ಮಗು, ನೀ ನಗು (ಭಾಗ 4): ಸೂರಿ ಹಾರ್ದಳ್ಳಿ

ಬಂದವರಾರಾದರೂ ಮುಖಕ್ಕೆ ಸೆಂಟೋ, ಪೌಡರೋ ಹಾಕಿದರೆ ಮಗು ಅವರ ಕೈಯಲ್ಲಿ ಇದ್ದರೂ ಇತ್ತ ಮುಖ ತಿರುಗಿಸುತ್ತದೆ. ಅದರೆದುರು ನಾವು ಪರಿಮಳದ ವೆಜೆಟೇಬಲ್ ಪಲಾವೋ, ಬಿರ್ಯಾನಿಯೋ ತಿನ್ನುವಾಗ ಅದು ನಮ್ಮತ್ತ ನೋಡಿದರೆ ನಾವು ಅದಕ್ಕೆ ಕೊಡದೇ ಮೋಸ ಮಾಡುತ್ತಿದ್ದೇವೆ, ಎಂದು ದುಃಖವಾಗುತ್ತದೆ. ‘ನೀನು ದೊಡ್ಡವಳಾಗು ಪುಟ್ಟಿ, ನಂತರ ನಿನಗೆ ಪಲಾವ್, ಪಿಜ್ಜಾ, ಪಾಸ್ತಾ, ಏನು ಬೇಕೋ ಕೊಡಿಸುತ್ತೇವೆ,’ ಎಂದು ಮಾತು ಕೊಡುತ್ತೇನೆ. ನನ್ನ ಗಂಡ ಮಾತ್ರ ಮಗುವಿಗೆ ಈ ಗೊಬ್ಬರಗಳನ್ನೆಲ್ಲಾ ಕೊಡಬೇಡ, ಅವು ಜಂಕ್ ಫುಡ್‌ಗಳು. ಅವೆಲ್ಲಾ ಮೈದಾ ಬೇಸು. ಆರೋಗ್ಯ ಹಾಳು ಮಾಡುತ್ತವೆ, ಎಂದು ಎಚ್ಚರಿಸುತ್ತಾ, ಇವೆಲ್ಲಾ ಒಂದು ರೀತಿಯ ವಿಷಗಳು, ವಿದೇಶದವು. ಒಂದು ಪಫ್‌ದಲ್ಲಿ ಮೂವತ್ತೆöÊದು ಗ್ರಾಂ ಡಾಲ್ಡಾ ಇರುತ್ತದೆ. ಅದು ತುಂಬಾ ಕೆಟ್ಟದ್ದು. ಇಲ್ಲಿ, ನಾವು ಇರುವಲ್ಲಿ ಯಾವ ತರಕಾರಿ-ಹಣ್ಣು ಬೆಳೆಯುತ್ತೇವೆಯೋ, ನಮ್ಮ ಅಜ್ಜಿ ಅಜ್ಜ ಏನೇನು ತಿನ್ನುತ್ತಿದ್ದರೋ, ಅದೇ ದೇಹಕ್ಕೆ ಸೂಕ್ತ ಎಂದು ಹೇಳುತ್ತಿದ್ದರು. ಏನೂ ತಿಳಿಯದ ಮಗುವಿನೆದುರು ಇದನ್ನೆಲ್ಲಾ ಹೇಳುವುದರಿಂದ ಏನು ಲಾಭವೋ ಕಾಣೆ.

ಮೇಲಿನ ಕತೆ ಇನ್ನೊಂದು ತಿರುವು ಪಡೆಯಿತು. ನನ್ನ ಮಗಳ ನಾದಿನಿ ಊರಿಗೆಲ್ಲಾ ಹೇಳಿಕೊಂಡು ಬಂದರ ಂತೆ, ‘ಅಳಿಯನ ಬಗ್ಗೆ, ಅವರ ಕುಟುಂಬದ ಬಗ್ಗೆ ಮಗುವಿನ ತಲೆಯಲ್ಲಿ ನೆಗೆಟಿವ್ ಯೋಚನೆಯನ್ನು ತುಂಬಿಬಿಟ್ಟಿದ್ದಾರೆ. ಅದಕ್ಕೇ ನಾವು ಯಾರೇ ಹೋದರೂ ಜೋರಾಗಿ ಅಳುತ್ತದೆ. ಅಲ್ಲ, ಈ ಪಾಟಿ ಅವಮಾನ ಮಾಡಲು ಅವರಿಗೆ ಮನಸ್ಸಾದರೂ ಹೇಗೆ ಬರುತ್ತದೆ,’ ಇತ್ಯಾದಿ. ಅಲ್ಲವೇ, ಮಗುವನ್ನು ಕಂಟ್ರೋಲ್ ಮಾಡುವುದು, ಅದರೆ ತಲೆಗೆ ಭಾವನೆಗಳನ್ನು ತುಂಬುವುದು ನಮ್ಮ ಕೈಯಲ್ಲಿ ಇದೆಯೇ? ಕೆಲವರ ನಾಲಿಗೆಯೇ ಹಾಗೆ, ಎಲ್ಲೆಲ್ಲೋ ಸುಲಭವಾಗಿ ಸುತ್ತುತ್ತದೆ.

ಮೊನ್ನೆ ಮಗುವಿನ ಬಾಯಿಗೆ ಹಾಲಿನ ಬಾಟಲಿಟ್ಟು, ನಾನು ಮತ್ತು ನನ್ನ ಮಗಳು ಪಕ್ಕದಲ್ಲಿಯೇ ಕುಳಿತು ಕಾಫಿ ಕುಡಿಯುತ್ತಿದ್ದೆವು. ನನ್ನ ಗಂಡ ಹೇಳಿದರು, ‘ಇದು ಮೋಸ ಅಲ್ಲವಾ? ನೀವು ಅದರೆದುರೇ ಕುಳಿತು ಪರಿಮಳ ಬರುವ ಕಾಫಿ ಸೇವಿಸೋದು, ಅದಕ್ಕೆ ಎಂದಿನ ಹಾಲು. ಇದು ಸರಿಯಲ್ಲ. ಅದಕ್ಕೆ ಮಾತನಾಡಲು ಬಂದಿದ್ದರೆ, ತನ್ನನ್ನು ಮಂಗ ಮಾಡುತ್ತಿದ್ದೀರಿ ಎಂದು ಗೊತ್ತಾಗಿ, ತನಗೂ ಕಾಫಿ ಕೊಡಿ, ಎಂದು ಹೇಳುತ್ತಿದ್ದಳು,’ ಎಂದು.

