ನೂಕುನುಗ್ಗಲು – ಕಾಲ್ತುಳಿತ: ಚಂದಕಚರ್ಲ ರಮೇಶ ಬಾಬು

ಜೂನ್ ೩ ತಾರೀಕಿನ ರಾತ್ರಿ ೧೧ ಗಂಟೆ. ಬೆಂಗಳೂರಿನ ಕ್ರಿಕೆಟ್ ತಂಡವೆನಿಸಿದ ರಾಯಲ್ ಛಾಲೆಂಜರ್ಸ್ ಮತ್ತು ದೆಹಲಿಯ ಡಿಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಫೈನಲ್ಸ್ ಪಂದ್ಯದ ಆಖರಿ ಕ್ಷಣಗಳು. ಅಹಮದಾಬಾದಿನಲ್ಲಿ ಕೂತ ಸುಮಾರು ೯೧ ಸಾವಿರ ಪ್ರೇಕ್ಷಕರು, ಟಿವಿ ತೆರೆಗಳಿಗ ಅಂಟಿಕೊಂಡು ಕೂತು ಕಾಯುತ್ತಿದ್ದ ಲಕ್ಷಗಟ್ಟಲೆ ವೀಕ್ಷಕರು ಕಾತರದಿಂದ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಅಲ್ಲಿಯವರೆಗೆ ಮೂರು ಬಾರಿ ಫೈನಲ್ಸ್ ಗೆ ಬಂದರೂ ಟ್ರೋಫಿ ಗೆಲ್ಲದ ಬೆಂಗಳೂರಿನ ತಂಡ ಕೊನೆಗೂ ಐಪಿಲ್ ಟ್ರೋಫಿಯನ್ನು ಕೈ ವಶಮಾಡಿಕೊಂಡಿತು. ಕೆಲ ಆಟಗಾರರ ಆನಂದ ಬಾಷ್ಪಗಳು ತುಳುಕಿದರೆ, ನೋಡುತ್ತಿದ್ದವರಿಂದ ನಿಟ್ಟುಸಿರುಗಳು ಕಂಡವು. ಅಂದು ಬೆಂಗಳೂರೊಂದೇ ಅಲ್ಲ, ಕರ್ನಾಟಕದ ಅನೇಕ ಊರುಗಳು ತುಂಬಾ ರಾತ್ರಿಯ ವರೆಗೆ ಸಂಭ್ರಮ ಆಚರಿಸಿ ಕುಣಿದಿದ್ದವು.

ಮಾರನೆಯ ದಿನ ಜೂನ್ ೪ರಂದು ಅದೇ ವೇಳೆಗೆ ತಂಡದ ವಿಜಯೋತ್ಸವವನ್ನು ಆಚರಿಸುವ ಸಂಭ್ರಮದ ಹಬ್ಬ. ಅದರ ಅಂಗವಾಗಿ ಬೆಂಗಳೂರಿನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ನೂಕುನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಕ್ರಿಕೆಟ್ ತಂಡದ ಹನ್ನೊಂದು ಆಟಗಾರರ ಪ್ರತೀಕವಾಗಿ ಹನ್ನೊಂದು ಜನ ಅಭಿಮಾನಿಗಳು ಸಾವನ್ನಪ್ಪಿದ್ದರು. ಐಪಿಲ್ ಟ್ರೋಫಿ ಗೆದ್ದ ಆನಂದ ಒಂದು ಇಪ್ಪತ್ತು ನಾಲ್ಕು ತಾಸು ಸಹ ಉಳಿದಿರಲಿಲ್ಲ. ಮತ್ತೆ ಅವರಿವರ ಮೇಲೆ ನಿಂದೆಗಳು, ಇದಕ್ಕೆ ಕಾರಣ ನಾವಲ್ಲ ಎನ್ನುವ ಹೊರತು ಪಡಿಸುವಿಕೆಗಳು ಶುರುವಾಗಿ ಅದರ ತನಿಖೆ ಇನ್ನೂ ಕೊನೆಗೊಂಡಿಲ್ಲ.

