ಗಾದೆಯೇ ಇದೆಯಲ್ಲ, ಅಜ್ಜಿಗೆ ಅರಿವೆ ಚಿಂತೆ, ಮಗಳಿಗೆ ಅದೇನೋ ಚಿಂತೆ, ಮೊಮ್ಮಗಳಿಗೆ ಕಜ್ಜಾಯ ಚಿಂತೆ, ಎಂದು! ಮೊದಲನೆಯದಂತೂ ಸತ್ಯಸ್ಯ ಸತ್ಯ ಎಂಬುದು ನನಗೆ ಈಗ ಅರಿವಾಗಿದೆ. ಈ ಮಗುವಿನ ಸೇವೆಗೆ ಎಷ್ಟೊಂದು ಬಟ್ಟೆ ಬೇಕಲ್ಲ, ಕಾಲಿಗೆ ಸಾಕ್ಸ್ಗಳು, ಕೈಗೆ ಗವಸುಗಳು, ತಲೆಗೆ ಟೊಪಿ, ಅಂಗಿ, ಸ್ವೆಟರ್, ಡಯಪರ್‌ಗಳು, ಹೀಗೆ ವಿವಿಧ ಗಾತ್ರದವುಗಳು. ದಿನಕ್ಕೆ ಆರೇಳು ಬಾರಿ ಅವನ್ನು ಬದಲಿಸಬೇಕು. ಹೀಗಾಗಿ ಡಜನ್ ಡಜನ್ ಬಟ್ಟೆಗಳು. ಉಚ್ಚೆ ಮಾಡಿದಾಗಲೆಲ್ಲಾ ಅವನ್ನು ತೊಳೆದು ಒಣಗಿಸಬೇಕು. ಹಳೆಯ ಪಂಚೆಗಳನ್ನೆಲ್ಲಾ ಕತ್ತರಿಸಿ ಇಟ್ಟುಕೊಂಡಿದ್ದೇನೆ, ಕಕ್ಕವನ್ನು ಒರೆಸಿ ಎಸೆಯಲು. ಡಯಪರ್ ತೊಡಿಸಿದರೆ ಚರ್ಮಕ್ಕೆ ಹಾನಿಕರ ಎಂದು ಅದಾರೋ ಹೇಳಿದ್ದರಿಂದ ಬಳಕೆಯನ್ನು ಆದಷ್ಟು ಕಡಿಮೆ ಮಾಡಿದ್ದೇನೆ. ಮಗುವನ್ನು ನೋಡಲು ಬಂದವರೆಲ್ಲಾ ಬಟ್ಟೆಗಳನ್ನು ತಂದುಕೊಡುತ್ತಾರೆ, ಅವುಗಳ ಪ್ರಮಾಣ ಎಷ್ಟಾಗಿವೆ ಎಂದರೆ ಒಂದು ಕೋಣೆಯ ತುಂಬಾ ಅವೇ. ಇವತ್ತಿಗೆ ಸರಿಯಾದ ಬಟ್ಟೆ ವಾರದಲ್ಲಿಯೇ ಟೈಟ್ ಆಗುತ್ತದೆ, ನಂತರ ಅದು ವೇಸ್ಟೇ.
ಮಗು ಅಳಲು ಶುರುಮಾಡಿದರೆ ಒಂದು ಕ್ಷಣ ತಲೆ ಓಡುವುದಿಲ್ಲ. ನಿದ್ರೆಯಲ್ಲಿದ್ದಾಗಲಂತೂ ಗಾಬರಿಯಾಗಿಬಿಡುತ್ತದೆ. ಈಗೀಗಲಂತೂ ಅದು ಅಭ್ಯಾಸವಾಗಿಬಿಟ್ಟಿದೆ, ಪರವಾಗಿಲ್ಲ. ಹಾಲನ್ನು ಮಿಶ್ರ ಮಾಡಿ, ಕುಡಿಯಲು ಬಿಸಿಯನ್ನು ಹದ ಮಾಡಿ ಕೊಡುವಷ್ಟು ಸಮಯ ಕೂಡಾ ಕಾಯುವುದಿಲ್ಲ ಮಗು, ರಂಪಾಟ ಮಾಡಿಬಿಡುತ್ತದೆ, ‘ಆಯ್ತು ಪುಟ್ಟೀ, ಬಂದೆ, ಇಲ್ಲಿ ನೋಡು, ಪೌಡರ್ ಹಾಕಿ, ಮಿಕ್ಸ್ ಮಾಡುತ್ತಿದ್ದೇನೆ. ತುಂಬಾ ಬಿಸಿ ಇದೆ, ನಿನ್ನ ಬಾಯಿ ಸುಟ್ಟ ಆಗುತ್ತದಲ್ಲಾ, ಅದಕ್ಕೇ ತಣ್ಣಗೆ ಮಾಡುತ್ತಿದ್ದೇನೆ. ಇರೋ, ನನ್ನ ರಾಣಿ,’ ಎಂದೆಲ್ಲಾ ಹೇಳಿ, ಅದರೆದುರು ಮಿಕ್ಸ್ ಮಾಡುವುದನ್ನು ತೋರಿಸಿದರೂ ಅದು ತಡಕೊಳ್ಳುವುದಿಲ್ಲ. ಹಾಗಂತ ತಣ್ಣಗಿನ ಹಾಲು ಕೊಟ್ಟರೂ ಕುಡಿಯುವುದಿಲ್ಲ. ಇದನ್ನು ಮತ್ತೊಮ್ಮೆ ಬರೆದಿದ್ದೇನೆಯೇ? ತಪ್ಪಿಲ್ಲ, ಇದು ದಿನ ನಿತ್ಯದ ಕತೆ.
