ಸುಂದರ ಮುಸ್ಸಂಜೆ
ಪಶ್ಚಿಮದಲಿ ಮುಳುಗುವ ಆ ನೇಸರ
ಆ ದೇವರೇ ಸೃಷ್ಟಿಸಿದ ಹಾಗಿದೆ ಸುಂದರ
ನಿಶ್ಯಬ್ಧತೆ ತುಂಬಿದ ಈ ಸಮಯ
ಮಾಡುತಿದೆ ನನ್ನ ದುಃಖಗಳ ಮಾಯ
ನದಿಯೆಂಬ ಕನ್ನಡಿಯಲಿ
ಮೂಡಿದೆ ಮುಸ್ಸಂಜೆಯ ಪ್ರತಿಬಿಂಬ
ಸೌಂದರ್ಯವು ಬೀರುತಲಿ
ತುಂಬಿ ಹೋಗಿದೆ ನನ್ನ ಕಣ್ಣತುಂಬಾ
ಪ್ರಕೃತಿ ಎಂಬ ಕಲೆಗಾರ್ತಿಯ ಹತ್ರ
ಬಿಡಿಸಿದ ಸುಂದರ ಮುಸ್ಸಂಜೆಯ ಚಿತ್ರ
ಹಳದಿ ಮಿಶ್ರಿತ ಕೆಂಪು ಬಣ್ಣ
ತುಂಬಿ ಸುಂದರಗೊಳಿಸಿದೆಯಣ್ಣಾ
ಮುಸ್ಸಂಜೆಯಲಿ ಹಾರುವ ಹಕ್ಕಿಗಳ ಸಾಲು
ನೋಡುತ್ತಿದ್ದರೆ ಮನಸಲಿ ನೆಮ್ಮದಿ
ಗರಿ ಬಿಚ್ಚಿ ನಾಟ್ಯಮಯಿಯಾಗಿ ಕೂಗುವ ನವಿಲು
ಕೇಳಲು ಸುಂದರ ಗೋಧೂಳಿ ಅವಧಿ
ಮುಸ್ಸಂಜೆಯ ಕೋಗಿಲೆ ದ್ವನಿ ಇಂಪು
ಕೇಳಲು ಮನಸಿಗೆ ಬಲು ತಂಪು
ತಂಗಾಳಿ ತಂಪಾಗಿ ಮೆಲ್ಲನೆ ಬೀಸುತಲಿದೆ
ನದಿಯ ನೀರು ನಿಶ್ಯಬ್ದದಲಿ ಹರಿಯುತಿದೆ
ಈ ಸುಂದರ ಪ್ರಕೃತಿಯ ಮಡಿಲಲಿ
ತಂಗಾಳಿ ತಂಪಿಗೆ ಮೖಯೊಡ್ಡುತ
ಮುಳುಗಿರುವೆ ಮುಸ್ಸಂಜೆಯ ಸವಿಯಲಿ
ಕುಳಿತಿರುವೆ ದುಃಖವ ಮರೆಯುತ
*
ಮೌನದ ನದಿ
ರೈತರ ದುಃಖದ ಕೊಳೆ ತೊಳೆಯುತ
ಸಂತೋಷದ ಹೊಳೆಯ ಹರಿಸುತ
ಯಾರು ಅರಿಯದ ನಿಶಬ್ದದ ಹಾದಿಯಲ್ಲಿ
ಹರಿಯುತ್ತಿದೆ ನದಿ ಮೌನದಲಿ
ಬರಡಾಗಿರುವ ಕಾಡುಗಳ ಹಸಿರಾಗಿಸಿ
ಹಳ್ಳ ಕೊಳ್ಳದಿ ಜಲಪಾತಗಳ ಸೃಷ್ಟಿಸಿ
ಭೂತಾಯಿಯ ಬಾಯಾರಿಕೆ ತಣಿಸುತ
ಹರಿಯುತ್ತಿದೆ ನದಿ ಮೌನದಲಿ
ಜಲವಿದ್ಯುತ್ ಶಕ್ತಿಯ ಅನುಕೂಲಗೊಳಿಸಿ
ನಾಡಿನ ಕತ್ತಲ ಕರಗಿಸಿ ಬೆಳಕ ನೀಡಿ
ನಾಡಿನ ಕೀರ್ತಿಯ ಪತಾಕೆಯ ಎತ್ತುತ
ಹರಿಯುತ್ತಿದೆ ನದಿ ಮೌನದಲಿ
ಅಲ್ಲಲ್ಲಿ ಸುಂದರ ಪ್ರವಾಸಿ ಸ್ಥಳಗಳ ಸೃಷ್ಟಿಸಿ
ಪ್ರವಾಸಿಗರನ್ನ ತನ್ನೆಡಗೆ ಆಕರ್ಷಿಸಿ
ನೂರಾರು ಜಲರಾಶಿಗಳ ಪೋಷಿಸುತ
ಹರಿಯುತ್ತಿದೆ ನದಿ ಮೌನದಲಿ
ಎಲ್ಲರಿಗೂ ಸಹಾಯ ಮಾಡುತ
ಕಲ್ಲು ಬಂಡೆಗಳ ಭೇದಿಸಿ ಹರಿಯುತ
ಕೊನೆಗೆ ದೂರದ ಕಡಲನು ಸೇರಲು
ಹರಿಯುತ್ತಿದೆ ನದಿ ಮೌನದಲಿ
*
ಬಾನಿನಲ್ಲಿನ ಹಕ್ಕಿಗಳು
ಬಾನಿನಲ್ಲಿ ಹಾರುತಿವೆ ಹಕ್ಕಿಗಳು
ನೋಡಿ ಸಂತಸಗೊಂಡವು ನನ್ನ ಕಂಗಳು
ನೋಡಲು ಸುಂದರ ಹಕ್ಕಿಗಳ ಸಾಲು
ಏಕೆ ಹೀಗಿಲ್ಲ ನಮ್ಮೆಲ್ಲರ ಬಾಳು
ಒಂದನ್ನು ಬಿಟ್ಟು ಒಂದಿಲ್ಲದೆ ಹಾರುತಿವೆ
ಎಲ್ಲಾ ಒಟ್ಟಾಗಿ ಮನೆಗೆ ಸೇರುತಿವೆ
ಹಕ್ಕಿಗಳು ಹಾರುವಾಗ ನೋಡುವ ನೋಟ
ದೂರವಾಗುವುದು ಬದುಕಿನ ಜಂಜಾಟ
ಹಕ್ಕಿಗಳ ಕೂಗು ಬಲು ಇಂಪು
ಕೇಳಲು ಮನಸಿಗೆ ಬಲು ತಂಪು
ಪ್ರಕೃತಿಯ ಈ ಸುಂದರ ಮಡಲಲಿ
ಹಕ್ಕಿಗಳು ಹಾರುತಿವೆ ಸಂತೋಷದಲಿ
ಹಕ್ಕಿಗಳು ಹಾರುವುದನ್ನ ನೋಡುತ
ಕುಳಿತಿರುವೆ ದುಃಖವ ಮರೆತು ನಗುತ
ದುಃಖವ ಮರೆಸಿ ನಗುವ ಹರಸಿ
ಹಾರುತಿದೆ ಹಕ್ಕಿ ಎಲ್ಲರ ದಿಗ್ಭ್ರಮೆಗೊಳಿಸಿ
-ವಿನಯ್ ಕುಮಾರ್
