ನಾಟಕ ಅನ್ನೋದ ಒಂದು ದೃಶ್ಯಕಾವ್ಯ. ಗ್ರೀಕ್ ದೇಶದ ಪ್ರಾಚೀನ ನಾಟಕ್ಕಾರಾದ ಯುರಿಪಿಡ್ಸ್, ಅರಿಸ್ಟೋಫೇನ್ಸ್, ಈಸ್ಕಿಲಸರಿಗಿಂತ ಮುಂಚೆನ ಆರಂಭಾದ ಈ ಪರಂಪರೆ, ಹೆಮ್ಮರಾಗಿ ನೂರುಸಾವ್ರ ರೆಂಬೆಕೊಂಬೆಗಳನ್ನ ಚಾಚಿ, ಲಕ್ಷಕೋಟಿ ಬಿಳಿಲುಗಳನ್ನ ಮೈದುಂಬ್ಕೊಂಡು ಸಮೃದ್ಧಾಗಿ ಬೆಳುದು, ಕಡಲಿಗುನೂ ಹಿರಿದಾಗಿ, ಆಗಸಕನೂ ಮಿಗಿಲಾಗಿ ಬಿತ್ತರಿಸ್ಕೊಂಡು ನಿಂತೈತಿ. ಮುಂದ, ಅದು ರೋಮಿನ ಗಡಿ ದಾಟಿ ಇಡೀ ಯುರೋಪ್‌ನ ಬಾಚಿಕೊಂಡ್ತು. ಇಲ್ಲಿ ಷೇಕ್ಸಪೀಯರ್ ಹೆಸರಿಸ್ಬೋದಾದ ಮತ್ತೊಂದು ಹೆಸರು. ನಾರದ, ಕೃಷ್ಣ, ಶಕುನಿ, ರಾವಣ, ಮಂಥರೆ, ಕೈಕೆಯರಂಥ ಮಾನ್ಮಾನ್ ನಾಟಕ್ಕಾರರ ಇರೋ ನಮ್‌ತಾಯ್ನೆಲಕ್ಕ ಬಂದ್ರ ವೇದ, ಉಪನಿಷತ್ತು, ಕಾವ್ಯ, ಪುರಾಣ, ಶಾಸ್ತç, ವ್ಯಾಕರಣದಾಗ ಜಗತ್ತಿಗ್ಯಾ ಮೊದಲುಗಳೆಂಬಂಥ ನಾಟಗಗಳ ಉಲ್ಲೇಖ ಕಂಡುಬಂದ್ರುನೂ ಕೃತಿಗಳು ದೊರತದ್ದು ಮಾತ್ರ ತುಸು ತಡವಾಗಿನ. ಉಲ್ಲೇಖಗಳು, ನಿದರ್ಶನಗಳು ಅದಾವೆಂದಾಗ ನಾಟಕಗಳು ಇರಾಕಬೇಕು. ಆದ್ರ ಅವು ಕಾಲಗರ್ಭದಾಗ ಸೇರಿ ಮರೆಯಾಗರ‍್ಲೂಬೋದು. ಅಶ್ವಘೋಷ, ಭಾಸ, ಭವಭೂತಿ, ಕಾಳಿದಾಸ, ಶೂದ್ರಕ, ಹರ್ಷನ ನಾಟಕಗಳ ನಮಗೀಗ ಅಧಿಕೃತ ಆಧಾರಗಳು. ಅದ್ರಾಗ ಕಾಳಿದಾಸ, ಬಾಸ ಜಗತ್ತಿನ ಯಾವ ನಾಟಕ್ಕಾರರಿಗೂ ಕಮ್ಮಿಯಿಲ್ಲದಂಥ ಶಿರಮಕುಟ ಸಿರಿಮಣಿಗಳು. ಕನ್ನಡಕ್ಕ ಬಂದ್ರಂತೂ ಇದರ ಪ್ರಾಚೀನ ಪರಂಪರೆ ಇಲ್ವೇನೋ ಅನ್ನುವಷ್ಟು ಕನಿಷ್ಠಮಟ್ಟಕ್ಕಿಳಿತಾದ. ಮೊದಲ ನಾಟಕ ಸಿಂಗಾರಾರ್ಯರ ‘ಮಿತ್ರಾವಿಂದ ಗೋವಿಂದ’ ನೋಡ್ಬೇಕಂದ್ರನ ಹದಿನೇಳನ್ಯಾ ಶತಮಾನದ್ತನಕಾನೂ ಕಾಯ್ಬೇಕಾಗುತ್ತ. ಇದಕೂ ಹಿಂದ ಕನ್ನಡದಾಗ ನಾಟಕಗಳ ಹುಟ್ಟರ‍್ಲಿಲ್ಲಂತಲ್ಲ. ಕವಿರಾಜಮಾರ್ಗ, ಆದಿಪುರಾಣ, ವಿಕ್ರಮಾರ್ಜುನ ವಿಜಯ, ಶಾಂತಿಪುರಾಣ, ಗದಾಯುದ್ಧ, ಕಾವ್ಯಾವಲೋಕನ, ಪಂಚತಂತ್ರ, ಕೆಳದಿನೃಪ ವಿಜಯ, ಹರಿಶ್ಚಂದ್ರ ಕಾವ್ಯ, ಭರತೇಶವೈಭವ, ಬಸವಪುರಾಣ, ಶೃಂಗಾರರತ್ನಾಕರ, ವಿವೇಕಚೂಡಾಮಣಿ, ಕಂಠೀರವವಿಜಯ, ಕರ್ಣಾಟ ಭಾರತ ಕಥಾಮಂಜರಿ ಮುಂತಾದ ಕಾವ್ಯರತ್ನಗಳೊಳಗ; ಕೆಲ ಶಿಲಾಶಾಸನ ಮತ್ತು ಹಲವು ಜನಪದದಾಗ ಈ ಬಗಿಗ್ಯಾ ಅನೇಕ ದಾಖಲೆಗಳು ಸಿಕ್ರುನೂ ಪೂರ್ಣರೂಪದ ಕೃತಿಗಳೆಲ್ಲಾನೂ ಕಾಲರಾಯನ ಗುಜುರಿ ಸೇರಿ, ಯಾವುವೂ ಈವರಿಗ್ಯಾ ಸಿಗದ ಹೋದದ್ದು ಕನ್ನಡ ನಾಡಿಗ್ಯಾ ನಷ್ಟನ ಸರಿ. ಸಂಸ್ಕೃತ ಹಾಗೂ ಪ್ರಾಕೃತದ ಬಹುತೇಕ ಎಲ್ಲಾ ಮಾದರಿಯ ಕೃತಿಗಳುನೂ ಕನ್ನಡಕ್ಕ ಬಂದಿರುವಾಗ, ‘ನೀಲಾಂಜನೆಯ ನೃತ್ಯ’ವನ್ನ ಕಟುದು ಕಣ್ಮುಂದ ತಂದು ನಿಲ್ಲಿಸಿರುವಾಗ, ವಿನೋದಮಯ ‘ಪಗರಣ’ ಹೇಳಿರುವಾಗ, ಅದು ಹೆಂಗ ನಾಟಕಗಳು ತಪ್ಪಿಸ್ಕೊಳ್ಳಾಕ ಸಾಧ್ಯ? ಎಂಬ ಜಿಜ್ಞಾಸೆಗೆ, ದಾಳ ಉಳ್ಳಿಸಿದ ಕಾಲನ ಬಳಿ ಯಾವ ಉತ್ರಾನೂ ಇಲ್ಲ. ಅದ್ರಲ್ಲಿನೂ ಕಾಳಿದಾಸ, ಭಾಸ ಅದೆಂಗ ತಪ್ಪಿಸ್ಕೊಂಡ್ರೆಂಬುದ ಕಾಲಕ್ನೂ ಸೋಜಿಗ ಕಾಡರ‍್ಬೇಕು!
ಈ ನಾಟಕಗಳು ನವರಸಗಳನ್ನ ತೆರಿಮ್ಯಾಲೆ ತಂದು ಕಣ್ಣಾಲಿಗಳನ್ನ ತೋಯ್ಸಿ ಮೀಯಿಸ್ಲೂಬೋದು; ಕಂಗಳನು ತೆರಿಸಿ ಮೆರೆಸ್ಲೂಬೋದು. ದೃಶ್ಯನ ಹಂಗ! ಕಣ್ಣೊಳಗ ತುಂಬಿದ ಬಿಂಬ, ಗೋರಿಗ್ಯಾ ಹೋದ್ರುನೂ ಪ್ರತಿಬಿಂಬ್ಸುವುದು. ಆ ಶಕ್ತಿ, ಆ ಸತ್ವ, ಆ ರಸ ನಾಟಗಕ್ಕೆöÊತಿ. ಅದಕ್ಕ ಅದು, ಎದಿಯೊಳಗ ಇನಿತಿನಿತು ರಸಭಾವಗಳನ್ನ ತುಂಬಿ ಹೂವಾಗಿ ಅರಳ್ಸುವುದು; ಘಮಾಗಿ ಪರ‍್ಸುವುದು.
