ಬಯಲ ದೃಷ್ಟಾಂತ !
ಪಾತರಗಿತ್ತಿಯ ಹಾಗೆ
ಒಂದೆಡೆ ನಿಲಲೊಲ್ಲದೆ
ಸುಂಟರ ಗಾಳಿಯಂತೆ ಗಿರಗಿರನೇ ತಿರುಗುತ್ತ
ದಿನ ನೂಕುತ್ತಿರೆ
ಒಡಲಲ್ಲಿ ಕಸ ಕಡ್ಡಿಗಳೇ ತುಂಬಿಕೊಂಡು
ಎದೆಯಗೂಡು ಹರಿದು
ಹೃದಯ ಪಾಳುಬಿದ್ದ
ಮನೆಯಂತಾಗುತ್ತದೆ !
ಅದೆಲ್ಲೋ ದೂರದ ಗಗನ
ಚುಕ್ಕೆ ಪ್ರಕಾಶಿಸುವುದ ಕಂಡು
ಅದರಂತಾಗಬೇಕೆಂದು ಕಣ್ಮುಚ್ಚಿ ಕುಳಿತಡೆ
ಕಣ್ಮುಂದೆ ಅದರ ಚಿತ್ತಾರವೇ ಬಂದು
ಗಹಗಹಿಸಿ ನಗುತ ಕೇಳುತ್ತಿದೆ
ನೀನು ಗಗನದ ಚುಕ್ಕೆ ಆಗಬಲ್ಲೆಯಾ?!
ಸುತ್ತಲ ಪ್ರಪಂಚದಿಂದ
ದೂರಾಗಬೇಕೆಂದು
ಕಣ್ಣು, ಕಿವಿ, ಬಾಯ್ಮುಚ್ಚಿಕೊಂಡು
ನಿರ್ಲಿಪ್ತವಾಗಬೇಕೆಂದು ತಟಸ್ಥವಾದರೆ
ಸುತ್ತಲ ಸಮಾಜದ ಕಣ್ಣು, ಕಿವಿ, ಬಾಯ್ಗಳು
ನನ್ನತ್ತ ತೆರೆದುಕೊಂಡು
ಕುಹಕವಾಡುತ್ತ ಹುಸಿನಗು ಬೀರುತಿವೆ !
ಇದಾವುದರ ಗೊಡವೆಯೇ ಬೇಡವೆಂದು
ಆತ್ಮಾರ್ಪಣಕ್ಕಿಳಿದರೆ
ಲೋ ಹುಚ್ಚ! ನೋಡಿಲ್ಲಿ ಎನುತ
ಮಧುರಗಾನಗೈಯುತ್ತ
ಹಕ್ಕಿಯೊಂದು ದೂರದಿ ತಂದ
ಅನ್ನದಗಳನು
ಗೂಡಿನೊಳಗಿರುವ ಮರಿಹಕ್ಕಿಯ
ಬಾಯೊಳಗೆ ಇಡುತ್ತಿತ್ತು!
ಆ ಮರದ ಗೂಡಿನ ಮೇಲೊಂದು
ಕರಿನಾಗ ಹೆಡೆಯೆತ್ತಿ ದಿಟ್ಟಿ ನೆಟ್ಟಿತ್ತು
ಆದರೆ ಆ ತಾಯಿ ಹಕ್ಕಿಗೆ ಅದರ ಪರಿವೆಯಿತ್ತು!
ಸುತ್ತಲೂ ತಂಗಾಳಿ, ಕೆಳಗೆ ನೀರು ತುಂಬಿದ
ಕೂಪವಿರೆ
ದುಷ್ಟ ಕರಿನಾಗ ನನ್ನ ಬಳಿ ಬರಲೊಲ್ಲದು
ಒಂದೊಮ್ಮೆ ಬಂದರೂ ಕೆಳಗೆ ಬೀಳುವುದು
ನಿಶ್ಚಿತವೆಂದು
ಮಧುರ ಕಂಠದಿ ಕೂಗಿ ಹಾಡುತ್ತಿತ್ತು !!
