್ದತೆಯು
ಮೂಡಸಿ;
ಬಹುವೇಷದಿ ವಂಚಿಸುವ
ಜನರನು ಎಚ್ಚರಿಸಿ
ಭವಿಷ್ಯದ
ಬದುಕನು
ಬೆಳಕಾಗಿಸುವ
ಮನ ಅರಳಿಸಿ;
ಸರ್ವರೂ ಒಗ್ಗೂಡಿ
ಸಹಭೋಜನ
ಸ್ವೀಕರಿಸಿ
ಅಧರ್ಮದ ನಂಜನು
ತೊಲಗಿಸಿ;
ಸಮಾಜದಿ ಎಲ್ಲರನೂ
ಒಗ್ಗೂಡಿಸುವ
ಮಂತ್ರ
ಮೊಳಗಿಸಿ
ಸರ್ವ ಜನಾಂಗದ
ಶಾಂತಿ
ತೋಟವಾಗಿಸಿ….!!
-ಕಾಡಜ್ಜಿ ಮಂಜುನಾಥ
ಚುಟುಕಗಳು
ಶರೀರ ತಂಪಾಗಿರಲು,
ಶರಬತ್ ತಂಪಾಗಿರ ಬೇಕು
ಮನಸ್ಸು ತಂಪಾಗಿರಲು,
ಮಡದಿ ತಂಪಾಗಿರ ಬೇಕು
*
ವಿಕೃತ ಮನಸಿನ ವಕ್ರಬುದ್ಧಿ ವಿಕಾರ,
ಮುಗ್ಧ ಹೆಣ್ಣಿಗೆ ಉಗ್ರ ಅಳಿಸಿದ ಸಿಂಧೂರ,
ಸೇನೆ ಪಣತೊಟ್ಟಿತು ಉಗ್ರ ನಿರ್ಣಾಮದ ಪ್ರತೀಕಾರ,
ಮಧ್ಯರಾತ್ರಿ ಗುಂಡಿನ ಸುರಿಮಳೆಯ ಝೇಂಕಾರ,
ಉಗ್ರ ನೆಲೆಗಳ ನೆಲಸಮದ ಸಂಹಾರ,
ಮಹತ್ವ ತಿಳಿದವರ ಹಣೆಯಲ್ಲಿ ಸಿಂಧೂರ,
ಭಾರತ್ ಸೇನೆ ಸಾಧನೆ ಎಲ್ಲೆಲ್ಲೂ ಹರ್ಷೋದ್ಗಾರ.
*
ಇದ್ದಾಗ ಅಪ್ಪ ಅಮ್ಮನ ಪರದಾಡಿಸ್ತಾರೆ,
ಹೋದಾಗ ಫೋಟೋ ಪರ್ಸ್ ಲೀ ಇಟ್ಕೊಂಡು ತಿರಿಗಾಡತಾರೆ.
ಭಗವಂತ ಇಂತವರನ್ನ ನೋಡಿ ನಗ್ತಾರೆ,
ಗುಪ್ತವಾಗಿ ಇವರಲೆಕ್ಕ ಇಡ್ತಾರೆ.
ಕಾಲ ಬಂದಾಗ ಲೆಕ್ಕ ಚುಪ್ತ ಮಾಡ್ತಾರೆ.
*
ಒಂಬತ್ತು ತಿಂಗಳ ಹೊತ್ತು ಹೆತ್ತ ಅಮ್ಮನ ಹಾರೈಕೆ,
ಹೆತ್ತ ಮಡಿಲ ಮನಸಾರೆ ಪೋಷಣೆಯ ಆರೈಕೆ,
ಜನ್ಮ ನೀಡಿದ ಬಾಡಿಗೆ ದೇಹದ ಕಾಣಿಕೆ,
ಬಣ್ಣ ಬಣ್ಣ ಆಸೆ ಆಕಾಂಕ್ಷೆಗಳ ಮರೀಚಿಕೆ,
ಬಂದು ಹೋಗುವ ನಡುವೆ ಜೀವನಾಟಕದ ಪ್ರಾತ್ಯಕ್ಷಿಕೆ,
ಬದುಕು ಒಂದು ಜಟಕಾ ಬಂಡಿಯ ಕುಣಿಕೆ,
ತಿದ್ದಿ ತೀಡಿ ಜೀವನ ರೂಪಿಸಿದ ಮಾತೃಹೃದಯಕೆ,
ತ್ಯಾಗಮಯಿ ತನ್ಮತೆಯ ತಾಯಿ ಶಾಮಲೇ ಜೀವಕೆ,
ಸಾಷ್ಟಾಂಗ ನಮಿಪುವೆ ಅಮ್ಮನ ಪಾದಕೆ.
*
ಬೇಕು ಏನ್ನುವ ಆಸೆ ಇರಬೇಕು,
ಪೂರೈಸುವ ಛಲ ಇರಬೇಕು,
ಅವರಿವರಂತೆ ಎನ್ನೋದು ಬಿಡಬೇಕು,
ಹೋದರು ನೆನಪಿನಲ್ಲಿರುವಂತೆ ಹೋಗಬೇಕು.
*
ಬದುಕಿನಲಿ ಮೆರೆದಾಗ ಅಹಂಭಾವ,
ಬದುಕಿನಲಿ ಬಿದ್ದಾಗ ಅನನುಭವ,
ಬದುಕಿನಲಿ ಸೋತಾಗ ಅನುಭವ,
ಬದುಕಿನಲಿ ಎದ್ದಾಗ ಧನ್ಯಭಾವ,
ಬದುಕಿನಲಿ ಜೊತೆಯಾದಾಗ ಅವಿನಾಭಾವ,
ಬದುಕಿನಲಿ ಅರಿವಾದಾಗ ದೈವಭಾವ,
ಬದುಕಿನಲಿ ಒಂಟಿಯಾದಾಗ ಅನಾಥೋ ದೈವ.
ಬದುಕಿನಲಿ ಹೀಗೆ ಇರಬೇಕೆಂದಾಗ ಅಸಂಭವ.
–ಮಧುಕರ್ ಟಿ. ಆರ್.