ಮಗು, ನೀ ನಗು (ಭಾಗ 3): ಸೂರಿ ಹಾರ್ದಳ್ಳಿ

ಹಾಗೊಂದು ಕಾಲವಿತ್ತು, ನಾನು ದಿನಕ್ಕೆ ಎಂಟು ಗಂಟೆಗಳ ಕಾಲ ಗಾಢವಾಗಿ ನಿದ್ರಿಸುತ್ತಿದ್ದೆ. ನಿದ್ರೆಯ ಸುಖಕ್ಕೆ ನಿದ್ರೆಯೇ ಸಾಟಿ. ಈಗ ಮಗುವಿನ ಎಚ್ಚರದ ಸಮಯಕ್ಕೆ ಹೊಂದಿಕೊಳ್ಳಬೇಕಿದೆ. ಮಗು ಎಷ್ಟು ಗಂಟೆಗೆ ಮಲಗಿತು, ಎಷ್ಟಕ್ಕೆ ಎದ್ದಿತು, ನಿನ್ನೆ ಎಷ್ಟು ಹೊತ್ತು ನಿದ್ರೆ ಮಾಡಿತು, ಹಾಲು ಕುಡಿದು ಎಷ್ಟು ಹೊತ್ತಾಯಿತು, ಶೌಚ-ಮೂತ್ರ ಮಾಡಿಕೊಂಡಿತೋ ಇಲ್ಲವೋ, ಎಂದೆಲ್ಲಾ ರೆಕಾರ್ಡ್ ಇಟ್ಟಿರಕೊಂಡಿರಬೇಕು ಈಗ. ಅದು ಎಚ್ಚರವಾಗಿ ಕೊಸ, ಕೊಸ ಎಂದು ಸದ್ದು ಮಾಡಿದರೆ ತಕ್ಷಣವೇ ಎದ್ದು ಅದರ ಉಪಚಾರ ಮಾಡಬೇಕು. ನಾವು ಸ್ನಾನ ಮಾಡುತ್ತಿರಲಿ, ಊಟ ಮಾಡುತ್ತಿರಲಿ, ಅಡುಗೆ ಮನೆಯಲ್ಲಿ ಒಗ್ಗರಣೆ ಹಾಕುತ್ತಲಿರಲಿ, ಹಾಗೆಯೇ ಅಲ್ಲಿಯೇ ಬಿಟ್ಟು, ‘ಯೋನು, ಯೋನು ಪುಟ್ಟ, ಬಂದೆ, ಬಂದೆ ಮರಿ, ನನ್ಕಂದ, ಇಲ್ಲ, ಇಲ್ಲ, ನನ್ನ ರಾಣಿ,’ ಎಂದೆನ್ನುತ್ತಾ ಅದರತ್ತ ಓಡಬೇಕು. ಅದಕ್ಕೆ ಪೂಸಿ ಹೊಡೆಯಬೇಕು. ‘ಅಮ್ಮ ಬೈತಾಳಾ ಪುಟ್ಟಿ? ಅವಳಿಗೆ ಹತ್ತ ಮಾಡೋಣ, ಏನು, ನನ್ನ ಚಿನ್ನಾರಿಗೆ ಉಪಚಾರ ಮಾಡೋಲ್ಲವಾ? ಮನೆಯಿಂದ ಓಡಿಸಿಬಿಡುತ್ತೇನೆ, ಪೊಲೀಸರಿಗೆ ಹಿಡಿದುಕೊಡುತ್ತೇನೆ,’ ಎಂದೆಲ್ಲಾ ಹೇಳಬೇಕು. ಹೀಗೆಲ್ಲಾ ಅಂದರೆ ಮಾತ್ರ ಅದರ ಧ್ವನಿಯ ಡೆಸಿಬಲ್ ಕಡಿಮೆಯಾಗುತ್ತದೆ. ನಾನು ಸಾಕಷ್ಟು ಆಹಾರ ತಿನ್ನದಿದ್ದಾಗ ನಮ್ಮಮ್ಮ ಕೂಡಾ ಹೀಗೇ ಪೊಲೀಸರಿಗೆ ಹಿಡಿದುಕೊಡುತ್ತೇನೆ ಎಂದು ನನ್ನನ್ನು ಬೆದರಿಸುತ್ತಿದ್ದರು. ತಾಯಿಗೆ ಮಾತ್ರವೇ ಗೊತ್ತು, ತನ್ನ ಮಗುವಿನ ಹೊಟ್ಟೆಯ ಗಾತ್ರ.

ಆಗ ಪೊಲೀಸರೆಂದರೆ ಏನೆಂದು ಗೊತ್ತಿರದಿದ್ದರೂ ವಿಕಾರ ರೂಪದ, ಭಯಂಕರ ಆಕಾರದ, ನಮ್ಮನ್ನೆಲ್ಲಾ ಗುಳುಮಾಯಸ್ವಾಹಾ ಮಾಡುವ ಯಾವುದೋ ಒಂದು ಪ್ರಾಣಿ ಎಂದೇ ಭಾವಿಸಿದ್ದೆವು. ಹಾಗಾಗಿ ನನಗೆ ಈಗಲೂ ಪೊಲೀಸರೆಂದರೆ ಭಯ!

