ಅವಳ ಮೇಲಿನ ಪ್ರೀತಿಗಿಂತ ಭಯವೇ ಹೆಚ್ಚು
ಮನಸ್ಸೇಕೋ ಭಾರವಾಗಿತ್ತು. ನನ್ನಲ್ಲಿ ಹುಟ್ಟಿಕೊಳ್ಳುತ್ತಿದ್ದ ನೂರಾರು ಪ್ರಶ್ನೆಗಳಿಗೆ ನಾನೆ ಉತ್ತರವನ್ನು ಹುಡುಕಿಕೊಳ್ಳುತ್ತಾ, ನನ್ನ ಗೊಂದಲಗಳಿಗೆ ನಾನೆ ಪರಿಹಾಗಳನ್ನು ಯೋಚಿಸುತ್ತಾ ಕಾಡಿನ ದಾರಿಯತ್ತ ಸಾಗಿ ಬಹಳ ದೂರ ಕ್ರಮಿಸಿದೆ. ನಾನು ಎಂದೂ ತಿರುಗಾಡದ ಒಂದು ದಾರಿ ನನ್ನನ್ನು ಕರೆಯುತಿತ್ತು.
ನನ್ನ ಮನಸ್ಸು ಹೃದಯ ಮಂಕಾಗಿದ್ದವು ಬದುಕು ನೀರಸವೆನಿಸಿತ್ತು. ಎತ್ತೆತ್ತೆಲೋ ಸಾಗುತಿದ್ದವನು ಹಾಗೆ ಬಂಡೆಯ ಮೇಲೆ ಕುಳಿತು ಮರಗಳನ್ನೂ ಹಕ್ಕಿಗಳನ್ನೂ ನೋಡುತ್ತ ನೀರವ ಮೌನಕ್ಕೆ ಒರಗಿದ್ದೆ. ನನ್ನ ಮುಂದೆ ಎರಡು ನೀಲಕಂಠ ಅಥವ ಬಣ್ಣದ ಹಕ್ಕಿ ( Indian roller) ಗಳ ಜೋಡಿಯೊಂದು ಆನಂದವಾಗಿ ಹಾರಾಡುತ್ತ ಆಟವಾಡುತಿದ್ದವು. ಹೆಣ್ಣು ಹಕ್ಕಿಯನ್ನು ಹಿಡಿಯಲು ತನ್ನ ಪ್ರೀತಿ ತೋರಿಸಿಕೊಳ್ಳಲು ಗಂಡು ಹಕ್ಕಿ ಬಹಳ ಪ್ರಯಾಸ ಪಡುತಿತ್ತು. ಪ್ರಕೃತಿಯಲ್ಲಿ ಬಹುತೇಕ ಎಲ್ಲ ಜೀವಜಂತುಗಳಲ್ಲಿ, ಎಲ್ಲ ಗಂಡುಗಳು ಹೆಣ್ಣನ್ನು ಒಲಿಸಿಕೊಳ್ಳಲು ಒಂದಲ್ಲ ಒಂದು ರೀತಿಯ ಹೋರಾಟವನ್ನು ಸಾಹಸವನ್ನು ಮಾಡಬೇಕಾಗುತ್ತದೆ. ಹೀಗೆ ಆಟವಾಡುತ್ತಾ ಸ್ವಲ್ಪದೂರದಲ್ಲಿ ಅವು ಮಾಯವಾದವು. ೨೦ ನಿಮಿಷ ಹಾಗೆ ಏನೇನೋ ಯೋಚಿಸುತ್ತಾ ಕುಳಿತಿದ್ದೆ. ದೂರದ ಲೈಟು ಕಂಬದಲ್ಲಿ ಚಟ್ ಪಟ್ ಸದ್ದಾಯಿತು ಹೊಗೆ ಹಾಡಿತು. ನನಗೆ ಹೆಚ್ಚು ಹೊತ್ತು ಅಲ್ಲಿ ಕೂರಲಾಗಲಿಲ್ಲ ಅಲ್ಲಿಂದ ಹೊರಟು ಸೀದ ಮನೆಗೆ ಬಂದೆ. ಮನೆಗೆ ಬಂದು ನೋಡಿದರೆ ನನ್ನ ಬಳಿ ಇದ್ದ ಬ್ಲೂಟೂತ್ ಕಾಣೆಯಾಗಿತ್ತು ಎಲ್ಲೆಲ್ಲೋ ಹುಡುಕಿದೆ ಸಿಗಲಿಲ್ಲ.