ಅದಿರಲಿ, ನನ್ನ ಮಗಳಿಗೆ ಮೊಲೆ ಹಾಲು ಬರದ ಕಾರಣ, ಎಲ್ಲಿ ಬರುತ್ತದೆ ಬಿಡು, ಜಂಕ್ ಫುಡ್ ತಿಂದು, ಆರೋಗ್ಯ ಹಾಳುಮಾಡಿಕೊಂಡು, ನಂತರ ತಿಂಡಿಯಷ್ಟೇ ಮಾತ್ರೆ ತಿಂದು ಇರುತ್ತಿದ್ದಳು ಅವಳು, ಮಗುವಿಗೆ ಡಬ್ಬದ ಹಾಲು ಕೊಡಬೇಕಾಗಿ ಬಂದಿದೆ. ಒಂದು ಬಾಟಲಿ ಪುಡಿ ನಾಲ್ಕೇ ದಿನಕ್ಕೆ. ಅದರ ದರವೋ, ರಾಮ ರಾಮಾ, ಹತ್ತಿರ ಹತ್ತಿರ ಸಾವಿರ ರೂಪಾಯಿಗಳು. ಮೊದಲು ಒಳಲೆಯಿಂದ ಹಾಲು ಕುಡಿಸುತ್ತಿದ್ದೆವು ಮತ್ತು ಈಗ ಹಾಲಿನ ಬಾಟಲಿಯಿಂದ. ಮೊನ್ನೆ ಎದುರು ಮನೆಯ ಬಾಣಂತಿಯಿ ಂದ ಒಂದು ಬಾಟಲಿ ಮೊಲೆ ಹಾಲು ತರಿಸಿ ಕುಡಿಸಲು ಹೋದರೆ ಕುಡಿಯುತ್ತದೆಯೇ? ಇಲ್ಲ, ನಿಪ್ಪಲ್ ಅನ್ನು ಬಾಯಿಯಿಂದ ಹೊರಗೆ ತಳ್ಳುತ್ತಿತ್ತು. ನಂತರ ತಿಳಿಯಿತು, ಬಾಟಲಿಲಿ ಕೊಡುತ್ತಿದ್ದ ಪೌಡರ್ ಹಾಲಿನ ರುಚಿ ಮೊಲೆ ಹಾಲಿನಲ್ಲಿ ಇಲ್ಲ ಎಂದು. ನಾನೇನು ಮಾಡಿದೆ ಗೊತ್ತಾ? ಮೊದಲು ಮೊದಲು ಕೊಡುತ್ತಿದ್ದ ಹಾಲಿನ ಬಾಟಲಿ ಬಾಯಿಗಿಟ್ಟು, ತುಸು ಹೊತ್ತಿನ ನಂತರ ಅದನ್ನು ತೆಗೆದು ಹೊಸ ಬಾಟಲಿಯನ್ನು ಬಾಯಿಗಿಟ್ಟೆ. ಹೀಗೆ ಅದನ್ನು ‘ಮಂಕು ದಿಣ್ಣೆ’ ಮಾಡಿದೆ. ನಂತರ ಅದನ್ನು ಹೇಳಿ ಲೇವಡಿ ಮಾಡಿದೆ ಕೂಡಾ. ಪಾಪ, ಮಗುವಿಗೆ ಅದೇನೂ ತಿಳಿಯಲಿಲ್ಲ ಬಿಡು.

ಅದೇ ಮಗು ಜೇನಿನ ಹನಿ ನಾಲಿಗೆಗೆ ತಾಕಿದರೆ ಚಪ್ಪರಿಸುತ್ತದೆ. ಮಗುವಿಗೆ ಆರು ತಿಂಗಳಾಗುವ ತನಕ ಹಾಲು ಬಿಟ್ಟು ಬೇರೇನೂ ಕೊಡಬಾರದು ಎಂದು ಡಾಕ್ಟರ್ ಎಚ್ಚರಿಸಿದ್ದರೂ ಅವರಿವರ ಸಲಹೆಯಂತೆ ಕೆಲ ಪ್ರಯೋಗಗಳನ್ನು ಮಾಡಿದ್ದೆ. ಹಾಲು ಕುಡಿದರೆ ಕೆಲವೇ ನಿಮಿಷಗಳಲ್ಲಿ ಅದು ಮೂತ್ರವಾಗಿ ಹೊರಟು ಹೋಗುತ್ತದೆ. ಪುಟ್ಟಿಯು ಈಗಲೇ ನಾಲಿಗೆಯ ದಾಸಳಾಗಿ ಬಿಟ್ಟರೆ ಮುಂದಿನ ದಿನಗಳಲ್ಲಿ ನಿನಗೆ ತುಂಬಾ ಕಷ್ಟವಾಗುತ್ತದೆ, ಎಂದು ‘ಅವರು,’ ಅಂದರೆ ನನ್ನ ಗಂಡ, ಮಗಳನ್ನು ಎಚ್ಚರಿಸಿಬಿಟ್ಟಿದ್ದರು. ಅವರಿಗೆ ದಾಸರ ಪದವೊಂದು ನೆನಪಿಗೆ ಬಂತು, ಮಗುವಿನೆದುರು ನಿಂತು ಎಂದಿನ ಕರ್ಕಶ ಸ್ವರದಲ್ಲಿ ಹಾಡಿದರು, ‘ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ,’ ಎಂದು. ಅದೇನೋ ಸಂಸ್ಕೃತದಲ್ಲಿಯೂ ಹೇಳಿದರಪ್ಪ, ‘ಲಕ್ಷಿö್ಮÃರ್ವಸತಿ ಜಿಹ್ವಾಗ್ರೇ, ಜಿಹ್ವಾಗ್ರೇ ಮಿತ್ರ ಬಾಂಧವಾಃ. ಜಿಹ್ವಾಗ್ರೇ ಬಂಧನ ಂ ಪ್ರಾಪ್ತಂ, ಜಿಹ್ವಾಗ್ರೇ ಮರಣಂ ಧೃವಂ’ ಎಂದು. ತಮ್ಮ ನಾಲಿಗೆ ತುರಿಕೆಯನ್ನು ಪರಿಹರಿಸಿಕೊಳ್ಳಲು ಏನೂ ತಿಳಿಯದ ಕಂದನೊ ಂದಿದೆಯಲ್ಲ! ಆದರೆ ಮಕ್ಕಳಿಗೆ ಅರ್ಥವಾಗಲಿ, ಬಿಡಲಿ, ಮಾತನಾಡುತ್ತಿರಬೇಕಂತೆ, ಆಗ ಮುಂದಿನ ದಿನಗಳಲ್ಲಿ ಅವೆಲ್ಲವೂ ವೇದ್ಯವಾಗುತ್ತದಂತೆ, ಅವರೇ ತನ್ನನ್ನು ಸಮರ್ಥಿಸಿಕೊಳ್ಳುತ್ತಾ ಹೇಳಿದ್ದು. ಅವರು ಮಗಳಿಗೆ ಸುಸ್ಪಷ್ಟವಾಗಿ ಎಂದಿದ್ದರು, ‘ಮಕ್ಕಳಿಗೆ ತಂದೆ ಬಾಲ್ಯದೊಳಕ್ಕರ ವಿದ್ಯೆಗಳನರಿಪದಿರ್ದೊಡೆ ಕೊಂದ ಂ, ಲಕ್ಕಧನವಿರಲು ಕೆಡುಗುಂ, ಚಿಕ್ಕಂದಿನ ವಿದ್ಯೆ ಪೊರೆಗು ಚೂಡಾರತ್ನಾ,’ ಎಂದು.