ಎಷ್ಟೋ ಬಾರಿ ಮಗು ಸುವ್ವಾಲಿ ರಾಗ ಎಳೆದರೆ ಮೂವರೂ ಅಲ್ಲಿಗೆ ಹಾಜರಾಗುತ್ತೇವೆ. ಜೊತೆಯಲ್ಲಿಯೇ ಇರುವ ನನ್ನ ಗಂಡ ತಾನೇ ಕೂಸಿನ ಸಕಲ ರಕ್ಷಕ, ಎಂಬಂತೆ ಹೇಳುತ್ತಾರೆ. ಇದು ಎಷ್ಟೋ ಬಾರಿ ಪುನರಪಿ ಆಗಿರುತ್ತದೆ. ‘ನಿನ್ನ ಕೆಟ್ಟ ಅಮ್ಮ ಬೈದರೆ ನನಗೆ ಹೇಳು. ಹೆದರಬೇಡ, ನನಗೆ ಹೇಳು. ನಾನಿದ್ದೇನೆ, ಇದ್ದೇನೆ. ಅವಳನ್ನ, ಅಂದರೆ ನಿನ್ನ ತಾಯಿಯನ್ನ, ಇಂಗ್ಲಿಷಿನಲ್ಲಿ ಮದರನ್ನ, ಅದೇ ಆಸತ್ರೆಗೆ ಕೊಟ್ಟು ಬೇರೆ ಅಮ್ಮನ್ನ ತರೋಣ,’ ಅಂತ. ಮಗುವಿನ ನೆವದಲ್ಲಿ ನಮ್ಮಿಬ್ಬರಿಗೆ ಬೈಯುವ ಅವಕಾಶ. ಆಗ ಮಗು ಮೂತಿ ಸೊಟ್ಟ ಮಾಡಿ ಅಳಲು ಶುರುಮಾಡುತ್ತದೆ. ‘ಬೇಡವಾ? ಇದೇ ಅಮ್ಮ ನಿನಗೆ ಸಾಕಾ? ಸರಿ ಬಿಡು, ನಿನ್ನ ಹಣೆಯಲ್ಲಿ ಅಷ್ಟೇ ಬರೆದಿದ್ದು. ದೊಡ್ಡವರೇ ಹೇಳಿಲ್ಲವೇ…’ ಅವರು ಮಾತು ಮುಂದುವರಿಸುವ ಮೊದಲು ನಾನು ತೊಟ್ಟಿಲಿಗೆ ಬಟ್ಟೆ ಮುಚ್ಚಿ ತೂಗಲು ಶುರುಮಾಡುತ್ತೇನೆ. ಮಗುವಿಗೆ ಏನೂ ತಿಳಿಯದಿದ್ದರೂ ಅದರ ಜೊತೆಗೆ ನಮಗೆ ಇಷ್ಟ ಬಂದಂತೆ ಮಾತನಾಡುವ ಖುಷಿ ಇದೆಯಲ್ಲ, ಅದೇ ಸಾಕು.

ಮಕ್ಕಳೊಡನೆ ಮಾತನಾಡುತ್ತಿರಬೇಕಂತೆ, ಬೇಗ ಮಾತು ಕಲಿಯತ್ತವಂತೆ. ಬಾಯಿಗೆ ಬಜೆ ತೇಯ್ದು ಹಾಕಿದರೂ ಬೇಗ ಮಾತು ಬರುತ್ತದಂತೆ. ಆದರೆ ಸಿಕ್ಕಾಪಟ್ಟೆ ಮಾತನಾಡಲು ಆರಂಭಿಸಿದರೆ ಅದನ್ನು ನಿಲ್ಲಿಸುವುದು ಹೇಗೆಂದು ನಂತರವೇ ಕಲಿಯಬೇಕು! ಎಲ್ಲೋ ಕೇಳಿದ್ದೋ, ಓದಿದ್ದೋ ನೆನಪು, ಕಿವಿ ಹಿಂಡಿದರೆ ಬುದ್ಧಿ ಚುರುಕಾಗುತ್ತದಂತೆ, ಅದಕ್ಕೇ ಹಿರಿಯರು ಮಕ್ಕಳ ಕಿವಿ ಹಿಂಡುತ್ತಿದ್ದುದಂತೆ. ಆದರೆ ನೋವು?
ನನ್ನ ಗಂಡ ಆಗಾಗ ಅದೇನೋ ತಮಾಷೆ ಮಾಡುತ್ತಿರುತ್ತಾರೆ. ‘ನೋಡು, ಮಗೂನ ಹೇಗೆ ಮಲಗಿಸಬೇಕೆಂಬ ಸರಳ ಸೂತ್ರವನ್ನು ಗೂಗಲ್ನಲ್ಲಿ ನೋಡಿದೆ,’ ಎಂದು ಹೇಳಿದರು. ಏನಾದರೂ ಸುಲಭ ವಿಧಾನವಿದ್ದರೆ ಇರಲಿ, ಎಂದು ನಾನು ‘ಏನು’ ಎಂದು ಕೇಳಿದೆ.

‘ತುಂಬಾ ಸರಳ. ಮಲಗಿಸುವಾಗ ಕಾಲಿದ್ದ ಕಡೆ ತಲೆ ಇರಬಾರದು, ತಲೆ ಇದ್ದ ಕಡೆ ಕಾಲಿರಬಾರದು, ಅಷ್ಟೇ,’ ಎಂದರು. ಅರ್ಥವಾಗಲು ನನಗೆ ತುಸು ಹೊತ್ತೇ ಬೇಕಾಯಿತು. ನಿವೃತ್ತರಾದ ಮೇಲೆ ಅವರಿಗೆ ಇಂತಹದೇ ಹಾಸ್ಯ ಹೊಳೆಯೋದು.