ಸಂಜೆ ೫:೩೦ ಗಂಟೆಯ ಸುಮಾರಿಗೆ ನಾನು ಬೆಳಿಗ್ಗೆ ಕಾಡಿನ ದಾರಿಯಲ್ಲಿ ಸಾಗುವಾಗ ವಿಶ್ರಾಂತಿಗೆ ಕುಳಿತಾಗ ನನ್ನ ಬ್ಲೂಟೂತ್ ಕಳೆದು ಬಂಡೆಯ ಮೇಲೆ ಇಟ್ಟಿದ್ದು ನೆನಪಾಯಿತು. ತಡ ಮಾಡದೆ ಕಾಡಿನ ದಾರಿಯತ್ತ ಸಾಗಿದೆ ಆಗಲೂ ನನ್ನವಳ ಬಗ್ಗೆ ವಿಧವಿಧವಾದ ಯೋಚನೆ ತಲೆದೂರಿದ್ದವು. ಅಂತು ನಡೆದು ಸ್ಥಳ ತಲುಪಿದೆ. ನನ್ನ ಬ್ಲೂಟೂತ್ ಸಿಕ್ಕಿತು ಮತ್ತೆ ಹಿಂತಿರುಗಿ ಬರುವಾಗ ಕತ್ತಲು ಆವರಿಸುತಿತ್ತು ನಾನು ಕಾಲುದಾರಿಯಿಲ್ಲದ ಯಾವುಯಾವುದೋ ಹೊಲದ ಮೇಲೆ ನಡೆದು ಬರುತ್ತಿದ್ದೆ ಲೈಟು ಕಂಭಕ್ಕೆ ಅಂಟಿಕೊಂಡಿದ್ದ ಸೀತಾಫಲ ಗಿಡದಿಂದ ಒಂದು ಹಣ್ಣು ನೇತಾಡುತ್ತಿತ್ತು. ಅದನ್ನು ಕಿತ್ತುಕೊಳ್ಳುವ ಸಲುವಾಗಿ ಹತ್ತಿರಕ್ಕೆ ಹೋದಾಗ ಕೇಳಗೆ ಎರಡು ಬಣ್ಣದ ಹಕ್ಕಿ ಸತ್ತು ಬಿದ್ದಿದ್ದವು. ಅವುಗಳ ಕೊಕ್ಕಿನಲ್ಲಿ ಹಿಡಿದುಕೊಂಡಿದ್ದ ಮಿಡತೆ ಹಕ್ಕಿಯ ಬಾಯಲ್ಲಿ ಹಾಗೆ ಉಳಿದಿತ್ತು. ಅರ್ಧ ಹೆಣ್ಣು ಹಕ್ಕಿಯ ಬಾಯಲ್ಲಿ ಅರ್ಧ ಗಂಡು ಹಕ್ಕಿಯ ಬಾಯಲ್ಲಿ ಹಾಗೆ ಇತ್ತು. ಬಹುಷಃ ಬೆಳಿಗ್ಗೆ ನನ್ನ ಮುಂದೆ ಆಟವಾಡುತ್ತ ಸರಸ ಸಲ್ಲಾಪಗಳೊಂದಿಗೆ ಕುಣಿದ ಹಕ್ಕಿಗಳು ಇವೆ ಇರಬೇಕು ಎನಿಸಿತ್ತು. ಗಂಡು ಹಕ್ಕಿ ಮಿಡತೆಯನ್ನು ಹಿಡಿದು ಹೆಣ್ಣುಹಕ್ಕಿಗೆ ನೀಡಿ ಒಲಿಸಿಕೊಳ್ಳುವ ಭರದಲ್ಲಿತ್ತು. ಹೆಣ್ಣು ಹಕ್ಕಿ ಗಂಡು