ಕಿರಿಕಿರಿ ಕರೆಗಳು: ಚಂದಕಚರ್ಲ ರಮೇಶಬಾಬು


ಈ ಕರೆಗಳ ಸಂಭಾಷಣೆಗಳು ಆಂಗ್ಲದಲ್ಲಿರುತ್ತವೆ. ಓದುಗರ ಸೌಕರ್ಯಕ್ಕಾಗಿ ಇವುಗಳನ್ನು ಕನ್ನಡದಲ್ಲಿ ಮಾತಾಡಿದಂತೆ ಅನುವಾದ ಮಾಡಿ ಇಲ್ಲಿ ಕೊಡುತ್ತಿದ್ದೇನೆ.
“ ನಮಸ್ಕಾರ. ನಾನು ರಮೇಶಬಾಬು ಅವರ ಜೊತೆ ಮಾತಾಡುತ್ತಿದ್ದೀನಾ?”
“ಹೌದು.”
“ಶುಭ ಮಧ್ಯಾಹ್ನ.(ಈ ಕರೆಗಳು ಬಹುತೇಕ ನನ್ನ ಮಧ್ಯಾಹ್ನದ ನಿದ್ರೆ ಹಾಳುಮಾಡಲು ಆ ಸಮಯದಲ್ಲೇ ನನ್ನ ಕದ ತಟ್ಟುತ್ತವೆ.)”
“ಮುಂದೆ ಹೇಳಿ.”
“ನೀವು…ಫಲಾನಾ ಕಂಪೆನಿಯ ಪಾಲಸಿ ತೊಗೊಂಡಿದ್ದೀರಿ. ಅದು ತೊಗೊಂಡು ಮೂರು ವರ್ಷ ಕಳೆದಿವೆ. ಅದರ ಪ್ರೀಮಿಯಂ ಕಂತು ಮುಂದಿನ ತಿಂಗಳ ೧೦ನೆಯ ತಾರೀಕಿಗೆ ವಾಯಿದೆ ಇದೆ. ನೀವು ಅದನ್ನು ಯಾವಾಗ ತುಂಬ ಬಹುದು?”
“ವಾಯಿದೆ ಒಳಗೆ ತುಂಬುತ್ತೇನೆ.”
“ಅದು ಸರಿ. ಯಾವ ತಾರಿಕಿನೊಳಗೆ ತುಂಬುತ್ತೀರಿ ಎಂದು ತಿಳಿಸಬಹುದಾ?”
ಇಲ್ಲಿಗೆ ನನಗೆ ಕೋಪ ಆರಂಭವಾಗಿದ್ದು ನಿಜ. “ಹೇಳಿದೆನಲ್ಲ. ವಾಯಿದೆ ತಾರೀಕಿನ ಒಳಗೆ ತುಂಬುವೆ.” ಮತ್ತೆ ಹೇಳುತ್ತೇನೆ.
“ನಮಗೆ ನಿಮ್ಮ ಪ್ರೀಮಿಯಂ ಯಾವಾಗ ಬರಬಹುದು ಅಂತ ಒಂದು ಅಂದಾಜು ಬೇಕು.”

ಕಳೆದ ವರ್ಷವೂ ಇದೇ ರೀತಿ ಕರೆಗಳು ಬಂದು ನನ್ನ ಮನಶ್ಶಾಂತಿಯನ್ನು ಕದಡಿದ್ದವು. ಈ ಸಲ ನಾನು ಅವರಿಗೆ ಪಾಠ ಕಲಿಸಬೇಕೆಂದಿದ್ದೆ. ಆ ನಿಟ್ಟಿನಲ್ಲಿ ನನ್ನ ಪ್ರಶ್ನೆಗಳು ಶುರುವಾದವು.” ರೀಇವರೇ! ಪಾಲಸಿ ಯಾರದು?” “ನಿಮ್ಮದು.” “ಪ್ರೀಮಿಯಂ ಯಾರು ತುಂಬಬೇಕು?” “ನೀವೇ” “ಅಲ್ವಾ! ಒಂದುವೇಳೆ ತುಂಬದಿದ್ದರೆ ಪಾಲಸಿ ಲ್ಯಾಪ್ಸ್ ಆಗುವ ನಷ್ಟ ಯಾರಿಗೆ?” “ನಿಮಗೇ ಸರ್.” “ಹಾಗಾದರೆ ನೀವು ಯಾಕೆ ತಲೆ ಕೆಡಿಸಿಕೊಳ್ಳುವುದು?” “ಹಾಗಲ್ಲ ಸರ್. ನಮಗೆ ಒಂದು ನಿಗದಿ ತಾರೀಕು ಬೇಕು.” “ಯಾಕೆ? ಒಂದು ಮಾತು ಹೇಳಿ. ನಿಮ್ಮ ಕಂಪೆನಿ ಏನಾದರೂ ಹಣದ ಕೊರತೆಯಲ್ಲಿ ಒದ್ದಾಡುತ್ತಿದೆಯಾ? ನನ್ನ ಪ್ರೀಮಿಯಂನಿಂದಲೇ ಯಾರದ್ದಾದರೂ ಸಂಬಳ ಬರಬೇಕಾಗಿದೆಯಾ?” ಇದನ್ನು ಕೇಳಿದ ಮೇಲೆ ಕಾಲ್ ಕಟ್ ಆಯಿತು.