ಇಷ್ಟೆಲ್ಲಾ ಆದಮೇಲೆ, ಮಗುವಿನೆದುರು ಏನೇನೋ ಮಾತನಾಡಿ, ಹಲವಾರು ಭಂಗಿ ಮಾಡಿ, ಅದರ ನಗುವಿನ ಚೆಂಬೆಳಕನ್ನು ತನ್ನ ಮೈಮೇಲೆ ಹೊದ್ದುಕೊಂಡ ಮೇಲೆ ತಮ್ಮ ಕೆಲಸದ ನೆನಪಾಗುತ್ತದೆ ಇಬ್ಬರಿಗೂ. ‘ಹೀಗೆ ನಿನ್ನನ್ನ ನೋಡುತ್ತಾ ನಿಂತರೆ ಮನೆ ಕೆಲಸ ಯಾರು ನಿಮ್ಮ ಅಜ್ಜ ಮಾಡ್ತಾನಾ?’ ಎಂದು ಅವರು ಎಂದಿನ ಂತೆ ಕೇಳುತ್ತಾರೆ. ಅಲ್ಲಿಯೇ ಇದ್ದ ನನ್ನ ಮಗಳು, ಪುಟ್ಟಿಯ ಸ್ಪೋಕ್ಸ್ ಪರ್ಸನ್, ಹೇಳುತ್ತಾಳೆ, ‘ಹೌದು, ನನ್ನ ಅಜ್ಜನೇ ಮಾಡಬೇಕು ಎನ್ನು ಮರಿ,’ ಎಂದು.

ಒ ಂದು ದಿನ ನಾನು ಅವರಿಗೆ ಅಂದೆ, ಈ ಪುಟಾಣಿಗೆ ನಿಮ್ಮ ಭೂಮಿಯನ್ನು ಆಶೀರ್ವಾದ ಪೂರ್ವಕ ಬರೆದುಕೊಡಿ, ಎಂದು. ಅವರೇನೆಂದರು ಗೊತ್ತಾ? ಇದು ಯಾರ ಪ್ರಾಪರ್ಟಿ? ಕೋಟ್ಯಂತರ ವರ್ಷಗಳಿಂದ ಅದೆಷ್ಟೋ ಲಕ್ಷ ಲಕ್ಷ ಜನ ಇದರ ಮಾಲಿಕರಾಗಿದ್ದಾರೆ. ಹಾಡಿರೋ ಹಾಗೆ ‘ಉಸಿರಾಡುವ ತನಕ ತಾನು ತನದೆಂಬ ಮಮಕಾರ, ಉಸಿರು ನಿಂತ ಮೇಲೆ ಮಸಣದೆ ಸಂಸಾರ,’ ಎಂದ ಹಾಗೆ. ಈ ಜಾಗದಲ್ಲಿ ಎಷ್ಟೊಂದು ಜನರನ್ನು ಹೂಳಲಾಗಿದೆಯೋ, ಸುಡಲಾಗಿದೆಯೋ ಗೊತ್ತಾ? ಹಾಗಿರುವಾಗ ಈ ಆಸ್ತಿ ತನ್ನದು ಎಂದೆನ್ನಲಾಗುತ್ತೆಯೇ?’ ಎಂದು. ಸರಿಯಿರಬಹುದು, ಆದರೆ ಹೇಳಿದ ಸಮಯ ಸೂಕ್ತವಿರಲಿಲ್ಲ, ಅಷ್ಟೇ.