ಈ ತರದ ಜನತೆಯ ಸಮೂಹ ಸನ್ನಿಯ ಕಾರಣವೇನು? ನಮ್ಮ ದೇಶದ ಜನಸಂಖ್ಯೆ ಕಾರಣವೇ ಅಥವಾ ನಮ್ಮ ಮಾನಸಿಕ ಸ್ಥಿತಿಯಾ ಅಂತ ಒಂದು ನೋಟ ಹರಿಸೋಣ ಎನಿಸಿತು.

ಮುಂಚಿನಿಂದಲೂ ನಮ್ಮ ದೇಶದಲ್ಲಿ ನೂಕುನುಗ್ಗಲು ಸಾಮಾನ್ಯವಾದದ್ದೇ. ವಿಪರೀತವಾಗಿ ಬೆಳೆದಿರುವ ಜನ ಸಂಖ್ಯೆ, ಸಂಪನ್ಮೂಲಗಳ ಕೊರತೆ ಇವೆರಡರ ಅಸಮಾನತೆಯಿಂದ ಸಾಮಾನ್ಯ ಜನತೆಗೆ ತಮಗೆ ಸಿಗಬೇಕಾಗಿದ್ದು ಸಿಗುವುದಿಲ್ಲವೇನೋ ಎಂಬ ಸಂದೇಹ ಯಾವಾಗಲೂ. ಅದಕ್ಕೆ ಪಡಿತರ ಅಂಗಡಿಗೆ ಸಕ್ಕರೆ ಅಥವಾ ಮತ್ತಿನ್ನೇನಾದರೂ ಪದಾರ್ಥ ಬಂದಿದೆಯೆಂದರೆ ಸಾಕು ಜನರ ನೂಕುನುಗ್ಗಲು ಶುರುವಾಗುತ್ತದೆ. ಅದೇ ಮನಃಸ್ಥಿತಿ ದೇವಸ್ಥಾನದಲ್ಲಿ ದರ್ಶನಕ್ಕಾಗಿಯಾದರೂ, ಪ್ರಸಾದ ಹಂಚುವಲ್ಲಿಯಾದರೂ ಅಥವಾ ಸಿನಿಮಾ ಟಾಕೀಸಿನ ಟಿಕೆಟ್ಟುಗಳು ಸರತಿಗಳಲ್ಲೂ ಕಾಣುತ್ತದೆ. ಜನರು ತಾವಾಗಿ ಸರತಿಯ ಸಾಲುಗಳಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುವುದಂತೂ ಕಾಣದ ಸ್ವರ್ಗ ನಮಗೆ. ಅದೇ ರೀತಿ ಯಾವುದೋ ಶೋ ರೂಮನ್ನು ಆರಂಭಿಸಲು ಬಂದ ಸಿನಿತಾರೆಯನ್ನು ನೋಡಲು, ಸಾಧ್ಯವಾದರೆ ಕೈಕುಲುಕಲು ಕೂಡಾ ನೂಕುನುಗ್ಗಲು ಇರುತ್ತದೆ. ಇನ್ನು ನಂತರದ ಸರದಿ ಕ್ರಿಕೆಟಿಗರದು. ಅವರನ್ನು ನೋಡಲು ಮುಗಿಬೀಳುವ ಯುವತೆ ಅವರ ಹತ್ತಿರ ಹೋಗಲಿಕ್ಕೆ ಯಾವ ಮಟ್ಟದ ಸಾಹಸಕ್ಕಾದರೂ ಕೈಹಾಕಲು ಹೇಸುವುದಿಲ್ಲ. ಈ ಬೇಡದ ಉತ್ಸಾಹವೇ ನೂಕುನುಗ್ಗಲಾಗಿ ಕಾಲ್ತುಳಿತಕ್ಕೆ ಕಾರಣವಾಗುತ್ತದೆ.

ತಿರುಪತಿ ತಿಮ್ಮಪ್ಪನ ದರ್ಶನ ಬಹುತೇಕ ಎಲ್ಲರೂ ಒಮ್ಮೆಯಾದರೂ ಮಾಡಿರಬಹುದು. ಅಲ್ಲಿ ೩೦೦ ರು. ಟಿಕೆಟ್ ಕೊಂಡವರು ಸಹ ತುಂಬಾಜನ ಇರುತ್ತಾರೆ. ಅವರನ್ನೆಲ್ಲ ಹಂತ ಹಂತವಾಗಿ ಒಳಗೆ ಬಿಡುವ ಪ್ರಕ್ರಿಯೆಯಲ್ಲಿ, ಕೊಠಡಿಗಳಲ್ಲಿ ಕೆಲ ಸಮಯ ಕಾಯಲು ಇರಿಸುತ್ತಾರೆ. ಕೆಲ ಜನರಿಗೆ ಕೂರಲು ಸಹ ಸವಲತ್ತಿದೆ. ಆ ಕೊಠಡಿಗಳಲ್ಲಿರುವ ಜನರು ಮುಂದಿನ ಹಂತದ ಬಾಗಿಲು ತೆಗೆದೊಡನೆ ನುಗ್ಗಿದ್ದೇ ನುಗ್ಗಿದ್ದು. ಎಲ್ಲರಿಗೂ ಒಂದೂ ವರೆ ತಾಸು ಅಥವಾ ಹೆಚ್ಚೆಂದರೆ ಎರಡು ತಾಸುಗಳಲ್ಲಿ ದರ್ಶನ ಆಗಿಯೇ ಆಗುತ್ತದೆ ಎಂದು ತಿಳಿದಿದ್ದರೂ ತಾವು ಮುಂದೆ ಹೋಗಿಬಿಡಬೇಕೆಂಬ ಮಹದಾಸೆ ಈ ನೂಕುನುಗ್ಗಲಿಗೆ ಕಾರಣ.
ಇದೇ ರೀತಿ ಕಳೆದ ವರ್ಷ ಉತ್ತರಪ್ರದೇಶದ ಹತ್ರಸ್ ಎಂಬ ಪ್ರದೇಶದಲ್ಲಿ ಯಾವುದೋ ಬಾಬಾರವರ ಪ್ರವಚನ ಕೇಳಲು ಬಂದ ಭಕ್ತರು, ಅವರು ಪ್ರವಚನ ಮುಗಿಸಿ ಹೋಗುವಾಗ ಅವರ ಪಾದ ಧೂಳಿಯ ಸಲುವಾಗಿ ಮುಗಿಬಿದ್ದು ೧೨೧ ಜನ ಪ್ರಾಣ ಕಳೆದುಕೊಂಡಿದ್ದರು. ಈ ವರ್ಷ ಅದೇ ರಾಜ್ಯದಲ್ಲಿ ಆಯೋಜಿಸಿದ ಮಹಾಕುಂಭದ ಕಾಲ್ತುಳಿತದಲ್ಲಿ ಸರಕಾರ ಕೊಟ್ಟ ಮೃತರ ಅಂಕೆಸಂಖ್ಯೆಗಳನ್ನು ಒಪ್ಪದ ಪ್ರತಿಪಕ್ಷಗಳು ಮೃತರ ಸಂಖ್ಯೆ ತುಂಬಾ ಜಾಸ್ತಿ ಇರಬಹುದು ಎಂದು ಪ್ರತಿಘಟಿಸಿವೆ. ಕೆಲ ವರ್ಷಗಳ ಹಿಂದೆ ೨೦೧೫ ರಲ್ಲಿ ಗೋದಾವರಿ ನದಿಯ ಕುಂಭಮೇಲಾ ( ಅಲ್ಲಿ ಅದನ್ನು ಪುಷ್ಕರಾಲು ಎನ್ನುತ್ತಾರೆ) ಆರಂಭವಾದ ದಿನ ಇದೇ ರೀತಿಯ ನೂಕುನುಗ್ಗಲು ಆಗಿ ಸುಮಾರು ೩೦ ಜನ ಸಾವನ್ನಪ್ಪಿದ್ದರು. ಇದಕ್ಕೆ ಕಾರಣ ಆ ದಿನ ನೆರೆದಿದ್ದ ಲಕ್ಷಗಟ್ಟಲೆ ಭಕ್ತರು ಪವಿತ್ರ ಸಮಯದಲ್ಲೇ ಸ್ನಾನ ಆಚರಿಸಬೇಕೆಂಬ ನಂಬಿಕೆ. ಇದೇ ವರ್ಷದ ಮೊದಲಿನಲ್ಲಿ ಅಲ್ಲು ಅರ್ಜುನ್ ಅವರ ಪುಷ್ಪ-೨ ಚಿತ್ರ ಬಿಡುಗಡೆಗೊಂಡು ಅದರ ಆರಂಭದ ದಿನ ಆದ ನೂಕುನುಗ್ಗಲಿನಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದಳು. ಅದಕ್ಕೆ ಕಾರಣ ಮಂಚಿತವಾಗಿ ತಿಳಿಸದೇ ಚಿತ್ರ ಮಂದಿರಕ್ಕೆ ಬಂದ ನಾಯಕ ನಟ ಅಲ್ಲು ಅರ್ಜುನ ಅಂತ ನಿಂದಿಸಿ ಆತನನ್ನು ಒಂದು ದಿನದ ಮಟ್ಟಿಗೆ ಜೈಲಲ್ಲಿ ಕೂರಿಸಿದ್ದ್ದರು.

