ಮಳೆಯ ಜೋಕಾಲಿಯಲಿ ಜೋಗದಲಿ…..: ಬಿ.ಕೆ.ಮೀನಾಕ್ಷಿ, ಮೈಸೂರು.

ಜೋಗ್ನಲ್ಲಿ ಫಾಗ್ ನೋಡಬೇಕೆಂದು ಆಸೆಯಾಗಿ, ಆ ಆಸೆಯನ್ನು ದಮನಿಸಲಾಗದೆ ಮೈಸೂರಿನಿಂದ ಹೊರಟೇ ಬಿಟ್ಟೆವು. ತಾಳಗುಪ್ಪ ರೈಲು ಹತ್ತಿ ಹೊರಟಿದ್ದು. ರಾತ್ರಿ ಹೊತ್ತು, ಸ್ಲೀಪರ್ ಕೋಚು. ಬೇಜಾರು. ಹೊರಗಡೇದೇನೂ ನೋಡೋದಕ್ಕಾಗಲ್ಲ, ಕಣ್ತುಂಬಿಕೊಳ್ಳೋಕಾಗಲ್ಲ! ಅಲ್ಲಾರೀ ನನಗೇನನಿಸುತ್ತದೆ ಅಂದ್ರೆ ಈ ಜನ, ಕಿಟಕಿಯಿಂದ ಆಚೆ ನೋಡುತ್ತಾ ಕೂರದೆ ಅದು ಹೇಗಾದರೂ ನೆಮ್ಮದಿಯಾಗಿ ನಿದ್ರೆ ಮಾಡುತ್ತಾರೆ ಅಂತ?! ನಿಮಗೂ ಈ ತರ ಯೋಚನೆ ಬರುತ್ತದೆ ತಾನೇ? ಹ್ಞಾಂ! ಸರಿಯಾಗಿ ಯೋಚಿಸಿದ್ದೀರಿ. ಸುತ್ತ ಇರೋರೆಲ್ಲ ಗೊರಕೆ ಆಸಾಮಿಗಳೇ. ನಾನಿನ್ನೇನು ಮಾಡಲಿ? ನಾನೂ ಹಾಗೇ ಮುದುಡಿಕೊಂಡೆ . ಆದರೆ ನಿದ್ರಿಸಲಿಲ್ಲ. ಕೂರೋಣವೆಂದರೆ, ಮೇಲಿನ ಸೀಟು ಹಾಸಿಕೊಂಡು ಪವಡಿಸಿದವರ ಅಗತ್ಯಕ್ಕಾಗಿ ತಲೆ ತಗ್ಗಿಸಿ, ಬೆನ್ನು ಗೂನಿಸಿ ಕುಳಿತುಕೊಳ್ಳಬೇಕು. ಹೇಗಾದರೂ ಮಾಡಿ ಕಿಟಕಿ ತೆಗೆಯೋಣವೆಂದರೆ ಹೋ ಅನ್ನುತ್ತಾರೆ ಚಳಿ ಅಂತ. ನಾನು ಬೆನ್ನಿನಲ್ಲಿ ಛಳುಕು ಬರಿಸಿಕೊಂಡು ಕೂರುವುದೇಕೆಂದು ಮುದುಡಿಕೊಂಡಿದ್ದು ಸರಿ ತಾನೇ?