ಮೊನ್ನೆ ಮೊನ್ನೆಯಷ್ಟೇ ವರಮಹಾಲಕ್ಷಿö್ಮ ಹಬ್ಬ ಬಂತಲ್ಲ, ಅಂದು ನಮ್ಮ ಕಂದನಿಗೆ ಚಿನ್ನದ ಸರ ಹಾಕಿ, ಕೈಗಳಿಗೆ ಬಳೆ ತೊಡಿಸಿ, ಕುಂಕುಮ ಇಟ್ಟು, ಗಲ್ಲಕ್ಕೆ ಅರಶಿನ ಬಳಿದು, ಹೊಸ ಬಟ್ಟೆ ತೊಡಿಸಿ, ಫೊಟೊ ತೆಗೆದಿದ್ದೇ ತೆಗೆದಿದ್ದು. ಅದಕ್ಕೋ, ಪಾಪ, ಹಿಂಸೆ. ನಾವು ನಮ್ಮ ಖುಷಿಗೆ ಅದಕ್ಕೆ ತೊಂದರೆ ಕೊಡುತ್ತಿದ್ದೇವೆಯೇನೋ ಅನಿಸಿತ್ತು. ಮಕ್ಕಳಿಗೆ ಸಿಂಗಾರ ಮಾಡುವುದು ನಮ್ಮ ಖುಷಿಗೋಸ್ಕರ, ಅವಕ್ಕೇನೂ ಬೇಕಾಗುವುದಿಲ್ಲ. ದೇವರಿಗೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡುವುದೂ ನಮಗೋಸ್ಕರ, ನಮ್ಮ ಖುಷಿಗೋಸ್ಕರ. ಅದು ದೇವರಿಗಾಗಿ ಅಲ್ಲ, ಅಲ್ಲವೇ ಅಲ್ಲ. ಮಕ್ಕಳು ದೇವರ ಸಮಾನ ಅನ್ನುತ್ತಾರೆ. ಅದಾವುದೋ ಸಿನೆಮ ಹಾಡೊಂದಿದೆಯಲ್ಲ, ಮಕ್ಕಳಿಗೂ ದೇವರಿಗೂ ಭೇದವಿಲ್ಲ, ಎಂದು. ಇವರು ಹೇಳುತ್ತಾರೆ, ‘ದೈವವತ್ ಪಂಚ ವರ್ಷಾಣಿ, ದಶವರ್ಷಾಣಿ ದಾಸವತ್,’ ಎಂದು. ಅಂದರೆ ಐದು ವರ್ಷ ಮಕ್ಕಳನ್ನು ದೇವರಂತೆ ಸಾಕಬೇಕು, ನಂತರ ಹತ್ತು ವರ್ಷ ಸೇವಕರಂತೆ ನಡೆಸಿಕೊಳ್ಳಬೇಕು. ನಂತರವೂ ಇದೆ ಕಣೆ, ಅದು ‘ಪ್ರಾಪ್ತೇತು ಷೋಡಶೇ ವರ್ಷೇ ಪುತ್ರಂ ಮಿತ್ರ ವದಾಚರೇತ್,’ ಎಂದು. ಅಂದರೆ ಬೆಳೆದ ಮಕ್ಕಳು ಮಕ್ಕಳಲ್ಲ, ಗೆಳೆಯರು ಎಂದು. ಇನ್ನೊಂದು ತಮಾಷೆಯ ಹೇಳಿಕೆಯೂ ಇದೆ, ಅದು ;ಪ್ರಾಪ್ತೇತು ಷೋಡಶೇ ವರ್ಷೇ, ಗಾರ್ಧಭೋಪ್ಯಪ್ಸರಾಯತೇ,’ ಅಂದರೆ ಹದಿ ಹರೆಯದಲ್ಲಿ ಕತ್ತೆಯೂ ಅಪ್ಸರೆಯಂತೆ ಕಾಣುತ್ತದೆ, ಎಂದು. ಆದರೆ ನನ್ನ ಮೊಮ್ಮಗಳು ನಿಜಕ್ಕೂ ಅಪ್ಸರೆಯೇ, ಸುಂದರಿಯರಲ್ಲಿ ಸುಂದರಿ. ಅದಕ್ಕೆ ನನಗೆ ಹೆಮ್ಮೆಯಿದೆ.
ನಮ್ಮ ಅನೇಕ ಕನಸುಗಳು ಸಾಕಾರಗೊಂಡಿರುವುದಿಲ್ಲ, ಅವನ್ನು ನಮ್ಮ ಕುಡಿಗಳು ಸಾಕಾರಗೊಳಿಸಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ನನ್ನ ಗಂಡನಿಗೆ ಈ ಮಗು ಕನ್ನಡದ ಸಾಹಿತಿಯಾಗಬೇಕು, ಹೆಸರು ಪಡೆಯಬೇಕು, ನಶಿಸುತ್ತಿರುವ ಭಾಷೆಯನ್ನು ಪುನರುಜ್ಜೀವನಗೊಳಿಸಬೇಕು ಎಂಬ ಆಸೆ. ಮಗಳು ಬೈದಳು. ನಿಮ್ಮ ಕಾಲದಲ್ಲಿಯೇ ಕನ್ನಡ ಸಾಯುತ್ತಿದೆ, ತನ್ನ ಕಾಲದಲ್ಲಿ ಬರೀ ಸ್ಕೆಲಟಿನ್ ಉಳಿದಿದೆ. ತಮ್ಮ ಮಗುವಿನ ಕಾಲದಲ್ಲಿ ಓದುವವರೂ ಇಲ್ಲ, ಬರೆಯುವವರೂ ಇಲ್ಲ. ಸಾಹಿತಿಗಳು ತಾವೇ ಬರೆದುಕೊಂಡು ತಾವೇ ಓದಿಕೊಂಡು ಖುಷಿಪಡಬೇಕು. ಅದರ ಬದಲು ತನ್ನ ಮಗಳನ್ನು ಡಾನ್ಸರ್ ಅನ್ನಾಗಿ ಮಾಡುತ್ತೇನೆ, ಟಿವಿಗಳಲ್ಲಿ ಬರುವ ರಿಯಾಲಿಟಿ ಷೋಗಳಲ್ಲಿ ಅದು ಮಿಂಚಬೇಕು, ಎಂದು.