ಪ್ರತೀ ನಾಲ್ಕು ವಾರಗಳಿಗೊಮ್ಮೆ ಮಗುವನ್ನು ಡಾಕ್ಟರಲ್ಲಿಗೆ ಕರೆದೊಯ್ಯಬೇಕಿತ್ತು. ಅವರು ಪುಟಾಣಿಯ ತೂಕ, ಎತ್ತರ ನೋಡಿ, ಆರೋಗ್ಯ ಪರೀಕ್ಷಿಸಿ, ದಾಖಲಿಸುತ್ತಿದ್ದರು, ಬೇಕಾದ ಸಲಹೆ ಕೊಡುತ್ತಿದ್ದರು. ಮೊದಲ ಬಾರಿ ಹೊದಾಗ ತೂಕ ಓಕೆ ಆಗಿತ್ತು, ಎರಡನೆಯ ಬಾರಿ ಅವರು ತೂಕ ಬರೀ ನಾಲ್ಕು ನೂರು ಗ್ರಾಂ ಜಾಸ್ತಿ ಆಗಿದೆ, ಮುಂದಿನ ಬಾರಿ ಬರುವಾಗ ಏಳುನೂರು ಗ್ರಾಂ ಹೆಚ್ಚಿರಬೇಕು, ಎಂದು. ಮೂರನೆಯ ಬಾರಿ ಹೋದಾಗ ಒಂದೂಕಾಲು ಕಿಲೋ ಜಾಸ್ತಿಯಾಗಿತ್ತು. ಅವರಿಗೆ ಅಚ್ಚರಿಯೋ ಅಚ್ಚರಿ, ಎರಡೆರಡು ಬಾರಿ ಪ್ರಶ್ನಿಸಿದರು, ‘ಏನು ಆಹಾರ ಕೊಟ್ಟಿರಿ,’ ಎಂದು. ‘ಇಲ್ಲ ಡಾಕ್ಟರ್, ನೀವು ಹೇಳಿದ ಹಾಗೆ ಬರೀ ಹಾಲು ಮಾತ್ರವೇ ಕೊಟ್ಟಿದ್ದು, ಅದೂ ಬಾಟಲಿಯ ಪುಡಿಯದು,’ ಎಂದು ಸುಳ್ಳು ಹೇಳಿದೆವು. ಮೆಡಿಕಲ್ ಮಾಫಿಯಾವು ಈ ವೈದ್ಯರನ್ನು ನಿಯಂತ್ರಿಸುತ್ತವೆಯೋ ಏನೋ ಎಂಬುದು ನನ್ನ ಡೌಟು.

ನಿಜವಾಗಿ ಏನು ನಡೆಯಿತು ಎಂದು ಹೇಳಿಬಿಡುತ್ತೇನೆ, ಅದು ನಿನ್ನಲ್ಲಿಯೇ ಇರಲಿ. ಅವರಿವರಿಗೆ ಫೋನ್ ಮಾಡಿ ಹಾಲಿನ ಪುಡಿಗೆ ಏನು ಬದಲಿ, ಐ ಮೀನ್ ಆಲ್ಟರ್‌ನೇಟಿವ್ ಇದೆ ಎಂದು ಕೇಳಿ ಪಟ್ಟಿಮಾಡಿಕೊಂಡೆ. ನಂತರ ಏನು ಮಾಡಿದೆ ಗೊತ್ತಾ? ರಾಗಿ, ಹೆಸರು ಕಾಳು, ಕಡಲೆ ಕಾಳು, ಶೇಂಗಾ ಇವನ್ನೆಲ್ಲಾ ಸೇರಿಸಿ ನುಣ್ಣಗೆ ಪುಡಿ ಮಾಡಿಕೊಂಡೆ. ನಂತರ ಬಿಸಿ ನೀರಿಗೆ ಈ ಪುಡಿ ಹಾಕಿ, ಜೊತೆಗೆ ತುಪ್ಪ, ಬೆಲ್ಲ ಸೇರಿಸಿ, ಪೇಸ್ಟ್ ಮಾಡಿಕೊಂಡು ಅದನ್ನು ಮಗುವಿಗೆ ದಿನಕ್ಕೆ ತಿನ್ನಿಸತೊಡಗಿದೆ. ದಿನಕ್ಕೆ ಎರಡು ಸಲ ಬಾದಾಮಿ, ಗೋಡಂಬಿ ತೇಯ್ದ, ಅದಕ್ಕೆ ಜೇನು ತುಪ್ಪ ಸೇರಿಸಿ, ತಿನಿಸತೊಡಗಿದೆ. ಮಗು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿತ್ತು. ನಾಲ್ಕು ದಿನಕ್ಕೆ ಖಾಲಿಯಾಗುವ ನಾಲ್ಕುನೂರು ಗ್ರಾಂ ಹಾಲಿನ ಪುಡಿ ಎಂಟು ದಿನ ಬಂತು, ಖರ್ಚು ಅರ್ಧಕ್ಕರ್ಧ ಕಡಿಮೆಯಾಯಿತು. ಇದನ್ನು ನಾವು ಡಾಕ್ಟರಿಗೆ ಹೇಳಿರಲಿಲ್ಲ, ಹೇಳಿದರೆ ಅವರೇನು ಎನ್ನುತ್ತಿದ್ದರು ಎಂಬುದೂ ಗೊತ್ತಿತ್ತು, ‘ಮಗುವಿಗೆ ಆರು ತಿಂಗಳಾಗುವ ತನಕ ಹಾಲು ಬಿಟ್ಟು ಬೇರೇನೂ ಕೊಡಬೇಡಿ,’ ಎಂದು.

ಬಡವರು, ಸ್ಲಮ್ ನಿವಾಸಿಗಳು, ಕೂಲಿಯವರು ಹೈಫೈ ಡಾಕ್ಟರು ಹೇಳುವ ಪುಡಿಗಳನ್ನು ತಮ್ಮ ಮಕ್ಕಳಿಗೆ ಕೊಡಲು ಸಾಧ್ಯವೇ? ತಾವು ಏನು ತಿನ್ನುತ್ತಾರೋ ಅದನ್ನೇ ಅಲ್ಲವೇ ಕೊಡೋದು? ಆ ಮಕ್ಕಳು ದಷ್ಟಪುಷ್ಟವಾಗಿಲ್ಲವೇ? ಇದು ನನ್ನ ಗಂಡನ ವಾದ. ಅದೂ ಸರಿಯೇ ಅನ್ನು.