ಶಿವಮೊಗ್ಗ ದಾಟಿದೆವು, ಸ್ವಲ್ಪ ಬೆಳಕು ಮೂಡುವುದರಲ್ಲಿತ್ತು. ಸದ್ಯ ಎಂದುಕೊಂಡೆ. ಆದರೆ ಸೂರ್ಯನನ್ನು ಹುಡುಕುವುದೇ ಫಜೀತಿಯ ಕೆಲಸ. ಆ ಪ್ರಯತ್ನ ಕೈಬಿಡುವಷ್ಟರಲ್ಲಿ ಮಳೆ ಸುರಿಯತೊಡಗಿತು. ಹಾ! ಸದ್ಯ ಮಳೆ ಬಂತು. ಬೆಳಗಿನ ಝಾವ! ಸಣ್ಣಗೆ ಬೆಳಕು. ಕಾಡೇನು ಅಂತಹ ಒತ್ತಾಗಿರಲಿಲ್ಲ! ಆದರೆ ಕಾಡಿನಲ್ಲಿ ಮಳೆ ಬೀಳುತ್ತಿದೆಯೆಂದು ಖುಷಿಯಾಗಿ ತಲೆ ತಗ್ಗಿಸಿಯೇ ನೋಡತೊಡಗಿದೆ. ಮೇಲಿನವರು ಎದ್ದು ಅಲ್ಲೇ ಕುಳಿತಿದ್ದರು. ನನಗೆ ಇನ್ನು ಸುಮ್ಮನಿರಲಾಗಲಿಲ್ಲ, ಬನ್ನಿ ಇಲ್ಲಿ ಕೆಳಗೆ ಕೂರಿ. ಸಾಗರವಾ?’ ಅಂದೆ.ಇಲ್ಲ ಬಿಡಿ, ನಾನಿಲ್ಲೇ ಕರ್ತೀನಿ’ ಎಂದು ನನ್ನಾಸೆಗೆ ತಣ್ಣೀರೆರಚಿ ನೆಮ್ಮದಿಯಾಗಿ ಕುಳಿತುಬಿಟ್ಟರು. ನಾನು ಮನಸ್ಸಿನಲ್ಲೇ ಗೊಣಗಿಕೊಂಡು ಅಥವಾ ಬೈದುಕೊಂಡೇ ಮತ್ತೆ ಕತ್ತು ನೋಯಿಸಿಕೊಳ್ಳುತ್ತಾ ಬಗ್ಗಿ ಕುಳಿತು ದುರಾಸೆಯಿಂದಲೇ ಮಳೆಯನ್ನು ನೋಡುತ್ತಾ ಕುಳಿತೆ. ಅಂತೂ ಇಂತೂ ಸಾಗರ ಬಂತು. ಮನುಷ್ಯ ಆಗ ಇಳಿದು ಹೋದರು. ಇನ್ನೇನು ನಾನೂ ಇಳಿಯುವುದೇ!

ಅಯ್ಯೋ, ಮಳೇನ ಕಿಟಕಿಯಿಂದೇನು ನೋಡಿದ್ದು……ಛತ್ರಿ ಬಿಚ್ಚಿಯೇ ರೈಲಿನಿಂದ ಇಳಿದದ್ದು! ಏನ್ ಪರ್ವಾಗಿಲ್ಲ ಅಂತ ಛತ್ರಿ ಮಡಿಸೋಣ ಅನ್ನುಷ್ಟರಲ್ಲಿ ಪರ್ವಾಗಿದೆ ಅಂತ ಧೋ ಅಂತ ಸುರಿಯಲು ಶುರುವಿಟ್ಟುಕೊಂಡಿತು. ಸರಿ, ಜೋಗ್ ನೋಡಬೇಕು ಅಂದರೆ, ಮಳೆಯಲ್ಲಿ ನೆನೆಯದಿರಲಾದೀತೇ? ಅಂತೂ ನಮಗಾಗಿ ತಯಾರಾಗಿ ನಿಂತಿದ್ದ ವಾಹನವನ್ನೇರಿ ಹೋಟೆಲ್ಗೆ ಹೋಗಿ, ಫ್ರೆಷ್ ಅಪ್ಆಗಿ, ಸಿಂಗರಿಸಿಕೊಂಡು ಎಲ್ಲರೂ ಆಚೆ ಬಂದರು. ಹೋಟೆಲ್ಗೆ ಹೋಗಿ ಬಿಸಿಬಿಸಿ ಉಪಾಹಾರ ಸೇವಿಸಿ ಮತ್ತೆ ಬಸ್ಸು ಹತ್ತಿಕೊಂಡೆವು. ಏನು ಕತೆ ಹೇಳಲಿ ಮಳೆಯದು! ಬಲೇ ಕುಶಾಲು ಅದರದ್ದು. ಬಸ್ಸೇರಿ ಕುಳಿತಾಗ ನಿಲ್ಲುತ್ತದೆ, ಇನ್ನೇನು ಇಳಿಯುತ್ತೇವೆಂದಾಗ ಸ್ವಾಗತಿಸಲು ತಯಾರಾಗಿ ಬಾಗಿಲಲ್ಲೇ ಕಾಯುತ್ತದೆ. ನಾವು ನಮ್ಮ ಆಪ್ತಮಿತ್ರನನ್ನು, ಅವರಿವರ ಮೂತಿಗೆ ತಿವಿಯುತ್ತಾ ಮೈಗೆ ತಗುಲಿಸುತ್ತಾ ಚುಚ್ಚುತ್ತಾ, ಜೊತೆಯಲ್ಲಿ ಅರಳಿಸಿಕೊಂಡೇ ಇಳಿಯಬೇಕು. ಅಂತೂ ಇಳಿದೆವು. ವರದಹಳ್ಳಿ ಮೊದಲ ಭೇಟಿ. ಶ್ರೀಧರಸ್ವಾಮೀಜಿ ಆಶ್ರಮ. ಹೋ……ದೇವರೇ! ಅದು ಮಳೆನಾ!!?? ಆಕಾಶವೇ ನೀರಾಗಿ ಹರಿದಂತೆ ದಬದಬನೆಂದು ಸುರಿಯತೊಡಗಿತು. ಅದರಲ್ಲೇ ನಡೆದೆವು. ನೆನೆಯುವುದಕ್ಕೆ ಇದೇ ಸರಿಯಾದ ಸಮಯ ಎಂದು, ನೆನೆದೂ ಬಿಟ್ಟೆ. ನೆನೆಯಬೇಕೆಂಬ ಆಸೆಗೆ ಕೇವಲ ಒಂದು ನಿಮಿಷವೂ ಛತ್ರಿಯನ್ನು ತಲೆ ಮೇಲಿಂದ ಅಲುಗಿಸಲಿಲ್ಲವೇನೋ ತೋಯಸಿಬಿಟ್ಟಿತು. ಮಳೆಯಲ್ಲಿ ನಾನೂ ನೆನೆದು, ನೆನೆದು ಕಳೆಕಳೆಯಾಗಿ ನಗುತ್ತಾ ನಿಂತ ಹಸಿರ ಸಿರಿಯನ್ನು ಕಣ್ತುಂಬಿಕೊಳ್ಳುತ್ತಾ ಹೆಜ್ಜೆ ಹಾಕಿದೆ.

ಅಲ್ಲಿಂದ ಅಘೋರೇಶ್ವರ ದೇವಸ್ಥಾನಕ್ಕೆ ಹೊರಟೆವು. ಈಶ್ವರನ ಐದು ಮುಖಗಳಲ್ಲಿ ಒಂದು ಅಘೊರೇಶ್ವರ. ದೇವಾಲಯ ಬೃಹತ್ತಾಗಿದೆ. ಆದರೆ ಸ್ವಲ್ಪವೂ ನಿರ್ವಹಣೆ ಕಂಡು ಬರಲಿಲ್ಲ. ಈ ದೇವಾಲಯಕ್ಕೆ ಭವ್ಯವಾದ ಇತಿಹಾಸ ಐತಿಹ್ಯವಿದ್ದರೂ, ಅಲ್ಲಿಯ ಅರ್ಚಕರು ನಾವು ಕೇಳಿದರೂ ಏನನ್ನು ಹೇಳಲೂ ತಯಾರಿರಲಿಲ್ಲ. ಸುಮ್ಮನೆ ಬಂದೆವು. ಆದರೆ ಇಲ್ಲಿ ಜಾಗ್ರತೆಯಿಂದ, ಈ ಮಳೆಗಾಲದಲ್ಲಿ ಮೆಟ್ಟಿಲು ಹತ್ತಬೇಕು. ಸಿಕ್ಕಾಪಟ್ಟೆ ಪಾಚಿ ಕಟ್ಟಿರುವುದರಿಂದ ನಮ್ಮಲ್ಲೇ ಇಬ್ಬರು ಜಾರಿ ಬಿದ್ದರು. ದೇವಾಲಯದ ಸುತ್ತಲೂ ಪಾಚಿಯೇ. ಬಹಳ ಹುಶಾರಾಗಿ ಹೆಜ್ಜೆಯೂರಬೇಕು. ಈ ದೇವಸ್ಥಾನದಲ್ಲಿ ಅಘೋರನ ರೂಪ ಬಹಳ ಭವ್ಯವಾದದ್ದು, ಕ್ರಮೇಣ ಮೂರ್ತಿಯನ್ನು ಭಿನ್ನಗೊಳಿಸಲಾಯಿತು ಎಂದು ಓದಿದ್ದ ಕೇಳಿದ್ದ ನೆನಪು. ಆದರೆ ಅಂತಹ ಯಾವುದೂ ನಮಗೆ ನೋಡಲು ಸಿಗದೆ, ಆಘೋರನ ಬೃಹತ್ತತೆಯ ಬದಲಿಗೆ, ಶಿವಲಿಂಗ ಪೂಜೆಗೊಳ್ಳುವುದನ್ನು ಕಂಡೆವು.(ಭಿನ್ನಗೊಂಡದ್ದನ್ನು ಪೂಜಿಸುವುದಿಲ್ಲ. ಆದರೆ ಅದರ ಬಗ್ಗೆ ವಿವರಗಳೇನೂ ಸಿಗಲಿಲ್ಲ) ಬಹಳ ಸುಂದರ ಪರಿಸರದಲ್ಲಿ ಈ ದೇವಾಲಯವಿದ್ದು ದೇವಾಲಯದ ಹೊರಗೋಡೆಯಲ್ಲಿ ಸುತ್ತಲೂ ಕೆತ್ತನೆಗಳಿವೆ. ಆದರೆ ಅವು ನಮಗೆ ಕುಶಲತೆಯಿಂದ ಗೋಚರಿಸುವುದಿಲ್ಲ, ಸ್ಪರ್ಶದಲ್ಲಿ ನುಣುಪಿಲ್ಲ.

ಮತ್ತೆ ಮಳೆಯಾಗಿದೆ ಅಂತ ಹಾಡಿಕೊಂಡೇ ವಾಹನ ಹತ್ತಿಕೊಂಡೆವು. ಸಿಗಂದೂರು ನಮ್ಮ ಗುರಿ. ಉದ್ದಕ್ಕೂ ಧೋ ಅನ್ನುವ ಮಳೆ. ಅದೇನ್ರಪ್ಪಾ ಇಲ್ಲಿ ಆಕಾಶವೇ ಭೂಮಿಯ ಮೇಲೆ ಮುಗಿಬಿದ್ದು ಮುತ್ತುಗಳ ರಾಶಿಯನ್ನೇ ಭೂಮಿಗೆ ನೀಡುತ್ತಿದೆ ಅನಿಸಿತು. ಶಿವಮೊಗ್ಗ ಜಿಲ್ಲೆಯಲ್ಲಿ ಭೂಮಿತಾಯಿ ಈ ಆವೇಗದ ಪ್ರೇಮವನ್ನು ಹೇಗೆ ತಡೆದುಕೊಳ್ಳುವಳೋ ಅನಿಸಿತು. ನಮ್ಮದೇ ಕಡೇ ಟ್ರಿಪ್ ಅಂತೆ ಲಾಂಜ್ನಲ್ಲಿ. ಇನ್ನು ಮುಂದೆ ನಮ್ಮ ಮೋದಿ ಬಂದು ಸೇತುವೆಯನ್ನು ಉದ್ಘಾಟಿಸುತ್ತಾರೆ. ಇನ್ನೇನಿದ್ದರೂ ಸೇತುವೆಯ ಮೇಲೇ ಓಡಾಟ ಎಂದು ಜನ ಮತ್ತು ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದರು. ಏನು ಭವ್ಯವಾಗಿದೆ ಸೇತುವೆ ಅಂದ್ರೆ…..