ಇನ್ನೂ ಒಂಬತ್ತು ತಿಂಗಳ ನಂತರ ನಡೆಯಬೇಕಾದದ್ದರ ಬಗ್ಗೆ ಈಗಲೇ ಈಗಲೇ ಯಾಕೆ ಯೋಚಿಸುತ್ತೇನೆ ನಾನು? ಆಗ ಮಗು ನಮ್ಮ ಮನೆಯಲ್ಲಿಯೇ ಇರುತ್ತದೆಯೋ? ಅದಕ್ಕಿಂತ ಮುಖ್ಯವಾಗಿ ನಾವು ಇರುತ್ತೇವೆಯೋ? ಥೂ, ಥೂ, ಕೆಟ್ಟದ್ದನ್ನು ಯೋಚಿಸಬಾರದು. ಅಸ್ತು ದೇವತೆಗಳು ಅಲ್ಲೆಲ್ಲಾ ಸುತ್ತುತ್ತಾ ‘ಅಸ್ತು, ಅಸ್ತು’ ಅನ್ನುತ್ತಿರುತ್ತಾರಂತೆ. ಹಾಗೆ ಆಗಿಯೂಬಿಡುತ್ತದಂತೆ. ಬಿಡ್ತು, ಬಿಡ್ತು, ನಾನು ಗಲ್ಲಕ್ಕೆ ಹೊಡೆದುಕೊಂಡಿದ್ದೆ.
ಮಗುವಿನ ಉತ್ತರೋತ್ತರ ಅಭಿವೃದ್ಧಿಗೆ ಈಗಲೇ ಯಾಕೆ ಬುನಾದಿ ಹಾಕುತ್ತೇವೆಯೋ ಗೊತ್ತಿಲ್ಲ. ಆಗ ಗಂಡ ಮತ್ತು ಹೆಂಡತಿಯರ ಸಂಬ ಂಧಗಳು ಹೇಗೆ ಉಳಿಯುತ್ತವೆ? ನಮ್ಮ ಕಾಲದಲ್ಲಿ ನಾವು ಗಂಡನನ್ನು ನೇರವಾಗಿ ಮಾತನಾಡಿಸುವಂತಿಲ್ಲ. ಬಾಗಿಲಿನ ಹಿಂದಿನಿ ಂದಲೇ ‘ರೀ,’ ಎಂತಲೋ, ‘ಏನ್ರೀ,’ ಎಂತಲೋ, ಕರೆಯಬೇಕಿತ್ತು. ‘ಪತಿದೇವರ’ ಹೆಸರು ಆಡಿದರೆ ಅವರ ಆಯಸ್ಸು ಕಡಿಮೆಯಾಗುತ್ತದೆ ಎಂಬ ನಂಬಿಕೆಯನ್ನು ನಮ್ಮ ಹಿರಿಯರು ನಮ್ಮ ತಲೆಯಲ್ಲಿ ತುಂಬಿದ್ದರು. ಅವರು ಗಂಡ ಎಂಬ ಗತ್ತಿನಿಂದ, ಗಡಸು ಸ್ವರದಲ್ಲಿ, ‘ಹೂಂ’ ಎಂದು ಕೇಳಬೇಕಿತ್ತು. ನಾವು ‘ಉಪ್ಪು ತರಬೇಕಿತ್ತು. ನೀವು ಪ್ಯಾಟೆ ಕಡೆಗೆ ಹೋದರೆ, ಮರೀದೇ ತನ್ನಿ,’ ಎಂದು ವಿನೀತ ಧ್ವನಿಯಲ್ಲಿ ಮನವಿ ಸಲ್ಲಿಸಬೇಕಿತ್ತು. ಅವರು ತಲೆ ಆಡಿಸಿಬಿಟ್ಟರೆ ನಮ್ಮ ಸಂಪರ್ಕ ಮುಗಿದಂತೆಯೇ.