ಹಕ್ಕಿಯನ್ನು ಸತಾಯಿಸುವ ಸಲುವಾಗಿ ಬಂದು ಲೈಟು ಕಂಭದ ಮೇಲೆ ಕುಳಿತಿತ್ತು. ಗಂಡು ಹಕ್ಕಿ ಪಕ್ಕದಲ್ಲಿ ಕುಳಿತು ತಾನು ಹಿಡಿದ ಮಿಡತೆಯನ್ನು ತುಟಿ ಅಂಚಿನಲ್ಲಿ ಹಂಚಿಕೊಳ್ಳುತ್ತಿದೆ ರೆಪ್ಪೆ ಮಿಟುಕುವಷ್ಟರಲ್ಲೆ ಎರಡರ ಜೀವ ಹಾರಿಹೋಗಿದೆ. ಬೆಳಿಗ್ಗೆ ಚಟ್ ಫಟ್ ಸದ್ದುಗಳು ಇವುಗಳ ಮರಣ ಮೃದಂಗದಿಂದ ಬಂದಿತ್ತಾಗಿತ್ತು. ಕಣ್ಣುಗಳನ್ನೂ ದೇಹದ ಕೆಲವು ಭಾಗಗಳನ್ನೂ ಇರುವೆ ಮುತ್ತಿದ್ದವು. ಇವುಗಳ ಜೀವನದಲ್ಲಿ ಅನಿರೀಕ್ಷಿತವಾಗಿ ನಡೆದ ಈ ಘಟನೆ ನನ್ನ ಅಂತರಂಗಕ್ಕೆ ನಾಟಿತ್ತು. ಒಮ್ಮೆ ದುಃಖವೆನಿಸಿದರು ಅವುಗಳು ಸಾವಿನಲ್ಲಿಯೂ ಜೊತೆಯಾಗಿದ್ದು ಬಹಳ ಅದೃಷ್ಟವಂತ ಹಕ್ಕಿಗಳು ಎನಿಸಿತ್ತು.
ಏಕೆಂದರೆ ಒಂದು ಸತ್ತು ಒಂದು ಉಳಿದಿದ್ದರೆ ಉಳಿದ ಹಕ್ಕಿಯ ಗತಿಯೇನು ? ಅದರ ನೋವೇನು ? ಅದರ ಜೀವನ ಸಂಗಾತಿಯನ್ನು ಸರಸ ಸಲ್ಲಾಪದ ಸಮಯದಲ್ಲಿ ಕಳೆದುಕೊಂಡದ್ದು ಎಷ್ಷು ದುಃಖಮಯ. ಅದನ್ನು ಊಹಿಸುವುದು ಕಷ್ಟ. ಪರಿಶುದ್ಧ ಪ್ರೇಮಿಗಳಿಗೆ ಸಾವು ಬಂದರೆ ಇಂಥಹ ಸಾವು ಬರಬೇಕು. ಒಂದು ಜೀವ ಹೋಗಿ ಮತ್ತೊಂದು ಜೀವ ಉಳಿದು ಬಿಟ್ಟರೆ ಬಾಳು ಅದೆಂತಹ ಶೋಕಮಯವಾಗಿರುತ್ತದೆ. ಪ್ರಾಣಿ ಪಕ್ಷಿಗಳು ಈ ಸಂದರ್ಭದಲ್ಲಿ ಅನುಭವಿಸುವ ನೋವು ಮತ್ತು ಅದನ್ನು ಅರಗಿಸಿಕೊಳ್ಳುವ ಪರಿಯನ್ನು ನಾನು ಬಹಳಷ್ಟು ಗಮನಿಸಿದ್ದೇನೆ.
