ಸರಕಾರ ಏನಾದರೊಂದು ನಿಯಮ ಮಾಡಿ ಖಾಸಗಿ ಅಡುಗೆ ಕೆಲಸಗಳನ್ನು ನಿಯಂತ್ರಿಸಬೇಕು. ಸಮೂಹ ಸಾರಿಗೆ ಇರುವಂತೆಯೇ ಸಾಮೂಹಿಕ ಅಡುಗೆ ಮನೆ ಇರಬೇಕು. ಇದರಿಂದ ಸಮಯ, ವೆಚ್ಚ, ಶ್ರಮ, ಇವನ್ನು ಉಳಿಸಬಹುದು, ಎಂಬುದು ಅವರ ಅಭಿಪ್ರಾಯ.
ಕಂದನಿಗೆ ಹಾಲು ಕೊಟ್ಟು ಮೂರು ಗಂಟೆ ಕಳೆಯುತ್ತಾ ಬಂತು, ಇನ್ನೇನು ಮಗು ಏಳಬಹುದು, ಎದ್ದು ಪ್ರಾಂ ಎಂದು ರಾಗ ಎಳೆಯಬಹುದು. ಸರಿಯಾಗಿ ಮೂರು ಗಂಟೆಯ ಅವಧಿಗೇ ಏಳುತ್ತೆ. ಗಡಿಯಾರವೇ ಅವಳನ್ನು ನೋಡಿ ತನ್ನ ಸಮಯ ಸೆಟ್ ಮಾಡಿಕೊಳ್ಳಬಹುದು, ಹಾಗೆ. ಹಗಲಾದರೆ ಪರವಾಗಿಲ್ಲ, ರಾತ್ರಿ ಮಾತ್ರ, ನಿದ್ರೆಯ ಗಾಢತೆಯಲ್ಲಿರುವಾಗ, ಅರೆ ಬಿಟ್ಟ ಕಣ್ಣುಗಳಲ್ಲಿಯೇ ಹಾಲು ಮಿಶ್ರ ಮಾಡಿ, ಬಾಟಲಿಗೆ ತುಂಬಿ, ಅದರ ಬಾಯಿಗೆ ಇಟ್ಟರೆ ಸದ್ದು ಅಡಗುತ್ತದೆ, ಹಾಗೇ ಹಿಡಿದುಕೊಳ್ಳುವಾಗ ತೂಕಡಿಕೆ ಬಂದುಬಿಡುತ್ತದೆ, ಅದರ ಬಾಯಿಯಿಂದ ಬಾಟಲಿ ತಪ್ಪಿಹೋದರೆ ಮತ್ತೆ ಸುವ್ವಾಲಿ ರಾಗ ಶುರುವಾಗಿ ಕಣ್ಣಿಗೆ ಆವರಿಸಿದ ನಿದ್ರೆ ಮಾಯವಾಗುತ್ತದೆ. ಅದು ಒಮ್ಮೆಗೇ ಲೀಟರ್ ಹಾಲು ಕುಡಿದು, ಆರೋ, ಏಳೋ ಗಂಟೆ ಮಲಗಬಾರದೇ ಎಂದು ಆಶಿಸಿದ್ದಿದೆ. ಆದರೆ ಪ್ರಕೃತಿಯ ನಿಯಮವನ್ನು ಬದಲಿಸಲು ನಮಗೆ ಸಾಧ್ಯವೇ?
ಮಗು ಹೆಚ್ಚು ಹೊತ್ತು ಮಲಗಿದರೆ ಇನ್ನೂ ಎದ್ದಿಲ್ಲವಲ್ಲ, ಎಂಬ ಚಿಂತೆ, ಎದ್ದೇ ಇದ್ದರೆ ಇನ್ನೂ ಮಲಗೇ ಇಲ್ಲವಲ್ಲ ಎಂಬ ಯೋಚನೆ. ಮಗುವನ್ನು ಹೆಗಲ ಮೇಲೆ ಮಲಗಿಸಿಕೊಂಡು, ಚಂದ್ರನನ್ನು ತೋರಿಸುತ್ತಾ ಆಡಿಸುತ್ತಿದ್ದೆವು ಆಗ. ಈಗ ಚಂದ್ರನನ್ನು ಟಿವಿಯಲ್ಲಿ ತೋರಿಸಬೇಕು, ವಿಡಿಯೋದಲ್ಲಿ ತೋರಿಸಬೇಕು.