ಹಗಲಾದರೆ ಪರವಾಗಿಲ್ಲ, ರಾತ್ರಿ ಮಾತ್ರ ನರಕ. ತೂಗಿ, ತೂಗಿ ಕೈ ಬಸವಳಿದು, ನಂತರ ನಾನು ಮಾಡಿದ ಹೊಸ ಐಡಿಯಾ ಎಂದರೆ ತೊಟ್ಟಿಲಿಗೆ ಹಗ್ಗ ಕಟ್ಟಿ, ಕೈಲಿ ಹಿಡಿದು, ತೂಗುವುದು. ನಂತರ ಕೈಗೆ ಸುಸ್ತಾದರೆ ಅದೇ ಹಗ್ಗವನ್ನ ಕಾಲಿಗೆ ಕಟ್ಟಿ ಕಾಲಿನಿಂದಲೇ ತೂಗುವುದು. ತುಸು ಹೊತ್ತಿನ ನಂತರ ಕೈ-ಕಾಲುಗಳನ್ನು ಮಾತುವುದು. ದೇವರೇ, ಈ ವಯಸ್ಸಿನಲ್ಲಿ ನಾನು ನಿನ್ನಿಂದ ಇನ್ನೇನನ್ನೂ ಬೇಡುವುದಿಲ್ಲ, ರಾತ್ರಿ ಸುಮ್ಮನೆ ನಿದ್ರಿಸುವ ಮಗುವನ್ನು ಕೊಡು, ಮಾತ್ರ ಎಂದು.

ಏನೇ ಹೇಳು ಪ್ರಿಯ ಸ್ನೇಹಿತೆ, ಮಗುವೊಂದು ಮನಗೆ ಬಂದ ಮೇಲೆ ನನ್ನ ಮಂಡಿ ನೋವು, ಬಿಪಿ, ಸುಸ್ತು ಇವೆಲ್ಲಾ ಮಾಯವಾಗಿಬಿಟ್ಟಿವೆ. ಗುಣವಾಗಿದೆಯೋ ಅಥವಾ ಅದರ ಬಗ್ಗೆ ಗಮನ ಹರಿಸಲು ಆಗುತ್ತಿಲ್ಲವೋ? ಅವುಗಳು ನನ್ನ ದೇಹವೆಂಬ ಮನೆಗೆ ಬಂದ ಅನಾಹ್ವಾನಿತ, ಅನಪೇಕ್ಷಿತ ಅತಿಥಿಗಳು. ಉಪಚರಿಸಿದರೆ ಅಲ್ಲೇ ಠಿಕಾಣಿ ಹೂಡುತ್ತವೆ, ನಿರ್ಲಕ್ಷಿಸಿದರೆ ಬೇಸರವಾಗಿ ಓಡಿ ಹೋಗುತ್ತವೆಯೋ ಏನೋ. ಈ ಕೂಸಿನಿಂದಾಗಿ ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತಿದೆ. ಯಾಕೆ ಎಂದು ಕೇಳುವಿಯಾ? ಕೆಳಗಿನವನ್ನು ಇನ್ನಷ್ಟು ಓದು.

ಈಗ, ಸಾಮಾಜಿಕ ಮಾಧ್ಯಮ ಬಂದಾಗ, ಎಷ್ಟೆಲ್ಲಾ ಬದಲಾವಣೆಗಳನ್ನು ಗಮನಿಸುತ್ತಿದ್ದೇವೆ ಸ್ನೇಹಿತೆ. ಮೊದಲು, ಅಂದರೆ ನಮ್ಮ ಕಾಲದಲ್ಲಿ, ತಮಿಳಿಗರು ಹೇಳುವ ‘ಅಂದ ಕಾಲತ್ತಿಲೆ,’ ಮನೆಗಳಲ್ಲಿ ಹೆರಿಗೆಗಂತಲೇ ಕತ್ತಲ ಕೋಣೆ ಇರುತ್ತಿತ್ತು, ಅಲ್ಲಿ ಹೊಸ ಬಾಣಂತಿ ಹತ್ತು ದಿನ ಇರಬೇಕಿತ್ತು. ನನಗೆ ನೆನಪಿದೆ, ನನಗೆ ಆಗ ಮೊದಲು ಸೀಗೆ ಸೊಪ್ಪಿನ ನೀರು ಹುಳಿ ಸಾರು ಕೊಡುತ್ತಿದ್ದರು, ನಂತರ ಮೆಣಸಿನ ಕಾಳಿನ ಸಾರು, ಹತ್ತು ದಿನಗಳ ಕಳೆದ ಮೇಲೆ ಪಂಡಿತರು ಕೊಡುವ ಲೇಹ್ಯ, ತುಸುವೇ ಬೇಳೆ ಬೇಯಿಸಿ ಮಾಡಿದ ಸಾರು, ಜೊತೆಗೆ ದಿನಕ್ಕೆ ಕಂಪಲ್ಸರಿಯಾಗಿ ಒಂದು ಲೀಟರ್ ಮೊಸರು, ಖಾರದ ಮಿಡಿ ಉಪ್ಪಿನ ಕಾಯಿ, ಇವೇ ಆಹಾರ. ಹೊಟ್ಟೆಗೆ ಸದಾ ಗಟ್ಟಿಯಾಗಿ ಬಟ್ಟೆ ಸುತ್ತಿಕೊಂಡಿರಬೇಕಾಗಿತ್ತು.