ದಿನಾಲೂ ಟಿವಿಯಲ್ಲಿ ಬರುವ ಜಾಹಿರಾತು ನೋಡುತ್ತೇವಲ್ಲ, ಅದಾವುದನ್ನೋ ಕುಡಿದರೆ ಮಕ್ಕಳು ಟಾಲ್ ಆಗುತ್ತವೆ, ಶಾರ್ಪ್ ಆಗುತ್ತವೆ (ಶಾರ್ಪ್ ಆದರೆ ಯಾರನ್ನಾದರೂ ಸಲೀಸಾಗಿ ಚುಚ್ಚಬಹುದು), ಎಂದೆಲ್ಲಾ ಹೇಳುತ್ತಾರೆ. ಮಕ್ಕಳು ಏರ್‌ಹೋಸ್ಟೆಸ್ ಆಗಲು, ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಈ ಪುಡಿಗಳನ್ನು ತಿನ್ನಿಸಿ ಎಂದು ಬಡಕೊಳ್ಳುತ್ತಾರೆ. ಚರ್ಮದ ಸೌಂದರ್ಯ ವರ್ಧಿಸಿ ಅದಾವುದೋ ಸಿನೆಮಾ ನಟ ವರಿಸಲು ಬರುತ್ತಾನೆ ಎಂಬುದನ್ನು ಹೇಳುತ್ತಾರೆ. ಬರೀ ಬೊಗಳೆ. ನಾವು ನಮ್ಮ ಬಾಲ್ಯದಲ್ಲಿ ಅದಾವುದನ್ನೂ ಕುಡಿದಿಲ್ಲ, ಕೊಡಿಸುವವರೂ ಇರಲಿಲ್ಲ. ಆದರೂ ಬೆಳೆದಿಲ್ಲವೇ? ನನ್ನ ಗಂಡ ಎಂದಿಗೂ ತಮಾಷೆ ಮಾಡುತ್ತಾರೆ, ಒಂದೂವರೆ ಅಡಿ ಎತ್ತರದ ಆರು ತಿಂಗಳ ಮಗುವಿಗೆ ಡಬ್ಬದಲ್ಲಿ ಬರುವ ಇವನ್ನೆಲ್ಲಾ ಕುಡಿಸಿದರೆ ಮೂರು ವರ್ಷಗಳಲ್ಲಿ ಎರಡೂವರೆ ಅಡಿ ಆಗುತ್ತದೆ. ಕುಡಿಸದಿದ್ದರೆ ಮೂವತ್ತು ಇಂಚಾಗುತ್ತದೆ, ಎಂದು. ಜಾಹಿರಾತುಗಳು ತಮ್ಮ ಹೇಳಿಕೆಗಳನ್ನು ನಮ್ಮ ತಲೆಗೆ ತುಂಬಿ, ತುಂಬಿ, ತಮ್ಮ ಬಿಸನೆಸ್ ಹೆಚ್ಚಿಸಿಕೊಳ್ಳುತ್ತವೆ. ಆ ಉತ್ಪನ್ನಗಳ ತಯಾರಕರು ಹೇಳಿದ್ದು ಸತ್ಯವಾಗಿದ್ದರೆ ರಾಜ್‌ಪಾಲ್ ಯಾದವ್‌ರು ಅಮಿತಾಬ್ ಬಚ್ಚನ್ ಆಗಿರುತ್ತಿದ್ದರು, ದ್ವಾರಕೀಶ್‌ರು ಸುದೀಪ್ ಆಗಿರುತ್ತಿದ್ದರು.

ದಿನಗಳು ಓಡೋಡುತ್ತಲೇ ಇರುತ್ತವೆ. ಮಕ್ಕಳು ಬಹಳ ಬೇಗ ಬೆಳೆಯುತ್ತವೆ. ನನ್ನ ಅಳಿಯ ಅದಾಗಲೇ ತನ್ನೂರಿನ ಫೇಮಸ್ ಶಾಲೆಯೊಂದರಲ್ಲಿ ತನ್ನ ಮಗುವಿಗೆ ಅಡ್ಮಿಷನ್‌ಗೆ ಫಾರಂ ತಂದಿಟ್ಟಿದ್ದಾರೆ, ಎಂದಳು ಮಗಳು. ಅದೇನೋ ಕುರಿಗಾಹಿ ಎಂತಲೋ, ಶೆಫರ್ಡ್ ಎಂತಲೋ ಹೆಸರಿರುವ ಸ್ಕೂಲಿಗೆ ಸೇರಿಸಬೇಡಿ, ಮಗು ಕುರಿಯಂತೆ ಪೆದ್ದಾಗಿಬಿಡುತ್ತದೆ. ಸೈಂಟ್ ಮಾರ್ಕ್ಸ್ ಶಾಲೆಗೆ ಸೇರಿಸಿದರೆ ಹೆಸರೇ ಹೇಳುವಂತೆ ಹೆಚ್ಚು ಮಾರ್ಕ್ಸ್ ಬರುತ್ತದೆ, ಎಂದು ಹೇಳಿದ್ದೆ.

ಫೇಮಸ್ ಶಾಲೆ ಎಂದರೆ ನೀವಂದುಕೊ ಂಡ ಹಾಗೆ ಅತಿ ಹೆಚ್ಚು ಡೊನೇಶನ್ ತೆಗೆದುಕೊಳ್ಳುವ ಆಂಗ್ಲ ಮಾಧ್ಯಮವೇ. ಅಲ್ಲಿ ‘ಪುಸ್ಸಿ ಕ್ಯಾಟ್’ವೋ, ‘ಜಾನಿ ಜಾನಿ ಎಸ್ ಪಾಪಾ’ವೋ, ಹೇಳಿಕೊಡುತ್ತಾರೆ. ಕನ್ನಡ ಮಾತ್ರ ಬರೋಲ್ಲ, ಎಂದು ನನ್ನ ಗಂಡ ಗೊಣಗಿದ್ದರು. ತಮ್ಮ ಕಾಲದಲ್ಲಿ ಎಷ್ಟೊಂದು ಚೆನ್ನಾದ ಹಾಡುಗಳಿದ್ದವು, ‘ನಾಯಿಮರಿ ನಾಯಿ ಮರಿ ತಿಂಡಿ ಬೇಕೇ, ತಿಂಡಿ ಬೇಕು ತೀರ್ಥ ಬೇಕು,’ ‘ತಿರುಕನೋರ್ವ ಊರಮುಂದೆ ಮುರುಕು ಧರ್ಮ ಶಾಲೆಯಲ್ಲಿ,’ ‘ನಾಗರ ಹಾವೇ ಹಾವೊಳು ಹೂವೇ,’ ‘ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ,’ ಇತ್ಯಾದಿ. ಈ ಹಾಡುಗಳು ಮಕ್ಕಳ ಕಲ್ಪನಾಶಕ್ತಿಯನ್ನು ಉತ್ತೇಜಿಸುತ್ತವೆಯಂತೆ, ಅವರು ಎಂದ ಂತೆ!