ಇಷ್ಟು ಪೀಠಿಕಿ ಸಾಕನ್ಸುತ್ತ. ಈಗ ನನ್ ನಾಟಗದ ಕಡ್ಯಾ ಬನ್ನಿ. ನಾನು ಚಿಕ್ಕವಿದ್ದಾಗಿನಿಂದನೂ ಯಾರೊಂದಿಗೆರ ನಾಟಕ ನೋಡಾಕ ಹೊಕ್ಕಿದ್ದಾö್ಯ. ಹೋಗಾಗ, ಹೊದಕೊಳ್ಳಾಕ ಏನಾರೊಂದು ಹೊದಿಕಿ ಒಯ್ತಿದ್ದಾö್ಯ. ನಾಟಕ ಏನೂ ತಿಳಿತರ‍್ಲಿಲ್ಲ; ಆದ್ರೂ ಬೆಳ್‌ಬೆಳ್ತನ ನೋಡಾದು ಬಿಡ್ತರ‍್ಲಿಲ್ಲ. ಇನ್ನೇನು ಬೆಳಕು ಹರಿತೈತಿ ಅನ್ನಾಗ, ಚಾದರನ ಅರ್ಧ ಹಾಸಿ, ಇನ್ನರ್ಧ ಸುತ್ಕೊಂಡು ಅಲ್ಲೇ ಬೀಳ್ತಿದ್ದಾö್ಯ. ಮುಂಜಾನೆ: ಕಾಲಾಗ, ತಲಿಮ್ಯಾಗ ಮಲಗಿರ್ತಿದ್ದ ನಾಯಿಗಳ ಹಿಂಡ, ಎದ್ದೇಳೋ ಮಾರಾಯ ಬೆಳಕರುದೈತ್ಯಾ ಅಂತ ಎಬ್ಬಿಸಿ ಕಳಿಸ್ತಿದ್ವು. ಇದು, ಆರನ್ಯಾ ಕ್ಲಾಸ್ತನಾನೂ ಮುಂದರಿತು.
ಯೋಳನೆ ಕ್ಲಾಸಿಗ್ಯಾ, ಸಾಲ್ಯಾಗ ನಮಗ ಒನ್ ನಾಟಗ ಮಾಡ್ಸಾಕ ಚಾಲು ಮಾಡಿದ್ರು. ನಾ ಬಾಳ ಶ್ಯಾಣ್ಯಾ ಇದ್ದಾö್ಯ; ಹಿಂಗಾಗಿ, ಶಾಲಾಮಂಡಳಿ ನನ್ನ ಹೀರೋನಾಗಿ ರ‍್ಸಿತ್ತು. ಡೈಲಾಗ್ ಕಡಿಮಿ ಇದ್ರುನೂ ಯುದ್ಧ ಗೆದ್ಬಂದೋಟು ಖುಷಿ ಇತ್ತು. ಆದ್ರ, ಹಾಸ್ಯಪಾತ್ರ ಮಾಡಾಕ ಯಾರೂ ಮುಂದ ಬರ್ಲಿಲ್ಲ. ಯಾಕಂದ್ರ, ಡೈಲಾಗಾ ಹತ್ತತ್ರ ಎಂಬತ್ರ ಮ್ಯಾಲಿದ್ವು. ಅಷ್ಟ್ ಗಟ್ಟಿಮಾಡ ಗಟ್ಟಿಕಾಳು ಯಾರೂ ರ‍್ಲಿಲ್ಲ. ಹಿಂಗಾಗಿ, ನಿಧಾನ ಗಿಡಕ್ಕ ಬಳ್ಳಿ ರ‍್ದಂಗ, ಹೀರೋ ಪಾತ್ರ ಹೋಗಿ, ಹಾಸ್ಯಪಾತ್ರನ ನನ್ ಹೆಗಲರ‍್ತು.
ಯಾವ್ದಾದ್ರೇನು ನಾಟಗ ಮುಖ್ಯಂತ ಒಪ್ಗೊಂಡ್ಯಾ. ಅವಾಗ ನೋಡು, ದಿನಗಳದಂಗ ಒಂದಂದ ಸಮಸ್ಯ ಬಿಗಡಾಯ್ಸಕತಿದ್ವು. ಯಾಕಂದ್ರ, ಹೀರೋ ನನಗಿಂತ್ಲೂ ಎತ್ರ ಬೇಕಿತ್ತು. ಅದ್ರಾಗ, ಯಾವೂ ನನ್‌ಕಿವಿ ಹತ್ರುಕುನೂ ಬತಿರ‍್ಲಿಲ್ಲ. ಹಂಗ್ ನೋಡಿದ್ರ, ನಾನೋ ಉದ್ದೂಕ ಬೆಳೆದಿದ್ದ ಟೆಂಗಿನಗಿಡ ಆಗಿದ್ದಾö್ಯ! ಅವೋ ಪಾತಾಳ ಮುಟ್ಟಿದ್ದ ಅದ್ರ ಬುಡ ಆಗಿದ್ವು! ಇರದ್ರಾಗನಾ ಹುಳುಕುಲು ಬಳುಕುಲು ಎಲ್ಲಾ ತಗುದು, ನನ್ ಭುಜಕ್ಕೂ ಮೂರಿಂಚು ಕಡಿಮಿ ಇರೋ ಬಸು ರತ್ನಾಪೂರನ್ನೋನ ನಾಯಕನ ಪಾತ್ರಕ್ಕ ಆಯ್ಕೆ ಮಾಡಿದ್ರು.
ಎಲ್ಲಾ ಪಾತ್ರಗಳ ಆಯ್ಕೆ ಮುಗುದು, ರಿಹರ್ಸಲ್ ಆರಂಭಾದಾಗ ಮತ್ತೆ ರಿಯಲ್ಲು ಗೊತ್ತಾಗತೊಡಿಗ್ತು. ನನಗ ಕೊಟ್ಟಿದ್ದ ಹಾಸ್ಯಪಾತ್ರದ ಚಂದ್ರು ಬಾಳಂದ್ರ ಬಾಳು ಗಿಡ್ಡವ್ಯಕ್ತಿ. ಉಳುದೋರೆಲ್ಲ ನನಗ ‘ಗಿಡ್ಡ’, ‘ಕುಳ್ಳ’ ಅಂತ ಕಾಡ್ಬೇಕು; ನಾಯಿಗಿಂತ್ಲೂ ಜೋರಾಗಿ ಕಿರಿಚಿ ಕರೀಬೇಕು. ನಾನೋ ಮುಗಿಲಿಗ್ಯಾ ಮುಟ್ತಿದ್ದಾö್ಯ! ಉಳುದುವು, ಕೈಯೆತ್ತಿದ್ರೂ ನನ್ ಹೆಗಲೂ ಮುಟ್ತರ‍್ಲಿಲ್ಲ! ಹಿಂಗಾಗಿ, ಹೆಂಗ್ಮಾಡದಪ್ಪ ಅಂತ ಸಂತ್ಯಾಗ ಕುಂತು ಚಿಂತಿ ಮಾಡಿ, ಅಂತಿಮ ತೀರ್ಮಾನಕ್ಕ ಬರಲಾಗಿ: ‘ಕುಳ್ಳ’, ‘ಗಿಡ್ಡ’ ಅನ್ನೋ ಬದಲಿ ‘ಲಂಬು’, ‘ಉದ್ದನ್‌ಮೂಳ’ ಅನ್ನೋದಂತ ಕರಾರಾತು! ಇದು ಮುಗಿತು ಅಂದಾಗ ಮತ್ತೊಂದು ಪೀಕಲಾಟನಾ ಶುರುವಾತು; ಅದ ಬಣ್ಣದ್ದು!