ಆದರೆ ಈಗ? ಹೆಂಡತಿಯರು ಗಂಡನ್ನು ಹೆಸರಿನಿಂದಲೇ ಕರೆಯುತ್ತಾರೆ. ಸುತ್ತಮುತ್ತ ಇರುವ ಜನರು ಏನಾದರೂ ತಿಳಿದುಕೊಳ್ಳಲಿ, ತಮಗೇನು ಎಂಬ ಡೋಂಟ್ ಕೇರ್ ಬುದ್ಧಿ. ಅದೂ ಮತ್ತೆ ಮುಂದುವರಿದು, ‘ನೀನು’ ಎಂದು ಏಕವಚನದಲ್ಲಿ ಮಾತನಾಡಿಸುತ್ತಾರೆ. ಅದೇನು ಸಂಸ್ಕೃತಿಯೋ ಕಾಣೆ. ನಮ್ಮ ಪುಟ್ಟಿಯ ಕಾಲದಲ್ಲಿ ಏನಾಗಬಹುದೋ? ನನಗೆ ದಿಗಿಲಾಗುತ್ತದೆ.
ಮಗು ಬಂದ ಮೇಲೆ ಅದರ ಡಯಪರ್‌ಗಳು ಮನೆಯ ಎಲ್ಲೆಂದರಲ್ಲಿ ಇರುತ್ತವೆ, ಗಂಡನ ಕಂಪ್ಯೂಟರ್ ಟೇಬಲಿನ ಮೇಲೂ. ಮಗು ‘ಅದನ್ನು’ ಮಾಡಿಕೊಂಡರೆ ಅರ್ಜೆಂಟಿಗೆ ಬೇಕಲ್ಲ, ಅದಕ್ಕೆ. ‘ಅವರು’ ಒಮ್ಮೆ ಮಗುವಿಗೆ ಅಂದಿದ್ದರು, ‘ನೀನು ಹೀಗೆ ಎಲ್ಲೆಂದರಲ್ಲಿ ನಿನ್ನ ಕಾಚ ಇಟ್ಟರೆ ನನಗೆ ಕನ್‌ಫ್ಯೂಸ್ ಆಗುತ್ತದೆ. ನಾನು ಅದನ್ನು ನನ್ನದು ಎಂದು ಹಾಕಿಕೊಂಡರೆ ನಿನಗೆ ಲಾಸು,’ ಎಂದು. ಅಲ್ಲಿದ್ದ ನನ್ನ ಪುತ್ರಿ, ‘ಹಾಕಿಕೊಳ್ಳಿ ಅಜ್ಜಾ ಎನ್ನು ಅಮ್ಮಣ್ಣಿ, ನಾನು ನಿಮ್ಮದನ್ನ ಹಾಕಿಕೊಳ್ಳುತ್ತೇನೆ. ನಿಮ್ಮದರ ಬೆಲೆ ನೂರೈವತ್ತು ರೂಪಾಯಿ, ನನ್ನದರ ಬೆಲೆ ಏಳು ರೂಪಾಯಿ. ನಾನು ಒಮ್ಮೆ ಉಪಯೋಗಿಸಿ ಎಸೆಯುತ್ತೇನೆ, ನೀವು ತೊಳೆದು ಮತ್ತೊಮ್ಮೆ ಉಪಯೋಗಿಸುತ್ತೀರಿ,’ ಎಂದೆನ್ನು, ಎಂದಳು.
ಅಲ್ಲಿಯೇ ಇದ್ದ ನಾನು ಏನೆಂದು ಹೇಳಿದೆ ಗೊತ್ತಾ? ಅದು ನಮ್ಮ ಮನೆಯ ಪರಿಸ್ಥಿತಿ ವಿವರಿಸುವಂತಿದೆ. ‘ಪುಟ್ಟಿ, ಪ್ರತೀ ಸಲ ನೀನು ಹೊಸ ಡಯಪರ್ ಉಪಯೋಗಿಸ್ತಿ. ನಿಮ್ಮ ಅಜ್ಜನ ಕಾಚಗಳು ಹತ್ತು ಹನ್ನೆರಡು ವರ್ಷ ಹಳೆಯವು. ಅಲ್ಲಲ್ಲಿ ತೂತಾದರೂ ಇನ್ನೂ ಸ್ವಲ್ಪ ಕಾಲ ಬರುತ್ತೆ, ಎಂದು ಎಸೆಯದೇ, ಹೊಸತು ತರದೇ ಹಳೆಯದನ್ನೇ ಇಟ್ಟುಕೊಂಡಿದ್ದಾರೆ, ವ್ಯಾಕ್, ವ್ಯಾಕ್. ನೀನೇ ಕ್ಲೀನು ಪುಟ್ಟ ಮರಿ, ನಿನ್ನಜ್ಜ ಗಲೀಜು,’ ಎಂದು. ಇದು ಸತ್ಯಸ್ಯ ಸತ್ಯ.