ಅವರು ಮಗುವಿನ ಎದುರು ನಿಂತುಕೊ ಂಡು ಕನ್ನಡದ ಹಾಡುಗಳನ್ನು ಆಭಿನಯಪೂರ್ವಕ ಹಾಡುತ್ತಾರೆ. ಅವೋ, ‘ತಿಂಗಳು ಬೆಳಕಿನ ಇರುಳಿನಲೊಂದು, ಅಮ್ಮನು ಕೆಲಸದೊಳಿರುತಿರೆ ಕಂಡು,’ ‘ಚಂದಿರನೇತಕೆ ಓಡುವನಮ್ಮ, ಮೋಡಕೆ ಬೆದರಿಹನೇ,’ ‘ಕಾಗೆಯೊಂದು ಹಾರಿಬಂದು ಮರದಮೇಲೆ ಕುಳಿತುಕೊಂಡು,’ ‘ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೆ, ಎಲ್ಲಿಗೆ ಹೋಗಿದ್ದೆ,’ ಇತ್ಯಾದಿ. ಆ ಪುಟ್ಟ ಮಗು ಕುತೂಹಲ ಭರಿತ ಮುಗ್ಧ ಕಣ್ಣುಗಳಿಂದ ಅವರನ್ನೇ ನೋಡುತ್ತಾ ಖುಷಿಪಡುತ್ತಿರುವಾಗ ಅವರಿಗೆ ಇನ್ನಷ್ಟು ಉತ್ತೇಜನ ಕೊಟ್ಟಂತೆ ಆಗುತ್ತದೆ. ನನಗೂ ಅಚ್ಚರಿ, ಇವರಿಗೆ ಇಷ್ಟೆಲ್ಲಾ ಹಾಡುಗಳು ಹೇಗೆ ಕಂಠಸ್ಥವಾಗಿವೆ ಎಂದು. ನನ್ನ ಪ್ರಶ್ಬೆಗೆ ಅವರೇ ಉತ್ತರಿಸಿದರು, ‘ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಕಲಿಯಬೇಕು. ಬೆಳೆಯುತ್ತಾ ಗ್ರಹಣ ಶಕ್ತಿ ಕಡಿಮೆಯಾಗುತ್ತದೆ. ನಮ್ಮ ಮಹಾಭಾರತವನ್ನೇ ನೋಡು, ತಾಯಿ ಸುಭದ್ರೆಯ ಗರ್ಭದಲ್ಲಿರುವಾಗಲೇ ಹೇಗೆ ಚಕ್ರವ್ಯೂಹವನ್ನು ಹೊಗ್ಗಬೇಕು ಎಂದು ಅಭಿಮನ್ಯು ಕಲಿತನಂತೆ. ಮಕ್ಕಳಿಗೆ ಬಾಲ್ಯದಲ್ಲಿ ಪಾಠ ಕಲಿಸದ ತಂದೆ-ತಾಯಿಯರು ವ್ಶೆರಿಗಳು. ಮಾತಾ ಶತ್ರುಃ ಪಿತಾ ವೈರಿ, ಬಾಲೋಯೇನ ನಪಾಠಿತಃ, ಎಂದಿದ್ದಾರೆ.’ ಅವರು ನನ್ನ ಮಗಳನ್ನು ಉದ್ದೇಶಿಸಿ ಹೇಳಿದರು, ‘ಮಕ್ಕಳು ಹೆಚ್ಚು ಅಂಕ ಗಳಿಸುವುದು ಮಾತ್ರ ಸಾಧನೆಯಲ್ಲ, ಅವರು ಪ್ರಕೃತಿಯೊಂದಿಗೆ ಬೆರೆಯಬೇಕು. ಹೂ-ಹಣ್ಣುಗಳು, ತಾರೆಗಳು, ಆಗಸ, ಚಂದ್ರ-ಸೂರ್ಯ, ತಂಗಾಳಿ, ಅವು ಹೊತ್ತು ತರುವ ವಿವಿಧ ಸುವಾಸನೆಗಳು, ತರಕಾರಿ, ಹಣ್ಣುಗಳಲ್ಲಿರುವ ಅಂತರ್ಗತ ರುಚಿ ಪ್ರಭೇದಗಳು, ಇವನ್ನು ಅರಿಯುವಷ್ಟು ಸೂಕ್ಷö್ಮತೆಯನ್ನು ಹೊಂದಬೇಕು. ಮರ ಹತ್ತಬೇಕು, ನೀರಲ್ಲಿ ಈಜಬೇಕು, ಸೂರ್ಯಾಸ್ತ, ಉದಯಗಳನ್ನು ಕಾಣಬೇಕು. ಆಗಲೇ ಅವು ನಿಜವಾದ ಮನುಷ್ಯರಾಗುವುದು. ಅಕ್ಕಪಕ್ಕದ ಮನೆಯವರು, ಸ್ನೇಹಿತರು, ಬಂಧುಗಳೆದರು ತಮ್ಮ ಮಗಳ ನೂರಕ್ಕೆ ತೊಂಬತ್ತೊ ಂಬತ್ತು ಮಾರ್ಕು ತೆಗೆದುಕೊಂಡು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾಳೆ ಎಂದು ಹೇಳುವುದು ಪ್ರತಿಷ್ಠೆಯಲ್ಲ. ಮುಂದೊ ಂದು ದಿನ ಹೀಗೆ ಪುಸ್ತಕದ ಹುಳುವಾಗಿ ಬೆಳೆದ ಮಗು ತನ್ನ ಬಾಲ್ಯವು ವ್ಯರ್ಥವಾಗಿಹೋಯಿತು ಎಂದು ಪರಿತಪಿಸುವಂತೆ ಮಾಡಬಾರದು,’ ಎಂದು ಸಣ್ಣ ಭಾಷಣವನ್ನೇ ಮಾಡಿ, ಮಗುವಿನತ್ತ ತಿರುಗಿ, ‘ಅಲ್ಲವೇ ಪುಟ್ಟಿ’ ಎಂದು ಕೇಳಿದರು. ಮಗು ಬೊಚ್ಚು ಬಾಯಿಯಲ್ಲಿಯೇ ನಗು ಬೀರಿತು, ‘ಕೊನೆಗಾದರೂ ನನ್ನ ಮಾತನ್ನು ರಾಣಿಯಾದರೂ ಒಪ್ಪಿದಳು,’ ಎಂದರು ಇವರು.