ನಾಯಕ ರಾಜು, ಗುಮಾಸ್ತನ್ನ ಕರುದು: “ಬೇನಿ ಕಟ್ಟಿಮ್ಯಾಗ ಚಂದ್ರು ಕುಂತಾನ, ಹೋಗಿ ಕರಕೊಂಬಾ” ಅಂತ ಹೇಳ್ತಾನ. ಹೊಸ್ದಾಗಿ ಆಫೀಸಿಗ್ಯಾ ಬಂದಿದ್ದ ಅವ್ನು: “ನಾ ಅವುನ್ನ ನೋಡ್ಯಾ ಇಲ್ಲ ಸಾಹೇಬ್ರ” ಅಂತ ಹಿಂಜರಿತಾನ. “ಹೋಗ್‌ಲೇ, ಅವ ಕೆಂಪದಾನ, ಗುರ್ತು ಸಿಗತೈತಿ” ಅಂದ್ರ, “ಕೆಂಪಗ ನೂರಾರ್ ಮಂದಿ ಇರ್ತಾರ ಸಾಹೇಬ್ರ” ಅಂತ ರಾಗ ತಗಿತಾನ. ಆಗ ರಾಜು:
“ಲೇ ಅವ್ನ್ ಬಣ್ಣ ಅದೇಟು ಕೆಂಪಂದ್ರ,
ನಗುವ ಕೆಂಡನೂ ನಾಚುವಂಗ!
ತೊಂಡೆಹಣ್ಣುನೂ ಮಣ್ಣಾಗುವಂಗ!
ಅವ್ನ ಮೈಯೊಳು ಹರಿವ ರಕ್ತಾನೂ ಕಾಣಬೋದು!
ಅವ್ನ ಮುಟ್ಟಿದ್ರ ರಕ್ತಾನ ಮುಟ್ಟಿದಂಗಾಗುತ್ತ!
ನಮ್ ಕೈಯ ಕೆಂಪಾದಂಗ ಕಾಣುತ್ತ!
ತಾಯ ಹಣೆಮ್ಯಾಲಿನ ಕುಂಕುಮದಂಗ ಹೊಳಿವನು!
ಕವಳದೊಂದಿಗ್ಯಾ ಸುಣ್ಣ ಮೆಲ್ಲುವ ನಾಲಗಿಯಂಗ ಬೆಳಿವನು!
ಅವ್ನ ನೋಡಿದ್ರ:
ರಂಗೇರಿದ ಬೆಳಗು ಸೂರ್ಯನೂ ಮುಳುಗ್ಬೇಕು!
ಬೈಗು ಸೂರ್ಯನೂ ತೇಲ್ಬೇಕು!” ಅಂತ ಹೇಳಿ, ಹುಡುಕಾಕ ಕಳುಸೊ ದೃಶ್ಯ ಅದು!
ನಾನೋ ಮೊದಲಾ ಕರಿ ಎಳ್ಳು, ಹುರುದ ಗುರೆಳ್ಳು. ಮೇಲಾಗಿ ‘ಕಗ್ಗತ್ತಲ ಖಂಡ ಆಫ್ರಿಕಾ’ದಿಂದ ತಪ್ಪಿಸ್ಕೊಂಡು ಬಂದಂಗಿದ್ದಾö್ಯ! ಏನಾರ ಮಾಡಿ ಬಣ್ಣಗಿಣ್ಣ ಬಳದು ಮೇಕಪ್ಪು ಮಾಡ್ಬೇಕಂದ್ರುನೂ ಮೇಕಪ್ಪಾಗದ ಕಡುಗಪ್ಪು ನಂದು! ಮತ್ತೇನ್ ಮಾಡ್ಬೇಕು! ಡೈಲಾಗ್ನಾ ತಿರುವುಮುರುವು ಮಾಡಾಕ ತಯ್ಯಾರಾದ್ವಿ! ಆಗ:
“ಅವ್ನ್ ಬಣ್ಣ ಅದೇಟು ಕಪ್ಪಂದ್ರ,
ನಗುವ ಕೆಂಡನೂ ಆರಿದಂಗ!
ನೇರಳೆಹಣ್ಣುನೂ ಮಣ್ಣಾದಂಗ!
ಅವ್ನ ಮಯ್ಯ ಚರ್ಮ ಕಾಣಬೋದು!
ಅವ್ನ ಮುಟ್ಟಿದ್ರ ಕಪ್ಪುಶಿಲೆನಾ ಮುಟ್ಟಿದಂಗಾಗುತ್ತ!
ನಮ್ ಕೈಯ ಕಪ್ಪಾದಂಗ ಕಾಣುತ್ತ!
ಮಗುವಿನ ಕೆನ್ನಿಮ್ಯಾಲಿನ ಕಾಡಿಗೆಯಂಗ ಹೊಳಿವನು!
ಹಂಚಿನ ಮಸಿಯಂಗ ಬೆಳಿವನು!
ಅವ್ನ ನೋಡಿದ್ರ:
ರಂಗೇರಿದ ಬೆಳಗು ಸೂರ್ಯನೂ ಮಸಕಾಗ್ಬೇಕು!
ಬೈಗು ಸೂರ್ಯನೂ ಮುಸುಕಾಕ್ಬೇಕು!” ಅಂತ ಬದ್ಲಿಸಿ, ರಂಗ ತಾಲೀಮು ಆರಂಬ್ಸಿ, ಹಂಗೂ ಹಿಂಗೂ ಮಾಡಿ ಆ ದೃಶ್ಯಾನ ಸಮಾಪ್ತಿ ಮಾಡಿದ್ವಿ.
ಇನ್ನ ಮುಂದಿನ ಸನ್ನಿವೇಶ ಏನಂದ್ರ, ಹಾದ್ಯಾಗ ನಡಕೊಂಡು ರ‍್ತಿರೋ ರಶ್ಮಿನ ಕಂಡು, “ನಮ್ಮದು ಜನ್ಮಜನ್ಮಾಂತರದ ಪ್ರೇಮ” ಅನಬೇಕು. ಅವ್ಳೂ “ಹೌದು ಚಂದ್ರು, ನೀ ಹೇಳಿದ ಹಾಗೆ ನಮ್ಮದು ಜನ್ಮಜನ್ಮಾಂತರದ ಪ್ರೇಮಾನೇ ಇರಬೇಕು. ಈ ಪ್ರೇಮಕ್ಕೆ ಯಾರ ಕಣ್ಣು ಬೀಳದೆ, ಹೀಗೆ ಶಾಶ್ವತವಿರಲಿ ದೇವರೆ” ಅಂತ ಮುಗಿಲಿಗ್ಯಾ ಕೈಮುಗುದು ಬೇಡ್ಕೋಬೇಕು. ಇದಾದಮ್ಯಾಗ, ನಮ್ ಪ್ರೀತಿ ಅದೆಷ್ಟು ಗಟ್ಟಿಯಂತ ಹೇಳಾಕ:
“ಯುಗಯುಗಗಳು ಸಾಗಲಿ
ನಮ ಪ್ರೇಮ ಶಾಶ್ವತ|
ಗಿರಿಗಗನವೇ ಬೀಳಲಿ
ನಮ ಪ್ರೀತಿ ಶಾಶ್ವತ|” ಅಂತ ಸಿನಿಮಾ ಹಾಡು ಸರ‍್ಸಿದರು. ಹಿನ್ನೆಲೆ ಯಾರೂ ಆಡದಾ ಅದನ್ನ ನಾನಾ ಆಡ್ಬೇಕಿತ್ತು. ಆಡಾಕ ನನಗೇನು ಅಂಜ್ಕರ‍್ಲಿಲ್ಲ; ಆಡ್ತಿದ್ದಾö್ಯ. ಆದ್ರ ಅವ್ರೇನ್ ತಿಪ್ರ‍್ಲಾಗ ಹಾಕಿದ್ರೂ ನನಗ ‘ಯುಗಯುಗ’ ಅನ್ನಕ ರ‍್ತಿರ‍್ಲಿಲ್ಲ; ಸಾಂಗ್ ಬ್ಯಾಡಂದ್ರೂ ಬಿಡ್ತರ‍್ಲಿಲ್ಲ. ಅದೊಂದ ಅಲ್ಲ, ಎಷ್ಟ ಪದಗಳು ನನ್ ಬಾಯಾಗ ಹೊಳ್ತರ‍್ಲಿಲ್ಲ. ಅವ್ರಿಗ್ಯಾ ನಾಟಗ ಆಗ್ಬೇಕಿತ್ತು; ನಾನೂ ನಾಟಗ ಮಾಡ್ಬೇಕಿತ್ತು. ನನ್ ಬಿಡ್ಬೇಕಂದ್ರ, ಅವ್ರಿಗ್ಯಾ ಬ್ಯಾರೆ ಆಯ್ಕೆನ ರ‍್ಲಿಲ್ಲ. ಹೆಂಗಾರ ಮಾಡಿ ಅವ್ರು ನನ್ನ ಹಿಡಿಬೇಕಿತ್ತು. ಯಾಕಂದ್ರ, ಡೈಲಾಗ್ ಗಟ್ಟಿಮಾಡ ಗಟ್ಟಿಕುಳ ನನ್ಬಿಟ್ರ ಯಾರೂ ರ‍್ಲಿಲ್ಲ. ಹಿಂಗಾಗಿ, ‘ಕುಡ್ಗಣ್ಣಾಗ ಮೆಳ್ಗಣ್ಣು ಶ್ರೇಷ್ಟ’ನ್ನುವಂಗ ನಾನಾ ಚಂದುಳ್ಳ ಚಂದ್ರಾಮಾಗಿದ್ದಾö್ಯ; ಊರಿಗೊಬ್ನ ಹನುಮಪ್ಪಾಗಿ ಮೆರಿತಿದ್ದಾö್ಯ. ಅವ್ರೇನು ನನ್‌ಬಿಡುಬೇಕಂತ ವಿಚಾರೇನು ಮಾಡರ‍್ಲಿಲ್ಲ. ಏನಾರ ಮಾಡಿ ನನ್ನ ಹಳಿಗ್ಯಾ ತರಬೇಕನ್ನೋದ ಅವ್ರಾಸ್ಯಾ ಆಗಿತ್ತು. ಅದಕ ಅವ್ರು, ಬೆನ್ನಿಂದ ಬಿದ್ದ ಬೇತಾಳದಂಗ ನನ್ನಿಂದನ ಬಿದ್ದಿದ್ರು. ನಾನುನೂ ಅವ್ರಿಗ್ಯಾ ಸ್ಪಂದಿಸ್ತಿದ್ದಾö್ಯ; ಅಲ್ಲಲ್ಲಿ ಭಂಗಿಸ್ತಿದ್ದಾö್ಯ. ಹೆಂಗಾರ ಮಾಡಿ ನನ್ ತಿದ್ದಿತೀಡಿ ಮೂರ್ತಿ ಮಾಡ್ಬೇಕಂತನ ಅವ್ರೆಲ್ಲಾ ಆರತಿ ಹಿಡುದನ ನಿಂತಿದ್ರು. ಹೀಂಗ ನನ್‌ಭಾಷಾ ಶುದ್ಧಿ ಮಾಡಾಕ ಹೋಗೋಗಿನ ಹೆಚ್ಚುಕಡಿಮಿ ಅದ್ರಾಗ ಅರ್ಧ ಹೆಣಾನ ಬಿದ್ದೋದ್ವಂತ ಕಾಣ್ಸುತ್ತ!