ಅದನ್ನು ನೋಡಿಯೇ ತಿಳಿಯಬೇಕು! ನೀರಿನ ರಾಶಿ! ಸಾಗರದಂತಿದೆ. ಶಾಂತವಾದ ಅಲೆಗಳು. ಕಣ್ಣು ಹರಿದಷ್ಟು ದೂರಕ್ಕೂ ಶರಾವತಿ ಹಾಸಿಕೊಂಡಿದ್ದಾಳೆ. ಆಹಾ! ಅನಿಸಿತು. ಸುಮ್ಮನೆ ಆ ನೀರಿನ ಮೇಲೆ ತೇಲುತ್ತಲೇ ಇರೋಣ ಅಂದುಕೊಳ್ಳುವಷ್ಟರಲ್ಲಿ ಲಾಂಜ್ ಇನ್ನೊಂದು ತೀರ ಸೇರಿಕೊಂಡಿತ್ತು. ವಾಪಸಾಗುವಾಗ ಮತ್ತೆ ಮಳೆ. ಇಲ್ಲಿಯ ಮಳೆಗಾಲದ ಮಳೆ ನವಯೌವ್ವನಿಗರ ಹುಚ್ಚು ಪ್ರೀತಿಯಂತೆ! ಯಾವಾಗೆಂದರೆ ಆಗ ಸುರಿದುಬಿಡುತ್ತೇನೆ, ಭೂಮಿಯನ್ನು ತಬ್ಬುತ್ತೇನೆ ಅನ್ನುತ್ತದೆ. ಅದೂ ನೇವರಿಕೆಯಲ್ಲ! ಗಾಢತೆ! ಹುಚ್ಚು ಪ್ರವಾಹದಂತೆ. ನಮಗಂತೂ ಈ ಆಕಾಶ-ವಸುಂಧರಾ ಪ್ರೇಮ ಪ್ರಸಂಗದಿಂದ ನಲಿವುಂಟಾಯಿತು. ವರ್ಷಧಾರೆಯಲ್ಲಿ ವರ್ಷವೆಲ್ಲಾ ನೆನೆಯುತಿರೋಣ ಅನಿಸುವಷ್ಟು ಹಿತವೆನಿಸುತ್ತಿದೆ ಮನಸಿಗೆ. ಆಮೇಲೆ ನೆಗಡಿ ಕೆಮ್ಮು ಬಂದು ಕಂಬಳಿ ಹೊದ್ದು ಮಲಗಿ ಅನ್ನಬೇಡಿ. ಹಾಗನಿಸುತ್ತದೆ ಅಂದೆನಷ್ಟೆ.

ಮುಂದಕ್ಕೆ ದ್ವಿಮುಖ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ. ಮೈಸೂರಿನ ಅರಸರು ಈ ದೇವಾಲಯವನ್ನು ಸ್ಥಾಪಿಸಿದರಂತೆ. ಜೋಗದ ಪ್ರಾಜೆಕ್ಟ್ನ್ನು ಪ್ರಾರಂಭ ಮಾಡುವುದಕ್ಕೆ, ಮಲೆನಾಡಿನ ಮಳೆ, ಎತ್ತರದಿಂದ ಬೀಳುವ ನೀರು, ಗುಡ್ಡವೇನಾದರೂ ಕುಸಿದು ಪ್ರಾಣ ಹಾನಿಯಾದರೆ ಎಂಬ ಗೊಂದಲದಲ್ಲಿ ಮಹಾರಾಜರಿರುವಾಗ, ತಾಯಿ ಕನಸಿನಲ್ಲಿ ಕಾಣಿಸಿಕೊಂಡು ನಾನಿದ್ದೇನೆ ಕೆಲಸವನ್ನು ಪ್ರಾರಂಭಿಸು ಎಂದು ಅಭಯ ನೀಡಿದಳಂತೆ. ಅಲ್ಲಿಂದ ಎಂಟು ವರ್ಷಗಳಲ್ಲಿ ಈ ಪ್ರಾಜೆಕ್ಟ್ ಮುಗಿಯಿತಂತೆ. ಹಾಗಾಗಿ ಈ ದೇವಾಲಯದ ಏಕಶಿಲಾ ವಿಗ್ರಹವನ್ನು ಮಹಾರಾಜರ ಆಸ್ಥಾನ ಶಿಲ್ಪಿಗಳಾದ ಸಿದ್ದಲಿಂಗಸ್ವಾಮಿಗಳು ನಿರ್ಮಿಸಿದರಂತೆ.