ಅಂದು ಮಾತ್ರೆಗಳೇ ಇರಲಿಲ್ಲ. ಆದರೆ ಈಗ? ಬರೀ ರಾಸಾಯನಿಕಗಳು, ಮಾತ್ರೆಗಳು, ಮೆಡಿಸಿನ್ಗಳು. ಮೆಡಿಕಲ್ ಮಾಫಿಯಾಗಳು ಎಲ್ಲವನ್ನೂ ನಿಯಂತ್ರಿಸುತ್ತವೆ, ಎನ್ನುತ್ತಾರೆ ಇವರು.
ಅಂದು ಬಾಣಂತಿ ಮನೆಗೆ ಸೂತಕದ ನೆಪದಲ್ಲಿ ಅಲ್ಲಿಗೆ ಯಾರಿಗೂ ಪ್ರವೇಶ ಇರಲಿಲ್ಲ. ಸೂಲಗಿತ್ತಿ ಹತ್ತು ದಿನಗಳ ಕಾಲ ದಿನಾ ಬಂದು ತಾಯಿ ಮತ್ತು ಮಗುವಿನ ಸ್ನಾನ ಮಾಡಿಸಿ ಹೋಗುತ್ತಿದ್ದಳು. ನನಗೆ ನೆನಪಿರುವಂತೆ ಕೊನೆಗೆ ಅವಳ ಕೈಗೆ ಒಂದು ಸೀರೆ, ಎರಡು ಸೇರು ಅಕ್ಕಿ, ಇವಿಷ್ಟನ್ನು ಕೊಟ್ಟರಾಯಿತು. ಈಗ ನಗರದಲ್ಲಿ ಅಷ್ಟೇ ಮಾಡಲು ದಿನಕ್ಕೆ ಐದುನೂರು ರೂಪಾಯಿ, ಅಬ್ಬಬ್ಬಾ, ಎಷ್ಟು ದೊಡ್ಡ ಮೊತ್ತ ಅಲ್ಲವೇ, ಕೊಡಬೇಕು. ಜೀವನ ದುಬಾರಿಯಾಗಿದೆ.

ಅಂದು ಕೂಡು ಕುಟುಂಬಗಳಾಗಿರುವ ಕಾರಣ ಮನೆಯಲ್ಲಿ ಸದಾ ಒಂದೋ ಎರಡೋ ಗರ್ಭಿಣಿಯರು, ಬಾಣಂತಿಯರು ಇರುತ್ತಿದ್ದರು. ಒಬ್ಬ ತಾಯಿ ಇನ್ನೊಬ್ಬ ತಾಯಿಯ ಮಗುವಿಗೆ ಹಾಲು ಉಣಿಸುವುದೂ ಸಹಜವಾಗಿತ್ತು. ಒಂದು ಕೂಸು ಕಕ್ಕ ಮಾಡಿದರೆ, ಹಿರಿಯರು ಮೂಗು ಮುಚ್ಚಿಕೊಂಡು ಹೇಳುವಂತೆ ‘ಹೇಂತಿತ್ತು ಕಣೇ.’ ಆದರೆ ಅಡಕೆಯ ಹಾಳೆಯ ಚೂರು ಇರುತ್ತಿತ್ತು, ತೆಗೆದು ಎಸೆಯಲು. ಈಗ? ಅದೇನೋ ಡಯಪರ್ ಅಂತೆ.

ಗರ್ಭಿಣಿಯು ಇನ್ನೇನು ಹೆರಬೇಕು, ದಿನ ಸಮೀಪಿಸುತ್ತಿದೆ ಎಂಬ ಹೊತ್ತಿನಲ್ಲಿ ಮನೆಯ ಹಿರಿಯರು ಹಲವಾರು ಪೋಸ್ಟ್ ಕಾರ್ಡುಗಳನ್ನು ತಂದಿಡುತ್ತಿದ್ದರು. ಅದರಲ್ಲಿ, ಎಂದಿನ ಒಕ್ಕಣೆ. ಮೇಲೆ ಕುಲ ದೇವರ ಸ್ಮರಣೆಯ ಸಾಲು. ನಂತರ ‘ನಾನು ಕ್ಷೇಮ, ನೀವು ಕ್ಷೇಮವೆಂದು ಭಾವಿಸುತ್ತೇನೆ. ಉಭಯ ಕುಶಲೋಪರಿ ಸಾಂಪ್ರತ ಪ್ರಸ್ತುತ ವಿಷಯ ಏನೂಂದ್ರೆ ನನ್ನ ಧರ್ಮಪತ್ನಿ, ಹರಿದ್ರಾ ಕುಂಕುಮ ಶೋಭಿತೆ, ಚಿರಂಜೀವಿ ಸೌಭಾಗ್ಯವತಿ ಶ್ರೀಮತಿ (ಹೆಸರಿಗೆ ಖಾಲಿ ಜಾಗ) ರವರು ಸನ್ (ವರ್ಷ) ಇಸವಿ, (ತಿಂಗಳು) ಮಾಹೆ ತೇದಿ (ದಿನಾಂಕ) ರಂದು (ಹೆಣ್ಣು ಅಥವಾ ಗಂಡು) ಮಗುವಿಗೆ ಜನ್ಮವಿತ್ತಿದ್ದಾಳೆ. ತಾಯಿ ಮತ್ತು ಮಗು ಇಬ್ಬರೂ ಅರೋಗ್ಯ, ಮತ್ತಿತರ ವಿಷಯಗಳು ಮೊಕ್ತಾ, ಇಂತಿ ನಿಮ್ಮ ವಿಶ್ವಾಸಿ,’ ಎಂದು ಬರೆದು, ಮಗುವಿನ ಜನ್ಮದ ನಂತರ ಪತ್ರದಲ್ಲಿ ಬಿಟ್ಟ ಖಾಲಿ ಜಾಗದಲ್ಲಿ ಸೂಕ್ತ ವಿಷಯ ತುಂಬಿ ಅಂಚೆ ಡಬ್ಬಕ್ಕೆ ಅದನ್ನು ಹಾಕುತ್ತಿದ್ದರು. ಆದರೆ ಈಗ? ಮಗು ಜನಿಸಿ ಕೆಲವೇ ಸೆಕೆಂಡುಗಳಲ್ಲಿ ಅದರ ವಿವರ, ಫೊಟೋ ಎಲ್ಲರ ಮೊಬೈಲ್ನಲ್ಲಿ ಇರುತ್ತದೆ. ಅಚ್ಚರಿಯೆನಿಸುತ್ತದೆ ನನಗೆ!

ಆ ಕಾಲದಲ್ಲಿ ವಿಳಾಸಗಳನ್ನು ಹೇಗೆ ಬರೆಯುತ್ತಿದ್ದರು ಗೊತ್ತ? ಮೈಸೂರು ಪ್ರಾಂತದ (ನಿನಗೆ ನೆಪಿರಬುದು, ೧೯೭೩ ನವೆಂಬರ್ ಒಂದರಂದು ರಾಜ್ಯ ಕರ್ನಾಟಕವಾಯಿತು) ದಕ್ಷಿಣ ಕನ್ನಡ ಜಿಲ್ಲೆಯ (ಆಗ ಅವಿಭಜಿತ ಜಿಲ್ಲೆ) ಕುಂದಾಪುರ ತಾಲೂಕಿನ ಮರವಂತೆಯ ನಿವಾಸಿ ಶ್ರೀ/ಶ್ರೀಮತಿ…… ರವರಿಗೆ/ಗೆ/ಳಿಗೆ/ನಿಗೆ ಎಂದು ಬರೆಯುತ್ತಿದ್ದರು. ಮೊದಲು ದೇಶ, ನಂತರ ರಾಜ್ಯ, ಆಮೇಲೆ ಜಿಲ್ಲೆ, ತರುವಾಯ ತಾಲೂಕು, ನಂತರ ಗ್ರಾಮ, ಆಮೇಲೆ ಹೆಸರು, ಇದೇ ಸರಿಯಾದ ಕ್ರಮವಲ್ಲವೇ? ಇಂಗ್ಲಿಷಿನವರದು ಎಂದಿಗೂ ತಿರುಗಾ ಮುರುಗಾ!

ಆರೋಗ್ಯವಾಗಿರುವ ಮಗುವೇನು ವಿಶೇಷವಾಗಿದ್ದನ್ನು ಕೇಳುತ್ತದೆಯೇ? ಇಲ್ಲ, ಹೊತ್ತಿಗೆ ಸರಿಯಾಗಿ ಕುಡಿಯಲು ಒಂದಿಷ್ಟು ಹಾಲು. ಕೊಟ್ಟರಾಯಿತು ಅಷ್ಟೇ. ಶೌಚವೋ, ಮೂತ್ರವೋ ಮಾಡಿಕೊಂಡಾಗ ಚೊಕ್ಕಗೊಳಿಸುವುದು, ಇವಿಷ್ಟೇ. ಆದರೆ ತಡಮಾಡಿದರೆ ಮಾತ್ರ ರಂಪ ಮಾಡುತ್ತದೆ. ಮೂರು ತಿಂಗಳ ಮಗುವಿನ ರೋದನದ ಸ್ವರ ಮಾತ್ರ ಕರ್ಕಶ. ತೊಂಬತ್ತು ದಿನಗಳ ಕೂಸು ಮನೆಯವರನ್ನು ನಿಯಂತ್ರಿಸುತ್ತದೆ. ಯಾಕೆ ಆಳ್ತಿ, ಏನು ಬೇಕಂತ ಹೇಳಬಾರದೇ, ಎಂದು ಗಂಡ ಕೆಲವೊಮ್ಮೆ ಗದರುವುದಿತ್ತು. ಆಗ ಮಗಳು ತನ್ನ ಮಗುವಿನ ಪರವಾಗಿ ಹೇಳುತ್ತಿದ್ದಳು, ‘ಇನ್ನು ಸ್ವಲ್ಪ ದಿನ ಹೋಗಲಿ ಅಜ್ಜಾ, ಏನು ಬೇಕಾದರೂ ನಿಮ್ಮನ್ನೇ ಕೇಳಿ ಪಡೆಯುತ್ತೇನೆ,’ ಎಂದು. ಈ ನಮ್ಮ ಮನೆಗೆ ಅದೇ ಬಾಸ್. ನಮ್ಮ ಯಾವುದೇ ಅಹಂ ಅದರೆದುರು ನಡೆಯುವುದಿಲ್ಲ. ಅಲ್ಲವೇ?