೪-೫ ವರ್ಷಗಳ ಹಿಂದೆ ನಾನು ‘ ಪಿ ಯೂ ಸಿ ‘ ಓದುವಾಗ ಕರೋನಾ ಎಂಬ ಸಾಂಕ್ರಾಮಿಕ ರೋಗ ಮಾನವ ಜನಾಂಗವನ್ನು ಉರಿದು ಮುಕ್ಕುತ್ತಿತ್ತು. ಅಂದು ದೇಶದಾದ್ಯಂತ ಸುಮಾರು ೮ ತಿಂಗಳ ರಜೆ, ಸರ್ಕಾರ ಲಾಕ್ ಡೌನ್ ಆದೇಶಿಸಿತ್ತು. ಯಾರು ಊರನ್ನು ಬಿಟ್ಟು ಊರಿಗೆ ತಿರುಗಾಡುವಂತಿರಲಿಲ್ಲ. ನಮಗೋ ಹುಡುಗಾಟದ ವಯಸ್ಸು ಸುಮ್ಮನಿರಲಾರದೆ ಪಾರಿವಾಳ ಸಾಕುವ ಯೋಚನೆ ಮಾಡಿದ್ದೆವು. ಅಪ್ಪು ಅವರ ಊರಿಂದ ಬರುವಾಗ ಎರಡು ಪಾರಿವಾಳ ತಂದಿದ್ದನು. ಅವುಗಳ ಜೀವನ ಕ್ರಮ ನಮಗೆ ಅಷ್ಟಾಗಿ ತಿಳಿಯುತ್ತಿರಲಿಲ್ಲ. ದಿನದ ಮೂರು ಹೊತ್ತು ಪಾರಿವಾಳಕ್ಕೆ ಮೇವು ಹಾಕಿಕೊಂಡು ಕಾಲಕಳೆಯುತ್ತಿದ್ದೆವು. ಆಗ ಇಂತಹದೆ ಒಂದು ಘಟನೆ ನಡೆದಿತ್ತು.
ಈ ಪಾರಿವಾಳಗಳ ಜೋಡಿ ಒಂದನ್ನೊಂದು ಮುದ್ದಾಡುವುದು, ಅವುಗಳದೆ ರೀತಿಯ ಸರಸ-ಸಲ್ಲಾಪ ಗಳಲ್ಲಿ ತೊಡಗಿರುವುದು. ಆನಂದದಿಂದ ಬಾನೆತ್ತರಕ್ಕೆ ಜಿಗಿದು ಹಾರುವುದು ಆಟ ಆಡುವುದು ಇವೆಲ್ಲವನ್ನು ಕಣ್ತುಂಬಿಕೊಳ್ಳುತ್ತಿದೆವು. ಗಂಡು ಹಕ್ಕಿಗೆ ಹೆಣ್ಣೆಂದರೆ ಅಪಾರವಾದ ಪ್ರೀತಿ ಮತ್ತು ಕಾಳಜಿ. ಅರೆಕ್ಷಣವು ಹೆಣ್ಣು ಹಕ್ಕಿಯನ್ನು ಬಿಟ್ಟಿರಲೊಲ್ಲದ ಗಂಡು ನಮಗೆ ಹೆಣ್ಣು ಹಕ್ಕಿಯನ್ನು ಮುಟ್ಟಲು ಸಹ ಬಿಡುತ್ತಿರಲಿಲ್ಲ. ತನ್ನ ರೆಕ್ಕೆಯಿಂದ ರಪರಪ ಒಡೆದುಬಿಡುತಿತ್ತು ತನ್ನ ಅರಿತವಾದ ಕೊಕ್ಕಿನಿಂದ ಕುಕ್ಕುತ್ತಿತು ಮತ್ತು ಕೊಕ್ಕಿನಲ್ಲಿ ಕಚ್ಚಿ ನಮ್ಮ ಕೈಯ್ಯನ್ನು ಹಿಂದೆ ತಳ್ಳುತಿತ್ತು. ಇದರ ಈ ವರ್ತನೆಯಿಂದ ನಮಗೆ ವಿಪರೀತ ಕೋಪ ಬಂದು ಗಂಡನ್ನು ಹಿಡಿದು ಪ್ರತ್ಯೇಕವಾಗಿ ಕೂಡಿ ಹಾಕುತಿದ್ದೆವು. ಅದು ವಿರಹ ವೇದನೆ ಇಂದ ಕೆರಳಿ ಗುಟುರುಹಾಕುವುದನ್ನು ನೋಡುವುದಕ್ಕೆ, ಒಂದು ರೀತಿ ಅದರ ಭಾವಾವೇಶವನ್ನು ಪರೀಕ್ಷೆ ಮಾಡುವುದಕ್ಕೆ ನಮಗೊಂತರ ಕುತೂಹಲ. ಹೆಣ್ಣಿನಿಂದ ದೂರವಿರಿಸಿ ಅದಕ್ಕೆ ಇನ್ನಿಲ್ಲದ ಸಂಕಟ ನೀಡುತ್ತಿದ್ದೆವು. ಅದು ಕೆಲವು ನಿಮಿಷಗಳ ವರೆಗೆ ಅಷ್ಟೆ. ಆಮೇಲೆ ಅವುಗಳ ಸ್ವೇಚ್ಚೆಯಂತೆ ಬಿಟ್ಟುಬಿಡುತಿದ್ದೆವು. ಗಂಡು ಹಕ್ಕಿಗೆ ನಮ್ಮನ್ನು ಕಂಡರೆ ವಿಪರೀತ ಕೋಪ ಇದರ ಈ ವರ್ತನೆ ನಮಗೆ ಆ ಕೆಲಸ ಮಾಡಲು ಪ್ರೇರೇಪಿಸುತ್ತಿತ್ತು.