ಈ ರೀತಿಯ ಅನುಭವ ಈ ಪ್ರಬಂಧ ಓದುತ್ತಿರುವವರಿಗೆಲ್ಲರಿಗೂ ಆಗಿರಬಹುದು. ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿರ ಬಹುದು. ಈ ರೀತಿಯ ಕರೆಗಳ ಅಗತ್ಯವಾದರೂ ಏನು? ಈ ತರದ ಹೊಸ ಕಂಪೆನಿಗಳು ಬರುವ ಮುಂಚೆಯೂ ಜೀವನ ಬೀಮಾ ನಿಗಮದವರು ಪಾಲಸಿಗಳ ಪ್ರೀಮಿಯಂ ತುಂಬುವ ಬಗ್ಗೆ ನೋಟೀಸ್ ಕಳಿಸುತ್ತಿದ್ದರು. ಪಾಲಸಿಯ ಪ್ರೀಮಿಯಂ ತುಂಬುವುದು ನಮ್ಮ ರಕ್ಷಣೆ ಅಥವಾ ಲಾಭಕ್ಕಾಗಿ ಆದ ಕಾರಣ ನಾವು ತುಂಬುತ್ತಿದ್ದೆವು. ಅವರೆಂದಿಗೂ ಕರೆಗಳು ಮಾಡಿ ಜನರ ತಲೆ ತಿನ್ನುತ್ತಿರಲಿಲ್ಲ.ಅದರಲ್ಲಿ ಒಂದು ಚಿನ್ನದಂತಹ ಸಾಲಿರುತ್ತಿತ್ತು. “ಒಂದು ವೇಳೆ ನೀವು ಈಗಾಗಲೇ ತುಂಬಿದ್ದಲ್ಲಿ ಈ ನೋಟೀಸನ್ನು ಕಡೆಗಾಣಿಸಿ” ಎಂದು. ಅಷ್ಟೇ.ಈ ಹೊಸ ಬೀಮಾ ಕಂಪೆನಿಗಳು ಈ ತರದ ಕೆಲಸಕ್ಕೇ ಅಂತ , ಠಸ್ ಪುಸ್ ಅಂತ ಆಂಗ್ಲದಲ್ಲೇ ಮಾತಾಡುವವರನ್ನ, ಬಹುಶಃ ತುಂಬಾ ಓದಿಕೊಂಡವರನ್ನು ಇಷ್ಟಿಷ್ಟು ಸಂಬಳ ಕೊಟ್ಟು ಇಟ್ಟುಕೊಳ್ಳಬೇಕಾದ ಅವಶ್ಯಕತೆಯಾದರೂ ಏನು ಎನ್ನುವುದು ನನ್ನ ಕಲ್ಪನೆಗೆ ಎಟುಕದ ವಿಷಯ.

ಈ ಬೀಮಾ ಕಂಪೆನಿಗಳ ಪ್ರೀಮಿಯಂ ಬಗ್ಗೆ ಬರುವ ಕರೆಗಳಾದರೂ ವರ್ಷಕ್ಕೆ ಒಮ್ಮೆಯೋ ಅಥವಾ ಎರಡು ಸಲವೂ. ಆದರೆ ನಾವೆಲ್ಲ ಬಳಸುವ ಮೊಬೈಲ್ ಮತ್ತು ಬ್ರಾಡ್ ಬ್ಯಾಂಡ್ ಸೌಕರ್ಯದ ಬಿಲ್ಲುಗಳ ಬಗ್ಗೆ ಬರುವ ಕರೆಗಳಿಗಂತೂ ನಾವೆಲ್ಲ ಬಲಿಯಾಗುತ್ತಿರುತ್ತೇವೆ.