ಕೆಲವರದು ಕೆಟ್ಟ ಕಣ್ಣು ಎನ್ನುತ್ತಾರಪ್ಪ. ಇತ್ತೀಚೆಗೆ, ಕೃಷ್ಣಾಷ್ಟಮಿಯಂದು, ಮಗುವಿಗೆ ಮಗುವಿನ ಕೃಷ್ಣನ ಅಲಂಕಾರ ಮಾಡಿದೆವು. ಆನ್‌ಲೈನ್‌ನಲ್ಲಿ ಅದಕ್ಕೆ ಬೇಕಾದ ವಸ್ತುಗಳನ್ನೂ ಮಾರುತ್ತಾರಪ್ಪ, ಅದನ್ನು ಮಗಳು ತರಿಸಿದ್ದಳು. ಅಂದು ತಲೆಗೆ ಆ ಪೇಪರ್ ಕಿರೀಟ ಇಟ್ಟು, ಅದಕ್ಕೆ ನವಿಲುಗರಿ ಸಿಕ್ಕಿಸಿ, ಪಕ್ಕ ಶೃಂಗರಿಸಿದ ಕೊಳಲಿನಂತೆ ಕೊಳವೆ ಇಟ್ಟು, ಆರ್ಟಿಫೀಸಿಯಲ್ ವಸ್ತುಗಳಿಂದ ಮೈಯನದನು ಶೃಂಗರಿಸಿ, ಫೋಟೋ ಕ್ಲಿಕ್ಕಿಸಿ, ಬೇರೆಯವರಿಗೆಲ್ಲಾ ಫಾರ್ವರ್ಡ್ ಮಾಡಿದ್ದಳು ಮಗಳು. ಮಗುವು ಚೆನ್ನಾಗಿತ್ತು, ಆದರೆ ಅದೇ ಸಂಜೆ ರಚ್ಚೆ ಹಿಡಿಯಿತು. ಏನು ಮಾಡಿದರೂ ಸುಮ್ಮನಾಗಲಿಲ್ಲ. ಆಗ ಪಕ್ಕದ ಮನೆಯವರು ಬಂದು, ದೃಷ್ಟಿ ತೆಗೀರಿ, ಸರಿಹೋಗುತ್ತೆ, ಎಂದು ಸಲಹಿಸಿದರು. ನಾನು ಅದನ್ನು ನಂಬುವುದಿಲ್ಲವಾದರೂ ಇರಲಿ, ನೋಡಿಬಿಡೋಣ, ಎಂದು ಅವರಿಗೇ ರಿಕ್ವೆಷ್ಟ್ ಮಾಡಿದೆ. ಒಂದು ಹಿಡಿಯಷ್ಟು ಹಿಡಿಕಡ್ಡಿಯನ್ನು ತೆಗೆದುಕೊಂಡು, ಮಗುವಿಗೆ ಬಲಭಾಗದಿಂದ, ಎಡಭಾಗದಿಂದ, ಮೇಲಿನಿಂದ, ಕೆಳಗಿನಿಂದ ನಿವಾಳಿಸಿದರು. ನಾಯಿ ಕಣ್ಣು, ನರಿ ಕಣ್ಣು, ಕತ್ತೆ ಕಣ್ಣು, ಕೆಟ್ಟ ಕಣ್ಣು, ಹಂದಿ ಕಣ್ಣು, ಅಮ್ಮನ ಕಣ್ಣು, ಅಜ್ಜಿ ಕಣ್ಣು, ಎಲ್ಲಾ ಹೋಗಲಿ, ಥೂ, ಥೂ, ಥೂ ಎಂದು ಉಗಿದಂತೆ ಮಾಡಿ ಬಚ್ಚಲು ಮನೆಗೆ ಅದನ್ನು ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿದರೆ ಅದೇನಂತಿ, ಚಟಪಟ ಚಟಪಟ ಎಂದು ಸದ್ದು ಮಾಡುತ್ತಾ ಸುಡೋದೇ? ತುಸು ಹೊತ್ತಿನಲಿಯೇ ಮಗು ಸುಮ್ಮನಾಯಿತು. ನಾನು ಹಿಡಿಕಡ್ಡಿಗೆ ಸುಮ್ಮನೆ ಬೆಂಕಿ ಹಚ್ಚಿದರೆ ಅದು ಚಟಪಟ ಸದ್ದೇ ಮಾಡಲಿಲ್ಲ. ಯಾಕೆ?