ನಾನು ಅದನ್ನು ಒಪ್ಪಲಿಲ್ಲ. ‘ಆ ರಿಯಾಲಿಟಿ ಷೋಗಳಲ್ಲಿ ಬರೋದು ಡಾನ್ಸ್ ಅಲ್ಲ, ಸರ್ಕಸ್. ಸರ್ಕಸ್ ಅನ್ನಾದರೂ ಜನ ಎಷ್ಟು ಕಾಲ ನೋಡ್ತಾರೆ? ಅದರ ಬದಲು ನನ್ನ ಮೊಮ್ಮಗಳು ಸಿಂಗರ್ ಆಗಬೇಕು. ಅವಳಿಗೆ ಹಾಡುಗಳೆಂದರೆ ಇಷ್ಟ ಎಂಬುದು ಈಗಲೇ ಗೊತ್ತಾಗಿದೆ. ಅವಳ ಹಾಡುಗಳನ್ನು ಕೇಳುತ್ತಾ ಕೇಳುತ್ತಾ ನಾನು ನಿದ್ರಿಸಬೇಕು,’ ಎಂದೆ. ಕೊನೆಗೆ ನಮ್ಮಲ್ಲಿಯೇ ಒಂದು ಒಪ್ಪಂದವಾಯಿತು, ಮಗು ಬೆಳೆದು ತಾನೇನು ಆಗಲು ಇಷ್ಟಪಡುತ್ತದೆಯೋ ಅದೇ ಆಗಲಿ, ನಮ್ಮ ಭಾವನೆಗಳನ್ನು, ನಮ್ಮ ಆಸೆಗಳನ್ನು ಅದರ ಮೇಲೆ ಹೇರುವುದು ಬೇಡ, ಎಂದು.
ಕೇವಲ ಎರಡು ದಿನಗಳ ಹಿಂದೆ ಮಗುವಿಗೆ ಅದೇನೋ ಇಂಜಕ್ಷನ್ ಚುಚ್ಚಿಸಿಕೊಳ್ಳಬೇಕಾಗಿ ಬಂತು. ಗೋಧಿ ಬಣ್ಣದ ಎಳೆಯ ಚರ್ಮದ ತೊಡೆಗೆ ಎರಡೆರಡು ಚುಚ್ಚುಮುದ್ದು ಕೊಡುವುದನ್ನು ಈ ಕಣ್ಣಿಂದ ನೋಡಲಾಗಲಿಲ್ಲ. ಎದೆ ಚುರುಕ್ ಎನಿಸಿ, ಎಂತಹ ಕ್ರೌರ್ಯ ಅನಿಸಿಬಿಟ್ಟಿತ್ತು.
ಆ ಸಂಜೆಯೇ ಕಂದಮ್ಮನ ಮೈ ಎಲ್ಲಾ ಬಿಸಿಯಾಗಿಬಿಟ್ಟಿತು. ಮನೆಯ ಮೂರೂ ಜನ ತಮ್ಮ ಕೆಲಸಗಳನ್ನು ಮರೆತು ಅದರ ಸೇವೆಗೆ ನಿಯುಕ್ತರಾದೆವು. ಪ್ರತೀ ಕ್ಷಣದ ಮಾತುಗಳು, ಮಗುವಿನ ಜ್ವರ ಬಿಟ್ಟಿತೇ? ಚುಚ್ಚಿದ ಗಾಯ ಮಾಸಿತೇ? ಮಗು ನಿದ್ರೆ ಮಾಡಿತೇ? ಇತ್ಯಾದಿ. ಹಣೆಗೆ ತಣ್ಣಿರು ಬಟ್ಟೆ ಕಟ್ಟುವುದು, ತುಸು ಹೊತ್ತಿನ ನಂತರ ಅದನ್ನು ಬದಲಾಯಿಸುವುದು, ಜ್ವರದ ಔಷಧ ಕುಡಿಸುವುದು ಮುಂತಾದ ಕೆಲಸಗಳು ಆತಂಕದ ನಡುವೆಯೂ ಸೇರಿಕೊಂಡವು. ಮಗುವನ್ನು ಎತ್ತಿಕೊಳ್ಳುವಾಗಲಂತೂ ಅದಕ್ಕೆ ಚುಚ್ಚಿದ ಜಾಗವನ್ನು ತಪ್ಪಿಯೂ ಮುಟ್ಟದಂತೆ ಎಚ್ಚರವಹಿಸಬೇಕು. ನನ್ನ ಮಗಳು, ಅಂದರೆ ಪುಟ್ಟಿಯ ತಾಯಿ, ಅಳುತ್ತಿರುವ ಮಗುವಿನೆದುರು ನಿಂತು ಅದನ್ನು ಸಮಾಧಾನಿಸಲು ಯತ್ನಿಸುತ್ತಿದ್ದಳು, ‘ನಿಂಗೆ ಆ ಡಾಕ್ಟರು ಚುಂಯ್ಯ ಮಾಡಿದರಾ ಪುಟ್ಟಿ? ಅವರನ್ನು ಬಿಡೋಲ್ಲ, ಬಿಡೋದೇ ಇಲ್ಲ. ಅಜ್ಜಯ್ಯಂಗೆ ನಾಳೆನೇ ಹೇಳ್ತೀನಿ, ಆ ಡಾಕ್ಟರನ್ನ ಇಲ್ಲಿಗೆ ಎಳೆದುಕೊಂಡು ಬನ್ನಿ, ಅಂತ. ನಿನ್ನೆದುರೇ ಅವರ ಮೈ ಎಲ್ಲಾ ಚುಂಯ್ಯ ಚುಂಯ್ಯ ಮಾಡಿ, ತಪ್ಪಾಯ್ತು, ತಪ್ಪಾಯ್ತು ಎನ್ನುವ ಹಾಗೆ, ಲಬೊಲಬೊ ಎಂದು ಬಾಯಿ ಬಡಿದುಕೊಳ್ಳುವ ಹಾಗೆ ಮಾಡತೀನಿ, ನೀನು ಖುಷ್ ಖುಷಿಯಾಗಿರು. ಅವರು ಆಳುತ್ತಾ, ಅಳುತ್ತಾ, ಮರಕುತ್ತಾ, ಮರಕುತ್ತಾ ಇಲ್ಲ, ಇನ್ನು ಮೇಲೆ ಯಾವ ಮಕ್ಕಳ ತೊಡೆಗೂ ಚುಚ್ಚೋಲ್ಲ, ಚುಚ್ಚೋಲ್ಲ, ಇದೇ ಕೊನೆ, ಐ ಮೀನ್ ಲಾಸ್ಟ್ ಒನ್, ಎಂದು ಗೋಗರೆಯಬೇಕು,’ ಎಂದೆಲ್ಲಾ ಹೇಳಿದಳು. ಮಗುವಿಗೇನೂ ಅರ್ಥವಾಗೋಲ್ಲ, ಹೂಂ, ಊಂ, ಎಂದೆಲ್ಲಾ ಧ್ವನಿ ಹೊರಡಿಸಿತು. ಅದಕ್ಕೆ ನಾವೇ ಅರ್ಥ ಬರಿಸಿಕೊಳ್ಳಬೇಕು. ಬರೀ ಸುಳ್ಳು, ಸುಳ್ಳೇ ಹೇಳಬೇಕು ಮಕ್ಕಳೆದುರು.