ಒಂದು ಕಂಪೆನಿಯ ಬ್ರಾಡ್ ಬ್ಯಾಂಡಿನ ಬಗ್ಗೆ ನನಗೆ ಅಷ್ಟು ತೃಪ್ತಿ ಅನಿಸಲಿಲ್ಲ. ಅದಕ್ಕೆ ಅವರ ಆಫೀಸಿಗೆ ಹೋಗಿ ನನ್ನ ಬ್ರಾಡ್ ಬ್ಯಾಂಡ್ ಕನೆಕ್ಷನ್ ತೆಗೆಯಲು ಮನವಿ ಮಾಡಿಕೊಂಡೆ. ಅಲ್ಲಿಯ ವರೆಗೆ ನಾನು ಕಟ್ಟ ಬೇಕಾದ ಬಿಲ್ಲಿನ ಹಣ ಪಾವತಿ ಮಾಡಿದೆ. ತಕ್ಷಣ ಅವರಿಂದ ನನ್ನ ದೂರು ನೊಂದಾಯಿಸಿರುವುದಾಗಿ ಒಂದು ಮೆಸೇಜ್ ಬಂತು. ನಾನು ಅವರ ರೌಟರ್ ನ ಕನೆಕ್ಷನ್ ತೆಗೆದು ಹಾಕಿದೆ. ಅದಾದ “ಒಂದು ತಿಂಗಳ” ನಂತರ ಅವರ ಆಫೀಸಿನವರು ಬಂದು ರೌಟರ್ ತೆಗೆದುಕೊಂಡು ಹೋದರು. ಅಲ್ಲಿಗೆ ಮುಗಿಯಿತು ಎಂದುಕೊಂಡು ಬೇರೇ ಕಂಪೆನಿಯ ಕನೆಕ್ಷನ್ ತೊಗೊಂಡೆ. ಆದರೆ ಮೊದಲಿನ ಕಂಪೆನಿಯ ಕರೆಗಳು ಬರುವುದು ನಿಲ್ಲಲಿಲ್ಲ. ಅವರು ಮೊದಲಿನಂತೆ ಬಿಲ್ಲಿಂಗ್ ತಾರೀಕಿಗೆ ಒಂದು ಬಿಲ್ ಹಾಕಿ ನನಗೆ ಮೆಸೇಜ್ ಕಳಿಸದರು. ನಾನು ಸ್ಪಂದಿಸಲಿಲ್ಲ. ಒಂದು ತಿಂಗಳ ನಂತರ ಅವರ ಕರೆಗಳು ಶುರುವಾದವು. ನಾನು ಅದನ್ನ ಬೇಡವೆಂದಿದ್ದರಿಂದ ಹಿಡಿದು ಎಲ್ಲ ಕರೆ ಮಾಡಿದವರಿಗೆ ತಿಳಿಸಿದೆ. ಅವರಿಗೆ ಅದರ ಬಗ್ಗೆ ತಿಳಿಯದು. ತಿಳಿಯುವ ಪ್ರಯತ್ನ ಸಹ ಮಾಡುವುದಿಲ್ಲ. ಆ ವಿಭಾಗಕ್ಕೂ ಈ ವಿಭಾಗಕ್ಕೂ ಅಂತರಸಂಬಂಧ ಕಾಣುವುದಿಲ್ಲ. ಈಗ ಮತ್ತೊಂದು ತಿಂಗಳ ಬಿಲ್ ಬಂದಿದೆ. ಕರೆಗಳೂ ನಿಲ್ಲುತ್ತಿಲ್ಲ. ನಾನೇ ಅವುಗಳನ್ನು ಸ್ವೀಕರಿಸುವುದಿಲ್ಲ. ಅಷ್ಟೇ.