ಗೊತ್ತಾ ನಿನಗೆ? ಅವಳಿಗೆ ಒಂದು ಹಾಡು ಇಷ್ಟ ಎಂದು? ನಿನಗಾದರೂ ಹೇಗೆ ಗೊತ್ತಿರಬೇಕು ಪಾಪ! ಆ ಹಾಡೆಂದರೆ ‘ಯಾವ ಕುಲವೋ ರಂಗ, ಅರಿಯದಾಗಿದೆ. ಯಾವ ಕುಲವೆಂದರಿಯದಾಗಿದೆ ಗೋವ ಕಾಯುವ ಗೊಲ್ಲನಂತೆ…’ ಈ ಹಾಡನ್ನು ಹಾಕಿದರೆ ಮಗು ತನ್ನದೇ ಆದ ಲೋಕಕ್ಕೆ ಜಾರಿ ಅಳು ನಿಲ್ಲಿಸುತ್ತದೆ. ನಮಗಂತೂ ಆ ಹಾಡನ್ನು ಕೇಳಿ ಕೇಳಿ ಬೇಸರವಾದರೂ ಮಗುವಿನ ಇಚ್ಛೆ ಎದುರು ಸುಮ್ಮನಿರಲೇಬೇಕು.
ಆದರದು ಸ್ವಲ್ಪ ಕಾಲ. ನಂತರ ಆ ಹಾಡನ್ನು ಹಾಕಿದರೆ ಮೊದಲು ಸಂಗೀತ ಕೇಳುತ್ತದೆ, ನಂತರ ‘ಯಾವ..’ ಶುರುವಾಗುತ್ತಲೇ ಜೋರಾಗಿ ಅಳಲು ಆರಂಭಿಸುತ್ತದೆ. ಅದಕ್ಕೆ ಕೂಡಾ ನಮ್ಮಂತೆಯೇ ಓವರ್ ಡೋಸ್ ಆಗಿರಬೇಕು. ನಂತರ ನಾವು ಪರಿಚಯಿಸಿದ್ದು ‘ಜೋ, ಜೋ, ಅತ್ತಿತ್ತ ನೋಡದಿರು, ಮತ್ತೆ ಹೊರಳಾಡದಿರು, ನಿದ್ರೆ ಬರುವಳು ಹೊದ್ದು, ಮಲಗೋ ಮಗುವೇ,’ ಗೀತೆ. ಈ ಹಾಡನ್ನು ಹಾಕಿದರೆ ಊಟ ತಿನ್ನಿಸುವುದು ಸುಲಭ, ಮಲಗಿಸುವುದೂ ಸರಳ. ಆದರೆ ಅದು ಎಷ್ಟು ದಿನವೋ ಕಾಣೆ.

ಅಲ್ಲಾ, ಮಕ್ಕಳಿಗೆ ಗಾಯನ ಎಂದರೇನು ಎಂಬುದು ಹೇಗೆ ತಿಳಿಯುತ್ತದೆ? ಹಿಂದೆಲ್ಲಾ ತಾಯಿಯೋ, ಅಜ್ಜಿಯೋ ಜೋಗುಳ ಹಾಡಿ ಮಗುವನ್ನು ಮಲಗಿಸುತ್ತಿದ್ದರು, ಅಥವಾ ಜೋಗುಳದ ಕಿರಿಕಿರಿ ತಪ್ಪಿಸಿಕೊಳ್ಳಲು ಮಗುವೇ ನಿದ್ರಿಸಿದ ಹಾಗೆ ನಟಿಸುತ್ತಿತ್ತೋ ಏನೋ. ಈಗ ಜೋಗುಳಗಳ ಕಾಲ ಮುಗಿದೇ ಹೋಗಿದೆ. ಏನಿದ್ದರೂ ಸಿನೆಮಾ ಹಾಡು. ಅದೇ ಕಂದನಿಗೆ ಯಾರಾದರೂ ಜಗಳವಾಡಿದರೆ, ಏರು ದನಿಯಲ್ಲಿ ಮಾತನಾಡಿದರೆ, ಅದು ಹೇಗೆ ತಿಳಿಯುತ್ತದೋ ಕಾಣೆ, ಮುಖ ಚಿಕ್ಕದು ಮಾಡಿಕೊಳ್ಳುತ್ತದೆ ಅಥವಾ ಅಳಲು ಶುರುಮಾಡುತ್ತದೆ. ಅದಕ್ಕೇ ನನ್ನ ಗಂಡ ಹೇಳಿಬಿಟ್ಟಿದ್ದರು, ಅದರ, ಅಂದರೆ ಪುಟಾಣಿಯ ಎದುರು ಜೋರಾಗಿ ಮಾತಾಡಬಾರದು, ಎಂದು. ಜೋರು ದನಿಯ ಮಾತು ಎಂದರೆ ಜಗಳವೇ ಅಲ್ಲವೇ?