ಅಂತು ಅವುಗಳ ಮಿಲನದ ಫಲವಾಗಿ ಮೊದಲ ಬಾರಿಗೆ ಎರಡು ಮೊಟ್ಟೆ ಇಟ್ಟು ತಮ್ಮ ಚೊಚ್ಚಲ ಮರಿಗಳ ಚಿಲಿಪಿಲಿ ಸದ್ದಿಗಾಗಿ ಕಾಯುತ್ತಿದ್ದವು. ಈ ಸಂದರ್ಭದಲ್ಲಿ ಗಂಡು ಹಕ್ಕಿಯು ಹೆಣ್ಣು ಹಕ್ಕಿಗೆ ಹೆಚ್ಚು ನೆರವು ನೀಡುತ್ತದೆ. ತಾನು ತಂದೆಯ ಪಾತ್ರವನ್ನು ಮನುಷ್ಯನಂತೆಯೆ ಜವಾಬ್ದಾರಿಯುತವಾಗಿ ನಿರ್ವಹಿಸುತ್ತದೆ. ಅಂತೂ ಮೊಟ್ಟೆ ಹೊಡೆದು ಮರಿಗಳಾದವು. ಅವುಗಳನ್ನು ಪೋಷಿಸುವಲ್ಲಿ ಎರಡರ ಕಾಳಜಿ ಗಮನಾರ್ಹ. ಹೀಗೆ ೨ ತಿಂಗಳು ಕಳೆದು ಮರಿಗಳಿಗೆ ರೆಕ್ಕೆ ಬಲಿತು ಹಾರಲು ಪ್ರಾರಂಭಿಸಿದವು ಆಗ ತಂದೆತಾಯಿಗಳ ಆನಂದಕ್ಕೆ ಪಾರವೆ ಇಲ್ಲ. ಗಂಡು ಹಕ್ಕಿಗಂತು ಮತ್ತೊಮ್ಮೆ ಹೆಣ್ಣನ್ನು ಕೂಡಬಹುದೆಂಬ ಅನಂತವಾದ ಆನಂದ. ಯಥಾಪ್ರಕಾರ ಸರಸ ಸಲ್ಲಾಪಗಳು ಪ್ರಾರಂಭವಾಯಿತು. ಆ ದಿನ ತಂದೆ ತಾಯಿ ಮಕ್ಕಳು ಇಬ್ಬರು ಹಾರಿಬಂದು ಹೊಲದಲ್ಲಿ ಮೇಯಲು ಕೆಳಗಳಿದವು. ಇದ್ದಕ್ಕಿದಂತೆ ೫-೬ ಹದ್ದುಗಳು ಮೇಲೆ ಕಾಣಿಸಿಕೊಂಡವು ನೆಲದಿಂದ ೨೦೦ ಅಡಿ ಮೇಲೆ ಹಾರುತ್ತಿದ್ದವು ಎನ್ನಬಹುದು. ಇತ್ತ ಎಚ್ಚೆತ್ತುಕೊಂಡ ತಾಯಿ ಹಕ್ಕಿ ಮರಿಗಳಿಗೆ ಅಪಾಯವನ್ನು ಸೂಚಿಸಿ ಹಾರಲು ಪ್ರೇರೇಪಿಸಿತು ಆದರೆ ಅವುಗಳಿಗೆ ಅದರ ಅನುಭೂತಿ ಆಗಲಿಲ್ಲ. ಮೇಲಿನಿಂದ ಶರವೇಗದಲ್ಲಿ ಬಂದ ಹದ್ದು ಮರಿಗಳತ್ತ ಧಾವಿಸಿತ್ತು. ಏನಾಯಿತು ಎಂದು ನೋಡುವಷ್ಟರಲ್ಲಿ ಹದ್ದು ಮರಿಯನ್ನು ಹೊಡೆದು ಹೋಗಿತ್ತು. ಹತ್ತಿರ ಹೋಗಿ ನೋಡಿದರೆ ಅದು