ಈ ರೀತಿಯ ಖಾಸಗಿ ಕಂಪೆನಿಗಳು ಶುರುವಾದದ್ದು ಸರಕಾರದ ಒಡೆತನದ ಬಿಎಸ್ ಎನ್ ಎಲ್ ಚುರುಕಾಗಿ ಕೆಲಸ ಮಾಡದಿರುವುದು ಮತ್ತು ಅದರ ಮೇಲೆ ಮೇಲಿಂದ ಮೇಲೆ ಗ್ರಾಹಕರ ಅಸಂತೃಪ್ತಿ ವ್ಯಕ್ತ ಪಡಿಸುವ ದೂರುಗಳು ಬರುತ್ತಿರುವುದು. ಅಂದಿನ ಸರಕಾರ ಅದಕ್ಕೇ ಖಾಸಗಿ ಕಂಪೆನಿಗಳಿಗೆ ದೂರವಾಣಿಗಳ ವ್ಯವಹಾರಕ್ಕೆ ಅನುಮತಿ ನೀಡಿತ್ತು. ಈಗ ಈ ಖಾಸಗಿ ಕಂಪೆನಿಗಳು ಸಹ ಅದೇ ರೀತಿಯ ವರ್ತನೆಯಲ್ಲಿ ಮುಳುಗಿರುವುದು ಕಂಡುಬರುತ್ತದೆ.

ಇಲ್ಲಿಯ ವರೆಗೆ ನಾನು ವರ್ಣಿಸಿದ ಕರೆಗಳು ನಾವು ಸವಲತ್ತು ಪಡೆಯುತ್ತಿರುವ ಕಂಪೆನಿಗಳಿಂದ ಬಂದು ಕಿರಿಕಿರಿ ಕೊಡುವ ಕರೆಗಳಾದರೆ ನಮಗೆ ಸಂಬಂಧವಿಲ್ಲದಿದ್ದರೂ, ತಮ್ಮ ಉತ್ಪನ್ನಗಳು ಅಥವಾ ಸೇವೆಗಳು, ಆಸ್ತಿಗಳ ಬಗ್ಗೆ ನಿಮಗೆ ಕರೆ ಮಾಡಿ ನಮ್ಮ ತಲೆ ತಿನ್ನುವ ಕರೆಗಳಿಗೆ ಲೆಕ್ಕವಿರುವುದಿಲ್ಲ.ಆದರೆ ಅದ್ಯಾವುದೋ ನಂಬರಿಗೆ ಕರೆ ಮಾಡಿ ಈ ರೀತಿಯ ಪ್ರಚಾರದ ಕರೆಗಳನ್ನ ನಿಲ್ಲಿಸಬಹುದಂತೆ. ಹಾಗಾಗಿ ಅವುಗಳ ಹಾವಳಿ ಅಷ್ಟು ಕಿರಿಕಿರಿ ಎನಿಸುವುದಿಲ್ಲ.
ಈ ಸವಲತ್ತು ಚಾಲ್ತಿಗೆ ಬರುವ ಮುನ್ನ ನನಗೆ ಗೊತ್ತಿರುವ ಒಬ್ಬ ವಯಸ್ಸಾದ ಉದ್ದಿಮೆದಾರ ತನ್ನ ಅನುಭವವನ್ನು ಹಂಚಿಕೊಂಡಿದ್ದರು. ಅವರಿಗೂ ಈ ತರದ ಕರೆಗಳು ಮಧ್ಯಾಹ್ನ ಬರುತ್ತಿದ್ದಾಗ ಒಮ್ಮೆ ಅವರು ಕರೆ ತೊಗೊಂಡು ಆಚೆಯವರ ಹೆಸರು, ಹುದ್ದೆ ಎಲ್ಲ ಕೇಳಿ ತಿಳಿದುಕೊಂಡು “ನನ್ನನ್ನ ಅನಾವಶ್ಯಕವಾದ ಈ ತರದ ಕರೆಗಳಿಂದ ಅವರ ಆರೋಗ್ಯದ ಮೆಲೆ ಪ್ರಭಾವ ಬೀರುವಂತೆ ಮಾಡುತ್ತಿದ್ದಾರೆ” ಎಂದು ಅವರ ಮೇಲೆ ಪೋಲೀಸರಿಗೆ ದೂರು ಕೊಡುವುದಾಗಿ ಹೆದರಿಸಿದ್ದರಂತೆ. ಅದಾದ ಮೇಲೆ ಅವು ನಿಂತುಹೋದವಂತೆ.