ಮೊದಲು ಉಚ್ಚೆ, ಹೇಲು ಎಂದರೆ ವಾಕರಿಸಿಕೊಳ್ಳುತ್ತಿದ್ದ ನಮಗೆ ಈಗ ಅದು ಹಾಗನಿಸುತ್ತಿಲ್ಲ. ಬಟ್ಟೆಯೆಲ್ಲಾ ಅದೇ, ಜೊತೆಗೆ ಬಾಯಿಯಿಂದ ಕಕ್ಕಿದ್ದು, ಮೂಗಿನಿಂದ ಸುರಿದದ್ದು, ಇವೆಲ್ಲಾ ಸೇರಿರುತ್ತವೆ. ಮನೆಯೆಲ್ಲಾ ಒಂದು ರೀತಿಯ ಗಬ್ಬು ವಾಸನೆಯಾದರೂ ಸಹಿಸಿಕೊಳ್ಳಬೇಕಾಗಿದೆ. ಮೂಗು ಅದಕ್ಕೇ ಹೊಂದಿಕೊ ಂಡಿದೆ ಬಿಡು. ಯಾರಾದರೂ ಎತ್ತಿಕೊಂಡ ಕೂಡಲೇ ಮಗುವಿನ ಮೂತ್ರ ಪಾತ್ರೆ ತುಂಬಿ ತುಳುಕುತ್ತದೆ, ಡೈಪರ್ ಹಾಕಿದರೂ ‘ಅದು’ ಹೊರಬರುತ್ತದೆ. ಅದನ್ನು ಮಲಗಿಸಿಕೊಂಡ ಹಾಸಿಗೆಯೆಲ್ಲಾ ಮೂತ್ರಮಯ, ಸೋಫಾಗಳೆಲ್ಲಾ ಮೂತ್ರಮಯ. ನಿನ್ನಿಂದಾಗಿ ಹತ್ತಾರು ಸಾವಿರ ರೂಪಾಯಿಗಳ ಇಂಪೋರ್ಟೆಡ್ ಹಾಸಿಗೆ ಹಾಳಾಯಿತು, ದುಬಾರಿ ಬೆಲೆಯ ಸೋಫಾ ಹಾಳಾಯಿತು. ನಾನು ಸುಮ್ಮನಿರೋನಲ್ಲ, ನೀನು ಬೆಳೆದ ಮೇಲೆ ಅದರ ಬೆಲೆ, ಅದರ ಬೆಲೆಯ ಮೇಲಿನ ಬಡ್ಡಿ, ಚಕ್ರಬಡ್ಡಿ, ಇವನ್ನು ನಿನ್ನಿಂದ ವಸೂಲು ಮಾಡಿಯೇ ಬಿಡುವವನು. ನೀನು ಬಂದ ಮೇಲೆ ಮೂರು ತಿಂಗಳು ಬರುತ್ತಿದ್ದ ಗ್ಯಾಸ್ ಎರಡೇ ತಿಂಗಳು ಬರುತ್ತಿದೆ, ಆ ಎಕ್ಸ್ಟ್ರಾ ಖರ್ಚನ್ನೂ ನೀನೇ ಕೊಡಬೇಕು. ನೋಡು, ಕೈಲಿರುವ ಚೀಟಿ ತೋರಿಸುತ್ತಾ ಅವರು ಹೇಳಿದರು, ‘ನಾನಂತೂ ಬಿಡುವವನಲ್ಲ, ಬಿಡೋಲ್ಲ, ಬಿಡುವವನೇ ಅಲ್ಲ,’ ಎಂದು ಮೈ ಕೈ ಕುಣಿಸುತ್ತಾ, ಹುಬ್ಬು ಹಾರಿಸುತ್ತಾ ಹೇಳಿದರು ಅವರು ಕಂದಮ್ಮನಿಗೆ. ನಮ್ಮಿಬ್ಬರ ಮುಖದಲ್ಲಿಯೂ ನಗು. ಮಗು ಅವರತ್ತ ನೋಡಿ ತುಟಿ ಅಗಲಿಸಿತು, ಬೊಚ್ಚು ಬಾಯಿ ಅಗಲಿಸಿ ಕಿಲಕಿಲ ಎಂದು ನಕ್ಕಿತು. ಅವರ ಕೋಪವೆಲ್ಲಾ ಹಾರಿಹೋಯಿತು. ‘ಸರಿ, ಸರಿ, ನೀನು ನಕ್ಕು ನನ್ನನ್ನು ಮೋಸ ಮಾಡೋದು ಬೇಡ. ಈ ಬಾರಿ ಕ್ಷಮಿಸಿದ್ದೇನೆ, ಸೋಫಾದ ಖರ್ಚು ವಜಾ, ಸಾಲ ಮನ್ನಾ,’ ಎಂದರು. ಯಾವುದನ್ನೂ ಅವಳಿಂದ ವಸೂಲು ಮಾಡುವುದು ಸಾಧ್ಯವೇ ಇಲ್ಲ, ಆದರೆ ಹೇಳುವುದಕ್ಕೇನು ತೊಂದರೆ?
ನಿನ್ನೆ ಮಧ್ಯಾಹ್ನ, ಅವರು ಮಗುವಿನ ಹತ್ತಿರ ಬಂದು, ‘ನೋಡು, ನನ್ನ ಊಟ ಆಯಿತು, ನಿನ್ನ ಊಟವೂ ಆಯಿತು. ಈಗ ನೀನು ಸುಮ್ಮನೆ ಮಲಗಬೇಕು. ಎಲ್ಲಾದರೂ ಕೊಂಯ್ಯ, ಕೊಸ್ಯ ಎಂದು ರಾಗ ಎಳೆದೆಯೋ, ನಾನು ಸುಮ್ಮನಿರುವವನಲ್ಲ, ಇದು ನನ್ನ ಪ್ರತಿಜ್ಞೆ,’ ಎಂದರು. ಪಕ್ಕದಲ್ಲಿಯೇ ಇದ್ದ ನನ್ನ ಮಗಳು, ‘ಅಳ್ತೀನಿ, ಅಳ್ತೀನಿ, ಏನು ಮಾಡ್ತೀರಿ ಎಂದು ಕೇಳೇ ಪುಟ್ಟಿ,’ ಎಂದಳು. ಅವರು, ‘ಇನ್ನೇನು ಮಾಡೋಕೆ ಆಗುತ್ತೆ? ಕಿವಿಗೆ ಬೆಣೆ ಹಾಕಿಕೊಂಡು ಮಲಗ್ತೀನಿ. ಹಾಂ,’ ಎಂದರು. ನಾವು ನಕ್ಕಿದ್ದೇ ನಕ್ಕಿದ್ದು.
