“ರೀ ಇವತ್ತು ರಾತ್ರಿ ನಿಮಗೆ ಚಪಾತಿ ಮಾಡ್ಲಾ?” ಎನ್ನುವ ಪಶ್ನೆ ಮಡದಿಯಿಂದ ಬಂದಾಗ ಗಂಡನಿಗಾಗುವ ಫಜೀತಿ ಹೇಳಲಾಗದು. ಒಳಗೇನೋ ತನ್ನ ಸಕ್ಕರೆ ಕಾಯಿಲೆಯ ಸಲುವಾಗಿ ಮಾಡಿದರೆ ಒಳಿತು ಎಂದಿದ್ದರೂ “ಮಾಡು” ಎಂದು ಹೇಳಲಾರದ ಸ್ಥಿತಿ. ಯಾಕೆ ಅಂದರೆ ಆ ಪ್ರಶ್ನೆಯ ಒಳದನಿ “ನಾನು ಮಾಡುವುದಿಲ್ಲ ನೀವು ಊ ಅನ್ನಿ” ಅಂತಲೇ ಇರುತ್ತದೆ. ಗಂಡಸು ಹೊರಗೆ ದುಡಿದು ಮನೆಗೆ ಬೇಕಾದ ಸಾಮಾನೆಲ್ಲವನ್ನೂ ತಂದರೂ ತನಗೆ ಇಂಥದೇ ತಿಂಡಿ ಅಥವಾ ಅಡುಗೆ ಬೇಕು ಎನ್ನುವಷ್ಟು ಸ್ವಾತಂತ್ರ್ಯವಿರುವುದಿಲ್ಲ. ಯಾಕೆ ಅಂದರೆ ಅಡುಗೆಮನೆ ಯಜಮಾನತಿ ಹೆಂಡತಿಯೇ. ಅವಳಿಗೆ ಆ ದಿನ ಕೈಲಾಗದೆ ಇರಬಹುದು ಅಥವಾ ಯಾವುದೋ ಮಾತಿಗೆ ಮಾತು ಬೆಳೆದು ಬೇಸರವಾಗಿರಬಹುದು. ಅಥವಾ ಪಕ್ಕದ ಮನೆಯಾಕೆ ಹೊಸ ಸೀರೆಯೋ, ಒಡವೆಯೋ ಕೊಂಡದ್ದು ತಂದು ತೋರಿಸಿ ಹೊಟ್ಟೆ ಉರಿಸಿರಬಹುದು. ಆದರೆ ಇವ್ಯಾವೂ ಹೊರಗ ಹೇಳದೇ ಆ ಪ್ರಶ್ನೆ ಕೇಳುತ್ತಾಳೆ. ಅಪ್ಪಿ ತಪ್ಪಿ ಮಾಡು ಎಂದಾಗ ನಿಜ ಕಾರಣ ಹೊರಗೆ ಬರುತ್ತದ. ಈಗ ಹೇಳಿ ನಮ್ಮ ವ್ಯವಸ್ಥೆ ಪಿತೃಸ್ವಾಮ್ಯ ಅಂತ ಗುರುತಿಸಿಕೊಂಡರೂ ಅದು ನಿಜವಾದ ಅರ್ಥದಲ್ಲಿ ಪಿತೃಸ್ವಾಮ್ಯವಾಗಿ ಉಳಿದಿದೆಯೇ ಅಂತ.