ಈ ರೀತಿ ಕರೆ ಮಾಡಿ ತಮ್ಮ ಉತ್ಪನ್ನದ ಬಗ್ಗೆ, ಸೇವೆ ಬಗ್ಗೆ ತಿಳಿಸುತ್ತ ನಿಮ್ಮ ಮೇಲೆ ಪ್ರಭಾವ ಬೀರುವ ಹಾಗೆ ಮಾಡುವ ಪ್ರಕ್ರಿಯೆಯನ್ನು ಈಗಿನ ಪದಜಾಲದಲ್ಲಿ “ಬೇಡಿಕೆ ಹುಟ್ಟಿಸುವುದು (ಕ್ರಿಯೇಟಿಂಗ್ ಡಿಮಾಂಡ್) ಎನ್ನುತ್ತಾರಂತೆ. ಅಂದರೆ ತಮ್ಮ ಸತತ ಕರೆಗಳಿಂದ ನಿಮಗೆ ಆ ಸೇವೆ ಅಥವಾ ಆ ಉತ್ಪನ್ನ ಬೇಕೇ ಬೇಕೇನೋ ಎನ್ನುವಂತೆ ಮಾಡಿ ಮಾರಾಟ ಮಾಡುವುದು. ನಿಮಗೊಂದು ಬ್ಯಾಂಕಿನಿಂದ ಸಾಲ ಬೇಕೇ ಎನ್ನುವ ಕರೆ ಬರುತ್ತದೆ. ಕರೆ ಮಾಡುವವರು ನಿಮಗೆ “ನಿಮ್ಮ ಹೆಸರಲ್ಲಿ ಮುಂಚಿತವಾಗಿ ಮಂಜೂರಾದ ಸಾಲ ಕಾಯುತ್ತಿದೆ”ಎನ್ನುವ ಆಕರ್ಷಣೀಯ ಸಾಲಿನೊಂದಿಗೆ ನಿಮ್ಮನ್ನು ಸಾಲದ ಸುಳಿಯಲ್ಲಿ ಸಿಕ್ಕಿಸುತ್ತಾರೆ. ಅದರ ಬಡ್ಡಿದರ ಜಾಸ್ತಿ ಇರುತ್ತದೆ. ಮತ್ತೆ ನೀವು ನಿಮಗೆ ಬೇಕಾದಾಗ ಸಾಲ ಪಡೆದರೆ ಅದಕ್ಕೊಂದು ಅರ್ಥವಿರುತ್ತದೆ. ಅವರ ಪ್ರಚಾರದಿಂದ ಪ್ರಭಾವಿತರಾಗಿ ಪಡೆದ ಸಾಲ ಯಾವುದೋ ಖರ್ಚಿನ ಕಡೆಗೆ ವ್ಯಯವಾಗಿ ನಿಮಗೆ ಹೊರೆಯಾಗುತ್ತದೆ. ಅದೇ ರೀತಿ ಸೈಟು ಮಾರಾಟಗಾರರಂತೂ ವಿಚಿತ್ರವಾಗಿ ಕಾಡುತ್ತಾರೆ. ನಾನು ಒಮ್ಮೆ ಆ ಕರೆ ಮಾಡಿದವರನ್ನು ಕೇಳಿದ್ದೆ.” ರೀ ನೀವು ಕರೆ ಮಾಡುವ ಮುನ್ನ ನನ್ನ ಪ್ರೊಫೈಲ್ ನೋಡಿದ್ದೀರಾ? ನಾನು ಎಪ್ಪತ್ತೊಂದು ವರ್ಷದವನು. ನನಗೇಕೆ ಸಾಲ ಬೇಕಾಗುತ್ತದೆ?” ಎಂದು. ಅದಕ್ಕೆ ಸಹ ಅವರಲ್ಲಿ ಉತ್ತರವಿತ್ತು. “ಸಾರ್. ನಿಮ್ಮ ಮೊಮ್ಮಗನಿಗೇನಾದರೂ ಕೊಡಿಸಬಹುದಲ್ಲ” ಅಂತ. ಅಂತೂ ಚೆನ್ನಾಗಿಯೇ ಪಳಗಿಸಿರುತ್ತಾರೆ ಇವರನ್ನ ಅಂದುಕೊಂಡೆ.