ನನ್ನ ಗಂಡನಿಗೆ ಮಗುವೆಂದರೆ ಅದೇನೋ ಮೋಹ, ನೀನು ಹೆತ್ತವರಿಗೆ ಹೆಗ್ಗಣ ಮುದ್ದು ಎಂದು ಹೇಳಬಹುದು, ಆದರೂ ಇದು ಸತ್ಯ. ನಮ್ಮ ಮನೆಯಲ್ಲಿ ತನ್ನನ್ನು ಬಿಟ್ಟರೆ ಈ ಪುಟ್ಟಿನೇ ಸುಂದರಿ, ಎಂದು ಹೇಳುತ್ತಿದ್ದರು. ಎಪ್ಪತ್ತು ವರ್ಷದ ಅವರೆಲ್ಲಿ, ಮೂರು ತಿಂಗಳ ಮಗುವೆಲ್ಲಿ? ಅವರು ಬೆಳಗ್ಗೆ ಏಳುತ್ತಲೇ ಕೋಣೆಗೆ ಬಂದು, ಮಗು ಮಲಗಿದ ತೊಟ್ಟಿಲಿನ ಬಟ್ಟೆ ಸರಿಸಿ, ‘ಗುಡ್ ಮಾರ್ನಿಂಗ್ ಪುಟ್ಟಿ, ಸರಿಯಾಗಿ ನಿದ್ರೆ ಬಂತಾ? ಅಮ್ಮ, ಅಜ್ಜಿ ಎಲ್ಲಾ ಸರಿಯಾಗಿ ನೋಡಿಕೊಂಡಿದ್ದಾರಾ? ಇಲ್ಲವಾದರೆ ಹೇಳು, ಅವರಿಗೆ ತಕ್ಕ ಶಾಸ್ತಿ ಮಾಡಿಬಿಡುತ್ತೇನೆ,’ ಎಂದು ಹೇಳದೇ ಬಿಡುವುದಿಲ್ಲ. ಇತ್ತೀಚಿಗೆ ತನಗೇಕೋ ಅದರ ಮೇಲೆ ಜಾಸ್ತಿ ಪ್ರೀತಿ ಹುಟ್ಟಿದೆ, ‘ಇಮೋಷನಲ್ ಫೂಲ್’ ಆಗಿಬಿಡುತ್ತೇನೇನೋ, ಎಂದು ಹಲವಾರು ಬಾರಿ ಹೇಳಿದ್ದರು. ಇಮೋಷನಲ್ ಎಂದರೇನು ಎಂದರೆ ನನಗೆ ಗೊತ್ತಿಲ್ಲ, ಆದರೆ ಫೂಲ್ ಎಂದರೇನು ಎಂದು ತಿಳಿದಿದೆ. ಹಾಗಾಗಿ ಅವರ ಹೇಳಿಕೆಯನ್ನು ಅರ್ಧದಷ್ಟು ನಾನು ಒಪ್ಪುತ್ತೇನೆ. ತನ್ನ ಮೊಮ್ಮಗಳ ಬಾಣಂತನ ತಾನೇ ಮಾಡಬೇಕು ಎನ್ನುತ್ತಿದ್ದರು.
ಅದಾರಿಗೋ ಫೋನ್ ಮಾಡಿ ಹೇಳುತ್ತಿದ್ದರು, ‘ನಮ್ಮಲ್ಲಿ ಒಂದು ಪ್ರಭೃತಿ ಇದೆ. ಊ.ಮ.ಹೇ ಬಿಟ್ಟರೆ ಏನನ್ನೂ ಮಾಡೋಲ್ಲ. ಮಲಗಿದಲ್ಲಿಗೆ ಏಲ್ಲಾ ಸಪ್ಲೈ ಮಾಡಬೇಕು. ಯಾಕೋ ಇಂದಿನ ಜನಾಂಗದ ಬಗ್ಗೆ ನನಗೆ ದಿಗಿಲಾಗುತ್ತದೆ. ಹಿರಿಯರಾದ ನಾವು ಬುದ್ಧಿ ಹೇಳಿದರೆ ಕೇಳಿಸಿಕೊಳ್ಳಬೇಕೆಂಬ ಸೈರಣೆಯೂ ಇಲ್ಲ,’ ಎಂದವರಿಗೆ ಆಚೆಯಿಂದ ‘ಯಾರದು?’ ಎಂದು ಕೇಳಿರಬಹುದು. ‘ಇನ್ನಾರು, ನನ್ನ ಮೊಮ್ಮಗಳು, ಮೂರು ತಿಂಗಳಿನವಳು,’ ಎಂದು ತಮಾಷೆಯಾಗಿ ಉತ್ತರಿಸಿದ್ದರು.