ಮಕ್ಕಳಿಗೆ ದೃಷ್ಟಿ ಬೀಳುವುದು ಇದೆಯೇ? ಇರಬಹುದು. ಕೇಳಿದ್ದೋ, ಓದಿದ್ದೋ ನೆನಪು, ಕೆಲವರು ಕಾಯಿ ತುಂಬಿದ ಮಾವಿನ ಮರ ನೋಡಿ, ಅಬ್ಬಬ್ಬಾ, ಎಷ್ಟೊಂದು ಕಾಯಿ ಆಗಿದೆ ಎಂದು ಹೇಳಿಬಿಟ್ಟರೆ ಎರಡೇ ದಿನಗಳಲ್ಲಿ ಎಲ್ಲಾ ಮಿಡಿಗಳೂ, ಬೆಳೆದ ಕಾಯಿಗಳೂ ನೆಲಕ್ಕೆ ಬಿದ್ದೇ ಹೋಗುತ್ತವಂತೆ. ಹೌದಾ? ಇಂದಿಗೂ ನನ್ನನ್ನು ಕಾಡುವ ಪ್ರಶ್ನೆ. ಇಲ್ಲಿ ಯಾರೂ ಮಗುವನ್ನು ಶೃಂಗರಿಸಿದ್ದನ್ನು ಕಣ್ಣಾರೆ ನೋಡಿಲ್ಲ. ಕೇವಲ ಫೋಟೋ ಮಾತ್ರ ನೋಡಿದ್ದಾರೆ. ಪಟ ನೋಡಿದರೂ ಎಷ್ಟೋ ದೂರದಲ್ಲಿರುವ ಮಗುವಿಗೆ ದೃಷ್ಟಿ ಆಗಲು ಸಾಧ್ಯವೇ? ಯಾರಾದರೂ ಉತ್ತರಿಸಬೇಕು.
ದೃಷ್ಟಿಯಾಗುತ್ತದೆ ಎಂಬ ನಂಬಿಕೆ ಇಂದಿನದಲ್ಲ, ಬಲು ಹಳೆಯದು. ಕಟ್ಟಡದ ಮೇಲೆ ಕುಂಬಳಕಾಯಿ ಕಟ್ಟುವುದು, ಬೊಂಬೆ ಇಡುವುದು, ಲಾರಿಗಳ ಹಿಂದೆ ಕುದುರೆ ಲಾಳ ಹಾಕುವುದು, ಹಳೆಯ ಚಪ್ಪಲಿ ತೂಗುಹಾಕುವುದು, ಕಾರಿನೊಳಗೆ ಹಸಿ ಮೆಣಸಿನಕಾಯಿ, ಲಿಂಬುಹಣ್ಣನ್ನು ತೂಗುಹಾಕುವುದು, ಇತ್ಯಾದಿ. ಕೆಲವು ಲಾರಿಗಳ ಹಿಂದೆ ‘ಬೂರಿ ನಜರ್‌ವಾಲೇ, ತೇರಾ ಮುಹ್ ಕಾಲಾ’ ಎಂದೂ ಬರೆದಿರುತ್ತಾರೆ. ಅದನ್ನು ಓದಿದ ನನಗೆ ತುಂಬಾ ಮುಜುಗರವಾಗುತ್ತದೆ. ನಾನು ಚಿಕ್ಕವಳಿದ್ದಾಗ ಒಂದು ಬಾರಿ ಒಂದು ವಿಶೇಷ ಘಟನೆ ನಡೆಯಿತು. ಶಾಲೆಗೆ ಹೋಗುವ ದಾರಿಯಲ್ಲಿ ಎಲ್ಲರಿಗೂ ಕಾಣಿಸುವಂತೆ ಯಾವುದೋ ಕಾಂಪೌ ಂಡ್ ಗೋಡೆಯ ಮೇಲೆ ಯಾರೋ ಬರೆದಿದ್ದರು, ‘ಇದನ್ನು ಓದುವವನು ಬಲು ಮೂರ್ಖ,’ ಎಂದು. ನೋಡಬಾರದೆಂದುಕೊ ಂಡರೂ ಅದು ನನ್ನ ಕಣ್ಣಿಗೆ ರಾಚುತ್ತಿತ್ತು, ಒಳಗೇ ನನ್ನನ್ನು ಮೂರ್ಖ ಎಂದು ಕರೆದ ಆ ವ್ಯಕ್ತಿಯ ಬಗ್ಗೆ ಕೋಪ ಬರುತ್ತಿತ್ತು. ಒಂದು ದಿನ ನಾನು ತಡೆಯಲಾರದೇ ಹಳೆಯ ಇದ್ದಿಲಿನ ಚೂರಿನಿಂದ ಕೆಳಗೆ ಬರೆದೆ, ‘ಇದನ್ನು ಬರೆದವನು ಕಡು ಮೂರ್ಖ, ಅಯೋಗ್ಯ,’ ಎಂದು. ಸ್ವಲ್ಪ ತೃಪ್ತಿಯಾಯಿತಾದರೂ…
ಇನ್ನು ಎರಡು ತಿಂಗಳು, ಬರೀ ಎರಡು ತಿಂಗಳು, ಕಾಲ ಮಿಂಚಿನ ಂತೆ ಸಾಗುತ್ತದೆ, ನನ್ನ ಅಳಿಯ ಬಂದು ನನ್ನ ಮಗಳನ್ನು ಮತ್ತು ಮಗುವನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ. ನನ್ನ ಮಗಳು ಅವರ ಹೆಂಡತಿ, ಮಗು ಅವರದು. ಕರೆದುಕೊಂಡು ಹೋಗಿ ನೋಡಿಕೊಳ್ಳುವುದು ಸರಿಯೇ. ಆದರೆ ನಮ್ಮ ಮನೆಯಲ್ಲಿ? ನೆನಪಿಸಿಕೊಂಡರೇ ಬೇಸರವಾಗುತ್ತದೆ. ಆದರೆ ನಾನು ಈಗಾಗಲೇ ತೀರ್ಮಾನಿಸಿಬಿಟ್ಟಿದ್ದೇನೆ, ನಾನು ಅಳುವುದಿಲ್ಲ. ಕಣ್ಣಂಚಿನಲ್ಲಿ ಹನಿಯಷ್ಟೂ ನೀರು ಬರುವುದಿಲ್ಲ. ಬರದಿರುತ್ತದೆಯೇ? ಬರುತ್ತದೆ, ಬಂದೇ ಬರುತ್ತದೆ. ಆದರೆ ಅವರೆಲ್ಲರೆದುರು ಅದನ್ನು ತೋರಿಸುವುದಿಲ್ಲ.
ಮಕ್ಕಳು ಬೆಳೆಯುತ್ತವೆ, ಅವುಗಳು ತಮ್ಮದೇ ಆದ ಪ್ರಪಂಚ ಕಟ್ಟಿಕೊಳ್ಳುತ್ತವೆ. ಆಗ ಅಜ್ಜ, ಅಜ್ಜಿ, ಅಮ್ಮ, ಅಪ್ಪ ಇವರಿಗೆ ಹಲೋ ಅನ್ನಲೂ ಅವರಿಗೆ ಇಷ್ಟವಿಲ್ಲ, ಸಮಯವೂ ಇಲ್ಲ. ನಾವು ನಮ್ಮ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಇರಬೇಕು ಅಷ್ಟೇ. ‘ನೋಡು ಮಗೂ, ನೀನು ಚಿಕ್ಕವನಾಗಿದ್ದಾಗ,’ ಎಂದು ನಾವು ಶುರು ಮಾಡಿದರೆ ಅಂಡು ತಿರುಗಿಸಿಕೊಂಡು ಹೋಗುತ್ತವೆ. ನಾವು ಯಾಕೆ ಇಷ್ಟೊಂದು ಅನುಬಂಧ ಬೆಳೆಸಿಕೊಳ್ಳುತ್ತೇವೋ ತಿಳಿಯದು.