ಅದು ಮತ್ತೊಮ್ಮೆ ರಿಪೀಟ್ ಆಯಿತು. ಅದು ಅದರ ಕಿವಿ ಚುಚ್ಚೋದು. ಆ ಎಳೆಯ, ಹೊಂಬಣ್ಣದ ಕರ್ಣದ್ವಯಗಳನ್ನು ಕರುಣೆಯಿಲ್ಲದೇ ದಬ್ಬಣದಿಂದ ಚುಚ್ಚಿ, ಅದಕ್ಕೆ ‘ಟಿಕ್ಕಿ’ ತೂರಿಸುವ ಆ ಕ್ರಿಯೆಯನ್ನು ಕಣ್ಣುಗಳಿಂದ ನೋಡುವುದು ಸಾಧ್ಯವಿಲ್ಲ ಗೆಳತಿ. ಮೊದಲೇ ನನಗೆ ರಕ್ತ ಎಂದರೆ ಭಯ. ಆದರೂ ಮಾಡಿಸಬೇಕಲ್ಲ. ಕಿವಿ ಚುಚ್ಚೋದಕ್ಕೆ ಅರ್ಥವಿದೆಯಂತೆ. ಮೊದಲು ಹುಡುಗರಿಗೂ ಚುಚ್ಚುತ್ತಿದ್ದರು. ಹಾಗೆ ಮಾಡಿದರೆ ಮೆದುಳು ಚುರುಕಾಗುತ್ತದಂತೆ. ಮೊದಲೆಲ್ಲಾ ತಪ್ಪು ಮಾಡಿದ ಮಕ್ಕಳಿಗೆ ಕಿವಿ ಹಿಂಡುತ್ತಿದ್ದರು, ಕುಕ್ಕರು ಕಾಲಿನಲ್ಲಿ ಕುಳ್ಳಿರಿಸುತ್ತಿದ್ದರು. ಹಾಗೆ ಶಿಕ್ಷೆ ತೆಗೆದುಕೊಂಡವರಲ್ಲಿ ನಾನು ಮುಂಚೂಣಿಯಲ್ಲಿದ್ದೆ. ಕಿವಿಯನ್ನು ಹಿಸುಕಿದರೆ, ಎಳೆದುಕೊಂಡರೆ ಬುದ್ಧಿ ಚುರುಕಾಗುತ್ತದಂತೆ. ಹೀಗೆ ಏನೇನೋ ಅನ್ನುತ್ತಾರಲ್ಲ, ಇರಲಿ, ಅಂತೂ ನನ್ನ ಪುಟಾಣಿಯನ್ನು ‘ಕರ್ಣಾಭರಣ ಸುಂದರಿ’ಯನ್ನಾಗಿ ಮಾಡಿಬಿಟ್ಟೆವು.
ಮಗು ಮೊನ್ನೆ ಮೊನ್ನೆ ಬಂದಿದ್ದರೂ ಅದೆಷ್ಟು ಬೇಗ ಮೂರು ತಿಂಗಳು ಕಳೆಯಿತು. ತಿಂಗಳೂ ಕಳೆಯುತ್ತವೆ, ವರ್ಷಗಳೂ ಸಾಗುತ್ತವೆ, ನಾವು ಮುದುಕರಾಗುತ್ತಲೇ ಹೋಗುತ್ತೇವೆ. ಶತಮಾನಂ ಭವತಿ ಶತಾಯುಃ ಎಂಬ ಆಶೀರ್ವಾದದಂತೆ ನೂರು ವರ್ಷ ಬದುಕುವುದೆಂದರೆ ಹೆಚ್ಚು ಕಾಲ ಮುದುಕರಾಗಿರುವುದು ಎಂದು ಅರ್ಥ. ಇಂದಿನ ಮಕ್ಕಳೇ ಮುಂದಿನ ಮುದುಕ-ಮುದುಕಿಯರು, ಎಂದು ನನ್ನ ಗಂಡ ಹೇಳುತ್ತಿದ್ದರು.