ಕೂಸಿನೆದುರು ನಿಂತುಕೊ ಂಡು, ಅದರ ಕಣ್ಣಲ್ಲಿ ಕಣ್ಣನ್ನು ನೆಟ್ಟು, ಏನಾದರೂ ಮಾತನಾಡುತ್ತಿದ್ದರು. ಅದು ಹೂಂ, ಏ, ಕೇಕ್, ಎಂದೆಲ್ಲಾ ಸದ್ದು ಮಾಡುವ ಮೂಲಕ ಪ್ರತಿಕ್ರಿಯಿಸುತ್ತಿತ್ತು. ಒಂದು ದಿನ ನನ್ನ ಯಜಮಾನರು ಏನೆಂದು ಅಡ್ವೈಸಿಸುತ್ತಿದ್ದರು ಗೊತ್ತಾ? ‘ನೋಡು, ನೀನು ಮದುವೆಯಾದ ಮೇಲೆ ಬೆಳಗ್ಗೆ, ಸೂರ್ಯ ಹುಟ್ಟುವುದಕ್ಕೆ ಮೊದಲು, ಕೋಳಿ ಕೂಗುವ ಮೊದಲು ಎದ್ದು, ಗಂಡನ ಪಾದ ಮುಟ್ಟಿ, ‘ಮನೆಯೇ ಗುಡಿಯಮ್ಮ, ಪತಿಯೇ ದೇವರಮ್ಮ,’ ಎನ್ನುತ್ತಾ ನಮಸ್ಕರಿಸಿ, ಬಚ್ಚಲಿಗೆ ಹೋಗಿ ಸ್ನಾನ ಮಾಡಿ, ಗರಿಗರಿ ಸೀರೆ ಉಟ್ಟು, ದೇವರಿಗೆ ನಮಸ್ಕರಿಸಿ, ತುಳಿಸಿಗೆ ಸುತ್ತು ಬಂದು, ಅದಾಗಲೇ ಮನೆಯ ಎದುರು ಬಿದ್ದಿರುವ ಅಂದಿನ ದಿನಪತ್ರಿಕೆಯನ್ನು ತೆಗೆದುಕೊಂಡು, ಒಂದು ಲೋಟ ಒಳ್ಳೆಯ ಕಾಫಿ ತಯಾರಿಸಿಕೊಂಡು, ಗಂಡನು ಮಲಗಿರುವ ಕೋಣೆಗೆ ಹೋಗಿ, ‘ರೀ,’ ಎಂದು ಸಣ್ಣ ದನಿಯಲ್ಲಿ ಕೂಗಿ, ಅವರನ್ನು ಎಚ್ಚರಿಸಿ, ದೇವರ ಮುಂದೆ ಕಿರು ನಗೆಯೆಂಬ ದೀಪವನ್ನು ಬೆಳಗಿ, ಕಿರು ನಗೆ ಎಂದರೆ ಗಹಗಹಾ ಎಂದ, ಕೆಕೆಕೆ ಎಂದೋ ನಗುವುದಲ್ಲ, ತುಟಿಯ ಅಂಚಿನಲ್ಲಿ ಪ್ರೀತಿಯ ಜೇನು ತುಂಬಿ ನಗುತ್ತಾ, ‘ಕಾಫಿ,’ ಎಂದು ಹೇಳಬೇಕು. ಈ ದೃಶ್ಯವನ್ನು ನೋಡಬೇಕಾದರೆ ಕನ್ನಡದ ಹಳೆಯ ಸಿನೆಮಾಗಳನ್ನು ನೋಡು. ಆಗ ತನ್ನ ಹೊದಿಕೆಯನ್ನು ತುಸುವೇ ಸರಿಸಿ, ಎದುರು ದೇವತೆಯಂತೆ ನಿಂತಿರುವ ನಿನ್ನನ್ನು ಕಂಡ ನಿನ್ನ ಗಂಡ, ಇದ್ದಂತೆಯೇ ನಿನ್ನನ್ನು….’ ಅಷ್ಟರಲ್ಲಿ ನಾನು ‘ಸಾಕು, ಸಾಕು. ಮುಂದಿನದೇನೂ ಹೇಳುವುದು ಬೇಡ,’ ಎಂದು ಎಚ್ಚರಿಸಿದ್ದೆ. ಮುದುಕರಾದರೂ ತುಂಟತನ ಅವರನ್ನು ಬಿಟ್ಟಿಲ್ಲ, ಆದರೆ ಅದನ್ನು ಕಂದನ ಎದುರು ಹೇಳುವುದು ಸರಿಯಲ್ಲ.
ಇಂದಿನ ಪರಿಸ್ಥಿತಿ ಕಂಡು ನನಗೆ ಆತಂಕವಾಗುತ್ತದೆ ಸಖಿ. ಮನೆಯೆಲ್ಲಾ ಔಷಧಮಯವಾಗಿಸಿಕೊಂಡಿದ್ದೇವೆ. ಪಾತ್ರೆ ತೊಳೆಯಲು ರಾಸಾಯನಿಕ, ನೆಲ ಒರೆಸಲು ರಾಸಾಯನಿಕ, ಸ್ನಾನ ಮಾಡಲು ರಾಸಾಯನಿಕ, ತಲೆಗೆ ಹಚ್ಚಿಕೊಳ್ಳಲು ರಾಸಾಯನಿಕ, ನೆಲ ಒರೆಸಲೂ ರಾಸಾಯನಿಕ, ಬಾಯಿ ಶುಭ್ರಗೊಳಿಸಲೂ ರಾಸಾಯನಿಕ. ಕೈ ತೊಳೆಯಲು ಅದೇನೋ ಹ್ಯಾಂಡ್ ವಾಷ್. ನೆಲ ಒರೆಸಲು, ಗಾಜು ಹೊಳಪು ಬರಲು, ಬಟ್ಟೆ ಒಗೆಯಲು, ಹೊಳಪು ಬರುವಂತೆ ಮಾಡಲು ಪವರ್ಫುಲ್ ದ್ರವಗಳು. ನಾವು ಎಷ್ಟೇ ಚೊಕ್ಕ ಮಾಡಿದರೂ ಒಂದಿಷ್ಟು ಈ ವಿಷಗಳು ಪಾತ್ರೆ, ಬಾಯಿ, ನೆಲ, ಮೈ, ತಲೆ, ಇವುಗಳಲ್ಲಿ ಉಳಿದೇ ಉಳಿಯುತ್ತದೆ. ಆ ಉಳಿಕೆಗಳು ಒಂದಿಷ್ಟಾದರೂ ಹೊಟ್ಟೆಗೆ ಹೋಗುತ್ತವೆ. ಬಹಳಷ್ಟು ಬಾರಿ ಕ್ಯಾನ್ಸರ್ ಬರಲು ಇವೇ ಕಾರಣ ಎಂದು ಎಲ್ಲೋ ಓದಿದ ನೆನಪು.
ತುಂಬಾ ದೀರ್ಘವಾಯಿತೇ ಗೆಳತಿ? ಕ್ಷಮಿಸು, ನಾನು ಏನು ಹೇಳಬೇಕೆಂದು ಆಶಿಸಿದ್ದೆನೋ ಅದೆಲ್ಲವನ್ನೂ ಬರೆದುಬಿಟ್ಟರೆ ಮಾತ್ರ ಮನಸ್ಸಿಗೆ ನೆಮ್ಮದಿ.