ನಕ್ಕಾಗ ಮನೆಗೆ ಬೆಳದಿಂಗಳನ್ನು ಚೆಲ್ಲುವ ಪುಟ್ಟ ಕೂಸು ಬದುಕಿಗಷ್ಟು ಅರ್ಥ ಕೊಟ್ಟಿದೆ. ‘ಕರ್ವ್ ಮೇಕ್ಸ್ ದ ಲೈಫ್ ಸ್ಟೆçöÊಟ್’ ಎನ್ನುತ್ತಾರಲ್ಲ, ಹಾಗೆ. ಅಪ್ಪಿದರೆ ಹತ್ತಿಯನ್ನು ಎತ್ತಿಕೊಂಡ ಂತಹ ಅನುಭವವಾಗುವ ಮಗು, ಕರ್ಕಶವೆನಿಸಿದರೂ ಇಂಪೆನಿಸುವ ಅದರ ಅಳು, ಅದು ಕೈಕಾಲು ಆಡಿಸಿ, ಮಲಗಿದ್ದಲ್ಲಿಯೇ ಅದು ಮಾಡುವ ಭಂಗಿಗಳು, ಪಕ್ಕ ಮಲಗಿಸಿಕೊಂಡು ಖುಷಿಪಡುವ ಅದರ ಸ್ಪರ್ಶ, ಅದು ಆಡುವ ಹೂ, ಹಾಂ, ಏ, ಮೊದಲಾದ ತುಣುಕು ಪದಗಳು, ಇವೆಲ್ಲವುಗಳಿಂದ ನಾವು ವಂಚಿತರಾಗುತ್ತೇವೆ. ಮಗಳು ಮಗುವಿನ ಫೋಟೋವನ್ನು, ವಿಡಿಯೋಗಳನ್ನು ಆಗಾಗ ಕಳುಹಿಸಬಹುದು, ಆದರೆ ಅದು ಬರೀ ಚಿತ್ರ ಮಾತ್ರ, ಅಲ್ಲವೇ?
ಈ ಪತ್ರದ ಸೂತ್ರದಲ್ಲಿ ನನ್ನ ಅನಿಸಿಕೆಗಳನ್ನು, ಹೇಳಿಕೆಗಳನ್ನು, ಅಭಿಪ್ರಾಯಗಳನ್ನು, ಘಟನೆಗಳೆಂಬ ಮುತ್ತು, ರತ್ನ, ಹವಳಗಳನ್ನು ಪೋಣಿಸಿಟ್ಟಿದ್ದೇನೆ. ಎರಡೂ ಅಂಚುಗಳನ್ನು ಬಂಧಿಸದಿದ್ದರೆ ಅವೆಲ್ಲಾ ಕೆಳಗೆ ಸೋರಿ, ಚೆಲ್ಲಾಪಿಲ್ಲಿಯಾಗುತ್ತವೆ. ಅದೇನು?
ಮಗು ಹೋದ ನಂತರ? ಏನಾಗುತ್ತದೆ ಎಂಬುದನ್ನು ನೆನಪಿಸಿಕೊಂಡರೇ ದಿಗಿಲಾಗುತ್ತದೆ ಕಣೇ. ಮನೆಯಲ್ಲಿ ನಾನು ಮತ್ತು ನನ್ನ ಗಂಡ ಮಾತ್ರ ಇರೋದು. ನಮ್ಮ ಜೊತೆಗೆ ಹಲವಾರು ವಯೋಸಹಜ ರೋಗಗಳು, ಥರಹೇವಾರಿ ಮಾತ್ರೆಗಳು. ಎರಡು ಮುದಿ ಕೊರಡುಗಳು ಈ ಮನೆಯಲ್ಲಿ ದೆವ್ವದ ಹಾಗೆ ಉಳಿಯುತ್ತೇವೆ. ಇಲ್ಲಿಯ ತನಕ ಮರೆತೇಹೋಗಿದ್ದ ಮಂಡಿ ನೋವು, ಬೆನ್ನು ನೋವು, ಬಿಪಿ, ಇವೆಲ್ಲಾ ಮತ್ತೆ ಕಾಣಿಸಿಕೊಳ್ಳುತ್ತವೆ. ಮರೆವಿನ ಕಳ್ಳಾಟ ಶುರುವಾಗುತ್ತದೆ. ನಂತರ ನಾವು ಮನೆಯಲ್ಲಿ ದಿನವೆಲ್ಲಾ ಲೆಕ್ಕ ಹಾಕಿದರೂ ಕೇವಲ ಹತ್ತಾರು ಪದಗಳನ್ನು ಮಾತ್ರ ಮಾತನಾಡುತ್ತೇವೆ. ಮದುವೆಗೆ ಮೊದಲು ಮತ್ತು