ಯಾವುದಾದರೂ ಸಂಸಾರದಲ್ಲಿ ಮನೆ ಗಂಡಸು ಹೆಂಡತಿಯ ಮಾತಿಗೆ ಎದುರಾಡದೆ ಅವಳು ಹೇಳಿದ ಹಾಗೆ ಕೇಳಿಕೊಂಡಿದ್ದರೆ, ಆ ಸಂಸಾರ ಮಾತೃಸ್ವಾಮ್ಯದ್ದು ಎಂದು ಹೇಳಬಹುದು. ಅವನನ್ನು ಅಮ್ಮಾವ್ರ ಗಂಡ ಅಂತ ಹೀಯಾಳಿಸುವುದೂ ಇದೆ. ಇಕೋ! ನನ್ನ ಕಿವಿಯಲ್ಲಿ ಯಾರೋ ಊದುತ್ತಿದ್ದಾರೆ “ಗುರೂ! ಹಾಗೆ ನೋಡಿದರೆ ಎಲ್ಲ ಕುಟುಂಬಗಳ ಗತಿ ಇಷ್ಟೇ!” ಅಂತ. ಇದು ಒಂದು ವ್ಯವಸ್ಥೆ ಎನ್ನಬಹುದೇ? ಹಾಗಾದರೆ ಒಮ್ಮೆ ಒಳನೋಟ ಹರಿಸುವ ಎಂತಾಯಿತು.
ನಮಗೆಲ್ಲ ಗೊತ್ತಿದ್ದ ಹಾಗೆ ಪಿತೃಸ್ವಾಮ್ಯ ಮತ್ತು ಮಾತೃಸ್ವಾಮ್ಯ ಎನ್ನುವ ಎರಡು ವ್ಯವಸ್ಥೆಗಳು ಈ ಜಗತ್ತಿನಲ್ಲಿವೆ. ಸ್ವಾಮ್ಯ ಎಂದರೆ ಒಡೆತನ, ಯಜಮಾನಿಕೆ ಎಂದು ನಿಘಂಟು ಹೇಳುತ್ತದೆ. ಬಹುತೇಕ ಸಮಾಜಗಳು ಪಿತೃಸ್ವಾಮ್ಯ ವ್ಯವಸ್ಥೆಗಳೇ. “ನಿಸರ್ಗ ನಮಗೆ ಹೊರಗಡೆಗೆ ಹೋಗಿ ಸಂಸಾರಕ್ಕೆ ಬೇಕಾದ ಸಂಪನ್ಮೂಲಗಳನ್ನು ತಂದು ಹಾಕುವಂತೆ ಏರ್ಪಾಡು ಮಾಡಿದೆ: ಆದಕಾರಣ ನಾವು ಈ ಕುಟುಂಬಗಳನ್ನು ಸಾಕುವವರು. ಅದರ ಒಡೆತನ ನಮ್ಮದೇ” ಎನ್ನುವುದು ಪಿತೃಸ್ವಾಮ್ಯ ವ್ಯವಸ್ಥೆಯ ವಾದ. ಪ್ರಪಂಚದಲ್ಲಿ ಗಂಡಸರೆಲ್ಲರೂ ಈ ವಾದವನ್ನು ಒಪ್ಪುತ್ತಾರೆ. ಮತ್ತೆ ಬೇಕೇ ಬೇಕೆನ್ನುತ್ತಾರೆ. ಆದರೆ ಹೆಂಗೆಳೆಯರ ವಾದವೇ ಬೇರೇ. “ಬರೀ ತಂದು ಹಾಕಿದರಾಯಿತೇ ಅದನ್ನು ಕುಚ್ಚಿ ತಿನ್ನುವ ಹಾಗೆ ಮಾಡುವುದು ನಾವಲ್ಲವೇ” ಎನ್ನುವ ವಾದ ಅವರದು. ಆದರೆ ಅವರು ಮುಂಚಿನಿಂದ ಹಣದ ವ್ಯವಹಾರಗಳಿಗೆ ತಲೆ ಹಾಕುತ್ತಿರಲಿಲ್ಲ. ಮನೆ ಯಜಮಾನರದ್ದೇ ಆ ಹೊಣೆಗಾರಿಕೆ. ಗಂಡಸು ಸ್ವಲ್ಪ ಭಂಡ ಸ್ವಭಾವನವನಾದ್ದರಿಂದ ಹೊರಗಿನವರ ಹತ್ತಿರ ಗಟ್ಟಿಯಾಗಿ ಮಾತನಾಡ ಬಲ್ಲ ಮತ್ತು ಹಣ ಕೊಡುವಲ್ಲಿ ಮತ್ತು ವಸೂಲಿ ಮಾಡುವಲ್ಲಿ ಆ ತರದ ಗಟ್ಟಿ ಮಾತು ಬೇಕಾದ್ದರಿಂದ ಹಣದ ವ್ಯವಹಾರ ಅವನ ಕೈಗಳಿಗೆ ಹೋಯಿತು ಮತ್ತು ಉಳಿಯಿತು. “ಧನಂ ಮೂಲಮ್ ಇದಂ ಜಗತ್” ಅಲ್ಲವೇ ! ಹಾಗಾಗ ಅವನು ಮನೆಯ ಯಜಮಾನನಾಗಿ ಉಳಿದ.