ನನ್ನ ಬಾಲ್ಯದ ಬಗ್ಗೆ ಹೇಳಲೇಬೇಕು. ಆಗ ಪಾತ್ರೆ-ಪಗಡಿಗಳನ್ನು ತೊಳೆಯಲು ಹುಣಸೆಹಣ್ಣು, ಬೂದಿ ಉಪಯೋಗಿಸುತ್ತಿದ್ದೆವು. ಹಲ್ಲುಜ್ಜಲು ಮಾವಿನ ಅಥವಾ ಗೋವೆಯ ಎಲೆ, ಸಾಧ್ಯವಾದರೆ ಬೇವಿನ ಕಡ್ಡಿ, ತಲೆ ಸ್ನಾನ ಮಾಡಲು ನೋಳಿ ಮತ್ತು ಸೀಗೆ ಪುಡಿ, ಗಿಡಗಳ ಮೇಲಿನ ಹುಳ ನಿವಾರಣೆಗೆ ಬೂದಿಯೇ ಕ್ರಿಮಿನಾಶಕ, ಹೀಗೆ. ಬಟ್ಟೆ ಒಗೆಯಲೂ ಅದೇನೋ ಕಾಯಿಯನ್ನು ಪುಡಿ ಮಾಡಿ ಉಪಯೋಗಿಸುತ್ತಿದ್ದೆವು. ಅಪಾಯಕಾರಿ ರಾಸಾಯನಿಕಗಳೇ ಇರುತ್ತಿರಲಿಲ್ಲ. ಆಗ ತಿನ್ನಲು ಮಾತ್ರೆಗಳೇ ಇರುತ್ತಿರಲಿಲ್ಲ. ಈಗ ಮತ್ತಷ್ಟು ಸ್ಟ್ರಾಂಗ್ ಎಂದು ದೇಹದೊಳಗೆ ವಿಷ ಪೂರಿಸುತ್ತಾರೆ. ಏನಾಗುತ್ತದೆಯೋ ಏನೋ. ನನ್ನ ಮೊಮ್ಮಗಳ ಕಾಲದಲ್ಲಿ ಇನ್ನಷ್ಟು ಕೆಟ್ಟುಹೋಗಿರುತ್ತದೆಯೋ ಏನೋ.
ಒಂದು ಸಲ ಹೀಗಾಯಿತು. ನನ್ನ ಮಗಳು ಆಗಾಗ ಬ್ಯೂಟಿಪಾರ್ಲರ್ಗೆ ಹೋಗಿ ಒಂದಿಷ್ಟು, ಸಾವಿರಗಟ್ಟಲೆಯೇ, ಹಣ ಕಕ್ಕಿ ಬರುತ್ತಾಳೆ. ಅಲ್ಲಿಗೆ ಹೋಗಿ ಬಂದರೆ ತನ್ನ ಸೌಂದರ್ಯ ವರ್ಧಿಸುತ್ತದೆ ಎಂಬುದು ಅವಳ ನಂಬಿಕೆ. ನಂಬಿಕೆಗೆ ಇಂಬು ಕೊಡುವ ಯಾವುದೇ ಬದಲಾವಣೆಯನ್ನು ನಾನು ಗಮನಿಸುವುದಿಲ್ಲ. ಹಾಗೆ ಹೇಳಿದರೆ ಒಪ್ಪುವ ಮನಸ್ಥಿತಿಯೂ ಅವಳದಲ್ಲ. ಮಗು ಜನಿಸಿದ ಮೇಲೆ ಮೊದಲ ಬಾರಿಗೆ ಇಂತಹ ಪಾರ್ಲರ್ಗೆ ಹೋಗಿ ಬಂದಳು. ಅಲ್ಲಿ ಅಪಾಯಕಾರಿ ರಾಸಾಯನಿಕ ಬಳಸುತ್ತಾರೆ ಎಂದು ಕೇಳಿದ್ದೆ, ಕ್ರಮೇಣ ಚರ್ಮ ಹಾಳಾಗುತ್ತದೆ ಎಂದೂ ಓದಿದ್ದೆ. ಆದರೆ ಕೇಳುವವರು ಬೇಕಲ್ಲ.
ಬಂದವಳು ಮಗುವನ್ನು ಎತ್ತಿಕೊಂಡರೆ ಅದು ಮುಖ ತಿರುಗಿಸಿಬಿಟ್ಟಿತು, ಮುಖ ನೊಡಿ ನಗುವ ಅದು ಮುಖ ಸಿಂಡರಿಸಿಕೊ ಂಡಿತು. ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಮರುದಿನವೇ. ಮಗಳು ಸ್ನಾನ ಮಾಡಿ ಬಂದ ನಂತರವೇ ಅವಳು ತನ್ನ ತಾಯಿ ಎಂದು ಕೂಸು ಅರ್ಥ ಮಾಡಿಕೊಂಡಿದ್ದು. ಅದೇನೋ ತಮಾಷೆ ನೆನಪಿಗೆ ಬಂತು, ಒಂದು ಬ್ಯೂಟಿ ಪಾರ್ಲರ್ ಎದುರು ಬೋರ್ಡ್ ಹಾಕಿದ್ದರಂತೆ, ‘ನೀವು ಇಲ್ಲಿಂದ ಹೊರಬರುವ ಹುಡುಗಿಯರನ್ನು ರೇಗಿಸಬೇಡಿ. ಆಕೆ ನಿಮ್ಮ ಅಜ್ಜಿಯೇ ಆಗಿರಬಹುದು,’ ಎಂದು.