ನನ್ನ ಗಂಡ ‘ಧಿಂ ರಂಗ’ ಎಂದ ಂತೆ ಸೋಫಾದ ಮೇಲೆ ಬೋಲ್ಟ್ ಹಾಕಿದವರಂತೆ ಕುಳಿತು ಟಿವಿಯಲ್ಲಿ ಕಣ್ಣು ನೆಟ್ಟು ಬಿಟ್ಟರೆ ಅಲ್ಲಿಂದ ಚಲಿಸುವುದೇ ಇಲ್ಲ. ಅಲ್ಲಿಗೇ ಕಾಫಿ ಸಪ್ಲೆöÊ ಆಗಬೇಕು, ಅಲ್ಲಿಗೇ ತಿಂಡಿ ಸರಬರಾಜಾಗಬೇಕು. ಆ ಲೋಟ-ತಟ್ಟೆಗಳನ್ನು ನಾನೇ ತೆಗೆದುಕೊಂಡು ಹೋಗಿ ಸಿಂಕ್‌ಗೆ ಹಾಕಬೇಕು. ಅವರ ಈ ದಿನಚರಿಯು ಮನೆಗೆ ಮಗು ಬಂದ ನಂತರ ಬದಲಾಗಿಬಿಟ್ಟಿತು. ಈ ಮಗುವಿನ ಉಪಚಾರದಿಂದಾಗಿ ನನಗೆ ಅಡುಗೆ ಮನೆಯ ಕಡೆಗೆ ಸರಿಯಾಗಿ ಗಮನ ಕೊಡಲಾಗುತ್ತಿಲ್ಲ, ಹೊತ್ತಿಗೆ ಸರಿಯಾಗಿ ಅವರ ಹೊಟ್ಟೆಗೆ ಹಾಕಲಾಗುತ್ತಿಲ್ಲ. ಅವರಿಗೆ ನನ್ನ ಶ್ರಮ ತಿಳಿಯಿತೋ ಏನೋ, ಅಡುಗೆ ಕೆಲಸವನ್ನು ತಾನೇ ಮಾಡುತ್ತೇನೆ, ಎಂದರು. ನನಗೆ ಮೊದಲು ನಗು ಬಂದರೂ ನಂತರ ಖುಷಿಯಾಯಿತು. ಮೊದಮೊದಲು ಅವರಿಗೆ ಯಾವುದು ಉದ್ದಿನ ಬೇಳೆ, ಯಾವುದು ಹೆಸರು ಬೇಳೆ, ಯಾವುದು ಕಡಲೆಬೇಳೆ, ಯಾವುದು ತೊಗರಿ ಬೇಳೆ ಎಂದು ಪರಿಚಯಿಸಿದೆ. ಕಿಚನ್‌ನಲ್ಲಿ ಯಾವ ಯಾವ ಸಾಮಾನುಗಳು ಎಲ್ಲೆಲ್ಲಿ ಇವೆ ಎಂದು ವಿವರಿಸಿದೆ. ಹೇಗೆ ಪಾಕಕ್ರಿಯೆಯನ್ನು ಮಾಡಬೇಕು ಎಂದು ಹೇಳಲು ಹೋದರೆ ಅವರೇನೆಂದರು ಗೊತ್ತಾ? ‘ಬೇಕಾಗಿಲ್ಲ, ಯುಟ್ಯೂಬ್‌ನಲ್ಲಿ ಎಲ್ಲಾ ಸಿಗುತ್ತದೆ, ವಿಡಿಯೋ ಮೂಲಕ’ ಎಂದು. ನಾನು ಸುಮ್ಮನಾದೆ. ಆದರೂ ಅವರು ಕೇಳದೆಯೇ ಪುಕ್ಕಟೆ ಸಲಹೆಗಳನ್ನು ಕೊಡುತ್ತಿದ್ದೆ. ‘ನೀನು ಸುಮ್ಮನೆ ಇರು, ನನಗೆ ಏನು ಗೊತ್ತೋ ಹಾಗೆ ಮಾಡುತ್ತೇನೆ. ಇಲ್ಲವಾದರೆ ನೀನೇ ಕುಕ್ಕಿಸು,’ ಎಂದ ಮೇಲೆ ಬಾಯಿಗೆ ಬಿರಟೆ. ಟೆಕ್ನಾಲಜಿ ಹೇಗೆಲ್ಲಾ, ಏನೆಲ್ಲಾ ಕಲಿಸುತ್ತದೆ ಅಲ್ಲವಾ?
ಮೊನ್ನೆ ತರಕಾರಿ ಹೆಚ್ಚಿ, ಕುಕ್ಕರಿನಲ್ಲಿ ಇಟ್ಟು, ಅದು ಒಂದು ಬಾರಿ ಶಿಳ್ಳೆ ಹಾಕಿದ ನಂತರ ಅವರಿಗೆ ಗೊತ್ತಾಗಿದ್ದು, ಸಾಂಬಾರಿಗೆ ಬೇಳೆಯನ್ನೇ ಹಾಕಿಲ್ಲ, ಎಂದು. ಅವರೇನು ಮಾಡಿದರು ಗೊತ್ತಾ? ತೊಗರಿ ಬೇಳೆಯನ್ನು ನೀರಿನಲ್ಲಿ ನೆನೆಸಿ, ಮಿಕ್ಸಿಯಲ್ಲಿ ರುಬ್ಬಿ ತರಕಾರಿಗೆ ಹಾಕಿ ಕುದಿಸಿದರು. ನಾನು ರೇಗಿದೆ, ತಿನ್ನೋದು ಒಂದು ಹೊತ್ತು, ಸರಿಯಾಗಿ ಅಡುಗೆ ಮಾಡಬಾರದೇ, ಎಂದು. ಮುಖ ಸಿಂಡರಿಸಿಕೊ ಂಡೇ ಅನ್ನದ ಮೇಲೆ ತುಸುವೇ ಸಾಂಬಾರು ಹಾಕಿಕೊಂಡು ನಾಲಿಗೆ ಇಟ್ಟರೆ, ಹೇಳುತ್ತೇನೆ ಗೆಳತಿ, ಅದೂ ಒಂದು ಥರ ನಾಲಗೆಗೆ ಹಿತವಾಗಿತ್ತು ಕಣೇ. ಬೇಳೆಯನ್ನು ಹಾಗೆಯೇ ಬೇಯಿಸಿದರೆ ಒಂದು ರುಚಿ, ರುಬ್ಬಿ ಬೇಯಿಸಿದರೆ ಇನ್ನೊಂದು ರುಚಿ. ಬಿಡುತ್ತೇನೆಯೇ? ಗಂಡನನ್ನು ಅವರ ಪಾಕ ಪ್ರಾವೀಣ್ಯತೆಗೆ ಹೊಗಳಿದೆ. ಅವರೇನು ಎಂದರು ಗೊತ್ತಾ? ಉಪ್ಪು-ಹುಳಿ-ಖಾರ ಸರಿಯಾಗಿ ಬಿದ್ದರೆ ಏನಿದ್ದರೂ ರುಚಿಯಾಗಿರುತ್ತದೆ, ಎಂದು. ಎಷ್ಟೋ ಕಾಲದ ನಂತರ ನನ್ನ ಗಂಡನ ಬಗ್ಗೆ ನನಗೆ ಪ್ರೀತಿ ಮೂಡಿತು.