ಶಿಲಾಯುಗದ ಕಾಲದಲ್ಲೂ ಗಂಡು ಬೇಟೆಯಾಡಿ ಮನೆಗೆ ತಂದರೆ ಹೆಣ್ಣು ಅದನ್ನು ಬೇಯಿಸಿ ಕುಟುಂಬವನ್ನು ಪೋಷಿಸುತ್ತಿದ್ದದ್ದು ವಿಶ್ವದ ಎಲ್ಲ ಮೂಲೆಗಳಲ್ಲೂ ಇತ್ತು. ಅದು ಕ್ರಮೇಣ ಹೊರಗಿನ ಕೆಲಸಗಳು ಗಂಡಿಗೆ, ಮನೆ ಒಳಗಿನ ಕೆಲಸಗಳು ಹೆಣ್ಣಿಗೆ ಎನ್ನುವ ಕ್ರಮವಾಗಿ ಏರ್ಪಟ್ಟಿತು. ಗಂಡು ದೇಹ ದಾರ್ಢ್ಯದಲ್ಲಿ ಬಲವಂತನಾದ್ದರಿಂದ ಈ ರೀತಿಯ ಏರ್ಪಾಡಿಗೆ ಹೆಣ್ಣಿನಿಂದ ವ್ಯತಿರೇಕತೆ ಬಂದಿದ್ದರೂ ತನ್ನ ಬಲವನ್ನು ತೋರಿಸಿ ಅವಳ ಕೆಲಸಗಳನ್ನು ಮಾಡಿಸುತ್ತಿದ್ದ. ಈ ರೀತಿಯ ವರ್ತನೆ ಗಂಡಸಿನಲ್ಲಿ ಒಂದು ರೀತಿಯ ದಬ್ಬಾಳಿಕೆ ಪ್ರವೃತ್ತಿಯನ್ನು ಬೆಳೆಸಿ ಹೆಣ್ಣಿನ ಶೋಷಣೆಗೆ ದಾರಿ ಮಾಡಿತ್ತು. ಇದರ ವಿರುದ್ಧ ಅನೇಕ ಸ್ತ್ರೀ ಪರ ಚಳುವಳಿಗಳಾಗಿ ಅನೇಕ ಸಂಸ್ಕರಣೆಗಳು ಜಾರಿಗೆ ಬಂದು ಇತ್ತೀಚಿನ ಹೆಣ್ಣಿಗೆ ಸ್ವಲ್ಪಮಟ್ಟಿಗೆ ನ್ಯಾಯ ದೊರಕಿತು. ಮಹಿಳಾ ಸಂಘಗಳು ಇನ್ನೂ ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ ಎನ್ನುವುದು ನಡೆದೇ ಇದೆ.
ಆದರೆ ಇಷ್ಟು ಜಗಜ್ಜನಿತ ವಿಷಯವನ್ನು ಹೇಳುವ ಉದ್ದೇಶವೇ ಬೇರೇ. ಬಲದಲ್ಲಿ ಗಂಡು ಹೊರಗಣ್ಣಿಗೆ ಬಲವಂತನೆನಿಸಿದರೂ, ವ್ಯವಸ್ಥೆಯೇ ಅವನ ಪರವಾಗಿದ್ದು ಪಿತೃಸ್ವಾಮ್ಯ ವ್ಯವಸ್ಥೆ ಎನಿಸಿಕೊಂಡಿದ್ದರೂ ಮನೆಯ ಒಳಗೆ ಮಾತ್ರ ಅದು ಮಾತೃಸ್ವಾಮ್ಯ ವ್ಯವಸ್ಥೆಯೇ ಆಗಿರುತ್ತದೆ. ಅದು ಹೇಗೆ ಎಂದು ನೋಡೋಣ.