ನನಗೆ ನೆನಪಾಗಿದ್ದು ಒಂದೇ ಜೋಗುಳ. ಮಗುವನ್ನು ಕೂಸುಮರಿ ಮಾಡಿಸಿಕೊಂಡು ಅದನ್ನೇ ಹಾಡುತ್ತಿದ್ದೆ, ‘ಆನೆ ಬಂತೊಂದಾನೆ, ಯಾವೂರಾನೆ, ಸಿದ್ದಾಪುರದಾನೆ, ಇಲ್ಲಿ ಯಾಕೆ ಬಂತು? ದಾರಿ ತಪ್ಪಿ ಬಂತು. ನಮ್ಮನೆಗ್ಯಾಕೆ ಯಾಕೆ ಬಂತು? ಮಗೂನ ನೋಡೋಕೆ ಅಂತು. ಯಾವ ಮಗು ಅಂದ್ರೆ? ನಮ್ಮ ಪುಟ್ಟಿ ಅಂತು….’ ಮೊದಲಿನೆರಡು ಸಾಲು ಮಾತ್ರ ಕೇಳಿದ್ದು, ಉಳಿದಿದ್ದು ಸ್ವಯಂ ಕಲ್ಪಿತ. ಪರವಾಗಿಲ್ಲ, ನಾನೂ ಕವಿಯಾಗಿಬಿಟ್ಟೆ. ಇದು ಮಗುವಿನ ಸಾಹಚರ್ಯದ ಪ್ರಭಾವ.

ನನ್ನ ಗಂಡ ಅಂತೂ ಅವಳನ್ನು ನೋಡಿ ಕವನ ಎಂದು ತಾವೇ ಹೆಸರಿಟ್ಟ ಅದೇನನ್ನೋ ಬರೆದಿದ್ದಾರೆ, ಬರೆದರೆ ಪರವಾಗಿಲ್ಲ, ಕವಿತೆ, ಕವನಗಳೆಂದರೆ ಮೈ ತುರಿಸಿಕೊಳ್ಳುವ ನನ್ನೆದುರೂ ಓದಿ ಹೇಳಿಬಿಟ್ಟಿದ್ದಾರೆ. ಅವರ ಮನಸ್ಸಿಗೆ ಯಾಕೆ ಬೇಸರ ಮಾಡಬೇಕೆಂದು ನಾನು ಕೂಡಾ ‘ಚೆನ್ನಾಗಿದೆ,’ ಎಂದು ನಾಲಿಗೆ ಮಾತ್ರದಿಂದ ಹೇಳಿದ್ದೆ. ಅದೇನು ಎಂದು ಓದು,

ಸುಂದರ ಸಲಿಲ
ತಂಬೆಲರ ಲಲಲ
ಅರಳಿದ ತಾವರೆಯ ಮೇಲೆ
ಮುಂಜಾನೆಯ ಕವಿದ ಚುಂಬನ
ಈ ಮಗುವಿನ ವದನ.

ಅದರ ಅರ್ಥವೇನು ಎಂದು ನಾನು ಕೇಳಲಿಲ್ಲ. ಆಗ, ಅಂದರೆ ನಲವತ್ತು ವರ್ಷಗಳ ಹಿಂದೆ ಅವರು ಕವನ ರೂಪದಲ್ಲಿ ಕಳುಹಿಸಿದ ಪ್ರೇಮಪತ್ರವನ್ನು ಇಷ್ಟಪಟ್ಟೇ ನಾನು ಅವರನ್ನು ಮದುವೆಯಾಗಿದ್ದು ಎಂದು ಇಂದಿಗೂ ಭಾವಿಸಿದ್ದಾರೆ. ಆದರೆ ಸತ್ಯ ಹೇಳುತ್ತೇನೆ ಕೇಳು, ನಾನು ಅವರು ಕೊಟ್ಟ ಪತ್ರವನ್ನು ಬಿಚ್ಚಿ ಕೂಡಾ ನೋಡಿರಲಿಲ್ಲ. ಆಗೆಲ್ಲಾ ಭಾವೀ ಪತಿ ಬರೆದ ಓಲೆಯನ್ನು ಓದುವುದಿರಲಿ, ಕೈಯಲ್ಲಿ ಹಿಡಿದುಕೊಳ್ಳುವುದು ಕೂಡಾ ಅಶ್ಲೀಲ, ಅಸಾಂಪ್ರದಾಯಿಕ, ಅಸಂಸ್ಕೃತಿ ಎಂಬ ಭಾವನೆ ಇತ್ತು. ಮದುವೆಯಾದ ಮೇಲೆ ಕೂಡಾ ಹೊರಗೆಲ್ಲಾದರೂ ಹೋದರೆ ಗಂಡ ಮೂರಡಿ ಮುಂದಿರುತ್ತಿದ್ದರು, ಹೆಂಡತಿಯಾದ ನಾನು ಹಿಂದೆ, ಅವರ ನಡಿಗೆಯ ವೇಗಕ್ಕೆ ಸರಿಯಾಗಿ ಓಡೋಡುತ್ತಾ ನಡೆಯಬೇಕಾಗಿತ್ತು. ಆರಡಿ ಉದ್ದದ ಅವರ ಹಿಂದೆ ಐದಡಿಯ ನಾನು ಹೇಗೆ ಹೋಗಬೇಕಾಗಿತ್ತು ಗೊತ್ತಾ? ಇರಲಿ, ಇದು ಹಳೆಯ, ಅಂದರೆ ನಾಲ್ಕು ದಶಕಗಳ ಹಿಂದಿನ ಕತೆ. ಈಗ ಎಲ್ಲಿಗೂ ಹೋಗುವುದಿಲ್ಲ, ಯಾಕೆಂದರೆ ದೇಹ ಅದಕ್ಕೆ ಸರಿಯಾಗಿ ಸ್ಪಂದಿಸುವುದಿಲ್ಲ.