ಅವರಿಗೆ ನೆನಪಿನ ಶಕ್ತಿ ತುಸು ಊನ. ಮೊನ್ನೆ ಒಲೆಯ ಮೇಲೆ ಸಾಂಬಾರು ಕುದಿಯಲಿಟ್ಟು ಟಿವಿಲಿ ಬರುವ ಕಮೆಡಿ ಶೋ ನೋಡುತ್ತಿದ್ದರು. ಹುಳಿ ಕುದಿದು ತಳ ಹಿಡಿದುಬಿಟ್ಟಿತ್ತು. ನಾನು ಮನೆಯಲ್ಲಿ ಏನೋ ವಾಸನೆ ಬರುತ್ತದಲ್ಲ ಎಂದು ನೋಡಿದ ಮೇಲೆಯೇ ವಿಷಯ ಗೊತ್ತಾಗಿದ್ದು. ಮತ್ತೇನು ಮಾಡುವುದು, ಆ ದಿನ ತಳ ಹಿಡಿದ ಸಾಂಬಾರನ್ನೇ, ಮೇಲೊಂದಿಷ್ಟು ತುಪ್ಪ ಸುರಿದು ತಿಂದಿದ್ದಾಯಿತು. ಈಗಿನ ದುಬಾರಿಯ ಕಾಲದಲ್ಲಿ ವೇಸ್ಟ್ ಮಾಡಲು ಆಗುತ್ತದೆಯೇ?
ಅವರು ಬಲು ಲೆಕ್ಕಾಚಾರದ ಗಿರಾಕಿ. ಮೊನ್ನೆ ಲೆಕ್ಕ ಹಾಕುತ್ತಿದ್ದರು. ಮೂರು ಜನರಿಗೆ ಅಡುಗೆ ಮಾಡಲು ದಿನಕ್ಕೆ ಮೂರು ಗಂಟೆ ಬೇಕು. ಅಂದರೆ ಒಬ್ಬರಿಗೆ ಒಂದು ಗಂಟೆ, ಸರಾಸರಿ. ಪ್ರಪಂಚದಲ್ಲಿ ಎಂಟುನೂರು ಕೋಟಿ ಜನರಿದ್ದಾರೆ. ಈ ಅಂಕಿ-ಅ ಂಶಗಳನ್ನು ಗಣನೆಗೆ ತೆಗೆದುಕೊಂಡರೆ ದಿನಕ್ಕೆ ಎಂಟು ನೂರು ಕೋಟಿ ಮ್ಯಾನ್ ಅರ‍್ಸ್ ಕಿಚನ್‌ನಲ್ಲಿಯೇ ಕಳೆದುಹೋಗುತ್ತದೆ. ವಾಟ್ ಎ ವೇಷ್ಟ್. ಅಷ್ಷೇ ಹೊತ್ತನ್ನು ಪ್ರಾಡಕ್ಟಿವಿಟೀಗೆ ಬಳಸಿಕೊಂಡರೆ ಪ್ರಪಂಚವನ್ನು ಎಲ್ಲಿಗೋ ಕರೆದುಕೊಂಡು ಹೋಗಬಹುದಾಗಿತ್ತು, ಎಂದರು. ಎಲ್ಲಿಗೆ ಕರೆದುಕೊಂಡು ಹೋಗಬೇಕು ಎಂದು ಕೇಳಿದೆ, ಉತ್ತರವಿಲ್ಲ.
ಅವರು ಉದಾಹರಣೆಗಳನ್ನೂ ಕೊಟ್ಟರು. ಹಾವು ಒಂದು ಬಾರಿ ಹೊಟ್ಟೆ ತುಂಬಾ ಆಹಾರ ಸೇವಿಸಿದರೆ ಮತ್ತೆ ಮೂರು ತಿಂಗಳು ಏನೂ ತಿನ್ನುವುದಿಲ್ಲ. ನಮ್ಮ ವಿಜ್ಞಾನಿಗಳು ಹಾವಿನ ಜೀನ್ಸ್ ಅನ್ನು ಮನುಷ್ಯನಿಗೆ ಸೇರಿಸಿ, ಮಾನವನಿಗೆ ಮೂರು ತಿಂಗಳಿಗೊಮ್ಮೆ ಮಾತ್ರ ಹಸಿವಾಗುವಂತೆ ಮಾಡಬೇಕು, ಎಂದು ವಾದಿಸಿದರು. ಅಕಸ್ಮಾತ್ ಅದು ನಡೆದು, ಮನುಷ್ಯ ವರ್ಷಕ್ಕೆ ನಾಲ್ಕು ಬಾರಿ ಮಾತ್ರ ಊಟ ಮಾಡುವಚಿತಾದರೆ ಏನಾಗುತ್ತೆ ಎಂದು ಯೋಚಿಸತೊಡಗಿದೆ.