ವಿವಾಹವಾದ ಕೆಲ ವರ್ಷಗಳು ಗಂಟೆಗಟ್ಟಲೆ ಮಾತನಾಡತ್ತಿದ್ದೆವು, ಈಗ? ಊಟಕ್ಕೆ ಬನ್ನಿ, ತರಕಾರಿ ತನ್ನಿ, ನಲ್ಲಿ ರಿಪೇರಿ ಮಾಡಿಸಬೇಕು, ವಿದ್ಯುತ್ ಬಿಲ್ ಕಟ್ಟಿದಿರಾ? ಹಾಲಿನ ಬೆಲೆ ಮತ್ತೆ ಹೆಚ್ಚಿಸಿದ್ದಾರೆ, ಎಂಬ ಕೆಲವೇ ಎಂದಿನ ಮಾತುಗಳನ್ನು ಮಾತ್ರ ಆಡುತ್ತಾ ನಾಲ್ಕು ಗೋಡೆಗಳ ನಡುವಿನ ಕಟ್ಟಡದಲ್ಲಿ ಜೀವಿಸಬೇಕು. ವೃದ್ಧರನ್ನು ನೋಡಲು ಯಾರೂ ಬರುವುದಿಲ್ಲ, ಯಾರೂ ಫೋನ್ ಮಾಡುವುದಿಲ್ಲ. ನಾವೇ ಮಾಡಿದರೂ ಉತ್ತರಿಸುವುದಿಲ್ಲ, ಅಥವಾ ಈಗ ಬಿಸಿ, ಆಮೇಲೆ ತಾವೇ ಮಾಡ್ತೀವಿ, ಎಂದು ಕರೆ ಕಟ್ ಮಾಡುತ್ತಾರೆ. ಹೆಚ್ಚು ಕಾಲ ಬದುಕಬಾರದು, ಜೀವಸೆಲೆ ಕಡಿಮೆಯಾಗುತ್ತಾ ಹೋಗುತ್ತದೆ. ವೃದ್ಧರಿಗೆ ಮುಂದಿನ ದಿನಗಳು ಝೀರೊ, ಹಿಂದಿನ ನೆನಪುಗಳನ್ನು ತಲೆಯಲ್ಲಿ ಬಂದರೂ ಅದನ್ನು ಕೇಳುವುದಕ್ಕೆ ಯಾರಿಗೂ ಮನಸ್ಸಿಲ್ಲ. ವಯಸ್ಸಾಗುತ್ತಾ ಆಗುತ್ತಾ ಬದುಕೆಂಬುದು ಯಾಂತ್ರಿಕವಾಗುತ್ತದೆ, ನಮಗಂತೂ ಆಗಿದೆ. ಆದರೆ ತಮಾಷೆ ನೋಡು, ಎಲ್ಲರೂ ತಾವೂ ಮುದುಕ-ಮುದುಕಿಯರಾಗುತ್ತೇವೆ, ಇಂದಿನ ಹಿರಿಯರ ಹಾಗೆ ತಮ್ಮ ಸ್ಥಿತಿಯೂ ಆಗುತ್ತದೆ ಎಂದು ಭಾವಿಸುವುದೇ ಇಲ್ಲ.
ನಮ್ಮ ಸುತ್ತ ಹಳೆಯ ನೆನಪುಗಳ ರಾಶಿಯನ್ನು ಹರಡಿಕೊಂಡು ಅವುಗಳ ನಡುವೆ ಕುಳಿತು, ಕುಳಿತು ನಿಧಾನವಾಗಿ ಅಸ್ತಿಪಂಜರಗಳಾಗುತ್ತೇವೆ. ಯಮರಾಜನು ಪಾಶುಪತಾಸ್ತçವನ್ನು ಹಿಡಿದು ಬರುವುದನ್ನೇ ಕಾಯುತ್ತಿರುತ್ತೇವೆ. ನಮ್ಮ ಕಾಲಾನಂತರ ಬಂಧುಗಳು ನಮ್ಮ ಹೆಸರಲ್ಲಿ ವಡೆ-ಸುಕ್ರುಂಡೆ-ಪಾಯಸ ಮಾಡಿ ತಿನ್ನುತ್ತಾರೆ. ತಿಂದು ಡರ‍್ರಂತ ತೇಗುತ್ತಾರೆ. ಒಬ್ಬ ವ್ಯಕ್ತಿ ಒಂದೇ ಬಾರಿ ಸಾಯುವುದಾದ್ದರಿಂದ ವೈಕುಂಠ ಸಮಾರಾಧನೆ ಒಂದು ಬಾರಿ ಮಾತ್ರ ಆಗುತ್ತದೆಯಲ್ಲ, ಎಂದು ಬೇಸರಿಸುತ್ತಾರೆ.