ಟ್ರೂ ಕಾಲರ್ ಎನ್ನುವ ಯಾಪ್ ಹಾಕಿಕೊಂಡ ಮೇಲೆ ಅದು ಈ ರೀತಿಯ ಕರೆಗಳು ಬಂದಾಗ “ಪ್ರೊಮೊ ಕಾಲ್”ಎಂದು ಸೂಚನೆ ಕೊಡುತ್ತ ನಮ್ಮ ಸಮಯವನ್ನು ಉಳಿಸುತ್ತಿದೆ. ಆದರೂ ಕಂಪೆನಿಗಳವರು ಸಹ ತುಂಬಾ ಹುಶಾರಿ. ತಮ್ಮ ಉದ್ಯೋಗಿಗಳ ವೈಯಕ್ತಿಕ ನಂಬರ್ ಗಳಿಂದ ಕರೆ ಮಾಡಿಸುತ್ತಾರೆ. ಸೈಬರ್ ಕ್ರೈಮ್ ಗಳು ತುಂಬಾ ಆಗುತ್ತಿರುವ,ಈ ಸಮಯದಲ್ಲಿ ಯಾವ ಕರೆ ಸ್ವೀಕರಿಸಬೇಕೋ ಯಾವುದು ಬೇಡವೋ ತಿಳಿಯುವುದಿಲ್ಲ. ಅದೂ ತಂತ್ರಜ್ಞಾನದ ಬಗ್ಗೆ ತೀರ ಕಮ್ಮಿ ಜ್ಞಾನವಿರುವ ಹಿರಿಯ ನಾಗರಿಕರು, ಹಳ್ಳಿ ಜನಗಳು ತುಂಬಾ ತೊಂದರೆಗೀಡಗುತ್ತಿದ್ದಾರೆ.

ಇನ್ನು ಕಿರಿಕಿರಿ ಕರೆಗಳ ಮತ್ತೊಂದು ಮುಖಕ್ಕೆ ಹೋಗೋಣ. ಇವು ನಮಗೆ ತಿಳಿದಂಥ ನೆಂಟರು, ಸ್ನೇಹಿತರುಗಳಿಂದ ಬರುವ ಕರೆಗಳು. ಇವು ಯಾಕೆ ಕಿರಿಕಿರಿ ಅಂದರೆ ಇವರ ಹರಟೆ ಅಥವಾ ಮೂಗು ತೂರಿಸುವಂಥ ಗುಣಕ್ಕಾಗಿ. ನೀವು ಯಾವುದೋ ಮುಖ್ಯವಾದ ಕೆಲಸದಲ್ಲಿ ತೊಡಗಿರುವಾಗ ಈ ತರದ ಮನುಷ್ಯ ಕಾಲ್ ಮಾಡಿ “ಏನು ಹೇಗಿದ್ದೀ? ಆರಾಮ ತಾನೇ? ಏನಿಲ್ಲ. ತುಂಬಾ ದಿನವಾಗಿತ್ತು ಮಾತಾಡಿ. ಅದಕ್ಕೆ ಮಾಡಿದೆ” ಎನ್ನುತ್ತ ನಿಮ್ಮ ಅಮೂಲ್ಯವಾದ ಸಮಯವನ್ನು ತಿನ್ನುತ್ತಾನೆ. ಅಥವಾ ನಡೆದು ಹೋದ ಯಾವುದೋ ಘಟನೆ ಅಥವಾ ಸಮಾರಂಭದ ಬಗ್ಗೆ ಕೇಳುತ್ತ ಅದಕ್ಕೆ ತನ್ನ ಅನಿಸಿಕೆ ಜೋಡಿಸುತ್ತ, ತನ್ನ ಟೀಕೆ ಟಿಪ್ಪಣಿಗಳನ್ನು ಸೇರಿಸುತ್ತ ಬೇಡದ ತಲೆನೋವನ್ನು ಕೊಡುತ್ತಾನೆ. ಇಂಥವರು ಸಹ ಮಧ್ಯಾಹ್ನದ ಸುಖನಿದ್ದೆಯ ಕಂಟಕರೇ. ಮತ್ತೆ ಅದರ ಬಗ್ಗೆ ಆರೋಗ್ಯದ ಸಂಬಂಧಿ ಸಲಹೆ ಬೇರೆ, “ಮಧ್ಯಾಹ್ನ ನಿದ್ದೆ ಸರಿಯಲ್ಲ. ರಾತ್ರಿ ನಿದ್ರೆ ಬರುವುದಿಲ್ಲ. ಮತ್ತೆ ಬೊಜ್ಜು ಬೆಳಿತದೆ. ಏನಾದರೂ ಓದು, ಕೆಲಸ ಮಾಡು” ಎಂದು.