ಮೊತ್ತ ಮೊದಲು ರೆಸ್ಟಾರೆಂಟ್‌ಗಳು, ಈಟ್‌ಔಟ್‌ಗಳು, ಪಬ್-ಬಾರ್‌ಗಳು, ಮುಚ್ಚಿಹೋಗುತ್ತವೆ. ಪಾಕಪ್ರವೀಣರು, ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಬಿಡು, ಅವರಾದರೂ ಯಾಕೆ ಸಂಪಾದಿಸಬೇಕು? ಅಲ್ಲವೇ? ತಮ್ಮ ಬೆಳೆಗಳನ್ನು ಕೊಳ್ಳುವವರಿಲ್ಲದ ಕಾರಣ ಕೃಷಿಕರು ಅಕ್ಕಿ, ಬೇಳೆ, ಧಾನ್ಯ, ತರಕಾರಿಗಳನ್ನು ಬೆಳೆಯುವುದಿಲ್ಲ. ಜಾಗ ಹಾಳುಬಿದ್ದು ಊರೆಲ್ಲಾ ಕಾಡಾಗುತ್ತದೆ. ಮಾಡಲು ಬೇರೇನೂ ಕೆಲಸವಿರದ ಕಾರಣ ಜನ ತಮ್ಮö ತಮ್ಮಲ್ಲಿಯೇ ಜಗಳಾಡತೊಡಗುತ್ತಾರೆ.
ಮದುವೆ ಮೊದಲಾದ ಸಮಾರಂಭಗಳ ಕತೆಯೇ ಬೇರಾಗುತ್ತದೆ. ಅಲ್ಲಿ ಭೋಜನಗಳಿರುವುದಿಲ್ಲ. ಯಾಕೆಂದರೆ ಉಣ್ಣುವವರೇ ಇಲ್ಲವಲ್ಲ. ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ.’ ಎಂಬ ದಾಸರ ಪದ ಔಟ್‌ಡೇಟೆಡ್ ಆಗುತ್ತದೆ. ಆಶನ ವಸನವಿದ್ದವನಿಗೆ ವ್ಯಸನ ಯಾಕೆ ಎಂಬ ಗಾದೆಯಂತೂ ಮೌಲ್ಯ ಕಳೆದುಕೊಳ್ಳುತ್ತದೆ. ‘ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ,’ ಎಂಬ ಸಿನೆಮಾ ಹಾಡನ್ನು ಕೇಳಿ ಜನ ಬಿದ್ದು ಬಿದ್ದು ನಗುತ್ತಾರೆ.
ಒಂದು ದಿನ ತಮಾಷೆಯೆಂಬ ಂತೆ ಹೇಳಿದರು, ‘ನೀನು ಆಗಾಗ ಅಡುಗೆ ಮನೆಗೆ ಬರುತ್ತಿರಬೇಕು. ಇಲ್ಲವಾದರೆ ಮನೆಯ ಯಾವ ಭಾಗದಲ್ಲಿ ಕಿಚನ್ ಇದೆ ಎಂಬುದೇ ಮರೆತುಹೋಗುತ್ತೆ,’ ಎಂದು. ನಾನು ಬಿಡುತ್ತೇನೆಯೇ? ‘ಮರೆತರೆ ಗೂಗಲ್ ಹೆಲ್ಪ್ ತೆಗೆದುಕೊಂಡು ತಿಳಿದುಕೊಳ್ಳುತ್ತೇನೆ,’ ಎಂದೆ.
ನನ್ನ ಗಂಡ ಅಡುಗೆ ಮಾಡೋದು ಇರಲಿ, ಸಿಂಕಿನಲ್ಲಿರುವ ಪಾತ್ರೆಗಳನ್ನೂ ತೊಳೆಯಲು ಶುರು ಮಾಡಿದ್ದಾರೆ. ತೊಳೆದು, ಬಾಸ್ಕೆಟ್‌ನಲ್ಲಿ ಬುಡ ಮೇಲಾಗಿ ಇಟ್ಟು, ನೀರೆಲ್ಲಾ ಇಳಿದುಹೋದ ಮೇಲೆ ಆಯಾಯಾ ಜಾಗದಲ್ಲಿ ಇಡುತ್ತಿದ್ದಾರೆ. ಗಂಡಸೊಬ್ಬ ಮನೆಯ ಪಾತ್ರೆಗಳನ್ನು ತೊಳೆಯುವ ದೃಶ್ಯವನ್ನು ಕನ್ನಡಕದಿಂದ ಶೃಂಗರಿತ ಈ ನಯನದ್ವಯಗಳಿಂದ ನೊಡುವುದಕ್ಕೆ ತುಂಬಾ ಬೇಸರವಾಗುತ್ತದೆ ಕಣೇ. ಆದರೆ ನನಗೆ, ಮಗುವನ್ನು ನೋಡಿಕೊಳ್ಳುವ, ಮಗಳ ಬಾಣಂತಿತನ ಮಾಡುವ ಈ ಕಾಲದಲ್ಲಿ ಅವರ ಸಹಾಯವನ್ನು ನಿರಾಕರಿಸಲಾಗುತ್ತಿಲ್ಲ. ನಾನು ಅವರ ಮನಸ್ಸಿಗೆ ನೋವಾಗಬಾರದೆಂದು ಅವರು ಎಲ್ಲಾ ಪಾತ್ರೆ ಪರಡಿಗಳನ್ನು ತೊಳೆದಿಟ್ಟ ಮೇಲೆ ಹೇಳುತ್ತಿದ್ದೆ, ‘ಅಯ್ಯೋ, ನೀವ್ಯಾಕೆ ಪಾತ್ರೆ ತೊಳೆದಿರಿ? ನಾನೇ ತೊಳೆಯುತ್ತಿದ್ದೆನಲ್ಲ,’ ಎಂದು. ಅದಕ್ಕೆ ಮೊದಲು ಅವರು ತೊಳೆಯುವುದನ್ನು ಕಂಡರೂ ಕಾಣಿಸದವರ ಹಾಗೆ ಹೋಗುತ್ತಿದ್ದೆ, ಎನ್ನು.