ತಂದೆ ಮನೆಗೆ ಬೇಕಾದ ಅವಶ್ಯಕತೆಗಳನ್ನ ಪೂರೈಸಲು ದಿನದ ಜಾಸ್ತಿ ಹೊತ್ತು ಹೊರಗಡೇಯೇ ಇರುತ್ತಾನೆ. ಮನೆಗೆ ಬೇಕಾದ ಹಣ ಕಾಸಿನ ವ್ಯವಸ್ಥೆ ಮತ್ತು ಸಾಮಾನಿನ ವ್ಯವಸ್ಥೆ ಅವನು ಪೂರೈಸಿದರೂ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ, ಅವರಿಗೆ ಬೇಕಾದ ವಸ್ತುಗಳನ್ನು, ಅಹಾರವನ್ನು ಒದಗಿಸುವುದು ತಾಯಿ ಆಗಿರುತ್ತಾಳೆ. ಈ ಕಾರಣದಿಂದ ಮಕ್ಕಳು ಅಮ್ಮನಿಗೆ ಹತ್ತಿರವಾಗುತ್ತಾರೆ. ಒಂದುವೇಳೆ ಮನೆ ಯಜಮಾನ ಸಿಡುಕ ಅಥವಾ ಶಿಸ್ತಿನ ಸಿಪಾಯಿ ಆಗಿದ್ದರೆ ಮಕ್ಕಳು ಅವನ ಹತ್ತಿರ ಹೋಗಲು ಹೆದರುತ್ತಾರೆ. ಅಥವಾ ಅವನು ಕೆಟ್ಟ ಚಟಗಳಿಂದ ಪೀಡಿತನಾಗಿದ್ದರೆ ಸಹ ಮಕ್ಕಳು ಅವನ ಹತ್ತಿರ ಹೋಗಲು ಇಷ್ಟಪಡುವುದಿಲ್ಲ. ಈ ಸಂದರ್ಭದಲ್ಲಿ ಸಹ ಮಕ್ಕಳು ತಾಯಿಗೆ ಇನ್ನಷ್ತು ಹತ್ತಿರವಾಗುತ್ತಾರೆ. ಅವಳ ಮಾತನ್ನು ಅನುಸರಿಸಿ ನಡೆಯುತ್ತಾರೆ. ಅವಳ ಆಜ್ಞೆ ಅವರಿಗೆ ಶಿರೋಧಾರ್ಯವಾಗುತ್ತದೆ. ತಾವು ದೊಡ್ಡವರಾಗಿ, ಸಂಪಾದನೆ ಮಾಡಿ, ಅವಳನ್ನು ಸುಖವಾಗಿಡುತ್ತೇವೆ ಎಂದು ಬಯಸುತ್ತಾರೆ. ತಂದೆ ಅಪರಿಚಿತನಂತಾಗುತ್ತಾನೆ.