ಈ ವಿಗ್ರಹ ಅದೆಷ್ಟು ಮುದ್ದಾಗಿದೆ ಎಂದರೆ ಪ್ರವೇಶದ್ವಾರದಿಂದ ಎದುರಾಗುವ ಒಂದು ಮುಖ ಸೌಮ್ಯವಾಗಿ ನಗುತ್ತಿದ್ದಾಳೆ ಅಂತ ಭಾಸವಾಗುತ್ತದೆ. ಪ್ರದಕ್ಷಿಣ ಪಥದಲ್ಲಿ ನಡೆದು ಹಿಂಬದಿಗೆ ಬಂದಾಗ ಮಹಿಷಾಸುರ ಮರ್ಧಿನಿ ಇದ್ದಾಳೆ. ಇವಳದು ಗಂಭೀರ ಕಳೆ. ಇಲ್ಲಿ ಈ ಅಮ್ಮನನ್ನು ದರ್ಶಿಸಿದರೆ ರಾಹು-ಕೇತು ದೋಷ ನಿವಾರಣೆಯಾಗುವುದೆಂಬ ಪ್ರತೀತಿಯಿದೆ. ಇಲ್ಲಿ ಪೂಜೆ ಮಾಡಿಸುತ್ತಿದ್ದಾಗ ನನಗೆ ಅಮ್ಮನ ನಗುಮುಖವೇ ಭಾಸವಾಯಿತು. ನಿಮಗೂ ಹಾಗೇ ಅನಿಸಿತೇ? ಎಂದು ಪಕ್ಕದವರನ್ನು ಕೇಳಿದೆ. ಅವರು ಮುಖ ಮುಖ ನೋಡಿದರು. ಕೇಳಿದ್ದಕ್ಕೆ ನನಗೇ ಸಂಕೋಚವಾಗಿ ಸುಮ್ಮನಾದೆ.
ಇಡೀಪ್ರಪಂಚದಲ್ಲಿ ಇಂತಹ ವಿಗ್ರಹ ಇನ್ನೆಲ್ಲೂ ಇಲ್ಲವಂತೆ. ರಾಜಾಸ್ಥಾನದ ಮಹಾರಾಜರ ಬೀಗರ ಮನೆಯಲ್ಲಿ ಒಂದು ಇದೆಯಂತೆ. ಈ ದೇವಸ್ಥಾನ ದರ್ಶಿಸಿದ್ದು ಬಹಳ ಸಂತೋಷ ನೀಡಿತು.

ಇಲ್ಲಂತೂ ಮಳೆ ಅಂದ್ರೆ ಹೇಗೆ ಗೊತ್ತಾ? ಆಕಾಶದಿಂದ ಹಂಡೆಗಟ್ಟಲೆ ನೀರು ಒಂದೇಸಮನೆ ಸುರಿಯುತ್ತಿರುವವರಾರು ಎಂದು ಕತ್ತೆತ್ತಿ ಆಕಾಶ ನೋಡೋಣವೆಂದರೆ ಸಾಧ್ಯವೇ? ಸಾಧುವೇ? ನೀವೇ ಹೇಳಿ? ನಾನಂತೂ ಮಳೆ ನೋಡಿಯೇ ಕೃತಕೃತ್ಯಳಾಗಿಬಿಟ್ಟೆ. ಸೂರ್ಯನಂತೂ ಕಂಬಿ ಕಿತ್ತಿದ್ದ. ಮಳೆಗೆ ಹೆದರಿದನೋ, ಮೋಡಕ್ಕೆ ಹೆದರಿದನೋ ಗೊತ್ತಾಗಲಿಲ್ಲ. ಕೇಳೋಣವೆಂದರೆ ಅದೆಲ್ಲಿ ಬಚ್ಚಿಟ್ಟುಕೊಂಡಿದ್ದನೋ ಪತ್ತೆಯೇ ಇಲ್ಲ! ಅಲ್ಲಿಂದ ಬಳೆ ಪದ್ಮಾವತಿ ದೇವಸ್ಥಾನಕ್ಕೆ ಹೋದೆವಾ? ಮಳೆ ನಮ್ಮನ್ನು ಬೆಂಬಿಡದೆ ಹಿಂಬಾಲಿಸಿತು. ಬೇಡ ಮಾರಾಯಾ….ಒದ್ದೆಮುದ್ದೆಯಾಗಿ ಹೋಗಿದ್ದೇನೆ. ಸ್ವಲ್ಪ ಹೊತ್ತು ನೀನು ರೆಸ್ಟ್ ಮಾಡು ಅಂದರೆ ಕೇಳಲೇ ಇಲ್ಲ. ಊಹ್ಞೂಂ! ಬಂದೇ ಬರುತ್ತೇನೆ, ನಮ್ಮೂರಿಗೆ ಬಂದ ಮೇಲೆ ನಿಮ್ಮನ್ನು ತಣ್ಣಗೆ ಇಡಬೇಕಾದ್ದು ನನ್ನ ಜವಾಬ್ದಾರಿ ಎಂದುಕೊಂಡು ಎಂದಿನಂತೆ ನೆನೆಸತೊಡಗಿತು.

ಪದ್ಮಾವತಿಯನ್ನು ಆ ಮಳೆಯಲ್ಲೇ ದರ್ಶಿಸಿದೆವು. ಅದ್ಭುತವಾದ ದೇವಸ್ಥಾನ. ಹನ್ನೆರಡು ಅಡಿ ಎತ್ತರದ ಹುತ್ತಕ್ಕೆ ಕಟ್ಟೆ ಕಟ್ಟಿ ನಾಲ್ಕೂ ದಿಕ್ಕಿಗೂ ಅಮ್ಮನವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಮುಕ್ತಿನಾಗನ ವಿಗ್ರಹವಂತೂ ಭಕ್ತಿಯ ಪ್ರತೀಕವಾಗಿದೆ. ಕಾಡಿನ ಮಧ್ಯೆ ನೆಲೆಸಿರುವ ಅಮ್ಮನನ್ನು, ಅವಳ ಮಹಿಮೆಯನ್ನು ಅರಿಯುವುದು ಬಹಳವಿದೆ. ಬಳೆಯೇ ಇಲ್ಲಿಯ ಮುಖ್ಯ ಹರಕೆ. ಮೂಟೆಗಟ್ಟಲೆ ಬಳೆಗಳು ಇಲ್ಲಿ ಹರಕೆ ರೂಪದಲ್ಲಿವೆ. ಹರಕೆ ಮಾಡಿಕೊಂಡರೆ ಅದು ನೆರವೇರುತ್ತದೆ ಎಂಬ ನಂಬಿಕೆ ಜನಗಳಲ್ಲಿ. ಅದೇನಾದರೂ ಆಗಲಿ, ಇದೊಂದು ಸುಂದರ ದೇವಾಲಯ. ಪದ್ಮಾವತಿ ಕಾಡಿನ ನಿವಾಸಿಯಾಗಿದ್ದಾಳೆ.