ಮೊದಲಾ ಕಾಡಿನಿಂದ ಬಂದಿದ್ದಾö್ಯ! ಅಲ್ಲಿ ಮಾತ ರ‍್ಲಿಲ್ಲ; ಮೌನಕ್ಕನ ಹೆಚ್ಚು ಹೊತ್ತು! ಊರಿಗೆ ಬಂದು, ಓದು-ಬರಹ ಎಷ್ಟ ಬೇಗ ಕಲುತ್ರುನೂ ಬೆಂಬಿಡದ ನಾಚಿಕಿ ಸ್ವಭಾವದಿಂದಾಗಿನ ಮಾತಾಡಾಕ ದೂರನ ಉಳಿತಿದ್ದಾö್ಯ. ಹಂಗಾಗಿ, ಅಷ್ಟು ಸುಲಭ ನಾಲಿಗಿ ಹೊಳ್ತಿರಲಿಲ್ಲ. ಆದ್ರೀಗ ನಾಟಗಕ್ಕ ಮಾತ ಮುಖ್ಯಾಗಿತ್ತು. ಅವ್ರೆಲ್ರೂ ನನ್ ಕೈಬಿಡದಾ ನನ್ನ ಸುಧಾರುಸ್ತಿದ್ರು. ಏಟು ಸುಧರ‍್ಸಿದ್ನೋ ಅವ್ರಿಗ್ಯಾ ಗೊತ್ತು. ಏನ್ ‘ಹನಿ ಕೋದು ಮನಿ ಮಾಡಿದ್ರು’ನೂ ‘ಯುಗಯುಗ’ ಅನ್ನಾಕಂತೂ ರ‍್ಲೇಯಿಲ್ಲ. ಕೊನಿಗ್ಯಾ ‘ವಿಗವಿಗ’ನೇ ಅಂತಿಮಗೊಳಿಸಿ ಫರ್ಮಾನು ಹೊರಡಿಸ್ಲಾತು. ಹಂಗುಹಿಂಗು ಮಾಡಿ, ಹೀಂಗ ನೂರು ಅಡೆತಡೆಯೊಳಗ ಹೆಂಗೋ ಹೊಂದ್ಕೊಂಡು, ತಿಂಗ್ಳ ದಿನದಾಗ ಮಾತ್ನೆಲ್ಲಾ ತಂಗ್ಳ ಮಾಡಿ; ಎಲ್ರೂ ಹೊಟ್ಟಿನೂ ಹುಣ್ಣಾಗಂಗ ನಗಿಸಿ ಹಣ್‌ಮಾಡಿದ್ದಾö್ಯ!
ಅಂದು, ಐದು ನಿಮಿಷದ ಮತ್ತೊಂದು ಕಿರುನಾಟಕ ಮಾಡಿದ್ವಿ. ಡಾಕ್ಟುç ಹಾಗೂ ಜವಾನ ಎರಡ ಪಾತ್ರಗಳು. ಅದ್ರಾಗ, ಮೂರ್ನಾಲ್ಕು ತಿರುವುಗಳ ಅರೆಹುಚ್ಚನ ಪಾತ್ರ ನಂದಾಗಿತ್ತು. ನನಗಿಂತ್ನೂ ಯಾಡ್ ವರ್ಷ ಸಣ್ಣಾವಿದ್ದ, ಐದನ್ಯಾ ತರಗತಿಯ ಗೆಳೆಯ ಬಸು ರತ್ನಾಪೂರಂದು ಡಾಕ್ಟುç ಪಾತ್ರ ಇತ್ತು. ಅದ್ರ ಕತಿ ಹಿಂಗಿತ್ತು:
ನಾನು: (ನಿಧಾನ ಬಂದು) “ಡಾಕ್ಟೆç! ಡಾಕ್ಟೆç”
ಡಾಕ್ಟುç: (ತಾತ್ಸಾರದಿಂದ) “ಏನೋ?”
ನಾನು: “ನಿಮ್ಮನಿಗ್ಯಾ ಬೆಂಕಿ ಬಿದ್ದೆöÊತಿ ಡಾಕ್ಟೆç!”
ಡಾಕ್ಟುç: (ಕೋಪದಿಂದ) “ಥೂ ಲೋಫರ್ ನನ್ ಮಗನ! ಬೆಂಕಿ ಬಿದ್ರ ಲಬಲಬ ಹೊಯ್ಕೊಂತ ಓಡಿಬಂದು ಹೇಳಾದು ಬಿಟ್ಟು, ಹಿಂಗ್ ಆರಾಮ ಬರ್ತಾರೇನ್ಲೇ?” ಅಂತ ಉಗುದು ಕಳುಸ್ತಾನ.
ಸ್ವಲ್ಪ ತಡೆದು;
ನಾನು: (ಲಬಲಬ ಹೊಯ್ಕೊಂತಾ ಓಡಿಬಂದು) “ಡಾಕ್ಟೆç! ಡಾಕ್ಟೆç!”
ಡಾಕ್ಟುç: (ಗಾಬರಿಯಿಂದ) “ಏನ್ಲೇ ಏನಾತು?”
ನಾನು: “ನಿಮಗ ಗಂಡು ಮಗು ಆಗೈತೆಂತ”
ಡಾಕ್ಟುç: “ಲೇ ಮೂರ್ಕ ನನ್‌ಮಗನೆ, ಎಂಥ ಖುಷಿ ವಿಷಯ ಹೇಳಾಕ ಬಂದಿದಿ; ಪೇಡೆ ಕೊಡುಸ್ರಿ ಅಂತ ಓಡಿಬಂದು ಕೇಳಾದು ಬಿಟ್ಟು, ಹಿಂಗ ಬಾಯಿ ಬಡ್ಕೊಂಡು ಬರ್ತಾರೇನ್ಲೇ?” ಅಂತ ಪುನಃ ಬೈದು ಕಳುಸ್ತಾನ.
ಮತ್ತೆ, ನಿಮಿಷ ನಿಂತು;
ನಾನು: (ಸಂತಸದಿಂದ ಕುಣಿಯುತ್ತಾ ಓಡಿ ಬಂದು) “ಡಾಕ್ಟೆç! ಡಾಕ್ಟೆç!”
ಡಾಕ್ಟುç: (ಮುಗುಳ್ನಗೆಯಿಂದ) “ಏನೋ? ಏನ್ ಸಮಾಚಾರ? ಎಷ್ಟು ಖುಷಿ ಅದಿಯಲ್ಲ?”