ಹೀಗೇ ಹಿಮಾಚಲ್ ಪ್ರದೇಶ್, ಜಮ್ಮು ಕಾಶ್ಮಿರ್, ರಾಜಸ್ಥಾನ್, ಆಂಧ್ರಪ್ರದೇಶ್ ರಾಜ್ಯಗಳಲ್ಲಿ ಕಾಲ್ತುಳಿತಗಳು ಸಂಭವಿಸಿದ್ದು ತುಂಬಾ ಜನರ ಪ್ರಾಣನಷ್ಟವಾಗಿದೆ. ಅಲ್ಲಿಗೆ ಡ್ಯೂಟಿಯಮೇಲೆ ಬಂದಿರುವ ಪೋಲೀಸರಾಗಲಿ , ಹೋಮ್ ಗಾರ್ಡುಗಳಾಗಲಿ ಸಂಖ್ಯೆಯಲ್ಲಿ ಕಮ್ಮಿ ಇದ್ದು ಈ ರೀತಿಯ ನೂಕುನುಗ್ಗಲನ್ನು ತಡೆಯುವಲ್ಲಿ ಅಸಹಾಯಕರಾಗುತ್ತಾರೆ.

ಆದರೆ ಈ ನೂಕುನುಗ್ಗಲಿನ ಅವಾಂತರ ನಮ್ಮ ದೇಶಕ್ಕೆ ಮಾತ್ರ ಸೀಮಿತ ಅಲ್ಲ. ಪ್ರತಿ ವರ್ಷ ತಮ್ಮ ಪವಿತ್ರ ಯಾತ್ರೆ ಹಜ್ ಗಾಗಿ ಮೆಕ್ಕಾದಲ್ಲಿ ನೆರೆಯುವ ಭಕ್ತರ ನಡುವೆ ೨೦೧೫ರಲ್ಲಿ ಯಾವುದೋ ಕಾರಣಕ್ಕೆ ನೂಕುನುಗ್ಗಲು ಉಂಟಾಗಿ ಸುಮಾರು ೨೪೦೦ಕ್ಕೂ ಹೆಚ್ಚು ಜನ ಮೃತಪಟ್ಟ ಘಟನೆ ಈ ನೂಕುನುಗ್ಗಲು ಜಾಗತಿಕ ಎಂದು ಸಾರುತ್ತದೆ. ಈ ದಶಕದಲ್ಲಿಯ ಅತಿ ಹೆಚ್ಚು ಜನರ ಸಾವು ದಾಖಲಿಸಿದ ಘಟನೆ ಇದು ಎನ್ನಬಹುದು. ಅದೇ ರೀತಿ ದಕ್ಷಿಣ ಅಮೆರಿಕಾದ ಕೆಲ ದೇಶಗಳಲ್ಲಿ, ದಕ್ಷಿಣ ಆಫ್ರಿಕಾ, ಘನಾ, ಬಲ್ಗೇರಿಯಾ,ಅಮೆರಿಕಾ,ಚೈನಾ, ಡೆನ್ಮಾರ್ಕ್ ದೇಶಗಳಲ್ಲಿ ಸಹ ಈ ರೀತಿಯ ನೂಕುನುಗ್ಗಲುಗಳು ಸಂಭವಿಸಿ, ಪ್ರಾಣ ನಷ್ಟ ಆಗಿದೆ.