ಮದುವೆಯಾದ ಮೇಲೆ ಅವರು ಕವನ, ಕವಿತೆಗಳನ್ನು ಬರೆದಂತೆ ಕಾಣಲಿಲ್ಲ. ಪ್ರೀತಿಸುವ ಭರದಲ್ಲಿ ಹುಟ್ಟುವ ಕವಿತೆಗಳ ಆಯಸ್ಸು ಬಲು ಕಡಿಮೆ.

ಮಕ್ಕಳು ಬಲು ಸೂಕ್ಷ್ಮ, ಅಂದರೆ ಸೆನ್ಸಿಟಿವ್ ಎಂಬುದು ನನಗೆ ಗೊತ್ತಾಗಿದ್ದು ಮೊನ್ನೆ ಅಳಿಯನ ತಂಗಿ ಬಂದಿದ್ದಳು, ಮಗುವನ್ನು ನೋಡಿ ಆಶೀರ್ವದಿಸಲು. ಅಕ್ಕರೆಯಿಂದ ತನ್ನ ಮಗಳನ್ನು ಎತ್ತಿಕೊಂಡಿದ್ದರು. ತಕ್ಷಣವೇ ಮಗು ಜೋರಾಗಿ ಚೀರತೊಡಗಿತು. ತನ್ನನ್ನು ಎತ್ತಿಕೊಂಡದ್ದಕ್ಕೆ ಅತ್ತಿದ್ದಕ್ಕಾಗಿ ಅವರು ಬೇಸರ ಪಟ್ಟರು, ಅವರ ಮುಖ ಚಿಕ್ಕದಾಯಿತು ಎಂಬುದು ನನಗೆ ಗೊತ್ತಾಯಿತು. ನಾನು ಮಗುವನ್ನು ಅವರ ಕೈಯಿಂದ ತೆಗೆದುಕೊಂಡು ಆಡಿಸಿದೆ, ಮಗು ಅಳು ನಿಲ್ಲಿಸಿತು. ನಂತರ ಗೊತ್ತಾಯಿತು, ಅವರು ಮೈಗೆ ಅದೇನೋ ಡಿಯೋಡರೆಂಟ್ ಅಥವಾ ಫರ್ಫ್ಯೂಮ್ ಸ್ಪ್ರೇ ಮಾಡಿಕೊಂಡಿದ್ದರು, ಮಗುವಿಗೆ ಅದು ಇಷ್ಟವಾಗಲಿಲ್ಲ, ಎಂದು. ಅಲ್ಲ ಮಹಾರಾಯಿತಿ, ಈ ಚಿಕ್ಕ ಕಂದಮ್ಮಗಳಿಗೆ ಅದು ಹೇಗೆ ತಿಳಿಯುತ್ತದೆ? ಅದಾದ ನಂತರ ನಾವು ಮಗುವಿಗೆ ಶೀನು ಬರುತ್ತೆ ಎಂದು ಮನೆಯಲ್ಲಿ ಅಡುಗೆಗೆ ಒಗ್ಗರಣೆ ಹಾಕುವುದನ್ನೇ ಬಿಟ್ಟುಬಿಟ್ಟಿದ್ದೇವೆ. ಯಾರೂ ಪೌಡರ್ ಬಳಸುವುದಿಲ್ಲ ಮತ್ತು ಸ್ನಾನ ಮಾಡುವಾಗ ತಲೆಗೆ ಶಾಂಪೂ ಕೂಡಾ ಹಾಕುವುದಿಲ್ಲ. ಮನೆಯ ದೇವರಿಗೆ ಊದಿನಕಡ್ಡಿ ಹಚ್ಚುವುದಿಲ್ಲ, ಹೂ ಕೂಡಾ ತರುವುದಿಲ್ಲ, ಏರಿಸುವುದಿಲ್ಲ. ಮೊದಲು ದಿನಾಲೂ ಮನೆಯೊಳಗೆಲ್ಲಾ ರೂಂ ಫ್ರೆಷನರ್ ಸಿಂಪಡಿಸುತ್ತಿದ್ದ ನನ್ನ ಮಗಳು ಈಗ ಮಗುವಿಗಾಗಿ ಅದನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದಾಳೆ. ಆ ಕಾಲದಲ್ಲಿ ಗಂಡ ಮೊದಲು ಎಚ್ಚರಿಸುತ್ತಿದ್ದರು, ಮನೆಯೊಳಗೆ ಕೆಮಿಕಲ್ಸ್ ಹಾಕಬಾರದು, ಅನ್ಹೆಲ್ತಿ, ಎಂದು. ಆದರೂ ಮಗಳು ಕೇರ್ ಮಾಡುತ್ತಿರಲಿಲ್ಲ. ದೊಡ್ಡವರ ಎಚ್ಚರಿಕೆಗಳಿಗಿಂತ ಮಕ್ಕಳ ಸಲಹೆಗಳೇ ಹೆಚ್ಚು ಪ್ರಭಾವಶಾಲಿ.

ಮುಂದುವರೆಯುವುದು….

ಸೂರಿ ಹಾರ್ದಳ್ಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x