ಮರಿಯಲ್ಲ ಮರಿಗಾಗಿ ಪ್ರಾಣತೆತ್ತ ತಂದೆಯ ದೇಹವಾಗಿತ್ತು. ಸಾಮಾನ್ಯವಾಗಿ ಹದ್ದುಗಳು ಪಾರಿವಾಳಗಳನ್ನು ಭೇಟೆಯಾಡುವುದಿಲ್ಲ. ಶಿಕ್ರ, ಬಿಜ್, ಹಕ್ಕಿಹಿಡುಕ ಅಥವ ಬೈರಿ ಎಂಬ ಹದ್ದಿನ ಪ್ರಭೇಧಗಳು ಮಾತ್ರ ಆಕ್ರಮಣಕಾರಿಯಾಗಿರುತ್ತವೆ ಕೊಲ್ಲುವುದರ ಜೊತೆಗೆ ಹೊತ್ತೊಯ್ಯುತ್ತವೆ. ಆದರೆ ಇಲ್ಲಿ ಹದ್ದು ಹೊಡೆದು ಸಾಯಿಸಿತೆ ವಿನಹ ಹೊತ್ತು ಹೊಯ್ಯಲಿಲ್ಲ.
ನಮಗಂತು ವಿಪರೀತ ಬೇಜಾರಾಗಿ ಹದ್ದಿನ ವಂಶವನ್ನೆಲ್ಲ ಬೈದೆವು ಮನಬಂದತೆ ಅವುಗಳತ್ತ ಕಲ್ಲು ತೂರಿ ಚೀರಾಡಿ ಓಡಿಸಿದೆವು. ಏನು ಪ್ರಯೋಜನ ಈಗಾಗಲೆ ಒಂದು ಜೀವಹಾನಿಯಾಗಿತ್ತು. ಕಾಸಿಗೆ ತಂದು ಮೇವು ಹಾಕಿದ್ದ ನಮಗೆ ಅಷ್ಟು ಬೇಸರವಾಗಿರುವಾಗ ತನ್ನ ಸಂಗಾತಿಯನ್ನು ತಂದೆಯನ್ನು ಕಳೆದುಕೊಂಡ ಪರಿವಾರದ ನೋವನ್ನು ಎಣಿಸಲಾದೀತೆ. ಮರಿಗಳಿಗೆ ಸಾವು ನೋವಿನ ಅರಿವಿಲ್ಲದಿದ್ದರು ಹೆಣ್ಣು ಹೃದಯಕ್ಕೆ ಎಂಥ ಘಾಸಿಯಾಗಿರಬೇಕು. ಆ ದಿನ ಸಂಜೆ ೫ ಗಂಟೆಯಾದರು ಹೆಣ್ಣು ಚತ್ರಿಯಿಂದ ( ಪಾರಿವಾಳಗಳು ಮನೆಯ ಮೇಲೆ ಬಂದು ಕೂರಲು ಮರದ ಸಣ್ಣ ಹಲಗೆಯಿಂದ ಮಾಡುವ ಚೌಕಾಕರದ ಆಸನ ) ಕೆಳಗಿಳಲಿಲ್ಲ ಮೇವು ತಿನ್ನಲಿಲ್ಲ, ಮಳೆ ಪ್ರಾರಂಭವಾಯಿತು ಅದು ಮಳೆಗಾಲದ ಮೊದಲ ಮಳೆ. ಮಳೆಯ ವೇಗ ಹೆಚ್ಚಿ ಭೋರ್ಗರೆದು ಹುಯ್ಯತೊಡಗಿತ್ತು. ಮರಿಗಳು ಬೆಚ್ಚಗಿನ ಗೂಡು ಸೇರಿದ್ದವು ಆದರೆ ತಾಯಿ ಒಂದೆ ಅಲ್ಪವೂ ಅಲ್ಲಾಡದೆ ಮಳೆಯಲ್ಲಿ ನೆನೆಯುತ್ತ ಚತ್ರಿಮೇಲೆ ಕುಳಿತಿತ್ತು. ಹಕ್ಕಿಗಳಿಗೆ ಕಣ್ಣೀರು ಬರುವುದಿಲ್ಲ ಆದರೆ ಅವು ಸೊರಗುವುದರ ಮೂಲಕ ಮೇವು ತಿನ್ನದೆ ಮುಸುಕು ಹಾಕಿ ಕೂರುವುದರ ಮೂಲಕ ಮಳೆಯಲ್ಲಿ ನೆನೆಯುವುದರ ಮೂಲಕ ಮೆಲ್ಲಗೆ ತನ್ನಲ್ಲೆ ಗೊಣಗಿಕೊಳ್ಳುವುದರ ಮೂಲಕ ನೋವನ್ನು ತೋಡಿಕೊಳ್ಳುತ್ತವೆ. ಅದರ ಜೀವ ಭಾವಗಳು ನನ್ನೆದೆಯನ್ನು ತಟ್ಟಿದವು. ಈ ದೃಷ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರ ಪರಿಣಾಮವಾಗಿ ಇವೆಲ್ಲ ನನಗೆ ಸಹಜವಾಗಿ ಅರ್ಥವಾಗುತಿತ್ತು.
ಈ ಮಾನವ ಸಮಾಜದಲ್ಲಿ ಹೆಣ್ಣು ಬಿಟ್ಟು ಗಂಡು ಗಂಡು ಬಿಟ್ಟು ಹೆಣ್ಣು ಬದುಕುವುದು ಬಹಳ ಕಷ್ಟ. ಹಾಗೆ ಒಂಟಿಯಾದರೂ ಜೀವನ ಪರಿಯಂತ ಪವಿತ್ರ ಪ್ರೇಮವನ್ನು ಅವರೊಬ್ಬರಿಗೆ ಮೀಸಲಿಡಬೇಕೆಂಬ ಮನೋಭಿಲಾಷೆಯನ್ನು ಕಡೆಯ ವರೆಗು ಉಳಿಸಿಕೊಳ್ಳುವುದು ಇನ್ನು ಕಷ್ಟ. ಏಕೆಂದರೆ ತಾಳಿಯಿಲ್ಲದ ಹೆಣ್ಣಿನ ಮೇಲೆ ನೂರು ಕಣ್ಣು. ಹಳದಿ ಕಣ್ಣಿನ ಈ ಸಮಾಜದಲ್ಲಿನ ಜನ ಅವರ ಸಂಕಲ್ಪವನ್ನು ಭಂಗಪಡಿಸಲು ನೂರಾರು ಬಲೆಗಳನ್ನು ಬೀಸಿ ಹಾಳುಗೆಡವುತ್ತಾರೆ. ಆದರೆ ನಮ್ಮ ಬುದ್ಧಿ ಮತ್ತು ಮನಸ್ಸು ನಮ್ಮ ಹಿಡಿತದಲ್ಲಿರಬೇಕು.
ಅಂತು ಸಾವಿನಲ್ಲು ಜೊತೆಯಾದ ಈ ಜೋಡಿ ಹಕ್ಕಿಗಳು ನಿಜಕ್ಕು ಅದೃಷ್ಟವಂತರು. . !
ತನ್ನ ಕುಟುಂಬಕ್ಕಾಗಿ ಜೀವ ಸವೆಸುವ ಹಕ್ಕಿಗಳು, ಅವುಗಳ
ಪ್ರೇಮ-ಕಾಮ ಸರಸ-ಸಲ್ಲಾಪ ಜೀವ-ಭಾವ ಬದುಕಿನ ಹೋರಾಟಗಳು ನಿಜಕ್ಕೂ ವಿಸ್ಮಯ.
–ಜ್ಞಾನೇಶ, ಸೀಗೆಕೋಟೆ.