ಒಂದು ವೇಳೆ ತಂದೆ ನಿಯತ್ತಿನ ಮನುಷ್ಯನಾಗಿದ್ದರೂ, ಅವನು ತನ್ನ ದಿನದ ತುಂಬಾ ಹೊತ್ತು ಮನೆಯ ಹೊರಗಡೆ ಇರುವುದರಿಂದ ಮಕ್ಕಳ ಆರೈಕೆ, ವಿದ್ಯಾಭ್ಯಾಸದ ಕಡೆಗೆ ಅವನಿಗೆ ಗಮನ ಕೊಡಲು ಅಗುವುದಿಲ್ಲ. ತನ್ನ ಕೆಲಸದ ಮೇಲೆ ಅವನಿಗೆ ಹೊರ ಊರುಗಳಿಗೆ ಹೋಗಬೇಕಾಗ ಬಹುದು ಅಥವಾ ರಾತ್ರಿಗಳನ್ನು ಹೊರಗಡೆ ಕಳೆಯಬೇಕಾಗ ಬಹುದು. ಈಗ ಸಹ ಮಕ್ಕಳು ತಾಯಿಯನ್ನೇ ಅವಲಂಬಿಸುತ್ತಾರೆ. ಮಕ್ಕಳು ಅವಳ ಮಾತಿಗೆ ತುಂಬಾ ಬೆಲೆ ಕೊಡುತ್ತಾರೆ. ಅವರ ಪ್ರೀತಿ ಅವಳ ಕಡೆಗೇ ಇರುತ್ತದೆ.
ಮನೆಯಲ್ಲಿಯ ಮಗಳು ತನ್ನ ತಾಯಿಯ ಮೇಲೆಯೇ ಹೆಚ್ಚು ಅವಲಂಬಿಸಿರುತ್ತಾಳೆ. ಅವಳಿಗೆ ತಾಯಿಯೇ ಮಾರ್ಗದರ್ಶಿ. ಮದುವೆಯಾಗಿ ಅತ್ತೆ ಮನೆಗೆ ಹೋದಮೇಲೆ ಸಹ ಅವಳಿಗೆ ತಾಯಿ ಮಾನಸಿಕ ಬೆಂಬಲ ನೀಡುತ್ತಿರುತ್ತಾಳೆ. ಮತ್ತೆ ಆಚಾರ ವಿಚಾರಗಳು, ಪೂಜಾ ಪದ್ಧತಿಗಳು, ಸಂಪ್ರದಾಯಗಳು ಮಹಿಳೆಗೆ ಗೊತ್ತಿದ್ದಷ್ಟು ಗಂಡಸಿಗೆ ಗೊತ್ತಿರುವುದಿಲ್ಲ.
ಅವನದ್ದೇನಿದ್ದರೂ ಹೊರಗಿನ ಗೊಡವೆಯೇ. ಹಾಗಾಗಿ ಈ ರೀತಿಯ ವ್ಯವಹಾರಗಳಲ್ಲಿ ಮಹಿಳೇಯದೇ ಮೇಲುಗೈಯಾಗುತ್ತದೆ. ಅಂದರೆ ಅವಳು ತನ್ನ ಮನೆಯ ಸ್ವಾಮ್ಯವನ್ನು ಪರೋಕ್ಷವಾಗಿ ತನ್ನ ಮಗಳ ಮನೆಗೆ ರವಾನಿಸುತ್ತಾಳೆ. ಅಲ್ಲಿಯೂ ಮಾತೃಸ್ವಾಮ್ಯ ಸ್ಥಾಪಿತವಾಗುತ್ತದೆ.
ಮದುವೆಯ ನಂತರ ಸೊಸೆಯಾಗಿ ಮನೆಗೆ ಬಂದ ಮಹಿಳೆ ಅಡುಗೆಮನೆಯ ಚಾರ್ಜ್ ತೊಗೊಂಡ ಮೇಲೆ ಅವಳು ಮಾಡುವ ಅಡುಗೆಯ ವಿಧಾನ ತನ್ನ ತವರಿನದೇ ಆಗುತ್ತದೆ. ಮಾಡುವ ಪದರ್ಥಗಳಾಗಲಿ, ಅವುಗಳ ರುಚಿಗಳಾಗಲಿ, ಮಾಡುವ ವಿಧಾನಗಳಾಗಲಿ ಅವಳು ತನ್ನ ತವರಿಂದ ಕಲೆತು ಬಂದ ರೀತಿಯಲ್ಲೇ ಮಾಡುತ್ತಾಳೆ. ಅವಳ ಅತ್ತೆ ಇರುವವರೆಗೂ ಒಂದು ಸ್ತರದ ವರೆಗೆ ಅವಳು ಹೇಳಿದ ರೀತಿಯಲ್ಲಿ ಮಾಡಿದರೂ, ನಂತರದ ದಿನಗಳಲ್ಲಿ ತನ್ನ ತವರಿನದೇ ಅಥವಾ ತಾನೇ ಬೆಳೆಸಿಕೊಂಡ ಹೊಸ ವಿಧಾನಗಳಲ್ಲಿ ಮಾಡುವುದನ್ನೇ ಮುಂದುವರೆಸುತ್ತಾಳೆ. ಈಗ ಹೇಳಿ ಇಲ್ಲಿ ಯಾವ ಪಿತೃಸ್ವಾಮ್ಯ ನಿಮಗೆ ಕಾಣುತ್ತದೆ?