ನಾನು: “ಪೇಡೆ ಕೊಡುಸ್ರಿ ಪೇಡೆ”
ಡಾಕ್ಟುç: (ಮುಖವರಳಿಸಿಕೊಂಡು) “ಯಾಕಲೇ ಯಾಕ? ಏನರ ಸಮಾಚಾರ, ಮೊದುಲೇಳು”
ನಾನು: “ಮದುಲು ಪೇಡೆ ಕೊಡುಸ್ರಿ; ಆಮ್ಯಾಕ ಹೇಳ್ತಿನಿ”
ಡಾಕ್ಟುç: ಹೌದಾ! ಹಿಡಿ. (ಕಿಸೆದಿಂದ ಐದುನೂರು ರೂಪಾಯಿ ತೆಗೆದುಕೊಟ್ಟು) ಆ ಕಡ್ಯಾ ನೀನ ಹೋದ್ರ ತಗಂಬಾ. ಈಗರ ಹೇಳು, ಅದೇನು ಸಮಾಚಾರ ಅಂತ.
ನಾನು: “ಅದ ಡಾಕ್ಟೆç; ನಿಮಗ ಗಂಡುಮಗು ಹುಟ್ಟಿತ್ತಲ್ಲ, ಅದು ಸತ್ತೋತಂತೆ!”
ಡಾಕ್ಟುç: (ರೋಷದಿಂದ) “ಲೇ ಎಂಥ ದಡ್ ಮಗಾರ ಸಿಕ್ಕಿಲೆ ನನಗ” ಅನ್ನೋ ಬದಲಿಗ್ಯಾ, ಆವೇಶದಾಗ: “ಲೇ ನಿಮ್ಮೌನ್ ಮಿಂಡ್ರಿಗುಟ್ಟಿದ್ ಸೂಳೆಮಗನ; ಎಂಥ ಹಲ್ಕಟ್ ದಡ್ ಸೂಳೆಮಗಾರ ಸಿಕ್ಕಿಲೆ ನನಗ” ಅಂತ ಓತಪ್ರೋತವಾಗಿ ಆಡ್ಬಿಟ್ಟ. ಅವ್ನ ಆ ಸಹಜ ಮಾತಿಂದ, ಕೆಲವ್ರಿಗ್ಯಾ ಗಲಿಬಿಲಿಯಾದ್ರೂ ಇಡೀ ಸಭೆ ಗೊಳ್ಳೆಂದು ನಕ್ಬಿಡ್ತು. ಹಳ್ಳಿಯಲ್ಲಿದೇನು ದೊಡ್‌ಮಾತು ಅನಿಸ್ಕೊಳ್ದಿದ್ರುನೂ ಪರಿಸ್ಥಿತಿ ಅರ್ಥೈಸಿಕೊಂಡ ನಾಗಪ್ಪ ಗುರುಗಳು (ಬಸು ರತ್ನಾಪೂರನ ತಂದೆಯೂ ಹೌದು), ಅಡ್ರಾಸಿ ಬಂದು ಮಗನಾಡಿದ ಅಚಾತುರ್ಯದ ಮಾತಿಗ್ಯಾ ಇಡೀ ಸಭೆಕ್ನಾ ಕೈಮುಗಿದು, ಕ್ಷಮೆ ಕೇಳಿ ಸುಖಾಂತ್ಯ ಆಡಿದ್ರು.
ಇಂಥದ್ದ ಘಟನೆ, ಎಂಟನೇ ತರಗತಿ ಕಲ್ಯಾಕ ದೂರದ ಸಂಬಂಧಿ ಮಾವನಿದ್ದ ತುರುವಿಹಾಳಿಗ್ಯಾ ಹೋದಾಗ ನಡೀತು. ಅಲ್ಲಿಗ್ಯಾ ದೂರದಿಂದ ಒಂದ್ ಕಂಪನಿ, ನಾಟಗ ಆಡಾಕ ಬಂದಿತ್ತು. “ನೋಡ್ಕೊಂಬಾ” ಅಂತ ಮಾವ ಕಳ್ಸಿದ; ಹ್ವಾದೆ. ಆಗಲ್ಯಾ ಸಕ್ರಿಗ್ಯಾ ಇರುವಿ ಮುಕ್ಕಿದಾಂಗ ಕಿಕ್ಕಿರಿದು ಜನ ಮುಕ್ರಿತ್ತು. ಹೋದ ಐದು ನಿಮಿಷದಾಗನ ನಾಟಗ ಶುರುವಾತು. “ಗಜಮುಖನೆ ಗಣಪತಿಯೆ ನಿನಗೆ ವಂದನೆ| ನಂಬಿದವರ ಪಾಲಿನ ಕಲ್ಪತರು ನೀನೆ||” ಪ್ರಾರ್ಥನೆಯೊಂದಿಗ್ಯಾ ಸಾಂಗವಾಗಿ ಸಾಗಿ, ಸಂಭಾಷಣೆಗಳ ಜುಗಲ್ಬಂದಿ ಜೋರು ನಡೀತು. ಮುಂದ ಒಂದ್ಯಾಡ್ ಗಳಿಗ್ಯಾಗ್ನ, ಕುಡುದು ಆಗಸದಾಗ ತೇಲಾಡ್ತಿದ್ದ ಪ್ರೇಕ್ಷಕನೊಬ್ಬ, ತುಂಬಿದ್ದ ಸಭೆಯಿಂದನ ಕೇಕೆ ಹಾಕಿದ. ನಾಯಕ ಪಾತ್ರಧಾರಿ ಇದ್ರಿಂದ ಕೆರಳಿ, “ಯಾ ಸೂಳೆಮಗಲೇ ಅವ” ಅಂದ್ಬಿಟ್ಟ. ಆ ಮಾತಿಗ್ಯಾ “ನಾ ನಿಮ್ಮವ್ವುನ ಗಂಡದಿನ್ಲೇ ಗಂಡ” ಅಂತ ಬಂದಷ್ಟ ವೇಗವಾಗಿನ ಇವ್ನೂ ಪ್ರತಿಕ್ರಿಯೆ ಕೊಟ್ಬಿಟ್ಟ. ಅದಕ್ಕವ, ಸೀದಾ ಮರ್ಮುಕ್ಕ ತಾಗುವಂಗ ಅನಬಾರದೊಂದು ಅವಾಚ್ಯ ಶಬ್ದ ಬಾಯ್ತಪ್ಪಿ ಅಂದು, ಕಿಡಿ ಹೊತ್ತಿಸ್ಬಿಟ್ಟ. ಇದ್ರಿಂದ, ಬಹುಬೇಗನ ಎಚ್ಚೆತ್ತುಕೊಂಡ ಮಾಲೀಕ, ಗಡಬಡಿಸಿ ಮೈಕಿನ ಬಳಿ ಓಡಿಬಂದು ಪ್ರೇಕ್ಷಕ ಮಾಪ್ರಭುಗಳನ್ನ ಕ್ಷಮೆ ಕೇಳಿಯೇ ಕೇಳಿದ. ಆ ವ್ಯಾಳೆಗಾಗಲೇ ಕೂಡಿದ ಮಂದೆಲ್ಲಾ ರೊಚ್ಚಿಗೆದ್ದು ವೇದಿಕಿಗ್ಯಾ ನುಗ್ಬಿಟ್ತು! ಕೈಗ್ಯಾ ಸಿಕ್ಕವ್ರನ್ನೆಲ್ಲಾ ಎಳುದೆಳುದು ಮನಸೋ ಇಚ್ಚಾö್ಯ ಥಳಿಸಿ, ಕುರುಕ್ಷೇತ್ರನ ನೆನಪಿಸ್ಬಿಟ್ರು!