ಒಮ್ಮೊಮ್ಮೆ ಜನರು ಸರತಿಯಂತೆ ಸಾಲಾಗಿ ಚಲಿಸುತ್ತಿದ್ದರೂ ಯಾವುದೋ ಆಧಾರವಿಲ್ಲದ ಪುಕಾರಿನಿಂದಲೂ ನೂಕುನುಗ್ಗಲು ಪ್ರಾರಂಭವಾಗಿ ಕಾಲ್ತುಳಿತಕ್ಕೆ ಜನ ಸತ್ತ ಘಟನೆಗಳೂ ಇವೆ. ಇಂಥವುಗಳಲ್ಲಿ ಹೇಳಿಕೊಳ್ಳಬಹುದಾದದ್ದು ಎಂದರೆ ೨೦೦೮ ರಲ್ಲಿ ಜೋಧ್ಪುರ್ ದಲ್ಲಿ ಚಾಮುಂಡ ದೇವಿ ದೇವಸ್ಥಾನದ ದರ್ಶನಕ್ಕಾಗಿ ನಿಂತ ಭಕ್ತರಲ್ಲಿ ನಡೆದ ಘಟನೆ. ಯಾರೋ ಬಾಂಬು ಇಟ್ಟಿದ್ದಾರೆ ಎನ್ನುವ ಪುಕಾರು ಹಬ್ಬಿ ಜನರ ನೂಕುನುಗ್ಗಲಾಗಿ ೨೨೪ ಭಕ್ತರು ಸತ್ತು ಸುಮಾರು ೪೨೫ ಜನ ಗಾಯಗೊಂಡಿದ್ದರು.

ಇದೆಲ್ಲ ನೋಡಿದಾಗ ನೂಕುನುಗ್ಗಲಿನ ಸಾಧಾರಣ ಕಾರಣಗಳೇನಿರಬಹುದು ಎಂದು ಒಮ್ಮೆ ಪರೀಕ್ಷಿಸಿದಾಗ ಈ ಕೆಳಕಂಡ ಕಾರಣಗಳು ಮುಖ್ಯವೆನಿಸುತ್ತವೆ.
೧. ಧಾರ್ಮಿಕ ಸ್ಥಳಗಳಲ್ಲಿ ದೇವರ ದರ್ಶನ, ನದೀ ಸ್ನಾನ, ಗೋಡೆಗೆ ಕಲ್ಲು ಒಗೆಯುವುದು, ಗೋಡೆಯನ್ನು ಮುಟ್ಟುವುದು, ಬಾಬಾಗಳ ಪಾದ ಸ್ಪರ್ಶಕ್ಕಾಗಿ ಹಾತೊರೆಯುವುದು. ಈ ರೀತಿಯ ಧಾರ್ಮಿಕ ಜಾತ್ರೆಗಳು, ಹಬ್ಬಗಳು ಜಗತ್ತಿನ ಎಲ್ಲ ದೇಶಗಳಲ್ಲಿ ಸರ್ವೇ ಸಾಮಾನ್ಯ ಆದ್ದರಿಂದ ಇದನ್ನು ಮೊದಲನೆಯ ಕಾರಣ ಎನ್ನಬಹುದು.
೨. ಯಾವುದೋ ಪುಕಾರು ಅಥವಾ ಚಿಕ್ಕ ಘಟನೆ ( ಒಂದು ಸೇತುವೆ ಕುಸಿಯುವುದು, ಅಥವಾ ಬಾಂಬ್ ಇಟ್ಟಿರುವುದಾಗಿ ಹಬ್ಬುವ ಪುಕಾರು ಮೊ||).
೩. ಪಂದ್ಯಗಳು ಅಥವಾ ಸಭೆ ಸಮಾರಂಭಗಳು ಮುಗಿದ ಮೇಲೆ ಹೊರಬೀಳುವ ತರಾತುರಿಯಲ್ಲಿ ಆಗುವ ನೂಕುನುಗ್ಗಲು. .
೪. ರಾಜಕಾರಣಿಗಳ ಸಭೆಗಳಲ್ಲಿ ಆಗುವ ಗದ್ದಲ.
೫. ನೆರೆದ ಕಟ್ಟಡಗಳು ಕುಸಿಯುವುದರಿಂದ ಅಥವಾ ಬೆಂಕಿ ಅನಾಹುತ.
೬. ತುಂಬಾ ಜನರನ್ನು ಆಕರ್ಷಿಸುವ ಪಟಾಕಿ ಸಂಭ್ರಮ. ಏರ್ ಷೋ, ಕಾರ್ನಿವಾಲ್ ಗಳಂಥಾ ಕಾರ್ಯಕ್ರಮಗಳು.
೭. ತಮ್ಮ ಅಭಿಮಾನ ತಾರೆಯರನ್ನು ಅಥವಾ ಆಟಗಾರರನ್ನು ನೋಡುವ ಸಲುವಾಗಿ ಅಭಿಮಾನಿಗಳು ತೋರುವ ಅತ್ಯುತ್ಸಾಹ.