ಗಂಡು ಹುಡುಗರಿಗೆ ಬೆಳೆಯುವ ವಯಸ್ಸಿನಲ್ಲಿ ಬೇಕಾಗಿರುವುದು ಹೊಟ್ಟೆತುಂಬಾ ರುಚಿಕರವಾದ, ತರತರದ ಅಡುಗೆಯ ಊಟ. ಅದನ್ನು ತಾಯಿ ಸಮರ್ಥವಾಗಿ ಪೂರೈಸಬಲ್ಲಳು. ಅಪ್ಪ ಅವನಿಗೆ ಬೇಕಾದ ಆಟಿಕೆಗಳನ್ನು, ದಿರಿಸುಗಳನ್ನು, ದೊಡ್ಡವನಾದ ಮೇಲೆ ಅವನ ಆಟೋಟಗಳ ಸಾಮಾನನ್ನು ಕೊಡಿಸಿದರೂ ಪ್ರತಿ ದಿನವೂ ಹೊತ್ತು ಹೊತ್ತಿಗೂ ಅವನ ಹೊಟ್ಟೆ ತುಂಬಿಸುವುದು ಅಮ್ಮನೇ. ಅದೊಂದೇ ಅಲ್ಲದೇ ಅವನಿಗೆ ಆಗಾಗ ಬೇಕಾದ ನಯವಾದ ಪ್ರೀತಿಯನ್ನು ಹಂಚುವುದು ಅಮ್ಮನೇ. ಯಾವ ತರದ ಸಂಕೋಚವಿಲ್ಲದೇ ಅಮ್ಮನ ಮಡಿಲಲ್ಲಿ ತಲೆಯಿಟ್ಟು ಮಲಗಬಲ್ಲ ಮಗ. ಅಪ್ಪನ ಭುಜದ ಮೇಲೆ ತಲೆ ಇಡುವುದಕ್ಕೂ ಹಿಂಜರಿಯುತ್ತಾನೆ ಅವನು. ಹಾಗಾಗಿ ಮಕ್ಕಳಿಬ್ಬರ ಮೇಲೆಯೂ ಅಮ್ಮನ ಪ್ರಭಾವ ಜಾಸ್ತಿ ಇರುತ್ತದೆ. ಅಪ್ಪ ತನ್ನ ಮನೆಯಲ್ಲೇ ಅತಿಥಿಯಾಗಿ ಹೋಗುತ್ತಾನೆ.
ಮದುವೆ ಮುಂಜಿಗಳ ಮಾತುಕತೆಗಳಲ್ಲಿ ನೋಡಿ. ಹೆಂಗಸರದ್ದೇ ಮಾತು. ಆಚಾರ ವಿಚಾರ, ಸಂಪ್ರದಾಯ, ಕಟ್ಟುಪಾಡು ಅಂತ ನಾನಾ ರೀತಿಯ ಚರ್ಚೆಗಳು ಇರು ಪಕ್ಷಗಳಲ್ಲೂ ನಡೆಯುವುದು ಅವರ ನಡುವೆ ಮಾತ್ರ. ಆ ಸಮಾರಂಭಗಳ ಸಂಭ್ರಮವೂ ಅವರದ್ದೇ. ಅವರಿಂದಲೇ ಮಂಟಪಗಳಲ್ಲಿ ಕಳೆ ಎಂಬುದು ಸುಳ್ಳಲ್ಲ.