ಮಕ್ಕಳು ತಮ್ಮ ತಾಯಿ ಭಾಷೆಯ ಮಾಧ್ಯಮದಲ್ಲಿ ಕಲಿಯಬೇಕು. ಆಗಲೇ ಅವರ ಪ್ರಪಂಚ ವಿಸ್ತಾರವಾಗುವುದು, ಎಂದು ಹೇಳಿದವರು ಒಂದು ಉದಾಹರಣೆಯನ್ನೂ ಕೊಟ್ಟರು. ‘ಮೊನ್ನೆ ಇಸ್ರೋದವರು ಚಂದ್ರಯಾನ ಮಿಷನ್ ಮಾಡಿದ್ದರಲ್ಲಿ, ಆ ಕಾರ್ಯದಲ್ಲಿ ಇದ್ದ ಒಂಬತ್ತು ವಿಜ್ಞಾನಿಗಳು ಕನ್ನಡ ಮಾಧ್ಯಮದಲ್ಲಿಯೇ ಕಲಿತದ್ದು. ಕನ್ನಡಕ್ಕೆ ಅಂತಹ ಶಕ್ತಿ ಇದೆ.’

ಮಗಳು ಮೊಬೈಲ್ ಪರದೆಯ ಮೇಲೆ ಬೆರಳಾಡಿಸುತ್ತಲೇ ಇದ್ದಳು. ನಾನು ಅವಳಿಗೆ ಬೈದೆ, ‘ನಿನ್ನ ಅಪ್ಪ ಇಲ್ಲಿಯ ತನಕ ಹೇಳಿದ್ದು ನಿನಗೇ. ಹೀಗೆ ಸುಮ್ಮನೆ ಕುಳಿತರೆ ಹೇಗೆ? ತಲೆಗೇನಾದರೂ ಹೋಯಿತೇ?’ ಎಂದು. ಅವಳು ‘ಕೇಳಿಸಿಕೊಂಡೆ,’ ಎಂದು ಸುಮ್ಮನೆ ಹೇಳಿದಳು. ಇಲ್ಲ, ಇವಳ ತಲೆಗೆ ಬುದ್ಧಿವಾದ ಹೋಗುವುದಿಲ್ಲ. ಮುಂದೆ ಮಗುವಿನ ಕೈಗೆ ಮೊಬೈಲ್ ಕೊಟ್ಟು ತನ್ನ ಕೆಲಸದಲ್ಲಿ ನಿರತಳಾಗುವವಳೇ. ಆದರೆ ಕೂಸಿಗೆ ಎಂಟು ವರ್ಷವಾಗುವ ತನಕ ಮೊಬೈಲ್ ಕೊಡಬಾರದೆನ್ನುತ್ತಾರೆ, ಆದರೆ ಅದು ಅನುಷ್ಠಾನಕ್ಕೆ ಬರುವುದು ಡೌಟೇ.

ಮಕ್ಕಳು ಮೊಬೈಲ್‌ಗೆ ದಾಸರಾದರೆ ಅವರ ಬೆನ್ನುಗಳು ಬಾಗುತ್ತವೆಯಂತೆ, ಕಣ್ಣುಗಳು ಹಾಳಾಗುತ್ತವೆಯಂತೆ, ಕೈಗಳು, ಬೆರಳುಗಳು ನಿಶ್ಶಕ್ತವಾಗುತ್ತವೆಯಂತೆ, ಮನಸ್ಸು ಆ ಆಟಗಳಿಗೇ ದಾಸವಾಗಿ ಕೊನೆಕೊನೆಗೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತವಂತೆ. ಹೀಗೆಲ್ಲಾ ಓದಿದ ನೆನಪು. ಭಯವಾಗುತ್ತದೆ ಕಣೇ.