ಯಾವುದೇ ನೂಕುನುಗ್ಗಲಿಗೆ ಪ್ರಧಾನ ಕಾರಣ ಅಲ್ಲಿ ನೆರೆದ ಜನರ ಅಸಹನೆ, ಭೀತಿ. ತಾವು ಬಂದ ಉದ್ದೇಶದ ಫಲ ತಮಗೆ ಸಿಗುವುದಿಲ್ಲವೇನೋ ಎನ್ನುವ ಅಸಹನೆ ಮತ್ತು ತಮ್ಮನ್ನು ಬಚಾಯಿಸಿಕೊಳ್ಳಬೇಕೆಂಬ ಭೀತಿ. ಅಲ್ಲಿಗೂ ಕೆಲ ಮಹನೀಯರು ಗುಂಪನ್ನು ಶಾಂತವಾಗಿರಿಸಲು ಅವರಿಗೆ ತಿಳಿಹೇಳುವ ಅಥವಾ ಸುರಕ್ಷಿತವಾಗಿ ಹೊರಗಡೆಗೆ ಹೋಗುವ ಅಥವಾ ಸಾಲಲ್ಲಿ ತಾಳ್ಮೆಯಿಂದ ಮುಂದುವರೆಯುವ ಸಲಹೆಗಳನ್ನ ಸೂಚನೆಗಳನ್ನು ಕೊಡುವುದು ನಮಗೆ ಕಾಣುತ್ತದೆ. ಆದರೆ ವಿಷಾದವೆಂದರೆ ಅವರು ಸಹ ಈ ಹುಚ್ಚು ಗುಂಪಿನ ಆತುರಕ್ಕೆ ಬಲಿಯಾದ ಘಟನೆಗಳು ಸಹ ದಾಖಲಾಗಿವೆ.

ಇದರ ಮಿನಿಯೇಚರ್ ಚಿತ್ರ ನಮಗೆ ರಸ್ತೆಗಳ ಕೂಡಲಿಯಲ್ಲಿ ವಾಹನಗಳ ನಡುವೆ ಆಗುವ “ಜಾಮ್” ಅಥವಾ ಗೊಂದಲ. ರಸ್ತೆ ದಾಟುವಾಗ ತಾವು ಮುಂಚೆ ಹೋಗಿಬಿಡಬೇಕೆನ್ನುವ ಆತ್ರ ಈ ರೀತಿಯ ಜಾಮ್ ಗೆ ಕಾರಣವಾಗುತ್ತದೆ. ಹಾಗೆ ವಾಹನಗಳು ಸಿಕ್ಕಿಹಾಕಿಕೊಂಡು ಯಾರೂ ಹೋಗದ ಹಾಗಾಗಿ ರಸ್ತೆಯ ಆಚೆ ಈಚೆ ವಾಹನಗಳ ಸಾಲುಗಳು ಆಗುತ್ತ ತೊಂದರೆಗೆ ಈಡು ಮಾಡುತ್ತವೆ. ಇದೇ ಮಾನಸಿಕ ಸ್ಥಿತಿಯೇ ನೂಕುನುಗ್ಗಲಿನಲ್ಲೂ ಕಾಣುತ್ತದೆ. ಅತಿಯಾದ ಅಸಹನೆ. ಎಷ್ಟೋ ಕಡೆಗಳಲ್ಲಿ ರೈಲೆಗಳ ಕ್ರಾಸಿಂಗ್ ಗಳ ಸ್ಥಳಗಳ ಹತ್ತಿರ ಒಂಟಿ ತಡೆ ಇದ್ದರೆ ಅದರ ಕೆಳಗೆ ತಾವು, ತಮ್ಮ ವಾಹನಗಳನ್ನು ತೂರಿಸಿಕೊಂಡು ಹೋಗುವುದು ಸಹ ನಮ್ಮ ಕಣ್ಣಿಗೆ ಬೀಳುತ್ತದೆ. ಕೆಲ ಸಮಯ ಇವರುಗಳು ರೈಲಿನಡಿಗೆ ಸಿಕ್ಕುವ ಪ್ರಮಾದವೂ ಇದೆ.