ಇನ್ನು ಇತ್ತೀಚೆಗೆ ಬೃಹದಾಕಾರವಾಗಿ ಬೆಳೆದು ನಿಂತು ದೇಶದ ವಹಿವಾಟಿನ ಸಿಂಹಪಾಲು ಪಡೆಯುವ ಷಾಪಿಂಗ್. ಸುಮ್ಮನೆ ಮಾಲ್ ಗೆ ಹೋಗಿಬರೋಣ ಅಂತ ಹೊರಟ ಹೆಂಗಸರ ಟೋಳಿ ಏನೋ ಒಂದು ಕೊಳ್ಳದೇ ಹೊರಬರುವುದಿಲ್ಲ. ಇನ್ನು ಏನಾದರೂ ಬೇಕೆಂದು ಹೊರಟರೆ ಅದರ ಜೊತೆಗೆ “ಮನೆಗೆ ಬೇಕಾದ” ಎಂಬ ನೆವದಲ್ಲಿ ಮಾಡುವ ಖರೀದಿಗೆ ಎಲ್ಲೆ ಇಲ್ಲ. ಅವರು ಮಾಡುವ ಬಣ್ಣ, ನಾಣ್ಯತೆಗಳ ಆಯ್ಕೆಯ ಬಗ್ಗೆ, ಎರಡನೆಯ ಮಾತಿಲ್ಲ ಅಂತಿಟ್ಕೊಳ್ಳಿ. ಯಾವುದೋ ಮಾಲ್ ನಲ್ಲಿ ಈ ತರದ ಷಾಪಿಂಗಿಗೆ ಬಂದು ಹೆಂಗಸರ ಜೊತೆ ಬಂದ ಗಂಡಂದಿರ(ಗಂಡಸುಗಳ) ವಿಶ್ರಾಂತಿಗಾಗಿ ಕೋಣೆ ಮಾಡಿದ್ದಾರೆ ಎನ್ನುವ ಸುದ್ಧಿ ಬಂದಿತ್ತು. ಅದೆಷ್ಟು ನಿಜವೋ ಗೊತ್ತಿಲ್ಲ. ಹಾಗಾಗಿ ಇಲ್ಲೂ ಅವರು ಸ್ಕೋರ್ ಮಾಡುತ್ತಾರೆ.
ಇಷ್ಟೆಲ್ಲಾ ಅವರದ್ದೇ ಮೇಲುಗೈ ಇದ್ದರೂ, ಇನ್ನೂ ನಮ್ಮನ್ನು ಕಡೆಗಾಣಿಸಲಾಗುತ್ತಿದೆ ಎಂದು ಕೊರಗುವುದು ಬಿಟ್ಟು ಇಡೀ ಸಂಸಾರದ ರಥ ಅವರಿಂದಲೇ ನಡೆಯುವುದು ಎಂದು ಹೆಂಗಸರು ಬೀಗಬೇಕಾಗಿದೆ. ಯಾರಾದರೂ ಪಿತೃಸ್ವಾಮ್ಯ ಅಥವಾ ಮಾತೃಸ್ವಾಮ್ಯ ಎಂಬುವ ಭೇದಭಾವ ತೋರಿದರೆ ಅವರಿಗೆ ಪಾಠ ಹೇಳಬೇಕಾಗಿದೆ. ಹೊರಗಡೆ ಎಷ್ಟೇ ಅಥವಾ ಏನೇ ಜಂಬ ಬಡಿದರೂ ಮನೆಗೆ ಬಂದಾಗ ಗಂಡಸಿನ ಒಡೆತನ ಹೆಂಗಸಿದ್ದೇ ಅಂತಾದ ಮೇಲೆ ದುನಿಯಾ ಮಾತೃಸ್ವಾಮ್ಯವೇ ಅಲ್ಲವೇ?
–ಚಂದಕಚರ್ಲ ರಮೇಶಬಾಬು