ತಾಸು-ಅರ್ಧತಾಸಿನ್ಯಾಗ ನಾಟಗನೆಲ್ಲ ಗೂಟುಕ್ ಬಡುದು, ಬಂದೋರೆಲ್ಲ ಹ್ವಾದ್ರು. ಗದ್ಲ-ಗಲಾಟೆಲ್ಲಾ ತಣುದ್ಬಳಿಕ, ಹಗೂರಕ ನಾನೂ ಸ್ಟೇಜಿಗ್ಯಾ ಹೋದೆ. ಪರದೆ ಹಿಂದ-ಮುಂದ ದಿಕ್ಕುದಿಕ್ಕಿಗೂ ರೋಧಿಸ್ತಿರೋರ ಕಣ್ಣೀರ ಕಾಣುಸ್ತಿತ್ತು. ಅವ್ರುನ್ನೋಡಿ ಜೀವ ಚುರುಕ್ಕಂತು. ಹಂಗ, ಒಬ್ಬೊಬ್ರುನ ನೋಡ್ಕೋಂತ ಆವೇಶ್ದಾಗ ಅವಾಚ್ಯ ಪದನ ಆಡಿದವುನ್ನಾ ತಡಕಾಡಿದ್ಯಾ. ಹಿಂದಿನ ಪರದ ಹತ್ರ, ಮುರುದ ಕುರ್ಚಿ ಮ್ಯಾಲೆ, ಹರುದ ಅಂಗ್ಯಾಗ ತಲಿಬಾಗಿಸ್ಕೊಂಡು ಕುಂತಿದ್ದ. ನೋಡಿದ್ಕೂಡ್ಲೆನ ಕಣ್ತುಂಬಿ ಬಂದ್ವು. ಅವುನ್ನ ನೋಡ್ತಾ ಎಷ್ಟೋ ಹೊತ್ತು ಮಿಸುಕಾಡದ ಗರುಡುಗಂಬದಂಗ ಅಲ್ಲಾö್ಯ ನಿಂತ್ಯಾ. ಸ್ವಲ್ಪ ತಡದ ನಂತ್ರ, ನಿಧಾನ ಕಣ್ಣೆತ್ತಿ ಕುತೂಹಲದಿಂದ ನನ್ನನ್ನ ನೋಡ್ಯಾ ನೋಡಿದ. ಆಗ, ನನ್ನ ಕಣ್ಣಾಲಿಗಳು ಮತ್ತಷ್ಟು ತುಂಬಿ ತುಳುಕಾಡತೊಡಗಿದ್ವು. ಮೆಲ್ಲಗ ಕೈಸನ್ನೆ ಮಾಡಿ, ಹತ್ರ ಬಾ ಅನ್ನುವಂಗ ಕರದ. ಸಣ್ಣಗ ಹೆಜ್ಜಿ ಹಾಕಿ ನಡಿದ್ಯಾ. ಹತ್ರ ಹೋದಗೂಡ್ಯಾನ, ಎರಡೂ ಕೈನಿಂದ ನನ್ನನ್ನ ಬಿಗ್ಯಾಗಿ ತಬ್ಕೊಂಡು, ಅಬ್ಬಬ್ಬರಿಸಿ ಮುಗುಲು ಮುಟ್ಟುವಂಗ ಅಳತೊಡಗಿದ. ಅವ್ನು ಅದುವರಿಗ್ಯಾ ಅದುಮಿಟ್ಟುಕೊಂಡಿದ್ದ ಮಡುಗಟ್ಟಿದ ದುಃಖದ ಕಣ್ಣೀರ ಬಿಸಿ ನನ್ನೆದೆ ತಾಕಿ, ಒಡಲುರಿದು ನಾನೂ ಕಣ್ಣೀರಾದೆ. ಎಷ್ಟೋ ಹೊತ್ತು ನನ್ನನ್ನವ ಹೆಬ್ಬಾವಿನಂಗ ಗಟ್ಟಿಯಾಗಿ ಅಪ್ಕೊಂಡಿದ್ದ. ನಾನಂತೂ ಸ್ವಲ್ಪನು ಮಿಸುಕಾಡದ ಧ್ರುವಮಂಡಲದಂಗ ನಿಂತಿದ್ದಾö್ಯ. ಆ ಆಜಾನುಬಾಹುನಪ್ಪುಗೆ ಸಡ್ಲಾದ ನಂತ್ರ, ನಾಗರಹಾವಿನಂಗ ಅವ್ನ ಕೊಳ್ಳಿಗ್ಯಾ ಸುತಿಗೊಂಡಿದ್ದ ವಲ್ಲಿನ ತೆಗುದು ಮುಖ, ಮೂಗು, ಬಾಯಿಂದ ಸರ‍್ತಿದ್ದ ರಕ್ತನ ಒರಿಸಿದ್ಯಾ. ನನ್ ಅಂಗಿಗೆಲ್ಲ ರಕ್ತ ಮುಣುಗ್ಬಿಟ್ಟಿತ್ತು. ಅದನ್ನೋಡಿ ಅವ್ನಿಗ್ಯಾ ಬ್ಯಾಸ್ರನಿಸ್ತೇನೊ. ನನ್ ಕೈಯಾನ ಪವಾಡ ತಗೊಂಡು ಒರಸಾಕ ಪ್ರಯತ್ನಿಸಿದ. ಬ್ಯಾಡ, ಏನು ಆಗಲ್ಲಾಳಂತ ಬಿಡ್ಸಿದ್ಯಾ. ತುಟಿಯರಳ್ಸಿ ನನ್ ತಲಿಮ್ಯಾಗ ಕೈಯಾಡಿಸಿದ. ಆಗ, ಮತ್ತೆ ಅವ್ನ ಕಣ್ಣಾಗ ನೀರು ತುಂಬ್ತಿದ್ದಿದ್ದು ಸ್ಪಷ್ಟವಾಗಿನ ಕಾಣ್ತಿತ್ತು. ಆಮ್ಯಾಲ್ಯಾ, ಯಾರು? ಎತ್ತ? ಅಂತ ವಿಚಾರಿಸಿ, “ಹೊತ್ತಾಗೈತಿ ಹೋಗು” ಅಂತ ಒತ್ತಾಯಿಸಿ ಕಳಿಸ್ದಾಗ, ಮನಸಿಲ್ದ ಮನಸಿಂದ ಮನಿಗ್ಯಾ ಬಂದಿದ್ದಾö್ಯ.
ಅದೆಷ್ಟೋ ಜನ, ನೂರೋ ಇನ್ನೂರೋ ಕೊಟ್ಟು, ಅಭಿನಯಿಸಾಕ ಬಂದ ಪಾತ್ರುದರ‍್ನ ರ‍್ಕೊಂಡು ಬರಾಕ ನನ್ನನ್ನ ಕೊಟ್‌ಕಳಿಸಿದ್ದೂ ಉಂಟು. ಆಗ, ಪ್ರತಿಯಾಗಿ ನನಗವರು ಒಂದೋ ಎರಡೋ ರೂಪಾಯಿನ ಕೊಡಾಕ ರ‍್ತಿದ್ರು; ನಾನು ಮುಟ್ತರ‍್ಲಿಲ್ಲ. ಅವ್ರಿಗೇನಾರ ಕಾಡ್ತಿತ್ತೇನೊ! ಒಬ್ಬಿಬ್ರು, ನಾ ಬರೋದ್ರೊಳಗಾ ‘ಪಾರ್ಲೆ ಬಿಸ್ಕಿಟ್ ಪುಡುಕ’ ತಂದಿಟ್ಗೊಂಡು, ಬಲವಂತದಿಂದ ಕೊಟ್ಟು ಕಳುಸ್ತಿದ್ರು. ಒಮ್ಮೊಮ್ಮೆ ನಟಿಯರು, “ಯಾರವ ತೋರುಸ್ನಡಿ” ಅಂತ ಬಂದು, “ನಿನಗ ಅಕ್ತಂಗೇರರ ಅದಾರಿಲ್ಲಂತ” ಅವ್ರ ಜೊತಿ ಜಗಳ ಮಾಡಿಹೋದವ್ರೂ ಉಂಟು. ನನಗೇನು ಅವ್ರು ಬೈತರ‍್ಲಿಲ್ಲ. ಬಹುಶಃ ಸಣ್ಣವಿರಬೋದಂತ ಬಿಟ್ಟಿರ್‌ಬೋದೇನೊ! ಆದ್ರೂ ಆಟೊತ್ತಿಗ್ಯಾ ಅವ್ರಾö್ಯಕ ಕಳುಸ್ತಾರ, ಯಾಕ ಕರುಸ್ತಾರ ಅಂತ ತಿಳುವಳಿಕಿ ಬಂದಿತ್ತು. ಏಟೋ ಸಲ “ಅವ್ರು ಬೈತಾರ, ನಾ ಒಲ್ಲೆ”ಂತ ಹಠ ಮಾಡ್ತಿದ್ದಾö್ಯ. ಆದ್ರೂ ಬಿಡದಾ ರಮಿಸಿ ಕಳುಸ್ತಿದ್ರು. ರ‍್ಯಾಕ್ಕಳುಸೋರು ಊರಿನ ದೊಡ್ಮಂದಿನ ರ‍್ತಿತ್ತು. ಅನಿವರ‍್ಯ ಹೊಕ್ಕಿದ್ದಾö್ಯ. ಉಳುದರ‍್ನ ಕಳುಸ್ಬೇಕಂದ್ರ, ಅವ್ರಿಗ್ಯಾ ಹಣ ಕೊಡ್ಬೇಕಿತ್ತು. ಇಲ್ಲ ಅವ್ರ ವ್ಯವಾರ ಊರಾಗೇಳ್ತಾರಂತ ಭಯ ರ‍್ತಿತ್ತು. ಎಸ್ಟೋ ಮಂದಿ ಹಣ ಇಸಗೊಂಡೋರು ಅವ್ರಿಗ್ಯಾ ಮುಟ್ಟುಸ್ದಾ ಹೋದವ್ರೂ ಇದ್ರು. ನಾನಂತೂ ಇಂಥ ಅಪ್ರತಪ್ರಯೇನೂ ಮಾಡ್ತರ‍್ಲಿಲ್ಲ. ಹಿಂಗಾಗಿ, ನನ್ ಮ್ಯಾಲೆ ಅವ್ರಿಗೇನೋ ವಿಶೇಷ ನಂಬ್ಕಿ ಬೆಳಿದಿತ್ತು. ಹಂಗಾಗಿನ, ಇದೊಂದ ಅಲ್ಲ, ಏನಾರ ರ‍್ಲಿ ಮನಿಮಟ ಹುಡುಕ್ಕೊಂಬಂದು ನನಗ ಹೇಳ್ತಿದ್ರು.