ನಂತರ ಏನಾಗುತ್ತದೆ? ಚರಿತ್ರೆಯೆಂಬ ಬೃಹತ್ ಗಾತ್ರದ ಸಂಪುಟಗಳಲ್ಲಿ ಯಾರ ಕಣ್ಣಿಗೂ ಕಾಣಿಸದ ಚುಕ್ಕೆಗಳಾಗುತ್ತೇವೆ. ಕಾಲದ ಪ್ರವಾಹದಲ್ಲಿ ಒಂದು ಹನಿ ನೀರು ಆಗಿ ಹರಿಹರಿದು ಕೋಟಿ ಕೋಟಿ ಕೋಟಿ ಹನಿಗಳಿರುವ ಸಮುದ್ರ ಸೇರುತ್ತೇವೆ. ಒಂದೆರಡು ತಲೆಮಾರುಗಳ ನಂತರ ನಮ್ಮನ್ನು ನೆನಪಿಸಕೊಳ್ಳುವುದಿರಲಿ, ನಮ್ಮ ಹೆಸರೇನೆಂಬುದು ಕೂಡಾ ಅವರಿಗೆ ತಿಳಿದಿರುವುದಿಲ್ಲ.
ಮುಪ್ಪಿನ ಸಾವು ಮದುವೆಗೆ ಸಮಾನ ಎಂಬೊ ಂದು ಗಾದೆಯೇ ಇದೆ. ಸಾಕು, ಜೀವನದಲ್ಲಿ ಏನೇನು ಬೇಕೋ ಅದನ್ನು ಅನುಭವಿಸಿಯಾಯಿತು. ಇನ್ನೂ ಬದುಕುವುದಾದರೆ, ಯಾರಿಗೂ ಸಾವೇ ಬರದಿದ್ದರೆ ಜಗತ್ತಿನ ಗತಿ ಏನಾಗುವುದೆಂದು ಯೋಚಿಸಿದ್ದೀಯಾ? ಎಲ್ಲದಕ್ಕೂ ಒಂದು ಅಂತ್ಯವಿದೆ, ಇರಲೇಬೇಕು. ಅದೇ ಪ್ರಕೃತಿಯ ನಿಯಮ!
ಏನಾದರಾಗಲಿ, ಮಗು ಎಲ್ಲೆಡೆ ನಗುವನ್ನು ಚೆಲ್ಲಲಿ, ಅದರ ಬಾಳಲ್ಲಿ ಕಾಮನ ಬಿಲ್ಲು ಮೂಡಲಿ, ಅದು ಎಲ್ಲರಿಗೆ ಒಳಿತು ಮಾಡುವ ಸಾಧನೆ ಮಾಡಲಿ. ನಾವು ನೋಡಲು ಇರುತ್ತೇವೆಯೋ ಇಲ್ಲವೋ ಗೊತ್ತಿಲ್ಲ, ಯಾರಾದರೊಬ್ಬರು ಅದರ ಏಳಿಗೆಯನ್ನು ಕಂಡು ಈಕೆ ಇಂಥವರ ಮೊಮ್ಮಗಳು, ಎಂದು ನಮ್ಮ ಹೆಸರು ಹೇಳಿದರೆ ನಮ್ಮ ಜನ್ಮ ಸಾರ್ಥಕ ಅಲ್ಲವೇ? ನಾವು ಇನ್ನೇನನ್ನು ತಾನೇ ಬಯಸಲು ಸಾಧ್ಯ?
ಇಂತಿ ನಿನ್ನ ಸ್ನೇಹಿತೆ.
ಮುಗಿಯಿತು..
–ಸೂರಿ ಹಾರ್ದಳ್ಳಿ