ಈ ಅಸಹನೆ ಮತ್ತು ಆತರಗಳಿಗೆ ಸೇರಿದಂತೆ ಜನರ ಅಶಿಸ್ತು ಸಹ ಒಂದು ಕಾರಣವಾಗಿ ಕಾಣುತ್ತದೆ. ನಿರ್ಲಕ್ಷ್ಯವೂ ಇದಕ್ಕೆ ಸೇರುತ್ತದೆ. ಏಕಮುಖೀಯ ರಸ್ತೆಯಲ್ಲಿ ವಿರುದ್ಧ ದಿಶೆಯಲ್ಲಿ ವಾಹನ ಚಲಾಯಿಸುವುದು, ಬಲಗಡೆಯಿಂದ ವಾಹನಗಳನ್ನು ಹಿಂದಿಕ್ಕಿ ಹೋಗದೇ ಎಡಗಡೆಯಿಂದ ಹೋಗುವುದು, ಸೇವೆಗಳನ್ನು ಪಡೆಯ ಬೇಕಾದ ಕಡೆಗೆ ಸಾಲಾಗಿ ನಿಲ್ಲದೆ ನುಗ್ಗುವುದು, ಯಾವುದೇ ಕಾನೂನನ್ನು ಪಾಲಿಸದೆ ತಮ್ಮ ಮರ್ಜಿಗೆ ಬಂದ ಹಾಗೆ ಮಾಡುತ್ತ ಇತರರಿಗೆ ತೊಂದರೆ ಕೊಡುವುದು ಈ ಕೆಟಗರಿಗೆ ಸೇರುತ್ತವೆ.

ನಾನು ಅಮೆರಿಕಕ್ಕೆ ಹೋದಾಗ ಅಲ್ಲಿಯ ಒಂದು ದೊಡ್ಡ ದೇವಸ್ಥಾನಕ್ಕೆ ಹೋಗಿದ್ದೆವು. ಅಲ್ಲಿ ದೇವಸ್ಥಾನದ ಪಕ್ಕದಲ್ಲಿ ಅದರ ಕಚೇರಿ, ಪ್ರಸಾದ ಮಾರುವ ಕೌಂಟರ್, ಚಪ್ಪಲಿಗಳನ್ನು ಬಿಡುವ ಸ್ಥಳ ಎಲ್ಲವೂ ಇದ್ದವು. ದೇವಸ್ಥಾನದ ಆವರಣದಲ್ಲಿ ಕಾಲಿಟ್ಟ ತಕ್ಷಣ ಅಲ್ಲಿ ದೊಡ್ಡದಾಗಿ ಬೋರ್ಡಿತ್ತು. “ಚಪ್ಪಲಿಗಳನ್ನ ಕಚೇರಿಯ ಪಕ್ಕದಲ್ಲಿರಿವ ಕೊಠಡಿಯಲ್ಲಿ ಬಿಡಿ” ಅಂತ. ಅಲ್ಲೇ ಅಲ್ಲದೇ ಎರಡು ಮೂರು ಕಡೆ ಆ ಕೊಠಡಿಯ ಕಡೆಗೆ ತೋರುವ ಬಾಣದ ಗುರ್ತುಗಳನ್ನು ಹಾಕಿಯಾಗಿತ್ತು. ಇಷ್ಟೆಲ್ಲ ಆದರೂ ದೇವಸ್ಥಾನದ ಬಾಗಿಲ ಹತ್ತಿರ ಸುಮಾರು ಇಪ್ಪತ್ತು ಜತೆ ಚಪ್ಪಲಿಗಳಿದ್ದವು. ಈ ವರ್ತನೆಯ ಬಗ್ಗೆ ಏನೆನ್ನಬಹುದು. ಅಲ್ಲಿಗೆ ಹೋದವರು ಯಾರೂ ಅಶಿಕ್ಷಿತರಲ್ಲ. ಒಂದುವೇಳೆ ತಂದೆತಾಯಿಯರು ಹಳ್ಳಿಯಂದ ಬಂದು ಇದರ ಬಗ್ಗೆ ತಿಳಿಯದಿದ್ದರೂ ಅಲ್ಲಿಗೆ ಹೋದ ಮಕ್ಕಳು ಅವರಿಗೆ ತಿಳಿಸಿ ಹೇಳಬಹುದಲ್ಲವೇ! ಇದು ನಿರ್ಲಕ್ಷ್ಯ ಮತ್ತು ಅಶಿಸ್ತು. ಇದರಿಂದ ಅಲ್ಲಿಗೆ ಬರುವ ವಿದೇಶೀ ಭಕ್ತರ ಎದುರಲ್ಲಿ ನಾವೆ ನಗೆಪಾಟಲಿಗೀಡಾಗುವುದಿಲ್ಲವೇ? ಇದೇ ವರ್ತನೆ ಎಲ್ಲ ಕಡೆಗೂ ಪ್ರತಿಫಲಿಸಿ ನೂಕುನುಗ್ಗಲಿಗೆ ದಾರಿ ಮಾಡುತ್ತದೆ ಎನ್ನುವುದು ನನ್ನ ಅಭಿಪ್ರಾಯ.