ಕಂದಮ್ಮನಿಗಿನ್ನೂ ಹೆಸರಿಟ್ಟಿಲ್ಲ ಗೆಳತಿ. ಹಾಗಾಗಿ ಬಾಯಿಗೆ ಬಂದ ಹೆಸರುಗಳಿಂದೆಲ್ಲಾ ಕರೆಯುತ್ತೇವೆ. ಕೆಲವೊಮ್ಮೆ ಹನುಮಿ, ಪೂತನಿ, ಮಂಡೋದರಿ, ಶೂರ್ಪನಖಿ, ಅಳಗಾನ ರಾಕ್ಷಸಿ, ಎಂದೆಲ್ಲಾ ಪೌರಾಣಿಕ ಹೆಸರುಗಳಿಂದ ಕರೆಯುವುದೂ ಉಂಟು. ಇದು ಬೈಗುಳವಲ್ಲ, ಪ್ರೀತಿಯ ಪರಾಕಾಷ್ಠೆ ಎಂಬುದು ನಿನಗೂ ಗೊತ್ತಿದೆಯಲ್ಲವೇ? ಆಯಾಸಗಳಿಂದ ಎಷ್ಟೇ ಕೋಪ ಬಂದರೂ ಮಗುವು ನಮ್ಮ ಮುಖ ನೋಡಿ ನಕ್ಕಾಗ ಸಿಟ್ಟು ಶಮನವಾಗುತ್ತದೆ, ಮತ್ತು ಮುದ್ದಾಡಬೇಕು ಎನಿಸುತ್ತದೆ.
ಮಗು ಹುಟ್ಟುವ ಮೊದಲೇ ಯಾವ ಹೆಸರಿಡಬೇಕು, ಗಂಡಾದರೆ ಏನು, ಹೆಣ್ಣಾದರೆ ಏನು ಎಂದು ಮಾತನಾಡುತ್ತಿದ್ದೆವು. ಈಗಂತೂ ಸ್ಪಷ್ಟವಾಯಿತಲ್ಲ, ಹೆಣ್ಣು ಕೂಸು ಎಂದು. ಹೆಸರಿಡುವ ವಿಷಯದಲ್ಲಿ ಇನ್ನೂ ತೀರ್ಮಾನಕ್ಕೆ ಬರಲಾಗುತ್ತಿಲ್ಲ. ನಾನು ಹೆಸರಿನ ಕೊನೆಯಲ್ಲಿ ‘ಕಾ’ ಎಂದಿದ್ದರೆ ಮಗು ಬಹಳ ಫೇಮಸ್ಸಾಗುತ್ತದೆ ಎಂದು ವಾದಿಸುತ್ತಾ, ವಂಶಿಕಾ, ರಾಧಿಕಾ, ರೂಪಿಕಾ, ಮಹಿಕಾ, ದೀಪಿಕಾ, ಮಲ್ಲಿಕಾ, ರಶ್ಮಿಕಾ, ಭೂಮಿಕಾ, ಹರ್ಷಿಕಾ, ಎಂದೆಲ್ಲಾ ಹೇಳುತ್ತಿದ್ದೆ. ಕೊನೆಯಲ್ಲಿ ಅದು ಮಗುವಿನ ತಂದೆ-ತಾಯಿಯರಿಗೆ ಬಿಟ್ಟ ವಿಷಯ, ನನಗ್ಯಾಕೆ ಎಂದು ಸುಮ್ಮನಾಗಿದ್ದೆ. ಹೆಸರೇನೇ ಇಟ್ಟಿರಲಿ, ಅದಲು ದಾಖಲಾತಿಗೆ ಬೇಕು, ನಾನಂತೂ ಪ್ರೀತಿಯಿಂದ ‘ಪುಟ್ಟಿ,’ ಎಂದೇ ಸದಾ ಕಾಲ ಕರೆಯುವುದು. ಪುಟ್ಟಿ ಮತ್ತು ಪುಟ್ಟಗಳು ಸಾರ್ವಕಾಲಿಕ ಸಂಬೋಧನಾ ಪದಗಳು.
ನನ್ನ ಗಂಡ ಐದನೆಯ ತಿಂಗಳಿಗೇ ಅದಕ್ಕೆ ನಾಮಕರಣ ಮಾಡಬೇಕು ಎಂದು ತೀರ್ಮಾನಿಸಿ, ಈಗಾಗಲೇ ಆಹ್ವಾನ ಪತ್ರಿಕೆಯ ಡ್ರಾಫ್ಟ್ ರೆಡಿ ಮಾಡಿ ಇಟ್ಟಿದ್ದಾರೆ. ‘ಈ ತನಕ ನನ್ನನ್ನು ನಮ್ಮ ಮನೆಯವರು ಸುಬ್ಬಿ, ಸುಬ್ಬಲಕ್ಷಿö್ಮ, ಕೂಸು, ಕಂದಮ್ಮ, ರಾಣಿ, ಚಿನ್ನಾರಿ, ಪುಟ್ಟ, ಪುಟ್ಟಿ, ಮಗು, ಗುಂಡಮ್ಮ, ಹನುಮಿ, ಗಬ್ಬುದಾಸ, ಅಮ್ಮು, ಅಮ್ಮಚ್ಚಿ, ಬಂಗಾರಿ, ಚಿನ್ನು, ಪಾಪು, ಎಂದೆಲ್ಲಾ ಕರೆಯುತ್ತಿದ್ದರು. ನನಗೆ ಖಾಯಂ ಹೆಸರೊಂದನ್ನು ಇಡಲು ತೀರ್ಮಾನಿಸಿದ್ದಾರೆ,’ ಎಂದು ಆರಂಭವಾಗುತ್ತದೆ ಅದು. ದಿನಾಂಕ, ಸ್ಥಳವನ್ನಷ್ಟೇ ಸೇರಿಸಿದರೆ ಇನ್ವಿಟೇಶನ್ ಮುದ್ರಣಕ್ಕೆ ಕೊಡಲು ಸಿದ್ಧ. ಇದು ನಮ್ಮ ಮನೆಯವರು ಮಾಡುತ್ತಿರುವ ಕೊನೆಯ ಸಮಾರಂಭ, ಹಾಗಾಗಿ ಎಲ್ಲರನ್ನೂ ಕರೆಯಬೇಕು, ಎನ್ನುತ್ತಿದ್ದರು. ಇದಾಗಲೇ ಯಾರ ಯಾರನ್ನು ಆಹ್ವಾನಿಸಬೇಕು ಎಂದು ಶಾರ್ಟ್ ಲಿಸ್ಟ್ ಮಾಡಲು ತೊಡಗಿದ್ದಾರೆ. ಆ ಪಟ್ಟಿ ಬೆಳೆಯುತ್ತಲೇ ಇದೆ, ಅಬ್ಬಬ್ಬಾ, ನಮ್ಮ ಪರಿಚಿತರು, ಸಂಬ ಂಧಿಗಳು ಇಷ್ಟೊಂದು ಜನ ಇದ್ದಾರೆಯೇ? ಕಾಲ್ ದಿ ಎನಿಮೀಸ್, ಇಫ್ ಎನಿ. ದೇ ಬಿಕಂ ಫ್ರೆಂಡ್ಸ್, ಎನ್ನುತ್ತಿದ್ದರು ಇವರು.