ಹೆಚ್ಚಾನೆಚ್ಚು ಎಲ್ಲ ಕತ್ತಲ ವ್ಯವಹಾರನ ರ‍್ತಿತ್ತು. ಹಗಲಿಯಾಗಿದ್ರ ಇಂಥ ಸ್ಥಳ ಅಂತ ಹೇಳಿಹೋಗ್ಬೇಕಿತ್ತು. ನಾ ಹೋಗಿ ಹೇಳ್ಬರೋದು, ಕರಕೊಂಬರೋದು, ಕಳುಸೋದು ಹೆಂಗೋ ಮಾದರ ಕಂಟೆಪ್ಪಗ ಗೊತ್ತಾಗಿತ್ತು. ಅವ ಒಂದಿನ, ನಾ ಸಾಲಿಗೊಂಟಾಗ ಕರುದು, “ಲೇ ಹುಡುಗ, ಅದು ಪಾಪುದ್ಕೆಲಸ; ಅಂತವೆಲ್ಲ ಮಾಡಬ್ಯಾಡಪ್ಪ. ದೊಡ್ಮನಿತನದಾಗ ಹುಟ್ಟಿದಿ” ಅಂತ ತಿಳಿಹೇಳಿದ್ದ. ಅವಾಗಿಂದ ಯಾರೇಟ ಒತ್ತಾಯ ಮಾಡಿದ್ರುನೂ ಹೊಕ್ಕರ‍್ಲಿಲ್ಲ. ಉಳುದ ಕೆಲಸ ಏನ ಹೇಳಿದ್ರೂ ತಪ್ದ ಮಾಡ್ತಿದ್ದಾö್ಯ.
ಒಮ್ಮೆ ಊರಿಗ್ಯಾ ‘ಹೇಮರಡ್ಡಿ ಮಲ್ಲಮ್ಮ’ ಪೌರಾಣಿಕ ನಾಟಕ ಬಂದಿತ್ತು. ಸ್ಟೇಜ್ ಏನೂ ರ‍್ಲಿಲ್ಲ. ಹಂಗ ನೆಲದಮ್ಯಾಲೆನ ಅಭಿನಯಿಸ್ತಿದ್ರು. ಮಕ್ಳಾದ ನಾವೆಲ್ರೂ ಮುಂದನ ಕುಂತ್ಗೊಂಡಿದ್ವಿ. ಅದೆಷ್ಟು ಮುಂದಂದ್ರ, ಅತ್ತೆ-ನಾದಿನೇರು ಸೇರಿ ಮಲ್ಲಮ್ಮನ್ನ ನೂಕಿದ್ರ, ನೇರ ನಮ್ಮಾö್ಯಲೆನ ಬಂದು ಬೀಳ್ತಿದ್ಳು. ಅವ್ರೆಲ್ರುದೂ ಮನೋಜ್ಞ ಅಭಿನಯ. ಮಕ್ಳಾದ ನಮ್ಮೆಲ್ರು ಕಣ್ಗಳು ನೀರಾಡ್ತಿದ್ವು. ಹರ‍್ಯಾರಿಗೂ ಅಷ್ಟ. ಒಂದ ಸಮ ಮಲ್ಲಮ್ಮಗ ಕಿರುಕುಳ ಸಾಗ್ಯಾ ಇತ್ತು. ಉಡಲು, ಉಣ್ಣಲು ಕೊಡದ ದನ ಕಾಯಲು ಕಾಡಿಗಟ್ತಿದ್ರು. ಆದ್ರೂ ಅವಳು ಸ್ವಲ್ಪನೂ ಬ್ಯಾಸ್ರ ಮಾಡ್ಕೊಳ್ದ ಮಲ್ಲಯ್ಯನ ನೆನೆಯುತ್ತಾ ಸಂತಸದಿಂದ ನಗುನಗುತನ ದಿನಗÀಳಿತಿದ್ಳು. ಹಿಂಗಿರುವಾಗನ, ಅವ್ಳು ಮನಿಗ್ಯಾ ಬಂದಾಗ ಅತ್ತಿ-ನಾದಿನೇರು ಮತ್ತೆ ಪುಟ್ಟಿ ಜೋಳನ ಅವಳ ಮುಂದಿಟ್ಟು ಬೀಸಾಕ ಹೇಳೊ ದೃಶ್ಯ. ಅವರ ಕಿಟಿಕಿಟಿಯನ್ನ ಸಹಿಸದ ಹೊಳ್ಯಾಚಿ ಗುಂಡಪ್ಪ, ನೇರ ಎದ್ದವನ ಅವರತ್ತ ದಡದಡ ಧಾವಿಸಿ ಬಂದು, ಅತ್ತಿ-ನಾದ್ನರ‍್ನ ಹಿಡುದು ಥಳಸಾಕ ಶುರುಹಚಿಗೊಂಬಿಟ್ಟ! ಪಾತ್ರಧಾರಿಗಳಿಗ್ಯಾ ಏನು ನಡ್ಯಾಕತೈತೆಂತನ ತಿಳಿದಾ ಕಕ್ಕಾಬಿಕ್ಕಿಯಾಗಿ, ತಮ್ಮಿಂದೇನ ಅಚಾತುರ್ಯ ನಡೆದಿರಬೋದಂತ ಭಾವಿಸಿ, ಗದ್ಗದಿತರಾಗಿ: “ನಮ್ಮಿಂದೇನಾರ ತಪ್ಪಾಗಿದ್ರ ಕ್ಷಮಿಸ್ರಿ ಕ್ಷಮಿಸ್ರಿ” ಅಂತ ಒಂದಸಮ ಅವ್ರು ದೈನ್ಯತೆಯಿಂದ ಬೇಡ್ಕೊಳ್ಳತೊಡಗಿದ್ರು. ಆದರೂ ಬಿಡದಾ ಜಡಿತಿದ್ದ. “ಹಾಕು! ಹಾಕು!” ಅಂತ ಕೂಗುವ ಪ್ರೇಕ್ಷಕ ವರ್ಗ ಒಂದೆಡೆಯಾದ್ರ, “ಹೋ! ಹೋ” ಅಂತ ಚೀರುವ ಪಾತ್ರಧಾರಿಗಳು ಮತ್ತೊಂದೆಡೆಯಾಗಿ; ನಮಗೊಂದೂ ಅರ್ಥಾಗದ ಗಾರ‍್ಯಾಗಿ ಬಿಟ್ಬಾಯಿ ಬಿಟ್ಗೊಂಡು ನೋಡ್ತಿದ್ವಿ. ವಸ್ತುಸ್ಥಿತಿ ಅರ್ಥಮಾಡ್ಕೊಂಡ ಯಜಮಾನ ರಾಯನಗೌಡ್ರು, ಓಡಿಬಂದೋರ ಅವ್ನ್ ಕೆನ್ನೆಗ್ಯಾಡು ಬಿಗುದು, ಕರ್ಕೊಡು ಬಂದು, “ಲೇ ಹುಚ್ಸೂಳೆಮಗನ ಇದು ನಾಟಗ. ಹಿಂದ ಮಲ್ಲಮ್ಮಗ ಏಟು ಕಸ್ಟಕೊಟ್ಟರ; ಅದುನ್ನ ಆಕಿ ಸೈಸ್ಗೊಂಡು ಹೆಂಗ ದೇವ್ತಿಯಾದ್ಲಂತ ತರ‍್ಸಾಕತ್ಯರ‍್ಲೆ” ಅಂತ ತಿಳಿಹೇಳಿ, ಸಮಾಧಾನ ಮಾಡಿ; ಪಾತ್ರುದೋರಿಗ್ಯಾ “ನೀವು ನಾಟಗಾ ಶುರು ಮಾಡ್ರಿ” ಅಂತ ಹೇಳೋದ್ರೊಳಗ ಕುರಿ-ಕ್ವಾಣ ಬಿದ್ದೋಗಿದ್ವು!
ಜೀವನನ ಒಂದು ನಾಟಕ! ನಾವೆಲ್ಲಾ ಪಾತ್ರಧಾರಿಗಳು! ಇರುವಷ್ಟು ಹೊತ್ತು, ಅವನು ಕೊಟ್ಟ ಪಾತ್ರನ ನಿಷ್ಠೆಯಿಂದ ನಿರ್ವಹಿಸಿ ಹೋಗ್ಬೇಕಾಗಿರೋದು ನಮ್ ಪಾಲಿಗುಳಿದಿರೋ ಕರ್ತವ್ಯ. ನಮ್ಮೊಳಗಿರೋ ಮುಖವಾಡಗಳನ್ನ ಕಟ್ಟಿಕೊಡಾಕ್ನ ಈ ರಂಗಪ್ರಯೋಗ ಹುಟ್ಕೊಂಡಿತೇನೊ! ‘ಅವ ನಾಟಗಾ ಮಾಡ್ತಾನ’, ‘ನಾಟಕ್ಗೇಡಿ ಅದಾನ’, ‘ನಿನ್ನ ನಾಟಗ ನೋಡಿನಿ’, ‘ನಿನ್ ನಾಟಗ ನನ್ಮುಂದ ತೋರುಸ್ಬಾö್ಯಡ’, ‘ನಿನ್ ನಾಟಗ ನನ್ಮುಂದ ನಡೆಲ್ಲ’, ‘ನಿನ್ ನಾಟಗಾ ನಿಮ್ಮನ್ಯಾಗ ತೋರ್ಸು’, ‘ನಿಮ್ಮಂತೋರ ನಾಟಕ ಬಾಳ ನೋಡಿವಿ’, ‘ನಿನ್ ನಾಟಗಕ್ಕ(ತಾಳಕ್ಕ)ಇಲ್ಲಾö್ಯರೂ ಕುಣಿಯೋರಿಲ’್ಲ, ‘ಅವ್ನ ನಾಟಗ ನಮಗ್ಯಾರಿಗೂ ಗೊತ್ತಿಲ್ಲಂತ ತಿಳ್ಕೊಂಡಾನ’, ‘ನಿನ್ ನಾಟಗಾ ಬಯಲು(ಬಣ್ಣ)ಮಾಡ್ತೀನಿ’, ‘ಈ ನಾಟಕ್ಕ ಅದೆಷ್ಟ ದಿನ ಮಾಡ್ತಿ ಮಾಡು’ ಅಂದಾಗೆಲ್ಲಾ ನನಗ ಈ ನಾಟಕ ನೆನಪಕ್ಕೆöÊತಿ! ಅದ್ರಾಗ, ‘ಮಕ್ಕೊಂಡರ‍್ನ ಎಬ್ಬಿಸ್ಬೋದು, ಈ ಮಕ್ಕೊಂಡಂಗ ನಾಟಕ ಮಾಡ್ತಾರಲ್ಲಾ ಅವ್ರುನ್ನ ಎಬುಸಕಕ್ಕೆöÊತೇನು?’ ಅಂತ ಕೇಳಿದಾಗೆಲ್ಲಾ ನಾನಾನಮೂನೆ ನಾಟಗ ಪರಿಚಯ ಆಗದ ಹೋಗಲ್ಲ. ಈ ಡೋಕಾರಿ, ಡಮಾಣಿ ಪದಗಳೂ ಕೂಡ ಇದರ ಅವಳಿಗಳ!
ಗತಕಾಲದ ವ್ಯಕ್ತಿಗಳನ್ನೋ, ಘಟನೆಗಳನ್ನೋ, ಅಳಿದುಹೋದ ಸಿರಿಯನ್ನೋ, ಆಳಿದ ವೈಭವವನ್ನೋ ಕಟ್ಟಿಕೊಡಾಕ ಈ ನಾಟಕ ನಮಗ ಬೇಕಬೇಕನಿಸಿದ್ರೂ ಅಭಿನಯಿಸೋ ಪಾತ್ರಧಾರಿಗಳ ವೈರುಧ್ಯ ಸಮಾಜದಾಗ ಹಲವು ಗೊಂದಲಕ್ನೂ ಎಡೆಮಾಡಿಕೊಡಬೋದು. ರಾಮನ ಪಾತ್ರ ಮಾಡ್ತಿದ್ದ ನಮ್ಮೂರಿನ ಹನುಮಪ್ಪಗ ನಾಕ್ ಜನ ಹೆಂಡ್ತಿರು; ಕೃಷ್ಣನ ಪಾತ್ರ ಮಾಡ್ತಿದ್ದ ಶ್ರೀನಿವಾಸ, ಬ್ರಹ್ಮಚಾರಿ; ಕುಬೇರನ ಪಾತ್ರ ಮಾಡ್ತಿದ್ದ ಭಿಕಾರಿ ವೆಂಕಟಪ್ಪ; ಕರ್ಣನ ಪಾತ್ರ ಮಾಡ್ತಿದ್ದ ಕಳಕಯ್ಯ, ಹೋಗಿ ಬರೋರ ಮುಂದ ಬೀಡಿಗೂ ಕೈಚಾಚುತ್ತಿರೋದೆಲ್ಲಾ ವಿಪರ್ಯಾಸನ ಸರಿ! ಬದುಕ ಬ್ಯಾರೆ! ಪಾತ್ರನ ಬ್ಯಾರೆ! ಈ ಬಣ್ಣದ ಬದುಕಿನ ವೇಷದಾಗ ನಮ್ಮ ನಿಜ ನಾಟಕನ ಮರುತು ಹೋಗ್ಲೂಬಹುದು!
ಅಭಿನಯನ ಹಂಗ. ಪರಕಾಯ ಪ್ರವೇಶ ಆಗ್ಬಿಟ್ರ ಮುಗುದಹೋತು. ನಟಭಯಂಕರ ವಜ್ರಮುನಿಗ್ಯಾ ಅದೆಷ್ಟು ಹಲ್ಕಡಿದಿವೋ ಲೆಕ್ಕನ ಇಲ್ಲ. ಅವ್ನತ್ರ ಅವ್ನ ಮಕ್ಳ ಹೋಗಾಕ ಹೆರ‍್ತಿದ್ವಂದ್ರ ನಮ್ ಪಾಡು ಹೇಳಾದಬ್ಯಾಡ್ಬಿಡು. ಏಣಗಿ ಬಾಳಪ್ಪ ಬಸವಣ್ಣನ ಆಗೋಗಿಬಿಟ್ರು. ಆಯ್ಕೆ ಮಾಡ್ಕೊಳ್ತಿದ್ದ ಪಾತ್ರಗಳ ಪ್ರಭಾವನೋ ಏನೊ! ಬಸವಣ್ಣನ ಪಾತ್ರ ಮಾಡ್ತಿದ್ದೋರಿಗ್ಯಾ ಕಾಲು ಮುಗಿದದ್ದೂ ಉಂಟು! ರಾವಣ ಪಾತ್ರ ಮಾಡ್ತಿದ್ದೋರಿಗ್ಯಾ ಉಗಿದದ್ದೂ ಉಂಟು! ಜೀವತಿಂದು ಜೀರಿಗಿ ಅರಿತಿದ್ದ ನಕ್ಷತ್ರಿಕನನ್ನ ಎಳ್ಕೊಂಡ್ಬಂದು ಯಾಡ್ ಬಿಗಿದದ್ದೂ ಉಂಟು! ಹಂಗನ, ರಾಮ-ಬುದ್ಧ-ಬಸವ-ಗಾಂಧಿ-ಅಂಬೇಡ್ಕರ್ ಪಾತ್ರಗಳನ್ನ ಮಾಡಿ ತಮ್ಮೊಳಗಿನ ಕೆಡುಕುಗಳನ್ನು ಕಳಕೊಂಡೋರೂ ಉಂಟು! ತದ್ವಿರುದ್ಧ ನಡಕೊಂಡೋರೂ ಉಂಟು! ಈ ಉಂಟಿನ ನಂಟು ಏನುಂಟೋ ಹೇಗುಂಟೋ ಒಮ್ಮೊಮ್ಮೆ ಮೇಲಿನವುಗಾ ಲೆಕ್ಕ ತಪ್ಪೋದುಂಟು!
–ಜಗದೀಶ ಬ ಹಾದಿಮನಿ