ಓ ಮನುಜ ನಿಲ್ಲು ನಿಶ್ಚಲನಾಗು ಅತ್ತಿತ್ತ
ಓಡಬೇಡ ಕದಲಬೇಡ
ನಾನಿಲ್ಲವೆ ನಿನಗೆ ಬಯಲ ದೃಷ್ಟಾಂತವಾಗಿ……..!!
-ಸುರೇಶ ಮುದ್ದಾರ
ಬೇಕೊಂದು ಹೆಗಲು
ಹಗಲೆಂಬ ಹಗಲಿಗೂ
ಬೇಕೊಂದು ಹೆಗಲು.
ಇರುಳು ಅಡಿಯಿಡಲು
ಅಪ್ಯಾಯದಿ ಒರಗಲು.
ಕಿರು ಹಣತೆಗೂ
ಬೇಕೊಂದು ಬೆರಳು.
ಎಣ್ಣೆ ತೀರಿದಾಗಲೂ
ಕೈ ಹಿಡಿದು ನಡೆಯಲು.
ಮೆರೆವ ತೇರಿಗೂ
ಬೇಕೊಂದು ಬಯಲು.
ಜಾತ್ರೆ ಮುಗಿದ ಬಳಿಕ
ಕಳಚಿ ವಿರಮಿಸಲು.
ಸಾಗುವ ದಾರಿಗೂ
ಬೇಕೊಂದು ನಿಲ್ದಾಣ.
ಯಾನ ನಿಂತಾಗ
ಕುಳಿತು ದಣಿವಾರಿಸಲು.
ಪ್ರತಿ ಪುಸ್ತಕಕು
ಬೇಕೊಂದು ಹೊದಿಕೆ
ಭಾವಗಳೆಲ್ಲ ಬರಿದಾದ ಮೇಲೂ
ಬೆಚ್ಚಗೆ ಕೂತಿರಲು.
ಮಿಡಿವ ಪ್ರತಿ ಜೀವಕು
ಬೇಕೊಂದು ನಲುವು
ನಡೆವಾಗ ಹೆಜ್ಜೆ ಹೆಜ್ಜೆಗೆ
ಜೊತೆಯಾಗಲು..
-ಸರೋಜ ಪ್ರಶಾಂತಸ್ವಾಮಿ
ಅವನಲ್ಲ ಅವಳು!
ನಡುವಿನ ಉಡುದಾರ
ಕಿತ್ತೊಗೆದು
ಕಾಲಿಗೆ ಗೆಜ್ಜೆ ಕಟ್ಟಿರುವೆ
ಕೈಗೆ ಬಳೆ ಹಾಕುವ
ಹೊತ್ತಿಗೆ
ದೂರದಲೆಲ್ಲೊ ಅಪಸ್ವರ.//
ಹಣೆಗೆ ವಿಭೂತಿಯ ಬದಲು
ಕುಂಕುಮದ ಬೊಟ್ಟಿಟ್ಟೆ
ತುಂಡು ಕೂದಲ ಉದ್ದ ಬಿಟ್ಟೆ
ಗಂಡಸರುಡುವ ಬಟ್ಟೆಯನ್ನು ಬದಲಿಸಿದೆ
ಸೀರೆಯ ಸೆರಗೂ ಇಷ್ಟವಾಯಿತು.
ನಾಚಿಕೆ ಮೂಡಿತು
ಶ್! ನನ್ನ ಮೇಲಲ್ಲ ಸಮಾಜದ ಮೇಲೆ.//
ನನ್ನೊಳಗಿನ ಹೆಣ್ತನವ ಕಾಪಿಡಲು
ನಾನು ಅದೇಷ್ಟು ಸತ್ತು ಬದುಕಿದ್ದೇನೆ.