ಕೆಲವರು ಯಾವುದೋ ಕಾರ್ಯಕ್ರಮ ನಡೆದ ಮೇಲೆ ಅದರ ಬಗ್ಗೆ ಅರ್ಧ ಗಂಟೆ ಕೊರೆಯುತ್ತಾರೆ, ಅದು ಸರಿ ಇರಲಿಲ್ಲ, ಇದು ಸರಿ ಇರಲಿಲ್ಲ. ನನ್ನಂಥವರಿಗೆ ಕೋಡಬೇಕಿತ್ತು. ಮಾಡಿ ತೋರಿಸುತ್ತಿದ್ದೆ ಹೀಗೆ. ಅಥವ ಕಾರ್ಯಕ್ರಮ ಅನೌನ್ಸ್ ಆದ ತಕ್ಷಣ ಇವರ ಟೀಕೆ ಶುರು. ಇದೇನ್ ಕಾರ್ಯಕ್ರಮ? ಇವರನ್ನಾ ಕರೆಸೋದು? ಹೀಗೆ. ಇನ್ನು ನೆಂಟರಲ್ಲಂತೂ ಇಂಥವರು ತುಂಬಾ ಜನವೇ ಇರುತ್ತಾರೆ. ನೀವು ನಿಷ್ಠುರ ವಾದಿಗಳಾಗಿದ್ದರೆ ಬಚಾವು. ಹತ್ತಿರ ಸುಳಿಯುವುದಿಲ್ಲ ಯಾರೂ. ಸ್ವಲ್ಪ ಸಡಿಲ ಬಟ್ಟಲ್ಲಿ ಕಿರಿಕಿರಿ ಕೊಡಲು ಶುರುಮಾಡುತ್ತಾರೆ.

ಈ ಕಿರಿಕಿರಿ ಕರೆಗಳ ಬಗ್ಗೆ ಏನು ಮಾಡಬಹುದು? ಒಂದು ಟ್ರೂ ಕಾಲರ್ ಯಾಪ್ ಹಾಕಿಕೊಂಡು ಅದು ಕೊಡುವ ಸೂಚನೆಗಳನ್ನು ಪಾಲಿಸುತ್ತ ಬೇಡದ ಕರೆಗಳನ್ನು ಸ್ವೀಕರಿಸದೆ ಸಮಯ ಉಳಿಸಿಕೊಳ್ಳುವುದು. ಎರಡು ನ್ಯಾಷನಲ್ ಡು ನಾಟ್ ಕಾಲ್ ರಿಜಿಸ್ಟ್ರಿಯಲ್ಲಿ ನೊಂದಾಯಿಸಿಕೊಂಡು ಈ ರೀತಿಯ ಕರೆಗಳು ಬರದಂತೆ ನೋಡಿಕೊಳ್ಳುವುದು. ಮೂರು ದಬಾಯಿಸಿ ನಿಲ್ಲಿಸುವುದು. ನಾಲ್ಕು ಹೀಗೆ ನಾಲ್ಕು ಜನರ ಹತ್ತಿರ ಹೇಳಿಕೊಂಡು ನರಳುವುದು, ಪೆಚಾಡುವುದು ಅಥವಾ ಬರೆಯಲು ಸಾಧ್ಯವಾದರೆ ಈಗ ನಾನು ಬರೆದಂತೆ ಒಂದು ಪ್ರಬಂಧ ಬರೆದು ಕಳಿಸಿ ಮನಸಿನ ಉಮ್ಮಳವನ್ನು ತೀರಿಸಿಕೊಳ್ಳುವುದು. ಇದೊಂದು ಬೆಳೆದುಬಂದ ತಂತ್ರಜ್ಞಾನದ ಅಡ್ಡ ಪರಿಣಾಮ ಎಂದುಕೊಂಡು ಜೀವನ ತಳ್ಳುವುದು. ಅಷ್ಟೇ ತಾನೇ?

-ಚಂದಕಚರ್ಲ ರಮೇಶಬಾಬು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x