ಮಕ್ಕಳನ್ನು ಈಗಲೇ ನಿಯಂತ್ರಿಸಿಕೊ ಂಡಿರಬೇಕು, ಇಲ್ಲವಾದರೆ ಅವು ಕೈ ತಪ್ಪಿ ಹೋಗುತ್ತವೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯೇ ಇಲ್ಲವೇ, ಎಂದೂ ಷರಾ ಸೇರಿಸಿದ್ದರು ಅವರು. ‘ತಮ್ಮ ಕಾಲದಲ್ಲಿ ಆಹಾರದಲ್ಲಿ ಆಯ್ಕೆಯೇ ಇರಲಿಲ್ಲ, ಇದ್ದದ್ದು ಎರಡೇ, ತಿನ್ನು ಅಥವಾ ಹೊರಟು ಹೋಗು, ಎಂಬುದು. ಈಗಿನ ಮಕ್ಕಳಿಗೆ ಅದೆಷ್ಟು ಥರದ ಆಹಾರ ಸಿಗುತ್ತದೆ. ಎಷ್ಟು ಸಿಕ್ಕಿದರೂ ಸಿಡುಕುವುದು ಮಾತ್ರ ಕಡಿಮೆ ಮಾಡುವುದಿಲ್ಲ,’ ಎನ್ನುತ್ತಿದ್ದರು. ನನ್ನ ಮಗಳು, ಚಿಕ್ಕವಳಾಗಿದ್ದಾಗ ದೋಸೆ ಬೇಕು ಎಂದು ಹಟ ಮಾಡಿದ್ದಳು, ಮರುದಿನ ಮಾಡಿಕೊಟ್ಟಿದ್ದೆ. ಆಗ ಅವಳು ತನಗೆ ದೋಸೆ ಬೇಡ, ಇಡ್ಲಿ ಬೇಕು ಎಂದು ಕೂಗಲು ಶುರುಮಾಡಿದಳು. ಆಗ ನಾನೇನು ಮಾಡಿದೆ ಗೊತ್ತಾ? ಅವಳನ್ನು ರಮಿಸುತ್ತಾ, ಮಗೂ, ಇದು ಇಡ್ಲಿಯೇ, ಹಿಟ್ಟು ನೀರಾಯಿತಲ್ಲ, ಹಾಗಾಗಿ ಅಗಲವಾಗಿದೆ ಅಷ್ಟೇ, ಎಂದೆ. ಸುಮ್ಮನೆ ತಿಂದಳು. ತಾಯಿಯು ಸುಳ್ಳು ಹೇಳುವುದನ್ನು ಶುರುಮಾಡುವುದೇ ಮಕ್ಕಳಿಗಾಗಿ, ಅಲ್ಲವೇ?

ಮನೆ ಕೆಲಸ ರಾಶಿ ರಾಶಿ ಬಿದ್ದಿದೆ. ವಾರ್ಡ್ರೋಬ್, ಗೋಡೆಗಳು, ಇವುಗಳನ್ನು ಒರೆಸಿ ತಿಂಗಳಾಗುತ್ತಾ ಬಂತು. ಫ್ಯಾನ್‌ಗಳ ಮೇಲೆ ಧೂಳು ಹರಡಿಕೊಂಡ ಂತಿದೆ. ಟಿವಿಯ ಪರದೆಯಂತೂ ಹೇಗಾಗಿದೆ ಎಂದರೆ ಅದರ ಮೇಲೆ ಯಾವ ಭಾಷೆಯ ಅಕ್ಷರಗಳನ್ನು ಬೇಕಾದರೂ ಬರೆಯಬಹುದು. ಟಿವಿಗಳಲ್ಲಿ ಬರುವ ಧಾರಾವಾಹಿಯ ಕಲಾವಿದರು ಈ ಧೂಳಿನಿಂದಾಗಿ ಸೀನತೊಡಗಿದ್ದಾರೆ. ಸೀನುವುದೋ, ಶೀನುವುದೋ, ಗೊತ್ತಿಲ್ಲ. ಅರ್ಥವಾದರೆ ಸಾಕಲ್ಲ!

ಕೆಲವೊಮ್ಮೆ ಭಯವಾಗುತ್ತದೆ ಕಣೇ. ಟಿವಿ ಹಾಕಿದರೆ ಮಗುವಿನ ರೇಪು, ಮಕ್ಕಳ ಅಪಹರಣ, ಮಗುವಿನ ಮೇಲೆ ನಾಯಿಯ ಅಟ್ಯಾಕ್, ಸಾವು, ಮಗುವಿನ ಮೇಲೆ ಹರಿದ ವಾಹನ, ಇತ್ಯಾದಿ ಸುದ್ದಿಗಳನ್ನು ವೈಭವೋಪೇತಗೊಳಿಸಿ ಹೇಳುತ್ತಲೇ ಇರುತ್ತಾರೆ. ಆಗ ನಮ್ಮ ಮಗುವಿನ ಬಗ್ಗೆ ಹೆದರಿಕೆಯಾಗುತ್ತದೆ. ಕೆಟ್ಟದ್ದನ್ನು ಯೋಚಿಸಬಾರದು ನಿಜ, ಆದರೆ ಅದೇ ಸುದ್ದಿ ಕೇಳುತ್ತಿದ್ದರೆ ಯೋಚನೆಯಾಗದೇ ಇರುತ್ತದೆಯೇ? ಇತ್ತು ಪತ್ರಿಕೆಗಳಲ್ಲಿಯೂ ಅಂತಹದೇ ಸುದ್ದಿಗಳು. ಇಂದಿನ ದಿನಪತ್ರಿಕೆಗಳಂತೂ ಅವನ್ನೇ ಮುಖಪುಟದಲ್ಲಿ ಪ್ರಕಟಿಸುತ್ತವೆ. ಅವನ್ನು ಬಿಟ್ಟರೆ ಜಾಹಿರಾತುಗಳು, ರಾಜಕಾರಣಿಗಳ ಚಿತ್ರಗಳು. ಬೆಳ್ಳಂಬೆಳಗ್ಗೆ ರಾಜಕಾರಣಿಗಳ ಮುಖ ನೋಡಿ ದಿನವನ್ನೆಲ್ಲಾ ಹಾಳು ಮಾಡಿಕೊಳ್ಳಬಾರದು ಎಂದುಕೊ ಂಡು ನನ್ನ ಗಂಡ ಪತ್ರಿಕೆಯನ್ನು ತರಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ನಾನೂ ಓದುವುದು ಅಷ್ಟರಲ್ಲಿಯೇ ಇದೆ, ಅನ್ನು. ಓದಿದರೂ ಯಾವತ್ತು ಕರೆಂಟ್ ಬರೋಲ್ಲ, ಯಾವತ್ತು ನಲ್ಲಿ ಒಣಗಿರುತ್ತದೆ, ಎಂಬುದನ್ನು ಮಾತ್ರ ನೋಡುತ್ತಿದ್ದೆ.

ಮುಂದುವರೆಯುವುದು….

ಸೂರಿ ಹಾರ್ದಳ್ಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x