ಕುಂತು ಮೂತ್ರ ಮಾಡುವಾಗ
ಬೆರಳುಗಳಿಗೆ ನೆಲ್ ಪಾಲಿಸ್ ಹಾಕಿಕೊಳ್ಳುವಾಗ
ಕೊರಳಿಗೆ ಸರ ತೊಡುವಾಗ
ವಿಚಿತ್ರವಾದ ಹಿಂಸೆ ನನಗೆ.//
ಸೃಷ್ಟಿಯೊಳಗಿನ ಅದ್ಭುತ ನಾನೆಂದು
ಹೇಳಲು ಅವಕಾಶ ನೀಡಲಿಲ್ಲ
ಸೌಂದರ್ಯ ನನ್ನಾಸ್ತಿ
ಎಂದು ತೋರಿಸಲು
ಸಮಯ ನೀಡಲಿಲ್ಲ
ಮಂಗಳಮುಖಿ ಎಂದು
ಅವಮಾನಿಸಿದರು
ಅಪಮಾನಿಸಿದರು
ಆದರೆ
ನನಗೆ ನನ್ನ ಮೇಲೆ ಹೆಮ್ಮೆ
ನಾನು ಅರ್ಧನಾರೀಸ್ವರನ
ಪ್ರತಿರೂಪ
ನನಗೂ ಸುಂದರ ಬದುಕಿದೆ
ಬದುಕಿ ತೋರಿಸುವ ಛಲವಿದೆ
ನಾನು ಅವನಲ್ಲ ಅವಳು.
-ಸುರೇಶ ತಂಗೋಡ.
ನಾ ಗಾಳಿ(ಪಟ)
ಸುಂಗಂದ ಭರಿತ
ಸುಂದರ ಹೂ ಬನಗಳಲಿ
ಬೀಸುವ ಗಾಳಿಯಾದರೂ ಸರಿ
ಗಂಗೆಯ ತಟದಿ
ಅರೆಬೆಂದು ಬರುವ
ಹೆಣದ ದುರ್ವಾಸನೆಯಾದರೂ ಸರಿ,
ಸುವಾಸನೆ ದುರ್ವಾಸನೆ
ನನ್ನೊಳಗೆ ನುಂಗಿ
ನನ್ನನ್ನೇ ನಾನು
ಅವರಾಗಿ,
ಅವರನ್ನು ನನ್ನಲ್ಲಿ
ಸಂಪೂರ್ಣ ಆವರಿಸಿಕೊಂಡು
ನನ್ನನ್ನೇ ನಾನು
ಪುನಃ ಪ್ರಕೃತಿಯಲ್ಲಿ
ಆವರಿಸಿಕೊಳ್ಳುವ ಪರಿ
ಕಾಶಿಯಲ್ಲಿ ನಿಂತ
ಬಿಂದು ಮಾಧವನಿಗೆ
ಮಾತ್ರ ಜನಿತ.
ತನ್ನಲ್ಲಿ ಒಂದಾದ
ಜೀವಗಳಿಗೆ ಮೋಕ್ಷ
ನೀಡುವ
ಅವನ ಪರಿಯಂತೆಯೇ
ನಿನ್ನ ಜೀವದ
ಉಸಿರಾಗಿ
ನನ್ನನ್ನೇ ನಾನು
ನಿನ್ನಲ್ಲಿ ಆವರಿಸಿ
ನನ್ನನ್ನು ನಿನ್ನ
ಸಹಿತ
ಗಾಳಿಯಲಿ ಬೆರೆತ
ಗಂಧವಾಗಿಸಿ
ಬಿಂದು ಮಾಧವನಿಗೆ
ಅರ್ಪಿತವಾಗುವ ಆಸೆ
ಗಂಗೆಯ ತಟದಲ್ಲಿ
ವೈಶಾಲ್ಯ ದ ಮಾಯೆ
ನನ್ನನೆ ಗಾಳಿಯಾಗಿಸಿ
ತೇಲಾಡುವ ಹುಚ್ಚಾಟ
ಹರಿದಸೂತ್ರದ
ಗಾಳಿಪಟವಾಗುವಮುನ್ನ
ನನ್ನ ಗತಿಯನ್ನು
ಸಂಭಾಳಿಸು ಬಾ
ನನ್ನುಸಿರೇ
ನಿನಗೆ
ನನ್ನ ಮಾಧವನ
ಮೇಲಾಣೆ!
-ವಿದ್ಯಾ ಗಾಯತ್ರಿ ಜೋಶಿ