ನಾವು ತಾಂತ್ರಿಕತೆಯಲ್ಲಿ ಅಪಾರ ಪ್ರಗತಿ ಸಾಧಿಸಿದ್ದೇವೆ. ಮಂಗಳ ಗ್ರಹದಲ್ಲಿ, ಚಂದ್ರಮನ ಮೇಲೆ ಉಪಗ್ರಹಗಳನ್ನ ಇಳಿಸಿದ್ದೇವೆ. ರಕ್ಷಣಾ ತಂತ್ರದಲ್ಲಿ ಹೆಸರು ಗಳಿಸಿದ್ದೇವೆ. ಆದರೆ ಈ ವರ್ತನೆಗಳಿಂದ ನಾವು ಮಾದರಿಯಾಗಿ ನಿಲ್ಲಲಾರದಾಗಿದ್ದೇವೆ. ಯಾಕೆ ಭಾರತ ಪ್ರವಾಸಿಗರಿಗೆ ತಕ್ಷಣ ಗಮ್ಯಸ್ಥಾನವೆನಿಸುವುದಿಲ್ಲ? ಎನ್ನುವ ಪ್ರಶ್ನೆಗೆ ಇದೇ ಉತ್ತರ ಎನ್ನಬಹುದು. ನಮಗೆ ನಾವೇ ಸಂಸ್ಕರಿಸಿಕೊಳ್ಳೈದಿದ್ದರೆ ನಾವು ಅನಾಗರಿಕರಾಗೇ ಉಳಿಯುತ್ತೇವೆ ಮತ್ತು ಈ ರೀತಿಯ ನೂಕುನುಗ್ಗಲಿನ ಸಂಸ್ಕೃತಿಯ ಮಾದರಿಯಾಗಲಿದ್ದೇವೆ.

-ಚಂದಕಚರ್ಲ ರಮೇಶ ಬಾಬು

ಕನ್ನಡದ ಬರಹಗಳನ್ನು ಹಂಚಿ ಹರಡಿ
2 1 vote
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಕೋಡೀಹಳ್ಳಿ ಮುರಳೀಮೋಹನ್
ಕೋಡೀಹಳ್ಳಿ ಮುರಳೀಮೋಹನ್
2 months ago

ತುಂಬಾ ಚಿಂತನೆಗೆ ಹಚ್ಚುವ ಲೇಖನ. ಈ ರೀತಿಯ ಲೇಖನಗಳು ಇನ್ನಷ್ಟು ಬರಬೇಕಾಗಿದೆ ಅವಶ್ಯಕತೆ ಇದೆ.

K.MuraliMohan
K.MuraliMohan
2 months ago

 ತುಂಬಾ ಚಿಂತನೆಗೆ ಹಚ್ಚುವ ಲೇಖನ. ಈ ರೀತಿಯ ಲೇಖನಗಳು ಇನ್ನಷ್ಟು ಬರಬೇಕಾಗಿದೆ ಅವಶ್ಯಕತೆ ಇದೆ.

2
0
Would love your thoughts, please comment.x
()
x