ಇಲ್ಲಿಂದ ನಾವು ಜೋಗ್ಗೆ ಪ್ರಯಾಣ ಬೆಳೆಸಿದೆವು. ಆಗಲೇ ಆರುಗಂಟೆಯಾಗುತ್ತಾ ಬಂದಿತ್ತು. ಜಲಪಾತವನ್ನು ನೋಡಲು ಸಾಧ್ಯವಾಗುವುದಿಲ್ಲ ಎಂಬ ಅನುಮಾನ ನನ್ನನ್ನು ಕಾಡುತ್ತಿತ್ತು. ಅದೇ ಸಮಯಕ್ಕೆ ಸರಿಯಾಗಿ ನನಗೊಂದು ಹಿಂದಿನ ಘಟನೆ ನೆನಪಾಯ್ತು. ನಾವು ಶಾಲಾ ಮಕ್ಕಳನ್ನು ಕರೆದುಕೊಂಡು ಪ್ರವಾಸಕ್ಕೆ ಹೋಗಿದ್ದಾಗ, ಮಂಗಳೂರಿನಲ್ಲಿ ಸಮುದ್ರದಲ್ಲೇ ಬಹಳ ಸಮಯವನ್ನು ಕಳೆದುಬಿಟ್ಟು, ಬೇಲೂರಿಗೆ ಬಂದಾಗ , ಬೇಲೂರಿನ ದೇವಸ್ಥಾನದ ಮುಚ್ಚಿದ ದ್ವಾರವನ್ನೇ ನಿರಾಶೆಯಿಂದ ದರ್ಶಿಸಿ ಮನಸಿನಲ್ಲೇ ಬೇಸರಿಸಿಕೊಂಡಿದ್ದೆ. ಇಲ್ಲೂ ಇನ್ನೇನು ಮಂಜು ಕವಿದು ಏನೂ ನೋಡಲು ಸಿಗುವುದಿಲ್ಲ ಎಂಬ ನಿರಾಶಾಭಾವ ನನ್ನನ್ನಾವರಿಸಿತ್ತು. ಆದರೆ ನನ್ನ ಅನಿಸಿಕೆ ಸುಳ್ಳಾಗಿತ್ತು. ಮಳೆಯಂತೂ ಬಿಟ್ಟೂಬಿಡದೆ ಧಾರೆಯಾಗಿತ್ತು. ಆದರೆ ರಾಜಾ ರಾಣೀ ರೋರರ್ ರಾಕೆಟ್ಟುಗಳು ನಿಚ್ಚಳವಾಗಿದ್ದವು. ಸುತ್ತಲಿನ ಗಿರಿಶಿಖರಗಳನ್ನು ತನ್ನ ಅವಗುಂಟನದಲ್ಲಿ ಆವರಿಸಿರುವ ಮಂಜಿನ, ಮೋಡಗಳ ತೇಲಾಟ ಪ್ರಕೃತಿಯ ಸೌಂದರ್ಯಕ್ಕೆ ಕಳಶಪ್ರಾಯವಾಗಿದ್ದರೆ, ಈ ನಾಲ್ಕೂ ಧಾರೆಗಳ ಸ್ವಚ್ಛಂದವಾದ ಒಂದೇಸಮವಾದ ಝೋ……ಎನ್ನುವ ಕಿವಿಗಡಚಿಕ್ಕುವ ಶಬ್ದ ನೋಡುಗರ ಕಲರವ, ಫೋಟೋಗಳಿಗಾಗಿ ನೀಡುತ್ತಿರುವ ಫೋಸುಗಳೂ ಸೇರಿ ವಾತಾವರಣ ಆಹ್ಲಾದವೆನಿಸತೊಡಗಿ, ಸುರಿವ ಮಳೆಯಿಂದ ಅದು ಇನ್ನೂ ಹಾಯೆನಿಸತೊಡಗಿ, ಹೀಗೇ ಮಳೆಯಲ್ಲೇ ನೆನೆಯುತ್ತಲೇ ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳೋಣವೆಂದು ಹಠ ಹಿಡಿದು ನಿಲ್ಲುವ ಹಾಗಾಯಿತು.

ಅಂತೂ ಇಡೀದಿನ ಮಳೆಯೂ ನಮ್ಮ ಜೊತೆಗೆ ಹಠ ಹಿಡಿದು ಪ್ರವಾಸಕ್ಕೆ ಜೊತೆಯಾಗಿ ನಮ್ಮನ್ನೆಲ್ಲ ತಣ್ಣಗಿಡುವಲ್ಲಿ, ರೋಮಾಂಚನಗೊಳಿಸುವಲ್ಲಿ ಯಶಸ್ವಿಯಾಯಿತು. ಮಳೆಯನ್ನು ಅನುಭವಿಸಬೇಕೆನ್ನುವ ನಮ್ಮ ಪ್ರವಾಸ ಸಂಪನ್ನಗೊಂಡಿತು.

-ಬಿ.ಕೆ.ಮೀನಾಕ್ಷಿ, ಮೈಸೂರು.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x