ಹನಮದ ಬಾಲದ ಹಾಗೆ ಉದ್ದವಾದ ಆ ಪಟ್ಟಿಯನ್ನು ಕಂಡ ನಾನು ನಾನು ನಗುತ್ತಾ, ಪ್ರತಿಯೊಬ್ಬರನ್ನೂ ಕರೆಯುವ ಶ್ರಮ ಬೇಡ, ಆಹ್ವಾನ ಪತ್ರಿಕೆಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಿಬಿಡಿ, ಎಂದಿದ್ದೆ.
ಮಗು ಬಂದ ನಂತರ ನಾವು ಎಷ್ಟೋ ಹೊಸ ಪದಗಳನ್ನು ಹುಟ್ಟುಹಾಕಿಬಿಟ್ಟಿದ್ದೇವೆ. ಸ್ನಾನದ ನೀರು ಬಿಸಿ ಇದ್ದರೆ ‘ಸುಟ್ಟ’ ಇದೆ, ಎನ್ನುತ್ತೇವೆ, ಮೈಗೆ ಬಟ್ಟೆ ಸುತ್ತಬೇಕಾದರೆ ‘ಕಟ್ಟ’ ಮಾಡುತ್ತೇನೆ, ಎನ್ನುತ್ತೇವೆ, ‘ಮಮ್ಮು’ ಮತ್ತು ‘ಉಂಗ’ ಎಂದರೆ ಆಹಾರ, ‘ಪಾಚಿಕೊಳ್ಳುವುದು’, ‘ಪೋಚಿ ಮಾಡುವುದು,’ ಎಂದರೆ ಮಲಗುವುದು, ‘ಹತ್ತ’ ಎಂದರೆ ಏಟು ಕೊಡುವುದು, ‘ಚುಂಯ’ ಎಂದರೆ ಇಂಜೆಕ್ಷನ್ ಚುಚ್ಚುವುದು, ಇತ್ಯಾದಿ. ‘ಮಾಮಿ ಜೋತ’ ಎಂದರೆ ದೇವರಿಗೆ ಕೈ ಮುಗಿಯುವುದು, ‘ಗಲಗಲ’ ಮಾಡುವುದು ಎಂದರೆ ಒದ್ದೆಯಾಗಿದ್ದ ಕೂದಲನ್ನು ಹರಡಿ ಒಣಗಿಸಿಕೊಳ್ಳುವುದು, ಇತ್ಯಾದಿ. ಈ ಪದಗಳು ಯಾವುದೇ ಡಿಕ್ಷನರಿಯಲ್ಲಿಯೂ ಸಿಗುವುದಿಲ್ಲ. ಬಹುಶಃ ಪ್ರೊ. ಜಿವಿಯವರಿಗೂ ಗೊತ್ತಿರಲಿಕ್ಕಿಲ್ಲ.
ನಮ್ಮ ಕಾಲದಲ್ಲಿ ಮಗುವು ಮಗ್ಗಲು ಮಗುಚಿದರೆ ಮನೆಯಲ್ಲಿ ಅಂದು ಪಾಯಸ, ಸುಲಭದಲ್ಲಿ ಮಾಡಬಹುದಾದ ಸಿಹಿ ತಿಂಡಿಯೆ ಂದರೆ ಅದೊಂದೇ ಬಿಡು. ಮಗು ಹೊಟ್ಟೆಯ ಮೇಲೆ ಹರಿದರೂ ಪಾಯಸ, ಅದೇ ಹೆಸರು ಬೇಳೆ ಬೇಯಿಸಿ, ಡಬ್ಬದಲ್ಲಿರುವ ನೀರು ಬೆಲ್ಲ ಹಾಕಿ, ಯಾಲಕ್ಕಿ, ತೆಂಗಿನ ಕಾಯಿ ರುಬ್ಬಿ ಸೇರಿಸಿ ಕುದಿಸಿದರೆ ಪರಮಾನ್ನ ರೆಡಿ. ಮಗು ಅಂಬೆಗಾಲಿಟ್ಟರೂ ಪಾಯಸ, ಮಗು ಹೊಸ್ತಿಲು ದಾಟಿದರೂ, ಈಗ ಮನೆಯೊಳಗೆ ಹೊಸ್ತಿಲುಗಳೇ ಇರುವುದಿಲ್ಲ, ಆಗಲೂ ಪಾಯಸ. ಮಗು ನಿಂತರೆ, ಮಗು ನಡೆದರೆ ಆಗಲೂ ಅದೇ ಸಿಹಿ. ಸಣ್ಣ ಸಣ್ಣ ಘಟನೆಗಳಿಗೂ ಹರ್ಷಿಸುವ ಕಾಲ ಈಗ ನೆನಪು ಮಾತ್ರ.