ದಿನಾಲೂ ಸಂಜೆ ನಾಳೆಗೆ ಏನು ತಿಂಡಿ ಮಾಡುವುದು ಎಂಬ ಚಿಂತೆ, ಬೆಳಗ್ಗೆ ಮಧ್ಯಾಹ್ನಕ್ಕೆ ಏನು ಬೇಯಿಸಿ ಹಾಕುವುದು ಎಂಬ ಯೋಚನೆ, ಮಧ್ಯಾಹ್ನ ರಾತ್ರಿಗೇನು ಮಾಡುವುದು ಎಂಬ ತಲೆ ಬಿಸಿ. ಈ ಮನುಷ್ಯನ ಹೊಟ್ಟೆಯೋ, ತುಂಬಲಾರದ ಚೀಲವೋ, ಗಾದೆಯೇ ಇಲ್ಲವೇ, ಹಡಗು ತುಂಬೋಕೆ ಹೋದವನು ಬಂದ, ಹೊಟ್ಟೆ ತುಂಬಲು ಹೋದವನು ಬರಲೇ ಇಲ್ಲ, ಎಂದು. ಈ ತಲೆ ಬಿಸಿ ಸದ್ಯಕ್ಕಂತೂ ಗಂಡನಿಗೆ ವರ್ಗಾಯಿಸಲ್ಪಟ್ಟಿದೆ. ‘ಅದು ಏನೂ ಗೊಣಗದೇ ಮಾಡುತ್ತೆ ಕಣೇ…’
ಅವರು ಹೇಳಿಕೊಳ್ಳುತ್ತಿದ್ದರು, ತಾನು ಈ ಮನೆಯ ಯಜಮಾನ, ಕಮ್ ಅಡುಗೆಭಟ್ಟ, ಕಮ್ ಸಾಮಾನು ತರುವ ಭಟ, ಕಮ್ ಫೈನಾನ್ಷಿಯರ್, ಎಲ್ಲಾ, ಎಂದು. ಅದು ಮಾತ್ರವಲ್ಲ, ಅಡುಗೆ ಮನೆಯೊಳಗೆ ಹೊಕ್ಕರೆಂದರೆ ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಬೇಕು ಅವರಿಗೆ. ಮೊದಲು ಎಲ್ಲಾ ಡಬ್ಬಿಗಳನ್ನೂ ಸಾಲಾಗಿ ಇರಿಸಿಕೊಂಡು, ಬೇಕಾದ ತರಕಾರಿಗಳನ್ನು ಸಿದ್ಧ ಮಾಡಿಕೊಂಡು, ನಂತರವೇ ಒಲೆ ಅಂಟಿಸಿ, ಪಾಕ ಕ್ರಿಯೆ ಶುರುಮಾಡುತ್ತಾರೆ. ಅಡುಗೆಗೆ ಒಂದು ಐಟಂ ಕಡಿಮೆಯಾದರೂ ಅವರು ಸಹಿಸರು. ಅದೊಂದು ದಿನ ಕರಿಬೇವು ಸೊಪ್ಪು ಖಾಲಿಯಾಯಿತೆಂದು ಕಿಲೋಮೀಟರ್ ದೂರ ಇರುವ ತರಕಾರಿ ಅಂಗಡಿಗೆ ಹೋಗಿ ಅದನ್ನು ತಂದವರೇ.
ಇರಲಿ, ಮನೆಯಲ್ಲಿ ಇರುವ ಸಾಮಾನುಗಳ ಡಬ್ಬಗಳಿಗೆಲ್ಲಾ ಲೇಬಲಿಂಗ್ ಮಾಡಿಬಿಟ್ಟರು. ಇಲ್ಲಿಯ ತನಕ ಅವನ್ನು ಹೇಗೆ ಹೇಗೋ ಇಡುತ್ತಿದ್ದೆ, ಇವರು ಅವನ್ನು ಆಲ್ಫಾಬೆಟಿಕಲ್ ಆರ್ಡರ್‌ನಲ್ಲಿ ಇಟ್ಟರು. ಆದರೂ ಅವರಿಗೆ ಗೊಂದಲ, ದನಿಯಾ ಎಂದು ಕರೆಯಬೇಕೇ, ಕುತ್ತುಂಬರಿ ಬೀಜ ಎಂದು ಹೆಸರಿಸಬೇಕೇ, ಇತ್ಯಾದಿ. ಮನೆಯ ಸಾಮಾನುಗಳ ಪಟ್ಟಿ ಮಾಡಿ, ನಂಬರಿ ಂಗ್ ಮಾಡಿ ಗೋಡೆಗೆ ಅದನ್ನು ಅಂಟಿಸಿದರು. ಆ ಪಟ್ಟಿ ನೋಡಿ ದಿನಸಿ ಸಾಮಾನು ಹುಡುಕುವುದಕ್ಕಿಂತ ಮೊದಲಿದ್ದ ಕ್ರಮವೇ ಸುಲಭ ಎನಿಸಿದರೂ ಅವರ ಮನಸ್ಸನ್ನು ನೋಯಿಸಲು ಇಷ್ಟವಾಗಲಿಲ್ಲ. ನನಗಂತೂ ಅವ್ಯವಸ್ಥೆಯೇ ಸುವ್ಯವಸ್ಥೆ.
ಮುಂದುವರೆಯುವುದು….
–ಸೂರಿ ಹಾರ್ದಳ್ಳಿ