ದಿನಗಳು ಬಲು ಬೇಗ ಸಾಗುತ್ತವೆ, ಅರ್ಥಾತ್ ಸಾಯುತ್ತವೆ. ಕಾಲ ಬೇಗ ಓಡುತ್ತದೆ, ಇನ್ನೇನು ಅದರ ಮೊದಲ ವಾರ್ಷಿಕ ಹುಟ್ಟುಹಬ್ಬ ಬರುತ್ತದೆ. ಇಂದಿನ ದಿನಗಳಲ್ಲಿ ಒಂದು ಕೇಕ್ ತರಿಸಿ, ಅದರ ಮೇಲೆ ಕೆಲ ಮೇಣದ ಬತ್ತಿ ನೆಡುತ್ತಾರೆ. ಕೇಕ್ ಮೇಲೆ ಮಗುವಿನ ಹೆಸರು, ಹ್ಯಾಪಿ ಬರ್ತ್ಡೇ ಎಂಬ ಸಂದೇಶ ಇರುತ್ತದೆ. ಸುತ್ತ ನೆರೆದ ಮಕ್ಕಳು ತಲೆಗೆ ಬಣ್ಣ ಬಣ್ಣದ ಕೋನಾಕಾರದ ರಟ್ಟಿನ ಟೋಪಿ ಹಾಕಿಕೊಂಡು ಕೇಕ್ನತ್ತ ಕಣ್ಣು ನೆಟ್ಟು, ತನಗೆ ಈ ಕೇಕಿನಲ್ಲಿ ಎಷ್ಟು ದೊಡ್ಡ ಪಾಲು ಎಂದು ಸಿಗುತ್ತದೆ, ಎಂದು ಯೋಚಿಸುತ್ತಾ, ಬಾಯಲ್ಲಿ ನೀರು ಸುರಿಸುತ್ತಾ, ತಾವು ಎಂದಿಗೂ ಕೇಕ್ ತಿಂದೇ ಇಲ್ಲವೇನೋ ಎಂಬ ಮುಖ ಭಾವ ಹೊತ್ತು ನಿಲ್ಲುತ್ತಾವೆ. ಎಲ್ಲಾ ಸಿದ್ಧವಾದ ಮೇಲೆ ಒಂದೇ ಕೊರಳಿನಿಂದ ‘ಹ್ಯಾಪಿ ಬರ್ತ್ಡೇ,’ ಎಂದು ಗಾರ್ದಭ ಸ್ವರದಲ್ಲಿ ಎಲ್ಲರೂ ಒರಲುತ್ತಾರೆ. ನಂತರ ಉರಿಯುತ್ತಿರುವ ಮೇಣದ ಬತ್ತಿ ಊದಿ ಆರಿಸುವುದು. ದೀಪಂ ಜ್ಯೋತಿಃ ಪರಂಬ್ರಹ್ಮ ಎಂಬ ನಮ್ಮ ಸಂಸ್ಸೃತಿಗೆ ದೀಪ ಆರಿಸುವ ವಿದೇಶೀ ಕ್ರಮ ಯಾಕೋ ಸರಿಹೋಗುವುದಿಲ್ಲ. ಒಂದು ತುಂಡು ಕೇಕನ್ನು ಹಲವಾರು ಜನರ ಬಾಯಿಗೆ ತುರುಕಿಸುವುದು ಆರೋಗ್ಯಕರವಲ್ಲ. ಕೆಲವರು ಮುಖಕ್ಕೇ ಅಂಟಿಸುತ್ತಾರೆ, ಹೊಲಸು ಸಂಪ್ರದಾಯ. ಜನ್ಮ ದಿನ ಕೇಕ್ನ ಚೂರಿನ ಜೊತೆಗೆ ಪೇಪರ್ ಪ್ಲೇಟಿನಲ್ಲಿ ಸಮೋಸ, ಆಲೂಗಡ್ಡೆ ಚಿಪ್ಸ್, ಕೆಚ್ಅಪ್ ಇರಬೇಕು ಎಂದು ನಿರ್ಧರಿಸಿಬಿಟ್ಟಿದ್ದೇವೆ, ಎಲ್ಲಾ ಸಿನೆಮಾ ಮತ್ತು ಟಿವಿ ಪ್ರಭಾವ. ಯಾರು ಏನೇ ಮಾಡಲಿ, ನಾನಂತೂ ಅವಳ ಬರ್ತ್ಡೇ ದಿನ ಅವಳಿಗೆ ಅಭ್ಯಂಜನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ದೇವರೆದುರು ಕುಳ್ಳಿರಿಸಿ, ಆರತಿ ಎತ್ತುತ್ತೇನೆ. ಮನೆಗೆ ಆತ್ಮೀಯರನ್ನು ಕರೆದು, ಅವರಿಗೆಲ್ಲಾ ಸಿಹಿ ಊಟ ಹಾಕಿಸುತ್ತೇನೆ. ನಾನು ಓಲ್ಡ್ ಮಾಡೆಲ್ಲು ಎಂದು ಅವರೆಲ್ಲಾ ಕರೆದರೂ ಕ್ಯಾರೇ ಎನ್ನುವವಳಲ್ಲ.
ಮುಂದುವರೆಯುವುದು….
–ಸೂರಿ ಹಾರ್ದಳ್ಳಿ
